20.6 C
Karnataka
Sunday, September 22, 2024

    ಆರ್ಥಿಕ ಸಾಕ್ಷರತೆಯ ಮೂಲಕ ಆರ್ಥಿಕ ಸುರಕ್ಷತೆ

    Must read

    ಬ್ಯಾಂಕಿಂಗ್‌ ವ್ಯವಸ್ಥೆಯು ಸುರಕ್ಷಿತವೇ ಎಂಬ ಪ್ರಶ್ನೆಯನ್ನು ಮತ್ತೆ ಹುಟ್ಟು ಹಾಕಿದ LVB ಪ್ರಕರಣ

    ನಮ್ಮ ಅಗತ್ಯಗಳನ್ನು, ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಈಗಿನ ದಿನಗಳಲ್ಲಿ ಮುಖ್ಯವಾಗಿ ಆರ್ಥಿಕ ಸಾಮರ್ಥ್ಯದ ಬೆಂಬಲವಿರಲೇಬೇಕು. ಸ್ವಂತವಾದ ಆರ್ಥಿಕ ಸಾಮರ್ಥ್ಯದ ಬೆಂಬಲವಿಲ್ಲದಿದ್ದಲ್ಲಿ ಬಾಹ್ಯವಾಗಿ ಅದನ್ನು ಪಡೆದು ಉದ್ದೇಶಿತ ಗುರಿ ಸಾಧಿಸಲು ಆರ್ಥಿಕ ಅಗತ್ಯತೆಯನ್ನು ಪೂರೈಸಿಕೊಳ್ಳಲು ಸಾಲದ ಮೊರೆಹೋಗಬೇಕಾಗಬಹುದು. ಈ ರೀತಿಯ ಸಾಲದ ಸೌಲಭ್ಯಗಳನ್ನು ಒದಗಿಸಲು ಕಟಿಬದ್ಧಸಂಸ್ಥೆಗಳೆಂದರೆ ಬ್ಯಾಂಕುಗಳು ಮತ್ತು ಖಾಸಗಿ ಲೇವಾದೇವಿ ಸಂಸ್ಥೆಗಳು. ಬ್ಯಾಂಕ್‌ ಗಳು ಈ ರೀತಿಯ ಅಗತ್ಯತೆಗಳನ್ನು ಪೂರೈಸಲು ಹಣವೆಲ್ಲಿಂದ ಬರುತ್ತದೆ ಎಂದರೆ ಅವು ಸಾರ್ವಜನಿಕರಿಂದ ಮತ್ತು ಸಂಸ್ಥೆಗಳ ಠೇವಣಿಗಳಿಂದ. ಹಲವಾರು ಭಾರಿ ಬೇಡಿಕೆ ಹೆಚ್ಚಾದಾಗ ಬ್ಯಾಂಕ್‌ ಗಳೂ ಸಹ ತಮ್ಮ ಅಗತ್ಯದ ಹೆಚ್ಚುವರಿ ಹಣವನ್ನು ಪಡೆಯಲು ಸಾಧ್ಯವಿದೆ. ಆ ಹೆಚ್ಚುವರಿ ಹಣವನ್ನು ಪೂರೈಸುವ ಮೂಲಕ ಬ್ಯಾಂಕಿಂಗ್‌ ಚಟುವಟಿಕೆಯನ್ನು ನಿರಾತಂಕವಾಗಿ ಮುನ್ನಡೆಸಲು ಬೆಂಬಲವಾಗಿ ನಿಲ್ಲುವ ಸಂಸ್ಥೆ ಎಂದರೆ ಅದು ಭಾರತೀಯ ರಿಸರ್ವ್‌ ಬ್ಯಾಂಕ್‌ ಆಗಿದೆ. ಬ್ಯಾಂಕ್‌ ಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು‌ ರಿಸರ್ವ್‌ ಬ್ಯಾಂಕ್ ನಲ್ಲಿ ಠೇವಣಿ ಇಡುತ್ತವೆ ಮತ್ತು ಅಗತ್ಯವಿದ್ದಾಗ ಅವಶ್ಯಕವಿರುವ ಹೆಚ್ಚುವರಿ ಹಣದ ಸಾಲವನ್ನು ಪಡೆಯುತ್ತವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಈ ರೀತಿ ಬ್ಯಾಂಕ್‌ ಗಳ ಚಟುವಟಿಕೆಗೆ ಬೆಂಬಲಿಸುವುದರೊಂದಿಗೆ ಅವುಗಳ ನಿಯಂತ್ರಕ ಸಂಸ್ಥೆಯೂ ಆಗಿದೆ. ದೇಶದ ಆರ್ಥಿಕತೆಯನ್ನು ಮುಂದೆ ಸಾಗಿಸಲು, ಒದಗಿ ಬಂದ ಆರ್ಥಿಕ ಹಿನ್ನಡೆ ಅಥವಾ ಹಿಂಜರಿತಗಳನ್ನು ನಿಭಾಯಿಸಿ ಸಹಜ ಪರಿಸ್ಥಿತಿಗೆ ತರುವ ಹೊಣೆ ಭಾರತೀಯ ರಿಸರ್ವ್‌ ಬ್ಯಾಂಕ್‌ ದಾಗಿದೆ.

    ಬ್ಯಾಂಕಿಂಗ್‌ ಇತಿಹಾಸದ ಸಂಕ್ಷಿಪ್ತ ಪರಿಚಯ:

    1951 ರಲ್ಲಿ ಭಾರತದಲ್ಲಿ 566 ಬ್ಯಾಂಕ್‌ ಗಳಿದ್ದವು. 1960 ರಲ್ಲಿ ದುರ್ಬಲವಾಗಿರುವ ಬ್ಯಾಂಕ್‌ ಗಳನ್ನು ವಿಲೀನಗೊಳಿಸಿ ಸುಭದ್ರವಾದ ವ್ಯವಸ್ಥೆಯನ್ನು ನೀಡುವ ಅಧಿಕಾರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಗೆ ನೀಡಲಾಯಿತು. ಈ ಕಾರಣ ವಿವಿಧ ಕಾರ್ಯಗಳ ಮೂಲಕ 1969 ರಲ್ಲಿ ಬ್ಯಾಂಕ್‌ ಗಳ ಸಂಖ್ಯೆಯನ್ನು 85 ಕ್ಕೆ ಇಳಿಸಲಾಯಿತು. ಆಗಿನ ಸೀಮಿತ ದೇಶೀಯ ಚಟುವಟಿಕೆಗಳ ಕಾರಣ ಸರಳವಾದ, ಸುಸೂತ್ರವಾದ ಪದ್ಧತಿಯಲ್ಲಿ ಕಾರ್ಯ ನಿರ್ವಹಣೆಯಾಗುತ್ತಿತ್ತು. ಆ ಸಂದರ್ಭದಲ್ಲಿ ರೂ.50 ಕೋಟಿಗೂ ಹೆಚ್ಚು ಠೇವಣಿಯಿದ್ದ ಬ್ಯಾಂಕ್‌ ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಈ ಅನುಭವದಿಂದ ಮುಂದೆ 1980 ರಲ್ಲಿ ರೂ.200 ಕೋಟಿ ಠೇವಣಿ ಹೊಂದಿರುವ ಬ್ಯಾಂಕ್‌ ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಅಲ್ಲಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಕಾರ್ಯವನ್ನು ಸುಸೂತ್ರವಾಗಿ ನಿರ್ವಹಿಸಿ ಅನೇಕ ಬಿಗಿ ನೀತಿಗಳನ್ನು ಜಾರಿಗೊಳಿಸಿ ಭಾರತೀಯ ಬ್ಯಾಂಕ್‌ ಗಳ ಮೇಲಿನ ನಂಬಿಕೆಯನ್ನು ಹೆಚ್ಚಿಸಿತು.

    ಈಗಿನ ಸಂಕೀರ್ಣಮಯ ದಿನಗಳಲ್ಲಿ ಸುರಕ್ಷಿತ ಎಂಬುದು ನಾವೇ ನಿರ್ಮಿಸಿಕೊಳ್ಳಬೇಕಾಗಿದೆ. ಸರ್ಕಾರಗಳಾಗಲಿ, ನಿಯಂತ್ರಕರಾಗಲಿ ತೆಗೆದುಕೊಳ್ಳುವ, ಆದೇಶಿಸುವ ಕಾರ್ಯಗಳಿಂದಾಗಲಿ ಸುರಕ್ಷಿತತೆ ಸಾಧ್ಯವಿಲ್ಲ, ಅದಕ್ಕೆ ಪೂರಕವಾಗಿ ನಾವು ನಮ್ಮ ಕೌಶಲ್ಯ, ಅರಿವು, ತಿಳಿವು, ಅನುಭವ, ಪರಿಸರ ಮುಂತಾದ ವಾಸ್ತವ ಅಂಶಗಳನ್ನಾಧರಿಸಿ, ಅರಿತು ತೆಗೆದುಕೊಳ್ಳುವ ನಿರ್ಧಾರಗಳಿಂದ ಮಾತ್ರ ಸಾಧ್ಯ. ಆರ್ಥಿಕ ಸಾಕ್ಷರತೆಯ ಮೂಲಕ ಮಾತ್ರ ಆರ್ಥಿಕ ಸುರಕ್ಷತೆ ಪಡೆಯಲು ಸಾಧ್ಯ.

    ಸುರಕ್ಷಿತ ಎಂಬುದು ಎಷ್ಟರಮಟ್ಟಿಗೆ ಸರಿ:

    ಷೇರುಪೇಟೆಯಲ್ಲಿ ಹೂಡಿಕೆ ಮಾಡಿದರೆ ಅಪಾಯ ಹೆಚ್ಚು ಎಂಬ ಕಲ್ಪನೆ ಹೆಚ್ಚಿನವರಲ್ಲಿದೆ. ಆದರೆ ಈಗಿನ ದಿನಗಳಲ್ಲಿ ಸುರಕ್ಷಿತ ಎಂಬುದು ಕೇವಲ ನಿಘಂಟಿನಲ್ಲಿದೆ. ಬ್ಯಾಂಕ್‌ಗಳಲ್ಲಿ ತಮ್ಮ ಹಣ ಇರಿಸಿದಲ್ಲಿ ಸುರಕ್ಷಿತ ಎಂಬುದು ಹಿಂದಿನಿಂದ ಬಂದಿರುವ ಸಾಂಪ್ರದಾಯಿಕ ಚಿಂತನೆಯಾಗಿದೆ. ಇದು ಸ್ವಲ್ಪಮಟ್ಟಿಗೆ ಸರಿಯೂ ಹೌದು.

    ಇದಕ್ಕೆ ಮುಖ್ಯ ಕಾರಣ ನಮಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ಬ್ಯಾಂಕ್‌ಗಳ ಮೇಲಿರುವ ನಂಬಿಕೆಯಾಗಿದೆ ಮತ್ತು ಅವುಗಳು ತೆಗೆದುಕೊಳ್ಳುವ ನಿರ್ಧಾರ ಮತ್ತು ಜಾರಿಗೊಳಿಸುವ ನಿಯಮಗಳೇ ಕಾರಣ. ಆದರೂ ದುರ್ಬಲ ಬ್ಯಾಂಕ್‌ಗಳನ್ನು ಬಲಿಷ್ಠ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲು 1960 ರಲ್ಲಿ ಭಾರತೀಯ ರಿಸರ್ವ್‌ಬ್ಯಾಂಕ್‌ಗೆ ನೀಡಿದ ಅಧಿಕಾರ ವನ್ನು ಆರ್‌ಬಿ ಐ ಈ ಕೆಳಗಿನ ಬ್ಯಾಂಕ್‌ಗಳ ಮೇಲೆ ಪ್ರಯೋಗಿಸಿದೆ. ಆಗ ಬ್ಯಾಂಕ್‌ ಗಳು ವಿಫಲವಾದಲ್ಲಿ ಠೇವಣಿದಾರರ ಹಿತ ಕಾಪಾಡಲು, ಗರಿಷ್ಠ ರೂ.1 ಲಕ್ಷದವರೆಗೂ ವಿಮಾ ಸೌಲಭ್ಯ ಒದಗಿಸಲಾಗಿತ್ತು. ಈ ಮಿತಿಯನ್ನು ಇತ್ತೀಚೆಗೆ ರೂ.5 ಲಕ್ಷಕ್ಕೆ ಏರಿಸಲಾಗಿದೆ.

    ನೆಡಂಗಡಿ ಬ್ಯಾಂಕ್‌ ಲಿಮಿಟೆಡ್:

    2002 ರಲ್ಲಿ ನೆಡಂಗಡಿ ಬ್ಯಾಂಕ್‌ ಎಂಬ ಖಾಸಗಿ ಬ್ಯಾಂಕ್‌ ತೊಂದರೆಗೊಳಗಾದ ಕಾರಣ ಠೇವಣಿದಾರರ ಹಿತದಿಂದ ಆರ್‌ಬಿ ಐ ಆ ಬ್ಯಾಂಕ್‌ನ್ನು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ನಲ್ಲಿ ವಿಲೀನಗೊಳಿಸುವ ಮೂಲಕ ಠೇವಣಿದಾರರ ಹಿತವನ್ನು ಕಾಪಾಡಿತು. ಈ ವಿಲೀನವಾಗಿ 18 ವರ್ಷವಾದರೂ ಇದುವರೆಗೂ ಷೇರುದಾರರಿಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಆದರೆ ಠೇವಣಿದಾರರಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳಲಾಯಿತು. ಎಷ್ಠರಮಟ್ಟಿಗೆ ಈ ವೀಲೀನ ಕಾರ್ಯ ನಡೆಸಲಾಯಿತೆಂದರೆ ಠೇವಣಿದಾರರ ವಿಮಾ ನಿಗಮದ ಅವಶ್ಯಕತೆಯೇ ಇರಲಿಲ್ಲ.

    ಗ್ಲೋಬಲ್‌ಟ್ರಸ್ಟ್‌ಬ್ಯಾಂಕ್‌:

    2004 ರಲ್ಲಿ ಗ್ಲೋಬಲ್‌ಟ್ರಸ್ಟ್‌ಬ್ಯಾಂಕ್‌ವಿಫಲಗೊಂಡಾಗ ಠೇವಣಿದಾರರ ಹಿತ ಕಾಪಾಡಲು ಆ ಬ್ಯಾಂಕ್‌ನ್ನು ಓರಿಯಂಟಲ್ ‌ಬ್ಯಾಂಕ್ ‌ಆಫ್‌ ಕಾಮರ್ಸ್‌ನಲ್ಲಿ ವಿಲೀನಗೊಳಿಸಲಾಯಿತು. ಇಲ್ಲಿಯೂ ಸಹ ಠೇವಣಿದಾರರಿಗೆ ತೊಂದರೆಯಾಗದಂತೆ ನಿರ್ವಹಿಸಿದ ಹೆಮ್ಮೆ ಆರ್‌ಬಿ ಐ ಗೆ ಸಲ್ಲುತ್ತದೆ. ಷೇರುದಾರರಿಗೆ ಮಾತ್ರ ಇದುವರೆಗೂ ಯಾವುದೇ ಪರಿಹಾರ ದೊರೆತಿಲ್ಲ. ಈ ಪ್ರಕ್ರಿಯಗೂ ಮುನ್ನ 2001 ರಲ್ಲಿ ಈ ಬ್ಯಾಂಕ್‌ ನ್ನು ಅಂದಿನ ಯು ಟಿ ಐ ಬ್ಯಾಂಕ್‌ ನಲ್ಲಿ ವಿಲೀನಗೊಳಿಸುವ ಪ್ರಸ್ತಾಪವೂ ತೇಲಿಬಂದು, ಈ ಬ್ಯಾಂಕಿನ ಮೌಲೀಕರಣಮಾಡಲಾಗಿತ್ತು.

    ಅದರಂತೆ 9 ಯು ಟಿ ಐ ಬ್ಯಾಂಕ್‌ ನ ಷೇರುಗಳಿಗೆ 4 ಗ್ಲೋಬಲ್‌ ಟ್ರಸ್ಟ್‌ ಬ್ಯಾಂಕ್‌ ಷೇರು ನೀಡುವ ಶಿಫಾರಸನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಇನ್ವೆಸ್ಟ್ ಮೆಂಟ್‌ ಬ್ಯಾಂಕರ್‌ ಗಳು ಮಾಡಿದ್ದವಾದರೂ ಮೇನೇಜ್‌ ಮೆಂಟ್‌ ತಿರಸ್ಕರಿಸಿತು. ಅಂದಿನ ಯು ಟಿ ಐ ಬ್ಯಾಂಕ್‌ ಇಂದಿನ ಆಕ್ಸಿಸ್‌ ಬ್ಯಾಂಕ್‌ ಆಗಿದೆ.

    ಯುನೈಟೆಡ್‌ ವೆಸ್ಟರ್ನ್ ಬ್ಯಾಂಕ್‌‌ಲಿಮಿಟೆಡ್:

    2006 ರಲ್ಲಿ ಯುನೈಟೆಡ್‌ವೆಸ್ಟರ್ನ್ ಬ್ಯಾಂಕ್‌‌ದುರ್ಬಲಗೊಂಡ ಕಾರಣ ಆ ಬ್ಯಾಂಕನ್ನು ಐ ಡಿ ಬಿ ಐ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುನೈಟೆಡ್‌ವೆಸ್ಟರ್ನ್‌ಬ್ಯಾಂಕ್‌ ಷೇರುದಾರರಿಗೂ ಪ್ರತಿ ಷೇರಿಗೆ ರೂ.28 ರಂತೆ ನೀಡಲಾಯಿತು. ಅಂದರೆ ಠೇವಣಿದಾರರ ಹಿತ ಕಾಪಾಡುವುದರೊಂದಿಗೆ ಷೇರುದಾರರ ಹಿತವನ್ನೂ ಕಾಪಾಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳ ಮೇಲಿನ ನಂಬಿಕೆ ಮತ್ತಷ್ಟು ಬಲಿಷ್ಠವಾಯಿತು

    ಯೆಸ್‌ಬ್ಯಾಂಕ್‌‌ಪ್ರಕರಣ:

    ಆದರೆ ಈ ವರ್ಷದ ಮಾರ್ಚ್‌ನಲ್ಲಿ ಯೆಸ್‌ಬ್ಯಾಂಕ್‌ದುರ್ಬಲಗೊಂಡ ಸುದ್ಧಿಯ ಕಾರಣ ಆ ಬ್ಯಾಂಕ್‌ಗೆ ಎಸ್‌ಬಿ ಐ ನೇತೃತ್ವದಲ್ಲಿ ವಿವಿಧ ಬ್ಯಾಂಕ್‌ಗಳು ಸೇರಿ ಆರ್ಥಿಕ ಬೆಂಬಲ ನೀಡಿದವು. ಈ ಸಂಪನ್ಮೂಲ ಕ್ರೋಡೀಕರಣ ಸಾಲದೆಂಬಂತೆ, ಬ್ಯಾಂಕ್‌ಉತ್ತುಂಗದಲ್ಲಿದ್ದಾಗ ವಿತರಿಸಿದ ಅಡಿಷನಲ್‌ಟೈರ್‌ 1 ಬಾಂಡ್‌ಗಳನ್ನು ಸಂಪೂರ್ಣವಾಗಿ ರದ್ದುಮಾಡಿ, ಹೂಡಿಕೆಯನ್ನು ಶೂನ್ಯವಾಗಿಸಿತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಕ್ರಮವು ಸಾರ್ವಜನಿಕವಾಗಿ ಬ್ಯಾಂಕಿಂಗ್‌ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅಲ್ಲಾಡಿಸಿದೆ.

    ಯೆಸ್‌ಬ್ಯಾಂಕ್‌ನ ಈ ಹಗರಣವು ಅಲ್ಲಿಗೇ ನಿಲ್ಲದೆ, ಕ್ಯಾಪಿಟಲ್‌ಮಾರ್ಕೆಟ್‌ನ ಇತಿಹಾಸದಲ್ಲೇ ಮೊದಲ ಬಾರಿ ಬ್ಯಾಂಕ್‌ನ 75% ರಷ್ಟು ಚಲಾವಣೆಯಿಂದ ಸ್ಥಗಿತಗೊಳಿಸಿದ ಕ್ರಮವು ಅನೇಕ ಸಣ್ಣ ಹೂಡಿಕೆದಾರರು ತೊಂದರೆಗೊಳಗಾಗಿದ್ದಲ್ಲದೆ ಈ ಕ್ರಮದ ನಂತರ ಕಂಡ ಷೇರಿನ ಬೆಲೆ ಏರಿಳಿತಗಳ ಲಾಭದ ಅವಕಾಶದಿಂದ ವಂಚಿತರಾಗುವಂತಾಯಿತು. ಈ ಕ್ರಮವು ಪೇಟೆಯ ಮೂಲಭೂತ ಗುಣವಾದ ಷೇರುಗಳ ದಿಢೀರ್‌ ನಗದೀಕರಣ( creating ready liquidity) ಕ್ಕೆ ಅಪವಾದವಾಗಿದೆ.

    ಲಕ್ಷ್ಮೀ ವಿಲಾಸ್‌ ಬ್ಯಾಂಕ್:

    ಯೆಸ್‌ ಬ್ಯಾಂಕ್‌ ನ‌ ಹಗರಣವು ಇನ್ನೂ ಮಾಸದೆ ಇರುವಾಗಲೇ 94 ವರ್ಷಗಳ ಇತಿಹಾಸವುಳ್ಳ ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ದುರ್ಬಲಗೊಂಡಿರುವ ಕಾರಣ ಅದನ್ನು ಮೊರೆಟೋರಿಯಂ ನಲ್ಲಿರಿಸಿದೆ. ಅದನ್ನು ಸಿಂಗಾಪುರ ಮೂಲದ ಡಿ ಬಿ ಎಸ್‌ ಬ್ಯಾಂಕ್‌ ಇಂಡಿಯಾದಲ್ಲಿ ವಿಲೀನಗೊಳಿಸುವ ಪ್ರಸ್ತಾಪವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಇಟ್ಟಿದೆ. ಈ ಹಿಂದೆ ಇಂಡಿಯಾ ಬುಲ್‌ ಹೌಸಿಂಗ್‌ ಫೈನಾನ್ಸ್‌ ತದ ನಂತರ ಕ್ಲಿಕ್ಸ್‌ ಕ್ಯಾಪಿಟಲ್ ಗಳು ಈ ಬ್ಯಾಂಕ್‌ ಸ್ವಾದೀನಪಡಿಸಿಕೊಳ್ಳುವಲ್ಲಿ ವಿಫಲವಾಗಿವೆ. ಸುಮಾರು 563 ಶಾಖೆಗಳನ್ನು, 970 ಎ ಟಿ ಎಂ ಗಳನ್ನು ಹೊಂದಿರುವ ಈ ಬ್ಯಾಂಕ್‌ 2019 ರ ಸೆಪ್ಟೆಂಬರ್‌ ತಿಂಗಳಿಂದಲೂ ಪ್ರಾಂಪ್ಟ್‌ ಕರೆಕ್ಟಿವ್‌ ಆಕ್ಷನ್‌ ನಲ್ಲಿ ಭಾರತೀಯ ರಿಸರ್ವ್‌ ಬ್ಯಾಕ್‌ ಸೇರಿಸಿದೆ. ವಿಲೀನ ಯೋಜನೆಯಲ್ಲಿ ಠೇವಣಿದಾರರಿಗೆ ಯಾವುದೇ ರೀತಿ ಹಾನಿಯಾಗಲಾರದಾದರೂ ಬ್ಯಾಂಕ್‌ ವಿತರಿಸಿರುವ ಬಾಂಡ್‌ ಗಳ ಮತ್ತು ಅಸಂಖ್ಯಾತ ಷೇರುದಾರರ ಹಿತವನ್ನು ಕಾಪಾಡಲಾಗುವುದು ಎಂಬುದನ್ನು ಕಾದುನೋಡಬೇಕಾಗಿದೆ.

    ಈ ಎಲ್ಲಾ ಬೆಳವಣಿಗೆಗಳು ಮತ್ತು ಘಟನೆಗಳ ಕಾರಣ, ಅಪಾಯವೆಂಬುದು ಎಲ್ಲೆಡೆ ಇದ್ದು ಸುರಕ್ಷತೆ ಅಥವಾ ಗ್ಯಾರಂಟೀ ಎಂಬುದಿಲ್ಲವಾದ ಕಾರಣ ಎಚ್ಚರಿಕೆಯಿಂದ ವ್ಯವಹರಿಸಿದರೆ ಷೇರು ಪೇಟೆ ಹೂಡಿಕೆಯೇ ಸ್ವಲ್ಪಮಟ್ಟಿನ ಸುರಕ್ಷಿತ ವಿಧವಾಗಿದೆ ಎನ್ನಬಹುದು. ಅದರಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸುವ ಹೂಡಿಕೆದಾರ ಸ್ನೇಹಿ ಕಂಪನಿಗಳು ಯೋಗ್ಯವೆನ್ನಬಹುದು. ಲಾರ್ಜ್‌ಕ್ಯಾಪ್‌ಕಂಪನಿಗಳಲ್ಲಿ ಹೂಡಿಕೆಗೆ ಆದ್ಯತೆ ಇರಲಿ. ಇವು ಒಂದು ರೀತಿಯ ಡ್ರೈ ಫ್ರೂಟ್ಸ್‌ನಂತೆ ಹೆಚ್ಚಿನ ಅವಧಿಯವರೆಗೂ ಯೋಗ್ಯವಾಗಿರುತ್ತವೆ. ಈಗಿನ ಪೇಟೆಗಳು ಪ್ರವೇಶದಲ್ಲಿ ಹೂಡಿಕೆಯಾದರೂ ನಂತರದಲ್ಲಿ ಅವು ಅಪೂರ್ವವಾದ ಅವಕಾಶಗಳನ್ನೊದಗಿಸಿದಾಗ ವ್ಯವಹಾರದಂತೆ ಲಾಭವನ್ನು ಕೈಗೆಟುಕಿಸಿಕೊಳ್ಳುವುದು ಸುರಕ್ಷಿತವಾದ ವಿಧವಾಗಿವೆ.

    ಆದ್ದರಿಂದಲೇ Value pick – Prfit book ಸದಾ ಹಸಿರಾದ ಸಮೀಕರಣವಾಗಿದೆ. Invest it and forget it ಎಂಬುದು ಈಗಿನ ದಿನಗಳಲ್ಲಿ ತಪ್ಪು ಕಲ್ಪನೆ. Invest and track it ಎಂಬುದು ಈಗ ಅನ್ವಯವಾಗುವ ಸೂತ್ರ

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    2 COMMENTS

    1. Invest and track it ಎಂಬುದು ಈಗ ಅನ್ವಯವಾಗುವ ಸೂತ್ರ ಮತ್ತು ಯಾವಾಗಲು ಪಾಲಿಸಬೇಕಾದ ಸೂತ್ರ ಕೂಡ…🙏

    LEAVE A REPLY

    Please enter your comment!
    Please enter your name here

    Latest article

    error: Content is protected !!