ಷೇರುಪೇಟೆಗಳ ಸೂಚ್ಯಂಕಗಳು ಸರ್ವಕಾಲೀನ ದಾಖಲೆ ಮಟ್ಟ ತಲುಪಿವೆ ಎಂಬುದು ಸ್ವಾಗತಾರ್ಹವಾದ ಅಂಶವಾಗಿದೆ. ಸೆನ್ಸೆಕ್ಸ್ ದೀಪಾವಳಿ ಮುಹೂರ್ತದ ವಹಿವಾಟಿನಲ್ಲಿ 43,830.93 ನ್ನು ಮಧ್ಯಂತರದಲ್ಲಿ ತಲುಪಿ ದಾಖಲೆ ನಿರ್ಮಿಸಿ 43,637.98 ರಲ್ಲಿ ಕೊನೆಗೊಂಡಿದೆ. ಮೇಲ್ನೋಟಕ್ಕೆ ಇದು ಸಕಾರಾತ್ಮಕ ಬೆಳವಣಿಗೆಯಾದರೂ, ಇದು ಎಷ್ಟರಮಟ್ಟಿಗೆ ಸಹಜತೆಯಿಂದ ಕೂಡಿದ ಪ್ರಕ್ರಿಯೆಂಬುದು ಮಾತ್ರ ಪ್ರಶ್ನೆಯಾಗಿದೆ.
ಮಾರ್ಚ್ 24 ರಂದು ವಾರ್ಷಿಕ ಕನಿಷ್ಠ ಮಟ್ಟಕ್ಕೆ ಅಂದರೆ 25,638.90 ರ ಕುಸಿದಿದ್ದ ಸೆನ್ಸೆಕ್ಸ್ ಅಂದು ಮಾರ್ಕೆಟ್ ಕ್ಯಾಪಿಟಲೈಸೇಷನ್ ರೂ.103.69 ಲಕ್ಷ ಕೋಟಿಯಲ್ಲಿತ್ತು. ಫೆಬ್ರವರಿ 19 ರಂದು ರೂ.158.71 ಲಕ್ಷ ಕೋಟಿಯಲ್ಲಿದ್ದ ಮಾರ್ಕೆಟ್ ಕ್ಯಾಪಿಟಲ್ ಮೊತ್ತ ಕೇವಲ ಒಂದು ತಿಂಗಳ ಸಮಯದಲ್ಲಿ ರೂ.55 ಲಕ್ಷ ಕೋಟಿಯಷ್ಟು ಕರಗಿದೆ ಎಂದರೆ ಪೇಟೆಯ ಚಲನೆ ಎಷ್ಟರ ಮಟ್ಟಿಗೆ ಹರಿತ ಎಂಬುದು ತಿಳಿಯುತ್ತದೆ. ಕೊರೋನಾ ಎಂಬ ಗುಮ್ಮವನ್ನು ಮುಂದಿಟ್ಟು ಭಾರಿ ಮಾರಾಟ ಮಾಡಿದವು. ಆದರೆ ಅದೇ ಕೊರೋನಾ ಗರಿಷ್ಠಕ್ಕೆ ಏರಿಕೆಯಾದಾಗ ಅದು ನಿರ್ಲಕ್ಷಕ್ಕೊಳಗಾಗಿ, ಏನೂ ಆಗಿಲ್ಲವೆಂಬಂತೆ, ಕಾರ್ಪೊರೇಟ್ ಗಳ ಸಾಧನೆಯ ಬೆಂಬಲವಿಲ್ಲದಿದ್ದರೂ, ಏರಿಕೆಯತ್ತ ಸಾಗುವಂತೆ ಮಾಡಲಾಗಿದೆ. ಆಗಷ್ಟ್ 7ರಂದು ರೂ.150 ಲಕ್ಷ ಗಡಿ ದಾಟಿದ ಪೇಟೆಯ ಬಂಡವಾಳಿಕರಣ ಮೌಲ್ಯವು ಸುಮಾರು ಒಂದು ತಿಂಗಳ ಅವಧಿಯವರೆಗೂ ರೂ.150 ರಿಂದ ರೂ.159 ರ ಅಂತರದಲ್ಲಿತ್ತು. ಆದರೆ ಸೆಪ್ಟೆಂಬರ್ 16 ರಂದು ರೂ.160.08 ಲಕ್ಷ ಕೋಟಿ ಬಂಡವಾಳೀಕರಣ ಮೌಲ್ಯ ತಲುಪಿದ ನಂತರ ಅಕ್ಟೋಬರ್ 9 ರವರೆಗೂ ಸ್ಥಿರತೆ ಕಂಡು ಅಂದು ರೂ.160.68 ಲಕ್ಷ ಕೋಟಿಯ ಹೊಸ ದಾಖಲೆ ನಿರ್ಮಿಸಿತು.
ದೀಪಾವಳಿಗೆ ಮುನ್ನ ಹಿಂದಿನ ವಾರದಲ್ಲಿ ನಿರಂತರ ಖರೀದಿ ನಡೆಸಿದ ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯ ಕಾರಣ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.169.31 ಲಕ್ಷ ಕೋಟಿಗೆ ದೀಪಾವಳಿ ಮುಹೂರ್ತದ ಚಟುವಟಿಕೆಯಲ್ಲಿ ಜಿಗಿತ ಕಂಡಿದೆ. ಈ ಜಿಗಿತವು ಎಷ್ಟರಮಟ್ಟಿಗೆ ಸ್ಥಿರತೆ ಕಾಣುವುದು ಎಂಬುದನ್ನು ಕಾದು ನೋಡಬೇಕಾಗಿದೆ.
ಆಕರ್ಷಕ ಲಾಭಾಂಶದ ಸುರಿಮಳೆ ನಿರರ್ಥಕ:
ಫೆಬ್ರವರಿ 19 ರಂದು ವಿದೇಶಿ ವಿತ್ತೀಯ ಸಂಸ್ಥೆಗಳು ರೂ.190.66 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದವು. ಅಲ್ಲಿಂದ ಮಾರ್ಚ್ 26 ರವರೆಗೂ ನಿರಂತರ ಮಾರಾಟದ ಹಾದಿಯಲ್ಲಿದ್ದವು. ಈ ಒಂದು ತಿಂಗಳ ಅಂತರದಲ್ಲಿ ಕಂಪನಿಗಳಾದ ಬಿ ಪಿ ಸಿ ಎಲ್ ಪ್ರತಿ ಷೇರಿಗೆ ರೂ.16.50, ಅಲೆಂಬಿಕ್ ಫಾರ್ಮ ರೂ.10, ಸವಿತಾ ಟೆಕ್ನಾಲಜೀಸ್ ರೂ.20, ಎಕ್ಸೆಲ್ ಇಂಡಸ್ಟ್ರೀಸ್ ರೂ.10, ಸುಂದರಂ ಕ್ಲೇಟನ್ ರೂ.31, ಟಿವಿಎಸ್ ಶ್ರೀಚಕ್ರ ರೂ.21.10, ಟೊರೆಂಟ್ ಫಾರ್ಮ ರೂ.32, ಸನ್ ಟಿವಿ ರೂ.12.50, ಬಾಂಕೋ ಇಂಡಿಯಾ ರೂ.20, ಕೋಲ್ ಇಂಡಿಯಾ ರೂ.12, ಗಾಡ್ ಫ್ರೆ ಫಿಲಿಪ್ಸ್ ರೂ.24, ಟೆಕ್ ಮಹೀಂದ್ರ ರೂ.10, ಬಜಾಜ್ ಆಟೋ ರೂ.125, ಬಜಾಜ್ ಹೋಲ್ಡಿಂಗ್ಸ್ ರೂ.40, ಬಜಾಜ್ ಫೈನಾನ್ಸ್ ರೂ.10, ಎಚ್ ಎ ಎಲ್ ರೂ.33, ಎಲ್ & ಟಿ ರೂ.10, ಜೆ ಬಿ ಕೆಮಿಕಲ್ಸ್ ರೂ.10, ಮಹರಾಷ್ಟ್ರ ಸ್ಕೂಟರ್ಸ್ ರೂ.50, ಸನೋಫಿ ರೂ.349, ಸೊನಾಟಾ ಸಾಫ್ಟ್ ವೇರ್ ರೂ.14.50, ಫಿನೋಲೆಕ್ಸ್ ರೂ.10 ರಂತೆ ಲಾಭಾಂಶ ಪ್ರಕಟಿಸಿ, ಘೋಷಿಸಿ, ವಿತರಿಸಿವೆ. ಆದರೂ ಷೇರುಪೇಟೆ ಈ ವಿದೇಶೀ ವಿತ್ತೀಯ ಸಂಸ್ಥೆಗಳ ಮಾರಾಟದ ಭರಾಟೆಯಲ್ಲಿ ಸಿಲುಕಿ, ನಲುಗಿ ರೂ.55 ಲಕ್ಷ ಕೋಟಿಯಷ್ಟು ಬಂಡವಾಳಿಕರಣ ಮೌಲ್ಯವನ್ನು ಕಳೆದುಕೊಂಡಿತು.
ವಾಸ್ತವ ಪರಿಸ್ಥಿತಿ:
ಹಿಂದಿನ ವಾರ ರೀಟೇಲ್ ಗ್ರಾಹಕರ ಹೂಡಿಕೆ ಪ್ರಥಮ ಭಾರಿಗೆ ರೂ.10 ಲಕ್ಷ ಕೋಟಿ ದಾಟಿದೆ ಎಂಬ ಅಂಶವು ಮಾಧ್ಯಮಗಳಲ್ಲಿ ಹೆಡ್ ಲೈನ್ ಸುದ್ಧಿಯಾಯಿತು. ಇದೇನು ಮಹಾ ಸಾಧನೆಯೇ? ಸುಮಾರು ರೂ.169 ಲಕ್ಷ ಕೋಟಿ ಮಾರ್ಕೆಟ್ ಕ್ಯಾಪ್ ಇರುವ ಪೇಟೆಯಲ್ಲಿ ರೀಟೇಲ್ ಹೂಡಿಕೆದಾರರ ಭಾಗ ಕೇವಲ ರೂ.10 ಲಕ್ಷ ಕೋಟಿ ಎಂದರೆ ಪೇಟೆಯಲ್ಲಿ ನಡೆಯುತ್ತಿರುವ ಚಟುವಟಿಕೆಯಲ್ಲಿ ಕಂಪನಿಯ ಪ್ರವರ್ತಕರು, ವಿದೇಶಿ ಹೂಡಿಕೆದಾರರು, ಸ್ಥಳೀಯ ವಿತ್ತೀಯ ಹೂಡಿಕೆದಾರರು, ಮ್ಯುಚುಯಲ್ ಫಂಡ್ ಹೂಡಿಕೆಗಳದೇ ಕಾರುಬಾರು. ಅದರೂ ರೀಟೇಲ್ ಹೂಡಿಕೆದಾರರ ಆಸಕ್ತಿ ವಿತ್ತೀಯ ಪೇಟೆಗಳಲ್ಲಿ ಹೆಚ್ಚುತ್ತಿದೆ. ಜುಲೈ 10 ರಂದು 5.15 ಕೋಟಿ ನೋಂದಾಯಿತ ಹೂಡಿಕೆದಾರರಿದ್ದರೆ ಅದು ಈ ತಿಂಗಳ 13 ರಂದು 5.67 ಕೋಟಿಗೆ ಏರಿಕೆ ಕಂಡಿದೆ. ಈ ಮಧ್ಯೆ ಸೂಚ್ಯಂಕಗಳು, ಷೇರಿನ ದರಗಳ ಏರಿಕೆಗೂ ದೇಶದ ಆರ್ಥೀಕತೆಗೂ ಸಂಬಂಧವಿಲ್ಲವೆಂದು ಹಲವಾರು ವಿಶ್ಲೇಷಣೆಗಳು ಬಂದರೂ, ರಿಸರ್ವ್ ಬ್ಯಾಂಕ್ ಗೌರ್ನರ್ ರವರೂ ಇವೆರಡಕ್ಕೂ ಸಂಬಂಧವಿಲ್ಲವೆಂದು ಆಗಷ್ಟ್ ತಿಂಗಳಲ್ಲಿ ಹೇಳಿಕೆ ಕೊಟ್ಟಮೇಲೂ ಸೂಚ್ಯಂಕಗಳು ಏರಿಕೆ ಕಂಡಿವೆ. ಸೆನ್ಸೆಕ್ಸ್ ಸುಮಾರು 5,400 ಪಾಯಿಂಟುಗಳಷ್ಟು ಏರಿಕೆ ಕಂಡಿದೆ. ಈಗಿನ ಏರಿಕೆಯ ರೀತಿ ನೋಡಿದರೆ ಷೇರಿನ ಬೆಲೆಗಳು ರಸ್ತೆ ಬದಿ ಅಂಗಡಿಯಲ್ಲಿ ಕೊಳ್ಳುತ್ತಿದ್ದ ಪಾಪ್ ಕಾರ್ನ್ ಬೆಲೆಗೂ ಅದೇ ಪಾಪ್ ಕಾರ್ನ್ ನ್ನು ಮಲ್ಟಿಪ್ಲೆಕ್ಸ್ ಗಳಲ್ಲಿ ಖರೀದಿ ಬೆಲೆಗೂ ಇರುವ ಅಂತರದಷ್ಟು ಬದಲಾಗಿವೆ.
ಈಗ ಪ್ರದರ್ಶಿತವಾಗುತ್ತಿರುವ ತೇಜಿಯು ಪೇಟೆಯೊಳಗೆ ನುಸುಳಿ ಬರುತ್ತಿರುವ ಹಣವೇ ಹೊರತು ಕಾರ್ಪೊರೇಟ್ ಗಳ ಆಂತರಿಕ ಸಾಧನೆಯಿಂದಲ್ಲ. ಹಾಗಾಗಿ ಬಂಡವಾಳ ಸುರಕ್ಷತೆಯತ್ತ ಹೆಚ್ಚಿನ ಗಮನ ನೀಡುವುದು ಅತ್ಯವಶ್ಯಕವಾಗಿದೆ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.