ಜಯಶ್ರೀ ಅಬ್ಬೀಗೇರಿ
ಬೀದಿಯ ಬದಿಯಲ್ಲಿ ಚೆಂದದಿ ನಗೆ ಚೆಲ್ಲುವ ಹೂವಿನ ಅಂದವನ್ನು ನೋಡಲು ಸಮಯ ನಮಗಿಲ್ಲ. ಬೆಕ್ಕು ನಾಯಿ ಮರಿಗಳ ಚೆಲ್ಲಾಟ. ಹಸು ಕರುಗಳ ಚಿನ್ನಾಟ ಇವೆಲ್ಲ ಒತ್ತಟ್ಟಗಿರಲಿ ನಮ್ಮ ಕರುಳ ಕುಡಿಯ ಮೋಹಕ ಆಟವನ್ನು ಸವಿಯಲೂ ನಮಗೆ ಪುರುಸೊತ್ತಿಲ್ಲ. ದಿನೇ ದಿನೇ ಬದುಕಿನ ಮಗ್ಗುಲನ್ನು ಯಾಂತ್ರಿಕತೆಯತ್ತ ಹೊರಳಿಸುತ್ತಿದ್ದೇವೆ. ಧಾವಂತಿಕೆಯಲ್ಲಿ ನರಳುತ್ತಿದ್ದೇವೆ. ಆಧುನಿಕತೆಯ ಹೆಸರಿನಲ್ಲಿ ನಮ್ಮನ್ನು ನಾವೇ ಕಟ್ಟಿ ಹಾಕಿಕೊಳ್ಳುತ್ತಿದ್ದೇವೆ.
ಪ್ರತಿಯೊಬ್ಬರೂ ಒಂದು ಹವ್ಯಾಸವನ್ನು ಹೊಂದಿರಬೇಕು ಅದು ಜೀವನ ಪ್ರೀತಿಯನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ರೂಪಾಯಿಯನ್ನು ಹೇಗೆ ಉಳಿಸಬೇಕು ಎಂದು ತಿಳಿದುಕೊಳ್ಳಲು ಇರುವ ಆಸಕ್ತಿ ಪ್ರತಿಕ್ಷಣದಲ್ಲೂ ಜೀವಂತಿಕೆ ತುಂಬಬೇಕು ಎನ್ನುವುದರಲ್ಲಿಲ್ಲ. ಹಣ ಬಂದಷ್ಟು ಸಂತಸ ಹೆಚ್ಚುತ್ತದೆ ಎಂಬ ಭ್ರಮೆಯಲ್ಲಿ ಇನ್ನಷ್ಟು ಮತ್ತಷ್ಟು ಬೇಕೆನ್ನುವ ಆಸೆಗೆ ಕಡಿವಾಣ ಬೀಳುವುದೇ ಇಲ್ಲ. ಜನರಿಗಿಂತ ಸಂಬಂಧಗಳಿಗಿಂತ ಚೆಂದದ ಖುಷಿಗಳಿಗಿಂತ ಹಣವೇ ಮುಖ್ಯ. ಹಣವಿದ್ದರೆ ಯಾರಿಗೂ ಕಾಯಬೇಕಾಗಿಲ್ಲ.ಯಾರನ್ನೂ ಅವಲಂಬಿಸಬೇಕಾಗಿಲ್ಲ. ಇದಕ್ಕಿಂತ ಮೇಲಾಗಿ ಯಾರನ್ನೂ ಓಲೈಸಬೇಕಾಗಿಲ್ಲ. ಮನಸ್ಸಿಗೆ ಬಂದಂತೆ ನಡೆದುಕೊಳ್ಳಬಹುದೆಂಬ ಹುಚ್ಚು ಕುದುರೆಯ ಬೆನ್ನೇರಿ ಸವಾರಿ ನಡೆದುಬಿಡುತ್ತದೆ.
ಈ ಹುಚ್ಚಾಟದಲ್ಲಿ ಅಮೂಲ್ಯ ಬದುಕು ಸವೆದು ಹೋಗುತ್ತಿದೆ ಎಂಬುದು ಅರಿವಿಗೆ ಬರುತ್ತಲೇ ಇಲ್ಲ. ಹೃದಯದಲ್ಲಿ ಹುದುಗಿರುವ ಸಂತಸದ ಚಿಲುಮೆಯನ್ನು ಉಕ್ಕಿಸಲು ಬಿಡುವೇ ಇಲ್ಲ. ಸಾಗರದತ್ತ ಓಡಲೂ ಬಿಡುವಿಲ್ಲ. ಯಾವ ತಕ್ಕಡಿಯಲ್ಲಿ ಅಳೆಯಲಾಗದಷ್ಟು ಇರುವ ಅಂತರಂಗದ ನಿಧಿಯನ್ನು ಅಲಕ್ಷಿಸಿ ದುರಾಸೆಯ ಹಿಂದೆ ಕಾಲೆಳೆದುಕೊಂಡು ಹೋಗುತ್ತಿರುವುದು ಮೂರ್ಖತನವಲ್ಲದೇ ಮತ್ತೇನು?
ಈ ಮೂರ್ಖತನ ಬದುಕನ್ನು ನೀರಿಲ್ಲದ ಬಾವಿಯಾಗಿಸಿದೆ. ಜೀವವೇ ಇಲ್ಲದಂತೆ ಮಾಡುತ್ತಿದೆ. ಹಣ ಬದುಕಿನ ಬಹು ಭಾಗವನ್ನು ಆವರಿಸಿಕೊಂಡಿದೆ ಎಂಬುದೇನೋ ನಿಜ. ಯಾರಿಗಾಗಿ ಯಾಕಾಗಿ ಗಾಣದೆತ್ತಿನಂತೆ ದುಡಿದು ಸಂಪತ್ತು ಕೂಡಿಡಬೇಕು ಎಂದು ಒಮ್ಮೆಯಾದರೂ ನಮ್ಮನ್ನು ನಾವು ಕೇಳಿಕೊಂಡಿದ್ದೇವೆಯೇ? ಕೇಳಿಕೊಳ್ಳಬೇಕೆಂದರೂ ಪುರುಸೊತ್ತು ಸಿಗುತ್ತಿಲ್ಲ. ಅಷ್ಟರ ಮಟ್ಟಿಗೆ ಗಳಿಕೆಯಲ್ಲಿ ನಮ್ಮನ್ನು ನಾವು ಕಳೆದುಕೊಂಡು ಬಿಟ್ಟಿದ್ದೇವೆ.
ಮಹಾನಗರ ಎಂದು ಕರೆಸಿಕೊಳ್ಳುವ ಊರುಗಳಲ್ಲಿ ಸೂರ್ಯ ಪಿಳಿ ಪಿಳಿ ಕಣ್ಣು ಬಿಡುವ ಮೊದಲೇ ಮನೆಯಿಂದ ಕಾಲ್ಕಿಳಬೇಕು.ಮಧ್ಯಾಹ್ನ ಎಲ್ಲೋ ಡಬ್ಬಾ ಅಂಗಡಿಯಲ್ಲಿ ಊಟ.ಇಡೀ ಮನೆಯೆಲ್ಲ ಮಲಗಿದ ಮೇಲೆ ಬಂದು, ಕಳ್ಳರಂತೆ ಒಂದಿಷ್ಟು ತಟ್ಟೆಗೆ ಸುರುವಿಕೊಂಡು ನುಂಗುವ ಶಾಸ್ತ್ರ.ಒತ್ತಡಕ್ಕೆ ಒಲಿದ ರೋಗಗಳಿಗೆ ಗುಳಿಗೆಗೆಗಳನ್ನು ನುಂಗಿ ನೀರು ಕುಡಿದು ದಿಂಬಿಗೆ ತಲೆ ಇಡುವುದರೊಳಗೆ ಬಾರಾ ಹೊಡೆದಿರುತ್ತದೆ.
ಮರುದಿನ ಬೆಳಿಗ್ಗೆ ಬೇಗ ಏಳದಿದ್ದರೆ ಬಸ್ ಮಿಸ್ ಆಗುತ್ತದೆ ಎನ್ನುವ ಚಿಂತೆಯಲ್ಲೇ ಕಣ್ಣು ರೆಪ್ಪೆ ಅಂಟಿಸುವ ಪ್ರಯತ್ನ ನಡೆಯುತ್ತದೆ. ಅಪ್ಪ ಅಮ್ಮ ಒಂದೂರಲ್ಲಿ ನನ್ನ ಮಗ ದೊಡ್ಡೂರಲ್ಲಿದ್ದಾನೆ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡ್ತಿದಾನೆ ಅಂತ ಹೇಳಿಕೊಳ್ಳುವುದು ಒಂದು ಪ್ರತಿಷ್ಟೆ. ಅಂಥ ಒಣ ಪ್ರತಿಷ್ಟೆಯಲ್ಲಿ ಜೀವಗಳೆರಡು ಕೊರಗಿ ಸಾಯುತ್ತವೆ. ಕಾಲ ಉರಳಿದಂತೆ ಕನಸಿನ ಮನೆ, ಮನೆ ಮುಂದೊಂದು ಕಾರು ನಿಲ್ಲುತ್ತದೆ. ಹೊಟೆಲ್ಲಿನಲ್ಲಿ ಬರಿ ಇಡ್ಲಿ ತಿಂದು ಉಳಿಸಿದ ಹಣ ಫಲ ಕೊಟ್ಟಿತು. ಮಾಡಿದ ಸಾಲ ಸಂಬಳದಲ್ಲಿ ಕಟ್ ಆಗಿ ಬರುತ್ತದೆ. ಉಳಿದ ಸಾಲಕ್ಕೆ ಕಚೇರಿ ಕೆಲಸ ಮುಗಿದ ಮೇಲೆ ಬೇರೊಂದು ಕಡೆ ಪಾರ್ಟ್ ಟೈಂ ಕೆಲಸ. ಹೆಂಡತಿಯ ಸಂಬಳ ಮನೆ ಖರ್ಚಿಗೆ ಸಾಟಿ. ಮನಸ್ಸಿನಲ್ಲಿಯೇ ಇದೆಲ್ಲ ಲೆಕ್ಕ ಹಾಕಿದಾಗ ಯುದ್ಧ ಗೆದ್ದಂತಹ ಮನಸ್ಥಿತಿ.
ಎತ್ತು ಮೂತ್ರ ಮಾಡಿದಂತೆ ಎಲ್ಲೆಲ್ಲಿ ಏನೇನೋ ಹಣ ತೆಗೆದು ಇಟ್ಟು ಮಾಡಿ ಕೊನೆಗೆ ತಲೆ ಮೊಸರ ಗಡಿಗೆಯಂತೆ ಆಗುತ್ತದೆ. ಹೆದರಬೇಡ ಎಲ್ಲದಕ್ಕೂ ದೇವರಿದ್ದಾನೆಂದು ತಮಗೆ ತಾವೇ ಹೇಳಿಕೊಂಡು ದೇವರ ಮುಖವನ್ನೊಮ್ಮೆ ದಿಟ್ಟಿಸಿ ಧೈರ್ಯ ತುಂಬಿಕೊಳ್ಳುವುದು ನಡದೇ ಇರುತ್ತದೆ. ಸದಾ ಓಡುವ ಮನಸ್ಸಿಗೆ ಲಗಾಮಿಲ್ಲ ಅದಕ್ಕೆ ಗಳಿಕೆಯ ಕಣ್ಣು ಕಾಪು ಕಟ್ಟಿ ಬಿಟ್ಟು ಓಡಿಸಿದ್ದೇ ಓಡಿಸಿದ್ದು. ಕೊನೆಗೊಂದು ದಿನ ಗಳಿಸಿದ್ದೆಲ್ಲವನ್ನೂ ಇಲ್ಲೇ ಬಿಟ್ಟು ಹೊರಡುವ ದಿನಗಳ ಎಣಿಕೆ ಶುರುವಾಗುತ್ತವೆ. ಇಷ್ಟು ವರ್ಷ ಯಾರಿಗಾಗಿ ಇಷ್ಟೆಲ್ಲ ಗಳಿಸಿದೆ? ದೇವನಿತ್ತ ಅದ್ವಿತೀಯ ಬದುಕನ್ನು ಗುಡ್ಡಕ್ಕೆ ಕಲ್ಲು ಹೊರುವುದರಲ್ಲಿಯೇ ವ್ಯರ್ಥ ಮಾಡಿ ಬಿಟ್ಟೆನಲ್ಲ ಎಂದು ಪಶ್ಚಾತ್ತಾಪ ಪಡುವುದನ್ನು ನೋಡುತ್ತೇವೆ.
ಆದರೆ ಆಗ ಏನೆಂದುಕೊಂಡರೂ ಏನುಪಯೋಗ ಬದುಕೆಲ್ಲ ಮುಗಿದು ಹೋಗಿರುತ್ತದೆ. ಗಳಿಕೆಯ ದುರಾಸೆ ಇಂಥದ್ದೊಂದು ಬೇಗುದಿಯನ್ನು ಅಸಹನೀಯ ನೋವನ್ನು ಕೊಡುಗೆಯಾಗಿ ನೀಡುತ್ತದೆಂದು ನಾವು ಊಹಿಸಿರಲೂ ಸಾಧ್ಯವಿಲ್ಲ ನಮ್ಮ ನಡುವೆ ಇರುವ ಬುದ್ಧಿವಂತರು ಜ್ಞಾನಿಗಳು ಮೇಧಾವಿಗಳೆಂದು ಕರೆಸಿಕೊಳ್ಳುವವರೂ ಇದೇ ದಾರಿಯಲ್ಲಿ ನಮಗಿಂತ ವೇಗವಾಗಿ ಹೆಜ್ಜೆ ಹಾಕುತ್ತಿರುವುದನ್ನು ಕಂಡು ಬೆರಗಾಗುವ ಸ್ಥಿತಿ ನಮ್ಮದು. ಇದರಲ್ಲಿ ದುರಾಸೆಯ ಹಸ್ತಕ್ಷೇಪ ಸುಸ್ಪಷ್ಟ.
ನನ್ನ ಹತ್ತಿರ ಇಷ್ಟು ಇದೆ ಎಂದು ತೋರಿಸುವ ಉಮ್ಮೇದಿನಲ್ಲಿ ಎಷ್ಟೊಂದು ಅಮೂಲ್ಯವಾದುದನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಮರೆಯುತ್ತಿದ್ದೇವೆ. ಗಳಿಸಿರುವುದನ್ನು ಎಷ್ಟರ ಮಟ್ಟಿಗೆ ನಮ್ಮ ಖುಷಿಗಾಗಿ ಮತ್ತು ಬದುಕಿನ ಸಾರ್ಥಕತೆಗಾಗಿ ಬಳಸುತ್ತಿದ್ದೇವೆ? ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಗುವುದು ಬಲು ಕಷ್ಟ. ಬೇಕಿಲ್ಲದ್ದಕ್ಕೆ ಬೇಡದ್ದಕ್ಕೆ ಕೂಡಿಡುವ ಹಾಳು ಚಾಳಿ. ಹೆಚ್ಚೆಚ್ಚು ಕೂಡಿಸಿದರೆ ಹೆಚ್ಚು ಗೌರವ ಪ್ರೀತಿಯ ಓಲೈಕೆ ಸಿಗುತ್ತದೆಂಬುದನ್ನು ಮುಖ್ಯವಾಗಿಸಿಕೊಳ್ಳುತ್ತಿದ್ದೇವೆ.
ಚಿಕ್ಕ ಪುಟ್ಟ ಸಂಗತಿಗಳು ಎಷ್ಟು ಖುಷಿ ಕೊಡುತ್ತವೆ ಎಂಬುದು ಅನುಭವಿಸಿದವರಿಗೇ ಗೊತ್ತು. ಅಂಧಕಾರದಿ ಕುರುಡನಾಗಿ ಆಸೆಗಳ ದಾಸನಾಗಿ ದುಡಿಮೆಯಿಂದ ಬಳಲಿ ಬೆಂಡಾದಾಗ ಬುದ್ಧಿಹೀನತೆಯ ಬಗ್ಗೆ ಅರಿವು ಮೂಡುತ್ತದೆ. ಆಗ ಕಾಲ ಮಿಂಚಿ ಹೋಗಿರುತ್ತದೆ. ಉತ್ಸಾಹವಿಲ್ಲದೇ ಬರಿ ಗಳಿಕೆಯ ಬೆನ್ನು ಹತ್ತಿದರೆ ಬದುಕು ಬೇಸರವೆನಿಸಿ ಬಿಡುತ್ತದೆ. ಗಳಿಕೆಯ ಹುಚ್ಚು ಯಾವ ಸಮಸ್ಯೆಯನ್ನು ಪರಿಹಾರ ಮಾಡುವುದಿಲ್ಲ. ಬದಲಾಗಿ ಮತ್ತಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಸಂಪತ್ತಿನ ಆಸೆ ಜಾಲಿಮರದ ಸ್ನೇಹವಿದ್ದಂತೆ ನೆರಳು ನೀಡುತ್ತದೆಂದು ಬಲು ಮೋಹದಿಂದ ಹತ್ತಿರ ಹೋದರೆ ಅದರ ಮುಳ್ಳು ಚುಚ್ಚಿ ಸಹಿಸಲಾಗದ ನೋವು ಅನುಭವಿಸಬೇಕಾಗುತ್ತದೆ.ಮಾನಸಿಕ ಆಘಾತದಿಂದ ಬಳಲಬೇಕಾಗುತ್ತದೆ. ಹೀಗಾಗಿ ತಿಳಿದವರು ಜಾಲಿಮರದ ನೆರಳಿನಲ್ಲಿ ವಿಶ್ರಮಿಸಲು ಬಯಸುವುದಿಲ್ಲ.
ದುಡಿ ಮತ್ತು ದುಡಿ ಎಂಬುದು ಪ್ರಸ್ತುತ ಸಮಾಜದ ಸಾಂಕ್ರಾಮಿಕ ಕಾಯಿಲೆ ಆದಂತಾಗಿದೆ. ಹರುಷದ ಹೊನಲು ಅಳೆಯಲು ಬಾಹ್ಯ ಸಂಪತ್ತಿನ ಅಳತೆಗೋಲು ಬಳಸುವುದು ಕನಿಷ್ಠ ಮಾರ್ಗವೇ ಸರಿ. ಬದುಕಿನಿಂದ ಕಲಿಯಲು ವಿಕಸನ ಹೊಂದಲು ಪ್ರೇರೇಪಣೆ ನೀಡುವ ಅತ್ಯುಚ್ಛ ಆಸೆಗಳನ್ನು ಇರಿಸಿಕೊಳ್ಳುವ ಹಂಬಲ ಶೂನ್ಯವಾಗುತ್ತಿದೆ. ದುರಾಸೆಯಿಂದ ದುರ್ಯೋಧನನೋ ಶಕುನಿಯೋ ಆಗುತ್ತಿದ್ದೇವೆ. ಮೋಹ ಮದ ಮತ್ಸರಾದಿಗಳನ್ನು ನಿಯಂತ್ರಿಸಬಲ್ಲವ ಪರಮ ಸುಖಿಯಾಗಬಲ್ಲ. ಆದರೆ ಆ ಸುಖದ ಶಿಖರವನ್ನು ಏರುವುದು ಅಷ್ಟು ಸುಲಭವಲ್ಲ.
ಗಳಿಸುವುದಕ್ಕಿಂತ ಉಳಿಸುವುದು ಮುಖ್ಯ. ಬದುಕನ್ನು ಕಳೆದುಕೊಂಡು ಹುಡುಕುವುದಕ್ಕಿಂತ ಸಿಕ್ಕಿರುವ ಸಂಭ್ರಮದ ಪ್ರತಿ ಕ್ಷಣಗಳನ್ನು ಕಳೆದುಹೋಗದಂತೆ ಕಾಪಾಡಿಕೊಳ್ಳುವುದು ಮುಖ್ಯ. ನಮ್ಮ ನಿಜವಾದ ಸಂಪತ್ತು ಹೃದಯ ಸಂಪತ್ತು. ತಲೆಯ ಸಂಪತ್ತಿನಿಂದ ಹಿಂದೆ ಬಿದ್ದು ಅಜ್ಞಾನಿಗಳಾಗಿ ತಪ್ಪು ಮಾಡುತ್ತಿದ್ದೇವೆ ‘ತಪ್ಪು ಮಾಡುವುದಕ್ಕಿಂತ ನಿಧಾನಿಸುವುದು ಒಳ್ಳೆಯದು.’ಒಮ್ಮೆ ಗಳಿಕೆಯ ಚಕ್ರಕ್ಕೆ ಸಿಕ್ಕಿಕೊಂಡರೆ ಸಾಕು ಹೊರ ಬರುವುದು ಸುಲಭದ್ದಲ್ಲ.ಗಳಿಕೆಯಂಬ ವಿಷ ಚಕ್ರ ತಿರುಗುತ್ತಿರುತ್ತದೆ. ದಿನ ತಿಂಗಳು ವರುಷಗಳು ಉರುಳುರುಳಿ ಸಮಯದ ಚಕ್ರವೂ ತಿರುಗುತ್ತಲೇ ಇರುತ್ತದೆ.
ಕಟ್ಟಿಸಿದ ಮನೆಯಲ್ಲಿ ಒಂದು ಗಳಿಗೆ ಸುಖಾಸೀನರಾಗಲು ಸಾಧ್ಯವಿಲ್ಲ. ಕೊಂಡ ಕಾರಿನಲ್ಲಿ ಆನಂದದಿಂದ ತಿರುಗಲು ಸಮಯವಿಲ್ಲವೆಂದರೆ ಅದನ್ನೆಲ್ಲ ಗಳಿಸಿ ಉಪಯೋಗವೇನು ಅಲ್ಲವೇ? ಗಳಿಕೆಗಿಂತ ನಮ್ಮನ್ನು ಪ್ರೀತಿಸುವ ಜೀವಗಳಿಗೆ ಸಮಯವನ್ನು ನೀಡುವುದು ಅತಿ ಮುಖ್ಯ. ಇಲ್ಲವಾದಲ್ಲಿ ನಮ್ಮಲ್ಲಿ ಸಿಗದ ಪ್ರೀತಿಯನ್ನು ಇನ್ನೆಲ್ಲೋ ಅರಸಿ ಹೋಗುತ್ತಾರೆ. ನಮ್ಮ ಕೈಗೆಟುಕದಷ್ಟು ದೂರ ನಿಲ್ಲುತ್ತಾರೆ. ಬದುಕೆಂಬುದು ಕೇವಲ ಅವಕಾಶವಲ್ಲ ಅದೊಂದು ಆಯ್ಕೆಯ ವಿಷಯ. ‘ಬದುಕು – ನನಗಾಗಿ ನಮ್ಮವರಿಗಾಗಿ ಇತರರಿಗಾಗಿ’ ಎನ್ನುವಂತೆ ಬದುಕುವುದರಲ್ಲಿನ ಶ್ರೇಷ್ಠತೆ ಯಾವುದರಲ್ಲೂ ಇಲ್ಲ. ಕಾಲ ಬದಲಾಗಿದೆ ಬದುಕಿಗೆ ತುಂಬ ದುಡ್ಡು ಬೇಕು ಎನ್ನುವ ನೆಪ ಹೇಳಿ ನಿಟ್ಟುಸಿರು ಏದುಸಿರು ಬಿಡುತ್ತ ಭಾವ ಸೇತುವೆಯ ಹಾಳುಗೆಡುವಿದರೆ ಸರಳ ಸುಂದರ ಬದುಕು ಕೈಗೆಟುಕದ ಗಗನ ಕುಸುಮದಂತೆ ಆಗುತ್ತದೆ‼ ನೆನಪಿರಲಿ: ಸರಳ ಸುಂದರ ಬದುಕು ಒಂದು ಅತ್ಯುತ್ತಮ ಕಲೆ.
Photo by Ravi Roshan on Unsplash
ಬರಹ ಅತ್ಯಂತ ಹೃದ್ಯವಾಗಿದೆ.