21.2 C
Karnataka
Sunday, September 22, 2024

    ಗೆದ್ದಿದ್ದು ಯಡಿಯೂರಪ್ಪ ಮತ್ತು ವಿಜಯೇಂದ್ರ!

    Must read

    ಅಶೋಕ ಹೆಗಡೆ

    ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ವಾಸ್ತವಿಕವಾಗಿ ಇಲ್ಲಿ ಗೆದ್ದಿರುವುದು ಬಿಜೆಪಿಯಲ್ಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ!

    ’ಆಪರೇಷನ್ ಕಮಲ’ದ ಫಲವಾಗಿ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದಾಗ ಪ್ರಧಾನಿ ನರೇಂದ್ರ ಮೋದಿ, ಅಂದು ಬಿಜೆಪಿ ಅಧ್ಯಕ್ಷರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜಾಣ ಮರೆವು ತೋರಿದ್ದರು. ಸೌಜನ್ಯಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸಲಿಲ್ಲ. ಕರ್ನಾಟಕದ ಜತೆಗೇ ನಡೆದ ಉಪ ಚುನಾವಣೆ, ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ ಮಾತ್ರವಲ್ಲದೇ ಪ್ರತಿಪಕ್ಷಗಳ ನಾಯಕರನ್ನೂ ಮೋದಿ-ಶಾ ಟ್ವೀಟ್ ಮಾಡಿ ಅಭಿನಂದಿಸಿದ್ದರು. ಯಡಿಯೂರಪ್ಪ ವಿಚಾರದಲ್ಲಿ ಮಾತ್ರ ಅದೇಕೋ ಹಠಕ್ಕೆ ಬಿದ್ದವರಂತೆ ಕಠೋರ ಮೌನ ತಾಳಿಬಿಟ್ಟಿದ್ದರು. ಆದರೆ, ಮಂಗಳವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಇಬ್ಬರೂ ತರಾತುರಿಯಲ್ಲಿ ಯಡಿಯೂರಪ್ಪ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ, ಅದೂ ಮೋದಿಯವರಂತೂ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ! ಅಷ್ಟರಮಟ್ಟಿಗೆ ಅದು ಯಡಿಯೂರಪ್ಪನವರ ಗೆಲುವು.

    ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಂತಹವರು ಯಡಿಯೂರಪ್ಪ ಹೆಚ್ಚು ದಿನ ಮುಖ್ಯಮಂತ್ರಿಯಾಗಿರುವುದಿಲ್ಲ ಎನ್ನುವ ಮಾತನಾಡಿದ್ದರು. ಬೇರೆಯವರ ಕುಮ್ಮಕ್ಕಿನಿಂದ ಅವರು ಹಾಗೆ ಮಾತನಾಡಿದ್ದರು ಎನ್ನುವುದು ಸ್ಪಷ್ಟ. ಈಗ ಹಾಗೆ ಮಾತನಾಡಿದವರು, ಮಾತನಾಡಿಸಿದವರು ಇಬ್ಬರೂ ಮೌನವಾಗಿರಬೇಕು. ಯಡಿಯೂರಪ್ಪನವರನ್ನು ಕಡೆಗಣಿಸಿದರೆ ಅಪಾಯ ಮೈಮೇಲೆ ಎಳೆದುಕೊಂಡತೆಯೇ ಎನ್ನುವುದು ಈಗ ವರಿಷ್ಠರಿಗೂ ಚೆನ್ನಾಗಿಯೇ ಅರ್ಥವಾಗಿದೆ. ಇಲ್ಲಿಯವರೆಗೆ ಸಚಿವ ಸಂಪುಟ ವಿಸ್ತರಣೆ, ಅನುದಾನ ಸೇರಿ ಹಲವು ವಿಚಾರಗಳಲ್ಲಿ ಯಡಿಯೂರಪ್ಪನವರ ಕುರಿತು ತಾತ್ಸಾರ ಮಾಡುತ್ತಿದ್ದ ವರಿಷ್ಠರು, ಮೋದಿಯವರು ಈಗ ಸಂಪುಟ ವಿಸ್ತರಣೆಗೆ ಅನುಮತಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜಿಎಸ್‌ಟಿ ಸೇರಿದಂತೆ ಕೆಲದಿನಗಳ ಹಿಂದೆ ಸಾವಿರಾರು ಕೋಟಿ ರೂ. ಅನುದಾನ ಕೇಂದ್ರದಿಂದ ಬಿಡುಗಡೆಯಾಗಿದೆ. ಇದು ನಿಜಕ್ಕೂ ಯಡಿಯೂರಪ್ಪನವರ ಗೆಲುವು.

    ಇನ್ನು ವಿಜಯೇಂದ್ರ ಅವರ ವಿಚಾರಕ್ಕೆ ಬರೋಣ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಡಿದ ಎಡವಟ್ಟಿನ ಪರಿಣಾಮ ಏನು ಎನ್ನುವುದು ವರಿಷ್ಠರಿಗೆ ಈಗ ಚೆನ್ನಾಗಿ ಅರ್ಥವಾಗಿದೆ. ಅಂದು ಹಳೆ ಮೈಸೂರು ಭಾಗದಿಂದ ವಿಜಯೇಂದ್ರ ಸ್ಪರ್ಧೆಗೆ ಅನುಮತಿ ನೀಡಿದ್ದರೆ ಆಪರೇಷನ್ ಕಮಲ ನಡೆಸುವ ಅನಿವಾರ್ಯತೆಯೇ ಬಿಜೆಪಿಗೆ ಬರುತ್ತಿರಲಿಲ್ಲ ಎನ್ನುವ ಸತ್ಯ ವರಿಷ್ಠರಿಗೆ ಈಗ ಅರ್ಥವಾಗಿದೆ. ಬಿಜೆಪಿಯ ನೆಲೆಯೇ ಇಲ್ಲದ ಮಂಡ್ಯದ ಕೆ.ಆರ್.ಪೇಟೆ, ಕಾಂಗ್ರೆಸ್-ಜೆಡಿಎಸ್‌ನ ಪ್ರಬಲ ನೆಲೆಯಾಗಿದ್ದ ತುಮಕೂರಿನ ಶಿರಾದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದು ಸಾಧಾರಣ ಸಂಗತಿಯಲ್ಲ. ಕ್ಷೇತ್ರದಲ್ಲೇ ಬೀಡುಬಿಟ್ಟು, ತಳಮಟ್ಟದ ವಾಸ್ತವಗಳನ್ನು ಅರ್ಥ ಮಾಡಿಕೊಂಡು, ಎಲ್ಲ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಗೆಲುವಿನ ರಣತಂತ್ರ ರೂಪಿಸುವುದು ಸಾಧಾರಣ ಸಂಗತಿಯಲ್ಲ. ವಿಜಯೇಂದ್ರ ವಿರುದ್ಧ ಹಿಂದಿನಿಂದ ಆರೋಪ ಮಾಡುತ್ತಿದ್ದ ನಾಯಕರೆಲ್ಲ ಈಗ ತೆಪ್ಪಗಿರಲೇಬೇಕು. ಇದು ವಿಜಯೇಂದ್ರ ಅವರ ನಿಜವಾದ ಗೆಲುವು.

    ರಾಜರಾಜೇಶ್ವರಿ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಡಿದರು. ಆದರೆ ಕ್ಷೇತ್ರದಲ್ಲಿ ಮುನಿರತ್ನ ಅವರ ವೈಯಕ್ತಿಕ ಪ್ರಭಾವ ಮತ್ತು ಬಿಜೆಪಿಯ ಸಂಘಟನಾ ಶಕ್ತಿಯ ಎದುರು ಡಿಕೆ ಬ್ರದರ್ಸ್ ಸೋಲೊಪ್ಪಿಕೊಳ್ಳುವುದು ಅನಿವಾರ್ಯವಾಯಿತು. ಶಿರಾದಲ್ಲಿ ದುರ್ಬಲ ಅಭ್ಯರ್ಥಿಗಳ ವಿರುದ್ಧ ಹಳೆಹುಲಿ ಟಿ.ಬಿ.ಜಯಚಂದ್ರ ಗೆದ್ದೇ ಗೆಲ್ಲುತ್ತಾರೆ ಎಂಬ ಕಾಂಗ್ರೆಸ್‌ನ ಅತಿಯಾದ ವಿಶ್ವಾಸ, ಮುನಿರತ್ನ ವಿರುದ್ಧ ಸೇಡು ತೀರಿಸಿಕೊಳ್ಳುಬವ ಅಬ್ಬರದಲ್ಲಿ ಡಿಕೆ ಸಹೋದರರು ಶಿರಾವನ್ನು ಕಡೆಗಣಿಸಿದ್ದು ಮುಳುವಾಯಿತು. ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಮೊದಲೇ ಸೋಲೊಪ್ಪಿಕೊಂಡಿತ್ತು ಅಥವಾ ಕಾಂಗ್ರೆಸ್‌ನವರು ಹೇಳುವಂತೆ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿತ್ತು.

    ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಇಬ್ಬರ ಜವಾಬ್ದಾರಿಯೂ ಈಗ ದೊಡ್ಡದಿದೆ. ಮಸ್ಕಿ, ಬಸವ ಕಲ್ಯಾಣ ವಿಧಾನಸಭೆ ಕ್ಷೇತ್ರಗಳಲ್ಲಿ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ಯಾವುದೇ ಸಂದರ್ಭದಲ್ಲಿ ಘೋಷಣೆಯಾಗಬಹುದು. ಬಹುಶಃ ಅಲ್ಲಿಯೂ ಬಿಜೆಪಿ ಗೆಲ್ಲಬಹುದು. ಆದರೆ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ಯಡಿಯೂರಪ್ಪ, ವಿಜಯೇಂದ್ರ ಮರೆಯಬಾರದು. ‘ವಿಜಯೇಂದ್ರ ಅವರು ಛಾಯಾ ಮುಖ್ಯಮಂತ್ರಿ’ ಎಂಬ ಆರೋಪ ಮತ್ತೆ ಕೇಳದಂತೆ ಇಬ್ಬರೂ ಎಚ್ಚರವಹಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟುವತ್ತ ವಿಜಯೇಂದ್ರ, ಕನಸಿನ ಆಡಳಿತ ನೀಡುವತ್ತ ಯಡಿಯೂರಪ್ಪ ಗಮನಹರಿಸಬೇಕು, ಆಗಲೇ ಅವರಿಗೂ, ಬಿಜೆಪಿಗೂ ಇಬ್ಬರಿಗೂ ಕ್ಷೇಮ.

    spot_img

    More articles

    1 COMMENT

    1. ಖಂಡಿತ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಚುನಾವಣ ತಂತ್ರ ಗೆಲುವಿಗೆ ಕಾರಣ ಎರಡು ಮಾತಿಲ್ಲ ಜೊತೆಗೆ ಕೈ ಕಾರ್ಯಕರ್ತರು ಬರಿ ಪಕ್ಷದ ನಾಯಕರ ಮನ ಗೆಲ್ಲುವ ಕೆಲಸದಲ್ಲಿ ತೊಡಗುವುದು ಬಿಟ್ಟು… ಜನಪರ ಕಾಳಜಿ ಮತ್ತು ಸೇವೆ ಮತ್ತು ಅವರೋಡನೇ ಬೆರೆತು ಕೆಲಸ ಮಾಡಬೇಕು ಅಲ್ಲದೆ ಜನರ ಕುಂದು ಕೊರತೆಗಳಿಗೆ ಸತತವಾಗಿ ಸ್ಪಂದಿಸದರೆ ಮಾತ್ರ ಮುಂದೆ ಜಯ.

    LEAVE A REPLY

    Please enter your comment!
    Please enter your name here

    Latest article

    error: Content is protected !!