ಡಿಸೆಂಬರ್ ವರೆಗೂ ಶಾಲೆಗಳ ಆರಂಭವಿಲ್ಲ
ಈ ವರ್ಷ ನಮ್ಮ ಪರೀಕ್ಷೆಗಳ ಗತಿ ಏನಾಗುವುದೋ ಎಂಬ ಚಿಂತೆಯಲ್ಲಿದ್ದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಗೊಂದಲವನ್ನು ಶಿಕ್ಷಣ ಸಚಿವರು ಬಗೆ ಹರಿಸಿದ್ದಾರೆ. ಪ್ರತಿವರ್ಷಕ್ಕಿಂತ ಸ್ವಲ್ಪ ತಡವಾಗಿಯಾದರೂ ಈ ವರ್ಷ ನಡೆದಂತೆ (2019-20) ಬರುವ ವರ್ಷವೂ (2020-21)ಎಸ್ ಎಸ್ ಎಲ್ ಸಿ ಮತ್ತು ದ್ವೀತಿಯ ಪಿಯು ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಸ್ಪಪ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತಂತೆ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ನಂತರ ಅವರು ಈ ವಿಷಯ ತಿಳಿಸಿದರು.
ಈಗಾಗಲೇ ಸಂವೇದಾ ಪಾಠ ಸರಣಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿಗಳಿಗೆ ನಿಗದಿಪಡಿಸಿದ ತರಗತಿಗಳು ಪರೀಕ್ಷಾ ಸಮಯದೊಳಗೆ ಪೂರ್ಣಗೊಳ್ಳಲಿವೆ. ಆದರೆ ಇಂತಹ ಪಾಠಗಳು ನೇರ ತರಗತಿಗಳಷ್ಟು ಪರಿಣಾಮಕಾರಿಯಾಗಿರುವುದಿಲ್ಲವಾದ್ದರಿಂದ ಪರೀಕ್ಷೆ ಸಮಯದೊಳಗೆ ಈ ಶೈಕ್ಷಣಿಕ ವರ್ಷದಲ್ಲಿ ದೊರೆಯಬಹುದಾದ ಶಾಲಾವಧಿಯನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮಗಳನ್ನು ನಿಗದಿಪಡಿಸಲಾಗುವುದು ಎಂದು ಸುರೇಶ್ ಕುಮಾರ್ ವಿವರಿಸಿದರು.ಉಳಿದಂತೆ ಶಾಲೆಗಳನ್ನು ಆರಂಭಿಸುವ ಕುರಿತಂತೆ ಡಿಸೆಂಬರ್ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟಗಳಾದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸುವ ಸಂಬಂಧದಲ್ಲಿ ವಿಶೇಷ ಚರ್ಚೆ ನಡೆಯಿತು. ಆರೋಗ್ಯ ತಜ್ಞರನ್ನೊಳಗೊಂಡ ತಾಂತ್ರಿಕ ಸಲಹಾ ಸಮಿತಿ ರಾಜ್ಯದಲ್ಲಿ ಕೊರೋನಾ ಪ್ರಸರಣದ ಏರಿಳಿತ ಹಿನ್ನೆಲೆಯಲ್ಲಿ ಈ ತರಗತಿಗಳನ್ನು ಆರಂಭಿಸುವ ಕುರಿತು ಡಿಸೆಂಬರ್ ಕೊನೆಯವಾರದ ತನಕ ಕಾದು ನೋಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದರಿಂದ ಮಾನ್ಯ ಮುಖ್ಯಮಂತ್ರಿಯವರು ಡಿಸೆಂಬರ್ ಮೂರನೇ ವಾರದಲ್ಲಿ ಈ ಕುರಿತು ಇನ್ನೊಮ್ಮೆ ಸಭೆ ಸೇರಿ ಅಂದಿನ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನಕ್ಕೆ ಬರೋಣವೆಂದು ಅಭಿಪ್ರಾಯಪಟ್ಟರು ಎಂದು ಸಚಿವರು ತಿಳಿಸಿದರು.
ಈಗಾಗಲೇ ಶಾಲಾ ಕಾಲೇಜುಗಳು ಆರಂಭವಾಗಿರುವುದು ತಡವಾಗಿರುವುದರಿಂದ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುತ್ತಿದೆ. ಶಾಲೆಗಳನ್ನು ಆರಂಭಿಸಬೇಕೆಂಬ ಪೋಷಕರ ಒತ್ತಾಯ ಹಾಗೆಯೇ ಈಗಲೇ ಶಾಲಾರಂಭ ಬೇಡ ಎಂಬ ಇನ್ನೊಂದು ವರ್ಗದ ಒತ್ತಾಯದ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದ ಪಾಲುದಾರರಾದ ಮಕ್ಕಳು, ಪೋಷಕರು, ಎಸ್‍ಡಿಎಂಸಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಶಿಕ್ಷಣ ತಜ್ಞರು, ಖಾಸಗಿ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಎಲ್ಲ ಸ್ತರದ ಜನರೊಂದಿಗೆ ಚರ್ಚೆ ನಡೆಸಿ ಈ ಎಲ್ಲ ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿ ಒಂದು ತೀರ್ಮಾನಕ್ಕೆ ಬರಬೇಕೆಂಬ ಹಿನ್ನೆಲೆಯಲ್ಲಿ ಇಂದಿನ ಸಭೆ ನಡೆಯಿತು. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ಡಿಸೆಂಬರ್ ಮೂರನೇ ವಾರದಲ್ಲಿ ಈ ಕುರಿತು ಪುನಃ ಸಭೆ ಸೇರಿ ತೀರ್ಮಾನಕ್ಕೆ ಬರಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.
ಶಾಲೆಗಳನ್ನು ಆರಂಭಿಸಲೇಬೇಕೆಂಬುದು ನಮ್ಮ ಆಗ್ರಹವೂ ಅಲ್ಲ, ಆ ಕುರಿತು ಹಠವೂ ಇಲ್ಲ, ಮಕ್ಕಳ ಜೀವವೇ ಪ್ರಮುಖವಾದ್ದರಿಂದ ಡಿಸೆಂಬರ್ ರವರೆಗೂ ಶಾಲೆಗಳ ಆರಂಭದ ನಿರ್ಧಾರಕ್ಕೆ ಬರಲಾಗಿಲ್ಲ. ಆದಾಗ್ಯೂ ಈಗಾಗಲೇ ಮಕ್ಕಳ ಕಲಿಕಾ ನಿರಂತರತೆಗೆ ಇಲಾಖೆ ಉಪಕ್ರಮಗಳಾದ ಸಂವೇದಾ- ಚಂದನ ಪಾಠ ಸರಣಿ, ಯೂ-ಟ್ಯೂಬ್, ವಾಟ್ಸ್ ಆಪ್‍ಗಳ ಬೋಧನೆಗಳು ಎಂದಿನಂತೆ ಮುಂದುವರೆಯಲಿವೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಕೋವಿಡ್ ನಂತರದ ಲಾಕ್ ಡೌನ್ ಸೇರಿದಂತೆ ಕೈಗೊಂಡ ಯಾವುದೇ ಉಪಕ್ರಮಗಳ ಉದ್ದೇಶ ಜೀವನಕ್ಕಿಂತ ಜೀವನವೇ ಪ್ರಮುಖ ಎಂಬ ಅಂಶದ ಹಿನ್ನೆಲೆಯಲ್ಲಿ ಶಾಲಾರಂಭದ ವಿಷಯದಲ್ಲೂ ಜೀವವೇ ಪ್ರಮುಖ ಎಂಬ ಅಂಶಕ್ಕೆ ಸಭೆಯಲ್ಲಿ ಒತ್ತು ನೀಡಲಾಯಿತು ಎಂದು ಅವರು ತಿಳಿಸಿದರು.
ಕೋವಿಡ್ ಪ್ರಸರಣ ಕಡಿಮೆ ಇರುವ ಯಾದಗಿರಿಯಂತಹ ಕೆಲವು ಜಿಲ್ಲೆಗಳಲ್ಲಾದರೂ ಈ ತರಗತಿಗಳನ್ನ ಆರಂಭಿಸುವ ಕುರಿತಂತೆ ಚರ್ಚೆ ನಡೆಯಿತಾದರೂ ಕೋವಿಡ್ ಪ್ರಸರಣದ ಏರಿಳಿತಗಳ ಹಿನ್ನೆಲೆಯಲ್ಲಿ ಯಾವುದೇ ಒಂದು ಭಾಗದಲ್ಲಿ ಶಾಲೆಗಳನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಆರಂಭಿಸುವುದು ಉಚಿತವಲ್ಲ ಎಂದು ಸಭೆ ಅಭಿಪ್ರಾಯಪಟ್ಟಿತು ಎಂದು ಸಚಿವರು ವಿವರಿಸಿದರು.
ಒಂದರಿಂದ 7ನೇ ತರಗತಿವರೆಗೆ ಶಾಲೆಗಳನ್ನು ತಕ್ಷಣವೇ ಪ್ರಾರಂಭಿಸುವುದು ನಮ್ಮ ಉದ್ದೇಶವಾಗಿಲ್ಲ. ಈ ಕುರಿತು ಸದ್ಯದ ಪರಿಸ್ಥಿತಿಯಲ್ಲಿ ಆ ವಿಚಾರವನ್ನು ಮಾಡಿಲ್ಲ. ನಾವು ಪ್ರಮುಖವಾಗಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸುವ ಕುರಿತಂತೆ ಮಾತ್ರವೇ ಇಂದಿನ ಸಭೆ ಕರೆಯಲಾಗಿತ್ತು. ವಿಶೇಷವಾಗಿ ನಮ್ಮ ಗ್ರಾಮೀಣ ಪ್ರದೇಶದ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಭೆ ಕರೆಯಲಾಗಿತ್ತು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ಶಾಲೆಗಳ ಆರಂಭಕ್ಕೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಪ್ರಾತ್ಯಕ್ಷಿಕೆ ಮಂಡಿಸಿ, ಈ ಸಂಬಂಧದಲ್ಲಿ ವಿವಿಧ ಇಲಾಖೆಗಳು ನೀಡಬಹುದಾದ ಸಹಕಾರವನ್ನು ಕೋರಿದರು.
ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ತ.ಮ. ವಿಜಯಭಾಸ್ಕರ್, ಬಿಬಿಎಂಪಿ ಆಯುಕ್ತರು ಸೇರಿದಂತೆ ಸೇರಿದಂತೆ ಶಿಕ್ಷಣ, ನಗರಾಭಿವೃದ್ಧಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಹಿಂದುಳಿದ ವರ್ಗ ಕಲ್ಯಾಣ, ಸಮಾಜಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
👍👍
Good decision taken in the interest of children. We welcome it.