ವಿಶ್ವ ಆರ್ಥಿಕ ಸಾಕ್ಷರತಾ ಶೃಂಗಸಭೆಯ 2012 ರ ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಶೇ.35 ರಷ್ಟು ಜನ ಆರ್ಥಿಕ ಸಾಕ್ಷರತೆ ಹೊಂದಿದ್ದಾರೆ. ನಾಲ್ಕು ವರ್ಷದ ನಂತರ ಅಂದರೆ 2016 ರಲ್ಲಿ ಆರ್ಥಿಕ ಸಾಕ್ಷರತಾ ಪ್ರಮಾಣವು ಶೇ.24 ಕ್ಕೆ ಕುಸಿದಿದೆ. ನಮ್ಮಲ್ಲಿ ಸಾಕ್ಷರತಾ ಮಟ್ಟ ಹೆಚ್ಚಿದ್ದರೂ, ಆರ್ಥಿಕ ಸಾಕ್ಷರತೆಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಇತ್ತೀಚಿನ ಅಂಶಗಳ ಪ್ರಕಾರ ಆರ್ಥಿಕ ಸಾಕ್ಷರತಾ ಮಟ್ಟವು ಶೇ.27 ರಲ್ಲಿದೆ.
ಈ ವಾತಾವರಣದಲ್ಲಿ ಜನ ಸಾಮಾನ್ಯರ ಹಿತದ ದೃಷ್ಟಿಯಿಂದ, ಉದ್ಯಮಗಳು ದಾರಿತಪ್ಪಿಸುವ ಕೆಲಸಕ್ಕೆ ಕೈ ಹಾಕಬಾರದೆಂಬ ಕಾರಣಕ್ಕಾಗಿ ವಿವಿಧ ಮೇಲ್ವಿಚಾರಣಾ ಆಧಿಕಾರ, ಪ್ರಾಧಿಕಾರಗಳು ಕಾರ್ಯ ನಿರ್ವಹಿಸುತ್ತಿವೆ. ಇತ್ತೀಚೆಗೆ ಡೈರೆಕ್ಟರ್ ಜನರಲ್ ಆಫ್ ಆಂಟಿ ಪ್ರಾಫಿಟೀರಿಂಗ್ ಸಂಸ್ಥೆಯು ಪಿ & ಜಿ ಸಮೂಹದ ಕಂಪನಿಗಳಿಗೆ ರೂ.241.50 ಕೋಟಿ ದಂಡ ವಿಧಿಸಿರವುದು ಇದಕ್ಕೊಂದು ಉದಾಹರಣೆ.
ಸಾರ್ವಜನಿಕರಿಂದ ಸಂಪನ್ಮೂಲ ಸಂಗ್ರಹಣೆ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗೆ ಎಚ್ ಡಿ ಎಫ್ ಸಿ, ಎನ್ ಹೆಚ್ ಎ ಐ, ಐ ಆರ್ ಎಫ್ ಸಿ, ಗಳಂತಹ ಬೃಹತ್ ಕಾರ್ಪೊರೇಟ್ ಗಳು ಕಳೆದ ವಾರಗಳಲ್ಲಿ ರೂ.30 ಸಾವಿರ ಕೋಟಿಗೂ ಹೆಚ್ಚಿನ ಸಂಪನ್ಮೂಲವನ್ನು ಬಾಂಡ್‌ಗಳನ್ನು ವಿತರಿಸುವ ಮೂಲಕ ಸಂಗ್ರಹಿಸಿವೆ.
ಈ ಮಧ್ಯೆ ದೇಶದ ಆರ್ಥಿಕತೆ ನಿರೀಕ್ಷಿತ ಮಟ್ಟಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂಬ ಸುದ್ಧಿಯೂ ಸಕಾರಾತ್ಮಕವಾದುದಾಗಿದೆ. ಆದರೂ ವಿತ್ತೀಯ ವಲಯದ ಮೇಲೆ ನಂಬಿಕೆಯು ಕ್ಷೀಣಿತವಾಗುತ್ತಿರುವಂತೆ ಭಾಸವಾಗುತ್ತಿದೆ. ಕಾರ್ಪೊರೇಟ್‌ನೀತಿಪಾಲನಾ ಮಟ್ಟವು ಕುಸಿದಿರುವುದೆ ಇದಕ್ಕೆ ಕಾರಣ ಎನ್ನಬಹುದಾಗಿದೆ. ತಪ್ಪು ಮಾಡಿದವರನ್ನು ಗುರುತಿಸಲಾಗದೆ, ಅಮಾಯಕ ಹೂಡಿಕೆದಾರರನ್ನು ಆಪತ್ತಿಗೆ ತಳ್ಳಿದ ಕೆಲವು ನಿದರ್ಶನಗಳು ಹಲವಾರಿವೆ.
ಆರ್ಥಿಕ ಗೊಂದಲದ ಆರಂಭ:
ಈ ಆರ್ಥಿಕ ಅಸಮತೋಲನೆ, ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ನೀಡಿದ್ದೆಂದರೆ ಐ ಎಲ್ & ಎಫ್ ಎಸ್ ನ ರೂ 92 ಸಾವಿರ ಕೋಟಿ ಹಗರಣ. ಇದು ವಿತ್ತೀಯ ವಲಯದ ಮೇಲೆ ಹೂಡಿಕೆದಾರರ ವಿಶೇಷವಾಗಿ ಸಣ್ಣ ಹೂಡಿಕೆದಾರರ ಆಸಕ್ತಿಯನ್ನು ಕ್ಷೀಣ ಗೊಳಿಸಿತು. ಆದರೆ ಇದುವರೆಗೂ ಈ ಹಗರಣದ ಮೂಲ ವ್ಯಕ್ತಿಗಳನ್ನು ಗುರುತಿಸಲಾಗಲಿಲ್ಲ.
2018 ರಲ್ಲಿ ಈ ಪ್ರಕರಣವು ಬೆಳಕಿಗೆ ಬಂದಿದೆ. ಈ ಸಮೂಹ ಕಂಪನಿಗಳಲ್ಲಿ ಹೂಡಿಕೆ ಮಾಡಿದವರು ವಿಶೇಷವಾಗಿ ಷೇರುಗಳಲ್ಲಿ ಹೂಡಿಕೆ ಮಾಡಿದವರ ಬಂಡವಾಳವಂತೂ ಕರಗಿಹೋಗಿದೆ. ಚೇತರಿಸಿಕೊಳ್ಳುವ ಹಂತದಲ್ಲಂತೂ ಇಲ್ಲ.
ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್:
ಹೌಸಿಂಗ್ ಫೈನಾನ್ಸ್ ಕಂಪನಿಯಾದ, 1984 ರಿಂದಲೂ ಕಾರ್ಯ ನಿರ್ವಹಿಸುತ್ತಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ 2015 ರಿಂದ 2018 ರವರೆಗೂ ಹಲವಾರು ಸರಣಿಯ ನಾನ್ ಕನ್ವರ್ಟಬಲ್ ಬಾಂಡ್ ಯೋಜನೆಗಳ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಿದೆ. 2019ರ ಆರಂಭದಲ್ಲಿ ಮಾಧ್ಯಮವೊಂದರಲ್ಲಿ ಕಂಪನಿಯಲ್ಲಿ ಆರ್ಥಿಕ ಸ್ಥಿತಿ ಕುರಿತು ಪ್ರಕಟವಾದ ವರದಿಯಿಂದಾಗಿ ಈ ಕಂಪೆನಿಯ ಷೇರಿನ ಬೆಲೆಗಳು ತರಗೆಲೆಗಳಂತೆ ಉದುರಿಹೋಯಿತು. ಕಂಪನಿಯು ವಿತರಿಸಿದ ರೂ.1,000 ಮುಖಬೆಲೆಯ ಸೆಕ್ಯೂರ್ಡ್ ನಾನ್ ಕನ್ವರ್ಟಬಲ್ ಬಾಂಡ್ ಗಳು ಆರಂಭಿಕ ದಿನಗಳಲ್ಲಿ ಮುಖಬೆಲೆಯ ಸಮೀಪದಲ್ಲಿ ವಹಿವಾಟಾಗುತ್ತಿದ್ದವು. ಆದರೆ ಈ ಸುದ್ಧಿಯು ಅವುಗಳ ಬೆಲೆಯನ್ನೂ ಸಹ ಭಾರಿ ಕುಸಿತಕ್ಕೊಳಪಡಿಸಿತು. ವಿವಿಧ ಬಡ್ಡಿ ದರಗಳ ಈ ಸೆಕ್ಯೂರ್ಡ್ ನಾನ್ ಕನ್ವರ್ಟಬಲ್ ಬಾಂಡ್ ಗಳು ರೂ.1,000 ದ ಮುಖಬೆಲೆ ಹೊಂದಿದ್ದು ಸಧ್ಯ ರೂ.285 ರ ಸಮೀಪದಿಂದ ರೂ.340 ರ ಅಂತರದಲ್ಲಿ ವಹಿವಾಟಾಗುತ್ತಿವೆ.
ಸೆಕ್ಯೂರ್ಡ್ ಎಂಬ ಮೋಹಕ ಪದಕ್ಕೆ ಆಕರ್ಷಿತರಾದ ಬಹಳಷ್ಟು ಹೂಡಿಕೆದಾರರು ತಮ್ಮ ಹೂಡಿಕೆಯ ಹಚ್ಚಿನ ಭಾಗವನ್ನು ಕರಗಿಸಿಕೊಂಡಂತಾಗಿದೆ. ಹೂಡಿಕೆದಾರರೆಂದರೆ ಕೇವಲ ವ್ಯಕ್ತಿಗಳು ಮಾತ್ರವಲ್ಲ, ಬಹಳಷ್ಟು ಮ್ಯೂಚುಯಲ್ ಫಂಡ್ ಗಳು, ಹಣಕಾಸಿನ ಸಂಸ್ಥೆಗಳೂ, ಕಾರ್ಪೊರೇಟ್ ಗಳೂ ಸೇರಿರುತ್ತವೆ. ಇದರಿಂದ ಸರಪಳಿ ರೀತಿ ವಿವಿಧ ಕಂಪನಿಗಳು ಆಪತ್ತಿಗೊಳಗಾಗಿವೆ. ಈ ಗೊಂದಲ ಇನ್ನು ಮುಂದುವರೆಯುತ್ತಿದ್ದು ಕಂಪನಿಯನ್ನು ಖರೀದಿಸಲು ಕೆಲವು ಪ್ರಖ್ಯಾತ ಕಂಪನಿಗಳು ಪ್ರಯತ್ನಿಸುತ್ತಿವೆ.
ಯೆಸ್‌ಬ್ಯಾಂಕ್‌ಪ್ರಕರಣ:
ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಎನ್ ಪಿ ಎ, ಗಳು, ಪರಾರಿಯಾಗುತ್ತಿರುವ ಸಾಲಗಾರರು, ಬ್ಯಾಂಕ್ ಗಳಲ್ಲಿ ನಡೆದಿರುವ ಹಗರಣಗಳಿಂದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ನಂಬಿಕೆಯು ಕ್ಷೀಣವಾಗುತ್ತಿದೆ. ಯೆಸ್ ಬ್ಯಾಂಕ್‌ಷೇರಿನ ಬೆಲೆ ಎರಡು ವರ್ಷಗಳ ಹಿಂದೆ ರೂ.395 ರ ಸಮೀಪವಿದ್ದು, 2018 ರಲ್ಲಿ ಬ್ಯಾಂಕ್‌ನ ಪ್ರವರ್ತಕರು ತಮ್ಮ ಪಾಲಿನ ಷೇರುಗಳನ್ನು ತನ್ನ ಮಕ್ಕಳಿಗೆ, ನಂತರ ಅವರ ಮಕ್ಕಳಿಗೆ ಪಾರಂಪರಿಕವಾಗಿ, ವಾರಸುದಾರರಿಗೆ ಬಳುವಳಿಯಾಗಿ ನೀಡಿ, ವಜ್ರಗಳಂತೆ ಮುಂದುವರೆಸಿಕೊಂಡು ಹೋಗುತ್ತೇವೆ ಎಂದಿದ್ದರು. ಆದರೆ ಮುಂದಿನ ಎರಡೇ ವರ್ಷಗಳ ಅವಧಿಯಲ್ಲಿ ಷೇರಿನ ಬೆಲೆ ರೂ.5.5 ಕ್ಕೆ ಕುಸಿಯಿತಲ್ಲದೆ, ಎರಡು ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್2018 ಲ್ಲಿ ಶೇ.20ರಷ್ಟರ ಭಾಗಿತ್ವವನ್ನು ಹೊಂದಿದ್ದ ಪ್ರವರ್ತಕರು, ಸೆಪ್ಟೆಂಬರ್2020 ರಲ್ಲಿ ಪ್ರವರ್ತಕರೇ ಇಲ್ಲದ ಪರಿಸ್ಥಿತಿಗೆ ತಲುಪಿದೆ.
ಈ ವರ್ಷದ ಮಾರ್ಚ್‌ನಲ್ಲಿ ಯೆಸ್‌ಬ್ಯಾಂಕ್‌ದುರ್ಬಲಗೊಂಡ ಸುದ್ಧಿಯಕಾರಣ ಆ ಬ್ಯಾಂಕ್‌ಗೆ ಎಸ್‌ಬಿ ಐ ನೇತೃತ್ವದಲ್ಲಿ ವಿವಿಧ ಬ್ಯಾಂಕ್‌ಗಳು ಸೇರಿ ಆರ್ಥಿಕ ಬೆಂಬಲ ನೀಡಿದವು. ಈ ಸಂಪನ್ಮೂಲ ಕ್ರೋಡೀಕರಣ ಸಾಲದೆಂಬಂತೆ, ಬ್ಯಾಂಕ್ ಉತ್ತುಂಗದಲ್ಲಿದ್ದಾಗ ವಿತರಿಸಿದ ಅಡಿಷನಲ್ ಟೈರ್1 ಬಾಂಡ್‌ಗಳನ್ನು ಸಂಪೂರ್ಣವಾಗಿ ರದ್ದು ಮಾಡಿ, ಹೂಡಿಕೆಯನ್ನು ಶೂನ್ಯವಾಗಿಸಿತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಕ್ರಮವು ಸಾರ್ವಜನಿಕವಾಗಿ ಬ್ಯಾಂಕಿಂಗ್‌ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಅಲ್ಲಾಡಿಸಿದೆ. ಈ ಬಾಂಡ್ ಗಳನ್ನು ಸಂಪೂರ್ಣವಾಗಿ ರದ್ದು ಮಾಡುವ ಬದಲು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಂತುಗಳಲ್ಲಿ ಹಿಂದಿರುಗಿಸುವಂತಾಗಿದ್ದರೆ ಸುಧಾರಿತ ಕ್ರಮವಾಗುವುದರೊಂದಿಗೆ ಬ್ಯಾಂಕಿಂಗ್ ವ್ಯವಸ್ಥೆ ಮೇಲಿನ ನಂಬಿಕೆ ಭದ್ರವಾಗುತ್ತಿತ್ತು.
ಯೆಸ್‌ಬ್ಯಾಂಕ್‌ನ ಈ ಹಗರಣವು ಅಲ್ಲಿಗೇ ನಿಲ್ಲದೆ, ಕ್ಯಾಪಿಟಲ್ ಮಾರ್ಕೆಟ್‌ನ ಇತಿಹಾಸದಲ್ಲೇ ಮೊದಲ ಬಾರಿ ಬ್ಯಾಂಕ್‌ನ ಶೇಕಡ 75 ರಷ್ಟು ಷೇರುಗಳನ್ನು ಚಲಾವಣೆಯಿಂದ ಸ್ಥಗಿತಗೊಳಿಸಿದ ಕ್ರಮದಿಂದ ಅನೇಕ ಸಣ್ಣ ಹೂಡಿಕೆದಾರರು ತೊಂದರೆಗೊಳಗಾಗಿದ್ದಲ್ಲದೆ ಈ ಕ್ರಮದ ನಂತರ ಕೊಂಡ ಷೇರಿನ ಬೆಲೆ ಏರಿಳಿತಗಳ ಲಾಭದ ಅವಕಾಶದಿಂದ ವಂಚಿತರಾಗುವಂತಾಯಿತು. ಈ ಕ್ರಮವು ಪೇಟೆಯ ಮೂಲಭೂತ ಗುಣವಾದ ಷೇರುಗಳ ದಿಢೀರ್ ನಗದೀಕರಣ( creating ready liquidity) ಕ್ಕೆ ಅಪವಾದವಾಗಿದೆ.
ಅಂದರೆ ಯಾವುದೇ ಒಂದು ಕಾರ್ಪೊರೇಟ್ ಗಳು ನೀಡಿದ ಹೇಳಿಕೆಗಳು ಅಂದಿಗೆ ಮಾತ್ರ, ಮುಂದಿನ ದಿನಗಳಲ್ಲಿ ಆಗುವ ಬದಲಾವಣೆಗಳು, ಉಂಟಾಗುವ ತಿರುವುಗಳೂ ಆ ಚಿಂತನೆಗಳ ದಿಶೆಯನ್ನೇ ಬದಲಾಯಿಸಿಬಿಡಬಹುದು. ಈ ಬದಲಾವಣೆಗಳು, ತಿರುವುಗಳು ಯಾವಾಗಲೂ ನಕಾರಾತ್ಮಕವಾಗಿರಬೇಕೆಂದಿಲ್ಲ, ಅವು ಸಕಾರಾತ್ಮಕವಾಗಿಯೂ ಆಗಬಹುದು.
ಬದಲಾವಣೆಗಳು ಹೇಗೆ ಸಕಾರಾತ್ಮಕವಾಗುವುದು?
ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗ್ಲೋಬಲ್‌ಟ್ರಸ್ಟ್‌ಬ್ಯಾಂಕ್ ಮತ್ತು ಯು ಟಿ ಐ ಬ್ಯಾಂಕ್ ಗಳ ವಿಲೀನ ಯೋಜನೆ ವಿಫಲಗೊಂಡ ಘಟನೆಯಾಗಿದೆ. ಠೇವಣಿದಾರರ ಹಿತ ಕಾಪಾಡಲು 2004 ರಲ್ಲಿ ಆ ಬ್ಯಾಂಕ್‌ನ್ನು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಲ್ಲಿ ವಿಲೀನಗೊಳಿಸುವ ಪ್ರಕ್ರಿಯಗೂ ಮುನ್ನ 2001 ರಲ್ಲಿ ಈ ಬ್ಯಾಂಕ್ ನ್ನು ಅಂದಿನ ಯು ಟಿಐ ಬ್ಯಾಂಕ್ ನಲ್ಲಿ ವಿಲೀನಗೊಳಿಸುವ ಪ್ರಸ್ತಾಪವೂ ತೇಲಿಬಂದು, ಈ ಬ್ಯಾಂಕಿನ ಮೌಲೀಕರಣ ಮಾಡಲಾಗಿತ್ತು. ಅದರಂತೆ 9 ಯು ಟಿ ಐ ಬ್ಯಾಂಕ್ ನ ಷೇರುಗಳಿಗೆ 4 ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಷೇರು ನೀಡುವ ಶಿಫಾರಸನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಗಳು ಮಾಡಿದ್ದವಾದರೂ ಮ್ಯಾನೇಜ್ ಮೆಂಟ್ ತಿರಸ್ಕರಿಸಿತು. ಅಂದಿನ ಯು ಟಿ ಐ ಬ್ಯಾಂಕ್ ಇಂದಿನ ಆಕ್ಸಿಸ್ ಬ್ಯಾಂಕ್ ಆಗಿದೆ. ಈ ವಿಲೀನ ಶಿಫಾರಸು ತಿರಸ್ಕೃತವಾದ ಕಾರಣ ಈ ಬದಲಾವಣೆ ಯು ಟಿ ಐ ಬ್ಯಾಂಕ್ ಗೆ ಸಕಾರಾತ್ಮಕವಾಗಿ ಪರಿಣಮಿಸಿತು. ಮುಂದೆ ಆ ಬ್ಯಾಂಕ್ ಹೆಸರನ್ನು ಆಕ್ಸಿಸ್ ಬ್ಯಾಂಕ್ ಎಂದು ಬದಲಾಯಿಸಿಕೊಂಡಿತು.
ಮಹಾರಾಷ್ಟ್ರ ಅಪೆಕ್ಸ್ ಕಾರ್ಪೊರೇಷನ್ ಲಿ
ಕರ್ನಾಟಕದ ಬ್ಯಾಂಕಿಂಗ್ ಉಗಮ ಜಿಲ್ಲೆಯಲ್ಲಿ ಸ್ಥಾಪಿತವಾಗಿ ಮೂರು ತಲೆಮಾರುಗಳ ಈ ಎನ್ ಬಿ ಎಫ್ ಸಿ ಕಂಪನಿಯು 2002 ರಲ್ಲಿ ತನ್ನ ಠೇವಣಿದಾರರ ಸುಮಾರು ರೂ.300 ಕೋಟಿಯ಼ಷ್ಟರ ಹಣವನ್ನು ಹಿಂದಿರುಗಿಸಲು ಆರ್ಥಿಕ ತೊಂದರೆಗೊಳಗಾಯಿತು. ಈ ಸಂದರ್ಭದಲ್ಲಿ ಕಂಪನಿಯು ಸ್ವಯಂಪ್ರೇರಿತವಾಗಿ ತನ್ನ ಠೇವಣಿದಾರರ ಹಣವನ್ನು ಕಂತುಗಳಲ್ಲಿ ಹಿಂದಿರುಗಿಸುವದಾಗಿ ಹೇಳಿತು. ನಂತರ ನ್ಯಾಯಾಲಯದ ಅನುಮತಿ ಮೇರೆಗೆ ಎಲ್ಲಾ ಹಣವನ್ನು ಕಂತುಗಳಲ್ಲಿ ಹಿಂದಿರುಗಿಸಿ ನೈತಿಕತೆಯಿಂದ ಮೆರೆಯಿತು.
ಲಕ್ಷ್ಮೀ ವಿಲಾಸ್‌ಬ್ಯಾಂಕ್:
ಯೆಸ್‌ಬ್ಯಾಂಕ್‌ನ ಹಗರಣವು ಇನ್ನೂ ಮಾಸದೆ ಇರುವಾಗಲೇ 94 ವರ್ಷಗಳ ಇತಿಹಾಸವುಳ್ಳ ಲಕ್ಷ್ಮೀ ವಿಲಾಸ್‌ಬ್ಯಾಂಕ್ ದುರ್ಬಲ ಗೊಂಡಿರುವ ಕಾರಣ ಅದನ್ನು ಮೊರೆಟೋರಿಯಂ ನಲ್ಲಿರಿಸಿ ನಂತರ ಸಿಂಗಾಪುರ ಮೂಲದ 12 ವರ್ಷದ ಡಿ ಬಿ ಎಸ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಲಾಗಿದೆ. ಈ ಹಿಂದೆ ಇಂಡಿಯಾ ಬುಲ್ ಹೌಸಿಂಗ್‌ಫೈನಾನ್ಸ್ ತದ ನಂತರ ಕ್ಲಿಕ್ಸ್ ಕ್ಯಾಪಿಟಲ್ ಗಳು ಈ ಬ್ಯಾಂಕ್ ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಫಲವಾಗಿವೆ. ಸುಮಾರು 563 ಶಾಖೆಗಳನ್ನು, 970 ಎ ಟಿ ಎಂ ಗಳನ್ನು ಹೊಂದಿರುವ ಈ ಬ್ಯಾಂಕ್ 2019 ರ ಸೆಪ್ಟೆಂಬರ್‌ತಿಂಗಳಿಂದಲೂ ಪ್ರಾಂಪ್ಟ್ ಕರೆಕ್ಟಿವ್‌ಆಕ್ಷನ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಕ್ ಸೇರಿಸಿದೆ. ವಿಲೀನ ಯೋಜನೆಯಲ್ಲಿ ಠೇವಣಿದಾರರಿಗೆ ಯಾವುದೇರೀತಿ ಹಾನಿಯಾಗಲಾರದಾದರೂ ಬ್ಯಾಂಕ್‌ವಿತರಿಸಿರುವ ಬಾಂಡ್‌ಗಳ ಮತ್ತು ಅಸಂಖ್ಯಾತ ಷೇರುದಾರರ ಹಿತವನ್ನು ಕಾಪಾಡಲಾಗದೆ ರದ್ದು ಮಾಡಲಾಗಿದೆ.
ಸೋಜಿಗವೆಂದರೆ ಕೇವಲ ರೂ.318 ಕೋಟಿಯಷ್ಟಿರುವ ಬೇಸಲ್ 3 ಪ್ರಕಾರ ಸಂಗ್ರಹಿಸಿರುವ ಬಾಂಡ್ ಗಳನ್ನೂ ರದ್ದು ಮಾಡಿರುವ ಕ್ರಮ ಸರಿಯಲ್ಲವೆನಿಸುತ್ತದೆ. ಒಂದು ವೇಳೆ ವಿಲೀನಗೊಳ್ಳುತ್ತಿರುವ ಬ್ಯಾಂಕ್ ಈ ಹಣ ಪಾವತಿಸಲಾಗದೆ ಇದ್ದರೂ, ಸ್ವಾಧೀನಪಡಿಸಿಕೊಳ್ಳುತ್ತಿರುವ ಬ್ಯಾಂಕ್ ಆದರೂ ಈ ಅಲ್ಪ ಮೊತ್ತವನ್ನು ಠೇವಣಿದಾರರಿಗೆ ಹಿಂದಿರುಗಿಸಬಹುದಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಒಕ್ಕಣೆ ಈ ಕೆಳ ಕಂಡಂತಿದೆ:
- As per the terms of the information Memorandumsof the respective Basel III Tier 2 bonds issued by the Bank.
” If the relevnat authorities decides to reconstitute the Bankor amalgamate the Bank with any other bank under the section 45 of the BR Act, such a bank shall be deemed as non-viable or approaching non-viability and both the pre-specified trigger and the trigger at the point of non-viability for write-down the Bonds shall be activated. Accordingly, the Bonds shall be written -off before amalgamation / reconstitution in accordance with applicable rules”
ಈ ರೀತಿಯ ನಿಯಮಗಳಿದ್ದರೆ ಈ ಬಾಂಡ್ ಗಳನ್ನು ವರ್ಗಾಯಿಸಲಾಗದೆ ಇರಬಹುದಾದಂತಹ ನಿಯಮದಡಿ ಬಿಡುಗಡೆ ಮಾಡಬೇಕಾಗಿತ್ತು. ದೇಶದ ಶೇ.73 ರಷ್ಠು ಜನ ಆರ್ಥಿಕ ಅನಕ್ಷರಸ್ಥರಿರುವಾಗ ಈ ರೀತಿಯ ಅಗೋಚರ ನಿಯಮಗಳಡಿಯಲ್ಲಿ ಅಮಾಯಕರ ಹಣವನ್ನು ಅಪಾಯಕ್ಕೊಳಪಡಿಸುವುದು ಸರಿಯಲ್ಲ.
ಈ ರೀತಿಯ ಬಾಂಡ್ ಗಳನ್ನುwrite off ಮಾಡಿ ಬ್ಯಾಂಕ್ ಗಳು ಕೈ ತೊಳೆದುಕೊಳ್ಳುವುದು ಸೂಕ್ತವಲ್ಲ. ಬ್ಯಾಂಕ್ ನ್ನು ಆ ಹಂತಕ್ಕೆ ತಲುಪಿಸಿದ, ತಪ್ಪು ಮಾಡಿದವರನ್ನು ಬಿಟ್ಟು ಜವಾಬ್ಧಾರಿಯಿಂದ ನುಣಿಚಿಕೊಳ್ಳುವುದು ಅಪಾಯಕಾರಿಯಾಗಿದೆ.
ಷೇರುಪೇಟೆಯಲ್ಲಿ ಅಪಾಯದ ಅರಿವಿರುತ್ತದೆ
ಈ ಹಿಂದೆ ಮಜ್ ಡಾ ಇಂಡಸ್ಟ್ರೀಸ್ ಷೇರಿನ ಬೆಲೆ ರೂ.1,400 ರಿಂದ ಜಾರಿ ಶೂನ್ಯವಾದಾಗಲೂ, ಯುನಿಟೆಕ್ ಕಂಪನಿ ಷೇರು ರೂ.20 ಸಾವಿರದ ಗಡಿಯಿಂದ ಏಕ ಅಂಕಿಗೆ ಬಂದಾಗಲೂ, ಸ್ಟಾರ್ ಪ್ರಚಾರಕರ ಕಾರಣ ರೂ.600 ಕ್ಕೂ ಹೆಚ್ಚಿದ್ದ ಗೀತಾಂಜಲಿ ಜೆಮ್ಸ್ ಷೇರಿನ ಬೆಲೆ ಶೂನ್ಯವಾದಾಗಲು ಯಾರೂ ಪ್ರಶ್ನಿಸುತ್ತಿಲ್ಲ, ಕಾರಣ ಷೇರುಗಳಲ್ಲಿ ಹೂಡಿಕೆ ಮಾಡಿದಲ್ಲಿ ಅಪಾಯಕ್ಕೆ ಯಾರೂ ಹೊಣೆಗಾರರಲ್ಲ ಎಂಬುದು ಜಗಜ್ಜಾಹಿರಾದ ಅಂಶ. ಆದರೆ ನಿಶ್ಚಿತ ಕೂಪನ್ ದರದ ಬಾಂಡ್ ಗಳನ್ನು ವಿತರಿಸಿದಾಗ ಕಂಪನಿ, ಪ್ರವರ್ತಕರು ಜವಾಬ್ಧಾರರಾಗಬೇಕು. ಲಕ್ಷಗಟ್ಟಲೆ ಮುಖಬೆಲೆಯಿರುವ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದವರಿಗೆ ಯಾವುದೇ ರೀತಿಯ ಅಗೋಚರವಾದ ನಿಯಮಗಳಡಿ write off ಗೆ ಅವಕಾಶ ಕೊಡಬಾರದು. ಇದು ನೈತಿಕವೂ ಅಲ್ಲ.
ಪರಿಹಾರಾರ್ಥ ಸಲಹೆ:
ಲಕ್ಷ್ಮೀ ವಿಲಾಸ್ ಬ್ಯಾಂಕ್ ನ ಬಾಂಡ್ ಗಳು ಕೇವಲ ರೂ.318 ಕೋಟಿಯಷ್ಠಿರುವುದರಿಂದ ಉದ್ಯಮ / ವ್ಯವಹಾರಿಕ ಸಂಘಟನೆಯಾದ FKCCI/ ASSOCHAM/ CONFEDERATION OF INDIAN INDUSTRY ಗಳು, ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ ಮುಂತಾದ ಸಂಘ ಸಂಸ್ಥೆಗಳು ಸಿಂಗಾಪುರ ಮೂಲದ ಡಿ ಬಿ ಎಸ್ ಬ್ಯಾಂಕ್ ಮೇನೇಜ್ ಮೆಂಟ್ ಗಳಿಗೆ ಮನವರಿಕೆ ಮಾಡಿ ಈ ಬಾಂಡ್ ಗಳ ರದ್ದತಿಯನ್ನು ಬಿಟ್ಟು ಬಾಂಡ್ ಹಣ ಹಿಂದಿರುಗಿಸುವಂತೆ ಮಾಡಬೇಕು. ಇದರಿಂದ ಬ್ಯಾಂಕ್ ನ ಘನತೆ, ಪ್ರತಿಷ್ಠೆ ಹೆಚ್ಚುವುದು ಅಲ್ಲದೆ ನೈತಿಕತೆಗೆ ಆದ್ಯತೆ ನೀಡಿದಂತಾಗುತ್ತದೆ. ಬ್ಯಾಂಕ್ ಖರ್ಚು ಮಾಡುವ ಪ್ರಚಾರದ ವೆಚ್ಚಕ್ಕಿಂತಲೂ ಅಲ್ಪವಾಗಿರುವುದರಿಂದ ಇದು ಸಾಧ್ಯ. ಕನಿಷ್ಠ ಪಕ್ಷ ವ್ಯಕ್ತಿಗತ ಹೂಡಿಕೆ ಮಾಡಿದ ಸಣ್ಣ ಹೂಡಿಕೆದಾರರ ಹಣವನ್ನು ಹಿಂದಿರುಗಿಸುವಂತೆ ಮಾಡಲು ಪ್ರಯತ್ನಿಸಬಹುದು. ಈ ವಿಷಯದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ತೀರ್ಮಾನ ಬದಲಿಸಲಾರದು ಕಾರಣ ಇದು ಪೂರ್ವ ನಿದರ್ಶನವಾಗಬಹುದೆಂಬ ಯೋಚನೆಯಿದ್ದರೂ ಇರಬಹುದು.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
ಲೇಖಕರು ಸೊಗಸಾಗಿ ವಾಸ್ತವ ಸಂಗತಿ ತೆರೆದಿಟ್ಟಿದ್ದಾರೆ. ಹೂಡಿಕೆದಾರರ ರಕ್ಷಣೆ ಮೊದಲ ಆದ್ಯತೆ ಆಗಬೇಕು.