ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸುವ ಕುರಿತಂತೆ ನಿರ್ಣಯಕ್ಕೆ ಬರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ಸಮಗ್ರ ಶಿಕ್ಷಣ-ಕರ್ನಾಟಕ ಸಭಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಜ್ವಲಂತ ಸಮಸ್ಯೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ನಡೆದ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಎಲ್ಲರ ಅಭಿಪ್ರಾಯ ಆಲಿಸಿದ ನಂತರ ಮಾತಾನಾಡಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದಲ್ಲಿ ತಕ್ಷಣವೇ ಶಾಲಾರಂಭ ಮಾಡಬೇಕೆಂದು ವಿಧಾನಪರಿಷತ್ತಿನ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಸದಸ್ಯರು ರಾಜ್ಯ ಸರ್ಕಾರವನ್ನು ಈ ಸಭೆಯಲ್ಲಿ ಒತ್ತಾಯಿಸಿದರು.
ಹಲವು ಸಮಸ್ಯೆ
ಶಾಲೆಗಳು ಪ್ರಾರಂಭವಾಗದೇ ಇರುವುದರಿಂದ ಗ್ರಾಮೀಣ ಪ್ರದೇಶದ ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕೆಯ ನಿರಂತರತೆ ತಪ್ಪಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮೊದಲ ಹಂತದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ತರಗತಿಗಳನ್ನು ಆರಂಭಿಸಬೇಕು. ಶಾಲೆಗಳನ್ನು ಆರಂಭಿಸುವುದರಿಂದ ಪ್ರಸ್ತುತ ಶಿಕ್ಷಣ ಇಲಾಖೆಯ ಮುಂದಿರುವ ಖಾಸಗಿ ಅನುದಾನರಹಿತ ಶಿಕ್ಷಕರ ಸಮಸ್ಯೆ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳು ಪರಿಹಾರ ದೊರೆತಂತಾಗುತ್ತದೆ ಎಂದು ವಿಧಾನಪರಿಷತ್ತಿನ ಸದಸ್ಯರು ಅಭಿಪ್ರಾಯಪಟ್ಟರು.
ವಿಶೇಷವಾಗಿ ಬಹುಕಾಲ ಮಕ್ಕಳು ಶಾಲೆಯಿಂದ ದೂರ ಉಳಿಯುವುದರಿಂದ ಮಕ್ಕಳ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮಗಳು ಉಂಟಾಗುವುದರಿಂದ ಶಾಲೆಗಳನ್ನು ತಕ್ಷಣವೇ ಪ್ರಾರಂಭಿಸುವುದು ಉತ್ತಮ ಎಂದು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಎಂ ಎಲ್ ಸಿಗಳು ಒಕ್ಕೊರಲಿನಿಂದ ಒತ್ತಾಯ ಮಾಡಿದರು.
ಬಹುಕಾಲ ಶಾಲೆಯಿಂದ ದೂರ ಉಳಿದರೆ ಮಕ್ಕಳಲ್ಲಿ ನಿರಾಸಕ್ತಿ ಮೂಡುತ್ತದೆ, ಈಗಾಗಲೇ ಖಿನ್ನತೆ ಆರಂಭಿಸಿದೆ, ಮುಂದೆ ಇದರಿಂದ ಅವರ ಕಲಿಕೆಯ ಮೇಲೆ ಪರಿಣಾಮವಾಗಿ ಇನ್ನೊಂದು ಸಮಸ್ಯೆ ಸೃಷ್ಟಿಯಾಗುತ್ತದೆ. ಈಗಾಗಲೇ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ, ಕೆಲವರು ಬಾಲ್ಯವಿವಾಹಕ್ಕೆ ತುತ್ತಾಗಿದ್ದಾರೆ. ಇದು ಇನ್ನೂ ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಯೊಬ್ಬ ಸದಸ್ಯರು ಅಭಿಪ್ರಾಯಪಟ್ಟರು. ನಾವು ಗ್ರಾಮಾಂತರ ಪ್ರದೇಶದಲ್ಲಿ ಪ್ರತಿದಿನವೂ ಎಲ್ಲ ಚಟುವಟಿಕೆಗಳು ಆರಂಭವಾಗಿರುವುದನ್ನು ನೋಡಿದ್ದೇವೆ. ಮಕ್ಕಳೂ ಸಹ ಗುಂಪುಗುಂಪಾಗಿ ಆಟವಾಡುತ್ತಿದ್ದಾರೆ. ಯಾವ ಸಮಸ್ಯೆಗಳೂ ಉದ್ಭವಿಸಿಲ್ಲ. ಅನ್ ಲಾಕ್ ಘೋಷಣೆಯಾಗಿ ಎಲ್ಲ ರೀತಿಯ ಚಟುವಟಿಕೆಗಳು ಆರಂಭವಾಗಿದ್ದು, ಶಾಲೆಗಳು ಮಾತ್ರವೇ ಆರಂಭವಾಗಿಲ್ಲ. ಶಾಲೆಗಳನ್ನು ಅದರಲ್ಲೂ 10ನೇ ಮತ್ತು ದ್ವಿತೀಯ ಪಿಯಸಿ ತರಗತಿಗಳನ್ನು ಆರಂಭಿಸಲು ಈ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.
“ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಇನ್ನೂ ಕಾಲಹರಣ ಮಾಡದೇ ಶಾಲೆಗಳನ್ನು ಆರಂಭಿಸುವುದು ಎಲ್ಲ ದೃಷ್ಟಿಯಿಂದಲೂ ಉತ್ತಮ. ತಮ್ಮೊಂದಿಗೆ ಮತ್ತು ಶಾಲೆ ಆರಂಭಿಸುವ ಸರ್ಕಾರದ ನಿರ್ಧಾರದೊಂದಿಗೆ ನಾವೆಲ್ಲ ಇದ್ದೇವೆ. ನೀವು ಶಾಲೆ ಆರಂಭಿಸಿ” ಎಂದು ಎಲ್ಲ ಸದಸ್ಯರು ಶಿಕ್ಷಣ ಸಚಿವರಿಗೆ ಅಭಯ ನೀಡಿದರು.
10 ಮತ್ತು 12ನೇ ತರಗತಿಗಳನ್ನು ಶೀಘ್ರವೇ ಆರಂಭಿಸಬೇಕು. ವಿದ್ಯಾಗಮದಂತಹ ಕಾರ್ಯಕ್ರಮ ನಿಲ್ಲಿಸಿದ್ದು ಸರ್ವಥಾ ಸರಿಯಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ನಿಜಕ್ಕೂ ತುಂಬಾ ತೊಂದರೆಯಾಗಿದೆ. ಈ ವಿದ್ಯಾಗಮ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಬೇಕೆಂದು ಒತ್ತಾಯಿಸಿದ ಸದಸ್ಯರು ಶಾಲಾರಂಭದ ನಂತರ ಉಳಿಕೆಯ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಪಠ್ಯ ಕಡಿತ ಮಾಡಬೇಕೆಂದು ಸಲಹೆ ನೀಡಿದರು.
ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಆಲಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಸದಸ್ಯರು ಒಕ್ಕೊರಲಿನ ಅಭಿಪ್ರಾಯವನ್ನು ನಾನು ಗಮನಿಸಿದ್ದು, ಈ ಕುರಿತಂತೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸುವ ಕುರಿತಂತೆ ನಿರ್ಣಯಕ್ಕೆ ಬರಲಾಗುವುದು ಎಂದು ಹೇಳಿದರು.
ಕೋವಿಡ್ ನಂತರ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಕಲಿಕಾ ನಿರಂತರತೆಗೆ ಕೈಗೊಂಡ ಕ್ರಮಗಳನ್ನು ವಿವರಿಸಿದ ಸುರೇಶ್ ಕುಮಾರ್, ಶಾಲೆ ಆರಂಭಗೊಂಡ ನಂತರ ಪಿಯು ತರಗತಿಗಳ ಪಠ್ಯವನ್ನು ಎನ್.ಸಿ.ಇ.ಆರ್.ಟಿ ನಿಗದಿಪಡಿಸಿದ ಪಠ್ಯಕ್ರಮಗಳಂತೆ ಕಡಿತ ಮಾಡಲಾಗಿದೆ ಎಂದರು.
ಶಾಲೆ ಆರಂಭ ನಿಧಾನವಾಗುತ್ತಿರುವದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ನಿನ್ನೆ ಕನ್ನಡಪ್ರೆಸ್.ಕಾಮ್ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಬಾರಿ ಸರಳ ಶಿಕ್ಷಕಸ್ನೇಹಿ ವರ್ಗಾವಣೆ:
ಈಗಾಗಲೇ ಪ್ರಾರಂಭವಾಗಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಎದುರಿಸಲಾಗುತ್ತಿರುವ ಕೆಲವು ಪ್ರಾಯೋಗಿಕ ಸಮಸ್ಯೆಗಳನ್ನು ಸರಿಪಡಿಸುವುದಲ್ಲದೇ ಕಡ್ಡಾಯ, ಹೆಚ್ಚುವರಿ ವರ್ಗಾವಣೆಯಾದ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಈ ಬಾರಿ ವರ್ಗಾವಣೆ ಮಿತಿಯನ್ನು ಶೇ. 15ಕ್ಕೆ ಹೆಚ್ಚಿಸಿರುವುದರಿಂದ ಬಹುಪಾಲು ಶಿಕ್ಷಕರಿಗೆ ವರ್ಗಾವಣೆ ಅವಕಾಶಗಳಿವೆ ಎಂದು ಸಚಿವರು ಹೇಳಿದರು.
ಸಿಆರ್ ಪಿ ಬಿಆರ್ ಪಿಗಳಿಗೂ ಅವಕಾಶ
ಸಿ.ಆರ್.ಪಿ ಮತ್ತು ಬಿ.ಆರ್.ಪಿ ಶಿಕ್ಷಕರಿಗೆ ವರ್ಗಾವಣಾ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಡ್ಡಾಯ ವರ್ಗಾವಣಾ ವ್ಯಾಪ್ತಿಯಲ್ಲಿ ಬಂದ ಮುಖ್ಯೋಪಾಧ್ಯಾಯರಿಗೆ ಮತ್ತು ಪದವಿ ಪೂರ್ವ ಉಪನ್ಯಾಸಕರಿಗೂ ಈ ಬಾರಿ ಆದ್ಯತೆಯ ವರ್ಗಾವಣೆಗೆ ಅವಕಾಶ ನೀಡಲಾಗುವುದು ಎಂದು ಸಚಿವರು ಹೇಳಿದರು.
ಹೊಸದಾಗಿ ನೇಮಕಗೊಂಡ ವೃತ್ತಿನಿರತ ಪಿಯು ಉಪನ್ಯಾಸಕರಿಗೆ ನಿರಾಕ್ಷೇಪಣಾ ಪತ್ರ
ಹೊಸದಾಗಿ ನೇಮಕಗೊಂಡ ಸೇವಾ ನಿರತ ಪದವಿ ಪೂರ್ವ ಶಿಕ್ಷಣ ಉಪನ್ಯಾಸಕ ಅಭ್ಯರ್ಥಿಗಳ ಪೈಕಿ ಕೆಲವು ಅಭ್ಯರ್ಥಿಗಳು ನಿರಪೇಕ್ಷಣಾ ಪ್ರಮಾಣ ಪತ್ರಗಳನ್ನ ನೀಡಬೇಕೆಂದು ಆಗ್ರಹ ವ್ಯಕ್ತವಾಗಿದ್ದು, ಕೂಡಲೇ ಈ ಕುರಿತು ಕ್ರಮ ವಹಿಸಬೇಕೆಂದು ಸಚಿವರು ಪಿಯು ಇಲಾಖೆ ನಿರ್ದೇಶಕರಿಗೆ ಸೂಚಿಸಿದರು. ಆರ್ಥಿಕ ಮಿತವ್ಯಯದ ಹಿನ್ನೆಲೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಸ್ಥಗಿತಗೊಂಡಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ಈ ಬಾರಿಯ ತಂತ್ರಜ್ಞಾನಾಧಾರಿತ ವರ್ಗಾವಣಾ ವ್ಯವಸ್ಥೆಗೆ ಮುಕ್ತಕಂಠದಿಂದ ಪ್ರಶಂಶಿಸಿದ ವಿಧಾನಪರಿಷತ್ ಸದಸ್ಯರು, ಶಿಕ್ಷಕರು ಕುಳಿತ ಸ್ಥಳದಿಂದಲೇ ತಮ್ಮ ಮೊಬೈಲ್ ನಿಂದಲೇ ಅರ್ಜಿ ಹಾಕಿಕೊಳ್ಳುವಂತಹ ವ್ಯವಸ್ಥೆ ಪರಿಣಾಮಕಾರಿಯಾಗಿದ್ದು, ಅದರಲ್ಲಿನ ಕೆಲ ಗೊಂದಲಗಳನ್ನು ಸರಿಪಡಿಸಿದರೆ ಇದು ತುಂಬಾ ಉಪಯುಕ್ತವಾಗಿದೆ ಎಂದರು. ಶಿಕ್ಷಣ ಇಲಾಖೆ ಕಳೆದ ಒಂದುವರೆ ವರ್ಷದಲ್ಲಿ ಕೈಗೊಂಡ ಉಪಕ್ರಮಗಳನ್ನು ಸದಸ್ಯರು ಶ್ಲಾಘಿಸಿದರು.
ಸಭೆಯಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಮಾಜಿ ಶಿಕ್ಷಣ ಸಚಿವ ಬಸವರಾಜ ಎಸ್. ಹೊರಟ್ಟಿ, ಡಾ. ವೈ.ಎಸ್.ನಾರಾಯಣಸ್ವಾಮಿ, ಶಶೀಲ್ ನಮೋಶಿ, ಸಂಕನೂರು, ಚಿದಾನಂದ ಎಸ್. ಗೌಡ, ಮರಿತಿಬ್ಬೇಗೌಡ, ಪುಟ್ಟಣ್ಣ , ಬೋಜೇಗೌಡ ಭಾಗವಹಿಸಿದ್ದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಪಿಯು ನಿರ್ದೇಶಕಿ ಸ್ನೇಹಲ್, ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾಧಿಕಾರಿ ದೀಪಾಚೋಳನ್ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.