ಒಂದು ಪುರಾತನ ಊರು ಆ ಊರಿನಲ್ಲೊಂದು ಇತಿಹಾಸ ಪ್ರಸಿದ್ಧ ದೇವಸ್ಥಾನ . ಆ ದೇವರ ದರ್ಶನಕ್ಕಾಗಿ ದೂರದ ಊರುಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದರು. ದೇವರು, ದೇವಸ್ಥಾನದ ಗೋಪುರ , ಗೋಡೆ , ಗರ್ಭಗುಡಿ ಮತ್ತು ಸ್ಥಂಭಗಳು ಅತ್ಯಂತ ಆಕರ್ಷಕವಾದ ಹಾಗೂ ಸುಂದರವಾದ ಪ್ರಾಚೀನ ಶಿಲ್ಪಕಲೆಗಳಿಂದ ಕೂಡಿತ್ತು. ಅರ್ಚಕರು ಪ್ರತಿದಿನವೂ ದೇವರಿಗೆ ವಿಶೇಷ ಪೂಜೆಗಳನ್ನು ಮಾಡುತ್ತಿದ್ದರು . ದೇವಸ್ಥಾನದ ಸಂಪೂರ್ಣ ಉಸ್ತುವಾರಿಯನ್ನು ಆಡಳಿತ ಮಂಡಳಿ ನಿರ್ವಹಿಸುತ್ತಿತ್ತು .
ಆ ದೇವಸ್ಥಾನದಲ್ಲಿ ಶ್ರೀನಿವಾಸ ಎಂಬುವವನು ಗಂಟೆ ಬಾರಿಸುವ ಕೆಲಸ ಮಾಡುತ್ತಿದ್ದ . ದೇವಸ್ಥಾನದ ಮಹಿಮೆ ಹಾಗೂ ಹಿರಿಮೆ ಸ್ಥಳೀಯರಿಂದ ಹೊರಗಿನವರಿಂದ ಹಾಗೂ ಗೈಡ್ ಗಳಿಂದ ಪ್ರತಿಯೊಂದು ಕಡೆಯೂ ಪಸರಿಸಿತ್ತು.
ದಿನಕಳೆದಂತೆ ಸ್ಥಳೀಯ ಭಕ್ತರ ಜೊತೆಗೆ ವಿದೇಶೀ ಟೂರಿಸ್ಚ್ ಗಳೂ ಸಹ ಗುಂಪು ಗುಂಪಾಗಿ ದೇವಸ್ಥಾನಕ್ಕೆ ಬರಲಾರಂಭಿಸಿದರು .
ಬೆಳವಣಿಗೆ ಕಂಡ ದೇವಸ್ಥಾನದ ಆಡಳಿತ ಮಂಡಳಿ ಒಮ್ಮೆ ಒಂದು ತುರ್ತು ಸಭೆ ಕರೆದು ಪೂಜೆ ಮಾಡುವ ಅರ್ಚಕರಿಂದ ಹಿಡಿದು ಗಂಟೆ ಬಾರಿಸುವ ಶ್ರೀನಿವಾಸನವರೆಗೂ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬರೂ ತಪ್ಪದೇ ಇಂಗ್ಲಿಷು ಕಲಿಯುವಂತೆ ಫರ್ಮಾನು ಹೊರಡಿಸುತ್ತಾರೆ .
ಅನಕ್ಷರಸ್ಥನಾದ ಶ್ರೀನಿವಾಸ ಕಂಗಾಲಾಗಿ ಇಂಗ್ಲಿಷನ್ನು ಕಲಿಯುವ ಗೋಜಿಗೇ ಹೋಗುವುದಿಲ್ಲ .ಆಡಳಿತ ಮಂಡಳಿ ಶ್ರೀನಿವಾಸನಿಗೆ ನೀನು ಇಂಗ್ಲಿಷು ಕಲಿಯದಿದ್ದರೇ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕುತ್ತಾರೆ .
ಅವರು ತೆಗೆದುಹಾಕೋವರೆಗೂ ಯಾಕ್ ಇರ್ಬೇಕು ಅಂತಂದುಕೊಂಡ ಸ್ವಾಭಿಮಾನಿ ಶ್ರೀನಿವಾಸ ತಾನಾಗೇ ಗಂಟೆ ಬಾರಿಸುವ ಕೆಲಸ ಬಿಟ್ಟು ಬೇರೇ ದಾರಿಕಾಣದೇ ಬದುಕಲು ದೇವಸ್ಥಾನದ ಮುಂಭಾಗದ ರಸ್ತೆ ಬದಿಯಲ್ಲಿ ಒಂದು ಟೀ ಅಂಗಡಿಯನ್ನು ತೆರೆಯುತ್ತಾನೆ .ವ್ಯಾಪಾರ ಚೆನ್ನಾಗಿ ನಡಿಯತೊಡಗುತ್ತದೆ.ತಿಂಗಳು ಕಳೆದಂತೆ ಸಂಜೆ ಹೊತ್ತು ಬಿಸಿ ಬೋಂಡ ಬಜ್ಜಿ ಹಾಕಲು ಶುರುಮಾಡುತ್ತಾನೆ . ರುಚಿ ಜನರ ನಾಲಿಗೆಯನ್ನು ವ್ಯಾಪಾರ ಶ್ರೀನಿವಾಸನ ಕೈಯನ್ನೂ ಹಿಡಿಯುತ್ತದೆ .
ನೋಡು ನೋಡುತ್ತಿದ್ದಂತೆ ಶ್ರೀನಿವಾಸನ ಟೀ ಅಂಗಡಿ ಹೋಟೆಲ್ಲಾಗುತ್ತದೆ .ಹೋಟೆಲ್ ರೆಸ್ಟೋರೆಂಟಾಗುತ್ತದೆ . ದೊಡ್ಡ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡ ಶ್ರೀನಿವಾಸ ದೊಡ್ಡ ಶ್ರೀಮಂತನಾಗುತ್ತಾನೆ .
ಅಷ್ಟು ದೊಡ್ಡ ಶ್ರೀಮಂತನಾದರೂ ಶ್ರೀನಿವಾಸ ಕನ್ನಡ ಬಿಟ್ಟು ಬೇರೆ ಭಾಷೆ ಕಲಿಯುವುದಿಲ್ಲ . ಒಮ್ಮೆ ಒಬ್ಬ ಆಂಗ್ಲ ಪತ್ರಿಕೆಯ ಪತ್ರಕರ್ತರೊಬ್ಬರು ಶ್ರೀನಿವಾಸನ ಸಂದರ್ಶನ ಮಾಡಲು ಬಂದು ನೀವು ಯಾಕೆ ಇಂಗ್ಲಿಷ್ ಕಲಿಯಲಿಲ್ಲ ? ಎಂದು ಶ್ರೀನಿವಾಸನನ್ನು ಪ್ರಶ್ನಿಸಿದಾಗ. ” ನಾ ಏನಾರ ಇಂಗ್ಲಿಷು ಕಲ್ತಿರ್ತಿದ್ರೆ ಇನ್ನೂ ದೇವಸ್ಥಾನದಲ್ಲಿ ಗಂಟೆ ಬಾರ್ಸ್ಕೊಂಡಿರ್ಬೇಕೀತ್ತು” ಎಂದು ಉತ್ತರಿಸುತ್ತಾನೆ .
ಯಾರೋ ಮಹಾನುಭಾವ ಬರೆದಿದ್ದ ಈ ಸಣ್ಣ ಕತೆಯನ್ನು ಓದಿದ ತಕ್ಷಣ ಮನಸ್ಸಿಗೆ ತುಂಬಾನೇ ಖುಷಿಯಾಯಿತು .
- ಮಾಡುವ ಕೆಲಸ ಯಾವುದೇ ಆದರೂ ಶ್ರದ್ಧೆಯಿಂದ ಮಾಡಿದರೆ ಖಂಡಿತ ಯಶಸ್ಸು ಲಭಿಸುತ್ತದೆ .
- ಒಂದು ಬಾಗಿಲು ಮುಚ್ಚಿದರೆ ಅವಕಾಶ ಅನ್ನೊ ಮತ್ತೊಂದು ಬಾಗಿಲು ತೆರೆದೇ ತೆರೆಯುತ್ತದೆ .
- ಬದಲಾವಣೆ ಜಗದ ನಿಯಮ ಅದಕ್ಕೆ ಧೃತಿಗೆಡಬಾರದು .
- ಸದಾ ಹೊಸತನಕ್ಕೆ ಒಗ್ಗಿಕೊಳ್ಳಬೇಕು .
- ಮನಸ್ಸಿಗೆ ಸರಿ ಎನ್ನಿಸುವ ನಿರ್ಧಾರವನ್ನು ಧೈರ್ಯದಿಂದ ತೆಗೆದುಕೊಳ್ಳಬೇಕು .
- ಎಂತಹುದೇ ಸಂದರ್ಭದಲ್ಲೂ ಸ್ವಾಭಿಮಾನವನ್ನು ಬಿಡಬಾರದು .
- ಪರಿಶ್ರಮಕ್ಕೆ ಪ್ರತಿಫಲ ಕಟ್ಟಿಟ್ಟ ಬುತ್ತಿ .
ಈ ಪುಟ್ಟ ಕತೆಯಲ್ಲಿ ಇಷ್ಟೊಂದು ಅದ್ಭುತವಾದ ಸಂಗತಿಗಳು ಅಡಕವಾಗಿವೆ ಅನ್ನಿಸ್ತು .
Photo by Matthew T Rader on Unsplash
ಪರಿಶ್ರಮಕ್ಕೆ ಪ್ರತಿಫಲ ದೊರಕುತ್ತದೆ ಎಂಬುದು ಸತ್ಯ.ಜೊತೆಗೆ ಶ್ರೀನಿವಾಸ ರಿಗೆ ವ್ಯಾಮೋಹ, ಬೇರೆಯವರನ್ನು ಅನುಸರಿಸಬೆಕೆಂಬ ಮನೋಭಾವ ಇರಲಿಲ್ಲ. ಹಾಗಾಗಿ ತನ್ನ ಆದೂ ಭಾಷೆ, ಮಣ್ಣಿನ ಸೊಗಡನ್ನು.ಆಟ ಬಿಡಲಿಲ್ಲ ಆತನ್ಸ್ ನಿಷ್ಠೆ ಅವನನ್ನು ಎತ್ತರಕ್ಕೆ ಏರಿಸಿತು. ಮಾಸ್ತಿ ನಿಜಕ್ಕೂ ಕನ್ನಡ ದ ಆಸ್ತಿನೆ. ಉತ್ತಮ ಲೇಖನ.