26.3 C
Karnataka
Saturday, November 23, 2024

    ನಾಳೆ ಬಗ್ಗೆ ಚಿಂತೆ ಏತಕೇ ಇಂದು ಎಂದೂ ನಮ್ಮದೇ…

    Must read

    ನಾಳೆ ನನ್ನ ಬದುಕಿನಲ್ಲಿ ಏನಾಗಬಹುದು ಎಂಬ ಚಿಂತೆಯಿಂದಲೇ ನಾನು ಒತ್ತಡಕ್ಕೊಳಗಾಗಿದ್ದೇನೆ. ಏನೇ ಮಾಡಿದರೂ ಯಾಕೋ ನನ್ನ ಬದುಕು ಬದಲಾಗುತ್ತಿಲ್ಲವಲ್ಲ. ನನ್ನ ಗಳಿಕೆ ಮುಂದಿನ ದಿನಗಳಿಗೆ ಸಾಲುತ್ತಿಲ್ಲ. ನಾಳೆ ಕಾಯಿಲೆ ಬಂದರೆ ಏನು ಮಾಡೋದು… ಹೀಗೆ ಇಂತಹದ್ದೇ ಅನೇಕ ಚಿಂತೆಗಳು ಈ ಕ್ಷಣವನ್ನು ಆನಂದದಿಂದ ಬದುಕಲು ಬಿಡುತ್ತಿಲ್ಲ. ಅದಕ್ಕೇನು ಮಾಡಬಹುದು… ?

    ಪ್ರತಿಯೊಬ್ಬ ವ್ಯಕ್ತಿಯನ್ನು ಕಾಡುವ ಭಯ ಅಂದರೆ ಕೊರತೆಗಳು. ನಾಳೆಯ ಬದುಕಿಗೆ ನಾನೇನು ಮಾಡಲಿ? ನಾಳೆಗೆ ಬೇಕಾದ್ದು ನನ್ನಲ್ಲಿಲ್ಲವಲ್ಲ ಎನ್ನುವ ಭಯ ಪ್ರತಿಯೊಬ್ಬ ಮನುಷ್ಯನನ್ನು ಪ್ರತಿದಿನ ಕಾಡುತ್ತಲೇ ಇರುತ್ತದೆ. ದಿನ ಬೆಳಗಾದರೆ ನಾಳೆಯ ಬಗ್ಗೆಯೇ ಯೋಚನೆ ಮಾಡುವವರು ಹೆಚ್ಚು. ಅದೆಷ್ಟೋ ನಾಳೆಗಳಿಗಾಗಿ ಕಷ್ಟಪಡುವುದರಲ್ಲಿಯೇ ಪ್ರತಿದಿನ ಕಾಲ ಕಳೆಯುತ್ತಾರೆ.
    ಪ್ರತಿಯೊಬ್ಬರೂ ನಿರಂತರ ಹೋರಾಟ ನಡೆಸುವುದು ಇಲ್ಲದ್ದನ್ನು ಹೊಂದಬೇಕು ಎಂಬ ಬಯಕೆಗೆ.

    ಸಾಂಸಾರಿಕ ಜೀವನದಲ್ಲಿ ತೊಡಗಿಸಿಕೊಂಡವನಿಗೆ ಹೆಂಡತಿ ಮಕ್ಕಳೊಡಗೂಡಿ ಖುಷಿಯಾಗಿರಲು ಐಷಾರಾಮಿ ಮನೆ ಬೇಕು, ಓಡಾಡಲು ಕಾರು ಬೇಕು, ಮಕ್ಕಳ ಭವಿಷ್ಯಕ್ಕೆಂದು ಒಂದಷ್ಟು ಹಣ ಕೂಡಿಡಬೇಕು…. ಇನ್ನೂ ಹಲವು ಆಸೆಗಳು. ಇವೆಲ್ಲದರ ಕನಸು ಕಾಣುತ್ತಿರುವಾತ ಹೇಗೋ ಅವೆಲ್ಲವನ್ನೂ ಪಡೆದುಕೊಳ್ಳುತ್ತಾನೆ ಕೂಡಾ. ಆದರೆ ಅವೆಲ್ಲದರಿಂದ ಅವನಿಗೆ ಸಂತೃಪ್ತಿ ಸಿಕ್ಕೀತಾ?
    ಇದ್ದುದರಲ್ಲಿ ಸಂತೃಪ್ತಿ ಪಡೆವ ಮನಸ್ಸು ಅವರದಲ್ಲ. ಒಂದು ಪಡೆದುಕೊಂಡ ಮೇಲೆ ಮತ್ತಿನ್ನೇನೋ ಬೇಕು ಎನ್ನುವ ಬಯಕೆ ಮನದಲ್ಲಿ ಮೂಡಿರುತ್ತದೆ.

    ಬಯಕೆಯ ಸರಮಾಲೆಯಲ್ಲಿ ಒಂದೊಂದೇ ಆಸೆ ಪೋಣಿಸಲ್ಪಟ್ಟಾಗ ಸಂತೃಪ್ತಿ ಎಂಬುದು ಕನಸಿನ ಮಾತಾಗುತ್ತದೆ.ಕೆಲವರಿಗೆ ಈ ಜಗತ್ತಿಗೆ ಎಷ್ಟು ನೀಡಿದರೂ ತೃಪ್ತಿಯಿಲ್ಲ, ಜಗತ್ತಿನಿಂದ ಎಷ್ಟು ಪಡೆದುಕೊಂಡರೂ ಸಾಕಾಗುವುದಿಲ್ಲ. “ಕಡಿಮೆಯೇ’ ಎನ್ನುವ ಮನಸ್ಥಿತಿ ಅವರದ್ದು. ಮತ್ತೆ ಅದನ್ನು ಪಡೆಯುವುದಕ್ಕಾಗಿ ಏನೇನೋ ಕಸರತ್ತು ನಡೆಸುತ್ತಿರುತ್ತಾರೆ. ಭೌತಿಕ ಜಗತ್ತಿನಲ್ಲಿ ಬಾಹ್ಯ ಬಯಕೆಗಳಿಂದ ಸಂತೃಪ್ತಿ ಹೊಂದಲು ಸಾಧ್ಯವಿಲ್ಲ.

    ಇರುವುದರಲ್ಲಿಯೇ ತೃಪ್ತಿ ಪಟ್ಟುಕೊಂಡು, ಸಿಗಲಾರದಕ್ಕೆ ಆಸೆ ಪಡುವುದರಲ್ಲಿ ಅರ್ಥ ಇಲ್ಲ. ಅದರಿಂದ ದುಃಖವೇ ಹೊರತು ಸಂತೋಷ ಅಥವಾ ಸಂತೃಪ್ತಿ ಸಿಗುವುದಕ್ಕೆ ಸಾಧ್ಯವಿಲ್ಲ. `ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು ಹರುಷಕ್ಕಿದೆ ದಾರಿಯು’ ಎಂದು ಡಿವಿಜಿ ಅವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದು ಇದೇ ಉದ್ದೇಶಕ್ಕೆ.
    ಪ್ರತಿಯೊಬ್ಬ ವ್ಯಕ್ತಿ ಕೂಡಾ ತನ್ನ ಹುಟ್ಟು, ಜೀವನ, ಜೀವನದ ಉದ್ದೇಶ, ಹಾಗೂ ಗುರಿ ಹಾಗೂ ಸಾಧನೆಯೆಡೆಗಿನ ಪ್ರಯತ್ನ ಇವೇ ಮೊದಲಾದುವುಗಳ ಬಗ್ಗೆ ಪ್ರಶ್ನಿಸಿಕೊಂಡರೆ ಜೀವನದಲ್ಲಿ ತೃಪ್ತಿ ಹೊಂದುವುದು ಕಷ್ಟವಲ್ಲ. ಇಲ್ಲವಾದರೆ ಅನಿರೀಕ್ಷಿತ ವಾಗಿ ದುಃಖ ಅನುಭವಿಸಬೇಕಾಗಬಹುದು.

    ಬದುಕಿನ ಯಾನದಲ್ಲಿ ಸಾಧಿಸಿದ ಯಶಸ್ಸು, ನಾಳೆಗೆ ಕೂಡಿಟ್ಟ ಶ್ರೀಮಂತಿಕೆ ಮುಖ್ಯವಾಗುವುದಿಲ್ಲ. ಯಾಕೆಂದರೆ ಸಾಕು ಎನ್ನುವ ಭಾವ ತೃಪ್ತಿ. ಅದು ಬಯಕೆಗಳಿಂದ ಹೊರತಾಗಿರುತ್ತದೆ. ಹಾಗಾಗಿ ನನಗೆ ತೃಪ್ತಿ ಇದೆ ಎನ್ನುವ ಭಾವ ವ್ಯಕ್ತವಾದರೆ ಅದೇ ಸಾರ್ಥಕತೆ.

    Photo by Jill Heyer on Unsplash

    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ. ಪದವಿ ಪಡೆದಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಕಾಲೇಜಿನಲ್ಲಿ. ಪತ್ರಿಕೋದ್ಯಮ ಪದವಿ ಮಂಗಳೂರು ವಿವಿ. ಆಸಕ್ತಿದಾಯಕ ಓದು ಇವರ ಬರವಣಿಗೆಯ ವಿಶೇಷ.
    spot_img

    More articles

    7 COMMENTS

    1. ಸಾಕು ಅಂದವ ಸಾಹುಕಾರ
      ಬೇಕು ಅಂದವ ಭಿಕಾರಿ….

    2. ಬಹಳ ಚೆನ್ನಾಗಿ “ಸಾಕು” ಎಂಬ ಪದಕ್ಕೆ ಆರ್ಥ ವಿವರಿಸಿದ್ದೀರಿ… ಜೀವನ ಸಾರ್ಥಕತಗೆ ಸಾಕು ಅನ್ನೋ ಮನೋಭಾವ ಬಹಳ ಮುಖ್ಯ… ಆದರೆ “ಸಾಕು” ನಿಮ್ಮನ್ನು ಮತ್ತು ಜೀವನವನ್ನು ಒಂದು ಮಿತಿಯಲ್ಲಿ ಕೋಡಿಹಕಿಬಿಡುತ್ತದೆ ಅನ್ನುವುದು ನನ್ನ ಅನಿಸಿಕೆ… ಆಶಾವಾದಿಗಳಾಗಿ ಆತುರ ಪಡದೆ ಒಂದೊಂದೆ ಹೆಜ್ಜೆ ಮುಂದಿಟ್ಟು ನಡೆದರೆ ಯಶಸ್ಸು ಮತ್ತು ಸಂತೋಷ ಖಂಡಿತ ನನ್ನ ಅನಿಸಿಕೆ. ಇವತ್ತಿನ ಆಲೋಚನೆ / ಚಿಂತೆ ನಾಳಿನ ಸಮರಕ್ಕೆ ಸಿದ್ಧತೆ ಅಲ್ಲವೇ?

      • ಧನ್ಯವಾದಗಳು ಸರ್.

        ಭವಿಷ್ಯದ ಚಿಂತನೆ ಬೇಕು ನಿಜ. ಆದರೆ ಬದುಕಿದ್ದಷ್ಟೂ ದಿನ ಅದೇ ಚಿಂತೆಯಲ್ಲಿ ಕಳೆಯುವುದು ಸರಿಯಲ್ಲ ಅನ್ನುವುದು ನನ್ನ ಅನಿಸಿಕೆ. ಯಾಕೆಂದರೆ ನಾಳೆ ಇದ್ದೇವೋ ಇಲ್ಲವೋ ಗೊತ್ತಿಲ್ಲ. ಆದರೆ “ಇರುತ್ತೇವೆ’ ಅನ್ನುವ ಆಶಾವಾದದ ಜತೆಗೆ, ಈ ಕ್ಷಣ ಬದುಕಿದರೆ ಸಾಕು, ನಾಳೆ ಇದ್ದರೆ ಬೇಡಿಯಾದರೂ ತಿಂದೇನು ಅನ್ನುವ ಆಶಾವಾದ ಈ ಕ್ಷಣದ ಬದುಕನ್ನು ಸಂಭ್ರಮಿಸುವುದಕ್ಕೆ ಅವಕಾಶ ಮಾಡಿಕೊಡಬಲ್ಲುದು.

    3. ಧನ್ಯವಾದಗಳು ಸರ್.

      ಭವಿಷ್ಯದ ಚಿಂತನೆ ಬೇಕು ನಿಜ. ಆದರೆ ಬದುಕಿದ್ದಷ್ಟೂ ದಿನ ಅದೇ ಚಿಂತೆಯಲ್ಲಿ ಕಳೆಯುವುದು ಸರಿಯಲ್ಲ ಅನ್ನುವುದು ನನ್ನ ಅನಿಸಿಕೆ. ಯಾಕೆಂದರೆ ನಾಳೆ ಇದ್ದೇವೋ ಇಲ್ಲವೋ ಗೊತ್ತಿಲ್ಲ. ಆದರೆ “ಇರುತ್ತೇವೆ’ ಅನ್ನುವ ಆಶಾವಾದದ ಜತೆಗೆ, ಈ ಕ್ಷಣ ಬದುಕಿದರೆ ಸಾಕು, ನಾಳೆ ಇದ್ದರೆ ಬೇಡಿಯಾದರೂ ತಿಂದೇನು ಅನ್ನುವ ಆಶಾವಾದ ಈ ಕ್ಷಣದ ಬದುಕನ್ನು ಸಂಭ್ರಮಿಸುವುದಕ್ಕೆ ಅವಕಾಶ ಮಾಡಿಕೊಡಬಲ್ಲುದು.

    LEAVE A REPLY

    Please enter your comment!
    Please enter your name here

    Latest article

    error: Content is protected !!