18.6 C
Karnataka
Friday, November 22, 2024

    ಗ್ರಾಮೀಣ ಭಾಗದಲ್ಲಿ ಶಾಲೆಯೂ ಇಲ್ಲ , ಆನ್ ಲೈನೂ ಇಲ್ಲ-ಏಕರೂಪತೆ ಹೇಗೆ ಸಾಧ್ಯವಾದೀತು?

    Must read

    ಕೋವಿಡ್-19 ಸೊಂಕಿನಿಂದಾಗಿ 2020-21 ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಆರಂಭ ಮುಂದೂಡಲಾಗುತ್ತಿದೆ.  ನಿರ್ದಿಷ್ಟ ಆರಂಭದ ದಿನಾಂಕ ಪ್ರಕಟಣೆಗೆ ಡಿಸೆಂಬರ್ ಅಂತ್ಯದವರೆಗೂ ಕಾಯಬೇಕಾಗಿದೆ. ಶಿಕ್ಷಣ ಇಲಾಖೆ ಕಲಿಕಾ ಪ್ರಕಿಯೆ ನಿರಂತರಗೊಳಿಸಲು ಪ್ರಯತ್ನ ನಡೆಸಿತ್ತು. ಆದರೆ ಎಲ್ಲವೂ ಪರಿಪೂರ್ಣತೆ ಸಾಧಿಸುವಲ್ಲಿ ಸಾಧ್ಯವಾಗಿಲ್ಲ. ಕೊಠಡಿ ತರಗತಿಗಳು ನಡೆದರೆ ಮಾತ್ರ ವಾರ್ಷಿಕ ಪರೀಕ್ಷೆ ಯಶಸ್ಸು ಸಾಧ್ಯ ಎಂಬುದು ಕನ್ನಡಪ್ರೆಸ್.ಕಾಮ್ ಮಾತನಾಡಿಸಿದ ಪೋಷಕರ, ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಒಮ್ಮತದ ಅಭಿಪ್ರಾಯ.

    ಬಹುತೇಕ ಖಾಸಗಿ ಶಾಲೆಗಳು ಆನ್ ಲೈನ್ ಮೂಲಕ ಪಠ್ಯಕ್ರಮದಂತೆ ಬೋಧನೆ ನಡೆಸಿವೆ. ಮಕ್ಕಳಿಗಾಗಿ ಸ್ವಂತ ಮೊಬೈಲ್, ಟ್ಯಾಬ್ ಹಾಗೂ ಲ್ಯಾಪ್ ಟಾಪ್ ಲಭ್ಯವಿದ್ದರೆ ಇದು ಸಾಧ್ಯ. ದುಬಾರಿ ವಂತಿಗೆಯಲ್ಲಿ ಪ್ರವೇಶ ಕೊಡಿಸಿದ ಪೋಷಕರಿಗೆ ಈ ಸೌಲಭ್ಯವನ್ನು ಮಕ್ಕಳಿಗೆ ನೀಡಲು ಶಕ್ತರು.

    ಒಮ್ಮುಖ ಪಾಠದಿಂದ ಮಕ್ಕಳಿಗೆ ಶಿಕ್ಷಕರೊಂದಿಗೆ ಪರಸ್ಪರ ಸಂವಾದ ಸಾಧ್ಯವಾಗಿಲ್ಲ. ಉಪನ್ಯಾಸ ಪದ್ಧತಿ ಬೋಧನೆ ಪ್ರೌಢಶಾಲಾ ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಪೂರಕವಲ್ಲ. ನಗರ ಪ್ರದೇಶದಲ್ಲಿ ಇದು ಯಶಸ್ವಿ ಆಗಿರಲು ಸಾಧ್ಯ. ಗ್ರಾಮೀಣ ಮಕ್ಕಳ ಪಾಡೇನು? ಶಿಕ್ಷಣದಲ್ಲಿ ಏಕರೂಪತೆ ಹೇಗೆ ಸಾಧ್ಯವಾದೀತು?

    ಪಠ್ಯದ ಗೊಂದಲ: ಈಗಾಗಲೇ ಆನ್ ಲೈನ್ ತರಗತಿಗಳನ್ನು ಆರಂಭಿಸಲಾಗಿದೆ. ಪಠ್ಯವನ್ನು ಕಡಿತಗೊಳಿಸುವ ಭರವಸೆ ಇಲಾಖೆ ನೀಡಿದೆ. ದಿನದಿಂದ ದಿನಕ್ಕೆ ಶೈಕ್ಷಣಿಕ ದಿನಗಳು ಕಡಿಮೆಗೊಳ್ಳುತ್ತಿವೆ. ಈಗ ಆನ್ ಲೈನ್ ನಲ್ಲಿ ಮುಗಿಸಿದ ಪಠ್ಯದಲ್ಲಿ ಕಡಿತಗೊಳ್ಳುವ ಪಠ್ಯದ ಮಾಹಿತಿ ನಿಖರವಾಗಿಲ್ಲ. ಎಸ್ಸೆಸ್ಸೆಲ್ಸಿ ಹಾಗೂ 2ನೇ ಪಿಯುಸಿ ಪರೀಕ್ಷೆಗೆ ದಿನಾಂಕ ಪ್ರಕಟಿಸಿದಲ್ಲಿ ಎಷ್ಟು ಹಾಗೂ ಯಾವ ಅಧ್ಯಾಯಗಳನ್ನು ಬೋಧಿಸಬೇಕೆಂಬ ಗೊಂದಲ ಇದ್ದೇ ಇದೆ ಎನ್ನುತ್ತಾರೆ ಶಿಕ್ಷಕ ಮಲ್ಲೇಶ್.

    ಗ್ರಾಮೀಣ ಮಕ್ಕಳ ಅಳಲು: ಹಳ್ಳಿ ಮಕ್ಕಳಿಗೆ ಇತ್ತ ಆನ್ ಲೈನ್ ಸೌಲಭ್ಯವೂ ಇಲ್ಲ, ಅತ್ತ ಶಾಲೆಗೆ ಹೋಗುವಂತೆಯೂ ಇಲ್ಲ. ಕಳೆದ 10 ತಿಂಗಳಿಂದ ಒಂದಿಷ್ಟು ವಿದ್ಯಾಗಮ ಪ್ರಯತ್ನ ಬಿಟ್ಟರೆ ಮತ್ತೆ ಪಠ್ಯದ ಬೋಧನೆ ಇಲ್ವೆ ಇಲ್ಲ. ಬಡ ಮಕ್ಕಳಿಗೆ ಮೊಬೈಲ್ ಇಲ್ಲ. ಇದ್ದರೂ ನೆಟ್ ವರ್ಕ್ ಇಲ್ಲ. ಮನೆಗೆಲಸ, ಹೊಲದ ಕೆಲಸದಲ್ಲಿ ಪೋಷಕರಿಗೆ ಸಹಕರಿಸುವ ಜವಾಬ್ದಾರಿ. ಶಾಲೆ ಆರಂಭದ ಬಗ್ಗೆ ತಮ್ಮ ಶಿಕ್ಷಕರಿಗೆ ಫೋನಾಯಿಸಿ ವಿಚಾರಣೆ ಇದರಲ್ಲೆ ಕಾಲ ತಳ್ಳುತ್ತಿದ್ದಾರೆ. ಇವರಿಗೆ ಪರೀಕ್ಷೆ ನಡೆಸಿದರೆ ನಿರೀಕ್ಷಿತ ಫಲಿತಾಂಶ ಸಾಧ್ಯವಿಲ್ಲ. ತರಗತಿ ನಡೆಸಿಯೇ ಪರೀಕ್ಷೆ ನಡೆಸಬೇಕು ಎನ್ನುತ್ತಾರೆ ಶಿಕ್ಷಕ ಹಾಲೇಶ್.

    ಕನ್ನಡ ಮಾಧ್ಯಮದ ಸ್ಥಿತಿ-ಗತಿ: ರಾಜ್ಯದ ಬಹುತೇಕ ಕನ್ನಡ ಮಾಧ್ಯಮದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ನೇರ ಬೋಧನೆಯಷ್ಟೆ ಪರೀಕ್ಷೆ ಸಿದ್ಧಗೊಳಿಸುವ ಅಸ್ತ್ರ. ಬುದ್ದಿಮತ್ತೆಯಲ್ಲಿ ಚುರುಕಾದ ಮಕ್ಕಳು ಇಂಗ್ಲೀಷ್ ಮಾಧ್ಯಮ ಆಯ್ಕೆಮಾಡಿಕೊಂಡಿದ್ದಾರೆ. ಪೋಷಕರು ಬಹುತೇಕ ಪೋಷಕರು ವಿದ್ಯಾವಂತರಾಗಿದ್ದು ಮನೆಯಲ್ಲಿ ಓದಿಗೆ ಸಹಕರಿಸುವರು. ಹಳ್ಳಿಗಾಡಿ ಬಡ, ಅನಕ್ಷರಸ್ಥ ಪೋಷಕರು ಮಕ್ಕಳ ಕಲಿಕೆಯ ಬಗ್ಗೆ ಮುಗ್ಧತೆ ಹೊಂದಿದ್ದಾರೆ. ಅವರಿಗೆ ಆನ್ ಲೈನ್ ಗೊತ್ತಿಲ್ಲ. ಸ್ಕೂಲ್ ಹೋದ್ರೆ ಅಷ್ಟೆ ಪರೀಕ್ಷೆ ಬರೆಯುವ ಸಾಮರ್ಥ್ಯ ಎನ್ನುತ್ತಾರೆ ಪೋಷಕರು.

    ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಆನ್ ಲೈನ್ ತರಗತಿಗಳು ಪರಿಣಾಮಕಾರಿ ಅಲ್ಲ. ಈ ಎಲ್ಲಾ ಗೊಂದಲಗಳ ನಡುವೆ ಸಾರ್ವತ್ರಿಕವಾಗಿ ವಾರ್ಷಿಕ ಪರೀಕ್ಷೆಯಲ್ಲಿ ಏಕರೂಪತೆ ಇರಬೇಕು. ತಡವಾದರೂ ಸ್ಪಷ್ಟ ಪಠ್ಯದ ಅಧ್ಯಾಯಗಳ ಆಯ್ಕೆಯೊಂದಿಗೆ ಶಾಲಾ ದಿನಗಳನ್ನು ಪರಿಷ್ಕರಿಸಿ ಪರೀಕ್ಷೆಗೆ ಸಿದ್ದಗೊಳಿಸುವುದು ಸೂಕ್ತ ಎಂಬುದು ಹಲವರ ಅಭಿಪ್ರಾಯ.

    ಚಂದನ ವಾಹಿನಿ ಪಾಠ ಅರ್ಥವಾಗುವುದು ಕಷ್ಟ

    ಚಂದನ ವಾಹಿನಿಯಲ್ಲಿ ನಡೆದ ಪಠ್ಯದ ಬೋಧನೆ ಸರಾಸರಿ ಹಾಗೂ ಸರಾಸರಿ ಬುದ್ಧಿಮತ್ತೆಗಿಂತ ಕೆಳಗಿನ ಮಕ್ಕಳು ಅರ್ಥೈಸಿಕೊಳ್ಳಲು ಕಷ್ಟವಾಗಿದೆ. ಅವರ ಸಂಶಯಗಳಿಗೆ ಶಿಕ್ಷಕರ ಸಂಪರ್ಕವಿಲ್ಲದೇ ಪರಿಹಾರ ಸಿಗುತ್ತಿಲ್ಲ ಎಂಬುದು ತಜ್ಞರ ಅಭಿಪ್ರಾಯ

    ಗ್ರಾಮೀಣ ಖಾಸಗಿ ಶಾಲೆಯೊಂದರಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದೇನೆ. ತಂದೆ ಅಕಾಲಿಕ ಮರಣ ಹೊಂದಿದ್ದಾರೆ. ತಾಯಿ ಖಾಸಗಿ ಅನುದಾನಿತ ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಶಾಲೆ ಆರಂಭಗೊಳ್ಳದ ಕಾರಣ ಕೆಲಸವಿಲ್ಲ. ಮನೆಯಲ್ಲಿ ಟಿವಿಯೂ ಇಲ್ಲ. ಆನ್ ಲೈನ್ ಪಾಠವೂ ಇಲ್ಲ. ಪರೀಕ್ಷೆ ಸಿದ್ಧತೆಗಾಗಿ ತರಗತಿ ಆರಂಭಿಸಲು ಶಿಕ್ಷಕರಿಗೆ ಮೊರೆ ಇಡುತ್ತಿದ್ದೇನೆ ಎಂದು ಅಲವತ್ತುಕೊಳ್ಳುತ್ತಾರೆ ಖಾಸಗಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ರಕ್ಷಿತಾ.

    ಮೀನು ಹಿಡಿಯುತ್ತಿರುವ ವಿದ್ಯಾರ್ಥಿ

    ತಂದೆಯೊಂದಿಗೆ ಮೀನು ಹಿಡಿಯಲು ನಿತ್ಯ ಕೆರೆಗೆ ತೆರಳುತ್ತೇನೆ. ಚಿಕ್ಕ ದೋಣಿಯಲ್ಲಿ ಬಲೆ ಹಿಡಿದು ನೀರಿನಲ್ಲಿ ಬಹುದೂರ ಸಾಗಬೇಕು. ಅನಾರೋಗ್ಯ ಪೀಡಿತ ತಂದೆಯೊಂದಿಗೆ ನಿತ್ಯ 5 ರಿಂದ 10 ಕೆ.ಜಿ. ಮೀನು ಬೇಟೆ ಆಡುತ್ತೇವೆ. ಕಾಲೇಜು ಆರಂಭಗೊಳ್ಳುವವರೆಗೆ ತಂದೆಗೆ ಸಹಕರಿಸುವೆ ಎಂದು ಕಷ್ಟ ತೋಡಿಕೊಳ್ಳುತ್ತಾನೆ ವಿದ್ಯಾರ್ಥಿ ಗಿರೀಶ್.

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    1 COMMENT

    1. ಪ್ರಸ್ತುತ ಪರಿಸ್ಥಿತಿಯನ್ನು ವಾಸ್ತವಾಂಶಗಳೊಂದಿಗೆ ಪ್ರಚುರ ಪಡಿಸುವ ನಿಟ್ಟಿನಲ್ಲಿ ಉತ್ತಮವಾಗಿ ಲೇಖನಿಸಿದ್ದೀಯ ಗೆಳೆಯ. ನನ್ನ ಅಭಿಪ್ರಾಯದಲ್ಲಿ ಆನ್ ಲೈನ್ ಶಿಕ್ಷಣದಿಂದ ಅದರಲ್ಲೂ ಹತ್ತನೇ ತರಗತಿಯವರೆಗೆ ಶಿಕ್ಷಣದ ಮೌಲ್ಯ ಕಾಪಾಡುವ ಯಾವುದೇ ಗುಣಾತ್ಮಕ ಉದ್ದೇಶ ಸಫಲವಾಗುವುದಿಲ್ಲ.ಘನ ಸರ್ಕಾರದ ಮಟ್ಟದಲ್ಲಿ ಈ ಎಲ್ಲಾ ವಿಷಯಗಳನ್ನು ಕೂಲಂಕುಶವಾಗಿ ಅವಲೋಕಿಸಿ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆಯಲ್ಲವೇ ಮಿತ್ರ.

    LEAVE A REPLY

    Please enter your comment!
    Please enter your name here

    Latest article

    error: Content is protected !!