26.2 C
Karnataka
Thursday, November 21, 2024

    ಹೆಚ್ಚು ಅಂಕ ಗಳಿಸುವುದೇ ಗುರಿಯಾದಾಗ ಶಿಕ್ಷಣದ ಉದ್ದೇಶ ಈಡೇರುವುದೆ?

    Must read

    ಪಾಠ ಕಲಿಸ ಬೇಕಾದ ಶಿಕ್ಷಕರಿಂದಲೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ಹಲವು ದೇಶಗಳಲ್ಲಿ ಶಿಕ್ಷಕರನ್ನೇ ಗುಂಡಿಟ್ಟು ಕೊಂದ ವಿದ್ಯಾರ್ಥಿಗಳು, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವೀಧರರು ಉಗ್ರರಾಗಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುವುದು, ತಂದೆ-ತಾಯಿ ಬೈದರೆಂಬ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳು, ವಿನಾಕಾರಣ ವಿಶ್ವ ವಿದ್ಯಾಲಯಗಳ ಆವರಣದಲ್ಲಿ ಗುಂಪು ಘರ್ಷಣೆಗಳು, ಲಂಚಗುಳಿತನ, ಇದೆಲ್ಲವೂ ಇಂದಿನ ದಿನಪತ್ರಿಕೆಗಳಲ್ಲಿ ಆಗಾಗ್ಗೆ ನಾವುಗಳು ಓದುವ ಆತಂಕಕಾರಿ ವಿಷಯಗಳು.

    ಇವುಗಳ ಬಗ್ಗೆ ಆಳವಾಗಿ ಚಿಂತಿಸಿದಾಗ, ನಮ್ಮ ಸಮಾಜವು ದಾರಿತಪ್ಪಿ ವಿರುದ್ಧ ದಿಕ್ಕಿನಲ್ಲಿ ಸಾಗಿತ್ತಿದೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಉತ್ತಮ, ಆರೋಗ್ಯಕರ ಮತ್ತು ಸಮರ್ಥ ಸಮಾಜವನ್ನು ಕಟ್ಟುವಲ್ಲಿ ನಮ್ಮ ಶಿಕ್ಷಣ ಪದ್ಧತಿ ವಿಫಲವಾಗಿದೆ ಎಂಬ ವಾಸ್ತವಾಂಶ ಇದರಿಂದ ತಿಳಿಯುತ್ತದೆ. ಸಮಾಜದಲ್ಲಿ ಈ ಪರಿಸ್ಥಿತಿ ಸುಧಾರಿಸಿ, ಮೌಲ್ಯಗಳಿಗೆ ಗೌರವವನ್ನು ನೀಡುವ, ಮಾನವೀಯತೆ ಮೆರೆಯುವ ಸಮಾಜವನ್ನು ಸೃಷ್ಟಿಸಲು ಮೌಲ್ಯಾಧಾರಿತ ಶಿಕ್ಷಣದಿಂದಲೇ ಸಾಧ್ಯ. ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ – “Education is the only panacea for all evils in the society”. ಆದುದರಿಂದ ಶಿಕ್ಷಣ ಎಂದರೇನು? ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಅದರ ಪಾತ್ರವೇನು? ಎಂಬ ಅಂಶಗಳನ್ನು ಮುಂದಿನ ಸಾಲುಗಳಲ್ಲಿ ತಿಳಿಯಲು ಪ್ರಯತ್ನಿಸೋಣ. 

    ಶಿಕ್ಷಣ ಎಂದರೇನು?

    ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ಭೋದನೆ, ತರಬೇತಿ  ಮತ್ತು ಸಂಶೋಧನೆಗಳ ಮೂಲಕ ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ವರ್ಗಾಯಿಸುವ ಪ್ರಕ್ರಿಯೆಯೇ ಶಿಕ್ಷಣ. ಶಿಕ್ಷಣವು ಮನುಷ್ಯನ ಯೋಚನಾ ಶಕ್ತಿಯ ಬೆಳವಣಿಗೆಗೆ ಮತ್ತು ನಡವಳಿಕೆಗಳ ಮೇಲೆ ರಚನಾತ್ಮಕ ಮತ್ತು ಧನಾತ್ಮಕವಾದಂತ ಪರಿಣಾಮವನ್ನು ಬೀರುತ್ತದೆ. ನೆಲ್ಸನ್ ಮಂಡೇಲಾರವರ ಪ್ರಕಾರ “ಶಿಕ್ಷಣವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ”. ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಶಿಕ್ಷಣ ಬಹಳ ಮುಖ್ಯ. 

    ದಕ್ಷಿಣ ಆಫ್ರಿಕಾದ ವಿಶ್ವ ವಿದ್ಯಾಲಯದ ಉಪನ್ಯಾಸಕ, ಕಾಲೇಜಿನ ಮುಖ್ಯ ದ್ವಾರದಲ್ಲಿ ಈ ಕೆಳಗಿನ ಸಂದೇಶವನ್ನು ಬರೆಸಿ, ಫಲಕವನ್ನು ನೇತು ಹಾಕಿದನಂತೆ, “Collapsing any nation does not require use of atomic bombs or the use of long range missiles. But it requires lowering the quality of education and allowing cheating in the exams by students”.

    ದೇಶದ ಭವಿಷ್ಯ ನಿರ್ಮಾಣವಾಗುವುದು ಶಾಲೆಗಳ ತರಗತಿಗಳಲ್ಲಿ

    1964ರಲ್ಲಿ ಪ್ರೊ. ಡಿ.ಎಸ್ ಕೊಠಾರಿಯವರ ಅಧ್ಯಕ್ಷತೆಯ ರಾಷ್ಟ್ರೀಯ ಶಿಕ್ಷಣ ಆಯೋಗದ ವರದಿಯಲ್ಲಿ ಹೇಳಿರುವಂತೆ,Destiny of a nation is being shaped in the classrooms. ಅಂದರೆ, ದೇಶದ ಭವಿಷ್ಯ ನಿರ್ಮಾಣವಾಗುವುದು ಶಾಲೆಗಳ ತರಗತಿಗಳಲ್ಲಿ. ತುಮಕೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮೀಜಿ, ಶ್ರೀ ವೀರೇಶಾನಂದ ಸರಸ್ವತಿ ಮಹಾರಾಜ್‍ರವರು ಹೇಳಿರುವ ಅರ್ಥಗರ್ಭಿತ ಮಾತು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. Build one good school today and avoid hundred jails tomorrow. ಇಂದು ಒಂದು ಒಳ್ಳೆಯ ಶಾಲೆಯನ್ನು ನಿರ್ಮಿಸಿದರೆ ನಾಳೆ ಒಂದು ನೂರು ಜೈಲುಗಳ ನಿರ್ಮಾಣವನ್ನು ತಪ್ಪಿಸಬಹುದು.

    ಮೇಲಿನ ವಾಕ್ಯಗಳನ್ನು ಅವಲೋಕಿಸಿದರೆ, ಶಿಕ್ಷಣದ ಮಹತ್ವ ನಮಗೆ ಅರಿವಾಗುವುದರಲ್ಲಿ ಸಂಶಯವಿಲ್ಲ. 

    ಶಿಕ್ಷಣದ ಉದ್ದೇಶಗಳು : 

    • ಸುಶಿಕ್ಷಿತ ಸಮಾಜವನ್ನು ಕಟ್ಟುವುದು.
    • ವಿದ್ಯಾರ್ಥಿಗಳಲ್ಲಿ ಜ್ಞಾನಸಂಪತ್ತು ಮತ್ತು ಆಲೋಚನಾ ಶಕ್ತಿಗಳನ್ನು ವಿಧಿವತ್ತಾಗಿ ಬೆಳೆಸುವುದು.
    • ಸೃಜನಾತ್ಮಕ ಮತ್ತು ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸುವುದು.
    • ಜ್ಞಾನ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವುದು.
    • ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರತ್ಯೇಕರಿಸಿ, ಸಿದ್ಧಿಸಿಕೊಳ್ಳಲು ಅನುವು ಮಾಡುವುದು. 
    • ಪ್ರಜೆಗಳನ್ನು ಸಶಕ್ತಿಗೊಳಿಸುವುದು.
    • ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಅನುಕೂಲ ಮಾಡಿಕೊಡುವುದು. 
    • ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು.
    • ಜೀವನದ ಸಂಪೂರ್ಣತೆಯನ್ನು ಅರಿತು, ನೈತಿಕ ಹಾದಿಯಲ್ಲಿ ನಡೆದು ಜೀವನ ನಿಬಾಯಿಸಬಲ್ಲ ಸಮಗ್ರ ವ್ಯಕ್ತಿಯನ್ನು ತಯಾರು ಮಾಡುವುದು.

    ಪ್ರಸ್ತುತದಲ್ಲಿ, ಶಾಲಾ ಕಾಲೇಜುಗಳ ಕಾರ್ಯ ವೈಖರಿಯನ್ನು ಗಮನಿಸಿದರೆ, ಈ ಉದ್ದೇಶಗಳು ನಿಜವಾಗಿಯೂ ಈಡೇರುತ್ತಿವೆಯೇ ಎಂಬ ಸಂಶಯ ಮನಸ್ಸಿಗೆ ಬರುವುದು ಸಹಜ ಮತ್ತು ನೈಜವೂ ಕೂಡ. ವಿದ್ಯಾ ಸಂಸ್ಥೆಗಳು ವಾಣಿಜ್ಯ ಕೇಂದ್ರಗಳಾಗಿ, ಶಿಕ್ಷಣ ವಾಣಿಜ್ಯೀಕರಣವಾಗಿ, ಪೋಷಕರು ಮತ್ತು ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಗಳಿಸುವ ಗುರಿಯನ್ನು ಹೊಂದಿದ್ದು, ಶಿಕ್ಷಣದ ಮೂಲ ಉದ್ದೇಶಗಳನ್ನು ಗಾಳಿಗೆ ತೂರಲಾಗಿದೆ.

    ಹೆಚ್ಚು ಅಂಕ ಗಳಿಸುವುದೇ ಗುರಿ

    ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಮುಖ ವಿಷಯಗಳಲ್ಲಿ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸುವುದೇ ಗುರಿಯಾಗಿದೆಯೇ ಹೊರತು, ಜೀವನದ ಮೌಲ್ಯಗಳು, ಸಾಮಾಜಿಕ ಮೌಲ್ಯಗಳು, ನೈತಿಕತೆಯ ಬಗ್ಗೆ ತಲೆಯನ್ನು ಕೆಡಿಸಿಕೊಳ್ಳುವ ಆಸಕ್ತಿ ಮತ್ತು ವ್ಯವದಾನ ಕಂಡು ಬರುತ್ತಿಲ್ಲ. ಉದಾಹರಣೆಗೆ ಹೇಳುವುದಾದರೆ, ವಿದ್ಯಾವಂತರು ಎಂದು ಕರೆಸಿಕೊಳ್ಳುವವರೇ, ಹೇಗೆ ಪರಿಸರ, ಸಂಚಾರಿ ಮತ್ತು ಈಗಿನ ಕೋವಿಡ್‍ – 19 ರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಅಂಶವನ್ನು ದೇಶದ ನಾಗರೀಕರಿಗೆ ತಿಳಿದಿರುವ ವಿಷಯವಾಗಿದೆ.

    ಶಿಕ್ಷಣವನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು. 

    1. Education for life 2. Education for Livelihood. ಅಂದರೆ, ಜೀವನಕ್ಕಾಗಿ ಶಿಕ್ಷಣ ಮತ್ತು ಜೀವನೋಪಾಯಕ್ಕಾಗಿ ಶಿಕ್ಷಣ. ಜನರು, ಸಾಮಾನ್ಯವಾಗಿ ಶಿಕ್ಷಣವನ್ನು ಉದ್ಯೋಗಕ್ಕಾಗಿ ವ್ಯಕ್ತಿಯನ್ನು ಸಿದ್ಧ ಪಡಿಸುವ ದೃಷ್ಟಿಕೋನದಿಂದ ನೋಡುತ್ತಾರೆ. ನಮ್ಮ ಜೀವನವು ಹಣ ಸಂಪಾದಿಸುವ ಉದ್ದೇಶಕ್ಕಿಂತ ಹೆಚ್ಚು ವಿಶಾಲವಾಗಿದೆ. ಜೀವನದಲ್ಲಿ ಶಾಶ್ವತವಾದ ತೃಪ್ತಿ ಮತ್ತು ಸಂತೋಷಗಳನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ತಿಳಿಸಿ ಕೊಡುವುದು ಶಿಕ್ಷಣದ ಮುಖ್ಯ  ಆಯಾಮವಾಗಬೇಕು.  ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳು ಶಿಕ್ಷಣದ ಮೂರು ಅಂಗಗಳು. Knowledge, skills and values are three components of Education. 

    ಶೈಕ್ಷಣಿಕವಾಗಿ ವರ್ಧಿಸಲು ಜ್ಞಾನ, ಔದ್ಯೋಗಿಕವಾಗಿ ಅಭಿವೃದ್ಧಿಯಾಗಲು ಕೌಶಲ್ಯಗಳು ಮತ್ತು ಸಮಾಜದಲ್ಲಿ ಜವಾಬ್ದಾರಿಯುತ ಮತ್ತು ಸುಶಿಕ್ಷಿತ ಪ್ರಜೆಯಾಗಲು ಮೌಲ್ಯಗಳು ಅತ್ಯವಶ್ಯಕ. ಈ ಮೂರು ಅಂಗಗಳನ್ನು ಸರಿಯಾದ ಪ್ರಮಾಣದಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮುಟ್ಟುವಂತೆ ಮಾಡುವುದೇ ನೈಜ ಶಿಕ್ಷಣ. ಈ ಮೂರರಲ್ಲಿ ಯಾವುದೊಂದರಲ್ಲಿ ಕೊರತೆಯಾದರು, ಅದು ನೈಜ ಶಿಕ್ಷಣವಾಗಲು ಸಾಧ್ಯವಿಲ್ಲ. ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ನುಡಿದಿರುವಂತೆ, “Education is the creation of sound mind in a sound body and it encompasses in itself an all-round development of an individual”. 

    ಶಿಕ್ಷಣದ ಮೂರು ಅಂಗಗಳು

    ಜ್ಞಾನ : “ನಹೀ ಜ್ಞಾನೇನ ಸದೃಶ್ಯಂ ಪವಿತ್ರಮಿಹ ವಿದ್ಯತೇ”, ಜ್ಞಾನಕ್ಕೆ ಸಮಾನವಾದ ಪವಿತ್ರಕರ ವಸ್ತುವು ಬೇರೊಂದಿಲ್ಲ ಎಂಬ ಮಾತನ್ನು ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಜ್ಞಾನ ಸಂಪಾದನೆ ಶಿಕ್ಷಣದ ಮೂಲ ಮತ್ತು ಪ್ರಮುಖ ಉದ್ದೇಶ. ಯಾವುದೇ ಕ್ಷೇತ್ರದಲ್ಲಿ ನಾವುಗಳು ಯಶಸ್ಸು ಕಾಣಬೇಕಾದರೆ ಜ್ಞಾನ ಸಂಪಾದನೆ ಬಹಳ ಮುಖ್ಯ. ಶ್ರದ್ಧಾ ಭಕ್ತಿಗಳಿಂದ ಕಲಿಕಾ ಕಾರ್ಯದಲ್ಲಿ ಭಾಗವಹಿಸಿ, ಜ್ಞಾನ ಸಂಪತ್ತನ್ನು ಬೆಳೆಸಿಕೊಳ್ಳ ಬೇಕು, ಪಾಂಡಿತ್ಯವನ್ನು ಪಡೆಯಬೇಕು. ಸಂಸ್ಕೃತದಲ್ಲಿ ಒಂದು ಮಾತಿದೆ “ಸ್ವದೇಶಿ ಪೂಜ್ಯತೇ ರಾಜ, ವಿದ್ವಾನ್ ಸರ್ವತ್ರ ಪೂಜ್ಯತೇ”. ರಾಜನನ್ನು ತನ್ನ ದೇಶದಲ್ಲಿ ಮಾತ್ರ ಪೂಜಿಸ ಬಹುದು, ಆದರೆ ವಿದ್ವಾಂಸನನ್ನು ಸರ್ವರೂ ಪೂಜಿಸುತ್ತಾರೆ ಮತ್ತು ಗೌರವಿಸುತ್ತಾರೆ

    ಪ್ರಸ್ತುತದಲ್ಲಿ ವಿದ್ಯಾರ್ಥಿಗಳು, ಪರೀಕ್ಷೆಗಳಲ್ಲಿ ಅಂಕಗಳಿಸಲು, ಪಾಠಗಳನ್ನು ಗಟ್ಟು ಹೊಡೆಯುವುದನ್ನು ನಾವು ನೋಡಿದ್ದೇವೆ. ಇದರಿಂದ ಪ್ರಯೋಜನವಾಗುವುದಿಲ್ಲ. ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ಸೃಜನಾತ್ಮಕ ಕಲಿಕೆ ಮತ್ತು ಪರಿಕಲ್ಪನಾ ತಿಳಿವಳಿಕೆಗೆ ಹೆಚ್ಚು ಒತ್ತು ಕೊಡಬೇಕು. ಆಗ ವಿಷಯ ಸಂಗ್ರಹಣೆ, ದೀರ್ಘಕಾಲ ಉಳಿಯಲು ಸಾಧ್ಯ.

    ಕೌಶಲ್ಯ: ಶಿಕ್ಷಣದ ಎರಡನೇ ಅಂಗವಾದ ಕೌಶಲ್ಯ, ಔದ್ಯೋಗಿಕವಾಗಿ ಅಭಿವೃದ್ದಿ ಹೊಂದಲು ಬಹಳ ಮುಖ್ಯ. ಯಾವುದೇ ಉದ್ಯಮದಲ್ಲಿ ಯಶಸ್ಸು ಕಾಣ ಬೇಕಾದರೆ, ಆ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಕಲಿಯುವುದು ಅತ್ಯಗತ್ಯ. ಹಲವು ವರದಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರಬರುತ್ತಿರುವ ವಿದ್ಯಾರ್ಥಿಗಳ ಪೈಕಿ ಕೇವಲ 25%, ಸಾಮಾನ್ಯ ಪದವೀಧರರ ಪೈಕಿ 15% ಪದವೀಧರರು ಮಾತ್ರ ಉದ್ಯೊಗಕ್ಕೆ ಅವಶ್ಯಕತೆಯಿರುವ ಕೌಶಲ್ಯಗಳನ್ನು ಪಡೆದಿದ್ದು, ಅರ್ಹತೆಯನ್ನು ಹೊಂದಿದ್ದಾರೆ. ಉಳಿದ ಪದವೀಧರರು ಉದ್ಯೋಗಕ್ಕೆ ಅರ್ಹರಲ್ಲ.

    ಉದಾಹರಣೆಗೆ ಹೇಳುವುದಾದರೆ, ಒಬ್ಬ ಆಟೋಮೊಬೈಲ್ ಎಂಜಿನಿಯರ್ ಸ್ಕೂಟರ್ ನ ಸಣ್ಣ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ, ಒಬ್ಬ ವೈದ್ಯನಿಗೆ ಸರಳ ಮತ್ತು ಸಾಧಾರಣವಾದ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಸಾಧ್ಯವಾಗದಿದ್ದರೆ, ಅದೇ ರೀತಿ ಒಬ್ಬ ಬಿ.ಕಾಂ ಪದವೀಧರನಿಗೆ ಕ್ಯಾಶ್ ಬುಕ್ ಬರೆಯಲು ಬಾರದಿದ್ದರೆ, ವೃತ್ತಿಯಲ್ಲಿ ಇವರೆಲ್ಲರೂ ಅಪ್ರಯೋಜಕರು. ಆದ್ದರಿಂದ ಯಶಸ್ಸು ಕಾಣಲು ಜ್ಞಾನದ ಜೊತೆಗೆ ಕೌಶಲ್ಯಗಳನ್ನು ಸಹ ಕಲಿಯ ಬೇಕು, ಬೆಳೆಸಿಕೊಳ್ಳ ಬೇಕು.

    ಮೌಲ್ಯಗಳು :ಈ ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿರುವಂತೆ, ಸಮಾಜದಲ್ಲಿ ನಡೆಯುತ್ತಿರುವ, ವಂಚನೆ, ಹಿಂಸೆ, ದೌರ್ಜನ್ಯ ಮತ್ತು ಹೇಯ ಕೃತ್ಯಗಳನ್ನು ಗಮನಿಸಿದರೆ, ಸಮಾಜದಲ್ಲಿನ ಮೌಲ್ಯಗಳು ಕುಸಿಯುತ್ತಿವೆ ಎಂಬ ಅಂಶ ದೃಢವಾಗುತ್ತದೆ. ಆ ಕುಸಿತವನ್ನು ತಡೆಗಟ್ಟ ಬೇಕಾದರೆ, ಶಾಲಾ ಕಾಲೇಜುಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು. ವಿದ್ಯಾರ್ಥಿಗಳಲ್ಲಿ ಜೀವನದ ಮೌಲ್ಯಗಳು, ಸಾಮಾಜಿಕ ಮೌಲ್ಯಗಳು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಅರಿವನ್ನು ಮೂಡಿಸಬೇಕು ಮತ್ತು ಮೌಲ್ಯಗಳು ಅವರುಗಳ ವ್ಯಕ್ತಿತ್ವದ ಭಾಗವಾಗಬೇಕು. ದುರದೃಷ್ಟಕರ ವಿಷಯವೆಂದರೆ, ಇಂದಿನ ಶಿಕ್ಷಣ ಪದ್ದತಿಯಲ್ಲಿ ಜೀವನೋಪಾಯದ ಶಿಕ್ಷಣಕ್ಕೆ ಹೊತ್ತು ನೀಡುತ್ತಿರುವುದು.

    ಮಹಾತ್ಮ ಗಾಂಧಿಯವರು ಹೇಳಿರುವಂತೆ, ಅಕ್ಷರ ಶಿಕ್ಷಣ ನಿಜವಾದ ಶಿಕ್ಷಣವಲ್ಲ. ಅಕ್ಷರ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವನ್ನು ಬೆರೆಸಿದರೆ, ಅದು ನಿಜವಾದ ಶಿಕ್ಷಣವಾಗುತ್ತದೆ. ಗಾಂಧೀಜಿಯವರ ಪ್ರಕಾರ ಚಾರಿತ್ರ್ಯವಿಲ್ಲದ ವಿದ್ಯೆ ಸಾಮಾಜಿಕ ಪಾಪಗಳಲ್ಲಿ ಒಂದು. ಸ್ವಾಮಿ ವಿವೇಕಾನಂದರು ನುಡಿದಿರುವಂತೆ, ಶಿಕ್ಷಣವು ಮಾನವನನ್ನು ತಯಾರಿಸುವ ಪ್ರಕ್ರಿಯೆಯಾಗ ಬೇಕು. – The need of the hour is Man Making Education – Swami Vivekananda.

    ನಾನು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ, ನಮ್ಮ ಪ್ರಾಂಶುಪಾಲರು ಮತ್ತು ಗಾಂಧೀವಾದಿ ದಿವಂಗತ ಡಾ. ಎಚ್. ನರಸಿಂಹಯ್ಯನವರು ಹೇಳಿದ ಮಾತು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. Educated criminal is more dangerous than uneducated criminal ಆದ್ದರಿಂದ ಆರೋಗ್ಯಕರ ಮತ್ತು ಸಮರ್ಥ ಸಮಾಜವನ್ನು ಕಟ್ಟಲು, ಉತ್ತಮ ಪ್ರಜೆಗಳನ್ನು ಬೆಳೆಸಲು ಮೌಲ್ಯಾಧಾರಿತ ಶಿಕ್ಷಣ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. 

    ಕೊನೆಯದಾಗಿ ಹೇಳುವುದಾದರೆ, ಬೌದ್ಧಿಕ, ದೈಹಿಕ, ಮೌಲ್ಯಾಧಾರಿತ ಮತ್ತು ಕೌಶಲ್ಯಾಧಾರಿತ ಶಿಕ್ಷಣಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣಮಾಡಿ, ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತೆ ನೀಡುವ ಶಿಕ್ಷಣವೇ ನೈಜ ಶಿಕ್ಷಣ. ಈ ಅಂಶಗಳನ್ನು ಶಿಕ್ಷಣ ಕ್ಷೇತ್ರದ ಎಲ್ಲಾ ಭಾಗೀದಾರರು ಅರಿತು ಮುನ್ನಡೆಯ ಬೇಕಾಗಿದೆ.

    ನೈಜ ಶಿಕ್ಷಣದಿಂದ ಉತ್ತಮ ಪ್ರಜೆಗಳನ್ನು ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. 

    Photo by Susan Yin on Unsplash

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ. ಸಧ್ಯ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ .
    spot_img

    More articles

    12 COMMENTS

    1. ಅತ್ಯುತ್ತಮವಾದ ಲೇಖನ ಸಾರ್…..ಮೌಲ್ಯಾಧರಿತ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡಿ, ಶಿಕ್ಷಣದ ಮೌಲ್ಯವನ್ನು ಅರಿತವರಿಂದ ಮಾತ್ರವೇ ಇಂತಹ ಕಳಕಳಿಯ ಅತ್ಯಮೂಲ್ಯ ಲೇಖನ ಬರಲು ಸಾದ್ಯ.
      ಪ್ರಸ್ತುತ ವ್ಯಾಪಾರೀಕರಣವಾಗಿರುವ ಶಿಕ್ಷಣ ವ್ಯವಸ್ಥೆಯಿಂದ ಹೊರಬಂದು ಉತ್ತಮ ಮೌಲ್ಯಯುತ ಶಿಕ್ಷಣವನ್ನು ಇಂದಿನ ಹಾಗೂ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಕಲ್ಪಿಸಿ,ಉತ್ತಮ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವ ಅವಶ್ಯಕತೆ ಇದೆ ಎನ್ನುವುದು ನನ್ನ ಅನಿಸಿಕೆ….

    2. ಅಕ್ಷರ ಶಿಕ್ಷಣ ನಿಜವಾದ ಶಿಕ್ಷಣವಲ್ಲ. ಅಕ್ಷರ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವನ್ನು ಬೆರೆಸಿದರೆ, ಅದು ನಿಜವಾದ ಶಿಕ್ಷಣವಾಗುತ್ತದೆ.
      ಬಹಳ ಸೊಗಸಾಗಿ ವಿವರಿಸಿದ್ದಾರೆ…🙏

    3. ಮೌಲ್ಯಯುತ ಜೀವನಕ್ಕೆ ಅಕ್ಷರಗಳ ಹಂಗು ಬೇಕಾ?!!
      ಅನ್ನ,ಅಕ್ಷರ,ಆರೋಗ್ಯ ವ್ಯಾಪಾರೀಕರಣ ಆದದ್ದೇ ದುರಂತ.
      ಕಲಿಯುವರಲ್ಲಿ,ಕಲಿಸುವವರಲ್ಲಿಯ ಶ್ರದ್ಧೆಯ ಕೊರತೆ,ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕೆಟ್ಟು ಕುಲಗೆಟ್ಟಿರುವುದಕ್ಕೆ ಸಾಕ್ಷಿ. ಗುರು,ಗುರುವಾಗಿಲ್ಲ,ವಿದ್ಯಾರ್ಥಿ ವಿದ್ಯಾರ್ಥಿಯಾಗಿಲ್ಲ, ಶಾಲೆ ವ್ಯವಹಾರದ ಕೇಂದ್ರವಾಗಿದೆ. ಮೌಲ್ಯ,ಶಿಕ್ಷಣ, ಕೌಶಲತೆ ಒಂದೇ ಸಾಲಿನಲ್ಲಿ ಕಲ್ಪಿಸಿಕೊಳ್ಳುವುದೂ ಅಸಾಧ್ಯ ಇಂದು.

      ಆಂಧ್ರದಲ್ಲಿ ಖಾಸಗಿ ವ್ಯಾಪಾರ ಕೇಂದ್ರಗಳಾಗಿ, ಶಾಲೆ ಅಂತ ಹೆಸರಿಟ್ಟುಕೊಂಡಿದ್ದ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತೊಗಿಯುವ ಪ್ರಯತ್ನ ಸರ್ಕಾರದಿಂದ ಆಗಿದೆ. ದೇಶವ್ಯಾಪಿ ಇಂತಹ ಪ್ರಯತ್ನ ತುರ್ತಾಗಿ ಆಗಬೇಕಾಗಿದೆ.

    4. ಅಂಕಆಧಾರಿತ ಶಿಕ್ಷಣ ಯಾವತ್ತೂ ಒಳ್ಳೆಯದಲ್ಲ.ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಕೊಡುವುದೇ ಇಲ್ಲ. ಅಲ್ಲದೇ ಪಠ್ಯ ಪುಸ್ತಕ ರಚಿತವಾಗುವಾಗ ದಲಿತ, ಬಂಡಾಯ,ನವ್ಯ ಹೀಗೆ ಪಂಗಡಗಳ ತೃಪ್ತಿ ಪಡಿಸುವ ಯತ್ನ ನಡೆಯುತ್ತಿದೆಯೇ ಹೊರತು ವಿದ್ಯಾರ್ಥಿಗಳ ಮನಃಶಾಸ್ತ್ರ ನನ್ನು ಅರಿಯುವ ಯತ್ನ ಇರಲ್ಲ.ಅಲ್ಲದೇಕುರುಡು ಕಾಂಚಾಣದ ಅಡಿಯಲ್ಲಿ ಶಿಕ್ಷಣ ನಲುಗುತ್ತಿರುವಾಗ ಮೌಲ್ಯದ ಬಗ್ಗೆ ಆಸಕ್ತಿ ಇರೋದು ಕಡಿಮೆ. ಹಾಗಾಗೀ ಅಂಕ ಗಳಿಸುವದಷ್ಟೇ ಶಿಕ್ಷಣ ಆಗಿದೆ.ಗಳಿಸಿದ ಅಂಕ ಆಧಾರದ ಮೇಲೆ ನೌಕರಿ ಸಿಗೋದು ಕೂಡ ಕಾರಣ.

    5. Very nice sir
      Every Educational Institutions should understand what you have expressed and prepare student so to become Educated and good Citizen
      ( I was your student in PUC at AESNC, Gauribidanur)

    6. Readers ‘ comments are indeed thought provoking and need attention by all the stakeholders. Unfortunately, education is now totally commercialised.
      I am also happy my student has responded. I remember your name. Thank you.

    7. ಮಾನ್ಯ ಪ್ರಾಚಾರ್ಯರು ಶಿಕ್ಷಣ ಕ್ಷೇತ್ರದಲ್ಲಿ ನಾವು ಇಂದು ಎಡವುತ್ತಿರುವುದೆಲ್ಲಿ ಎಂಬುದನ್ನು ವಿಸ್ತೃತವಾಗಿ ಚರ್ಚಿಸಿದ್ದಾರೆ ಅಲ್ಲದೇ ಶಿಕ್ಷಕರ ವಿಶೇಷವಾದ ಹೊಣೆಗಾರಿಕೆಯನ್ನು ಒತ್ತಿ ಹೇಳಿದ್ದಾರೆ. ವಂದನೆಗಳು ಸರ್.

    8. Well said sir but now a days educational institutions are commercialized, some teachers are fighting themselves & giving preference to own businesses, students are involving in political & social activities and politicians converting institutions into vote banks.

    9. ಆಧುನಿಕ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು ಈ ವ್ಯವಸ್ಥೆ ಎತ್ತ ಸಾಗಬೇಕಿತ್ತು, ಎತ್ತ ಸಾಗುತ್ತಿದೆ. ಶಿಕ್ಷಣದ ಮಹತ್ವದ ಬಗ್ಗೆ ಭಾರತೀಯ ಮತ್ತು ಪಾಶ್ಚಿಮಾತ್ಯ ವಿದ್ವಾಂಸರುಗಳ ಹೇಳಿಕೆಗಳನ್ನು ನಿಮ್ಮ ಲೇಖನದಲ್ಲಿ ದಾಖಲಿಸಿರುವುದು ಗಮನಾರ್ಹ. ಧನ್ಯವಾದಗಳು ಸರ್

    10. Very good article sir, at present situation it is very important to inculcate moral values in young generation for healthy society.

    11. Very good analysis of today’s education system. However, we should not forget that even today, there are many teachers who inspired their students

    LEAVE A REPLY

    Please enter your comment!
    Please enter your name here

    Latest article

    error: Content is protected !!