19.9 C
Karnataka
Sunday, September 22, 2024

    ಭಾವನೆಗಳಿಗೆ ಯಾವುದೇ ರಾಜಕೀಯ,ಆಡಳಿತಾತ್ಮಕ ಕಾರಣ ಕೊಟ್ಟು ಸಂತೈಸುವುದು ಕಷ್ಟ

    Must read

    ಊರು ..ಬೊಮ್ಮಘಟ್ಟ,ತಾಲೂಕು… ಸಂಡೂರು,ಜಿಲ್ಲಾ…ಬಳ್ಳಾರಿ,ರಾಜ್ಯ…..ಮೈಸೂರು,ದೇಶ…ಭಾರತ.

    ಯಾರೇ ಮನೆಗೆ ಬರಲಿ, ಅಪ್ಪ ನನ್ನನ್ನು ಎತ್ತಿಕೊಂಡು ಹೊರಗಡೆ ಹೋದಾಗ ಯಾರಾದ್ರು ಸಿಕ್ಕರೂ,ಮಂಜೂ ನಮ್ಮೂರು ಯಾವ್ದು ಅಂತ ಶುರು ಮಾಡಿದ್ರೆ, ನಾನು ನಿಲ್ಲಿಸ್ತಿದ್ದಿದ್ದೆ …ಭಾರತ ಅಂತ,ಕೇಳಲಿ ಬಿಡಲಿ!! ಹೇಳುವಾಗ ಅಪ್ಪನಿಗೆ ಒಂಥರಾ ಖುಷಿ ಆದ್ರೆ, ಕೇಳಿಸಿಕೊಳ್ಳುವವರಿಗೆ ಆಶ್ಚರ್ಯಭರಿತ ಖುಷಿ,ಕಾರಣ ತೊದಲು ನುಡಿಗಳಲ್ಲಿಯೇ ಹೇಳುತ್ತಿದ್ದೆ ನಾನು. ತುಂಬಾ ದಿನಗಳವರೆಗೆ ಹೇಳಿದ್ದರಿಂದಲೋ ಅಥವಾ ತುಂಬಾ ಎಳೆ ತನದಲ್ಲೇ ಹೇಳಿಕೊಟ್ಟಿದ್ದರಿಂದಲೋ ಊರು, ತಾಲೂಕು, ಜಿಲ್ಲಾ,ರಾಜ್ಯ, ದೇಶಗಳ ಮೇಲೆ ಹೇಳಲಾರದ ಮಮಕಾರ.

    ಮೂರ್ನಾಲ್ಕನೆ ತರಗತಿಗೆ ಬಂದಾಗ ಮೊದಲಾಗಿ ನಾನು ಆಗ ತಾನೇ ಕರ್ನಾಟಕ ಅಂತ ಮರುನಾಮಕರಣ ಮಾಡಿಸಿಕೊಂಡಿದ್ದ ಮೈಸೂರು ರಾಜ್ಯದ ಭೂಪಟವನ್ನು ಶಾಲೆಯಲ್ಲಿ ನೋಡಿದ್ದು. ರಂಗು ರಂಗಿನ, ಏನೋ ಮುದಕೊಡುವ ಬಣ್ಣಗಳ ವಾಸನೆಯೊಂದಿಗೆ ಕೆಳಗೆ,ಮೇಲೆ ಕೋಲುಗಳನ್ನು ಅಂಟಿಸಿಕೊಂಡು,ಸುರುಳಿಯಾಗಿ ಸುತ್ತಲ್ಪಡುತ್ತಿದ್ದ ರಾಜ್ಯ,ದೇಶದ ನಕ್ಷೆಗಳು ನಮ್ಮೂರ ಶಾಲೆಗೆ ಬಂದಿದ್ದವು. ಅವುಗಳ ತಲೆಬರಹ, ಅಡಿಯಲ್ಲಿ ಕಪ್ಪು ಬಿಳುಪಿನ ಅಳತೆ ಮಾಪಕದ ಸಂಕೇತ ನನಗೆ ಬಹು ಆಕರ್ಷವಾಗಿ ಕಾಣುತ್ತಿತ್ತು. ಅವುಗಳ ಜೊತೆ ಧೂಮಪಾನ, ಮಧ್ಯಪಾನ ಮಾಡಬಾರದು,ಜೂಜು ಆಡಬಾರದು ಅನ್ನುವ ಸಂದೇಶ ಹೇಳುವ ಒಂದು ಪಟವೂ ಇತ್ತು. ಅವುಗಳ ಬಣ್ಣದ ವಾಸನೆ ನನಗೆ ಇಂದಿಗೂ ಮೂಗಲ್ಲಿ ಕುಳಿತ ಹಾಗಿದೆ. ಶಾಲಾ ನಿರೀಕ್ಷಕರು ಬರುವ ದಿನಗಳಲ್ಲಿ ಒಂದು ಕೊಠಡಿಯಲ್ಲಿ ಆಫೀಸ್ ರೂಮಿನಲ್ಲಿ ಇದ್ದ ಎಲ್ಲ ಪಟಗಳನ್ನು ಹಾಕಿರುತ್ತಿದ್ದರು, ಅದರಲ್ಲಿ ಕನ್ನಡ ವರ್ಣಮಾಲೆಯ ಪಟ ನನಗೆ ಅತೀ ಸುಂದರವಾಗಿ ಕಾಣುತ್ತಿತ್ತು. ಯಾಕೆ ಅಂತ ಗೊತ್ತಿಲ್ಲ. ಈಗಲೂ ಹಲವಾರು ಅಕ್ಷರ ನೋಡಿದ್ರೆ ನನಗೆ ಅಪ್ಪನ ನೆನಪಾಗುತ್ತೆ. ಬಳಪ,ಸ್ಲೇಟು ಸವೆಯುವ ಹಾಗೆ ತಿದ್ದಿಸಿ, ಕಲಿಸಿದ್ದರಿಂದಲೋ ಏನೋ.

    ಹಾಗೆ ಒಂದು ಮಧ್ಯಾಹ್ನ ದ್ಯಾಮಣ್ಣ ಮೇಷ್ಟ್ರು ಕರ್ನಾಟಕ ರಾಜ್ಯ ನಕ್ಷೆ ಗೋಡೆಗೆ ನೇತು ಹಾಕಿ ಕೋಲು ಹಿಡಿದು ….ನಡೂವೆ ಕುಂತ ಮೊಲ ಇದ್ದಂಗ ಐತಲ್ಲ,ಕೆಂಪು ಬಣ್ಣದಾಗ ಐತಿ, ಕಾಣ್ತಾತೇನು, ಇದೇ ನೋಡ್ರಿ ನಮ್ಮ ಬಳ್ಳಾರಿ ಜಿಲ್ಲೆ ಅಂದಿದ್ರು! ಉತ್ತರಕ್ಕೆ ಈ ನೀಲಿ ಗೆರೆ ಐತಲ್ಲ, ಇದು ತುಂಗಭದ್ರಾ ನದಿ ಅಂದಿದ್ದು ನನಗೆ ಭಯಂಕರ ಕುತೂಹಲಕರ ವಿಷಯ ಆಗಿತ್ತು. ಮನೆಗೆ ಬಂದು ಅಪ್ಪನನ್ನು ಇನ್ನಿಲ್ಲದಂತೆ ಗೋಳಾಡಿಸಿದ್ದೆ, ಬಳ್ಳಾರಿ ಜಿಲ್ಲೆ ಕುಂತ ಮೊಲ ಇದ್ದಂಗೆ ಯಾಕೈತಿ ಹೇಳು ಅಂತ!!

    ಅಪ್ಪ ನನಗೆ ನಕ್ಷೆ ಅಂದ್ರೆ ಏನು, ಆ ಕಪ್ಪು ಬಿಳುಪಿನ ಅಳತೆಯ ಮಾಪಕ ಏನು ಅಂತ ತಿಳಿಸಿ ಹೇಳುವಲ್ಲಿ ಸಾಕು ಸಾಕಾಗಿತ್ತೇನೋ, ನನಗೆ ಅರಿವಾಗದ ವಿಚಿತ್ರ ಕುತೂಹಲ. ಗೊತ್ತಿಲ್ಲದೆಯೇ ಬರೀ ಬಳ್ಳಾರಿ ಜಿಲ್ಲೆ ಅಲ್ಲ, ಕರ್ನಾಟಕ, ಭಾರತದ ನಕ್ಷೆಗಳೂ ಸುಂದರವಾಗಿ ಕಾಣುತ್ತಿದ್ದವು! ನನ್ನ ಜಿಲ್ಲೆಯ ಆಕಾರ ಬೇರೆ ಜಿಲ್ಲೆಗಳಿಗಿಂತಲೂ,ರಾಜ್ಯದ ಆಕಾರ ಬೇರೆ ರಾಜ್ಯಗಳ ಅಕಾರಕ್ಕಿಂತಲೂ,ದೇಶದ ಆಕಾರ ಬೇರೆ ದೇಶಗಳ ಅಕಾರಕ್ಕಿಂತಲೂ ಮನೋಹರವಾಗಿ ಕಾಣುತ್ತಿತ್ತು, ಈಗಲೂ ಸಹ! ಮುಂದೆ ನಮ್ಮ ಜಿಲ್ಲೆಯ ಗಡಿಗಳನ್ನು ಹೇಳಿ ಅಂದ್ರೆ, ಉತ್ತರಕ್ಕೆ ತುಂಗಭದ್ರಾ ನದಿ/ರಾಯಚೂರು ಜಿಲ್ಲೆ, ದಕ್ಷಿಣಕ್ಕೆ ಚಿತ್ರದುರ್ಗ ಜಿಲ್ಲೆ, ಪೂರ್ವಕ್ಕೆ ಆಂಧ್ರ ಪ್ರದೇಶ,ಪಶ್ಚಿಮಕ್ಕೆ ಧಾರವಾಡ ಜಿಲ್ಲೆ ಅಂತ ಕೈಕಟ್ಟಿಕೊಂಡು ಪಟ ಪಟ ಅಂತ ಹೇಳ್ತಿದ್ದೆವು. ತಾಲೂಕು ಎಷ್ಟು,ಯಾವುವು ಅಂದ್ರೆ, 7, ಸಿರುಗುಪ್ಪ, ಬಳ್ಳಾರಿ, ಸಂಡೂರು,ಕೂಡ್ಲಿಗಿ,ಹೊಸಪೇಟೆ, ಹಡಗಲಿ,ಕುರುಗೋಡು ಅಂತಿದ್ವಿ.

    ನಂತರ ಕೂಡ್ಲಿಗಿ ತಾಲೂಕು ವಿಭಜನೆ ಹೊಂದಿ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ತಾಲೂಕುಗಳಾದವು. ಹೊಸಪೇಟೆ ತಾಲೂಕಿನಿಂದ ಕಂಪ್ಲಿ ತಾಲೂಕಿನ ಉದಯ ಆಗಿತ್ತು. ಮುಂದೆ ಹರಪನಹಳ್ಳಿ ದಾವಣಗೆರೆ ಜಿಲ್ಲೆಯ ಭಾಗವಾಗಿ ಬಳ್ಳಾರಿಯಿಂದ ಬೇರ್ಪಟ್ಟಿತ್ತು,ಮತ್ತೆ ಬದಲಾದ ಸನ್ನಿವೇಶದಲ್ಲಿ ಮರಳಿ ಬಳ್ಳಾರಿಗೆ ಬಂದಿತ್ತು. ಬಂದು ಬಹಳ ದಿನಗಳಾಗಲಿಲ್ಲ,ಈಗ ವಿಜಯನಗರ (ಹೊಸಪೇಟೆ) ಜಿಲ್ಲೆಗೆ ಸೇರಿದೆ. ಪಾಪ ಹರಪನಹಳ್ಳಿಯ ಮಕ್ಕಳು ಜಿಲ್ಲೆಯ ವಿಷಯದಲ್ಲಿ ನಮ್ಮಂತೆ ಹೆಮ್ಮೆಯಿಂದ ಯಾವುದರ ಹೆಸರು ಹೇಳಬೇಕೋ?

    ರಾಜರ ಕಾಲದಿಂದಲೂ ನೈಸರ್ಗಿಕವಾದ, ಭೌಗೋಳಿಕವಾದ ನದಿ,ಬೆಟ್ಟ ಆಯಾಯ ರಾಜ್ಯದ ಗಡಿರೇಖೆ ಅಂತ ಗುರುತಿಸಿಕೊಳ್ಳುತ್ತಿತ್ತು ಅಷ್ಟೇ ಅಲ್ಲ ಈಗಲೂ ಹಲವಾರು ಗ್ರಾಮಗಳ ಸರಹದ್ದೂ ಆಗಿವೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ,ಸ್ವಾತಂತ್ರ್ಯಾನಂತರ ಭಾಷಾವಾರು ವಿಭಜನೆಗಳಾದವು.ಆಡಳಿತಕ್ಕಾಗಿ, ರಾಜಕೀಯಕ್ಕಾಗಿ ಮತ್ತೇನೂ ಕಾರಣಗಳಿಗೆ ವಿಭಜನೆ ಮಾಡ್ತಾರಲ್ಲಾ ಇವರಿಗೆ ಪ್ರಜೆಗಳ ನೋವು ಅರ್ಥ ಆಗುತ್ತಾ? ಬಳ್ಳಾರಿ ಆಂಧ್ರಕ್ಕೆ ಸೇರಬೇಕಾ ಅಥವಾ ಕರ್ನಾಟಕದಲ್ಲೇ ಇರಬೇಕಾ ಅಂತ ಇಲ್ಲಿ ಮತದಾನ ಆಗಿರುವ ವಿಷಯ ಬಹಳ ಜನರಿಗೆ ಗೊತ್ತಿಲ್ಲ ಅನ್ಸುತ್ತೆ. ಇಲ್ಲದಿದ್ದಲ್ಲಿ ಕೆಲವಷ್ಟೇ ಪ್ರಭಾವಿತರ ಅನ್ನಿಸಿಕೆಯಂತೆ ಬಳ್ಳಾರಿ ಆಂಧ್ರದ ಭಾಗವಾಗಿ ಬಿಡ್ತಿತ್ತು.

    ಈಗ ಕರ್ನಾಟಕ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ಹೊಸಪೇಟೆಯನ್ನು ಕೇಂದ್ರವಾಗಿಸಿ ವಿಜಯನಗರ ಜಿಲ್ಲೆ ಅಂತ ಹೊಸ ಜಿಲ್ಲೆಯನ್ನು ಹುಟ್ಟು ಹಾಕಿದೆ. ಕುಳಿತ ಮೊಲದ ಆಕಾರದಲ್ಲಿದ್ದ ನನ್ನ ಜಿಲ್ಲೆಯನ್ನು ಸರಿಯಾಗಿ ಬೆನ್ನಮೇಲಿಂದ ಸೀಳಿದ ಹಾಗೆ ಆಗಿದೆ. ಮೂಲ ಬಳ್ಳಾರಿ ಜಿಲ್ಲೆಯಲ್ಲೀಗ 5 ತಾಲ್ಲೂಕುಗಳು. ಸಿರುಗುಪ್ಪ, ಬಳ್ಳಾರಿ,ಸಂಡೂರು,ಕೂಡ್ಲಿಗಿ,ಕುರುಗೋಡು. ಹೊಸದಾದ ವಿಜಯನಗರಕ್ಕೆ 6 ತಾಲ್ಲೂಕುಗಳು. ಹೊಸಪೇಟೆ, ಹಗರಿಬೊಮ್ಮನಹಳ್ಳಿ,ಹಡಗಲಿ,ಹರಪನಹಳ್ಳಿ,ಕಂಪ್ಲಿ,ಕೊಟ್ಟೂರು. ಹೆಚ್ಚು ಕಡಿಮೆ ಉತ್ತರ ಬಳ್ಳಾರಿ ಜಿಲ್ಲೆ , ದಕ್ಷಿಣ ಬಳ್ಳಾರಿ ಜಿಲ್ಲೆ ಎನ್ನುವಂತೆ ವಿಭಜಿಸಿದ್ದಾರೆ. ಏನೋ ಒಂಥರಾ ನೋವಾಗುತ್ತೆ ಕಣ್ರೀ… ಹಾಗೆ ನೋಡಿದರೆ ಬರೀ ನಕ್ಷೆಯಲ್ಲಿ ಗೆರೆ ಎಳೆದು,ಬೇರೆ ಬಣ್ಣದಿಂದ ಗುರುತಿಸಿದ್ದಾರೆ ಬಿಟ್ಟರೆ ಇಲ್ಲೇನೂ ಬಂದು ಬೇಲಿ ಹಾಕಿ ವಿಭಜಿಸಿಲ್ಲ. ಆದ್ರೂ ಹೇಳಿಕೊಳ್ಳಲು ಆಗದಂತಹ ಸಂಕಟ. ಇಷ್ಟು ದಿನ ಹೆಮ್ಮೆಯಿಂದ ಹಂಪಿ ನನ್ನ ಜಿಲ್ಲೆಯಲ್ಲಿದೆ,ಒಮ್ಮೆ ಬನ್ನಿ, ತಿರುಗಾಡುವ ಅಂತ ಎದೆಯುಬ್ಬಿ ಹೇಳುತ್ತಿದ್ದೆ. ನಾಳೆಯಿಂದ ಹಂಪಿ ಈಗ ನನ್ನ ಜಿಲ್ಲೆಯಲ್ಲಿ ಇಲ್ಲ, ತುಂಗಭದ್ರಾ ನದಿ, ಆಣೆಕಟ್ಟು ನನ್ನ ಜಿಲ್ಲೆಯಲ್ಲಿ ಇಲ್ಲ ಎನ್ನುವುದನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ. ಕಾರಣಗಳನ್ನು ಚರ್ಚಿಸಿ, ಸಮರ್ಥನೆ,ಅಸಮರ್ಥನೆ ನನಗೆ ಅಸಂಭದ್ದ ಎನಿಸುತ್ತಿದೆ. ಯಾರೋ ಕೆಲವು ಹಿತಾಸಕ್ತಿಗಳ, ವೈಯಕ್ತಿಕ ಲಾಭಕ್ಕೆ ಇಂತಹ ವಿಭಜನೆಗಳು ಅನಿವಾರ್ಯ ಎಂಬುದನ್ನು ಗಮನಿಸಿದ್ದೇವೆ. ಎರಡು ಹುಲಿಗಳು ಒಂದೇ ಕಾಡಲ್ಲಿ ಇರಲು ಸಾಧ್ಯವಿಲ್ಲ ಎನ್ನುವುದೂ ಇಂತಹ ವಿಭಜನೆಗೆ ಕಾರಣವಾಗಿದೆ. ಯಾರನ್ನೋ ತುಳಿಯಲೊ,ಮತ್ಯಾರನ್ನೋ ಬೆಳೆಸಲೊ ಈ ಬೆಳವಣಿಗೆಗಳು ಸಹಾಯಕವಾಗಿವೆಯೇ ಹೊರತು, ಜನಹಿತ, ಸುಗಮ ಆಡಳಿತ ಎನ್ನುವ ಕಾರಣಗಳು ತುಂಬಾ ಬಾಲಿಶವಾಗಿ ತೋರುತ್ತವೆ.

    ಇಂತಹ ಬೆಳವಣಿಗೆಗಳು ಆಗಿ, ನಮ್ಮ ಮಧ್ಯೆಯೇ ವರ್ಣಿಸಲಾಗದ ಗೋಡೆಗಳು,ಬೇಲಿಗಳು ಹುಟ್ಟಿಕೊಂಡು ಮೂಕವಾಗಿ ರೋಧಿಸುವ ಮನಸ್ಸುಗಳಿಗೆ , ನಮಗೆ ಗೊತ್ತಿಲ್ಲದೇ ಒಂದು ರೀತಿಯ ಅವಿನಾಭಾವ ಸಂಬಂಧ ನಮ್ಮಲ್ಲಿ ಬೆಳೆದು ಬಿಟ್ಟಿರುತ್ತೆ. ಈ ನಕ್ಷೆಗಳ ಕಡೆಗೆ ನೋಡಿದಾಗೊಮ್ಮೆ ಮನಸ್ಸು ಅಳುತ್ತೆ ಕಣ್ರೀ. ನಮ್ಮ ದೇಹದ ಯಾವುದೋ ಅಂಗವೇ ಬೇರ್ಪಟ್ಟ ಸಂಕಟ ಮನದಲ್ಲಿ. ಇಂತಹ ಭಾವನೆಗಳಿಗೆ ಯಾವುದೇ ರಾಜಕೀಯ,ಆಡಳಿತಾತ್ಮಕ ಕಾರಣ ಕೊಟ್ಟು ಸಂತೈಸುವುದು ಕಷ್ಟ. ಹೊಸ ಜಿಲ್ಲೆ ಘೋಷಿಸಿದಾಗಿನಿಂದ ನಾನೇ ಎಷ್ಟು ಸಮಾಧಾನ ಪಡಲು ಪ್ರಯತ್ನಿಸಿದ್ದೀನಿ ಗೊತ್ತಾ?…ಅಯ್ಯೋ ಆಗಿರುವುದೇನು, ಮೊದಲೇ ಇದ್ದ ಗೆರೆಗಳಿಗೆ ಸ್ವಲ್ಪ ದಪ್ಪನಾದ, ಎದ್ದು ಕಾಣುವಂತಹ ಬಣ್ಣ ಬಳಿದಿದ್ದಾರೆ,ಮತ್ತೇನೂ ಆಗಿಲ್ಲ. ಯಾವಾಗಲೂ ಇರುವಂತೆಯೇ ಎಲ್ಲಾ ಇದೆ ಅಂತ ಅಂದು ಕೊಂಡರೂ ಎಂತಹುದೋ ಅವ್ಯಕ್ತ ರೋದನ ಮನಸ್ಸಲ್ಲಿ. ಅದು ನಮ್ಮನ್ನಾಳುವವರಿಗೆ ಅರ್ಥ ಆಗಲ್ಲ ಬಿಡಿ. ನಕ್ಷೆಯಲ್ಲಿ ಇದ್ದ ಗೆರೆಗಳಿಗೇ ಎದ್ದು ಕಾಣುವಂತೆ ಕಪ್ಪು ಬಣ್ಣ ಬಳಿದಾಗಲೆಲ್ಲ ನನ್ನಂತಹ ಹಲವಾರು ತೆಳುಗೆರೆಯ ಮನಸ್ಸುಗಳಿಗೆ ಆಗುವ ನೋವನ್ನು ಯಾರು ಗಮನಿಸಿಯಾರು?!

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    3 COMMENTS

    1. ಹಂಪಿ ಬಳ್ಳಾರಿಯ ಹೆಗ್ಗುರುತು, ಅದೇನು ಇನ್ನು ಮನಸ್ಸು ಒಪ್ಪುತ್ತಿಲ್ಲ ಹಂಪಿ ಹಾಗೂ ಹೊಸಪೇಟೆ ವಿಭಜನೆ.
      ಆದರೆ ಕಾಲ, ನಿಯಮಕ್ಕನುಸಾರ ಬದಲಾವಣೆ ಸಹಜ ಅಂದುಕೊಂಡು ನಮ್ಮ್ಮಷ್ಟಕ್ಕೆ ಸಮಾಧಾನ ಮಾಡಿಕೊಳ್ಳಬಹುದು ಅಷ್ಟೇ.
      ಲೇಖನದ ಸಾರ ತುಂಬಾ ಚೆನ್ನಾಗಿದೆ.

    2. ನಿಮ್ಮ ಲೇಖನ ಓದಿದೆ.ಬಳ್ಳಾರಿ ಜಿಲ್ಲೆ ವಿಭಾಗವಾದರೆ ತೆಲುಗರ ಪ್ರಭಾವ ಹೆಚ್ಚಾಗಿ ಕನ್ನಡ ಭಾಷೆ,ಕನ್ನಡಿಗರು ಅಲ್ಪಸಂಖ್ಯಾತ ರಾಗುವುದರಲ್ಲಿ ಸಂದೇಹವಿಲ್ಲ ಅಲ್ಲವೇ.?ಅನೇಕ ಜನರ ತ್ಯಾಗ ದಿಂದ ಏಕೀಕರಣವಾಗಿ,1.10.1953ರಲ್ಲಿ ಮೈಸೂರು ರಾಜ್ಯ ಕ್ಕೆ ಸೇರಿತು.ಅನಕೃ ಅವರು ವೆಲ್ ಕಂ ಬಳ್ಳಾರಿ ಎಂಬ ಲೇಖನ ಬರೆದು,ಬಳ್ಳಾರಿ ಜಿಲ್ಲೆಯ ನ್ನು ಕೊಂಡಾಡಿದ್ದಾರೆ.
      ಈ ವಿಭಜನೆಯ ಪ್ರಭಾವ ಬೇರೆ ಜಿಲ್ಲೆಗೂ ಹರಡುವುದರಲ್ಲಿ ಸಂಶಯವಿಲ್ಲ. ಜೇನುಗೂಡಿಗೆ ಕಲ್ಲು ಹೊಡೆದಂತೆ.!!!

    3. Ballari=hampi
      Ballari=sri krishna devaraya

      This is identity of ballari

      Why can’t they just rename.ballari as vijaynagar district
      There ends the matter🤔

    LEAVE A REPLY

    Please enter your comment!
    Please enter your name here

    Latest article

    error: Content is protected !!