16.7 C
Karnataka
Sunday, November 24, 2024

    ಸ್ವದೇಶಿ ಕ್ರಾಂತಿಯ ಕಿಡಿ ಹೊತ್ತಿದ ಆ ದಿನ

    Must read

    ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಪ್ರಖರ ಚಿಂತಕ ವಿನಾಯಕ ದಾಮೋದರ ಸಾವರ್ಕರ್ ಬಗ್ಗೆ ಅಜ್ಞಾತವಾಗಿ ಉಳಿದಿರುವ ಸಂಗತಿಗಳೇ ಹೆಚ್ಚಾಗಿವೆ. ಸ್ವತಂತ್ರ ಭಾರತದ ಬಗ್ಗೆ ತಮ್ಮದೇ ಆದ ವಿಶಿಷ್ಟ ಪರಿಕಲ್ಪನೆಗಳನ್ನು ಇಟ್ಟುಕೊಂಡಿದ್ದ ಸಾವರ್ಕರ್, ತಮ್ಮ ನಿಷ್ಠುರ ನಿಲುವುಗಳಿಗೆ ಹೆಸರಾಗಿದ್ದವರು.

    ಇಂತಹ ಸಾವರ್ಕರ್ ಬಗ್ಗೆ ಬಿ.ಎಸ್.ಜಯಪ್ರಕಾಶ ನಾರಾಯಣ ಅನುವಾದಿಸಿ, ವಸಂತ ಪ್ರಕಾಶನ ಪ್ರಕಟಿಸುತ್ತಿರುವ ‘ಸಾವರ್ಕರ್: ಹಿಂದುತ್ವದ ಜನಕನ ನಿಜಕತೆ’ ಎನ್ನುವ ಮಹತ್ತ್ವದ ಕೃತಿಯು ನ.೨೮ರಂದು ಬಿಡುಗಡೆಯಾಗುತ್ತಿದೆ. ಸಾವರ್ಕರ್ ಹೆಸರು ನಾನಾ ಕಾರಣಗಳಿಗಾಗಿ ಚಾಲ್ತಿಯಲ್ಲಿರುವ ಈ ಸಂದರ್ಭದಲ್ಲಿ ಅವರನ್ನು ಕುರಿತ ಓದು, ಪ್ರೇರಣಾದಾಯಕವಾಗುವುದರಲ್ಲಿ ಸಂಶಯವಿಲ್ಲ. ಈ ಕೃತಿಯ ಅಧ್ಯಾಯವೊಂದರ ಆಯ್ದ ಭಾಗ ಇಲ್ಲಿದೆ.

    ನಾಸಿಕ್‌ನಲ್ಲಿ ಓದುತ್ತಿದ್ದ ಸಾವರ್ಕರ್ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ೧೯೦೨ರ ಫೆಬ್ರವರಿಯಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜಿಗೆ ಹೋದರು. ಈ ಸಂದರ್ಭದಲ್ಲಿ ಅವರು, ತಮ್ಮ ನೇತೃತ್ವದ ಮಿತ್ರಮೇಳ ಸಂಘಟನೆಯು ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆಗಳೇನೆಂದು ಸಮಾಧಾನವಾಗಿ ಅಥವಾ ಸಂತೃಪ್ತಿಯ ಭಾವನೆಯಿಂದ ಹಿಂದಿರುಗಿ ನೋಡಿದರು. ನಿಜ ಹೇಳಬೇಕೆಂದರೆ, ಆಗ ಮಿತ್ರಮೇಳ ಸಂಘಟನೆಯು ಅದ್ಭುತವೆನ್ನುವಂಥ ಏನನ್ನೂ ಮಾಡಿರಲಿಲ್ಲ. ಆದರೆ, ಒಂದು ಕ್ರಾಂತಿಕಾರಿ ಸಂಘಟನೆಯು ಬೆಳೆಯಲು ಬೇಕಾದ ಮೂಲಭೂತ ಕೆಲಸಗಳನ್ನು ಅದು ಮಾಡಿತ್ತು. ಅಂದರೆ, ನಾಸಿಕ್ ಜಿಲ್ಲೆಯಲ್ಲಿ ಅದು ಆ ಕಾಲಕ್ಕೆ ಅಗತ್ಯವಾದ ಚೈತನ್ಯವನ್ನು ಬಡಿದೆಬ್ಬಿಸಿತ್ತಲ್ಲದೆ, ಬ್ರಿಟಿಷರ ವಿರುದ್ಧ ಸಂಚಲನವನ್ನು ಸೃಷ್ಟಿಸಿತ್ತು.

    ಆಗಿನ್ನೂ ನಮ್ಮ ದೇಶದಲ್ಲಿ ‘ಅಸ್ಪೃಶ್ಯತೆ’ಯ ವಿಚಾರ ಮುನ್ನೆಲೆಗೆ ಬಂದಿರಲಿಲ್ಲ. ಆದರೂ ಬೇರೆಬೇರೆ ಜಾತಿಗಳ ಜನರು ಜೊತೆಯಲ್ಲಿ ಕೂತು ಊಟ ಮಾಡುತ್ತಿರಲಿಲ್ಲ. ಆದರೆ, ಮಿತ್ರಮೇಳದ ಸದಸ್ಯರಾಗಿದ್ದ ಬ್ರಾಹ್ಮಣರು, ಕ್ಷತ್ರಿಯರು (ಪ್ರಭುಗಳು), ವೈಶ್ಯರು (ವಣಿಗಳು) ಮತ್ತು ಮರಾಠರು ಈ ಸಂಪ್ರದಾಯವನ್ನು ಮುರಿದು, ಮುಂದಡಿ ಇಟ್ಟರು. ಅಂದರೆ, ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ಒಂದೊಂದು ಜಾತಿಯವರಿಗೂ ಪ್ರತ್ಯೇಕ ಸಾಲುಗಳನ್ನು ಮಾಡಿ, ಊಟ-ತಿಂಡಿ ಬಡಿಸುವುದನ್ನು ಇವರು ಖಂಡತುಂಡವಾಗಿ ವಿರೋಧಿಸಿ, ‘ಸಮಾರಂಭ ಎಂದಮೇಲೆ ಎಲ್ಲರೂ ಒಟ್ಟಾಗಿ ಕೂತು ಅಥವಾ ಕಲೆತು ಊಟ ಮಾಡಬೇಕು. ಇಲ್ಲಿ ಜಾತಿ ತಾರತಮ್ಯ ಸಲ್ಲದು,’ ಎಂದು ಪಟ್ಟು ಹಿಡಿದರು. ಮಿತ್ರಮೇಳದ ಸದಸ್ಯರ ಈ ಉಪಕ್ರಮವು ಒಂದು ದೊಡ್ಡ, ಸಕಾರಾತ್ಮಕ ಸಂದೇಶವನ್ನು ರವಾನಿಸಿತು. ಕೆಲವು ಸಮಾರಂಭಗಳಲ್ಲಿ ಸಂಪ್ರದಾಯಶೀಲರು, ‘ನಾವು ಈ ಆಬಾ ದಾರೇಕರ್ ಜೊತೆ ಕೂತು ಊಟ ಮಾಡುವುದಿಲ್ಲ. ಏಕೆಂದರೆ, ಅವರು ಜಾತಿಯಿಂದ ದಲಿತ’ ಎಂದು ಗೊಣಗಾಡಿದರು. ಆದರೆ, ಸಾವರ್ಕರ್ ಅವರ ಸಂಘಟನೆಯು ಅಂತಹ ಆಕ್ಷೇಪಣೆಗಳಿಗೆ ಮಣೆ ಹಾಕಲಿಲ್ಲ.

    ಅಂದಮಾತ್ರಕ್ಕೆ, ಮಿತ್ರಮೇಳದ ಸದಸ್ಯರಿಗೆ ಭ್ರಮೆಗಳಿದ್ದವು ಎಂದಲ್ಲ. ಸ್ವತಃ ಸಾವರ್ಕರ್ ಅವರೇ ಇದನ್ನು ಸ್ಪಷ್ಟವಾಗಿ ಹೇಳಿದ್ದರು. ತಮ್ಮದೇನಿದ್ದರೂ ಒಂದು ಸಣ್ಣ ಗುಂಪು ಎನ್ನುವುದು ಮಿತ್ರಮೇಳದಲ್ಲಿ ಸಕ್ರಿಯರಾಗಿದ್ದವರಿಗೆಲ್ಲ ಗೊತ್ತಿತ್ತು. ಅಲ್ಲದೆ, ತುಂಬಾ ಪ್ರಬಲವಾಗಿರುವ ಬ್ರಿಟಿಷ್ ಸಾಮ್ರಾಜ್ಯವನ್ನು ನಾವು ಒಂದು ದೊಣ್ಣೆಯನ್ನು ಹಿಡಿದುಕೊಂಡು ಎದುರು ಹಾಕಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದರ ಅರಿವು ಅವರೆಲ್ಲರಿಗೂ ಇತ್ತು. ಆದರೆ, ‘ನಾವು ಮಾಡುತ್ತಿರುವ ಕೆಲಸಗಳು ಧಗಧಗನೆ ಬೆಂಕಿಯನ್ನು ಹತ್ತಿಸಲು ಬೇಕಾದ ಬೆಂಕಿಕಡ್ಡಿಗಳಂತಿವೆ. ಇದನ್ನು ನಾವು ಸರಿಯಾದ ಜಾಗದಲ್ಲಿ ಇಟ್ಟರೆ, ಬ್ರಿಟಿಷ್ ಸಾಮ್ರಾಜ್ಯ ಸುಟ್ಟು ಭಸ್ಮವಾಗಲಿದೆ,’ ಎಂದು ಸಾವರ್ಕರ್ ಅವರು ತಮ್ಮ ಜೊತೆಗಾರರಿಗೆ ಹೇಳುತ್ತಿದ್ದರು. ಸ್ವಾತಂತ್ರ್ಯ ಸಿಕ್ಕಬೇಕೆಂದರೆ ನಾವು ಒಗ್ಗಟ್ಟಿನಿಂದ ಹೋರಾಡಬೇಕು; ಇಲ್ಲದೆ ಹೋದರೆ ಅದು ಎಂದಿಗೂ ನಮಗೆ ದಕ್ಕುವುದಿಲ್ಲ ಎನ್ನುವ ಒಂದಿಷ್ಟನ್ನು ಜಾಗೃತಿಯನ್ನು ಹುಟ್ಟಿಸಿದ್ದೇನೂ ಯಃಕಶ್ಚಿತ್ತೆನ್ನುವಂಥ ಕೆಲಸವಲ್ಲ.ಇದನ್ನು ಒತ್ತಿ ಹೇಳುತ್ತಿದ್ದ ಸಾವರ್ಕರ್, ‘ನಮ್ಮ ದೇಶದ ಜನಸಂಖ್ಯೆ ಈಗ ಮುವ್ವತ್ತು ಕೋಟಿ ಇದೆ. ಈ ಪೈಕಿ ಕೇವಲ ಎರಡು ಲಕ್ಷ ಭಾರತೀಯರು ಸಿಡಿದೆದ್ದರೆ ಸಾಕು, ಬ್ರಿಟಿಷ್ ಸಾಮ್ರಾಜ್ಯದ ಆಟ ಅಲ್ಲಿಗೆ ಕೊನೆಗೊಳ್ಳುತ್ತದೆ,’ ಎನ್ನುತ್ತಿದ್ದರು.

    ಪುಣೆಗೆ ಬಂದ ಸಾವರ್ಕರ್, ಅಲ್ಲಿ ತಮ್ಮ ರಹಸ್ಯ ಸಂಘಟನೆಯ ಹೆಜ್ಜೆಗುರುತುಗಳನ್ನು ವಿಸ್ತರಿಸುವ ಕೆಲಸಕ್ಕೆ ಮುಂದಾದರು. ಇದಕ್ಕಾಗಿ ಅವರು ಕಾಲೇಜಿನಲ್ಲೂ ತಾವು ಉಳಿದುಕೊಂಡಿದ್ದ ವಿದ್ಯಾರ್ಥಿನಿಲಯದಲ್ಲೂ ಇದ್ದ ಸಹಪಾಠಿಗಳನ್ನು ಸೆಳೆಯತೊಡಗಿದರು. ಅಲ್ಲದೆ, ಅವರು ಡೆಕ್ಕನ್ ಕಾಲೇಜು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡು, ಅಲ್ಲಿ ವಿದ್ಯಾರ್ಥಿಗಳನ್ನು ರಾಷ್ಟ್ರೀಯವಾದಿ ಕೆಲಸಗಳಿಗೆ ಜತೆಗೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದಕ್ಕೆ ಅವರಿಗೆ ಒಳ್ಳೆಯ ಸ್ಪಂದನ ಸಿಕ್ಕಿ, ಹೆಚ್ಚುಹೆಚ್ಚು ವಿದ್ಯಾರ್ಥಿಗಳು ‘ಮಿತ್ರಮೇಳ’ವನ್ನು ಸೇರತೊಡಗಿದರು.

    ಬಾಲಗಂಗಾಧರ ತಿಲಕರು, ಮಹಾದೇವ ಗೋವಿಂದ ರಾನಡೆ, ಗೋಪಾಲಕೃಷ್ಣ ಗೋಖಲೆ ಮತ್ತು ಕೆಲವು ಪ್ರಮುಖ ಪತ್ರಿಕೆಗಳ ಸಂಪಾದಕರೆಲ್ಲ ಸೇರಿಕೊಂಡು ಪುಣೆಯನ್ನು ಇಂತಹ ಕೆಲಸಗಳಿಗೆ ಚೆನ್ನಾಗಿ ಹದಗೊಳಿಸಿದ್ದುದು ಇದಕ್ಕೆ ಕಾರಣವಾಗಿತ್ತು. ಅಂದರೆ, ಪುಣೆಯ ವಾತಾವರಣವು ರಾಜಕೀಯ ಸಂವೇದನೆಯಿಂದ ಸಮೃದ್ಧವಾಗಿತ್ತು. ಹೀಗಾಗಿ, ಸಾವರ್ಕರ್ ಅವರು ಪುಣೆಗೆ ಬಂದ ಕೇವಲ ಎರಡೇ ವರ್ಷಗಳಲ್ಲಿ, ಅಂದರೆ ೧೯೦೪ರಲ್ಲಿ ನಾಸಿಕ್‌ನಲ್ಲಿ ಮಿತ್ರಮೇಳದ ಚೊಚ್ಚಲ ಅಧಿವೇಶನ ನಡೆಯುವ ಹೊತ್ತಿಗೆ ಸದಸ್ಯರ ಸಂಖ್ಯೆ ೨೦೦ಕ್ಕೇರಿತು. ಹೀಗೆ ಸಂಘಟನೆಯನ್ನು ಸೇರಿದವರಲ್ಲಿ ಬಾಂಬೆ, ಪುಣೆಯ ಸುತ್ತಮುತ್ತ ಹಬ್ಬಿದ್ದ ಪಶ್ಚಿಮ ಘಟ್ಟ ಸೀಮೆ, ಮಹಾರಾಷ್ಟ್ರದ ದಕ್ಷಿಣ ಭಾಗಕ್ಕಿದ್ದ ಸೊಲ್ಲಾಪುರ, ಉತ್ತರದ ಖಾನ್‌ದೇಶದ ತರುಣರೆಲ್ಲ ಇದ್ದರು. ಇಷ್ಟು ಹೊತ್ತಿಗೆ ಸಾವರ್ಕರ್ ಅವರು ತಮ್ಮ ವಾಕ್ಚಾತುರ್ಯವನ್ನು ಹರಿತಗೊಳಿಸಿಕೊಂಡಿದ್ದರ ಜೊತೆಗೆ, ಇತರರನ್ನು ಮನವೊಲಿಸುವ ಸಾಮರ್ಥ್ಯವನ್ನೂ ಬೆಳೆಸಿಕೊಂಡಿದ್ದರು. ಹೀಗಾಗಿ, ಅವರ ಯಶಸ್ಸಿನ ಪ್ರಮಾಣ ಇಲ್ಲಿ ಜಾಸ್ತಿಯಾಯಿತು.

    ಈ ಸಮಯದಲ್ಲಿ ಮಿತ್ರಮೇಳವನ್ನು ಸೇರಿದ ಪೈಕಿ ಮೂವರು ಮುಂದೆ ತಮ್ಮದೇ ಆದ ಬಗೆಯಲ್ಲಿ ರಾಷ್ಟ್ರ ಮಟ್ಟದ ನೇತಾರರಾಗಿ ಪ್ರಸಿದ್ಧರಾದರು. ಮುಂದೊಂದು ದಿನ ಕಾಂಗ್ರೆಸ್ಸಿನ ಚುನಾಯಿತ ಅಧ್ಯಕ್ಷರಾದ ಜೆ.ಬಿ.ಕೃಪಲಾನಿ, ಭವಿಷ್ಯದಲ್ಲಿ ಕಾಂಗ್ರೆಸ್ಸನ್ನು ಸೇರಿಕೊಂಡು ೧೯೩೭ರಲ್ಲಿ ಬಾಂಬೆ ಪ್ರಾಂತ್ಯದ ಅಧ್ಯಕ್ಷರಾದ ಬಿ.ಜಿ.ಖೇರ್ ಮತ್ತು ತಮ್ಮ ಕ್ರಾಂತಿಕಾರಕ ಚಟುವಟಿಕೆಗಳಿಂದಾಗಿ ‘ಸೇನಾಪತಿ’ ಎಂದೇ ಹೆಸರಾಗಿ, ತೀವ್ರಗಾಮಿಗಳ ನಾಯಕ ತಿಲಕ್ ಹಾಗೂ ಶಾಂತಿವಾದಿ ಮಹಾತ್ಮ ಗಾಂಧಿಯವರ ಪ್ರಮುಖ ಅನುಯಾಯಿಗಳಾದ ಪಿ.ಎಂ.ಬಾಪಟ್ ಇವರೇ ಆ ಮೂರು ಮಂದಿ!

    ೧೯೦೪ರಲ್ಲಿ ನಾಸಿಕ್‌ನಲ್ಲಿ ನಡೆದ ಮಿತ್ರಮೇಳದ ಪ್ರಥಮ ಸಮಾವೇಶದಲ್ಲಿ ಸಾವರ್ಕರ್ ತಮ್ಮ ಸಂಘಟನೆಯ ಹೆಸರನ್ನು ‘ಅಭಿನವ ಭಾರತ’ ಎಂದು ಬದಲಿಸಿದರು. ‘ಮಿತ್ರಮೇಳ’ ಎನ್ನುವ ಸ್ವಲ್ಪ ಸಪ್ಪೆಯಾದ ಹೆಸರಿಗೆ ಹೋಲಿಸಿದರೆ, ಈ ಹೊಸ ಹೆಸರು ತುಂಬಾ ಮಹತ್ತ್ವಾಕಾಂಕ್ಷಿಯಾಗಿ ಕೇಳಿಸುತ್ತಿತ್ತು. ಸಾವರ್ಕರ್ ಅವರ ಸಂಘಟನೆಯು ಹೀಗೆ ಹೊಸ ಹೆಸರನ್ನು ಪಡೆದುಕೊಂಡ ಮೇಲೆ, ಇದು ಎಲ್ಲರನ್ನೂ ಒಳಗೊಳ್ಳುವಂತಹ ಸಂಸ್ಥೆ ಎನ್ನುವ ಸದಭಿಪ್ರಾಯವನ್ನು ರೂಢಿಸುವ ಉದ್ದೇಶದಿಂದ ದೇಶದ ನಾನಾ ಭಾಗಗಳಲ್ಲಿ ಇದರ ಸಮಾವೇಶವನ್ನು ಏರ್ಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಇದರಂತೆ ಒಂದು ವರ್ಷ ನಾಸಿಕ್ ಸಮೀಪದ ಕೋತೂರಿನಲ್ಲಿ, ಇದರ ಮುಂದಿನ ವರ್ಷ ಮುಂಬೈಗೆ ತಾಗಿಕೊಂಡಿರುವ ಸಿಯೋನ್‌ನಲ್ಲಿ, ಮತ್ತೊಂದು ವರ್ಷ ಹೈದರಾಬಾದಿನ ನಿಜಾಮರ ಆಳ್ವಿಕೆಯ ಅಡಿಯಲ್ಲಿದ್ದ ಔರಂಗಾಬಾದಿಗೆ ಸಮೀಪದಲ್ಲಿ ಹೀಗೆ ಸಮಾವೇಶಗಳು ಜರುಗಿದವು.

    ‘ಅಭಿನವ ಭಾರತ’ದ ಕೆಲವು ಸಭೆಗಳು ತೀರಾ ಸಾಧಾರಣವಾದ ಮನೆಗಳಲ್ಲೂ ನಡೆಯುತ್ತಿದ್ದವು. ಉದಾಹರಣೆಗೆ ಹೇಳುವುದಾದರೆ, ಮುಂಬೈನ ಗ್ರ್ಯಾಂಟ್ ರಸ್ತೆಯಲ್ಲಿದ್ದ ಶಾಸ್ತ್ರಿ ಹಾಲ್‌ಗೆ ಸಮೀಪದಲ್ಲಿದ್ದ ಕೆಲವು ಮನೆಗಳಲ್ಲಿ, ಹಾಗೆಯೇ ಚಿಕಳವಾಡಿ ಪ್ರದೇಶದಲ್ಲಿದ್ದ ಇನ್ನೊಂದಿಷ್ಟು ಮನೆಗಳಲ್ಲಿ ಇಂತಹ ಸಭೆಗಳು ಏರ್ಪಾಡಾಗುತ್ತಿದ್ದವು. ಒಂದು ಕಾಕತಾಳೀಯ ಕುತೂಹಲದ ವಿಚಾರವೆಂದರೆ, ೧೯೮೦ರ ದಶಕದಲ್ಲಿ ಲಂಡನ್ನಿನಲ್ಲಿ ಸಾವರ್ಕರ್ ಅವರ ನೆನಪಿನಲ್ಲಿ ಒಂದು ಪಾರಿತೋಷಕವನ್ನು ಅನಾವರಣಗೊಳಿಸಲು ಇದೇ ಚಿಕಳವಾಡಿಯಲ್ಲಿ ಹುಟ್ಟಿ, ಬೆಳೆದ ಹುಡುಗನೊಬ್ಬನನ್ನು ಆಹ್ವಾನಿಸಲಾಗಿತ್ತು. ಆ ಹುಡುಗ ಯಾರೆಂದರೆ, ಕ್ರಿಕೆಟ್ ಲೋಕದ ದಂತಕತೆಯಾಗಿರುವ ಸುನೀಲ್ ಮನೋಹರ್ ಗವಾಸ್ಕರ್! ಈ ಗವಾಸ್ಕರ್ ಓರ್ವ ರಾಜಕೀಯ ಕ್ರಾಂತಿಕಾರಿಯಲ್ಲದೆ ಇರಬಹುದು. ಆದರೆ, ಕ್ರಿಕೆಟ್ ಲೋಕದಲ್ಲಿ ಆಗ ವಿಜೃಂಭಿಸುತ್ತಿದ್ದ ಭಯಾನಕ ವೇಗದ ಬೌಲರುಗಳ ಎಸೆತಗಳನ್ನು ತಲೆಗೆ ಹೆಲ್ಮೆಟ್ ಹಾಕಿಕೊಳ್ಳದೆಯೇ ಧೈರ್ಯದಿಂದ ಎದುರಿಸುತ್ತಿದ್ದ ಈ ಪ್ರತಿಭಾನ್ವಿತ ಕ್ರಿಕೆಟಿಗ ಕೂಡ ತಮ್ಮದೇ ಆದ ಒಂದು ಶೈಲಿಯಲ್ಲಿ ಕ್ರಾಂತಿಯನ್ನು ಉಂಟುಮಾಡಿದರು; ಈ ಮೂಲಕ ಅವರು ಭಾರತೀಯ ಕ್ರಿಕೆಟಿಗೆ ನೆಲೆ-ಬೆಲೆಗಳನ್ನು ತಂದುಕೊಟ್ಟರು.

    ತಮ್ಮ ಕಾಲದ ಇನ್ನಿತರ ನಾಯಕರುಗಳಂತೆಯೇ ತಮ್ಮ ಕಾಲೇಜು ದಿನಗಳಲ್ಲಿ ಪುಣೆಯ ಪ್ರಭಾವಿ ಮತ್ತು ಹೆಸರಾಂತ ದಿನಪತ್ರಿಕೆಗಳಿಗೆ ಹಾಗೂ ನಿಯತಕಾಲಿಕಗಳಿಗೆ ಅಪಾರವಾಗಿ ಬರೆದರು. ಹಾಗೆಯೇ, ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಪದವಿ ಅಧ್ಯಯನ ಪೂರೈಸಿದ ನಂತರ, ಅವರು ಲಂಡನ್ನಿನ ಕಾನೂನು ಪದವಿ ಶಿಕ್ಷಣದ ಪ್ರವೇಶ ಪರೀಕ್ಷೆಗೆಂದು ಸಿದ್ಧತೆ ಮಾಡಿಕೊಳ್ಳಲು ಒಂದು ವರ್ಷ ಮುಂಬೈನಲ್ಲಿದ್ದಾಗ ‘ವಿಹಾರಿ’ ಎನ್ನುವ ವಾರಪತ್ರಿಕೆಗೆ ತಪ್ಪದೆ ಬರೆದರು. ಇಷ್ಟರ ಮಧ್ಯೆ ಅವರು ಪುಣೆಯಲ್ಲಿ ತಮ್ಮ ನೆಚ್ಚಿನ ಪತ್ರಕರ್ತ, ‘ಕಾಲ್’ ಪತ್ರಿಕೆಯ ಸಂಪಾದಕರಾಗಿದ್ದ ಎಸ್.ಎಂ.ಪರಾಂಜಪೆ ಅವರನ್ನು ಕೊನೆಗೂ ನೇರವಾಗಿ ಭೇಟಿಯಾದರು. ಅಲ್ಲಿ ತಮ್ಮ ಹಾಸ್ಯಪ್ರವೃತ್ತಿ ಮತ್ತು ಪ್ರತಿಭೆಯಿಂದ ಅವರ ಮನಗೆದ್ದ ಸಾವರ್ಕರ್, ಪರಾಂಜಪೆಯವರ ಮಗ ಕೃಷ್ಣನ ಆತ್ಮೀಯ ಸ್ನೇಹಿತರಾದರು. ಆ ದಿನಗಳಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸಾವರ್ಕರ್ ಅವರ ಕವನಗಳು ಸಾಕಷ್ಟು ಗಮನ ಸೆಳೆದಿದ್ದವು. ಅವುಗಳ ಪೈಕಿ ಸ್ವಾತಂತ್ರ್ಯದ ಅಧಿದೇವತೆಯನ್ನು ಸ್ತುತಿಸಿ ಬರೆದಿದ್ದ ‘ಜಯೋಸ್ತುತೇ’ ಎನ್ನುವ ಒಂದು ಕವನವೂ ಸೇರಿತ್ತು. ನಂತರದ ವರ್ಷಗಳಲ್ಲಿ, ಖ್ಯಾತ ಸಂಗೀತ ಸಂಯೋಜಕ ಹೃದಯನಾಥ್ ಮಂಗೇಶಕರ್ ಅವರು -ಲೋಕವಿಖ್ಯಾತ ಗಾಯಕಿ ಲತಾ ಮಂಗೇಶಕರ್ ಅವರ ಖಾಸಾ ಅಣ್ಣ- ಈ ಕವನಕ್ಕೆ ರಾಗವನ್ನು ಹಾಕಿದರು. ಈ ಗೀತೆಯನ್ನು ಮಹಾರಾಷ್ಟ್ರದಲ್ಲಿ ನಡೆಯುವ ದೊಡ್ಡದೊಡ್ಡ ಸಮಾರಂಭಗಳಲ್ಲಿ ಈಗಲೂ ಹಾಡುತ್ತಾರೆ. ಆ ದಿನಗಳಲ್ಲಿ ಒಮ್ಮೆ ಒಂದು ಕಾವ್ಯರಚನಾ ಸ್ಪರ್ಧೆ ಏರ್ಪಟ್ಟಿತ್ತು. ಹಿಂದೂ ವಿಧವೆಯರ ದಾರುಣ ಸ್ಥಿತಿಗತಿಗಳನ್ನು ಟೀಕಿಸಿ ಸಾವರ್ಕರ್ ಅವರು ಈ ಸ್ಪರ್ಧೆಗೆ ಒಂದು ಕವನವನ್ನು ಕಳಿಸಿದ್ದರು. ಅದು ಅಂತಿಮವಾಗಿ ಪ್ರಥಮ ಬಹುಮಾನಕ್ಕೆ ಪಾತ್ರವಾಯಿತು. ಹಾಗೆಯೇ, ಇನ್ನೊಂದು ಪ್ರಬಂಧ ಸ್ಪರ್ಧೆಗೆ ಇವರು ‘ಐತಿಹಾಸಿಕ ವ್ಯಕ್ತಿಗಳನ್ನು ಸಮಾಜವೇಕೆ ಗೌರವಿಸಬೇಕು?’ ಎನ್ನುವ ವಿಚಾರ ಕುರಿತು ಕಳಿಸಿದ್ದ ಪ್ರಬಂಧ ಕೂಡ ಪ್ರಥಮ ಬಹುಮಾನವನ್ನು ಪಡೆದುಕೊಂಡಿತ್ತು.

    ಆದರೆ, ಸಾವರ್ಕರ್ ಮತ್ತು ಅವರ ಜೊತೆಗಾರರು ತಮ್ಮದೇ ಸರಿ ಎನ್ನುವಂತೆ ಪ್ರದರ್ಶಿಸುತ್ತಿದ್ದ ದೇಶಭಕ್ತಿಯ ವರಸೆಯನ್ನು ಒಪ್ಪದವರೂ ಇದ್ದರು. ೨೦ನೇ ಶತಮಾನದ ಮೊದಲ ದಶಕದ ಪೂರ್ವಾರ್ಧದಲ್ಲಿ ರಾಜಗಢದಲ್ಲಿ ನಡೆದ ಶಿವಾಜಿ ಉತ್ಸವವು ಇಂಥದೊಂದು ಘಟನೆಗೂ ಸಾಕ್ಷಿಯಾಯಿತು. ಏಕೆಂದರೆ, ಅಲ್ಲಿ ಸಾವರ್ಕರ್ ಅವರ ಸ್ನೇಹಿತರು ಶಿವಾಜಿಯ ಸೇನೆಯಲ್ಲಿದ್ದ ವೀರಸೇನಾನಿಗಳಾದ ತಾನಾಜಿ ಮತ್ತು ಬಾಜಿ ಪ್ರಭು ದೇಶಪಾಂಡೆ ಅವರನ್ನು ಕುರಿತು ಲಾವಣಿ ಹಾಡಿದ್ದನ್ನು ಆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮುಂಬೈನ ನ್ಯಾಯವಾದಿ ಮತ್ತು ತಿಲಕರ ಅನುಯಾಯಿಯಾಗಿದ್ದ ಡಿ.ಎ.ಖರೆ ಅವರು ಬಿಲ್‌ಕುಲ್ ಒಪ್ಪಲಿಲ್ಲ. ಈ ಲಾವಣಿಯ ವಿರುದ್ಧ ತಿಲಕರ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಈ ಹಾಡು ತೀರಾ ಅಸಾಂವಿಧಾನಿಕವಾಗಿದೆ. ಆದ್ದರಿಂದ ನೀವು ಕೂಡಲೇ ಈ ಸಮಾರಂಭವನ್ನು ನಿಲ್ಲಿಸಬೇಕು,’ ಎಂದು ಆಗ್ರಹಿಸಿದರು. ಆದರೆ, ತಿಲಕರು ಇದಕ್ಕೆ ಮಣೆ ಹಾಕಲಿಲ್ಲ. ಬದಲಿಗೆ, ಅವರು ಸಭಿಕರನ್ನು ಉದ್ದೇಶಿಸಿ, ‘ಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ಖರೆಯವರಿಗೆ ಸ್ವಲ್ಪಹೀಗಾಗಿ ಅವರು ಸಭೆಯಿಂದ ತುಸು ಬೇಗನೆ ನಿರ್ಗಮಿಸಲು ಬಯಸಿದ್ದಾರೆ. ಹೀಗಾಗಿ, ಸಮಾರಂಭದ ಉಳಿದ ಭಾಗದ ಅಧ್ಯಕ್ಷತೆಯನ್ನು ಎಸ್.ಎಂ.ಪರಾಂಜಪೆಯವರು ವಹಿಸಿಕೊಳ್ಳಲಿದ್ದಾರೆ,’ ಎಂದು ಹೇಳಿದರು.

    ಮತ್ತೊಬ್ಬ ಖ್ಯಾತ ಇತಿಹಾಸಜ್ಞ ವಿ.ಕೆ.ರಾಜವಾಡೆ ಅವರು ಕೂಡ ಯಾವುದೇ ವಿಷಯವನ್ನು ಪಟ್ಟು ಬಿಡದೆ ಚರ್ಚಿಸುವ ಸಾವರ್ಕರ್ ಅವರ ಗುಣವನ್ನು ಮೆಚ್ಚಿಕೊಂಡಿದ್ದರಾದರೂ ಎಲ್ಲವನ್ನೂ ಭಾರತೀಯ ಸಂದರ್ಭಕ್ಕೆ ತಳುಕು ಹಾಕುವ ಅವರ ಇನ್ನೊಂದು ಪ್ರವೃತ್ತಿಯನ್ನು ಒಪ್ಪುತ್ತಿರಲಿಲ್ಲ. ೧೯೦೦ರ ದಶಕದ ಮೊದಲ ಭಾಗದಲ್ಲಿ ನಡೆದ ಒಂದು ಚರ್ಚಾಸ್ಪರ್ಧೆಯಲ್ಲಿ ಹೀಗೆಯೇ ಆಯಿತು. ಅದರಲ್ಲಿ ಪಾಲ್ಗೊಂಡಿದ್ದ ಸಾವರ್ಕರ್ ಅವರು ಇಟಲಿಯ ಚರಿತ್ರೆಯ ಬೆಳವಣಿಗೆಯ ಬಗ್ಗೆ ವಿಚಾರವನ್ನು ಮಂಡಿಸಿದ ರೀತಿನೀತಿಗಳನ್ನು ರಾಜವಾಡೆಯವರು ಬಹುವಾಗಿ ಮೆಚ್ಚಿಕೊಂಡರು. ಆದರೆ, ಅದನ್ನೆಲ್ಲ ಸಾವರ್ಕರ್ ಅವರು ಸ್ಥಳೀಯ ರಾಜಕೀಯ ಸಂದರ್ಭಗಳೊಂದಿಗೆ ಬೆಸೆಯಲು ಪ್ರಯತ್ನಿಸಿದ್ದನ್ನು ಒಪ್ಪಲಿಲ್ಲ.

    ಅಂದಮಾತ್ರಕ್ಕೆ, ತಮ್ಮನ್ನು ತಾವು ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಿಕೊಂಡು ತಿರುಗುತ್ತಿದ್ದ ಎಲ್ಲರನ್ನೂ ಸಾವರ್ಕರ್ ಒಪ್ಪಿಕೊಳ್ಳುತ್ತಿರಲಿಲ್ಲ. ‘ಅಗಮ್ಯ ಗುರು ಪರಮಹಂಸ’ ಎನ್ನುವ ಹೆಸರನ್ನಿಟ್ಟುಕೊಂಡಿದ್ದ ಸ್ವಯಂಘೋಷಿತ ದೇವಮಾನವನ ಪ್ರಕರಣದಲ್ಲಿ ಹೀಗೆಯೇ ಆಯಿತು. ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ಪುಣೆಯಲ್ಲಿ ಕೆಲವು ತರುಣರ ಮೂಲಕ ವಸೂಲಿ ದಂಧೆ ನಡೆಸುತ್ತಿದ್ದ ಈತನನ್ನು, ಇವನ ಕೆಲ ಸ್ನೇಹಿತರು ಸಾವರ್ಕರ್‌ಗೆ ಪರಿಚಯ ಮಾಡಿಕೊಟ್ಟರು. ಈತನ ಬಗ್ಗೆ ಅವನ ಎದುರಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಸಾವರ್ಕರ್, ಅವನೊಂದಿಗಿನ ಸಭೆಯನ್ನು ದಿಢೀರನೆ ಮುಗಿಸಿ, ‘ಇಂತಹ ಮುಟ್ಟಾಳರ ಸಹವಾಸ ಮಾಡಿಕೊಂಡು ಸಮಯವನ್ನೆಲ್ಲ ಹಾಳು ಮಾಡಬೇಡಿ,’ ಎಂದು ಅವನ ಹಿಂದೆಮುಂದೆ ಓಡಾಡುತ್ತಿದ್ದವರಿಗೆ ನೇರವಾಗಿ ಹೇಳಿದರು. ಇದಾದ ಕೆಲವು ವರ್ಷಗಳ ನಂತರ ಈ ‘ಗುರು’ವನ್ನು ಲೈಂಗಿಕ ದುರ್ನಡತೆಯ ಆರೋಪದ ಮೇಲೆ ಲಂಡನ್ನಿನಲ್ಲಿ ಬಂಧಿಸಲಾಯಿತು.

    ಆದರೆ, ೧೯೧೮ರಲ್ಲಿ ಎಸ್.ರೌಲತ್ ನೇತೃತ್ವದ ‘ದೇಶದ್ರೋಹ ಆರೋಪಗಳ ಸಮಿತಿ’ಯು ನೀಡಿದ ಸುಳ್ಳು ವರದಿಯಲ್ಲಿ ‘ಸಾವರ್ಕರ್ ಅವರು ಈ ಪರಮಹಂಸ ಎಂಬ ವ್ಯಕ್ತಿಯಿಂದಾಗಿಯೇ ಕ್ರಾಂತಿಕಾರಿ ಚಟುವಟಿಕೆಗಳಿಗೆ ಮುಂದಾದರು,’ ಎಂದು ಆಧಾರರಹಿತವಾಗಿ ಹೇಳಿತಲ್ಲದೆ, ‘ಸಾವರ್ಕರ್ ಅವರ ಅಣ್ಣ ಗಣೇಶ್ ಸಾವರ್ಕರ್ (ಬಾಬಾರಾವ್) ಅವರೇ ಅಭಿನವ ಭಾರತ ಸಂಘಟನೆಯ ಸ್ಥಾಪಕ,’ ಎಂಬ ಇನ್ನೊಂದು ಹಸೀಸುಳ್ಳನ್ನೂ ಪ್ರತಿಪಾದಿಸಿತು.
    ವಾಸ್ತವವಾಗಿ ಸಾವರ್ಕರ್ ಅವರು ೧೯೦೫ರ ಹೊತ್ತಿಗೆಲ್ಲ ಬ್ರಿಟಿಷರಿಗೆ ತಲೆನೋವಾಗಿ ಪರಿಣಮಿಸಿದ್ದರು. ಇದಕ್ಕೆ ಕಾರಣವಾದ ಬೆಳವಣಿಗೆ ಯಾವುದೆಂದರೆ, ಬಂಗಾಳದ ವಿಭಜನೆ. ಆ ವರ್ಷದ ಅಕ್ಟೋಬರಿನಲ್ಲಿ ವೈಸ್‌ರಾಯ್ ಜಾರ್ಜ್ ನಥ್ಯಾನಿಯಲ್ ಕರ್ಜನ್, ಬಂಗಾಳವನ್ನು ವಿಭಜಿಸುವ ನಿರ್ಣಯವನ್ನು ಮಂಡಿಸಿದ. ಹೀಗೆ ಮಾಡುವಾಗ ಅವನು ಬಹಿರಂಗವಾಗಿಯೇ ‘ಭಾರತದ ಮೇಲೆ ಬ್ರಿಟಿಷರ ಯಜಮಾನಿಕೆಯನ್ನು ಇನ್ನಷ್ಟು ತೀವ್ರಗೊಳಿಸುವುದೇ ಇದರ ಹಿಂದಿನ ಉದ್ದೇಶ’ವಾಗಿದ್ದು, ‘ಈ ದೇಶವು (ಭಾರತವು) ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವುದನ್ನು ಮತ್ತಷ್ಟು ಮುಂದೂಡುವುದು’ ತನ್ನ ಗುರಿಯಾಗಿದೆ ಎಂದು ಸಾರಿದ.

    ಬ್ರಿಟಿಷರು ಹೀಗೆ ಬಂಗಾಳವನ್ನು ವಿಭಜಿಸಲು ಮುಂದಾದ ಕ್ರಮವು ಆ ಪ್ರಾಂತ್ಯದೆಲ್ಲೆಡೆ ತೀಕ್ಷ್ಣ ಪ್ರತಿಭಟನೆಯನ್ನು ಸೃಷ್ಟಿಸಿತು. ಆಗ ವೈಸ್‌ರಾಯ್ ಕರ್ಜನ್, ‘ಸುಗಮ ಆಡಳಿತವು ಸಾಧ್ಯವಾಗಬೇಕೆಂಬ ಉದ್ದೇಶದಿಂದ ಬಂಗಾಳವನ್ನು ವಿಭಜಿಸಲಾಗುತ್ತಿದೆ. ಏಕೆಂದರೆ, ಈಗ ಈ ಪ್ರಾಂತ್ಯದಲ್ಲಿ ಕೇವಲ ಬಂಗಾಳ ಮಾತ್ರವೇ ಇಲ್ಲ. ಇದರ ಜೊತೆಗೆ ಅಕ್ಕಪಕ್ಕದ ಬಿಹಾರ, ಒರಿಸ್ಸಾ ಮತು ಛೋಟಾ ನಾಗ್ಪುರ ಕೂಡ ಸೇರಿದ್ದು, ಇದೊಂದೇ ಪ್ರಾಂತ್ಯದಲ್ಲಿ ಭಾರತದ ಕಾಲುಭಾಗಕ್ಕಿಂತ ಹೆಚ್ಚಿನ ಜನಸಂಖ್ಯೆ ಇದೆ,’ ಎಂದು ಹೇಳಿದ. ಆದರೆ, ಭಾರತೀಯರು ಬಂಗಾಳದ ವಿಭಜನೆಯ ಹಿಂದೆ ಬ್ರಿಟಿಷರ ಒಡೆದಾಳುವ ನೀತಿಯನ್ನು ಕಂಡರು. ಏಕೆಂದರೆ, ಬ್ರಿಟಿಷರ ಯೋಜನೆಯ ಪ್ರಕಾರ ಪೂರ್ವ ಬಂಗಾಳದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದರು. ಇದರ ಜೊತೆಗೆ, ಈ ಭಾಗಕ್ಕೆ ಅಸ್ಸಾಮನ್ನು ಅವರು ಲಗತ್ತಿಸಬೇಕೆಂದುಕೊಂಡಿದ್ದರು. ಇನ್ನೊಂದೆಡೆಯಲ್ಲಿ, ಬಿಹಾರ, ಒರಿಸ್ಸಾ ಮತ್ತು ಛೋಟಾ ನಾಗ್ಪುರಗಳನ್ನೂ ಒಳಗೊಂಡಿರುತ್ತಿದ್ದ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುತ್ತಿದ್ದರು. ಹೀಗಾದಾಗ, ಪಶ್ಚಿಮ ಬಂಗಾಳದಲ್ಲಿ ಹಿಂದಿ ಮತ್ತು ಒರಿಯಾ ಭಾಷಿಕರ ಸಂಖ್ಯೆ ಹೆಚ್ಚಾಗಿ, ಆ ಎರಡೂ ಗುಂಪುಗಳ ಮುಂದೆ ಬಂಗಾಳಿ ಭಾಷಿಕರು ಅಲ್ಪಸಂಖ್ಯಾತರಾಗುತ್ತಿದ್ದರು.

    ಕರ್ಜನ್‌ನ ಈ ನಡೆಯು ಕಾಂಗ್ರೆಸ್ ಪಕ್ಷಕ್ಕೆ, ಅದರಲ್ಲೂ ಬಾಲಗಂಗಾಧರ ತಿಲಕರ ನೇತೃತ್ವದ ತೀವ್ರಗಾಮಿಗಳಿಗೆ ಎರಡು ಅಸ್ತ್ರಗಳನ್ನು ಕೊಟ್ಟಿತು. ಅವೆಂದರೆ- ಮೊದಲನೆಯದು, ಸ್ವದೇಶಿ ಚಳವಳಿ; ಎರಡನೆಯದು, ಬ್ರಿಟಿಷ್ ವಸ್ತುಗಳಿಗೆ ಬಹಿಷ್ಕಾರ. ಇವೆರಡೂ ಕ್ರಮಗಳು ಮಂದಗಾಮಿಗಳು ಹೇಳುತ್ತಿದ್ದ ಸಾಂವಿಧಾನಿಕ ರೀತಿಯ ಪ್ರತಿಭಟನೆಯ ಲಕ್ಷ್ಮಣರೇಖೆಯನ್ನೂ ಉಲ್ಲಂಘಿಸುತ್ತಿರಲಿಲ್ಲ. ಜೊತೆಗೆ, ಮಂದಗಾಮಿ ಅನುಸರಿಸುತ್ತಿದ್ದ ಮನವಿ, ಪ್ರಾತಿನಿಧ್ಯವನ್ನು ಅನುಗ್ರಹಿಸುವಂತೆ ಕೇಳುವುದು ಮತ್ತು ಎಲ್ಲಕ್ಕೂ ಬ್ರಿಟಿಷರ ಮುಂದೆ ದೈನ್ಯವಾಗಿ ಮೊರೆ ಇಡುವುದು ಇಂತಹ ಕ್ರಮಗಳಷ್ಟು ಇದು ತೀರಾ ನಿಷ್ಪ್ರಯೋಜಕವೂ ಆಗಿರಲಿಲ್ಲ. ತಿಲಕರಂತೂ ಸ್ವದೇಶಿ ಚಳವಳಿಯ ಪರ ತೀಕ್ಷ್ಣವಾಗಿ ಮಾತನಾಡುತ್ತಿದ್ದರು. ೧೯೦೫ರ ಆಗಸ್ಟ್ ೭ರಂದು ಕೊಲ್ಕತ್ತಾದ ಪುರಸಭೆಯಲ್ಲಿ (ಟೌನ್‌ಹಾಲ್) ನಡೆದ ಸಭೆಯಲ್ಲಿ ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ನಿರ್ಣಯವನ್ನು ಅಂಗೀಕರಿಸಿದಾಗ ಅವರು ತಮ್ಮ ವಿಚಾರಧಾರೆಯನ್ನು ಪ್ರಖರವಾಗಿ ಮಂಡಿಸಿದರು. ಅಲ್ಲದೆ, ಈ ಚಳವಳಿಯನ್ನು ಭಾರತೀಯರು ದೇಶದ ಮೂಲೆಮೂಲೆಗಳಲ್ಲೂ ಹಬ್ಬಿಸಬೇಕೆಂದು ಕರೆ ನೀಡಿದರು. ಇದಕ್ಕಿಂತ ಹೆಚ್ಚಾಗಿ ತಿಲಕರು, ‘ಬಂಗಾಳಿಗಳ ದನಿಯನ್ನು ಉಳಿದವರಿಗಿಂತ ಹೆಚ್ಚಾಗಿ ಮಹಾರಾಷ್ಟ್ರದ ಜನರು ಬೆಂಬಲಿಸಬೇಕು. ಇದರ ಅಂಗವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲೂ ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸಬೇಕು’ ಎಂದು ಅವರು ಇನ್ನೊಂದು ಕರೆ ಕೊಟ್ಟರು.

    ಆಗ ಮಹಾರಾಷ್ಟ್ರವೆಂದರೆ ತುಂಬಾ ದೊಡ್ಡದಾಗಿತ್ತು ಎನ್ನುವುದು ನಮಗೆಲ್ಲ ಗೊತ್ತಿರಬೇಕು. ಆಗ ಈ ಪ್ರಾಂತ್ಯವು ಮರಾಠಿ ಮಾತನಾಡುವ ಬಹುದೊಡ್ಡ ಪ್ರದೇಶಗಳನ್ನೊಳಗೊಂಡಿತ್ತು (ಈಗಿರುವ ಮಹಾರಾಷ್ಟ್ರ ರಾಜ್ಯವು ಅಸ್ತಿತ್ವಕ್ಕೆ ಬಂದಿದ್ದು ೧೯೬೦ರಲ್ಲಿ). ತಿಲಕರಂತೂ ‘ಸ್ವದೇಶಿ ಕಲ್ಪನೆಯು ನಮ್ಮಲ್ಲಿ ಬಂದಿದ್ದೇ ಮಹಾರಾಷ್ಟ್ರದಿಂದ’ ಎಂದು ಪ್ರತಿಪಾದಿಸುತ್ತಿದ್ದರು. ಸ್ವತಃ ತಿಲಕರ ತಲೆಮಾರಿನವರಿಗೆ ಈ ಸಂಬಂಧವಾಗಿ ಪೂನಾ ಸಾರ್ವಜನಿಕ ಸಭಾದ ನಾಯಕರಾದ ಖಾದಿಧಾರಿ ಜಿ.ವಿ.ಜೋಷಿಯವರು ಅಥವಾ ಸಾರ್ವಜನಿಕ ಕಾಕಾ ಅವರ ಮಧುರ ನೆನಪುಗಳಿದ್ದವು. ಏಕೆಂದರೆ, ಅತ್ಯಂತ ಮಹತ್ತ್ವದ ಸ್ವದೇಶಿ ಪರಿಕಲ್ಪನೆಯನ್ನು ಪ್ರಚುರಪಡಿಸಿದವರೇ ಅವರು! ಈ ಸಂಬಂಧವಾಗಿ ತಮ್ಮ ಸಂಪಾದಕತ್ವದ ‘ಕೇಸರಿ’ ಪತ್ರಿಕೆಯಲ್ಲಿ ೧೯೦೫ರ ಆಗಸ್ಟ್ ೨ರಂದು ಒಂದು ಸಂಪಾದಕೀಯವನ್ನೇ ಬರೆದ ತಿಲಕರು, ‘ನಮ್ಮ ಬಂಗಾಳದ ಜನರು ಸ್ವದೇಶಿ ಪರಿಕಲ್ಪನೆಯ ಮಹತ್ತ್ವವನ್ನು ಗುರುತಿಸಿದ್ದಾರೆ. ಹೀಗಿರುವಾಗ ಉಳಿದ ಪ್ರಾಂತ್ಯಗಳ ಜನರು ಅವರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು. ಈ ಮೂಲಕ ಅವರು ಬ್ರಿಟಿಷರ ವಿರುದ್ಧದ ಪ್ರತಿಭಟನೆಯನ್ನು ಬಾಂಬೆ ಮತ್ತು ಪುಣೆಗಳಿಗೂ ಕೊಂಡೊಯ್ದರು. ಆಗ, ಮಂದಗಾಮಿಗಳ ನಾಯಕರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿದ್ದ ಗೋಪಾಲಕೃಷ್ಣ ಗೋಖಲೆಯವರು ‘ಈ ಪ್ರತಿಭಟನೆಯು ಬಂಗಾಳಕ್ಕೆ ಮಾತ್ರ ಸೀಮಿತವಾಗಿರಬೇಕು,’ ಎಂದು ಹೇಳುತ್ತಿದ್ದರೆ. ಆದರೆ ತಿಲಕರು ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಇನ್ನೊಂದೆಡೆಯಲ್ಲಿ, ಲಾಲಾ ಲಜಪತರಾಯ್ ಅವರು ಪಂಜಾಬಿನಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆಯು ಹಬ್ಬುವಂತೆ ಮಾಡಿದರು. ಈ ಪ್ರತಿಭಟನೆಗಳಿಗೆ ಸುರೇಂದ್ರನಾಥ ಬ್ಯಾನರ್ಜಿಯವರಂತಹ ಮಂದಗಾಮಿ ನಾಯಕರು ಕೂಡ ಸ್ವಲ್ಪಮಟ್ಟಿಗೆ ತಮ್ಮ ಬೆಂಬಲವನ್ನು ನೀಡಿದರು.

    ಆದರೆ, ತಿಲಕರ ಜೀವನಚರಿತ್ರಕಾರರಾದ ಎ.ಕೆ.ಭಾಗವತ್ ಮತ್ತು ಜಿ.ಪಿ.ಪ್ರಧಾನ್ ಅವರ ಪ್ರಕಾರ, ‘ತಿಲಕರು ಎಂದಿಗೂ ಮಂದಗಾಮಿಗಳ ನೀತಿಗೆ ವಿರುದ್ಧವಾಗಿ ಕ್ರಾಂತಿಕಾರಿಗಳ ಮಾರ್ಗವನ್ನು ಒಪ್ಪಿದವರಲ್ಲ. ಅವರ ಪ್ರಕಾರ, ಮಂದಗಾಮಿಗಳು ಅನುಸರಿಸುತ್ತಿದ್ದ ಸಾಂವಿಧಾನಿಕ ಪ್ರಯತ್ನಗಳು ಯಾವ ಫಲವನ್ನೂ ಕೊಡದೆ ಉಂಟಾದ ಹತಾಶೆಯೇ ಕ್ರಾಂತಿಕಾರಿ ಹೋರಾಟಕ್ಕೆ ದಾರಿ ಮಾಡಿಕೊಟ್ಟಿತು.

    ಇದೇನೇ ಇರಲಿ, ಸಾವರ್ಕರ್ ಅವರ ದೃಷ್ಟಿಯಲ್ಲಿ ತಿಲಕರೆಂದರೆ ಕ್ರಾಂತಿಕಾರಿ ಹೋರಾಟದ ಪರವಾಗಿರುವ ನಾಯಕರಾಗಿದ್ದು, ಕಾಂಗ್ರೆಸ್ಸಿನಂತಹ ಒಂದು ಸಾಮೂಹಿಕ ಹೋರಾಟವನ್ನು ಮುನ್ನಡೆಸಲು ಅವರು ಭೂಗತರಾಗದೆ ಸಾರ್ವಜನಿಕ ಜೀವನದಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿಯಾಗಿದ್ದರು. ವಾಸ್ತವವಾಗಿ, ತಿಲಕರು ಬಹಳ ಹಿಂದಿನಿಂದಲೂ ಬ್ರಿಟಿಷರ ವಿರುದ್ಧ ‘ನಾಗರಿಕ ದಂಗೆ’ಯನ್ನು ಹುಟ್ಟುಹಾಕುವ ಆಲೋಚನೆಯನ್ನು ಹೊಂದಿದ್ದರು. ಇದು ಕ್ರಾಂತಿಕಾರಿಗಳು ಬಯಸುತ್ತಿದ್ದಷ್ಟು ಉಗ್ರವಾದ ಕ್ರಮವೂ ಆಗಿರಲಿಲ್ಲ; ಹಾಗೆಯೇ, ಮಂದಗಾಮಿಗಳು ನಡೆಸುತ್ತಿದ್ದಂತಹ ಹೋರಾಟದಷ್ಟು ನೀರಸವೂ ಆಗಿರಲಿಲ್ಲ. ಇಂಥ ಸಮಯದಲ್ಲಿ ತಿಲಕರಿಗೆ ‘ತೀವ್ರಗಾಮಿ’ ಪರಿಕಲ್ಪನೆಗಳಾದ ಸ್ವದೇಶಿ ಜಾಗೃತಿ ಮತ್ತು ಬ್ರಿಟಿಷ್ ವಸ್ತುಗಳಿಗೆ ಬಹಿಷ್ಕಾರ ಇವೆರಡೂ ‘ಕ್ರಾಂತಿಕಾರಿಗಳನ್ನು ಹುರಿದುಂಬಿಸಲು ಸೂಕ್ತವಾದ ಮಾರ್ಗಗಳಂತೆ ಕಂಡವು. ಅವರ ಈ ಲೆಕ್ಕಾಚಾರ ಸರಿಯಾಗಿತ್ತು. ಏಕೆಂದರೆ, ಬಂಗಾಳಿಗಳನ್ನು ದೇಶವಾಸಿಗಳೆಲ್ಲರೂ ಬೆಂಬಲಿಸಬೇಕು ಎಂಬ ಅವರ ಕರೆಗೆ ಎಲ್ಲರಿಗಿಂತ ಮೊದಲು ಪುಣೆಯ ಕ್ರಾಂತಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು!

    ಆಗ ಸಾವರ್ಕರ್ ಅವರು ತಮ್ಮ ಕೆಲವು ಗೆಳೆಯರೊಂದಿಗೆ ತಿಲಕರನ್ನು ಭೇಟಿ ಮಾಡಿ, ವಿದೇಶಿ ವಸ್ತ್ರಗಳು ಮತ್ತು ಇತರ ವಸ್ತುಗಳನ್ನೆಲ್ಲ ಸುಟ್ಟು ಹಾಕುವ ಒಂದು ಕಾರ್ಯಕ್ರಮವನ್ನು ಪುಣೆಯಲ್ಲಿ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು. ಈ ಪ್ರತಿಭಟನೆಯ ಹೊಣೆಯನ್ನು ತಾವೇ ಹೊತ್ತುಕೊಂಡ ತಿಲಕರು, ಈ ಯುವಕರು ಒಂದು ರಾಶಿ ವಿದೇಶಿ ವಸ್ತ್ರಗಳು ಮತ್ತು ವಸ್ತುಗಳನ್ನು ಗುಡ್ಡೆ ಹಾಕಿ ಅದಕ್ಕೆ ಬೆಂಕಿ ಹಚ್ಚಿದರೆ ಅದು ಗಹನವಾದ ಪರಿಣಾಮವನ್ನು ಉಂಟುಮಾಡಲಿದೆ ಎನ್ನುವ ನಿರ್ಧಾರಕ್ಕೆ ಬಂದರು. ಇದರಂತೆ, ಸಾವರ್ಕರ್ ಮತ್ತು ಇತರರು ವಿದೇಶಿ ವಸ್ತ್ರಗಳು ಮತ್ತಿತರ ವಸ್ತುಗಳನ್ನು ಕಲೆಹಾಕುವ ಕೆಲಸಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಅವರಿಗೆ ಮರಾಠಿ ಪತ್ರಿಕೆ ‘ಭಾಲಾ’ದ ಸಂಪಾದಕ ಬಿ.ಬಿ.ಭೋಪಟ್ಕರ್ ಅವರು ನೆರವು ನೀಡಿದರು. ಅಂದರೆ, ಇವರು ತಮ್ಮ ಕುಟುಂಬವು ನಡೆಸುತ್ತಿದ್ದ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳನ್ನೆಲ್ಲ ಇದಕ್ಕೆ ಕಳಿಸಿಕೊಟ್ಟರು. ಇದರಂತೆ, ಈ ವಿದ್ಯಾರ್ಥಿಗಳೆಲ್ಲ ತಮ್ಮ ಮುಂದಿನ ಹೆಜ್ಜೆ ಹೇಗಿರಬೇಕೆಂದು ನಿರ್ಧರಿಸಲು ೧೯೦೫ರ ಅಕ್ಟೋಬರ್ ೧ರಂದು ಸಭೆ ಸೇರಿದರು. ಆದರೆ, ಆ ಸಭೆಗೆ ಬಾಂಬೆ ಪ್ರಾಂತ್ಯದ ಒಬ್ಬ ಗುಪ್ತಚರ ಅಧಿಕಾರಿಯೂ ಬಂದಿದ್ದ! ಅವನು ಆ ಸಭೆಯ ವಿದ್ಯಮಾನಗಳನ್ನು ದಾಖಲಿಸಿರುವ ಪ್ರಕಾರ, ‘ಆ ಸಭೆಯಲ್ಲಿ ಸಾವರ್ಕರ್ ಎನ್ನುವ ಹೆಸರಿನ ವ್ಯಕ್ತಿಯು ಬ್ರಿಟಿಷರ ಸ್ಪರ್ಶವಿರುವ ಪ್ರತಿಯೊಂದನ್ನೂ ಬಹಿಷ್ಕರಿಸುವಂತೆ ತುಂಬಾ ಏರಿದ ದನಿಯಲ್ಲಿ ತನ್ನ ದೇಶವಾಸಿಗಳಿಗೆ ಕರೆ ಕೊಟ್ಟ. ಅಲ್ಲದೆ, ವಿದೇಶಿ ವಸ್ತುಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದೆಂದು ಕೂಡ ಅವನು ಪ್ರತಿಪಾದಿಸಿದ. ಜೊತೆಗೆ, ಬ್ರಿಟನ್ನಿನಲ್ಲಿ ಮತ್ತು ಇತರೆ ದೇಶಗಳಿಂದ ತಯಾರಾಗಿ ಬರುವ ಉಡುಪುಗಳನ್ನು ವಿದ್ಯಾರ್ಥಿಗಳು ದಸರಾ ಹಬ್ಬದ ದಿನದಂದು ಲಡಖೀ ಪೂಲ್‌ನಲ್ಲಿ ಜಮಾಯಿಸಿ ಸುಟ್ಟು ಹಾಕಬೇಕು ಎಂದು ಭಾಷಣ ಮಾಡಿದ.’

    ಇದರಂತೆ ೧೯೦೫ರ ಅಕ್ಟೋಬರ್ ೮ರಂದು ಪುಣೆಯಲ್ಲಿ ನಡೆದ ಪ್ರತಿಭಟನೆಯು ‘ಪಶ್ಚಿಮ ಭಾರತದಲ್ಲಿ ಬ್ರಿಟಿಷರ ವಿರುದ್ಧ ಆರಂಭವಾದ ಚಳವಳಿಯ ಗಮನಾರ್ಹ ಘಟನೆಯಾಯಿತು. ಇದರ ಅಂಗವಾಗಿ ಸಾವರ್ಕರ್ ನೇತೃತ್ವದಲ್ಲಿ ಹೊರಟ ವಿದ್ಯಾರ್ಥಿಗಳು ತಾವು ಕಲೆಹಾಕಿದ್ದ ವಿದೇಶಿ ವಸ್ತುಗಳನ್ನೆಲ್ಲ ಪುಣೆಯ ‘ನ್ಯೂ ಪ್ರಿಪರೇಟರಿ ಸ್ಕೂಲ್’ ಹತ್ತಿರ ಒಂದು ಗಾಡಿಯಲ್ಲಿ ಪೇರಿಸಿದರು. ನಂತರ ನಗರದ ತುಂಬಾ ಪ್ರತಿಭಟನಾ ಪ್ರದರ್ಶನ ನಡೆಸಿ, ಆದಷ್ಟು ಹೆಚ್ಚಿನ ಜನರನ್ನು ಆಕರ್ಷಿಸಲು ಒಂದು ಸಂಗೀತ ಮೇಳವನ್ನು ನುಡಿಸಿದರು. ಈ ಪ್ರದರ್ಶನದಲ್ಲಿ ‘ಕಾಲ್’ ಮತ್ತು ‘ಭಾಲಾ’ ಪತ್ರಿಕೆಗಳ ಸಂಪಾದಕರೂ ಪಾಲ್ಗೊಂಡಿದ್ದರು. ಬಳಿಕ ತಿಲಕರು ದಾರಿಯ ಮಧ್ಯೆ ಈ ಪ್ರತಿಭಟನೆಗೆ ಸೇರಿಕೊಂಡರು. ಅಂತಿಮವಾಗಿ ಈ ಪ್ರದರ್ಶನವು ಫರ್ಗ್ಯೂಸನ್ ಕಾಲೇಜಿನ ಹತ್ತಿರ ಇದ್ದ ಒಂದು ಪಾಳು ಹವೇಲಿಗೆ ಬಂದು ನಿಂತಾಗ ಸುಮಾರು ಐದು ಸಾವಿರ ಜನರು ಜಮಾವಣೆಗೊಂಡಿದ್ದರು. ಬಳಿಕ, ಕಲೆಹಾಕಿದ್ದ ವಿದೇಶಿ ಛತ್ರಿಗಳು, ವೆಲ್ವೆಟ್ ಟೋಪಿಗಳು, ಸೀಸದ ಕಡ್ಡಿ, ಉಡುಪುಗಳಲ್ಲಿ ಬಳಸುವ ಗುಂಡಿಗಳು ಎಲ್ಲವನ್ನೂ ಅಲ್ಲಿ ಪೇರಿಸಿ, ಬೆಂಕಿ ಹಚ್ಚಲಾಯಿತು. ಆ ಕ್ಷಣದಲ್ಲಿ ‘ಅಲ್ಲಿ ನೆರೆದಿದ್ದವರ ಕಣ್ಣುಗಳಲೆಲ್ಲ ದೇಶಭಕ್ತಿಯು ಪ್ರಜ್ವಲಿಸುತ್ತಿತ್ತು.’

    ಈ ಬಗ್ಗೆ ವರದಿ ಮಾಡಿದ ಬಾಂಬೆ ಪೊಲೀಸ್ ಏಜೆಂಟನೊಬ್ಬ ‘ಪೊಲೀಸ್ ಮಹಾನಿರ್ದೇಶಕರಿಗೆ ಇಲ್ಲಿ ನಡೆಯುವ ಭಾಷಣಗಳ ಬಗ್ಗೆಯೆಲ್ಲ ಗೊತ್ತಿದ್ದರಿಂದ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಅವರು ಅಲ್ಲಿ ಇರುವವರೆಗೂ ಪ್ರತಿಭಟನಾಕಾರರು ಕೂಡ ಏನೂ ಮಾಡಲಿಲ್ಲ. ಆದರೆ, ಪೊಲೀಸ್ ಮಹಾನಿರ್ದೇಶಕರು ಸ್ಥಳದಿಂದ ನಿರ್ಗಮಿಸಿದ ಮೇಲೆ ಅಲ್ಲಿದ್ದ ನಾಯಕರು, ಇದುವರೆಗೂ ಕವಿದಿದ್ದ ಮೋಡ ಈಗ ಸರಿದಿದೆ; ಇನ್ನು ನಾವು ನಮ್ಮ ಕೆಲಸವನ್ನು ಮಾಡಬಹುದು ಎಂದರು’ ಎಂದು ವರದಿ ಮಾಡಿದ. ಈ ಪ್ರತಿಭಟನಾ ಪ್ರದರ್ಶನದಲ್ಲಂತೂ ತಿಲಕರು, ಬ್ರಿಟಿಷ್ ವಸ್ತುಗಳನ್ನು ಬಹಿಷ್ಕರಿಸುವುದು ಏಕೆ ಅಗತ್ಯವೆನ್ನುವುದನ್ನು ಪರಿಣಾಮಕಾರಿಯಾಗಿ ವಿವರಿಸಿದರು. ಪೊಲೀಸ್ ಏಜೆಂಟನ ವರದಿಯ ಪ್ರಕಾರ ‘ ಈ ವಸ್ತುಗಳನ್ನೆಲ್ಲ ಸುಡುವುದಕ್ಕಿಂತ ಬಡವರಿಗೆ ಕೊಡಬೇಕೆಂದು ನಾವು ಯೋಚಿಸಿದ್ದೆವು; ಆದರೆ ದೇಶಭಕ್ತಿ ಮತ್ತು ಧರ್ಮಗಳ ದೃಷ್ಟಿಯಿಂದ ನೋಡಿದರೆ ಇದು ಕೂಡ ಸರಿಯಲ್ಲ ಎನಿಸಿತು. ಏಕೆಂದರೆ, ಒಬ್ಬರಿಗೆ ಕೆಟ್ಟದೆನಿಸಿದ್ದು ಎಲ್ಲರಿಗೂ ಕೆಟ್ಟದ್ದೇ,’ ಎಂದು ತಿಲಕರು ಹೇಳಿದರು. ತಮ್ಮ ಮಾತು ಮುಂದುವರಿಸಿದ ಅವರು, ‘ಇಂದಿನ ಈ ಪ್ರತಿಭಟನೆಯು ಲ್ಯಾಂಕಾಶೈರ್ ಮತ್ತು ಮ್ಯಾಂಚೆಸ್ಟರ್‌ಗಳಲ್ಲಿ ಆತಂಕವನ್ನು ಹುಟ್ಟಿಸಿದೆ,’ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಅಲ್ಲದೆ, ‘ಇನ್ನುಮುಂದೆ ನೀವೆಲ್ಲರೂ ಸ್ವದೇಶಿ ವಸ್ತುಗಳನ್ನೇ ಖರೀದಿಸುವುದಾಗಿ ಸಂಕಲ್ಪ ಮಾಡಬೇಕು,’ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಸ್ಥಳದಲ್ಲಿ ಖುದ್ದಾಗಿ ಉಪಸ್ಥಿತರಿದ್ದ ಪರಾಂಜಪೆಯವರು ಈ ಪ್ರತಿಭಟನೆಗೆ ತಮ್ಮದೇ ಆದ ರೀತಿಯಲ್ಲಿ ನಾಟಕೀಯ ಸ್ಪರ್ಶವನ್ನು ನೀಡಿದರು. ತಮ್ಮ ಭಾಷಣದ ಮಧ್ಯೆಯೇ, ಅಲ್ಲಿ ಧಗಧಗನೆ ಉರಿದು ಬೂದಿಯಾಗುತ್ತಿದ್ದ ವಿದೇಶಿ ವಸ್ತುಗಳ ರಾಶಿಯಿಂದ ಒಂದು ಜಾಕೆಟ್ಟನ್ನು ಎತ್ತಿಕೊಂಡ ಅವರು, ಅದನ್ನು ಅಲ್ಲಿ ನೆರೆದಿದ್ದ ಜನಸ್ತೋಮಕ್ಕೆ ತೋರಿಸುತ್ತ, ಆ ಜಾಕೆಟ್ಟಿನ ಜೇಬುಗಳನ್ನು ತಡಕಾಡಲು ಶುರು ಮಾಡಿದರು. ಅದು ಬ್ರಿಟಿಷರು ಭಾರತದಿಂದ ಕೊಳ್ಳೆ ಹೊಡೆದುಕೊಂಡು ಹೋಗುತ್ತಿದ್ದ ಸಂಪತ್ತೇನಾದರೂ ಅಲ್ಲಿದೆಯೇ ಎಂದು ಹುಡುಕಾಡಿದ ಸಂಕೇತವಾಗಿತ್ತು. ಹೀಗೆ ಮಾಡಿ, ಕೊನೆಗೆ ಆ ಜಾಕೆಟ್ಟನ್ನು ಹತ್ತಿ ಉರಿಯುತ್ತಿದ್ದ ಬೆಂಕಿಯೊಳಕ್ಕೆ ರೊಂಯ್ಯನೆ ಎಸೆದು, ‘ಇದಕ್ಕೆ ಅದೇ ತಕ್ಕ ಜಾಗ!’ ಎಂದರು. ಸಾಮಾನ್ಯ ಜನರನ್ನು ಸಂಘಟಿಸುವಲ್ಲಿ ಮತ್ತು ಅವರನ್ನು ಹುರಿದುಂಬಿಸುವ ವಿಚಾರದಲ್ಲಿ ಎತ್ತಿದ ಕೈಯಾಗಿದ್ದ ತಿಲಕರು, ನೆರೆದಿದ್ದವರನ್ನೆಲ್ಲ ಉದ್ದೇಶಿಸಿ, ‘ಮಹಾಜನಗಳೇ, ನೀವು ಈ ಅಗ್ನಿಯನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಆ ಭಸ್ಮವನ್ನು ಹಣೆಗೆ ಹಚ್ಚಿಕೊಳ್ಳಿ. ನಂತರ, ಇನ್ನುಮುಂದೆ ಯಾವ ಕಾರಣಕ್ಕೂ ಬ್ರಿಟಿಷ್ ಉಡುಪುಗಳನ್ನು ಖರೀದಿಸುವುದಿಲ್ಲಿ ಎಂದು ಪ್ರತಿಜ್ಞೆ ಮಾಡಿ’ ಎಂದು ಕರೆ ನೀಡಿದರು. ಹೀಗೆ ನಡೆದ ಪ್ರತಿಭಟನೆಯು ಅಂತಿಮವಾಗಿ ‘ಶಿವಾಜಿ ಮಹಾರಾಜ್ ಕೀ ಜೈ!’ ಎನ್ನುವ ಘೋಷಣೆಯ ಅನುರಣನದೊಂದಿಗೆ ಸಂಪನ್ನಗೊಂಡಿತು.

    *******
    ಸಾವರ್ಕರ್ ಅವರು ೧೯೦೬ರ ಜೂನ್ ೯ರಂದು ಮುಂಬೈನಿಂದ ‘ಎಸ್.ಎಸ್.ಪರ್ಷಿಯಾ’ ಹಡಗನ್ನೇರಿ ಲಂಡನ್ನಿಗೆ ಹೊರಟಾಗ ಅವರಿಗೆ ಇಪ್ಪತ್ಮೂರರ ಏರುಪ್ರಾಯ. ಆ ಕ್ಷಣಗಳಲ್ಲಿ ಅವರು ತಮ್ಮನ್ನು ಬೀಳ್ಕೊಡಲು ಬಂದಿದ್ದ ತಮ್ಮ ಪತ್ನಿ ಯಮುನಾ, ತಮ್ಮ ಒಂದೂವರೆ ವರ್ಷದ ಮಗು ಪ್ರಭಾಕರ ಮತ್ತು ಕೆಲವು ಆತ್ಮೀಯ ಸ್ನೇಹಿತರಿಗೆ ಕೈ ಬೀಸಿದರು. ಆದರೆ, ಆಗ ಅವರ ಮನಸ್ಸಿನಲ್ಲಿ ‘ಇನ್ನು ಮೂರು ವರ್ಷಗಳ ನಂತರ ನಾನು ನನ್ನ ಈ ತಾಯ್ನಾಡಿಗೆ ಸುರಕ್ಷಿತವಾಗಿ ವಾಪಸ್ಸು ಬರುವೆನೇ? ಬಂದು ನನ್ನ ಪ್ರೀತಿಪಾತ್ರರನ್ನೆಲ್ಲ ಮತ್ತೊಮ್ಮೆ ನೋಡುವೆನೇ?’ ಎನ್ನುವ ಭಾವನೆ ಮಡುಗಟ್ಟಿತ್ತು.

    ಮುಂಬೈ ಬಂದರಿನಲ್ಲಿ ಮೌನವಾಗಿ ಲಂಗರು ಹಾಕಿದ್ದ ಆ ಹಡಗು ಸಾವರ್ಕರ್ ಅವರ ಮನಸ್ಸಿನಲ್ಲಿ ನಡೆಯುತ್ತಿದ್ದ ಕೋಲಾಹಲವನ್ನು ಗ್ರಹಿಸಿತೆನಿಸುತ್ತದೆ! ಅದರಲ್ಲೂ ಸಾವರ್ಕರ್ ಅವರ ಅಂತರಾಳದಲ್ಲಿ ತಮ್ಮ ಬಾಳಸಂಗಾತಿ ಮತ್ತು ಪುಟಾಣಿ ಮಗುವಿನ ಬಗ್ಗೆ ಇದ್ದ ಭಾವನೆಗಳು ತುಂಬಾ ತೀವ್ರವಾಗಿದ್ದವು. ಅವರು ತಮ್ಮ ಈ ಭಾವನೆಗಳನ್ನು ಬಾಯ್ಬಿಟ್ಟು ವ್ಯಕ್ತಪಡಿಸಲಿಲ್ಲ. ಆದರೆ, ಅವರು ಇಂಗ್ಲೆಂಡನ್ನು ತಲುಪಿದ ಮೇಲೆ ಅವರಿಗೆ ಇದನ್ನು ಅದುಮಿಟ್ಟುಕೊಳ್ಳಲಾಗಲಿಲ್ಲ.
    ಸಾವರ್ಕರ್ ಅವರು ಮದುವೆಯಾದ ಮೇಲೆ ತಮ್ಮ ಹೆಚ್ಚಿನ ಸಮಯವನ್ನೆಲ್ಲ ಕುಟುಂಬದಿಂದ ದೂರದಲ್ಲಿದ್ದುಕೊಂಡೇ ಕಳೆದಿದ್ದರು. ಸಪ್ತಪದಿಯನ್ನು ತುಳಿದ ಕೆಲವೇ ದಿನಗಳಲ್ಲಿ ಪದವಿ ಅಧ್ಯಯನಕ್ಕಾಗಿ ಪುಣೆಗೆ ಹೋದ ಅವರು, ನಂತರ ಸ್ವದೇಶಿ ಮತ್ತು ರಾಷ್ಟ್ರೀಯ ಚಳವಳಿಯಲ್ಲಿ ಮುಳುಗಿದರು.

    ತಮ್ಮ ಹೆಂಡತಿ ಮತ್ತು ಮಗುವನ್ನು ನೋಡಲೆಂದು ಅವರು ಆಗಿಂದಾಗ್ಗೆ ಪುಣೆಯಿಂದ ನಾಸಿಕ್‌ಗೆ ಹೋಗುತ್ತಿದ್ದರೆನ್ನುವುದು ನಿಜ. ಅಂದಂತೆ, ಸಾವರ್ಕರ್ ಅವರ ಮಗ ಪ್ರಭಾಕರ ಹುಟ್ಟಿದ್ದು ೧೯೦೫ರಲ್ಲಿ. ದುರಂತವೆಂದರೆ, ಅದೇ ವರ್ಷ ವೈಸ್‌ರಾಯ್ ಕರ್ಜನ್, ಬಂಗಾಳದ ವಿಭಜನೆಗೆ ಮುಂದಾದ. ಇದು ದೇಶದಾದ್ಯಂತ ಪ್ರತಿಭಟನೆಯ ಹೆದ್ದೆರೆಯನ್ನೇ ಸೃಷ್ಟಿಸಿತು. ಆಗ ಸಾವರ್ಕರ್ ಕೂಡ ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

    ಇಷ್ಟರ ಮಧ್ಯೆಯೂ ಅವರು ತಮ್ಮ ಮಗುವಿನೊಂದಿಗೆ ಒಂದಿಷ್ಟು ಕಾಲವನ್ನು ಕಳೆಯುತ್ತಿದ್ದರು. ಆದರೆ ತಂದೆಯಾದವನು ಒಂದು ಮಗುವಿಗೆ ಎಷ್ಟು ಸಮಯವನ್ನು ಕೊಡಬೇಕೋ ಅಷ್ಟನ್ನು ಕೊಡಲು ಅವರಿಗೆ ಆಗುತ್ತಿರಲಿಲ್ಲ. ಇಂಗ್ಲೆಂಡಿಗೆ ಹೋದಮೇಲಂತೂ ಸಾವರ್ಕರ್ ಅವರಿಗೆ ತಮ್ಮ ಮಗನೆಡೆಗಿನ ಸೆಳೆತ ಮತ್ತಷ್ಟು ಜೋರಾಯಿತು. ಇದನ್ನು ಅವರು ತಮಗೆ ತುಂಬಾ ಇಷ್ಟದ ಮಾಧ್ಯಮವಾಗಿದ್ದ ಕಾವ್ಯ ಪ್ರಕಾರದಲ್ಲಿ ವ್ಯಕ್ತಪಡಿಸಿದರು. ಇಷ್ಟೇ ಅಲ್ಲ, ತಮ್ಮ ಮುದ್ದಿನ ಮಗನನ್ನು ಕುರಿತು ಅದೆಷ್ಟೋ ಪದ್ಯಗಳನ್ನು ಬರೆದರು.

    ಅಂತಹ ಕೆಲವು ಪದ್ಯಗಳಲ್ಲಿ ಅವರು ‘ಅಂಬೆಗಾಲಿಡುವ ನನ್ನ ಮಗನನ್ನು ನೋಡುತ್ತ, ಹಾಗೆಯೇ ಮುಳುಗಿ ಬಿಡಬೇಕು!’ಎನ್ನುವ ತೀವ್ರವಾದ ಹಂಬಲವನ್ನು ಪದಗಳಲ್ಲಿ ಅಭಿವ್ಯಕ್ತಿಗೊಳಿಸಿದರು. ಅದರಲ್ಲೂ ‘ಪ್ರಭ್ಯಾ ಪ್ರಿಯಕರ’ ಎನ್ನುವ ಒಂದು ಕವನದಲ್ಲಂತೂ ‘ನಾನೀಗ ಸಾಗರದಾಚೆಗೆ ಹೋಗುವ ಹೊತ್ತು ಬಂದಿದೆ/ ಪ್ರೀತಿಪಾತ್ರರನ್ನೆಲ್ಲ ಬಿಟ್ಟು’ ಎಂದು ಬೇಸರ ಹೊರಹಾಕಿದ್ದಾರೆ. ಹೀಗಾಗಿ, ಇಂಗ್ಲೆಂಡಿಗೆ ಹೋದಮೇಲೂ ಸಾವರ್ಕರ್ ತಮ್ಮ ಕಂದನನ್ನು ಕುರಿತು, ‘ನನ್ನ ಮುದ್ದುಮಗುವೇ/ ನೀನಿಲ್ಲದೆ ಇರಬಹುದು ನನ್ನ ಕಣ್ಣೆದುರಿನಲ್ಲಿ/ ಆದರೂ ಹಿಗ್ಗುವುದು ನನ್ನ ಹೃದಯ ಸದಾ ಸಂತೋಷದಲ್ಲಿ/’ ಎಂದು ಬಣ್ಣಿಸಿದರು.

    ಆದರೆ, ತಮ್ಮ ಪುಟ್ಟಕಂದನನ್ನು ಮತ್ತೊಮ್ಮೆ ಜೀವಂತವಾಗಿ ನೋಡುತ್ತೇನೋ, ಇಲ್ಲವೋ ಎನ್ನುವ ಸಾವರ್ಕರ್ ಅವರ ಭಯವು ೧೯೦೯ರಲ್ಲಿ ನಿಜವಾಗಿ ಪರಿಣಮಿಸಿತು. ಏಕೆಂದರೆ, ಆ ವರ್ಷ ಪುಟ್ಟ ಪ್ರಭಾಕರನಿಗೆ ದಡಾರ ಬಂದು, ಮಗುವು ಪ್ರಾಣ ಬಿಟ್ಟಿತು. ಇಂಗ್ಲೆಂಡಿನಲ್ಲಿದ್ದ ಸಾವರ್ಕರ್‌ಗೆ ಈ ವಿಚಾರ ತಿಳಿದು ಸಿಡಿಲು ಬಡಿದಂತಾಯಿತು. ಆಗ ತಮಗೆ ಉಕ್ಕಿಬಂದ ದುಃಖವನ್ನು ಅವರು ‘ನನ್ನ ಮುದ್ದುಮಗುವೇ/ ನೀನಿಲ್ಲದೆ ಇರಬಹುದು ನಮ್ಮೊಂದಿಗೀಗ/ ಆದರೇನು, ಸುಳಿದಾಡುತ್ತಲೇ ಇರುವೆ ಸದಾ ನೀನೆನ್ನ ಕಣ್ಣ ಮುಂದೆ’ ಎಂದು ಅಕ್ಷರಗಳಲ್ಲಿ ಹಿಡಿದಿಟ್ಟರು.

    ಕ್ರಾಂತಿಕಾರಿಗಳ ಪತ್ನಿಯರ ಸ್ಥಿತಿಗತಿಗಳು ಮತ್ತು ಭವಿಷ್ಯದ ಬಗ್ಗೆಯೂ ಸಾವರ್ಕರ್ ಅವರಿಗೆ ಸ್ಪಷ್ಟವಾದ ಆಲೋಚನೆಗಳಿದ್ದವು. ತಾವು ಬಹಳ ಪ್ರೀತಿಸುತ್ತಿದ್ದ -ಆದರೆ ಅವರೊಂದಿಗೆ ಸಾಮಾನ್ಯರಂತೆ ಇರಲಾರದ- ತಮ್ಮ ಬಾಳಸಂಗಾತಿ ಯಮುನಾ ಅವರಿಗೆ ಅವರು ಇದನ್ನೆಲ್ಲ ಹೇಳಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ, ಕ್ರಾಂತಿಕಾರಿಯೊಬ್ಬ ತನ್ನ ಕರ್ತವ್ಯವನ್ನು ನೆರವೇರಿಸುವಾಗೇನಾದರೂ ಹುತಾತ್ಮನಾದರೆ ಅವನ ಪತ್ನಿಯು ತನಗೂ ತನ್ನ ಮಕ್ಕಳಿಗೂ ಸರಿಹೊಂದುವ ಇನ್ನೊಬ್ಬರನ್ನು ಮದುವೆಯಾಗಿ, ತನ್ನ ಮುಂದಿನ ಬಾಳನ್ನು ಸುಖ-ಸಂತೋಷಗಳಿಂದ ಕಳೆಯಬೇಕು ಎನ್ನುವುದು ಅವರ ನಿಲುವಾಗಿತ್ತು. ಅವರ ಸಹಚರರಾಗಿದ್ದ ಸೇನಾಪತಿ ಬಾಪಟ್ ಅವರು ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟರು. ಇಂಗ್ಲೆಂಡಿನಿಂದ ಭಾರತಕ್ಕೆ ಬಂದ ನಂತರ ಭೂಗತರಾಗಿದ್ದ ಅವರನ್ನು ಸೆರೆ ಹಿಡಿಯಲು ಬ್ರಿಟಿಷರು ಶತಪ್ರಯತ್ನ ಮಾಡುತ್ತಿದ್ದರು. ಆಗ ತಮ್ಮ ಪತ್ನಿಗೆ ಒಂದು ಮತ್ತು ಅವಿವಾಹಿತನಾಗಿದ್ದ ತಮ್ಮ ಗೆಳೆಯನೊಬ್ಬನಿಗೆ ಒಂದು ಪತ್ರವನ್ನು ಬರೆದ ಅವರು, ‘ನಾನು ಈಗಾಗಲೇ ಸತ್ತು ಹೋಗಿದ್ದೇನೆಂದು ನೀವಿಬ್ಬರೂ ತಿಳಿದುಕೊಂಡು, ಮದುವೆಯಾಗಿ’ ಎಂದು ತಿಳಿಸಿದ್ದರು. ಸಾವರ್ಕರ್ ಮತ್ತು ಬಾಪಟ್ ಅವರ ಈ ನಿಲುವುಗಳು ಆ ಕಾಲದ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೋಡಿದರೆ ನಿಜಕ್ಕೂ ನಿಜವಾದ ಅರ್ಥದಲ್ಲಿ ಅತ್ಯಂತ ಪ್ರಗತಿಪರವಾಗಿದ್ದವು.

    ಸಾವರ್ಕರ್ ಅವರು ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದ ಹಡಗಿನಲ್ಲಿ ಅವರಿದ್ದ ಕ್ಯಾಬಿನ್ ತೀರಾ ಹಿಂಬದಿಯ ತುದಿಯಲ್ಲಿತ್ತು. ಈ ಕ್ಯಾಬಿನ್ನನ್ನು ಅವರು ಹೊಕ್ಕಾಗ ಅಲ್ಲಿ ಅವರಿಗೆ ಇಪ್ಪತ್ತರ ಆಚೀಚೆ ಇದ್ದ ಸುಂದರವಾದ ತರುಣನೊಬ್ಬ ಕಂಡ. ಆ ಕ್ಷಣಗಳಲ್ಲಿ ತನ್ನ ಸಾಮಾನು ಸರಂಜಾಮುಗಳನ್ನೆಲ್ಲ ಬಿಚ್ಚಿಡುತ್ತಿದ್ದ ಆತ ಯಾರೆಂದರೆ, ಪಂಜಾಬಿನ ಅಮೃತಸರದವನಾದ ಹರನಾಮ್ ಸಿಂಗ್. ಸಾವರ್ಕರ್ ಅವರು ಈತನೊಂದಿಗೆ ಆ ಸಣ್ಣ ಕ್ಯಾಬಿನನ್ನು ಹಂಚಿಕೊಳ್ಳಬೇಕಾಗಿತ್ತು. ಆತ ಕೂಡ ಇವರಂತೆಯೇ ಕಾನೂನು ಪದವಿಯ ವ್ಯಾಸಂಗಕ್ಕೆಂದೇ ಇಂಗ್ಲೆಂಡಿಗೆ ಹೊರಟಿದ್ದ. ಹೀಗಾಗಿ ಇಬ್ಬರೂ ಬಹುಬೇಗ ಒಳ್ಳೆಯ ಗೆಳೆಯರಾದರು. ಇದಲ್ಲದೆ, ಸಾವರ್ಕರ್ ಅವರಿಗೆ ಇನ್ನೂ ಇಬ್ಬರೊಂದಿಗೆ ಸ್ನೇಹವೇರ್ಪಟ್ಟಿತು. ಅದರಲ್ಲಿ ಒಬ್ಬರು ಮುವ್ವತ್ತು ವರ್ಷದ ಪಂಜಾಬಿ ವ್ಯಕ್ತಿ. ಸಾವರ್ಕರ್ ಅವರು ತಮ್ಮ ಜ್ಞಾಪಕ ಚಿತ್ರಶಾಲೆಯ ಸಂಪುಟದಲ್ಲಿ ಈ ವ್ಯಕ್ತಿಯನ್ನು ‘ಶ್ರೀಮಾನ್ ಶಿಷ್ಟಾಚಾರಿ’ ಎಂದಷ್ಟೇ ದಾಖಲಿಸಿದ್ದಾರೆ. ಇನ್ನೊಬ್ಬರೆಂದರೆ, ‘ಕೇಶವಾನಂದ’ರು. ಆದರೆ, ಇದು ಕೂಡ ನಿಜವಾದ ಹೆಸರಲ್ಲ. ತಮ್ಮ ಮೊದಲ ಗೆಳೆಯನನ್ನು ‘ಶಿಷ್ಟಾಚಾರಿ’ ಎನ್ನುವ ಹೆಸರಿನಿಂದ ಕರೆದಿರಲು ಎರಡು ಕಾರಣಗಳಿದ್ದವು. ಮೊದಲನೆಯದು, ಈ ವ್ಯಕ್ತಿಯು ತುಂಬಾ ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿದ್ದು, ಇಂಗ್ಲೀಷಿನವರ ರೀತಿ ರಿವಾಜುಗಳನ್ನು ಅನುಸರಿಸುತ್ತಿದ್ದ ಪಂಜಾಬಿಯಾಗಿದ್ದರು. ಇನ್ನೊಂದು ಕಾರಣವೆಂದರೆ, ಸ್ವಾತಂತ್ರ್ಯವನ್ನು ಗಳಿಸುವುದಕ್ಕೂ ಮೊದಲು ಕೈಗೊಂಡ ಹಡಗಿನ ಪ್ರಯಾಣವನ್ನು ಕುರಿತು ತಾವು ಬರೆದಿಡುತ್ತಿರುವ ನೆನಪಿನ ವೃತ್ತಾಂತವು ಯಾರಿಗೂ ಗೊತ್ತಾಗಬಾರದೆನ್ನುವುದು ಸಾವರ್ಕರ್ ಅವರ ಇಂಗಿತವಾಗಿದ್ದಿರಬಹುದು. ಮಿಕ್ಕಂತೆ ‘ಕೇಶವಾನಂದ’ ಅವರು ಭಾರತದ ಆಚೆ ‘ಅಭಿನವ ಭಾರತ’ದ ಮೊಟ್ಟಮೊದಲ ಸದಸ್ಯರಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರೆ, ‘ಶಿಷ್ಟಾಚಾರಿ’ಯವರು ಸಾವರ್ಕರ್ ಅವರಿಗೆ ಅಗತ್ಯವಾಗಿದ್ದ ಶಸ್ತ್ರಾಸ್ತ್ರಗಳನ್ನೂ ಪುಸ್ತಕಗಳನ್ನೂ ಒಂದು ಬಟ್ಟೆಯ ಗಂಟಿನಲ್ಲಿಟ್ಟು ಪೂರೈಸಿದ್ದರು. ಅಲ್ಲದೆ, ಕ್ರಾಂತಿಕಾರಿ ಚಟುವಟಿಕೆಗಳ ಬಗ್ಗೆ ಇದ್ದ ಕರಪತ್ರವನ್ನು ಪಂಜಾಬಿ ಭಾಷೆಗೆ ಅನುವಾದಿಸಿದ ಈ ‘ಶಿಷ್ಟಾಚಾರಿ’ಯು, ಅದನ್ನು ಆ ಪ್ರಾಂತ್ಯದಲ್ಲೆಲ್ಲ ಹಂಚಿದ್ದರು. ಮಿಗಿಲಾಗಿ, ಈ ವ್ಯಕ್ತಿಯು ಸಾವರ್ಕರ್ ಮತ್ತು ಇತರ ಭಾರತೀಯರಿಗೆ ಮೊಟ್ಟಮೊದಲ ಹಡಗಿನ ಪಯಣದಲ್ಲಿ ಅನುಸರಿಸಿಬೇಕಾದ ಬ್ರಿಟಿಷ್ ರೀತಿರಿವಾಜುಗಳನ್ನು ಹೇಳಿಕೊಟ್ಟವರಾಗಿದ್ದರು. ಅಂದರೆ, ಟೈಯನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದರಿಂದ ಹಿಡಿದು ಊಟ-ತಿಂಡಿ ಮಾಡುವಾಗ ಚುಚ್ಚು ಚಮಚೆಗಳನ್ನು ಹೇಗೆ ಹಿಡಿದುಕೊಳ್ಳಬೇಕು ಎನ್ನುವವರೆಗೆ ಸಕಲ ಸಂಗತಿಗಳನ್ನೂ ಅವರು ಕಲಿಸಿ ಕೊಟ್ಟಿದ್ದರು. ಸಾವರ್ಕರ್ ಎಂದಿಗೂ ಶುದ್ಧ ಸಸ್ಯಾಹಾರದ ಪರವಾಗಿರಲಿಲ್ಲ. ಆದರೆ, ಭಾರತದಲ್ಲಿ ಅವರಿದ್ದ ಪರಿಸರದಲ್ಲಿ ಕೋಳಿಮೊಟ್ಟೆ, ಮೀನು ಮತ್ತು ಮಾಂಸವನ್ನು ತಿನ್ನುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಇವೆಲ್ಲವನ್ನೂ ಅವರು ಮೊಟ್ಟಮೊದಲ ಬಾರಿಗೆ ತಮ್ಮ ಚೊಚ್ಚಲ ಹಡಗಿನ ಪ್ರಯಾಣದಲ್ಲಿ ಸವಿದರು. ಆ ಸಮಯದಲ್ಲಿ ಸಾವರ್ಕರ್ ಅವರಿಗೆ ಚುಚ್ಚು ಚಮಚೆ ಮತ್ತು ನೈಫ್ ಅನ್ನು ಹಿಡಿದುಕೊಂಡು, ಮಾಂಸದಲ್ಲಿರುವ ಮೂಳೆಯ ಚೂರುಗಳನ್ನು ಬೇರ್ಪಡಿಸುವುದು ಹೇಗೆಂದು ಸರಿಯಾಗಿ ಗೊತ್ತಿಲ್ಲದೆ ಒದ್ದಾಡುತ್ತಿದ್ದರು. ಆಗ ಕೂಡ ‘ಶಿಷ್ಟಾಚಾರಿ’ಯವರೇ ಅವರ ನೆರವಿಗೆ ಬಂದು, ‘ಬಲಗೈಯಲ್ಲಿ ನೈಫ್ ಅನ್ನೂ ಎಡಗೈಯಲ್ಲಿ ಚುಚ್ಚುಚಮಚೆಯನ್ನೂ ಹಿಡಿದುಕೊಂಡು, ಚುಚ್ಚು ಚಮಚೆಗೆ ಮಾಂಸವನ್ನು ಸಿಕ್ಕಿಸಿಕೊಂಡು ಅದನ್ನು ಬಾಯಿಗೆ ಇಟ್ಟುಕೊಳ್ಳಬೇಕು,’ ಎಂದು ಹೇಳಿಕೊಟ್ಟರು. ಇದಾದಮೇಲೆ ಸಾವರ್ಕರ್ ಅವರು ಭಾರತೀಯ ಶೈಲಿಯಲ್ಲಿ ಸಾಂಪ್ರದಾಯಿಕವಾಗಿ ಊಟ ಮಾಡುವುದನ್ನು ಬಿಡುತ್ತ ಬಂದರು.

    ಹೀಗೆ ಮುಂಬೈನಿಂದ ಇಂಗ್ಲೆಂಡಿನತ್ತ ಹೊರಟ ಹಡಗು ಮಾರ್ಗಮಧ್ಯದಲ್ಲಿ ಫ್ರಾನ್ಸ್‌ನ ಮಾರ್ಸೆಲೆಸ್ ಬಂದರಿನಲ್ಲಿ ಲಂಗರು ಹಾಕಿತು. ಆಗ ಸಾವರ್ಕರ್ ಅವರು ಹಡಗಿನಿಂದ ಇಳಿದು, ತಮ್ಮ ಅಚ್ಚುಮೆಚ್ಚಿನ ಕ್ರಾಂತಿಕಾರಿಗಳಲ್ಲಿ ಒಬ್ಬರಾದ, ಇಟಲಿಯ ‘ಸಿಡಿಲ ಮರಿ’ ಮ್ಯಾಜಿನಿಯು ಆಸ್ಟ್ರಿಯನ್ನರು ತಮ್ಮನ್ನು ಸೆರೆ ಹಿಡಿಯುವುದರಿಂದ ತಪ್ಪಿಸಿಕೊಳ್ಳಲು ಅಡಗಿಕೊಂಡಿದ್ದ ತಾಣವನ್ನು ನೋಡಲೆಂದು ಹೋದರು. ಅಂದಂತೆ, ಮ್ಯಾಜಿನಿಯು ಇದೇ ಊರಿನಲ್ಲಿ ‘ಯಂಗ್ ಇಟಲಿ’ ಎನ್ನುವ ತನ್ನದೇ ಆದ ಸಂಘಟನೆಯನ್ನು ಕಟ್ಟಿ, ಬೆಳೆಸಿದ್ದ. ಇಂಥ ಒಬ್ಬ ಅಪ್ರತಿಮ ಹೋರಾಟಗಾರ ನೆಲೆಸಿದ್ದ ಊರನ್ನು ನೋಡಲೆಂದು ಹೊರಟ ಸಾವರ್ಕರ್ ಅವರು ಹೆಚ್ಚಿನ ಮಾಹಿತಿ ಸಿಗಬಹುದೆಂದು ಸ್ಥಳೀಯ ಪ್ರವಾಸಿ ಮಾರ್ಗದರ್ಶಿಯೊಬ್ಬನನ್ನು ಗೊತ್ತುಮಾಡಿಕೊಂಡರು. ಆದರೆ ಆತನಿಗೆ ಮ್ಯಾಜಿನಿಯ ಬಗ್ಗೆ ಕೇಳಿದಾಗ, ‘ಸ್ವಾಮಿ, ನಾನು ಮ್ಯಾಜಿನಿ ಎನ್ನುವ ಹೆಸರನ್ನೇ ಕೇಳಿಲ್ಲ,’ ಎಂದ. ನಂತರ ಸಾವರ್ಕರ್ ಅವರಯು ಸ್ಥಳೀಯ ಪತ್ರಿಕೆಯ ಸಂಪಾದಕನೊಬ್ಬನನ್ನು ಈ ಬಗ್ಗೆ ವಿಚಾರಿಸಿದರು. ಅವನು, ‘ಸರ್, ಮ್ಯಾಜಿನಿ ಎಲ್ಲಿದ್ದ ಎನ್ನುವುದನ್ನು ತಿಳಿದುಕೊಳ್ಳಬೇಕೆಂದರೆ ಮೊದಲಿಗೆ ನಾನು ಅವನು ಇಟಲಿಯಲ್ಲಿ ಯಾವ ಊರಿಗೆ ಸೇರಿದವನು ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದ. ಒಟ್ಟಿನಲ್ಲಿ, ಮ್ಯಾಜಿನಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಮಾರ್ಸೆಲೆಸ್ ಪಟ್ಟಣವನ್ನು ವೀಕ್ಷಿಸಿದ ಸಾವರ್ಕರ್, ವಾಪಸ್ ಹಡಗಿಗೆ ಬಂದರು. ಆದರೆ, ಇಟಲಿಯ ಸಮುದ್ರ ತಟದಲ್ಲಿರುವ ಈ ಪಟ್ಟಣವು ಇನ್ನು ನಾಲ್ಕು ವರ್ಷಗಳಲ್ಲಿ ತಮ್ಮ ಬದುಕಿನಲ್ಲಿ ನಡೆಯಲಿರುವ ಒಂದು ಅಸಾಧಾರಣ ಘಟನೆಯ ಜೊತೆ ತಳುಕು ಹಾಕಿಕೊಳ್ಳಲಿದೆ ಎನ್ನುವ ಒಂದು ಸಣ್ಣ ಊಹೆಯೂ ಆ ಕ್ಷಣದಲ್ಲಿ ಅವರಿಗಿರಲಿಲ್ಲ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!