ನಿವೃತ್ತ ಡಿಜಿಪಿ ಡಾ. ಡಿ.ವಿ.ಗುರುಪ್ರಸಾದ್ ಬರೆದಿರುವ ದಂತಕತೆಯಾದ ದಂತಚೋರ ಕೃತಿ ನಿನ್ನೆಯಷ್ಟೆ ಬಿಡುಗಡೆಯಾಗಿದೆ. ಆ ಕೃತಿಯ ಆಯ್ದ ಒಂದು ಭಾಗ ಇಲ್ಲಿದೆ.
ಗೋಪಾಲ್ ಹೊಸೂರ್ ಮೇಲೆ ದಾಳಿಯಾದ ಕೇವಲ ಎರಡೇ ದಿನಗಳ ಬಳಿಕ ವೀರಪ್ಪನ್ ಮತ್ತೊಂದು ದಿಟ್ಟ ದಾಳಿಗೆ ಕ್ಯೆಹಾಕಿದ. ಪಾಲಾರ್ (ಸೊರಕೆಮಡು) ವಿನಲ್ಲಿ ಮಾಡಿದಂತೆಯೇಆತ ನೆಲ ಬಾಂಬ್‌ಗಳನ್ನಿಟ್ಟು ತಮಿಳುನಾಡಿದ ಪೊಲೀಸ್ ಅಧಿಕಾರಿಗಳನ್ನು ಕೊಲ್ಲುವ ಪ್ರಯತ್ನವನ್ನು ಮಾಡಿದ.
ಈ ಬಗ್ಗೆ ತಮಿಳುನಾಡಿನ ನಿವೃತ್ತಎಸ್.ಪಿ. ಎಂ.ಅಶೋಕ್‌ಕುಮಾರ್ ನನಗೆ ಹೀಗೆಹೇಳಿದರು:
“1993ರ ಮೇ ತಿಂಗಳ 26ರ ಬೆಳಿಗ್ಗೆ ನಮ್ಮಎಸ್.ಟಿ.ಎಫ್‌ತಂಡವು ಡಿ.ಐ.ಜಿ ವಿಜಯಕುಮಾರ್ ನೇತೃತ್ವದಲ್ಲಿಕಲ್ಲಟ್ಟಿಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ಗಾಗಿ ಕೂಂಬಿಂಗ್ ಕಾರ್ಯಾಚರಣೆ ಮಾಡುತ್ತಿತ್ತು. ಆಗ ನಮ್ಮ ತಂಡದ ಕಾನ್ಸ್‌ಟೇಬಲ್ ಸೀಮೈಚಾಮಿ ಮರದ ಹಿಂದೆ ಅಡಗಿದ್ದ ಒಬ್ಬ ವ್ಯಕ್ತಿಯನ್ನು ನೋಡಿಕೂಡಲೇ ಅವನತ್ತ ಗುಂಡು ಹಾರಿಸಿದ. ಆಗ ಬಹಳ ಜನರುಓಡಿದ ಸಪ್ಪಳ ನಮಗೆ ಕೇಳಿಬಂದಿತು. ನಾವು ಆತ ಅಡಗಿದ್ದ ಜಾಗಕ್ಕೆ ಹೋಗಿ ನೋಡಿದಾಗ ಅಲ್ಲಿ ತಿಂಡಿ ತಿನಿಸುಗಳ ಪಾಕೆಟ್‌ಗಳು, ಬೀಡಿಯ ತುಂಡುಗಳು ಮುಂತಾದವುಬಿದ್ದಿದ್ದವು. ಅಲ್ಲಿ ಬ್ಯಾಟರಿಯೊಂದನ್ನು ಇಟ್ಟಿದ್ದು ಅದಕ್ಕೆ ವ್ಯೆರ್ ಸಂಪರ್ಕವನ್ನು ಮಾಡಿತ್ತು. ಇದನ್ನು ನಾವು ಕಂಡಕೂಡಲೇ ನಮಗೆ ನೆಲದಲ್ಲಿ ಬಾಂಬುಗಳನ್ನು ಹುಗಿದಿದ್ದಾರೆ ಎಂದು ಖಾತ್ರಿಯಾಯಿತು. ಮುಂದೆ ಹೋಗುವ ಹಾದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನೆಲಬಾಂಬುಗಳನ್ನು ಭೂಮಿಯಲ್ಲಿ ಹುಗಿದು ಅವನ್ನುಒಂದಕ್ಕೊಂದನ್ನು ವೈರ್ ಮೂಲಕ ಜೋಡಿಸಿ ಬ್ಯಾಟರಿಗೆ ಸಂಪರ್ಕವನ್ನುಕೊಡಲಾಗಿತ್ತು. ಪಾಲಾರ್‌ಸ್ಫೋಟದಲ್ಲಿ ಹೇಗೆ ಮಾಡಿದ್ದರೋ ಇದೂ ಅದೇರೀತಿಯಲ್ಲಿಯೇ ಇತ್ತು. ಸೀಮೈಚಾಮಿ ಗಮನಿಸಿಗುಂಡು ಹಾರಿಸಿದ ಕಾರಣ ಬ್ಯಾಟರಿಗೆ ಕರೆಂಟ್ ಹರಿಸಲಾಗದೆ ವೀರಪ್ಪನ್ ತಂಡದವರು ಓಡಿಹೋಗಿದ್ದರು. ಹಲವಾರು ಗಂಟೆಗಳ ಕಾಲದ ಶೋಧನೆಯ ನಂತರ 45 ಬಾಂಬ್‌ಗಳನ್ನು ಪತ್ತೆ ಮಾಡಿ ಅವನ್ನು ನೆಲದಿಂದ ಹೊರಕ್ಕೆ ತೆಗೆದೆವು. ಆ ನಂತರ ಅವನ್ನು ಪಾಲಾರ್ ಕ್ಯಾಂಪಿಗೆ ತೆಗೆದುಕೊಂಡು ಹೋದೆವು.
“ಪಾಲಾರ್ ಸ್ಫೋಟದ ಪ್ರಕರಣದಲ್ಲಿ ನಾವು ಸೈಮನ್‌ನನ್ನುಬಂಧಿಸಿ ಅವನನ್ನು ಈ ಬಗ್ಗೆ ವಿಚಾರಿಸಿದಾಗ ಆತ ಪೊಲೀಸರನ್ನುಕೊಲ್ಲಲು ವಾಳಂಗುಳಿಪಟ್ಟಿ ಬಳಿ ಹಲವಾರು ಕಡೆಗಳಲ್ಲಿ ಇಂತಹ ಸ್ಫೋಟಕಗಳನ್ನು ಹುದುಗಿಸಿ ಇಟ್ಟಿದ್ದೆವು ಎಂದು ತಿಳಿಸಿದ. ಆತ ಇಂತಹ ನಾಲ್ಕು ಇತರ ಜಾಗಗಳನ್ನು ನಮಗೆ ತೋರಿಸಿದ್ದ. ಅವುಗಳಲ್ಲಿ ಒಂದು ನಮ್ಮತಂಡದ ಸದಸ್ಯರು ಕಾಡಿನಲ್ಲಿ ಕಾಲಕಾಲಕ್ಕೆ ವಿಶ್ರಾಂತಿಯನ್ನು ಪಡೆಯುತ್ತ್ತಿದ್ದ ಓಸಾಡಪ್ಪ ದೇವಸ್ಥಾನದ ಸುತ್ತಇದ್ದ ಪ್ರದೇಶವೆಂದು ತಿಳಿದು ನಮಗೆ ಗಾಬರಿಯಾಗಿತ್ತು.”
ಈ ಘಟನೆಯ ಬಗ್ಗೆ ತಮಿಳುನಾಡಿನ ಬರಗೂರು ಪೊಲೀಸ್‌ಠಾಣೆಯ ಅಪರಾಧ ಸಂಖ್ಯೆ 12/93 ರಲ್ಲಿ ಕೊಲೆಗೆ ಪ್ರಯತ್ನದ ಪ್ರಕರಣವೊಂದುದಾಖಲಾಯಿತು.
ಆ ದಿನ ಕರ್ನಾಟಕದ ಪಾಲಾರ್ ಕ್ಯಾಂಪಿನಲ್ಲಿದ್ದ ಇನ್ಸ್‌ಪೆಕ್ಟರ್ ಬಿ .ಎ.ಪೂಣಚ್ಚ ಈ ಘಟನೆಯ ಬಗ್ಗೆ ಹೇಳಿದ್ದು ಹೀಗೆ:
“ತಮಿಳುನಾಡಿನ ಕಾಡಿನ ಪ್ರದೇಶದಲ್ಲಿಎಸ್.ಟಿ.ಎಫ್‌ನ 70 ಜನ ಸಿಬ್ಬಂದಿ ಕೂಂಬಿಂಗ್ ಆಪರೇಷನ್ ಮಾಡುತ್ತಿದ್ದರು. ಅವರನ್ನು ಕೊಲ್ಲಬೇಕೆಂಬ ಉದ್ದೇಶದಿಂದ ವೀರಪ್ಪನ್‌ಕಾಡಿನ ನೆಲದಲ್ಲಿ40-50 ಸ್ಫೋಟಕಗಳನ್ನು ಹುಗಿದಿದ್ದ. ತಮಿಳುನಾಡು ತಂಡದ ಜತೆಗೆ ಚಕಮಕಿಯಾದಾಗ ವೀರಪ್ಪನ್ ತಂಡ ಅಲ್ಲಿಂದ ಪಲಾಯನ ಮಾಡಿತು. ನಂತರ ನಮಗೆ ತಿಳಿದುಬಂದಿದ್ದೇನೆಂದರೆ ವೀರಪ್ಪನ್ ತಂಡದ ಒಬ್ಬ ಬಾಂಬ್‌ತಜ್ಞ ತಮಿಳು ನಾಡಿನ ಅಷ್ಟೊಂದು ಪೊಲೀಸರು ಸಾಯಬಾರದು ಎಂಬ ಸದುದ್ದೇಶದಿಂದ ಸ್ಫೋಟಕಗಳಿಗೆ ಕರೆಂಟ್ ಹರಿಯುವ ವೈರ್‌ನತುದಿಯನ್ನುಯಾರಿಗೂ ತಿಳಿಯದಂತೆ ಕತ್ತರಿಸಿದ್ದ. ಹೀಗಾಗಿ ಕರೆಂಟ್‌ಕೊಟ್ಟರೂ ಬಾಂಬುಗಳು ಸಿಡಿಯಲಿಲ್ಲ. ಒಂದು ವೇಳೆ ಆತ ಹೀಗೆ ಮಾಡಿರದಿದ್ದರೆ ತಮಿಳುನಾಡಿನ ೭೦ ಜನರು ಸಾಯಬೇಕಾಗಿತ್ತು.
“ಆನಂತರ ತಮಿಳುನಾಡು ಎಸ್.ಟಿ.ಎಫ್‌ಯೋಧರು ಸ್ಫೋಟಕಗಳನ್ನು ನೆಲದಿಂದ ಹೊರಕ್ಕೆ ತೆಗೆದು ತಮ್ಮ ಹೆಗಲ ಮೇಲೆ ಹಾಕಿಕೊಂಡು ಪಾಲಾರ್‌ನಲ್ಲಿದ್ದ ನಮ್ಮ ಶಿಬಿರಕ್ಕೆ ಬಂದು ಅವನ್ನು ನಮಗೆ ತೋರಿಸಿ ನಾವು ಬದುಕಿದೆವುಎಂದು ಹೇಳಿದರು. ಈ ಘಟನೆಯಾದ ಹಲವಾರು ತಿಂಗಳುಗಳ ನಂತರ ನಾವು ವೀರಪ್ಪನ್‌ನ ಕೆಲವು ಸಹಚರರನ್ನು ಬಂಧಿಸಿ ಅವರನ್ನು ಈ ಘಟನೆಯ ಪ್ರಶ್ನಿಸಿದಾಗ, ಒಬ್ಬ ವ್ಯಕ್ತಿತಾನೇ ವೈರ್‌ಗಳನ್ನು ಕತ್ತರಿಸಿ ಪೊಲೀಸರನ್ನು ಉಳಿಸಿದ್ದಾಗಿ ನನ್ನ ಮುಂದೆಒಪ್ಪಿಕೊಂಡ. ಒಂದು ವೇಳೆ ಅವನಿಗೆ ಒಳ್ಳೆಯ ಬುದ್ಧಿ ಬರದೇ ಹೋಗಿದ್ದರೆ ತಮಿಳುನಾಡಿನ ಹೆಸರಾಂತ ಅಧಿಕಾರಿಗಳು ಇಂದು ದಿವಂಗತರಾಗಿರುತ್ತಿದ್ದರು.”
(ಸಪ್ನ ಬುಕ್ ಬೆಂಗಳೂರು ಇವರು ಪ್ರಕಟಿಸಿರುವ 340 ಪುಟಗಳ ಈ ಕೃತಿಯ ಬೆಲೆ ರೂ .250)