19.9 C
Karnataka
Sunday, September 22, 2024

    ಅವರನ್ನು ಬಿಟ್ಟು ಬಿಟ್ಟರೆ ಅದೇ ನಾವು ಅವರಿಗೆ ಮಾಡುವ ಉಪಕಾರ

    Must read

    ಎನ್.ಶೈಲಜಾ ಹಾಸನ

    ಶಾಂತಿಗ್ರಾಮದ  ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ  ಶೈಲಜಾ ಅವರ ಅನೇಕ ಕಾದಂಬರಿಗಳು ಪ್ರಮುಖ ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಅಪಾರ ಮೆಚ್ಚುಗೆ ಪಡೆದಿವೆ.ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.

    ಈ ಭೂಮಿ ಮೇಲೆ ಹುಟ್ಟಿದವರೆಲ್ಲರೂ ಸಂತೋಷವಾಗಿ, ಆನಂದವಾಗಿ ಬದುಕುತ್ತಿಲ್ಲ. ಎಷ್ಟೋ ನೋವು, ಅವಮಾನ, ಅಪಮಾನ ,ಸಂಕಟ ಎಲ್ಲವನ್ನು ಎದೆಯೊಳಗೆ ಬಚ್ಚಿಟ್ಟುಕೊಂಡು ಮೇಲೆ ನಗುನಗುತ್ತಾ ಇರುವವರನ್ನು ನಾವು ನೋಡುತ್ತಲೇ ಇರುತ್ತೇವೆ. ಅದು ದೇವರು ಅವರಿಗೆ ಕೊಟ್ಟ ವರ.ಹೃದಯದಲ್ಲಿ ಅದೆಂತಹ ಅಗ್ನಿಪರ್ವತ ಇರುತ್ತದೆಯೋ, ಅದೆಂತಹ ಜ್ವಾಲಾಮುಖಿ ಉಕ್ಕುತ್ತಿರುತ್ತದೆಯೋ, ಅವರಿಗಷ್ಟೇ ಗೊತ್ತು.ನೋಡುವವರಿಗೆ ಅವರ ನಗುಮುಖ ಮಾತ್ರ ಕಾಣಿಸುತ್ತದೆ. ನೋಡಿದವರು ಅವರ ನಗು ಮುಖ ನೋಡಿ ಅದೆಷ್ಟು ಸುಖವಾಗಿ ,ಸಂತೋಷವಾಗಿ ಇದ್ದಾರೆ ಎಂದು ಭಾವಿಸಿ ಬಿಡುತ್ತಾರೆ. ಅದಕ್ಕೆ ಮುಖ್ಯ ಕಾರಣ ತಮ್ಮೊಳಗಿನ ನೋವುಗಳನ್ನೇ ಆಗಲಿ ,ಸಂಕಟಗಳನ್ನೇ ಆಗಲಿ ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ. ತಾವು ಸಂತೋಷವಾಗಿಯೇ ಇದ್ದೀವಿ ಎಂದು ತೋರಿಸಿಕೊಳ್ಳುತ್ತಾರೆ. ಸಂಕಟಗಳನ್ನು ಹಂಚಿಕೊಳ್ಳಲು ಇಷ್ಟ ಪಡದ ಅದೆಷ್ಟೋ ಜನ ತಮ್ಮ ಸಂಭ್ರಮಗಳನ್ನು ಮಾತ್ರ ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ.ಈ ಸ್ವಭಾವ ಕೆಲವರು ಕುಹಕಕ್ಕೂ ಕಾರಣವಾಗಬಹುದು.

    ಸರೋಜಾ ಜೋರಾಗಿ ನಗುತ್ತಾ ಸಹೋದ್ಯೋಗಿ ವಿನುತ ಜೊತೆ ಮಾತನಾಡುತ್ತಾ ಇರುವುದನ್ನು ನೋಡಿ ಅಂಬಿಕಾ ಮೂಗು ಮುರಿದು “ಏನು ಹೆಂಗಸಪ್ಪ , ಮನೆಯಲ್ಲಿ ನೋಡಿದರೆ ಹಾಸುಹೊದೆಯುವಷ್ಟು ಕಷ್ಟ ಇದೆ,ಇಲ್ಲಿ ನೋಡಿದರೆ ಹೀಗೆ ನಗುತ್ತಾ ಮಾತಾಡುತ್ತಾ ಇರೋದು ನೋಡಿ,ಸುಖ, ಸಂತೋಷ ಅನ್ನೋದು ಇವಳು ಹತ್ತಿರವೇ ಕಾಲು ಮುರಿದುಕೊಂಡು ಕುಳಿತು ಕೊಂಡು ಬಿಟ್ಟಿದೆ ಅನ್ನೋ ಹಾಗೆ,ಅದು ಹೇಗೆ ಮನಸ್ಸು ಬರುತ್ತದೆಯೋ,ಹೀಗೆ ಇರೋಕೆ” ಅಂದಾಗ ತಟ್ಟನೆ “ಮತ್ತೆ ತನಗೆ ಕಷ್ಟ ಇದೆ,ನೋವು ಇದೆ ಅಂತ ಸದಾ ಅಳುತ್ತಾ ಇರಬೇಕಾ” ಅಂತ ಪ್ರತಿಕ್ರಿಯಿಸಿದ್ದೆ. ಸರೋಜ ಪೆಚ್ಚಾಗಿ ಅಲ್ಲಿಂದ ದುರ್ದಾನತೆಗೆದುಕೊಂಡಂತೆ ಎದ್ದು ಹೋದಾಗ ನನಗೇನು ಪಶ್ಚಾತ್ತಾಪ ಆಗಲಿಲ್ಲ. ನಗುತ್ತಲೇ ಎಲ್ಲವನ್ನೂ ಎದುರಿಸುವುದು ಸುಲಭದ ಮಾತಿಲ್ಲ.ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಲ್ಲ ಒಂದು ಸಂಕಷ್ಟಗಳಿಗೆ ಗುರಿಯಾಗುವುದು ಸಹಜ.ಅದನ್ನೆ ದೊಡ್ಡದು ಮಾಡಿಕೊಂಡು ಅಳುಮುಂಜಿ ಆದರೆ ಸುತ್ತಲಿನವರಿಗೂ ಕಷ್ಟವೇ.

    ರಾಗಿಣಿ ದಂಪತಿಗಳು ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ವರ್ಷವಾದರೂ ಆ ದುಃಖದಿಂದ ಹೊರ ಬರದೆ ಶೋಕದಲ್ಲಿ ಮುಳುಗಿ ಹೋಗಿದ್ದರು.ಅವರ ಬಂಧು ಬಳಗದವರು ಸಮಾಧಾನ ಮಾಡುತ್ತಲೆ ಇದ್ದರು.ಇವರನ್ನು ಹೀಗೆಯೇ ಬಿಟ್ಟರೆ ಇವರೂ ಮಗನಹಾದಿ ಹಿಡಿದುಬಿಟ್ಟಾರೆಂದು ಹೆದರಿ ಎಲ್ಲರೂ ಸೇರಿ ಭಾರತ ಪ್ರವಾಸ ಏರ್ಪಡಿಸಿ ರಾಗಿಣಿ ದಂಪತಿಗಳನ್ನು ಕರೆದುಕೊಂಡು ಹೋಗಿ ಸುಮಾರು ಎರಡು ತಿಂಗಳ ಕಾಲ ಸುತ್ತಾಡಿಸಿ ಕೊಂಡು ಬಂದಮೇಲೆ,ಹೊಸ ಪ್ರವಾಸ ತಾಣ, ತೀರ್ಥಕ್ಷೇತ್ರ ನೋಡಿಕೊಂಡು ಬಂದಮೇಲೆ ಮಗನ ಅಗಲಿಕೆ ನೋವಿನಿಂದ ಸ್ವಲ್ಪ ಹೊರ ಬಂದು ಹೊರಗಿನವರ ಜೊತೆ ಬೆರೆಯ ತೊಡಗಿದ್ದರು. ಅವರೇನೊ ಮೇಲುನೋಟಕ್ಕೆ ಸಮಾಧಾನ ಹೊಂದಿರುವಂತೆ ಎಲ್ಲರೊಡನೆ ಬೆರೆತು ಸಹಜವಾಗಿರಲು ಪ್ರಯತ್ನ ನಡೆಸಿದ್ದರು.ಆದರೆ ಕೆಲ ಅಧಿಕಪ್ರಸಂಗಿಗಳು “ಮಗ ಸತ್ತು ವರ್ಷವಾಗಿಲ್ಲ, ಆಗಲೆ ಅವರ ಸುತ್ತಾಟ ಏನು, ಸಂತೋಷ ಏನು,ಏನು ಜನರಪ್ಪ”ಅಂತ ಕುಟಿಕಿದ್ದು ಕೇಳಿ ನಿಜಕ್ಕೂ ಬೇಸರವಾಗಿತ್ತು.ಪುತ್ರ ಶೋಕ ನಿರಂತರ ಅನ್ನೋದೂ ಸತ್ಯವೇ ಆಗಿದೆ.ಸಾಯುವ ತನಕ ಆ ನೋವು,ಸಂಕಟ ಶಾಶ್ವತವಾಗಿ ಉಳಿದಿರುತ್ತದೆ.ಹಾಗಂತ ಸದಾ ಅಳುತ್ತಾ ಕುಳಿತರೆ ಬದುಕಿನ ಬಂಡಿ ನಡೆಯಬೇಕಲ್ಲವೆ. ಗಂಡನಿಗೆ ಗೊತ್ತಾಗದಂತೆ ಹೆಂಡತಿ, ಹೆಂಡತಿಗೆ ಗೊತ್ತಾಗದಂತೆ ಗಂಡ ಸಂಕಟಪಡುತ್ತಿದ್ದರೂ ಅದು ಪರಸ್ಪರ ಗೊತ್ತಾಗದಂತೆ ದುಃಖ ಮರೆತವರಂತೆ ನಟಿಸುತ್ತಾ ಪರಸ್ಪರರಿಗಾಗಿ ಬದುಕಲು ಪ್ರಯತ್ನಿಸುತ್ತಿದ್ದರು.ಈ ಸತ್ಯ ಅವರನ್ನು ನೋಡಿ ಕುಹಕವಾಡುವವರಿಗೇನು ಗೊತ್ತು.

    ಮಮತಾಗೆ ಪತಿ ಕ್ಯಾನ್ಸರ್ ನಿಂದ ತೀರಿಕೊಂಡಾಗ ಪ್ರಪಂಚವೇ ಬೇಡವೆನಿಸಿತ್ತು.ತಿಂಗಾನುಗಟ್ಟಲೆ ಗಂಡನಿಗಾಗಿ ಕಂಬನಿ ಹರಿಸುತ್ತ ಊಟ ತಿಂಡಿ ತ್ಯಜಿಸಿ ಗೋಳಾಡಿದ್ದಳು. ನೆಂಟರಿಷ್ಟರು ಕೆಲವು ದಿನಗಳು ಜೊತೆಯಲ್ಲಿ ಇದ್ದು ಸಂತೈಸಿದ್ದರು.ನಂತರ ಅವರವರ ದಾರಿಹಿಡಿದು ಹೊರಟಾಗ ಮನೆಯಲ್ಲಿ ಅವಳು, ಅವಳ ಮಕ್ಕಳು,ತಾಯಿ ಮಾತ್ರವೆ ಉಳಿದಾಗ ಮುಂದಿನ ಬದುಕನ್ನು ನೋಡಿಕೊಳ್ಳಲೇ ಬೇಕಾಯಿತು.ಟಿವಿ ಚಾನಲೊಂದರಲ್ಲಿ ಕೆಲಸ ಸಿಕ್ಕಾಗ ಬದುಕಿಗೆ ದಾರಿ ಸಿಕ್ಕಿತು.ಹೊರ ಹೋಗುವಾಗ ಹೇಗೇಗೊ ಹೋಗಲು ಸಾಧ್ಯವೇ,ಅದೂ ಕೂಡ ಜನರ ಬಾಯಿಗೆ ಸಿಕ್ಕೆ ಬಿಟ್ಟಿತು. ಅವಳು ಅಲಂಕಾರದ ಬಗ್ಗೆ ಅನಿಷ್ಟ ಕರ ಮಾತುಗಳು, ಅವಹೇಳನಕಾರಿ ನಡವಳಿಕೆಗಳು.ಇದಾವುದಕ್ಕೂ ಸೊಪ್ಪು ಹಾಕದೆ ಮಮತಾ ಆಡುವವರ ಮಾತುಗಳು ಕಿವಿಮೇಲೆ ಬೀಳದಂತೆ ಇದ್ದು ಬಿಡುತ್ತಿದ್ದಳು.ಎದೆಯೊಳಗೆ ಬೇಯುವ ಸಂಕಷ್ಟ,ನೋವು ಇದ್ದರೂ ತೋರಿಸಿಕೊಳ್ಳದೆ ಗಟ್ಟಿಗಿತ್ತಿ ಮಮತಾ,ಈ ಗಟ್ಟೀತನ ಇತರರಿಗೆ ಮಾದರಿಯೂ ಹೌದು.

    ಮನುಷ್ಯ ಅಂದ ಮೇಲೆ ಕಷ್ಟ, ದುಃಖ,ಸಂಕಟ ಇವೆಲ್ಲವೂ ಇದ್ದದ್ದೇ.ಕಷ್ಟವಿದೆ, ದುಃಖವಿದೆ ಅಂತ ಸದಾ ತಾವೂ ದುಃಖಿಸುತ್ತಾ ತನ್ನ ಸುತ್ತಲಿನವರಿಗಳೂ ಸಂಕಟ ನೀಡುವುದು ಯಾವ ನ್ಯಾಯ.ಎಷ್ಟೇ ದುಃಖಿಸಿದರೂ ಹೋದ ವ್ಯಕ್ತಿ ಮತ್ತೆ ಬರಲಾರೆ.ಬರುವಂತಿದ್ದರೆ ನಾವೂ ಕೂಡ ಅವರ ಜೊತೆ ದುಃಖಿಸುತ್ತಾ ಕೂರಬಹುದಿತ್ತು.ಆದರೆ ಅದು ಅಸಾಧ್ಯದ ಮಾತು.ಸಂತೋಷವನ್ನು ಹಂಚಿಕೊಂಡಷ್ಟು ಹೆಚ್ಚಾಗುತ್ತದೆ. ಹಾಗಾಗಿ ಸಂತೋಷಹಂಚಿಕೊಳ್ಳ ಬಹುದು.ಆದರೆ ದುಃಖ ಹಂಚಿಕೊಳ್ಳಲು ಅಸಾಧ್ಯ.ಹಂಚಿಕೊಂಡರೆ ಕಡಿಮೆಯಾಗುವುದಿಲ್ಲ.ನಮ್ಮ ನೋವು ನಾವೇ ತಿನ್ನಬೇಕು.ಅದನ್ನು ಇತರರಿಗೆ ಹಂಚಲು ಸಾಧ್ಯವಿಲ್ಲ.ಹಾಗಾಗಿ ನಮ್ಮ ನೋವು, ಸಂಕಷ್ಟವನ್ನು ನುಂಗಿ ಕೊಂಡು ನೋಡುವವರಿಗೆ ನೋವು ಮರೆತಿದ್ದೆವೆ ಅಂತ ನಟಿಸಬೇಕಾಗುತ್ತದೆ.ಅದು ಅವರ ವಿಶಾಲ ಗುಣವೂ ಹೌದು.ಅದನ್ನು ಅರ್ಥ ಮಾಡಿಕೊಳ್ಳದೆ ಕಟುಕಿಯಾಡುವುದು ಕ್ರೂರತ್ವ.ನಮ್ಮಿಂದ ಬೇರೆಯವರ ನೋವು ಕಡಿಮೆ ಮಾಡಲು ಅಸಾಧ್ಯ.ಆದರೆ ಚುಚ್ಚಿ ಮಾತನಾಡದೆ, ವ್ಯಂಗ್ಯ ಕುಹಕವಾಗಿ ಮಾತನಾಡಿ ನಿಂದಿಸದೆ ಅವರಷ್ಟಕ್ಕೆ ಅವರನ್ನು ಬಿಟ್ಟು ಬಿಟ್ಟರೆ ಅದೇ ನಾವು ಅವರಿಗೆ ಮಾಡುವ ಉಪಕಾರ. (ಹೆಸರುಗಳು ಕಾಲ್ಪನಿಕ)

    Photo by Simon Migaj on Unsplash

    spot_img

    More articles

    2 COMMENTS

    1. ಬೇರೆಯವರ ಕಷ್ಟಗಲಿಗೆ ಸ್ಪಂದಿಸದೆ, ಬರೀ ಸಂತೋಷದಲ್ಲಿ ಪಾಲ್ಗೊಳ್ಳುವುದು ಈ ಸಮಾಜದಲ್ಲಿ ಎಲ್ಲರಲ್ಲು ಇದ್ದದ್ದೇ. ಬೇರೆಯವರ ನ್ನು ಮೂದಲಿಸುವುದು, ಚು ಚ್ಚಿಮಾತಾದುವುದುಸಲ್ಲದು ಎಂದು ಶ್ಯಲಜ ಅವರು ಹೇಳಿರುವುದರಲ್ಲಿ ತತ್ಯ ವಿದೆ. ಒಳ್ಳೆ ಕಥೆ. ಅರಿಯಬೇಕಾದದ್ದು ಸಾಕಷ್ಟು ಇದೆ. ನಿಮ್ಮಿಂದ ಉತ್ತಮ ಲೇಖನಗಳು ರಚಿತ ವಾಗುತ್ತಿರಲಿ.

    2. ಕಷ್ಟದಲ್ಲಿ ಇದ್ದವರಿಗೆ ಸ್ಪಂದಿಸದೆ ಸುಖದಲ್ಲಿ ಭಾಗಿಯಾಗುವ ಜನರು ಇದ್ದಾರೆ. ಅಂತಹವರು ಒಂದು ತರಹದ ದಿನವಾದರೆ, ಕೆಲವರು ಕಷ್ಟದಲ್ಲಿ ಇದ್ದವರ ಕಷ್ಟವನ್ನು ಅರ್ಥಮಾಡಿಕೊಂಡು ಸ್ಪಂದಿಸಿ ಸಹಾಯ ಮಾಡಿರುತ್ತಾರೆ. ಆದರೆ ಆಮೇಲೆ ಸಹಾಯ ಮಾಡಿದ ವ್ಯಕ್ತಿ ಗೆ ನೋವು ಕೊಡೋರು ಇದಾರೆ. ಲೇಖಕಿಯವರು ಹೇಳಿದ ಹಾಗೆ ಚುಚ್ಚು ಮಾತಾಡೋದು ಬೇಡ ಉಪಕಾರ ಮಾಡಿದವರಿಗೆ ನೋವು ಕೊಡೋದು ಬೇಡ ಅಲ್ಲವಾ

    LEAVE A REPLY

    Please enter your comment!
    Please enter your name here

    Latest article

    error: Content is protected !!