26.1 C
Karnataka
Friday, November 22, 2024

    ದಾಸ ಶ್ರೇಷ್ಠ ಕನಕದಾಸರು

    Must read

    ರತ್ನಾ ಶ್ರೀನಿವಾಸ್

    ಕನಕದಾಸರು ಕರ್ನಾಟಕದಲ್ಲಿ 15 – 16ನೇ  ಶತಮಾನದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಇವರು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು.  ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ “ಅಶ್ವಿನಿ ದೇವತೆಗಳೆಂದು” ಬಣ್ಣಿಸಲಾಗಿದೆ.

    ಕನಕದಾಸರ ಮೊದಲ ಹೆಸರು ತಿಮ್ಮಪ್ಪನಾಯಕ.
    ಧಾರವಾಡ ಜಿಲ್ಲೆಯ ಬಾಡ ಗ್ರಾಮದಲ್ಲಿ  ಬೀರಪ್ಪ –  ಬಚ್ಚಮ್ಮ ದಂಪತಿಗಳ ಮಗನಾಗಿ ಜನಿಸಿದರು. ಇವರು ದಂಡನಾಯಕರಾಗಿದ್ದರು.  ಭೂಮಿಯನ್ನು ಅಗೆಯುವಾಗ ಧನಕನಕಗಳು  ದೊರೆತವು . ಅದನ್ನು ಸಮಾಜ ಸೇವೆಗೆ ವಿನಿಯೋಗಿಸಿ ಕಾಗಿನೆಲೆಯಲ್ಲಿ ಆದಿಕೇಶವನ ದೇವಾಲಯ ನಿರ್ಮಿಸಿ ಕನಕ ಎಂದು ಪ್ರಸಿದ್ಧರಾದರು.
    ಕಾಗಿನೆಲೆಯಾದಿ ಕೇಶವ ಎಂಬ ಅಂಕಿತ ನಾಮದಿಂದ ಪ್ರಸಿದ್ಧರಾದ ಕನಕದಾಸರು ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಮುಂಡಿಗೆಗಳ ರೂಪದಲ್ಲಿ ಸಂಗೀತ ಪ್ರಪಂಚಕ್ಕೆ ಕೊಡುಗೆಗಳನ್ನು ನೀಡಿದ್ದಾರೆ.

    ಇವರ ಕೃತಿಗಳು:
    1. ಮೋಹನ ತರಂಗಿಣಿ
    2. ರಾಮಧಾನ್ಯ ಚರಿತೆ
    3. ನಳಚರಿತ್ರೆ
    4. ಹರಿಭಕ್ತಿಸಾರ
    5. ನರಸಿಂಹ  ಸ್ತವ – ಈ ಕೃತಿ ಲಭ್ಯವಿಲ್ಲ

    ಮೋಹನ ತರಂಗಿಣಿ:  ಇದು ಸಾಂಗತ್ಯದಲ್ಲಿ ರಚಿತವಾಗಿದೆ.  ಭಾರತ-ಭಾಗವತದಲ್ಲಿ ಬಂದಿರುವ ಕಾಮದಹನ, ಉಷಾ- ಅನಿರುದ್ಧರ ಪ್ರಣಯ, ಹರಿ- ಹರ ಸಮಾನತೆಯ ಸಂದೇಶಗಳಲ್ಲಿ ಕೃಷ್ಣ- ಬಾಣಾಸುರ ಯುದ್ಧದ ಪರ್ಯಾವಸಾನ ಇವುಗಳನ್ನು ಬಿತ್ತರಿಸಲಾಗಿದೆ. ಇದನ್ನು ಕೃಷ್ಣಚರಿತೆ ಎಂತಲೂ ಕರೆದಿದ್ದಾರೆ. ಕಾವ್ಯಮಾರ್ಗದ ಹದಿನೆಂಟು ವರ್ಣನೆಗಳನ್ನು ಹಲವು ರಸಗಳನ್ನು ಸಾಂಗತ್ಯದಲ್ಲಿ ರಚಿಸಿದ್ದಾರೆ.ಪೌರಾಣಿಕ ಕಥೆಯ ಮೂಲಕ ತತ್ಕಾಲೀನಜೀವನ ಚಿತ್ರಿಸಿ ಚಿರಂತನವಾದ ಭಕ್ತಿ ಸಂದೇಶವನ್ನು ಈ ಕೃತಿ ಬೀರಿದೆ.

    ರಾಮ ಧಾನ್ಯ ಚರಿತೆ: ನರೆದಲೆ (ರಾಗಿ) ಮತ್ತು ವ್ರೀಹಿ(ಭತ್ತ)ಗಳ ನಡುವೆ ವಾಗ್ವಾದ ನಡೆದು ನರೆದಲೆಯೆ ಶ್ರೇಷ್ಠ ಎಂದು ತೀರ್ಮಾನವಾಗುತ್ತದೆ. ಇಲ್ಲಿ ತಳವರ್ಗ, ಮೇಲ್ವರ್ಗಗಳ ನಡುವೆ ನಡೆಯುವ ಸಂಘರ್ಷವಿದೆ.ಶ್ರೀರಾಮ ರಾಗಿ ಮತ್ತು ಭತ್ತವನ್ನು ಆರು ತಿಂಗಳುಗಳ ಕಾಲ ಕೋಣೆಯಲ್ಲಿ ಬಂಧಿಸಿಟ್ಟು ನಂತರ ಪರೀಕ್ಷಿಸಿದಾಗ ಭತ್ತ ಹಾಳಾಗಿ ರಾಗಿ ತನ್ನತನವನ್ನು ಹಾಗೆಯೇ ಉಳಿಸಿಕೊಂಡಿರುತ್ತದೆ. ಅದನ್ನು ಶ್ರೀರಾಮ ತನ್ನ ಹೆಸರಾದ “ರಾಘವ” ಎಂದು ಕರೆಯುತ್ತಾನೆ.

    ನಳಚರಿತ್ರೆ: ಇದು ಮಹಾಭಾರತದ ವನಪರ್ವದಲ್ಲಿ ನ ನಳೋಪಖ್ಯಾನವನ್ನು ಹೇಳುತ್ತಾ ಮಾನವೀಯತೆಯ ವಿಭಿನ್ನ ಆಯಾಮಗಳನ್ನು ಪರಿಚಯಿಸುತ್ತದೆ.

    ಹರಿಭಕ್ತಿಸಾರ: ಇಲ್ಲಿ ಶ್ರೀ ಹರಿಯ ಮಹಿಮೆಯನ್ನು ಕನಕದಾಸರು ಮನಸಾರೆ ಕೊಂಡಾಡಿದ್ದಾರೆ.

    ಕನಕದಾಸರು ದಾಸ ದೀಕ್ಷೆಯನ್ನು ಪಡೆದು ಅತ್ಯುತ್ತಮ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ಕಲ್ಪಿಸಿಕೊಟ್ಟವರು. 15 – 16ನೇ ಶತಮಾನದಲ್ಲೇ ಜಾತಿ ವ್ಯವಸ್ಥೆ ಬಗ್ಗೆ ಸಮರ ಸಾರಿದವರೆಂದರೆ ಕನಕದಾಸರು. ವ್ಯಾಸರಾಯರ ಅಚ್ಚುಮೆಚ್ಚಿನ ಶಿಷ್ಯರು ಹಾಗೂ ಉಡುಪಿ ಶ್ರೀಕೃಷ್ಣನ ಭಕ್ತರು. “ಕುಲ ಕುಲ ಕುಲವೆಂದು ಹೊಡೆದಾಡದಿರಿ”  ಎಂದು ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿ ಸ್ಥಾಪಿತವಾಗಿದ್ದ ಮೌಢ್ಯಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು.

    ಸಮಾಜದ ಅಂಕು ಡೊಂಕುಗಳನ್ನು ತಮ್ಮ ಕೃತಿ ರಚನೆಯಲ್ಲಿ ಎತ್ತಿ ಹಿಡಿದು ಜನ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು.ಸಮ ಸಮಾಜದ ನಿರ್ಮಾಣಕ್ಕಾಗಿ ಜನತೆಯಲ್ಲಿ ಅರಿವು ಮೂಡಿಸುವ ಕೆಲಸವನ್ನು ಕೀರ್ತನೆಗಳ ಮೂಲಕ ಸಾರಿದರು.

    ಒಟ್ಟಾರೆ ಕನಕದಾಸರು ತಮ್ಮ ಕೀರ್ತನೆಗಳ ಮೂಲಕವೇ ಜಾತಿ ವ್ಯವಸ್ಥೆಯ ತಾರತಮ್ಯಗಳ ವಿರುದ್ಧ ಸಮರ ಸಾರಿದ ದಾಸ ಶ್ರೇಷ್ಠರು.ಜನಪ್ರಿಯ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು, ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು.ಕನಕ ದಾಸರ ರಚನೆಗಳಲ್ಲಿ ಪರಿಪಕ್ವವಾದ ಪ್ರಪಂಚಾ ನುಭವವಿದೆ. ತಮ್ಮ ಜೀವನ ಮತ್ತು ಸಾಹಿತ್ಯಗಳ ಸಿದ್ದಿಯಿಂದ ಕನ್ನಡಿಗರಿಗೆ ಬೆಳಕನ್ನು ನೀಡಿದ್ದಾರೆ.

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    spot_img

    More articles

    13 COMMENTS

    1. ಶ್ರೀ ಮತಿ ರತ್ನ ಶ್ರೀನಿವಾಸ್ ರವರ ಲೇಖನ ತುಂಬಾ ಸೊಗಸಾಗಿದೆ.
      ಕನಕದಾಸರ ಬಗ್ಗೆ ಚೆನ್ನಾಗಿ ತಿಳಿದು ಬರೆದಿದ್ದಾರೆ. ಇದರಿಂದ ಕನಕ ದಾಸರ ಸಂಪೂರ್ಣ ಪರಿಚಯ (ಗೊತ್ತಿರದ ) ನಮಗೆ ಆಯಿತು..ಅದಕ್ಕಾಗಿ ರತ್ನ ಶ್ರೀನಿವಾಸ್ ಹಾಗು kannadapress ನವರಿಗೂ ಧನ್ಯ ವಾದಗಳು..🙏🙏

    2. ಕನಕದಾಸರ ಪರಿಚಯ ತುಂಬ ಚೆನ್ನಾಗಿ ಮಾಡಿದ ರತ್ನಾ ಶ್ರೀನಿವಾಸ್ ರವರಿಗೆ ಅಭಿನಂದನೆಗಳು. ಕನಕದಾಸರ ಕೃತಿ ವಿಮರ್ಶೆ ಉತ್ತಮವಾಗಿದೆ.💐💐

    3. ತುಂಬಾ ಉಪಯುಕ್ತವಾದ ಹಾಗೂ ಕನಕದಾಸರ ಕೃತಿಗಳ ಪರಿಚಯ ಮಾಡಿಸಿದ ರತ್ನ ಶ್ರೀನಿವಾಸ್ ಅವರಿಗೆ ತುಂಬಾ ಧನ್ಯವಾದಗಳು

    4. ನನ್ನ ಲೇಖನಕ್ಕೆ ಪ್ರತಿಕ್ರಿಯೆ ನೀಡಿರುವ ಎಲ್ಲರಿಗೂ ಧನ್ಯವಾದಗಳು 🙏🙏

    LEAVE A REPLY

    Please enter your comment!
    Please enter your name here

    Latest article

    error: Content is protected !!