19.9 C
Karnataka
Sunday, September 22, 2024

    ಇನ್ನೂ1000 ಪಿಯು ಉಪನ್ಯಾಸಕರ ಹುದ್ದೆ ಶೀಘ್ರ ಭರ್ತಿ

    Must read

    ಪದವಿಪೂರ್ವ ಶಿಕ್ಷಣ‌ ಇಲಾಖೆಯಲ್ಲಿ ನೇರ‌ ನೇಮಕಾತಿಗೆ ಲಭ್ಯವಿರುವ ಸುಮಾರು ಒಂದು ಸಾವಿರ ಹುದ್ದೆಗಳನ್ನು ತುಂಬಲು‌ ಮುಂದಿನ ಆರು ತಿಂಗಳ‌ ಅವಧಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೇಳಿದ್ದಾರೆ.  ಮುಖ್ಯಮಂತ್ರಿಗಳ‌ ಅಧ್ಯಕ್ಷತೆಯಲ್ಲಿ‌ ಪದವಿಪೂರ್ವ ಶಿಕ್ಷಣ‌ ಇಲಾಖೆಗೆ ಹೊಸದಾಗಿ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಸಾಂಕೇತಿಕ ನೇಮಕಾತಿ ಆದೇಶ ವಿತರಣಾ‌ ಕಾರ್ಯಕ್ರಮದಲ್ಲಿ‌  ಮಾತನಾಡಿದ ಸಚಿವರು ಇಷ್ಟರಲ್ಲಿಯೇ ಖಾಲಿಯಿರುವ ಎಲ್ಲ ಬೋಧಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದೆಂದರು.

    ನೇಮಕಾತಿ ಆದೇಶ ಪಡೆದ ಆಯ್ದ ಅಭ್ಯರ್ಥಿಗಳೊಂದಿಗೆ ಶಿಕ್ಷಣ ಸಚಿವರು

    ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿವಿಧ ವಿಷಯಗಳ 1194 ಉಪನ್ಯಾಸಕ ಅಭ್ಯರ್ಥಿಗಳನ್ನು  ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯ್ಕೆ ಮಾಡಿದೆ. ಅವರಲ್ಲಿ 1161 ಮಂದಿ ಈಗಾಗಲೇ ಸ್ಥಳ ನಿಯುಕ್ತಿ ಮಾಡಿಕೊಂಡಿದ್ದಾರೆ.

    1203 ಉಪನ್ಯಾಸಕರ ಆಯ್ಕೆಗೆ 2015ರಿಂದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅದು ಅರ್ಜಿ ಕರೆದುದರ ಹೊರತಾಗಿ ಮುಂದೆ ಹೋಗಿರಲಿಲ್ಲ. 2019ರಲ್ಲಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಪ್ರಕ್ರಿಯೆಗೆ ವೇಗ ದೊರಕಿತು.

    ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಪ್ರಕ್ರಿಯೆಗೆ ವೇಗ ದೊರಕಿತು. ಉಪನ್ಯಾಸಕರ ಆಯ್ಕೆ ಪೂರ್ಣಗೊಂಡು ಸ್ಥಳ ನಿಯುಕ್ತಿ ಮಾಡಿ ಇಂದು ಆದೇಶ ನೀಡುತ್ತಿದ್ದೇವೆ. ಈ ಕೆಲಸ ಇನ್ನೂ ಆರು ತಿಂಗಳ  ಮೊದಲೇ ನಡೆಯಬೇಕಿತ್ತು. ಆದರೆ ಕೋವಿಡ್-19 ಪ್ರಸರಣದಿಂದಾಗಿ ಲಾಕ್‍ಡೌನ್ ಹಿನ್ನೆಲೆ ಹಾಗೂ ಶಾಲಾ ಕಾಲೇಜುಗಳು ಪುನರಾರಂಭವಾಗುವುದರ ಅನಿಶ್ಚಿತ ವಾತಾವರಣದ ಹಿನ್ನೆಲೆಯಲ್ಲಿ ಈಗ ಇದಕ್ಕೆ ಮಹೂರ್ತ ನಿಗದಿಯಾಗಿದೆ, ತಾವು ಇಲಾಖೆಯ ಸಚಿವರಾದ ಮಾರನೇ ದಿನವೇ ಈ ಕುರಿತು ಅಧಿಕಾರಿಗಳ ಸಭೆ ನಡೆಸಿದೆ. ಸಚಿವನಾಗಿ ನಾನು ಕೈಗೆತ್ತಿಕೊಂಡ ಮೊದಲ ಕೆಲಸ ಇದು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ ಎಂದು‌ ಸಚಿವ ಸುರೇಶ್‌ಕುಮಾರ್‌‌ ಹೇಳಿದರು.

    ಕಾಲೇಜುಗಳು ಆರಂಭವಾದ ದಿನದಿಂದ ನೇಮಕಾತಿ ಆದೇಶ ಜಾರಿಗೆ ಬರಲಿದ್ದು, ಅದಕ್ಕೂ ಮೊದಲು ನೂತನ ಉಪನ್ಯಾಸಕರಿಗೆ ಇಲಾಖೆಯ ನಿಯಮಗಳು, ಆಡಳಿತ, ವೃಂದ ಮತ್ತು ನೇಮಕಾತಿ ನಿಯಮಗಳು, ಉಪನ್ಯಾಸಕರ ವೃತ್ತಿ ಧರ್ಮ, ವೃತ್ತಿ ಗೌರವ ಸೇರಿದಂತೆ ಪ್ರೇರಣಾದಾಯಕ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಗಳಲ್ಲಿ ಇಲ್ಲವೇ ವಿಭಾಗಗಳಲ್ಲಿ ನೀಡಲಾಗುವುದು ಎಂದ ಸಚಿವ ಸುರೇಶ್‌ಕುಮಾರ್,  ರಾಜ್ಯದಲ್ಲಿ  ಇರುವ 1231 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 12, 857 ಉಪನ್ಯಾಸಕ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 10370 ಉಪನ್ಯಾಸಕರ ಸ್ಥಾನಗಳು ಭರ್ತಿಯಾಗಿದ್ದು, 2487 ಹುದ್ದೆಗಳು ಖಾಲಿಯಾಗಿವೆ. ಈ ಖಾಲಿಯಾದ ಹುದ್ದೆಗಳಿಗೆ ಈಗ ನೇಮಕ ಮಾಡಿರುವ 1196 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರ ಹೊರತಾಗಿಯೂ ಉಳಿಯುವ ಖಾಲಿ ಹುದ್ದೆಗಳ ಶೀಘ್ರ ಭರ್ತಿಗೆ ಸರ್ಕಾರ ಕ್ರಿಯಾ  ಯೋಜನೆ ರೂಪಿಸುತ್ತಿದೆ. ಮುಂದಿನ ಆರು ತಿಂಗಳ ಅವಧಿಯಲ್ಲಿ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸರ್ಕಾರಿ, ಅನುದಾನಿತ, ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಒಟ್ಟು 12,22,273 ವಿದ್ಯಾರ್ಥಿಗಳ ಹಿತದೃಷ್ಟಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.

    ನೂತನ‌ ಉಪನ್ಯಾಸಕರಿಗೆ ಕಿವಿಮಾತು ಹೇಳಿದ ಸಚಿವ ಸುರೇಶ್‌ಕುಮಾರ್, ನಮ್ಮ ಸರ್ಕಾರ ಅತ್ಯಂತ ಪಾರದರ್ಶಕ ವಾಗಿ  ಭ್ರಷ್ಟಾಚಾರಕ್ಕೆ‌‌ ಎಡೆ ಮಾಡದೇ ನೇಮಕಾತಿ ಆದೇಶಗಳನ್ನು ನೀಡಿದ್ದು, ಮಕ್ಕಳ ಭವಿಷ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಹೇಳಿದರು.

    ಕೋವಿಡ್ ತಂದೊಡ್ಡಿದ ಎಲ್ಲ ಆರ್ಥಿಕ ಸಂಕಷ್ಟದ ಸಮಯದಲ್ಲೂ ನೇಮಕಾತಿ ಆದೇಶಗಳನ್ನು ನೀಡಲಾಗಿದ್ದು ಎಲ್ಲ ಉಪನ್ಯಾಸಕರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕರೆ ನೀಡಿದರು.

    ಶಿಕ್ಷಣ ಇಲಾಖೆಯ ಪ್ರಧಾನ‌ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಪದವಿಪೂರ್ವ ಶಿಕ್ಷಣ‌ ನಿರ್ದೇಶಕಿ ದೀಪಾ‌ಚೋಳನ್ ಸೇರಿದಂತೆ ಹಿರಿಯ ಅಧಿಕಾರಿಗಳು‌ ಉಪಸ್ಥಿತರಿದ್ದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!