ಸಚಿವರ ಪಟ್ಟಿಯೊಂದಿಗೆ ದಿಲ್ಲಿಗೆ ಹೋದ ಯಡಿಯೂರಪ್ಪ ಅವರನ್ನು ನಡ್ಡಾ ಬರಿಗೈಲಿ ಕಳುಹಿಸಿದರು. ಇನ್ನು ಸುಮ್ಮನಿದ್ದರೆ ಸಾಧ್ಯವಿಲ್ಲ ಎನ್ನುವುದು ಯಡಿಯೂರಪ್ಪನವರಿಗೆ ಆಗಲೇ ಮನವರಿಕೆಯಾಗಿ ಹೋಯಿತು. ಆದದ್ದಾಗಲಿ ಎಂದು ಕೊನೆಯ ಅಸ್ತ್ರ ಪ್ರಯೋಗಿಸಲು ಮುಂದಾದರು. ರಾಜ್ಯ ನಾಯಕರ ಮೂಲಕ ಪದೇದೇ ನಾಯಕತ್ವ ಬದಲಾವಣೆಯ ಮಾತು ಆಡಿಸುತ್ತಿರುವವರಿಗೂ ಉತ್ತರ ನೀಡುವುದು ಅನಿವಾರ್ಯವಾಗಿತ್ತು.
ಅಶೋಕ ಹೆಗಡೆ
ತಾಳ್ಮೆಗೂ ಮಿತಿ ಇರುತ್ತದೆ. ಅದನ್ನು ಪರೀಕ್ಷಿಸಲು ಹೋದರೆ ವಿಧ್ವಂಸ ಕಟ್ಟಿಟ್ಟ ಬುತ್ತಿ. ಎಲ್ಲವೂ ತಮ್ಮ ಮೂಗಿನ ನೇರಕ್ಕೇ ನಡೆಯಬೇಕು ಎಂಬ ಇರಾದೆ ಹೊಂದಿರುವ ಬಿಜೆಪಿ ವರಿಷ್ಠರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅದನ್ನು ಚೆನ್ನಾಗಿ ಅರ್ಥ ಮಾಡಿಸಿದ್ದಾರೆ. ವರಿಷ್ಠರು ಪ್ರತಿಷ್ಠೆಯ ಹುಂಬತನಕೆ ಜೋತು ಬಿದ್ದರೆ ಮತ್ತೊಂದು ರಾಜ್ಯವನ್ನು ಶಾಶ್ವತವಾಗಿ ಕಳೆದುಕೊಳ್ಳಲು ಬಿಜೆಪಿ ಸಿದ್ಧವಾಗಬೇಕಾಗುತ್ತದೆ.
ಸರಕಾರ ರಚನೆಯಿಂದ ಹಿಡಿದು ಇಲ್ಲಿಯವರೆಗೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಎಲ್ಲರೂ ಯಡಿಯೂರ‍್ಪನವರಿಗೆ ಕಿರಿಕಿರಿ ನೀಡುತ್ತಲೇ ಬಂದಿದ್ದಾರೆ. ಯಡಿಯೂರಪ್ಪ ಸಹ ಇದುವರೆಗೆ ಮೌನದಿಂದಲೇ ಸಹಿಸಿಕೊಂಡು ಬಂದಿದ್ದರು. ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕವೂ ಸಂಪುಟ ವಿಸ್ತರಣೆ ಅನುಮತಿ ನೀಡದೇ ವರಿಷ್ಠರು ಸತಾಯಿಸಿದ್ದಾರೆ. ಸಚಿವರ ಪಟ್ಟಿಯೊಂದಿಗೆ ದಿಲ್ಲಿಗೆ ಹೋದ ಯಡಿಯೂರಪ್ಪ ಅವರನ್ನು ನಡ್ಡಾ ಬರಿಗೈಲಿ ಕಳುಹಿಸಿದರು. ಇನ್ನು ಸುಮ್ಮನಿದ್ದರೆ ಸಾಧ್ಯವಿಲ್ಲ ಎನ್ನುವುದು ಯಡಿಯೂರಪ್ಪನವರಿಗೆ ಆಗಲೇ ಮನವರಿಕೆಯಾಗಿ ಹೋಯಿತು. ಆದದ್ದಾಗಲಿ ಎಂದು ಕೊನೆಯ ಅಸ್ತ್ರ ಪ್ರಯೋಗಿಸಲು ಮುಂದಾದರು. ರಾಜ್ಯ ನಾಯಕರ ಮೂಲಕ ಪದೇಪದೇ ನಾಯಕತ್ವ ಬದಲಾವಣೆಯ ಮಾತು ಆಡಿಸುತ್ತಿರುವವರಿಗೂ ಉತ್ತರ ನೀಡುವುದು ಅನಿವಾರ್ಯವಾಗಿತ್ತು. ಆಗ ಬತ್ತಳಿಕೆಯಿಂದ ಹೊರ ಬಂದದ್ದೇ ವೀರಶೈವ ಲಿಂಗಾಯತ ಮೀಸಲು ಅಸ್ತ್ರ.
ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ 2ಎ ಪ್ರವರ್ಗಕ್ಕೆ ಸೇರಿಸುವ ನಿರ್ಧಾರಕ್ಕೆ ಯಡಿಯೂರಪ್ಪ ಬಂದರು. ಸಂಪುಟ ಸಭೆಯ ಮುನ್ನಾದಿನ ತಡರಾತ್ರಿ ಅದನ್ನು ಕಾರ್ಯಸೂಚಿಗೆ ಸೇರಿಸಿದ್ದಷ್ಟೇ ಅಲ್ಲ, ಮಾಧ್ಯಮಗಳಲ್ಲಿ ದೊಡ್ಡ ರೀತಿಯಲ್ಲಿ ಸುದ್ದಿಯಾಗುವಂತೆಯೂ ನೋಡಿಕೊಂಡರು. ಇದೊಂದು ಅಸ್ತ್ರಕ್ಕೆ ವರಿಷ್ಠರು ಪತರಗುಟ್ಟು ಹೋದರು. ದಿಲ್ಲಿಗೆ ಬಂದಾಗ ಭೇಟಿಗಾಗಿ ಯಡಿಯೂರಪ್ಪನವರನ್ನು ಯಾವ ಅಮಿತ್ ಶಾ ಸತಾಯಿಸುತ್ತಿದ್ದರೋ, ಅದೇ ಅಮಿತ್ ಶಾ ಬೆಳ್ಳಂಬೆಳಗ್ಗೆ ಕರೆ ಮಾಡಿ ಅವಸರ ಅವಸರವಾಗಿ ನಿರ್ಣಯವನ್ನು ಮಾಡಬೇಡಿ ಎಂದು ಬೇಡಿಕೊಂಡರು. ಯಡಿಯೂರಪ್ಪ ಪ್ರಯೋಗಿಸಿದ ಅಸ್ತ್ರ ಅಷ್ಟು ಪರಿಣಾಮಕಾರಿಯಾಗಿತ್ತು.
ಯಾವುದೇ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಬೇಕಿದ್ದರೆ ರಾಜ್ಯ ಸಚಿವ ಸಂಪುಟ ಶಿಫಾರಸು ಮಾಡಿ ಕೇಂದ್ರ ಸರಕಾರಕ್ಕೆ ಕಳುಹಿಸಬೇಕು. ಕೇಂದ್ರ ಸರಕಾರ ಆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕು. ವೀರಶೈವ ಲಿಂಗಾಯತರನ್ನು 2ಎ ಪ್ರವರ್ಗಕ್ಕೆ ಸೇರಿಸುವ ಶಿಫಾರಸನ್ನು ಒಪ್ಪಿಕೊಳ್ಳದೇ ಕೇಂದ್ರಕ್ಕೆ ವಿಧಿ ಇರಲಿಲ್ಲ. ಒಪ್ಪಿಗೆ ನೀಡದಿದ್ದರೆ ರಾಜ್ಯದಲ್ಲಿನ ಪ್ರಬಲ ಸಮುದಾಯವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ಯಡಿಯೂರಪ್ಪ ಬಿಟ್ಟರೆ ಬಿಜೆಪಿಯಲ್ಲಿ ಆ ಸಮುದಾಯದ ಪ್ರಬಲ ನಾಯಕರಿಲ್ಲ. ಅದೂ ಅಲ್ಲದೇ ಇಂತಹ ವಿಷಯದಲ್ಲಿ ಪ್ರತಿಪಕ್ಷಗಳೂ ಯಡಿಯೂರಪ್ಪನವರ ಬೆನ್ನಿಗೆ ನಿಲ್ಲುತ್ತವೆ. ಈ ಸೂಕ್ಷ್ಮ ಅರಿತ ಶಾ ತಾವೇ ಅಖಾಡಕ್ಕೆ ಇಳಿದಿದ್ದಲ್ಲದೇ, ಸಂಪುಟ ವಿಸ್ತರಣೆ ಪಟ್ಟಿಗೆ ಶೀಘ್ರ ಅನುಮತಿ ನೀಡುವ ಭರವಸೆಯನ್ನೂ ನೀಡಿದ್ದಾರೆ.
ಸೌಹಾರ್ದದ ದಾರಿ ಅಗತ್ಯ
ಯಡಿಯೂರಪ್ಪನವರಿಗೆ ವಯಸ್ಸಾಗಿದೆ ನಿಜ. ಹಾಗಂತ ಅವರನ್ನು ಏಕಾಏಕಿ ಅಧಿಕಾರದಿಂದ ಇಳಿಸಿ ಮೂಲೆಗುಂಪು ಮಾಡುವ ಪ್ರಯತ್ನ ಸರಿಯಲ್ಲ. ಅಧಿಕಾರ ಹಿಡಿಯಲು ಯಡಿಯೂರಪ್ಪ ಬೇಕು, ಆದರೆ ಯಡಿಯೂರಪ್ಪ ಅಧಿಕಾರದಲ್ಲಿರುವುದು ಬೇಡ ಎಂದರೆ ಹೇಗೆ? ಹೇಗಿದ್ದರೂ ಯಡಿಯೂರಪ್ಪ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ. ಹೀಗಾಗಿ “ಮುಂದಿನ ಚುನಾವಣೆಗೆ ನಿಮ್ಮದೇ ನೇತೃತ್ವ. ಆದರೆ ನಾವು ಸೂಚಿಸಿದವರನ್ನು ಮುಖ್ಯಮಂತ್ರಿ ಮಾಡಬೇಕು’ ಎಂಬ ಸೂತ್ರವನ್ನು ವರಿಷ್ಠರು ಯಡಿಯೂರಪ್ಪನವರ ಮುಂದೆ ಇರಿಸಬಹುದು. ಅದೇರಿತಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಪುತ್ರ ವಿಜಯೇಂದ್ರನನ್ನು ದೂರ ಇಡಿ ಎಂದು ಸೌಮ್ಯವಾಗಿಯೇ ಸಲಹೆ ಕೊಡಬಹುದು. ಯಾರದೋ ಮಾತು ಕೇಳಿಕೊಂಡು ಮೃದು ಮಾರ್ಗ ಬಿಟ್ಟು ಒರಟು ದಾರಿಯಲ್ಲಿ ವರಿಷ್ಠರು ಹೊರಟರೆ, ಯಡಿಯೂರಪ್ಪ ಮತ್ತಷ್ಟು ವ್ಯಗ್ರರಾಗುತ್ತಾರೆ. ಯಡಿಯೂರಪ್ಪ ಸಿಟ್ಟಿನ ಪರಿಣಾಮವನ್ನು ಬಿಜೆಪಿ ಒಮ್ಮೆ ಹೀನಾಯ ಸೋಲಿನ ಮೂಲಕ ಕಂಡಿದೆ. ಮತ್ತೆ ಹಾಗೆಯೇ ಆಗಬೇಕೆಂದು ಬಯಸುವುದು ಮೂರ್ಖತನ.
ಅಲ್ಲದೇ, ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶುಇ ಅವರಂತಹ ದಿಗ್ಗಜರನ್ನೇ ತೆರೆಮರೆಗೆ ಸರಿಸಿದ ಅಮಿತ್ ಶಾ- ಮೋದಿ ಹೆಸರಿಗೆ ಮತ್ತೊಂದು ಕಳಂಕ ಅಂಟುತ್ತದೆ.ನಿಜವಾಗಿ ವರಿಷ್ಠರು ಮಾಡಬೇಕಾದದ್ದು ರಾಜ್ಯದ ಕೆಲವು ಶಾಸಕರು, ಮುಖಂಡರಿಗೆ ಮೂಗುದಾರ ಹಾಕುವ ಕೆಲಸವನ್ನು. ಅಧಿಕಾರ ಸಿಕ್ಕಾಗ ನೆಮ್ಮದಿಯಿಂದ ಅನುಭವಿಸುವುದು ಇಲ್ಲಿನ ಕೆಲವರಿಗೆ ಗೊತ್ತಿಲ್ಲ. ಗೆದ್ದ ಶಾಸಕರೆಲ್ಲರಿಗೂ ಮಂತ್ರಿ ಪದವಿ ನೀಡುವುದು ಸಾಧ್ಯವೇ ಇಲ್ಲ. ಮೂರ‍್ನಾಲ್ಕು ಸಲ ಗೆದ್ದ ಮಾತ್ರಕ್ಕೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂಬ ನಿಯಮ ಎಲ್ಲಿಯೂ ಇಲ್ಲ. ಯಡಿಯೂರಪ್ಪನವರ ನಾಯಕತ್ವ ಇಷ್ಟವಿಲ್ಲದಿದ್ದರೆ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುವ ಮುನ್ನವೇ ಯೀಚನೆ ಮಾಡಬೇಕಿತ್ತು.
ಹಿಂದಿನ ಸಲವೂ ಇಂತಹ ಭಿನ್ನಮತವೇ ಪಕ್ಷದ ಪತನಕ್ಕೆ ಕಾರಣವಾಗಿತ್ತು, ಆಗ ಯಡಿಯೂರಪ್ಪನವರ ಪಾತ್ರವೂ ಸ್ವಲ್ಪ ಇತ್ತೆನ್ನಿ. ಈಗಲೂ ಹಾಗೆ ಆಗದಂತೆ ವರಿಷ್ಠರು ಎಚ್ಚರವಹಿಸಬೇಕು, ಗುಂಪುಗಾರಿಕೆಗೆ ಅವಕಾಶ ನೀಡದಂತೆ ನಿರ್ಬಂಧಿಸಬೇಕು. “ಯಡಿಯೂರಪ್ಪನವರ ನಾಯಕತ್ದದ ವಿರುದ್ಧ ಸೊಲ್ಲೆತ್ತಬೇಡಿ’ ಎಂಬ ಕಠಿಣ ಸಂದೇಶವನ್ನು ದಿಲ್ಲಿ ನಾಯಕರು ರವಾನಿಸಿದರೆ ಇಲ್ಲಿನವರ ಅ’ಸಂತೋಷ’ ತಾನಾಗಿಯೇ ತಹಬಂದಿಗೆ ಬರುತ್ತದೆ. ಹಾಗೆ ಮಾಡದೇ ವರಿಷ್ಠರು ಮತ್ತೊಂದು ತಪ್ಪು ಹೆಜ್ಕೆ ಇಡುತ್ತಿದ್ದಾರೆ.
ರಾಜ್ಯದಲ್ಲಿ ಪಕ್ಷ ಮುಂದಿನ ಸಲವೂ ಅಧಿಕಾರಕ್ಕೆ ಬರಬೇಕು ಎನ್ನುವುದಾದರೆ ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯ. ಸಮಾಧಾನದಿಂದ ಅವರ ಮನವೊಲಿಸುವ ಪ್ರಯತ್ನ ಮಾಡಿದರೆ ಮಾತ್ರವೇ ಯಡಿಯೂರಪ್ಪ ಮೆತ್ತಗಾಗುತ್ತಾರೆ. ಯಾವುದೋ ಭ್ರಮಾಲೋಕದಲ್ಲಿರುವ ರಾಜ್ಯದ ಕೆಲವು ಶಾಸಕರು, ಮುಖಂಡರು ಮತ್ತು ಅದನ್ನೇ ನಂಬಿ ಹೆಜ್ಜೆ ಇಡುತ್ತಿರುವ ವರಿಷ್ಠರು ಈಗ ಕೊಂಚ ಎಡವಿದರೂ ಅದರ ಫಲವನ್ನು ತಾವೇ ಅನುಭವಿಸಬೇಕಾಗುತ್ತದೆ.