ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳು ಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣ ಇಂದಿನಿಂದ ಪ್ರತಿ ಭಾನುವಾರ ಪ್ರಕಟವಾಗುತ್ತದೆ.ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಇರುಳ್ ಕಂಡ ಬಾವಿಯೊಳ್ ಪಗಲೊಳ್ ಬಿಳ್ದಂತೆ ಇದು ಮುದ್ದಣನ ‘ರಾಮಾಶ್ವಮೇಧ’ದಲ್ಲಿ ಉಲ್ಲೇಖವಾಗಿರುವ ಮಾತು ಜೊತೆಗೆ ನಾವೂ ಕೂಡ ನಿತ್ಯ ಬಳಸುವ ಮಾತು. ಒಮ್ಮೆ ಮುನಿಗಳು ಸಂಚಾರ ಮಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಸಾತ್ವನ ಎಂಬ ಬ್ರಾಹ್ಮಣ ಮುನಿಗಳನ್ನು ಗಮನಿಸುವುದಿಲ್ಲ . ಆತ ಔಚಿತ್ಯ ಮೀರಿ ಮುಕ್ಕಳಿಸಿದ ನೀರು ಋಷಿ ಮುನಿಗಳನ್ನು ತಾಗುತ್ತದೆ. ಮುನಿಗಳು ಅಪಚಾರವಾಯಿತು ಎಂದು “ಭೂಮಿಯಲ್ಲಿ ರಾಕ್ಷಸನಾಗಿ ಹುಟ್ಟು ಎಂದು ಶಾಪ ಕೊಡುತ್ತಾರೆ”. ಶಾಪಗ್ರಸ್ಥನಾದ ಸಾತ್ವನ ಮುನಿಗಳ ಶಕ್ತಿಯನ್ನು ಅವಲೋಕಿಸುತ್ತಾ “ಇರುಳ್ ಕಂಡ ಬಾವಿಯೊಳ್ ಪಗಲೊಳ್ ಬಿಳ್ದಂತೆ” ( ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದ ಹಾಗಾಯಿತು) ಎಂದು ಮರುಗುತ್ತಾನೆ. ಇದೊಂದುಗಾದೆಮಾತು.
ನಿಜಸ್ಥಿತಿ ಗೊತ್ತಿದ್ದರೂ , ತಪ್ಪುಗಳು ತೀವ್ರ ಅನಾಹುತಕ್ಕೆ ಕಾರಣವಾಗುತ್ತವೆ ಎಂಬ ಸತ್ಯ ಗೊತ್ತಿದ್ದರೂ ನಿರ್ಲಕ್ಷ್ಯ ಮಾಡುವವರನ್ನು ಕುರಿತು ಈ ಮಾತನ್ನು ಹೇಳಲಾಗುತ್ತದೆ. ಅಪಾಯದ ತಿರುವುಗಳು ಇವೆ ಎಂದು ತಿಳಿದೂ ವೇಗವಾಗಿ ವಾಹನ ಚಲಾಯಿಸಿ ಆಘಾತ ತಂದು ಕೊಳ್ಳುವ ಜನರನ್ನು ಇಲ್ಲಿ ಉದಾಹರಿಸಬಹುದು. “A little neglect may breed great mischief”, “ಗೊತ್ತಿದ್ದು ಮಾಡುವ ತಪ್ಪುಗಳಿಗೆ ಕ್ಷಮೆ ಇಲ್ಲ”, “ಸ್ವಯಂಕೃತ ಅಪರಾಧ” ಎಂಬ ಮಾತುಗಳಿವೆಯಲ್ಲ ಹಾಗೆ.ಈಗ ಮಾಸ್ಕ್ ಇಲ್ಲದೆ ಓಡಾಡುವವರನ್ನೂ ಕೂಡ ಈ ಸಾಲಿಗೆ ಸೇರಿಸಬಹುದು.
ಅಪಾಯದ ಸುಳಿವಿಲ್ಲದೆ ಅವಿವೇಕಿಯೊಬ್ಬ ತಾನಿದ್ದ ಮರದ ಕೊಂಬೆಯನ್ನೆ ಕತ್ತರಿಸಿಕೊಂಡಂತೆ ಆಗಬಾರದು. ನಮ್ಮ ನಡೆ ಯಾವಾಗಲೂ ವಿವೇಕದ ನಡೆಯಾಗಿರಬೇಕು, ಸಾಧಕ ಭಾಧಕಗಳನ್ನು ಯೋಚಿಸಿ ಮುಂದಣ ಹೆಜ್ಜೆಗಳನ್ನು ಇರಿಸಬೇಕು. ಅತೀ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂಬ ಅಂತಃಸತ್ವ ಇರುಳ್ ಕಂಡ ಬಾವಿಯೊಳ್ ಪಗಲೊಳ್ ಬಿಳ್ದಂತೆ ಮಾತಿನಲ್ಲಿ ಅಡಕವಾಗಿದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧಸಂಕಲನ ಹೊರತಂದಿದ್ದಾರೆ.
Gadeya arthavannu chennagi vivarisiddare
Dhanyavadagalu
ಧನ್ಯವಾದಗಳು ಸರ್
ಸುಮ ವೀಣಾ ಅವರು ಗಾದೆಗಳನ್ನು ಉದಾಹರಣೆ ಕೊಟ್ಟು ವಿವರಿಸಿರುವುದು ಸಮಂಜಸವಾಗಿದೆ.