ಬ್ರಿಟನ್ ನಲ್ಲಿ ಕೋವಿಡ್ ಲಸಿಕೆಗೆ ಅಲ್ಲಿನ ಸರಕಾರ ಒಪ್ಪಿಗೆ ಕೊಟ್ಟ ಬೆನ್ನ ಹಿಂದೆಯೇ ಭಾರತದಲ್ಲೂ ಲಸಿಕೆ ಪ್ರಯೋಗ ಅಂತಿಮ ಹಂತದತ್ತ ಧಾವಿಸುತ್ತಿರುವ ವರದಿಗಳು ಬಂದಿವೆ.
ಭಾರತ್ ಬಯೋಟೆಕ್ ದೇಶೀಯವಾಗಿ ತಯಾರಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯ ಮೂರನೆ ಹಂತದ ಪ್ರಯೋಗಕ್ಕೆ ಇಂದು ಬೆಂಗಳೂರು ಸೇರಿದಂತೆ ಹಲವೆಡೆ ಚಾಲನೆ ನೀಡಲಾಯಿತು. ಇಂದು ಬೆಂಗಳೂರಿನ ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೂರನೇ ಹಂತದ ಲಸಿಕೆ ಪ್ರಯೋಗಕ್ಕೆ ಚಾಲನೆ ನೀಡಿದರು. ದೇಶಾದ್ಯಂತ 26000 ಜನರಿಗೆ ಈ ಮೂರನೇ ಹಂತದಲ್ಲಿ ಲಸಿಕೆ ನೀಡಲಾಗುವುದು.
ಪಂಜಾಬಿನಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಯೋಗಾತ್ಮಕ ಲಸಿಕೆಯ ಮೊದಲ ಪ್ರಯೋಗವನ್ನು ತಾವೆ ಪಡೆಯುವುದಾಗಿ ಇಂದು ಪ್ರಕಟಿಸಿದರು. ಆ ಮೂಲಕ ಲಸಿಕೆ ಪಡೆಯುತ್ತ್ರಿರುವ ಎರಡನೆ ಚುನಾಯಿತ ಪ್ರತಿನಿಧಿ ಆಗಲಿದ್ದಾರೆ. ಈ ಹಿಂದೆ ನವೆಂಬರ್ ನಲ್ಲಿ ಹರಿಯಾಣದ ಸಚಿವರೊಬ್ಬರು ಲಸಿಕೆ ಪಡೆದಿದ್ದರು.
ದೇಶದ ಪ್ರತಿಯೊಬ್ಬ ಪ್ರಜೆಗೂ ವ್ಯಾಕ್ಸಿನ್ ಹಾಕುವ ವಿಚಾರ ಸರಕಾರದ ಮುಂದೆ ಚರ್ಚೆಗೆ ಬಂದಿಲ್ಲ ಎಂದು ಆರೋಗ್ಯ ಸಚಿವಾಲಯ ಬುಧವಾರ ಸ್ಪಷ್ಟಪಡಿಸಿದೆ. ವ್ಯಾಕ್ಸಿನ್ ನ ಮೊದಲ ಉದ್ದೇಶ ಸೋಂಕಿನ ಸರಪಳಿಯನ್ನು ತುಂಡರಿಸುವುದು. ಈ ನಿಟ್ಟಿನಲ್ಲಿ ನಾವು ಯಶಸ್ವಿಯಾದರೆ ಇಡೀ ದೇಶದ ಎಲ್ಲರಿಗೂ ಲಸಿಕೆ ಹಾಕುವ ಅಗತ್ಯ ಬೀಳುವುದಿಲ್ಲ ಎಂದು ಐಸಿಎಂಆರ್ ನಿರ್ದೇಶ ಬಲರಾಮ್ ಭಾರ್ಗವ ಹೇಳಿದ್ದಾರೆ.
ಈ ಮಧ್ಯೆ ಲಸಿಕೆ ಲಭ್ಯವಾದ ಕೂಡಲೆ ಅದನ್ನು ವಿತರಿಸುವ ಕಾರ್ಯತಂತ್ರ ಬಿರುಸಾಗಿ ನಡೆಯುತ್ತಿದೆ. ಮೊದಲ ಸಾಲಿನ ಕೋರೋನಾ ವಾರಿಯರ್ಸ್ ಗೆ ಲಸಿಕೆಯನ್ನು ಮೊದಲ ಹಂತದಲ್ಲಿ ನೀಡುವ ಯೋಜನೆ ಸಿದ್ಧವಾಗುತ್ತಿದೆ.