ಧೀರನು ನಾನೇ,ಶೂರನು ನಾನೇ ಅತಿ ಸುಂದರನೂ ನಾನೇ…ನಾಳೆ ಪಾಂಡವರ ಪಕ್ಷ ಸೇರುವವನೂ ನಾನೇ……
ನಮ್ಮ ಮನೆಯ ಹಿಂದಿದ್ದ ಗೌಡರ ಗೋದಾಮಿನಲ್ಲಿ ತಡ ರಾತ್ರಿವರೆಗೆ ನಡೆಯುತ್ತಿದ್ದ ನಾಟಕದ ತಾಲೀಮು ನನ್ನನ್ನು ನಿದ್ದೆ ಮಾಡಲು ಬಿಡುತ್ತಿದ್ದಿಲ್ಲ. ಮಾರ್ಚ್ ನಲ್ಲಿ ಇರುತ್ತಿದ್ದ 7ನೇ ತರಗತಿಯ ಜಿಲ್ಲಾ ಮಟ್ಟದ ಪರೀಕ್ಷೆಯ ಸಲುವಾಗಿ ನವೆಂಬರ್, ಡಿಸೆಂಬರ್ ತಿಂಗಳ ಚಳಿಯಲ್ಲಿಯೇ ನಮ್ಮ ಮನೆಯ ಕಟ್ಟೆಯ ಮೇಲೆ ಅಪ್ಪನ ಮೇಲುಸ್ತುವಾರಿಕೆಯಲ್ಲಿ ತಯಾರಿ ನಡೆಯುತ್ತಿತ್ತು . ಗೊಲ್ಲರ ಮರಿಚಿತ್ತಜ್ಜನ ಮಗ ಚಿತ್ತ, ಮುದ್ದಪ್ಪನ ಮಗ ಕಾಳ, ತುಂಬರಗುದ್ದಿಯ ತಿಪ್ಪೇಸ್ವಾಮಿ, ಮಲ್ಲಾಪುರದ ರುದ್ರಮುನಿ,ಮಿತ್ರ ಸ್ವಾಮಿ ಇವರೆಲ್ಲ ನಮ್ಮ ಮನೆಯಲ್ಲೇ ಠಿಕಾಣಿ. ಗಲಾಟೆ ಮಾಡದೆ ಓದಬೇಕು ಅಂತ ಹೇಳಿ ಅಪ್ಪ ಹತ್ತು ಗಂಟೆಗೆ ಮಲಗಿದರೆ ಇನ್ನು ನಮ್ಮದೇ ಸಾಮ್ರಾಜ್ಯ.ಮನಸ್ಸು ಪೂರ್ಣ ನಾಟಕದ ಸದ್ದಿನತ್ತ ವಾಲುತ್ತಿತ್ತು. (ಚಳಿಯಲ್ಲಿ ರಾತ್ರಿ ಹೊಲಗಳಿಗೆ ನುಗ್ಗಿ,ಶೇಂಗಾ ಸುಟ್ಟು ತಿಂದದ್ದು,ಕಬ್ಬಿನ ಗದ್ದೆಗಳಲ್ಲಿ ಕಬ್ಬು ತಿಂದದ್ದೂ ಆಗಿನ ರಾತ್ರಿಗಳಲ್ಲೇ.)
ನನಗೋ ನಾಟಕದ ತಾಲೀಮಿನ ಪಿಯಾನೋ ಶಬ್ಧ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಅದನ್ನ ನುಡಿಸುತ್ತಿದುದು ನಮ್ಮೂರ ಬಡಿಗೇರ ರಾಮಚಂದ್ರಪ್ಪ. ಕುರುಡನಾದ ಆತನ ಅಪ್ಪ (ಹೆಸರು ನೆನಪಾಗ್ತಾ ಇಲ್ಲ) ಪಕ್ಕದಲ್ಲೇ ಕೂತು ಆಗಾಗ ವಿವರಣೆ ಕೊಡ್ತಿದ್ದ. ಹಾರ್ಮೋನಿಯಂ ಜೊತೆ ರಾಗ ಬೆರೆಸಿ, ಹಾಡೋರನ್ನ ನೋಡೋದಂತೂ ನನಗೆ ಬಲು ಅಚ್ಚುಮೆಚ್ಚು. ಜೊತೆಗೆ ಆ ಅಂಧ ವೃದ್ಧರಿಗೆ ಹಾರ್ಮೋನಿಯಂ ನ ಕಪ್ಪು ಬಿಳುಪು ತುಣುಕುಗಳು ಕಾಣುವುದಾದರೂ ಹೇಗೆ? ಕಣ್ಮುಚ್ಚಿಕೊಂಡೇ ನುಡಿಸುವ ಆತನ ಕೈಬೆರಳ ಓಡಾಟ ನನ್ನನ್ನು ಮೂಕನನ್ನಾಗಿ ಮಾಡಿತ್ತು. ಎಲ್ಲರೂ ಮಲಗಿದಾಗ ನಾನೊಬ್ಬನೇ ಅಲ್ಲಿಗೆ ಹೋಗಿ ನಿಲ್ಲುತ್ತಿದ್ದೆ. ಒಬ್ಬ ಹೋದರೆ ಯಾರೂ ಏನೂ ಅನ್ನುತ್ತಿರಲಿಲ್ಲ. ನಮ್ಮ ಕಪಿ ಗುಂಪು ಹೊಯ್ತೋ ಅಟ್ಟಿಸಿಕೊಂಡು ಬಂದು ಬಿಡುತ್ತಿದ್ದರು.
ನಮ್ಮೂರಲ್ಲಿ ಆಗಾಗ ಪೌರಾಣಿಕ,ಸಾಮಾಜಿಕ ನಾಟಕಗಳನ್ನು, ಬಯಲಾಟಗಳನ್ನು ನಮ್ಮೂರ ಯುವಕರೇ ಆಡುತ್ತಿದ್ದರು. ನಾಟಕ ನಿರ್ದೇಶನ ಮಾಡುತ್ತಿದ್ದ ನಾಟಕ ಮೇಷ್ಟ್ರಗಳು ಇದ್ದರು. ಅವರಲ್ಲಿ ಯರ್ರಯ್ಯನಹಳ್ಳಿ ಓಬಯ್ಯ(ಇವರು ಶಾಲಾ ಮಾಸ್ತರೂ),ಗೌರಿಪುರದ ಗೌಡ್ರ ಬಸಪ್ಪ,ಚೋರನೂರಿನ ಹಾರ್ಮೋನಿಯಂ ಶಂಕರಪ್ಪ ಪ್ರಸಿದ್ದರು. ನಮ್ಮೂರ ಬಡಿಗೇರ ಮನೆಯಲ್ಲಿದ್ದ ದೊಡ್ಡ ಹಾರ್ಮೋನಿಯಂ ಫೇಮಸ್ಸು. ಬೇರೆಯವರೆಲ್ಲ ಹಳ್ಳಿ ಲೆವೆಲ್ ಆದರೆ,ಚೋರನೂರು ಶಂಕರಪ್ಪ ಕೂಡ್ಲಿಗಿ,ಹೊಸಪೇಟೆ,ಮರಿಯಮ್ಮನಹಳ್ಳಿ ನಾಟಕ ತಂಡಗಳು,ಹೆಂಗಸರು,ನಾಟಕ ಸೀನರಿ ಕಂಪನಿಗಳ ಜೊತೆ ಬಲು ಓಡಾಟ. ಇವರನ್ನೆಲ್ಲ ಅಪರೂಪಕ್ಕೆ ನೋಡೋದೂ ಒಂದು ವಿಶೇಷ ನಮಗಾಗ,ಈಗಿನ ಸೆಲೆಬ್ರಿಟಿಗಳ ತರಹ! ನಾಟಕ ಆಡ್ತಾರಂತೆ ಅಂತ ಸುತ್ತ ಊರುಗಳಿಗೆ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಬಿಡುತ್ತಿತ್ತು.
ಹೆಸರು,ಪಾತ್ರಧಾರಿಗಳ ಆಯ್ಕೆ,ದಿನಾಂಕ, ತಾಲೀಮು ಮನೆಗಳ ಆಯ್ಕೆಯೇ ಬಲು ರೋಮಾಂಚನ ಪ್ರಸಂಗಗಳು. ಆ ಮೂರ್ನಾಲ್ಕು ತಿಂಗಳು ನಾಟಕ ಮೇಷ್ಟ್ರಿಗೆ ಇನ್ನಿಲ್ಲದ ಗೌರವ! ತಾಲೀಮು ಮನೆಗಳ ಪ್ರಸಂಗಗಳೇ ನಾಟಕಕ್ಕಿಂತಲೂ ಹೆಚ್ಚು ಮುದ ನೀಡುತ್ತಿದ್ದವು. ಹಾರ್ಮೋನಿಯಂ ಮಾಸ್ಟರ್ ಗಳು ಅಲ್ಲಿಯೇ ಹಾಗೆಯೇ ರಾಗ ಸಂಯೋಜಿಸಿ,ಪ್ರಸಂಗಕ್ಕೆ ತಕ್ಕ ಅರ್ಥ ಬರುವ ಹಾಡು ಕಟ್ಟಿ ಅವುಗಳನ್ನು ಪಾತ್ರಧಾರಿಗಳಿಂದ ಹಾಡಿಸುತ್ತಿದ್ದ ಪರಿ ನನ್ನನ್ನು ಬಹುವಾಗಿ ಆಕರ್ಷಿಸುತ್ತಿತ್ತು. ಹೆಣ್ಣು ಪಾತ್ರಧಾರಿಗಳ ಜೊತೆ ನಮಗೂ ಒಂದು ಹಾಡನ್ನು ಹಾಕಿ ಅಂತ ಪಾತ್ರಿಗಳು ನಾಟಕ ಮಾಸ್ಟರ್ ಗಳನ್ನು ಕೇಳಿಕೊಳ್ಳೋದು,ಅವರಿಗೆ ಹೋಟೆಲ್ ಗಳಲ್ಲಿ ಉಪಚರಿಸೋದು ನೋಡಲು ಬಲು ಸೊಗಸಾಗಿರುತ್ತಿತ್ತು.
ಇನ್ನು ತಾಲೀಮು ಮನೆಗಳಿಗೆ ಭೇಟಿ ನೀಡಿ ಅದರ ಅಣಕನ್ನು ಶಾಲೆಯಲ್ಲಿ ಮಾಡಿ ತೋರಿಸುತ್ತಿದ್ದ ಪ್ರತಿಭಾವಂತರೂ ನಮ್ಮಲ್ಲಿ ಇದ್ದರು. ರಕ್ತ ರಾತ್ರಿ ನಾಟಕದ ಹಾಸ್ಯ ಪಾತ್ರಧಾರಿಗಳ ಹಾಡಿನ ತುಣುಕೇ ಈ ಧೀರನು ನಾನೇ….ಶೂರನು ನಾನೇ… ಇದನ್ನಂತೂ ನಮ್ಮ ಸಹಪಾಠಿಗಳಾದ ನವಲಪ್ಪರ ಓಂಕಾರಿ, ಚನ್ನವೀರಯ್ಯರ ಸಿದ್ಲಿಂಗ ನಮ್ಮ ಶಾಲೆಯ ವಾರಾಂಡ ದಲ್ಲಿ ಬಲು ಸೊಗಸಾಗಿ ಅಭಿನಯಿಸಿ ತೋರಿಸುತ್ತಿದ್ದರು. ಬಿಡುವಾದಾಗ ರಾಮದುರ್ಗದ ಕೃಷ್ಣಮೂರ್ತಿ ಮೇಷ್ಟ್ರು ಲೇ ಆ ಓಂಕಾರಿ,ಸಿದ್ಲಿಂಗ ರನ್ನು ಕರೆಯಿರಿ ಅಂದ್ರೆ ಸಾಕು,ನಾವೆಲ್ಲ ಓಡಿಹೋಗಿ ಇವರನ್ನ ಅಪರಾಧಿಗಳ ತರಹ ಹಿಡ್ಕೊಂಡು ಬರ್ತಿದ್ದೆವು. ಯುದ್ಧದಲ್ಲಿ ಪಾಂಡವರ ಪಕ್ಷ ಸೇರಲು ಸಾಮಾನ್ಯನೂ ಎಷ್ಟೊಂದು ಉತ್ಸುಕನಾಗಿರುತ್ತಿದ್ದನು ಅನ್ನುವುದನ್ನು ಗ್ರಾಮೀಣ ನಾಟಕ ನಿರ್ದೇಶಕರು ಈ ಹಾಡು,ಕುಣಿತದಿಂದ ಹೇಳುವ ಪರಿ ನನಗೆ ಖುಷಿ ನೀಡುತ್ತಿತ್ತು.ಧೀರನು ನಾನೇ….ಅಂತ ಒಬ್ಬ ಅಂದ್ರೆ,ಮತ್ತೊಬ್ಬ ಶೂರನು ನಾನೇ…ಅಂತ ಹದವಾಗಿ ಕುಣಿದು ನಮ್ಮನ್ನು ರಂಜಿಸುತ್ತಿದ್ದರು. ಇವರಿಗೆ ಪ್ರತ್ಯೇಕವಾಗಿ ಯಾರೂ ಕಲಿಸಿರಲಿಲ್ಲ ಅನ್ನೋದು ಗಮನಿಸಬೇಕಾದ ವಿಷಯ.
ಇನ್ನು ನಾಟಕದ ದಿನದ ಸಂಭ್ರಮವಂತೂ ಊರಲ್ಲಿಯ ಎಲ್ಲರಲ್ಲಿಯೂ ಸಡಗರ ತರುತ್ತಿತ್ತು. ಹಿಂದಿನ ದಿನವೇ ಬಂದು ವೇದಿಕೆ ಸಜ್ಜು ಮಾಡುತ್ತಿದ್ದ ಸೀನರಿಯವರು, ಧ್ವನಿ ವರ್ಧಕ ಇಟ್ಟು ಹಾಡನ್ನು ಹಾಕುತ್ತಿದ್ದರು. ಏನೋ ಸಂಭ್ರಮ,ಸಂತೋಷ. ನಮ್ಮೂರ ಒಂದೇ ಒಂದು ಟ್ರಾನ್ಸ ಫಾರ್ಮರ್ ಇದ್ದ ಜೋಡಿ ಕರೆಂಟ್ ಕಂಬ ಈ ವೇದಿಕೆಗೆ ಹತ್ತಿರವೇ ಇರುತ್ತಿತ್ತು. ಕರೆಂಟ್ ಏನಾದ್ರು ಹೆಚ್ಚು ಕಡಿಮೆ ಆಗಿ ಕೈಕೊಡದ ಹಾಗೆ ನೋಡಿಕೊಳ್ಳಲು ಆಗಿನ ಇಲೆಕ್ಟ್ರಿಷಿಯನ್, ಮೆಕಾನಿಕ್ ಜಿನ್ನಿನ ರುದ್ರಪ್ಪ ಜೂಟಿ ಕೋಲು ಹಿಡಿದು ಅಡ್ಡಾಡುವ ಸಡಗರ ಕಣ್ಮುಂದೆ ಇದೆ.
ಕನ್ನಡದ ಕಲಾಭಿಮಾನಿಗಳೇ,ಕಲಾ ರಸಿಕರೇ ಈ ದಿನ ರಕ್ತರಾತ್ರಿ ಎಂಬ ಸುಂದರ ಪೌರಾಣಿಕ ನಾಟಕ. ಝಗಮಗಿಸುವ ವಿದ್ಯುದ್ದೀಪಗಳ ಅಲಂಕಾರದಲ್ಲಿ,ಇಟಗಿ ವೀರಭದ್ರೇಶ್ವರ ಕಂಪನಿಯ ಸುಂದರವಾದ ಸೀನರಿಗಳಿಂದ ಅಲಂಕೃತಗೊಂಡ ವೇದಿಕೆಯಲ್ಲಿ, ನಮ್ಮೂರ ಗೌಡ್ರ ಗೋದಾಮಿನ ಮುಂದಿನ ಜಾಗದಲ್ಲಿ.ಬನ್ನಿ,ನೋಡಿ ಆನಂದಿಸಿ,ಮರೆತು ಮಲಗಿ,ಮರುದಿನ ಮರುಗಬೇಡಿ ಅಂತ ನಮ್ಮೂರ ಐನಾರ ಶಂಭಣ್ಣ ಎತ್ತಿನ ಗಾಡಿಯಲ್ಲಿ ಕುಳಿತುಕೊಂಡು ಮೈಕಲ್ಲಿ ಹೇಳುತ್ತಿದ್ದರೆ, ನಾವೆಲ್ಲ ಗಾಡಿಯ ಹಿಂದೆ ಓಡುತ್ತಿದ್ದೆವು. ಇತ್ತ ನಾಟಕದ ವೇದಿಕೆ ಸಂಪೂರ್ಣ ಆಡಳಿತ ನಮ್ಮ ಐನಾರ ಸಿದ್ಲಿಂಗಣ್ಣ ನದು. ಚೋರನೂರಿನ ಹೈಸ್ಕೂಲ್ ನಲ್ಲಿ ಲ್ಯಾಬ್ ಅಸಿಸ್ಟೆಂಟ್ ಅಂತ ಸೇರಿದ್ದ ಸಿದ್ಲಿಂಗಣ್ಣ ನಮ್ಮೂರಿನ ಹುಡುಗ,ಹುಡುಗಿಯರನ್ನು ಹೈಸ್ಕೂಲ್ ಗೆ ಕರೆದುಕೊಂಡು ಹೋಗಿ,ಕರೆತರುತ್ತಿದ್ದರು ಕೂಡಾ. ಊರಿನ ಯಾವುದೇ ಸಭೆ,ಸಮಾರಂಭಗಳಲ್ಲಿ ಮೊದಲು ಭಾಗಿ. ಉರಿಮೀಸೆ ತಿರುವುತ್ತಾ ಕೈಯಲ್ಲಿ ಬೆತ್ತ ಹಿಡಿದು, ಹಾರ್ಮೋನಿಯಂ ಇಡಲು ವೇದಿಕೆಯ ಮುಂದೆ ಮಾಡಿದ್ದ ಗುಂಡಿಯ ಹತ್ತಿರ ನಾವ್ಯಾರೂ ಹೋಗದಂತೆ ತಡೆಯುತ್ತಿದ್ದರು. ಇನ್ನು ಊರೆಂಬ ಊರಿನ ಎಲ್ಲ ಪಡ್ಡೆ ಗಂಡಸರೂ ಕೂಡ್ಲಿಗಿ ಅಥವಾ ಹೊಸಪೇಟೆಯಿಂದ ಬಂದಿರುತ್ತಿದ್ದ ದ್ರೌಪದಿ ಪಾತ್ರಧಾರಿಯನ್ನು ನೋಡಲು ವೇದಿಕೆ ಹಿಂಬದಿಯ ಬಣ್ಣದ ಕೋಣೆಗೆ ನೂಕು ನುಗ್ಗಲು!!!
ಇನ್ನು ನಾಟಕದ ಮಧ್ಯೆ ಆಗ ತಾನೇ ಬೇರೆ ಊರುಗಳಲ್ಲಿ ಮುಗಿದಿದ್ದ ನಾಟಕಗಳ ನೆಚ್ಚಿನ ಪಾತ್ರಗಳ ಡೈಲಾಗ್ ಗಳನ್ನು ಆಯಾಯ ಪಾತ್ರಧಾರಿಗಳು ಬಂದಿದ್ದರೆ ಹೇಳುತ್ತಿದ್ದರು. ಎಚ್ಚಮ ನಾಯಕನ ಡೈಲಾಗ್ ಆಗ ಭಾರೀ ಫೇಮಸ್…..ಯವನರು ಊರು ಸುಡುವಾಗ ಎಲ್ಲಿ ಅಡಗಿದ್ದೆಯೋ ವಿರೂಪಾಕ್ಷಾ… ಅಂದಾಗ ಬರುತ್ತಿದ್ದ ಹಿಮ್ಮೇಳದ ಸದ್ದು ಎಲ್ಲರನ್ನು ಬೆಚ್ಚಿ ಬೀಳಿಸುತ್ತಿತ್ತು. ನಂತರ ಊರ ಗಣ್ಯರನ್ನು,ಚೋರನೂರಿನ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಪಾತ್ರಧಾರಿಗಳಿಗೆ ಮುಯ್ಯಿ ಕೊಡುವುದೇ ಒಂದು ಕಾರ್ಯಕ್ರಮ! ಒಂದು ರೂಪಾಯಿ,ಎರಡು ರೂಪಾಯಿ ಮುಯ್ಯಿಗಳೇ ಹೆಚ್ಚು. ದ್ರೌಪದಿ ಪಾತ್ರಕ್ಕೆ ಮಾತ್ರ ಐದು ರೂಪಾಯಿಗಳ ಮುಯ್ಯಿಗಳೂ ಇರುತ್ತಿದ್ದವು!
ಹಿತವಾದ ಚಳಿಯಲ್ಲಿ, ಮೈತುಂಬಾ ಹೊದ್ದು,ಬೆಳಗಾಗುವ ವರೆಗೆ ನೋಡುವ ನಾಟಕಗಳ ಸೋಬಗೇ ವರ್ಣಾತೀತ. ಹೆಚ್ಚು ಓದಿರದಿದ್ದ ಆಗಿನ ಜನರ ಸಾಹಿತ್ಯ, ಭಾಷಾ ಉಚ್ಚಾರಣೆ, ವ್ಯಾಕರಣ, ನುಡಿ ಸಂಪತ್ತು ನನ್ನನ್ನು ಒಮ್ಮೊಮ್ಮೆ ಬೆರಗು ಗೊಳಿಸುತ್ತಿತ್ತು. ಹಲವಾರು ಹಳೆಗನ್ನಡದ ಪದ್ಯಗಳಂತೂ ಅವರ ಬಾಯಲ್ಲಿ ಅಚ್ಚರಿ ಹುಟ್ಟಿಸುವ ಮಟ್ಟಿಗೆ ಉಚ್ಚರಿಸಲ್ಪಡುತ್ತಿದ್ದವು. ರೇಡಿಯೋದಲ್ಲಿ ಬರುತ್ತಿದ್ದ ಕನ್ನಡ ಚಿತ್ರ ಗೀತೆಗಳ ಸಾಹಿತ್ಯ, ನಮ್ಮ ಗ್ರಾಮೀಣ ನಾಡಿನ ಇಂತಹ ನಾಟಕಗಳು ನನ್ನಲ್ಲಿ ಸಾಹಿತ್ಯದ ಅಥವಾ ಅಕ್ಷರದ ಬೀಜ ಬಿತ್ತಿದವೇನೋ ಅಂತ ಬಹಳಷ್ಟು ಸಾರಿ ನನಗೆ ಅನ್ನಿಸಿದೆ. ಏನೇ ಆಗಲಿ ತೆರೆಮರೆಯಲ್ಲಿ ಇದ್ದು,ತಮ್ಮ ಕಾಯಕ ಬೀರಬಹುದಾದ ಯಾವುದೇ ಪರಿಣಾಮಗಳ ಅರಿವಿಲ್ಲದೇ ಹವ್ಯಾಸ ಅಂತಲೋ, ಜೀವನೋಪಾಯ ಅಂತಲೋ ಕನ್ನಡಮ್ಮನ ಸೇವೆ ಮಾಡಿದ ಇಂತಹ ಚೇತನಗಳಿಗೆ ನನ್ನ ನಮನಗಳು.
ಈ ಪ್ರಬಂಧದೊಂದಿಗೆ ಪ್ರಕಟವಾಗಿರುವ ವ್ಯಂಗ್ಯ ಚಿತ್ರ ಬರೆದವರು ನಾಡಿನ ಪ್ರತಿಭಾವಂತ ಕಲಾವಿದ ಸಂತೋಷ್ ಸಸಿಹಿತ್ಲು.ಉಡುಪಿ ಜಿಲ್ಲೆಯ ಕುಂದಾಪುರದವರಾದ ಸಸಿಹಿತ್ಲು ಓದಿದ್ದು ಭಂಡಾರ್ಸ್ ಕರ್ ಸೈನ್ಸ್ ಮತ್ತು ಆರ್ಟ್ಸ್ ಕಾಲೇಜಿನಲ್ಲಿ. ಯಾವುದೇ ಕಲಾ ಶಿಕ್ಷಣದ ಹಿನ್ನೆಲೆ ಇಲ್ಲದೆ ಸ್ವಂತ ಆಸಕ್ತಿಯಿಂದ ಚಿತ್ರ ಬರೆಯುವುದನ್ನು ರೂಢಿಸಿಕೊಂಡವರು. ಮುಂಬೈನಲ್ಲಿ ಕೆಲ ಕಾಲವಿದ್ದಾಗ ಅಲ್ಲಿ ಅದಕ್ಕೊಂದು ಶಾಸ್ತ್ರೀಯ ಆಯಾಮ ದೊರೆಯಿತು. ವ್ಯಂಗ್ಯಚಿತ್ರ, ಇಲ್ಸ್ ಸ್ಟ್ರೇಷನ್ , ಭಾವ ವ್ಯಂಗ್ಯಚಿತ್ರ ..ಇತ್ಯಾದಿಗಳನ್ನು ಸೊಗಸಾಗಿ ಬಿಡಿಸಬಲ್ಲರು. ನಾಡಿನ ಹಲವು ಮುಂಚೂಣಿ ಪತ್ರಿಕೆಯಲ್ಲಿ ದುಡಿದ ಅನುಭವ.
Excellent . Thank you for recalling sweet old memories
ಉತ್ತಮವಾದ ಹವ್ಯಾಸದಲ್ಲಿ ತೊಡಗಿರುವುದು ತುಂಬಾ ಸಂತೋಷವಾಗುತ್ತದೆ ಮೂಲ ಪ್ರತಿಭೆ ಒಂದಲ್ಲ ಒಂದು ದಿನ ಹೊರಬರಲೇಬೇಕು.
ಹಳ್ಳಿ ನಾಟಕದ ತಾಲೀಮು ನಿನ್ನ ಬರವಣಿಗೆಯಲ್ಲಿ ಕಣ್ಣಗೆ ಕಟ್ಟಿದಂತಿದೆ. ಇನ್ನೂ ಹಳ್ಳಿ ಹೆಸರುಗಳು, ಅವುಗಳ ಸಿದ್ಧತೆಯ ನವಿರಾದ ವಿಶ್ಲೇಷಣೆ ಬರವಣಿಗೆ ಪ್ರಬುದ್ದತೆಗೆ ಸಾಕ್ಷಿ.
ಸುಂದರ, ಆಕರ್ಷಕ ವಿವರಣೆ
Wonderful narrations, I expect continuation in this subject, it is quite interesting write again part 2
What a beautiful writing, writing flow is simply awesome
, I expect continuation in this subject, it is quite interesting write again part 2
ಸಂತೋಷ್ ಸಸಿಹಿತ್ಲು ಅವರ ವ್ಯಂಗ್ಯ ಚಿತ್ರ ತುಂಬಾ ಚೆನ್ನಾಗಿದೆ. ಭರವಸೆಯ ಹೊಸ ಪ್ರತಿಭೆಯನ್ನು ಪರಿಚಯಿಸಿದ್ದಕ್ಕೆ ಕನ್ನಡ ಪ್ರೆಸ್.ಕಾಮ್ ಗೆ ಅಭಿನಂದನೆಗಳು.