ಕೆಲ ವರ್ಷಗಳ ಹಿಂದೆ ಅಗಲಿದ ಗುಲಾಮ , ಕಂಠೀರವ ಸಿನಿಮಾಗಳ ನಿರ್ದೇಶಕ ತುಷಾರ್ ರಂಗನಾಥ್ ಅವರನ್ನು ಅವರ ಬಹು ಕಾಲದ ಗೆಳೆಯ ಮಾಸ್ತಿ ಇಲ್ಲಿ ನೆನಪಿಸಿಕೊಂಡಿದ್ದಾರೆ.
ಕ್ಷಮೆಯಿರಲಿ, ಲೇಖನದುದ್ದಕ್ಕೂ ರಂಗನಾಥನನ್ನು ಏಕವಚನದಲ್ಲಿಯೇ ಉಲ್ಲೇಖಿಸಿದ್ದೇಅವನೆ ಕಾರಣ ರಂಗ ನನಗೆ ಹೋಗೋ ಬಾರೋ ಅನ್ನೋವಷ್ಟು ಸಲುಗೆಯ ಗೆಳೆಯ , ಗೌರವ ನಾವಿಬ್ಬರೂ ಬೇರೆಯವರಿಗೆ ಕೊಡುತ್ತಿದ್ದೆವೇ ಹೊರತು ಪರಸ್ಪರ ಹಂಚಿಕೊಳ್ಳುತ್ತಿರಲಿಲ್ಲ .
ರಂಗನ ಅಪ್ಪ ಪೊಲೀಸು, ಮನೆಯಲ್ಲಿ ತಾಯಿ, ಜೊತೆಗೆ ಅಕ್ಕ ತಮ್ಮ . ಜಾತಿ ಪ್ರೀತಿಗಳಲ್ಲಿ ವರ್ಗಗಳನ್ನಿಟ್ಟುಕೊಳ್ಳದಂಥ ಮಧ್ಯಮ ವರ್ಗದ ಕುಟುಂಬ. ಅಪ್ಪ ಪೊಲೀಸು ಅಂದ ಮೇಲೆ ಶಿಸ್ತಿಗೇನು ಕೊರತೆ ಇರಲಿಲ್ಲ ಹಾಗಂತ ಅವರ ತಂದೆ ಯಾವತ್ತೂ ಯಾವುದನ್ನೂ ಹೇರುತ್ತಿರಲಿಲ್ಲ .
ಶಿಸ್ತು ತಾನಾಗೇ ರಂಗನಲ್ಲಿ ರೂಢಿಸಿಕೊಂಡಿತ್ತು , ಆಗಿನ ವಿದ್ಯಾಭ್ಯಾಸದ ಪ್ರಮುಖ ಘಟ್ಟ ಅಂತನಿಸಿಕೊಂಡಿದ್ದ ಎಸ್ಎಸ್ಎಲ್ ಸಿ ಯನ್ನು ರಂಗ ಫಸ್ಟ್ ಕ್ಲಾಸಿನಲ್ಲಿ ಪಾಸು ಮಾಡಿದ್ದ. ಮನೆಯಲ್ಲಿದ್ದ ದೊಡ್ಡ ಜವಾಬ್ದಾರಿ ಎಂದರೆ ಅಕ್ಕನ ಮದುವೆ ಅದೂ ಕೂಡ ಆಗಿತ್ತು .
ಸಣ್ಣ ವಯಸ್ಸಿನಿಂದಲೇ ಸಿನಿಮಾಗಳು ಸಿನಿಮಾದ ಹಾಡುಗಳು ರಂಗನ ಮನಸ್ಸಿನಲ್ಲಿ ಸಿನಿಮಾಸಕ್ತಿಯನ್ನು ಮೂಡಿಸಿತ್ತು ಅನ್ಸುತ್ತೆ . ಆಗಿನಿಂದ ಅವನಲ್ಲಿದ್ದ ಸಿನಿಮಾ ಅಣು ಕಣವಾಗಿ , ಕಣ ಬೀಜವಾಗಿ , ಬೀಜ ಮೊಳಕೆಯೊಡೆದು ನಿಂತಿತ್ತು. ಮೊದಲಿನಿಂದಲೂ ಹನಿಗವನಗಳನ್ನು, ಸಣ್ಣ ಪುಟ್ಟ ಹಾಡುಗಳನ್ನು, ಸಣ್ಣ ಕಥೆಗಳನ್ನು ಓದುವುದೂ ಬರೆಯುವುದು ಮಾಡುತ್ತಿದ್ದ .
ರಂಗ ಜೀವಕ್ಕಿಂತಲೂ ಮಿಗಿಲಾಗಿ ಇಷ್ಟಪಡ್ತಿದಿದ್ದು ಕನ್ನಡವನ್ನು . ಒಂದಷ್ಟು ದಿವಸ ಕೆಲವು ಸಂಘಟನೆಗಳ ಹಿಂಬಾಲಕರನ್ನು ನಾಯಕರನ್ನು ಭೇಟಿ ಮಾಡಿ ಮಾತನಾಡಿಸಿ ಅವರೊಂದಿಗೆ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ . ಅನಂತರ ಕನ್ನಡ ಸೇವೆ ಮಾಡುವ ರೀತಿ ಇದಲ್ಲ ಎಂದು ನಿರ್ಧರಿಸಿ , ಮನಸ್ಸನ್ನು ಮನಸ್ಸಲ್ಲಿದ್ದ ಕನ್ನಡ ಪ್ರೀತಿಯನ್ನು ಗಟ್ಟಿಮಾಡಿಕೊಂಡು ವಾಪಸ್ ಬಂದುಬಿಟ್ಟಿದ್ದ.
ಟೀಚರು ಕಲಿಸಿದ ಕನ್ನಡ , ಬದುಕು ಕಲಿಸಿದ ಅನುಭವದೊಂದಿಗೆ ಚಿತ್ರರಂಗದ ಪ್ರವೇಶಕ್ಕೆ ಅಣಿಯಾಗುತ್ತಾನೆ. ಅಷ್ಟೊತ್ತಿಗಾಗಲೇ ಒಂದೆರೆಡು ಒಳ್ಳೆಯ ನೌಕರಿಗಳನ್ನು ಬಿಟ್ಟಿದ್ದ ರಂಗನಿಗೆ ಈ ಅವಧಿಯಲ್ಲಿ ಮನೆಯವರಿಂದ ಸಂಬಂಧಿಕರಿಂದ ವಿರೋಧ ಉಂಟಾಗಿ ಮನೆಯವರು ಇವನಲ್ಲಿನ ಸಿನಿಮಾ ಸಸಿಯನ್ನು ಕಿತ್ತೆಸೆದಾಗ ರಂಗನ ಅಕ್ಕ ಆ ಸಸಿಯನ್ನು ಪುನಃ ನೆಡುತ್ತಾರೆ , ನೀರೆರೆಯುತ್ತಾರೆ . ಆರ್ಥಿಕವಾಗಿ ಸಹಾಯ ಮಾಡಿ ಇವನ ಬೆನ್ನಿಗೆ ನಿಲ್ಲುತ್ತಾರೆ .
ರಂಗ ಮೊದಲ ಹೆಜ್ಜೆ ಕಿರುತೆರೆಯಲ್ಲಿಡುತ್ತಾನೆ . ಬರವಣಿಗೆ ಚೆನ್ನಾಗಿದ್ದಿದ್ದರಿಂದ ಸೀರಿಯಲ್ ಗಳಲ್ಲಿ ಬರೆಯಲು ಅವಕಾಶ ಸಿಗುತ್ತದೆ ಮತ್ತು ಬಹಳ ಬೇಗ ಕಿರುತೆರೆಯನ್ನು ಅರ್ಥೈಸಿಕೊಂಡು ಗುರುತಿಸಿಕೊಳ್ಳುತ್ತಾನೆ . ಅಲ್ಲಿ ಬಿ ಸುರೇಶರ ಬಳಗದಲ್ಲಿ ಕೆಲಸ ಮಾಡುತ್ತಿದ್ದ ಯೋಗರಾಜ ಭಟ್ಟರ ಪರಿಚಯವಾಗುತ್ತದೆ ಅವರಿಂದ ಸೂರಿಯ ಸಂಗಡ ಲಭಿಸುತ್ತದೆ . ಸಮಾನ ಮನಸ್ಕ ಹಾಗೂ ಸಮಾನ ವಯಸ್ಕನಾದ ಸೂರಿಯೊಂದಿಗೆ ಒಡನಾಟ ಶುರುವಾಗುತ್ತದೆ . ಇವನಿಗಿದ್ದ ವೇಗಕ್ಕೆ ಮತ್ತು ಇವನಿಗಿದ್ದ ಹಸಿವಿಗೆ ಕಿರುತೆರೆ ಸಾಕಾಗುವುದಿಲ್ಲ . ಸಿನಿಮಾ ಬಾಗಿಲನ್ನು ಬಡಿಯಲು ಗಾಂಧೀನಗರ ಪ್ರವೇಶಿಸುತ್ತಾನೆ , ಕಾಕತಾಳೀಯವೆಂದರೆ ಅವನಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಅವಕಾಶ ಮೊದಲಬಾರಿಗೆ ಗಾಂಧೀನಗರ ಅನ್ನೋ ಸಿನಿಮಾದಲ್ಲೇ ಸಿಗುತ್ತದೆ ಲಕ್ಕೀ ಶಂಕರ್ ಅದರ ನಿರ್ದೇಶಕರು .
ಈ ಸಿನಿಮಾದ ನಂತರ ಸೀರಿಯಲ್ನಿಂದ ಹೊರಬಂದ ಭಟ್ಟರು ಮತ್ತು ಸೂರಿ ಜೋಡಿ ಮಣಿ ಸಿನಿಮಾ ಶುರು ಮಾಡುತ್ತಾರೆ ಅದರಲ್ಲಿಯೂ ರಂಗ ಕೆಲಸ ಮಾಡುತ್ತಾನೆ . ಸಿನಿಮಾ ರಿಲೀಸ್ ಆಗಿ ಹೆಸರು ಮಾಡಿದರೂ ಬಾಕ್ಸಾಫೀಸಿನಲ್ಲಿ ಹಣ ಗಳಿಸಲು ವಿಫಲವಾಗುತ್ತದೆ .
ಭಟ್ಟರು ಎರಡನೇ ಸಿನಿಮಾಗೆ ಇದೇ ರಂಗನ ಹೆಸರನ್ನು ಬಳಸಿ ರಂಗ ಎಸ್ಎಸ್ಎಲ್ಸಿ ಎಂದು ನಾಮಕರಣ ಮಾಡುತ್ತಾರೆ , ರಂಗ ಇದರಲ್ಲಿ ಕೆಲಸ ಮಾಡುವುದಿಲ್ಲ . ಗಾಂಧೀನಗರ ಸಿನಿಮಾ ಮಾಡುವಾಗ ಲಕ್ಕೀ ಶಂಕರ್ ರಂಗನಿಗೆ ಲಯೇಂದ್ರರನ್ನು ಪರಿಚಯಿಸುತ್ತಾರೆ . ಲಯೇಂದ್ರ ರಂಗನನ್ನು ತನ್ನ ತಮ್ಮ ಸಾಧುಕೋಕಿಲ ಬಳಿ ಕರೆದೊಯ್ಯುತ್ತಾರೆ , ಒಬ್ಬ ರೈಟರ್ ನ ತಲಾಷಿಯಲ್ಲಿದ್ದ ಸಾಧುಕೋಕಿಲರಿಗೆ ರಂಗನ ಕೆಲಸ ಗಟ್ಟಿಮೊಸರಿನಂತೆ ಕಾಣಿಸುತ್ತದೆ . ಅವರ ರಾಕ್ಷಸ ಸಿನಿಮಾಗೆ ಸಹ ನಿರ್ದೇಶಕನಾಗಿ ಸೇರ್ಪಡೆಯಾಗುತ್ತಾನೆ , ಸಹ ನಿರ್ದೇಶನದ ಜೊತೆ ರಂಗ ಕಥೆ ಚಿತ್ರಕಥೆ ಸಾಹಿತ್ಯ ಸಂಭಾಷಣೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾನೆ. ಸಿನಿಮಾ ಕಮರ್ಷಿಯಲ್ಲಾಗಿ ಗೆಲ್ಲುತ್ತದೆ , ಕೂಡಲೇ ದರ್ಶನ್ ಅವರು ಸಾಧುಗೆ ಸುಂಟರಗಾಳಿ ಸಿನಿಮಾ ಮಾಡಲು ಕರೆಯುತ್ತಾರೆ .
ರಂಗ ಸುಂಟರಗಾಳಿ ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡುತ್ತಾನೆ. ರಂಗ ಗೀತರಚನೆಕಾರನಾಗಿ ಕಥೆಗಾರನಾಗಿ ಪಯಣ ಮುಂದುವರೆಸುತ್ತಾನೆ , ಬದಲಾವಣೆಯ ಗಾಳಿ ಹೇಗೆ ಬೀಸುತ್ತೆ ಅಂದ್ರೆ ನೋಡುನೋಡುತ್ತಲೇ ಭಟ್ಟರು ಮುಂಗಾರು ಮಳೆ ಸುರಿಸಿ ಯಶಸ್ಸಿನ ಫಸಲು ತೆಗೆಯುತ್ತಾರೆ . ಸೂರಿ ದುನಿಯಾ ಮಾಡಿ ಇತಿಹಾಸ ನಿರ್ಮಿಸುತ್ತಾರೆ , ರಾತ್ರೋರಾತ್ರಿ ಸಹತಾರೆಗಳಂತಿದ್ದ ವಿಜಿ ಮತ್ತು ಗಣೇಶ್ ಧ್ರುವತಾರೆಗಳಾಗುತ್ತಾರೆ .
ರಾಕ್ಷಸ ,ಸುಂಟರಗಾಳಿ ,ದುನಿಯಾ ಸಿನಿಮಾಗಳ ಯಶಸ್ಸಿನ ನಂತರ ರಂಗ ಸಾಹಿತ್ಯ ಸಂಭಾಷಣೆಯಲ್ಲಿ ತುಂಬಾ ಹೆಸರು ಮಾಡುತ್ತಾ ಹೋಗುತ್ತಾನೆ , ತನ್ನನ್ನು ತಾನು ಬಿಡುವಿಲ್ಲದ ಬರವಣಿಗೆಗೆ ತೊಡಗಿಸಿಕೊಳ್ಳುತ್ತಾನೆ . ಯಾವ ಮಟ್ಟಿಗೆ ಬೆಳೆಯುತ್ತಾನೆಂದರೆ ಯಾರನ್ನು ತನ್ನ ಆದರ್ಶ ಎಂದು ಕನವರಿಸುತ್ತಿದ್ದನೋ ಯಾರನ್ನು ನೋಡಿದರೆ ಸಾಕು ಅಂದುಕೊಳ್ಳುತ್ತಿದ್ದನೋ ಅವರ ಜೊತೆ ಔತಣಕ್ಕೆ , ಕೂಟಕ್ಕೆ , ಗೋಷ್ಠಿಗಳಿಗೆ ಸೇರುವಷ್ಟರ ಮಟ್ಟಿಗೆ ಬೆಳೆಯುತ್ತಾನೆ .
ಬೆಳೆದಂತೆ ರಂಗನ ಮನಸ್ಸಿನಲ್ಲಿ ಒಂದು ವಿಚಾರ ತಲೆದೋರುತ್ತದೆ . ಎಷ್ಟು ದಿನ ಬೇರೆಯವರ ಕಥೆಗಳಿಗೆ ಮಾತು ಬರೆಯುವುದು ? ಬೇರೆಯವರ ಸಿನಿಮಾಗಳಿಗೆ ಹಾಡು ಬರೆಯುವುದು ? ಗೆಳೆಯರೆಲ್ಲಾ ನಿರ್ದೇಶಕರಾದರು ತಾನೂ ಅಗಬೇಕು ಎಂಬ ಉಮೇದಿಯಿಂದ ನಿರ್ದೇಶಕನಾಗಲು ಹೊರಡುತ್ತಾನೆ . ಕನಸಿನಲ್ಲಿಯೂ ಗುಲಾಮನಂತೆ ಬದುಕದ ರಂಗ ತನ್ನ ಮೊದಲ ಸಿನಿಮಾಕ್ಕೆ ಗುಲಾಮ ಎಂದು ಹೆಸರಿಡಲು ತೀರ್ಮಾನಿಸುತ್ತಾನೆ . ಕಥೆ ಸಿದ್ದಪಡಿಸಿಕೊಂಡು ನಿರ್ಮಾಪಕ ರಾಮು ಮತ್ತು ನಾಯಕ ಪ್ರಜ್ವಲ್ ದೇವರಾಜ್ ಗೆ ಹೇಳುತ್ತಾನೆ . ಸಿಂಗಲ್ ಸಿಟಿಂಗಲ್ಲಿ ಕಥೆ ಓಕೆಯಾಗುತ್ತದೆ . ಗುರುಕಿರಣ್ ಸಂಗೀತದಲ್ಲಿ ಹಾಡುಗಳೂ ಸಿದ್ದವಾಗುತ್ತದೆ , ರಭಸದಿಂದ ಚಿತ್ರೀಕರಣ ಮುಗಿದು ಸಿನಿಮಾ ತೆರೆ ಕಾಣುತ್ತದೆ . ರೌಡೀಸಂ ಬೆರೆತ ಪ್ರೇಮಕಥೆಯಾಗಿದ್ದರಿಂದ ಸಿನಿಮಾ ಭರ್ಜರಿ ಓಪನಿಂಗೇನೋ ಪಡೆಯುತ್ತದೆ ಆದರೆ ಚಿತ್ರಕಥೆಯ ಪರಿಪಾಟಲಿನಿಂದಾಗಿ ಸಿನಿಮಾ ಯಶಸ್ಸು ಪಡೆಯುವುದಿಲ್ಲ .
ಕಾಲಿನ ಉಗುರು ಕಿತ್ತು ರಕ್ತ ಬಂದಿದ್ದರೂ ಎಲ್ಲಿ ಎಡವಿದೆನೋ ನೆನಪಿಗೆ ಬರುತ್ತಿಲ್ಲ ಎಂಬಂತಹ ಸ್ಥಿತಿ ರಂಗನದ್ದಾಗಿತ್ತು . ಗುಲಾಮ ಸೋಲಿನಿಂದ ಮೇಲೇಳಲು ರಂಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ .ಸಿನಿಮಾ ಎಂಬ ಮಾಯಾಮಹಲ್ಲಿನ ಪಡಸಾಲೆಯಲ್ಲಿ ಒಬ್ಬಂಟಿಯಾಗಿ ನಿಂತಿದ್ದ , ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೇ ಸಿನಿಮಾ ಎಂಬ ಕನಸ್ಸನ್ನು ಬೆನ್ನಟ್ಟಿ ಹಿಡಿದು, ಅದರ ಆಳ ಅಗಲಗಳನ್ನರಿತು ಕಲಿತು ಸಹಾಯಕ , ಸಾಹಿತಿ , ಸಂಭಾಷಣೆಕಾರ , ಸಹನಿರ್ದೇಶಕ, ನಿರ್ದೇಶಕನಾಗಿದ್ದ ರಂಗ ಅಂದು ಅಕ್ಷರಶಃ ಅಧೀರನಾಗಿದ್ದ .
ಸ್ನೇಹಿತರಲ್ಲಿ ಕೆಲವರನ್ನು ಇವನೇ ದೂರವಿರಿಸಿದ ಕೆಲವರು ತಾವಾಗೇ ದೂರ ಉಳಿದರು . ಇಷ್ಟೊತ್ತಿಗಾಗಲೇ ಮನೆಯವರೊಂದಿಗೆ ಭಾಗಶಃ ಸಂಪರ್ಕ ಕಡಿದುಕೊಂಡಿದ್ದ . ಎಷ್ಟೇ ಅಗಲಿ ಮನೆಯವರಲ್ಲವೇ ಅವರು ಇವನನ್ನು ಎಂದಿ್ಗೂಗೂ ದೂರ ಮಾಡಲಿಲ್ಲ , ರಂಗನ ಪಾಲಿಗೆ ದಿಕ್ಕೇ ದಾರಿತಪ್ಪಿಸಿದಾಗಲೂ ದಿಕ್ಕಾಗಿ ಕಂಡವರು ಅವನ ಅಕ್ಕ . ಆಕೆ ಇನ್ನಿಲ್ಲದಂತೆ ಅರ್ಥಿಕವಾಗಿ ನೆರವಾದಳು . ಸುಧಾರಿಸಿಕೊಂಡ ರಂಗ ನಂತರ ಕಂಠೀರವ ಸಿನಿಮಾ ನಿರ್ದೇಶಿಸುತ್ತಾನೆ , ಅದು ತಕ್ಕ ಮಟ್ಟಿಗೆ ಯಶಸ್ಸು ಪಡೆದರೂ ರಿಮೇಕೆಂದು ನಂತರದ ಅವಕಾಶಗಳು ಕಡಿಮೆಯಾಗುತ್ತವೆ.
ಪರಿಚಯಸ್ಥರ ಮದ್ಯೆ ಅಪರಿಚನಂತಾಗುತ್ತಾನೆ , ರಂಗನ ಮನಸ್ಸಿನಲ್ಲಿ ಆರೋಗ್ಯಕರ ಸ್ಪರ್ಧೇಯಿದ್ದರೂ ದೇಹದಲ್ಲಿ ಅರೋಗ್ಯವಿರಲಿಲ್ಲ .
ಒಮ್ಮೆ ಹೃದಯಾಘಾತಕ್ಕೆ ಒಳಗಾಗಿ ಘಾಸಿಕೊಂಡಿದ್ದ ಹೃದಯ ಎರಡನೇ ಬಾರಿ ಸಾವಿನೊಂದಿಗೆ ಶಾಮೀಲಾಗಿಬಿಡುತ್ತದೆ .
ಗೆಲುವಿಗೇ ಮಣೆ ಹಾಕುವ ಚಿತ್ರೋದ್ಯಮ ಹಾಗೂ ಜಗತ್ತು ಪ್ರಯತ್ನಕ್ಕೆ ಬೆನ್ನು ತಟ್ಟಿದ್ದರೆ ಬಹುಶಃ ರಂಗ ಬದುಕಿರುತ್ತಿದ್ದನೇನೋ , ಹಾಗಾಗಲಿಲ್ಲ , ರಂಗ ಕಾಲವಾಗುತ್ತಾನೆ .ಸಣ್ಣ ಮನಸ್ಸಿನ ಜನರೆದುರು ಅವನು ದೊಡ್ಡವನಾಗಿ ಕಾಣಲೇ ಇಲ್ಲ . ಕಾಣುವ ಯಾವುದೇ ಬರಹಕ್ಕಿಂತಲೂ ಮಿಗಿಲಾದದ್ದು ಕಾಣದ ಹಣೆಬರಹ .
ಆಟಕ್ಕೆ ಹೆದರದ ಸೋಲಿಗೆ ಹೆದರದ ರಂಗ ಕ್ರೀಡಾಂಗಣದ ಪ್ರೇಕ್ಷಕರಿಗೆ ಹೆದರಿದ್ದ , ಅನಾರೋಗ್ಯದ ನೊವಿಗಿಂತ ಹೆಚ್ಚು ಬಾಧಿಸಿದ್ದು ಅವನಂದುಕೊಂಡದ್ದಾಗಲಿಲ್ಲವೆಂಬ ನೋವು .
ರಂಗ ಬೆಂಕಿಯಂತಿರದೇ ಬೆಣ್ಣೆಯಂತಿದ್ದರೆ , ಭಾವುಕನಾಗದೇ ನಿರ್ಭಾವುಕನಾಗಿದಿದ್ದರೆ , ನಿಸ್ವಾರ್ಥವನ್ನು ಬದಿಗೊತ್ತಿ ಸ್ವಾರ್ಥದಿಂದಿದ್ದರೇ , ಸಾಧಕನಾಗದೇ ಸಮಯಸಾಧಕನಾಗಿದ್ದರೇ , ನಂಬಿಕೆಯನ್ನು ಸಹ ಅನುಮಾನದಿಂದ ನೋಡಿದ್ದರೆ ಈ ಜಗತ್ತಿನಲ್ಲಿ ಬದುಕಿರುತ್ತಿದ್ದ ಅನ್ನಿಸ್ತು .
ಒಂದು ಕಡೆ ಸಾವಿಗೆ ಕಾರಣ ಇದಾದರೆ ಮತ್ತೊಂದು ಕಡೆ ಅರೋಗ್ಯವನ್ನು ಕಡೆಗಣಿಸಿದ್ದು ವೈದ್ಯರ ಔಷಧಿ ಸಲಹೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೂ, ಪತ್ಯೆಗಳನ್ನು ಪಾಲಿಸದಿದ್ದಿದ್ದು ಸಾವಿಗೆ ಕಾರಣವಾಯಿತು.ರಂಗ ಪೂರ್ಣವಾಗಿ ಜೀವಿಸದಿದ್ದರೂ ಜೀವಿಸಿದಷ್ಟೂ ಕಾಲ ಅರ್ಥಪೂರ್ಣವಾಗಿ ಜೀವಿಸಿದ್ದ
ಈ ಅಂಕಣದೊಂದಿಗೆ ಪ್ರಕಟವಾಗಿರುವ ತುಷಾರ್ ರಂಗನಾಥ್ ಅವರ ಭಾವಚಿತ್ರವನ್ನು ರಚಿಸಿರುವ ಕಲಾವಿದೆ ಕಿರಣ ಆರ್ . ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಮಾಸ್ತಿ ಅವರು ತುಷಾರ ರಂಗನಾಥ್ ಅವರ ಬದುಕಿನ ವಿವಿಧ ಮಜಲುಗಳನ್ನೂ ಮನಮುಟ್ಟುವ ಹಾಗೆ ವಿವರಿಸಿದ್ದಾರೆ. ಧನ್ಯವಾದಗಳು.