ಶಾಲೆ ಹೈಸ್ಕೂಲು ಈ ಹಂತದ ಸ್ನೇಹ ಇದೆಯಲ್ಲಾ ಅದು ತುಂಬಾನೇ ಚೆಂದ ಇರುತ್ತೆ . ಆಗೆಲ್ಲಾ ಬೆಳಿಗ್ಗೆ ತಿಂಡಿ ತಿಂದು ಮನೆಬಿಟ್ಟರೆ ಪುನಃ ಮನೆಗೆ ಸೇರುತಿದ್ದಿದ್ದು ಸಂಜೆಯೇ . ಮನೆಯಲ್ಲಿ ಮೂರು ಹೊತ್ತೂ ಫ್ರೆಂಡ್ಸೂ ಫ್ರೆಂಡ್ಸೂ ಅಂತ ಅಲೀತಿರ್ತೀರಾ ಅಂತ ಬೈತಾನೇ ಇರೋರು .
ಸ್ಕೂಲು ಓದು ಓಡಾಟ ತಿಂಡಿ ಇವುಗಳನ್ನು ಬಿಟ್ಟರೆ ತಲೆಯಲ್ಲಿ ಬೇರೇನೂ ಓಡುತ್ತಿರಲಿಲ್ಲ . ಬಾಡಿಗೆ ಕರೆಂಟುಬಿಲ್ಲು ಗಾಡಿ ಕಾರು ಮನೆ ಇ ಎಮ್ ಐ ಈ ತರಹದ ಯಾವುದೇ ಜಂಜಾಟ ಜವಾಬ್ದಾರಿಗಳಿರಲಿಲ್ಲ . ಸಮವಸ್ತ್ರ ಧರಿಸಿದ ನಮ್ಮ ಮನಸ್ಸುಗಳಲ್ಲೂ ಸಮಾನತೆ ಮನೆಮಾಡಿತ್ತು.
ಸ್ಕೂಲು ಹೈಸ್ಕೂಲು ಮುಗಿಸಿದ್ದ ನಮಗೆ ನಮ್ಮ ಶಾಲೆಯ ಅದರಲ್ಲೂ ನಮ್ಮ ತರಗತಿಯ ಸಹಪಾಠಿಗಳು ಎಲ್ಲಾದರೂ ಅಚಾನಕ್ಕಾಗಿ ಸಿಕ್ಕಾಗ ಆಗುವ ಖುಷಿಯಿದೆಯಲ್ಲ ಅದು ತುಂಬಾನೇ ಚೆನ್ನಾಗಿರೋದು . ಅವರ ಜೊತೆ ಹಳೆಯ ಶಾಲಾ ದಿನಗಳನ್ನು ಮೆಲುಕು ಹಾಕುವ ಮಜವಂತೂ ಮಾತಿನಲ್ಲಿ ಹೇಳಕ್ಕಾಗಲ್ಲ .
ಒಮ್ಮೆ ಇದೇ ರೀತಿ ಇಬ್ಬರು ಸ್ನೇಹಿತರು ಭೇಟಿಯಾಗುವ ಎಲ್ಲೋ ಕೇಳಿದ ಒಂದು ಸನ್ನಿವೇಶವನ್ನು ತಿಳಿಸುತ್ತಿರುವೆ ……
ನಗರದ ಬೃಹತ್ ಉದ್ಯಮಿ ದೊಡ್ಡ ಶ್ರೀಮಂತ ಒಂದು ಖಾಸಗೀ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಅಲ್ಲಿ ತನ್ನ ಹೈಸ್ಕೂಲಿನ ಗೆಳೆಯನೊಬ್ಬ ಸಿಗುತ್ತಾನೆ ಹೀಗೇ ತನ್ನ ಹೈಸ್ಕೂಲು ದಿನಗಳ ಬಗ್ಗೆ , ಗೆಳೆಯರ ಬಗ್ಗೆ ಮಾತನಾಡುತ್ತಿದ್ದಾಗ ಆತನ ಇನ್ನೊಬ್ಬ ಆಪ್ತಮಿತ್ರನ ಬಗ್ಗೆ ಮಾತು ಬರುತ್ತದೆ ಅವನೂ ಅದೇ ನಗರದಲ್ಲಿ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾನೆಂದು ತಿಳಿಯುತ್ತದೆ . ತಕ್ಷಣ ಉದ್ಯಮಿ ಇವನಿಂದ ಆ ಆಟೋ ಡ್ರೈವರ್ ಸ್ನೇಹಿತನ ಫೋನ್ ನಂಬರ್ ಪಡೆದು ಕಾಲ್ ಮಾಡುತ್ತಾನೆ . ಇವನ ಕರೆಯಿಂದ ಅಟೋ ಡ್ರೈವರ್ ಗೆಳೆಯ ಖುಷಿಯಾಗುತ್ತಾನೆ ಇಬ್ಬರೂ ಪರಸ್ಪರ ಮಾತನಾಡಿಕೊಂಡು ಒಮ್ಮೆ ಭೇಟಿಯಾಗೊಣವೆಂದು ದಿನಾಂಕ ನಿಗದಿ ಪಡಿಸಿಕೊಳ್ಳುತ್ತಾರೆ .
ಆ ದಿನ ಅಟೋ ಡ್ರೈವರ್, ಶ್ರೀಮಂತ ಗೆಳೆಯನನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ ಎಂದು ಸಾಲ ಮಾಡಿ ಹೊಸ ಉಡುಪುಗಳನ್ನು ಖರೀದಿಸಿ ಅದನ್ನು ಧರಿಸಿಕೊಂಡು ಟಿಪ್ ಟಾಪಾಗಿ ರೆಡಿಯಾಗಿ ಡ್ರೈವರ್ ಸಹಿತ ದೊಡ್ಡ ಕಾರು ಬಾಡಿಗೆ ಪಡೆದು ಕಾರಿನಲ್ಲಿ ಸ್ನೇಹಿತನ ಭೇಟಿಗೆ ಹೊರಡುತ್ತಾನೆ .
ಇತ್ತ ಶ್ರೀಮಂತ ಸ್ನೇಹಿತ ಆಟೋ ಡ್ರೈವರ್ ಗೆಳೆಯನನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಅದಕ್ಕೇ ಅದಷ್ಟೂ ಸರಳವಾಗಿ ಹೋಗೊಣ ಅಂತ ತೀರ್ಮಾನಿಸಿ ತನ್ನ ಹಳೇ ಬಟ್ಟೆಗಳನ್ನು ಹುಡುಕಿ ಅವುಗಳನ್ನು ಹಾಕಿಕೊಂಡು ಕಾರು, ಚಾಲಕನನ್ನು ಮನೆಯಲ್ಲಿಯೇ ಬಿಟ್ಟು ಬಾಡಿಗೆ ಆಟೋದಲ್ಲಿ ಹೊರಡುತ್ತಾನೆ .
ನಿಗದಿಯಾದ ಸ್ಥಳದಲ್ಲಿ ಇಬ್ಬರೂ ಸೇರಿ ಕೂತು ಮಾತನಾಡುತ್ತಾರೆ .
ಭೇಟಿಯ ನಂತರ ಹಿಂದಿರುಗಿ ಹೋಗುವಾಗ ಶ್ರೀಮಂತ ಸ್ನೇಹಿತ ಮಿತ್ರನ ಕಡೆ ನೋಡಿ ‘ ಇವನು ಈ ದೌಲತ್ ಮಾಡೋದಕ್ಕೇ ಇನ್ನೂ ಹೀಗೆ ಉಳ್ಕೊಂಡಿರೊದು ಅಂತ ಮನದಲ್ಲಿ ಅಂದುಕೊಳ್ಳುತ್ತಾನೆ . ಆಟೋ ಡ್ರೈವರ್ ಶ್ರೀಮಂತ ಮಿತ್ರನ ಕಡೆ ನೋಡಿ ‘ ಇವನು ಇಷ್ಟು ಜುಗ್ಗ ಅಗಿರೊದಕ್ಕೇ ಅಷ್ಟು ದೊಡ್ಡ ಶ್ರೀಮಂತ ಅಗಿರೋದು ಅಂದ್ಕೋತಾನೆ .
ಒಂದೇ ಶಾಲೆಯ ಒಂದೇ ತರಗತಿಯ ಸಮಾನ ವಯಸ್ಕ ಸ್ನೇಹಿತರಾಗಿದ್ದರೂ ಸಹ ಅವರ ಅಭಿಪ್ರಾಯಗಳು ಎಷ್ಟು ವೈವಿಧ್ಯತೆಯಿಂದ ಕೂಡಿರುತ್ತದೆಯಲ್ಲವೇ?
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
A worth reading article. The article is made more intresting with a wonderul
painting.