ಪುರಾಣ ಕಥೆಗಳಲ್ಲಿ ಕೇಳಿಬರುವ ವಿಷಕನ್ಯೆಯರು ಇದ್ದಿದ್ದು ಸತ್ಯವೋ ಮಿಥ್ಯೆಯೋ ನಮಗೆ ತಿಳಿದಿಲ್ಲ. ಆದರೆ ಅಂತಹುದೇ ಪರಿಕಲ್ಪನೆಯ ಪ್ರಾಣಿಯೊಂದು ನಿಸರ್ಗದಲ್ಲಿ ಇರುವುದಂತೂ ಸತ್ಯ…!
ಮಳೆಗಾಲದಲ್ಲಿ ‘ಕೊಟರ್ ಕೊಟರ್’ ಎಂದು ಕೂಗಿ ಮಳೆಯ ಮುನ್ಸೂಚನೆಯನ್ನು ನೀಡುವ ಕಪ್ಪೆಗಳಲ್ಲಿ ವಿವಿಧ ಪ್ರಭೇದಗಳಿವೆ. ಹಾವು ಚೇಳುಗಳಂತಹ ಪ್ರಾಣಿಗಳಿಗೆ ಹೆದರಿ ಓಡುವ ನಾವು ಕಪ್ಪೆಗಳೆಂದರೆ ಅಷ್ಟೇನು ಭಯ ಪಡುವುದಿಲ್ಲ. ಪಕ್ಕನೆ ಕಾಲಿನ ಬಳಿ ಬಂದರೆ ಒಂದು ಸಲ ದಿಬಕ್ಕ ಎಂದು ಕುಪ್ಪಳಿಸಿ ಹಾರಬಹುದು ಅಷ್ಟೇ. ಏಕೆಂದರೆ ಸಾಮಾನ್ಯವಾಗಿ ನಾವು ತಿಳಿದಿರುವ ಹಾಗೆ ಕಪ್ಪೆಯು ವಿಷಪ್ರಾಣಿಯಲ್ಲ.
ನಿಜ, ಕಪ್ಪೆಯ ಎಲ್ಲಾ ಪ್ರಭೇದಗಳು ವಿಷಪೂರಿತವಲ್ಲ. ಆದರೆ ಎಲ್ಲಾ ಕಪ್ಪೆಗಳಿಗೆ ಭಿನ್ನವಾಗಿ ಇಲ್ಲೊಂದು ಕಪ್ಪೆ ಪ್ರಭೇದ ಇದೆ. ಅದು ಭಯಂಕರ ವಿಷಕಾರಿ. ಎಷ್ಟೆಂದರೆ, ಜೀವಜಗತ್ತಿನಲ್ಲಿ ಅತ್ಯಂತ ವಿಷಪೂರಿತ ಕಶೇರುಕ (Vertebrate) ಪ್ರಾಣಿಗಳಲ್ಲಿಯೇ ಇದಕ್ಕೆ ಪ್ರಥಮ ಸ್ಥಾನ. ಇದರಲ್ಲಿರುವ ವಿಷ ಹಾವಿನ ವಿಷಕ್ಕಿಂತ ನೂರಾರು ಪಟ್ಟು ಪ್ರಬಲವಾದದ್ದು. ಅಷ್ಟು ಮಾತ್ರವಲ್ಲ, ವಿಷಯುಕ್ತ ಹಾವುಗಳ ವಿಷಗ್ರಂಥಿಯಲ್ಲಿ ಮಾತ್ರ ವಿಷ ಶೇಖರಣೆಯಾಗಿರುತ್ತದೆ. ಆದರೆ ಈ ಕಪ್ಪೆಯ ಸಂಪೂರ್ಣ ದೇಹವೇ ವಿಷಮಯ; ಅಂದರೆ, ವಿಷವು ಅದರ ಚರ್ಮದಲ್ಲಿ ಅಡಕವಾಗಿದೆ.
ಈ ಕಪ್ಪೆಯ ವಿಷದ ಬಗ್ಗೆ ಅರಿವಿಲ್ಲದೇ ಬರಿಗೈಯಲ್ಲಿ ಮುಟ್ಟಿದ ಅನೇಕ ಜನರು ಪ್ರಾಣವನ್ನು ಕಳೆದುಕೊಂಡಿರುವ ಬಗ್ಗೆ ವರದಿಗಳಿವೆ. ಇದರಲ್ಲಿರುವ ವಿಷ ಎಷ್ಟು ಪ್ರಬಲ ಎಂದರೆ ಇದರ ಸ್ಪರ್ಶಕ್ಕೆ ಬಂದಂತಹ ವಸ್ತುಗಳನ್ನು ಸ್ಪರ್ಶಿಸಿದರೂ ಸಾಕು, ಸ್ಪರ್ಶಿಸಿದ ಪ್ರಾಣಿಯು ತಕ್ಷಣಕ್ಕೆ ಸಾಯುತ್ತದೆ. ಕೋಳಿ, ನಾಯಿ, ಬೆಕ್ಕು, ಮತ್ತಿತರ ಪ್ರಾಣಿಗಳು ಈ ಕಪ್ಪೆಯ ನೇರ ಅಥವಾ ಪರೋಕ್ಷ ಸ್ಪರ್ಶ ಮಾತ್ರದಿಂದ ಸತ್ತಿರುವಂತಹ ಅನೇಕ ನಿದರ್ಶನಗಳಿವೆ.
ಇದರ ದೇಹದಲ್ಲಿರುವ ವಿಷದ ಪ್ರಮಾಣ ಅತ್ಯಲ್ಪ; ಅಂದರೆ ಸುಮಾರು ಒಂದು ಮಿಲಿ ಗ್ರಾಂನಷ್ಟು. ಇಷ್ಟು ಅಲ್ಪ ಪ್ರಮಾಣದ ವಿಷವು ಸುಮಾರು ಹತ್ತು ಸಾವಿರ ಇಲಿಗಳನ್ನು ಕೊಲ್ಲಲು ಸಾಕಾಗುತ್ತದೆ!! ಮನುಷ್ಯರಿಗಾದರೆ ಇದರ ಒಂದು ಮಿ.ಗ್ರಾಂ ವಿಷವು 20 ಜನರನ್ನು ಕೊಲ್ಲಲು ಸಾಕು!
‘ಅಬ್ಬಾ..!! ಹಾಗಿದ್ದರೆ ಈ ಕಪ್ಪೆ ಯಾವುದು, ಅದು ಎಲ್ಲಿದೆ, ನೋಡಲಿಕ್ಕೆ ಹೇಗಿದೆ?” ಇಷ್ಟೊಂದು ವಿಷಭಯಂಕರ ಪ್ರಾಣಿಯ ಬಗ್ಗೆ ಗೊತ್ತಾದ ನಂತರ ಜಾಗ್ರತೆ ವಹಿಸುವ ದೃಷ್ಟಿಯಲ್ಲಿ ಈ ಪ್ರಶ್ನೆಗಳು ಮೂಡುವುದು ಸಹಜ. ನಾವು ಹೆದರಬೇಕಾಗಿಲ್ಲ, ಏಕೆಂದರೆ ಈ ಕಪ್ಪೆ ನಮ್ಮ ದೇಶದಲ್ಲಿ ಇಲ್ಲ. ಕೊಲಂಬಿಯಾ ದೇಶದ ಪೆಸಿಫಿಕ್ ತೀರದ ಮಳೆಕಾಡುಗಳಲ್ಲಿ ಮಾತ್ರ ಇರುವುದರಿಂದ ಇದು ಅಲ್ಲಿನ ಸ್ಥಳೀಯ (Endemic) ಪ್ರಭೇದದರಿಂದ ಗಳಲ್ಲಿ ಒಂದು. ಇದರ ಸುಂದರವಾದ ಹೆಸರು ‘ಗೋಲ್ಡನ್ ಪಾಯ್ಸನ್ ಫ್ರಾಗ್’ (Golden Poison Frog). ಕನ್ನಡದಲ್ಲಿ ಇದನ್ನು ‘ಬಂಗಾರದ ವಿಷಕಪ್ಪೆ’ ಎನ್ನಬಹುದು.
ತನ್ನ ದೇಹದಲ್ಲಿ ವಿಷವನ್ನು ಹೊಂದಿರುವುದರಿಂದ ‘ವಿಷಕಪ್ಪೆ’ ಸರಿ, ಬಂಗಾರ ಏಕೆ? ಏಕೆಂದರೆ, ಇದರ ದೇಹವು ಸಂಪೂರ್ಣವಾಗಿ ಹಳದಿ ಬಣ್ಣದಾಗಿದ್ದು ಬಿಸಿಲಿನಲ್ಲಿ ಬಂಗಾರದಂತೆ ಮಿರಿಮಿರಿ ಹೊಳೆಯುತ್ತದೆ. ಕನ್ನಡದಲ್ಲಿ ವಂಚನೆಯ ಬಗ್ಗೆ ಎಚ್ಚರಿಸಲು ‘ ಬೆಳ್ಳಗಿರುವುದೆಲ್ಲ ಹಾಲಲ್ಲ’ ಅನ್ನುವ ಜನಪ್ರಿಯ ಗಾದೆಮಾತು ಇರುವಂತೆ, ಇಂಗ್ಲೀಷ್‌ನಲ್ಲಿ‘All that glitters is not gold’ ಅನ್ನುವ ಗಾದೆ ಈ ಕಪ್ಪೆಯನ್ನು ನೋಡಿಯೇ ಸೃಷ್ಟಿಸಿರಬಹುದು..! ಕೊಲಂಬಿಯಾದ ‘ಎಂಬರ’ (Embera) ಎಂಬ ಸ್ಥಳೀಯ ಜನರು ಕಾಡು ಪ್ರಾಣಿಗಳನ್ನು ಸುಲಭವಾಗಿ ಕೊಲ್ಲಲು ಬೇಟೆಗೆ ಬಳಸುವ ಬ್ಲೋಗನ್ ಡಾರ್ಟ್ ತುದಿಗೆ ಈ ಕಪ್ಪೆಯ ವಿಷವನ್ನು ಹಚ್ಚುವ ಪದ್ಧತಿ ಶತಮಾನಗಳಿಂದಲೂ ಇತ್ತು. ಹಾಗಾಗಿ ಈ ಕಪ್ಪೆಯು ‘ಪಾಯಿಸನ್ ಆರೋ ಫ್ರಾಗ್’ (Poison arrow frog), ‘ಗೋಲ್ಡನ್ ಡಾರ್ಟ್ ಫ್ರಾಗ್’ (Poison dart frog) ಎಂಬ ಹೆಸರುಗಳನ್ನೂ ಹೊಂದಿದೆ. ಇದಕ್ಕೆ ನೀಡಿರುವ ವೈಜ್ಞಾನಿಕ ಹೆಸರು ಫಿಲೋಬ್ಯಾಟ್ಸ್ ಟೆರ್ರಿಬಿಲಿಸ್ (Phyllobates terribilis).
ವಿಷಕಾರಿ ಅಥವಾ ವಿಷರಹಿತ ಇರಬಹುದು, ಪ್ರತಿಯೊಂದು ಪ್ರಭೇದಕ್ಕೂ ಪರಿಸರ ವ್ಯವಸ್ಥೆಯಲ್ಲಿ ಅದರದ್ದೇ ಆದ ಪ್ರಮುಖ ಪಾತ್ರ ಇದ್ದೇ ಇದೆ. ವಿಪರ್ಯಾಸದ ಸಂಗತಿ ಏನೆಂದರೆ ಹಲವಾರು ಸ್ಥಳೀಯ ಜೀವಿಪ್ರಭೇದಗಳನ್ನು ಹೊಂದಿರುವ ಜಗತ್ತಿನ 8 ಜೀವವೈವಿಧ್ಯ ಅತಿ ತಾಪತಾಣಗಳಲ್ಲಿ (Hottest Biodiversity Hotspots) ಒಂದಾದ ಭಾರತದ ಪಶ್ಚಿಮ ಘಟ್ಟದಲ್ಲಿ ಅನೇಕ ಪ್ರಭೇದಗಳು ವಿನಾಶದಂಚಿನಲ್ಲಿರುವಂತೆ ಕೋಲಂಬಿಯಾ ಮಳೆಕಾಡಿನ ಸ್ಥಳೀಯ ಪ್ರಾಣಿಯಾದ ಈ ವಿಷಕಪ್ಪೆಯ ಸಂತತಿಯೂ ಇದೀಗ ಅಪಾಯಕಾರಿ ಸ್ಥಿತಿಯಲ್ಲಿ ಇದೆ.
ಆಹಾರಕ್ಕಾಗಿ ನೊಣ, ಇರುವೆ, ಗೆದ್ದಲು, ಕ್ರಿಕೇಟ್ (ಒಂದು ಕೀಟ), ಜೀರುಂಡೆ ಮತ್ತು ಇತರ ಕೀಟಗಳನ್ನು ಬೇಟೆಯಾಡಿ ಬದುಕುವ ಈ ಕಪ್ಪೆಯ ವಿಷದ ಹಿಂದಿರುವ ರಹಸ್ಯ ಸ್ಪಷ್ಟವಾಗಿ ಇನ್ನೂ ತಿಳಿದು ಬಂದಿಲ್ಲ. ಅದನ್ನು ಬಯಲು ಮಾಡಲು ವಿಜ್ಞಾನಿಗಳ ಸಂಶೋಧನೆ ಮುಂದುವರಿದಿದೆ. ಯಾವುದೋ ಸಸ್ಯದ ವಿಷಯುಕ್ತ ಮಕರಂದವನ್ನು ಹೀರುವ ಕೀಟವೊಂದನ್ನು ತಿಂದು ಅದರಲ್ಲಿರುವ ವಿಷವು ಕಪ್ಪೆಯ ದೇಹವನ್ನು ಸೇರಿ ಶರೀರವೆಲ್ಲಾ ವಿಷಮಯವಾಗಬಹುದು ಎಂಬುವುದು ವಿಜ್ಞಾನಿಗಳ ಒಂದು ಊಹೆ. ಇದಕ್ಕೆ ಪೂರಕವಾಗಿ ಕೆಲವು ವಿಷಕಪ್ಪೆಗಳನ್ನು ಅವುಗಳ ಸ್ಥಳೀಯ ಆವಾಸಸ್ಥಾನದಲ್ಲಿರುವ ಕೀಟಗಳಿಂದ ಪ್ರತ್ಯೇಕಿಸಿ ಪಂಜರದಲ್ಲಿಟ್ಟು ಸಾಕಿದಾಗ ಅವುಗಳು ವಿಷರಹಿತವಾಗಿರುವ ಕುತೂಹಲಕಾರಿ ಅಂಶ ಇತ್ತೀಚೆಗೆ ಬೆಳಕಿಗೆ ಬಂದಿದೆ.
ದೈತ್ಯ ಆನೆ, ತಿಮಿಂಗಿಲ, ವನ್ಯಮೃಗ ಹುಲಿ, ಸಿಂಹ, ಚಿರತೆ, ವಿಷಕಾರಿ ನಾಗರಹಾವು, ಕಾಳಿಂಗ ಸರ್ಪವನ್ನೇ ಕಬಳಿಸಿ / ಪಳಗಿಸಿ ತನ್ನ ಪ್ರಯೋಜನಕ್ಕೆ ಬಳಸುವ ಮಾನವ ಬಂಗಾರದ ವಿಷಕಪ್ಪೆ ಎಷ್ಟೇ ವಿಷಯುಕ್ತವಾಗಿದ್ದರೂ ಬಿಡುವನೇ? ಬಂಗಾರದ ವಿಷಕಪ್ಪೆಯ ವಿಷವನ್ನು ಸಂಗ್ರಹಿಸಿ ಅದರಲ್ಲಿರಬಹುದಾದ ಔಷಧೀಯ ಗುಣಗಳನ್ನು ಪತ್ತೆಹಚ್ಚಲು ಸಂಶೋಧನೆಗಳು ನಡೆಯುತ್ತಿದ್ದು ಪ್ರಬಲ ನೋವು ನಿವಾರಕ (Painkiller) ಗುಣಾಂಶವನ್ನು ಹೊಂದಿರುವುದು ಪತ್ತೆಹಚ್ಚಲಾಗಿದೆ. ಬಂಗಾರದ ವಿಷ ಕಪ್ಪೆಯ ವಿಷದ ಸಂಭಾವ್ಯ ಔಷಧೀಯ ಗುಣಗಳನ್ನು ಅರಿತು ರಸಾಯನಶಾಸ್ತ್ರಜ್ಞರು ಅದರ ವಿಷವನ್ನು ಕೃತಕವಾಗಿ ಉತ್ಪಾದಿಸಲು ರಾಸಾಯನಿಕ ಕ್ರಿಯೆ (reaction) ಅಭಿವೃದ್ಧಿಪಡಿಸಿರುವುದು ಕಪ್ಪೆಯ ಸಂರಕ್ಷಣೆಯ ವಿಷಯದಲ್ಲಿ ಒಂದು ಸಂತಸದ ವಿಷಯ.
ನಮ್ಮ ಪುರಾಣ ಕಥೆಗಳಲ್ಲಿ ವಿಷಕನ್ಯೆಯರ ಬಗ್ಗೆ ಕೇಳಿದ್ದೇವೆ. ರಾಜ ಮಹಾರಾಜರು ತಮ್ಮ ವೈರಿಗಳನ್ನು ಕೊಲ್ಲುವ ತಂತ್ರವಾಗಿ ಸುಂದರವಾಗಿರುವ ಹೆಣ್ಣು ಮಗುವನ್ನು ದತ್ತು ಪಡೆದು ಸ್ವಲ್ಪಸ್ವಲ್ಪವೇ ವಿಷವನ್ನು (ಪಾದರಸ) ಉಣಿಸಿ ಮಗು ಬೆಳೆದು ದೊಡ್ಡವಳಾಗುತ್ತ ಹೋದಂತೆ ದೇಹವೆಲ್ಲ ವಿಷಮಯವಾಗಿಸಿ ವಿಷಕನ್ಯೆಯರನ್ನಾಗಿ ಮಾಡಲಾಗುತಿತ್ತು. ಈ ವಿಷಕನ್ಯೆಯರನ್ನು ಶತ್ರು ರಾಜರುಗಳ ಜೊತೆಗೆ ಪ್ರಣಯದಾಟಕ್ಕೆ ಬಿಟ್ಟು ಅವರನ್ನು ಕೊಲ್ಲುತ್ತಿದ್ದರು ಎಂಬ ಪ್ರತೀತಿ ಇದೆ. ವಿಷಕನ್ಯೆಯರು ಇದ್ದಿದ್ದು, ಸತ್ಯವೋ ಸುಳ್ಳೋ ಎಂಬುವುದು ನಮಗೆ ಗೊತ್ತಿಲ್ಲಾ, ಆದರೆ ಅಂತಹುದೇ ಪರಿಕಲ್ಪನೆಯ ಪ್ರಾಣಿಯೊಂದು ನಿಸರ್ಗದಲ್ಲಿ ಇರುವುದಂತೂ ಸತ್ಯ…!
ಚಿನ್ನದ ಬಣ್ಣದ ವಿಷಕಪ್ಪೆಯ ಸಾಕ್ಷ್ಯಚಿತ್ರವನ್ನು ನೋಡಿ ಆನಂದಿಸಲು ಇಲ್ಲಿ ಕ್ಲಿಕ್ ಮಾಡಿ.
Photo by Ruben Engel on Unsplash
ಕಂಡು ಕೇಳಿರದ ಬಂಗಾರದ ವಿಷಕಪ್ಪೆ ಬಗ್ಗೆ ವಿಸ್ತಾರವಾದ ಲೇಖನ. ಆಶ್ಚರ್ಯ ಆಯ್ತು.
Thank you so much sir for your encouraging words.
Informative 👍
ಲೇಖನ ಓದಿ ತುಂಬಾ ಆಶ್ಚರ್ಯ ಆಯಿತು.ಪ್ರಕೃತಿ ತನ್ನೊಡಲಲ್ಲಿ ಏನೇನು ವಿಚಿತ್ರ ಗಳನ್ನ ಬಚ್ಚಿಟ್ಟಿದೆಯೊ ?
ಡಾ.ಪ್ರಶಾಂತ ನಾಯ್ಕ ಅವರು ವಿಷ ಕಪ್ಪೆಗಳ ಬಗ್ಗೆ ತಿಳಿಸಿರುವ ಮಾಹಿತಿ ಬಹಳ ಚೆನ್ನಾಗಿದೆ.
ಉತ್ತಮ ಮಾಹಿತಿ. ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ
Thank you Dr. Prashant for your informative article…
ಇದುವರೆಗೆ ತಿಳಿಯದೆ ಇರುವ ವಿಷಯುಕ್ತ ಕಪ್ಪೆಯ ಬಗ್ಗೆ ಉಪಯುಕ್ತ ಮಾಹಿತಿ ತಿಳಿದ ಹಾಗಾಯ್ತು. ಒಳ್ಳೆಯ ಲೇಖನ 👌👌
ಪ್ರತೀ ಪ್ಯಾರಾದಲ್ಲೂ ಕುತೂಹಲ ಕೆರಳಿಸುವ ಹೊಸ ಮಾಹಿತಿ ಇದೆ ಸರ್. ಲೇಖನ ಚೆನ್ನಾಗಿ ಮೂಡಿಬಂದಿದೆ ಸರ್.
I got scared initially thinking that this frog may be from Western ghats. Good to know about this special frog and thanks to Dr. Prashant for writing on this.
ಸರ್ ಒಂದು ವಿಶೇಷವಾದ ಮಾಹಿತಿ ನೀಡುವುದರ ಮೂಲಕ ಓದುಗರಲ್ಲಿ ಆಶ್ಚರ್ಯ ಕುತೂಹಲ ಮುಡಿಸಿದ್ದಿರಿ. ಇತರಹದ ವಿಷಯಗಳನ್ನು ತಿಳಿಯುವುದರಿಂದ ಮನುಷ್ಯರು ಅಪಾಯದಿಂದ ಪಾರಾಗಬಹುದು ಧನ್ಯವಾದಗಳು ಸರ್.
In this article peoples are possible to be knowing about poisonous frogs. Well informative article……. I hope such many more zoological research article from you. Better luck.
ಜೀವಜಗತ್ತಿನ ವಿಸ್ಮಯಗಳಲ್ಲಿ ಒಂದಾದ ಮೈ ತುಂಬಾ ವಿಷ ತುಂಬಿಕೊಂಡಿರೋ ಬಂಗಾರದ ವಿಷಕಪ್ಪೆಯ ವಿಷಯವನ್ನು ವಿಶದವಾಗಿ ಸ್ವಾರಸ್ಯಕರವಾಗಿ ತಿಳಿಸಿರುವ ಡಾ. ಪ್ರಶಾಂತರ ಪ್ರಯತ್ನ ಅಭಿನಂದನೀಯ.
ತುಂಬಾ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುತ್ತದೆ.ಲೇಖಕರಿಗೆ ಅಭಿನಂದನೆಗಳು.
ಕಂಡು,ಕೇಳರಿಯದ ಅನೇಕ ಮಾಹಿತಿಗಳನ್ನು ನೀಡುತ್ತಾ ಬರುತ್ತಿದ್ದೀರಿ . ವಿಷಕಾರಿ ಕಪ್ಪೆಗಳ ಬಗ್ಗೆ ಕೇಳಿದ್ದೆ ಆದರೆ ಇಷ್ಟೊಂದು ಮಾಹಿತಿ ಗೊತ್ತಿರಲಿಲ್ಲ. ಪ್ರತಿಯೊಂದು ಜೀವಿಗೂ ಬದುಕಲು ಪ್ರಕೃತಿದತ್ತವಾದ ಸ್ವಾತಂತ್ರ್ಯ ಇದೆ. ಮನುಷ್ಯ ಈ ಕಪ್ಪೆಯನ್ನು ತನ್ನ ಸ್ವಾರ್ಥಕಾಗಿ ಬಳಸದಿದ್ದರೆ ಸಾಕು.
ಉತ್ತಮ ಲೇಖನ ಪ್ರಶಾಂತ ಅಭಿನಂದನೆಗಳು.
Excellent presentation of Scietific Article in Common Language for All the people able read and understand. Author Professor P N good writing skills has proved.
Thank you Sir. Informative and presented well in Kannada.