ತಾಳ್ಮೆಯಿಂದಿರುವುದು ಅಂದರೆ ಸಂದರ್ಭಗಳನ್ನು, ವ್ಯಕ್ತಿಯನ್ನು ಘಟನೆಗಳನ್ನು ವ್ಯವಸ್ಥೆಗಳ ನಿಧಾನಗತಿಯನ್ನು ಸಹಿಸಿಕೊಳ್ಳುವುದು. ಸಹನೆ ಅಂದರೆ ಅವೆಲ್ಲವುಗಳನ್ನು ಒಪ್ಪಿಕೊಳ್ಳುವುದು. ತಾಳ್ಮೆಯಿಂದ ಸಹನೆ ಮೂಡುತ್ತದೆ, ಸಹನೆಯಿಂದ ಒಪ್ಪಿಕೊಳ್ಳುವ ಮನೋಸ್ಥಿತಿ ಬೆಳೆಯುತ್ತದೆ. ಒಪ್ಪಿಕೊಳ್ಳುವುದರಿಂದ ಶಾಂತಿ, ಸಂತೋಷ ಹಾಗೂ ಸಾಮರಸ್ಯ ಮೂಡುತ್ತದೆ. ಸಹನೆ ಮನುಷ್ಯನ ದೊಡ್ಡ ಆಸ್ತಿ. ಆದರೆ ಅಸಹಿಷ್ಣುತೆ ಆಂತರಿಕ ಕಲಹಕ್ಕೆ ಕಾರಣವಾಗುತ್ತದೆ. ಅಸಹನೆಯಿಂದ ವಿನಾಶ ಉಂಟಾಗುತ್ತದೆ.
ಸಹನೆಗೆ ಭಾರತೀಯ ನಾಗರಿಕತೆಯು ಒಂದು ಉತ್ತಮ ಉದಾಹರಣೆಯಾಗಬಲ್ಲುದು. ನಮ್ಮಲ್ಲಿ ವಿವಿಧ ಭಾಷೆಯ, ಜನಾಂಗಕ್ಕೆ ಸೇರಿದ, ಆರ್ಥಿಕ ಹಾಗೂ ಸಾಮಾಜಿಕ ವ್ಯತ್ಯಾಸವನ್ನೊಳಗೊಂಡಿರುವ ಜನಸಮೂಹವೇ ಇದೆ. ಅಂತಹ ವೈವಿಧ್ಯತೆಯ ನಡುವೆಯೂ ಏಕತೆಯಿಂದ ಬದುಕುತ್ತಿದ್ದೇವೆ. ಅಭಿವೃದ್ಧಿ ಬಯಸುವುವಿರಾದರೆ ಸಹನೆ ಬಹಳ ಮುಖ್ಯ.
ತಮಿಳು ಕವಿ ತಿರುವಳ್ಳುವರ್ ಸಹನೆ ಮತ್ತು ತಾಳ್ಮೆಯನ್ನು ಭೂಮಿ ತಾಯಿಗೆ ಹೋಲಿಕೆ ಮಾಡುತ್ತಾರೆ. ಭೂದೇವಿ ಸಹಿಷ್ಣುತಾಗುಣವನ್ನು ಹೊಂದಿದ್ದಾಳೆ. ಈ ಭೂಮಿಯಲ್ಲಿ ಏನೇ ಮಾಡಿದರೂ ಆಕೆ ಎಲ್ಲವನ್ನು ಸಹಿಸಿಕೊಂಡಿದ್ದಾಳೆ. ಸಹನೆಯ ಪ್ರತಿರೂಪವೇ ಹೆಣ್ಣು. ಸೀತೆಯನ್ನು ಅಪಹರಿಸಿದ ರಾವಣನನ್ನೇ ಕ್ಷಮಿಸುತ್ತಾಳೆ ಆಕೆ. ಶ್ರೀರಾಮನ ದರ್ಶನಕ್ಕಾಗಿ ಕಾದ ಶಬರಿ, ಸೇವೆಗೆ ಹೆಸರಾದ ಅನಸೂಯಾ ಎಲ್ಲರೂ ಸಹನಾಮೂರ್ತಿಗಳೇ.
ಅಸಹನೆ ತುಂಬಿರುವ ಮನಸ್ಸಿನೊಳಗೆ ಅಸೂಯೆ, ದುರಾಸೆ ಮತ್ತು ದ್ವೇಷವೇ ತುಂಬಿರುತ್ತದೆ. ಹಿರಿಯರ ಮಾತನ್ನು ಕಡೆಗಣಿಸಿದ ದುರ್ಯೋಧನ ಅಸೂಯೆಯಿಂದ ಪಾಂಡವರಿಗೆ ಐದು ಅಂಗುಲ ಜಾಗವನ್ನು ಕೊಡಲೊಲ್ಲದೆ ಕುರುಕ್ಷೇತ್ರ ಯುದ್ಧಕ್ಕೆ ಕಾರಣನಾಗುತ್ತಾನೆ. ಇದರಿಂದ ಇಡೀ ಕುರುವಂಶ ಸರ್ವನಾಶವಾಗುತ್ತದೆ.
ಯಾಕೆ ನಾವು ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುತ್ತೇವೆ?
ಅದು ಮನುಷ್ಯನ ಸಹಜ ಗುಣ. ಗಿಡಮರಗಳು ಪರ್ವತಗಳು, ಸೂರ್ಯ-ಚಂದ್ರರು ತಾಳ್ಮೆ ಕಳೆದುಕೊಳ್ಳುವುದಿಲ್ಲ. ಆದರೆ ಮನುಷ್ಯ ಮಾತ್ರ ಯಾವಾಗಲೂ ತಾಳ್ಮೆ ಕಳೆದುಕೊಳ್ಳುತ್ತಿರುತ್ತಾನೆ. ಆತನಿಗೆ ಎಲ್ಲವೂ ಬಹಳ ವೇಗವಾಗಿ ಆಗಬೇಕು, ಬಯಸಿದ್ದು ತಕ್ಷಣ ಸಿಗಬೇಕು, ಮಾಡಿದ ಕಾರ್ಯಕ್ಕೆ ತಕ್ಷಣವೇ ಫಲಿತಾಂಶವನ್ನು ನಿರೀಕ್ಷೆ ಮಾಡುತ್ತಾನೆ. ಆತನಿಗೆ ತಾಳ್ಮೆಯಿಂದ ಕಾಯುವ ಮನಸ್ಥಿತಿಯೇ ಇಲ್ಲ.
ಯಾಕೆ ಹೀಗೆ?
ಮನಷ್ಯನ ಮನಸ್ಸು ಬಹಳ ವೇಗವಾಗಿ ಯೋಚಿಸುವಂಥ ಸಾಮರ್ಥ್ಯವನ್ನು ಹೊಂದಿದೆ. ಆತನ ಮನಸ್ಸು ಕುಳಿತಲ್ಲಿಯೇ ವಿಶ್ವದೆಲ್ಲೆಡೆ ಸಂಚರಿಸಬಲ್ಲುದು. ಆತ ಭವಿಷ್ಯದ ಬಗ್ಗೆ ಚಿಂತಿಸಬಲ್ಲ, ಕಳೆದು ಹೋದುದರ ಬಗ್ಗೆ ಯೋಚಿಸಬಲ್ಲ. ಹಾಗಾಗಿ ಮನುಷ್ಯ ಕೆಲಸವನ್ನು ಆರಂಭಿಸುವುದಕ್ಕೆ ಮೊದಲೇ ಫಲಿತಾಂಶದ ಲೆಕ್ಕಾಚಾರದಲ್ಲಿರುತ್ತಾನೆ. ಇದು ಪ್ರಾಣಿ-ಪಕ್ಷಿಗಳಿಗಾಗಲಿ, ಸಸ್ಯಗಳಿಗಾಗಲಿ ಸಾಧ್ಯವಿಲ್ಲ.
ಹಾಗಂತ ಅವನೆಣಿಸಿದಂತೆ ಆಗುತ್ತದೆ ಯೇ?
ಇಲ್ಲ. ಎಲ್ಲವೂ ಪ್ರಕೃತಿಯ ಆಟ. ಮಧ್ಯಾಹ್ನವೇ ರಾತ್ರಿಯಾಗಬೇಕೆಂದು ಬಯಸಿದರೆ ರಾತ್ರಿ ಆಗುವುದಕ್ಕೆ ಸಾಧ್ಯವಿಲ್ಲವಲ್ಲ. ಸಂಜೆ ಸೂರ್ಯ ಮುಳುಗುವವರೆಗೆ ರಾತ್ರಿಯಾಗುವುದಕ್ಕೆ ಕಾಯಲೇಬೇಕು. ಮಗು ತಾಯಿಯ ಗರ್ಭದಲ್ಲಿ 9ತಿಂಗಳು ಬೆಳೆದ ನಂತರವೇ ಭುವಿಯನ್ನು ಸ್ಪರ್ಶಿಸುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಲೇಬೇಕು. ಹಾಗೆಯೇ ಎಲ್ಲವೂ ಕೂಡಾ. ಆಯಾ ಕಾಲಕ್ಕೆ ತಕ್ಕಂತೆ ಆಗುವ ಪ್ರಕೃತಿ ಬದಲಾವಣೆಗಳಿಗೆ ತಾಳ್ಮೆಯಿಂದಿರಲೇಬೇಕು.ಈಗಿನ ಸಂದರ್ಭಕ್ಕೆ ಹೋಲಿಸಿ ಹೇಳಬೇಕಾದರೆ ಕೋವಿಡ್ ಎಂಬ ಸೋಂಕು ರೋಗಕ್ಕೆ ಲಸಿಕೆ ಬರಬೇಕೆಂದರೆ ಅದರ ಎಲ್ಲ ಪ್ರಕ್ರಿಯೆಗಳು ಮುಗಿಯುವರೆಗೂ ಕಾಯಲೇಬೇಕು.
ಮನುಷ್ಯನಿಗೆ ಅವನ ಭವಿಷ್ಯದ ಬಗ್ಗೆಯೇ ಗೊತ್ತಿಲ್ಲ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಯಾವುದೇ ಕ್ಷಣದಲ್ಲಾದರೂ ಅನಾರೋಗ್ಯಕ್ಕೆ ಒಳಗಾಗಬಹುದು, ಬಡತನ ಕಾಡಬಹುದು. ಒಂದರ್ಥದಲ್ಲಿ ಭವಿಷ್ಯದ ಬದುಕು ನಿಶ್ಚಿತವಲ್ಲ. ಮುಂದೇನಾಗಬಹುದು ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದರೂ ಎಲ್ಲವೂ ಅಂದುಕೊಂಡ ತಕ್ಷಣವೇ ಸಿಗಬೇಕು ಎಂದುಕೊಳ್ಳುತ್ತಾನೆ. ಪ್ರಾಣಿ-ಪಕ್ಷಿಗಳಲ್ಲಿಲ್ಲದ ಮನುಷ್ಯನಲ್ಲಿ ಇರುವ ಮತ್ತೊಂದು ಗುಣ ‘ಬೇಸರ'(ಬೋರ್). ಬಯಸಿದ್ದು ಸಿಗದೇ ಹೋದಾಗ ದುಃಖ ತಂದುಕೊಳ್ಳುತ್ತನೆ, ಹೊರತು ಕಾಯುವ ಮನಸ್ಥಿತಿ ಅವನಲ್ಲಿಲ್ಲ.
ಬೋರ್ ಆಗಿದೆ ಅಂದರೆ ನಿರಾಶೆಗೊಂಡಿದ್ದೇವೆ ಎಂದರ್ಥ. ಅಸಂತೃಪ್ತಿ ಹೊಂದಿದ ಮನಸ್ಸು ಶೋಚನೀಯವಾಗುತ್ತದೆ, ಅಲ್ಲಿ ಅಸುರಕ್ಷತೆಯ ಭಾವ ಕಾಡುತ್ತದೆ. ತಾಳ್ಮೆ ಇಲ್ಲದ ಮನಸ್ಸು ಈ ಎಲ್ಲಗುಣಗಳನ್ನು ಹೊರ ಹಾಕುತ್ತದೆ.
ಹೇಗಿದೆಯೋ ಹಾಗೆ ಅದನ್ನು ಒಪ್ಪಿಕೊಳ್ಳುವುದು
ಸಹನೆ ಅಂದರೆ ಯಾವುದನ್ನೇ ಆಗಲಿ ಹೇಗಿದೆಯೋ ಹಾಗೆ ಅದನ್ನು ಒಪ್ಪಿಕೊಳ್ಳುವುದು, ಹೇಗಿದ್ದೆವೋ ಹಾಗೆಯೇ ಇದ್ದು ಬಿಡುವುದು. ಕೆಲವರು ತುಂಬಾ ಸಹಿಷ್ಣುಗಳಾಗಿರುತ್ತಾರೆ. ಮತ್ತೆ ಕೆಲವರು ಅಸಹನೆ ಮತ್ತು ಅಸಹಿಷ್ಣುತೆಯುಳ್ಳವರು. ಅಂತಹವರು ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅಸಮರ್ಥರಿರುತ್ತಾರೆ, ಸಂದರ್ಭಗಳನ್ನು ನಿಭಾಯಿಸುವಲ್ಲಿ ವಿಫಲರಾಗುತ್ತಾರೆ, ಅಸಂತೃಪ್ತಿಯಿAದಿರುತ್ತಾರೆ, ಅಸ್ವಸ್ಥತೆಯಿಂದಿರುತ್ತಾರೆ, ಚಡಪಡಿಸುತ್ತಾರೆ.
ಹಾಗಾದರೆ ಬದುಕಿನಲ್ಲಿ ತಾಳ್ಮೆ ಹಾಗೂ ಸಹನೆಯನ್ನು ಬೆಳೆಸಿಕೊಳ್ಳುವುದು ಹೇಗೆ?
- ಜೀವನದಲ್ಲಿ ಬಯಸಿದ್ದು ಸಿಗಬೇಕು ಅಂತಿದ್ದರೆ ಕಾಯುವಿಕೆ ನಿಮ್ಮಲ್ಲಿರಲಿ.
- ತಾಳ್ಮೆ ನಿಮ್ಮಲ್ಲಿಲ್ಲ ಎಂದೆನಿಸಿದರೆ, ಬೇಸರ ಆವರಿಸಿದರೆ ಒಂದು ಹೆಜ್ಜೆ ಹಿಂದೆ ಹೋಗಿ ಕಾಯುವಿಕೆ ಮತ್ತು ಸಹನೆಯ ಬಗ್ಗೆ ಮನಸ್ಸಿನಲ್ಲಿ ಯೋಚಿಸಿ. ಬೇಸರವನ್ನು ನಿರ್ಲಕ್ಷಿಸಿ.
- ಮುಂದೇನಾಗ ಬಹುದು ಎಂಬುದರಲ್ಲಿ ಕೆಲವು ನಮಗೆ ಗೊತ್ತಿರುತ್ತದೆ ಇನ್ನು ಕೆಲವು ತಿಳಿದಿರುವುದಿಲ್ಲ. ಹಾಗೆಯೇ ಪ್ರಕೃತಿಯಲ್ಲಾಗುವ ಬದಲಾವಣೆಗೆ ನಾವು ಕಾಯಲೇಬೇಕು. ಅದು ಸಮಯ ತೆಗೆದುಕೊಳ್ಳುತ್ತದೆ. ಇದನ್ನರಿತರೆ ಜೀವನ ತುಂಬಾ ಸರಳವಾಗುವುದು.
- ಥಾಮಸ್ ಆಳ್ವಾ ಎಡಿಸನ್ ವಿದ್ಯುತ್ ಬಲ್ಬ್ ಕಂಡು ಹಿಡಿಯುವಲ್ಲಿ ಒಂಬೈನೂರು ಬಾರಿ ವಿಫಲನಾಗುತ್ತಾನೆ. ಆದರೂ ತಾಳ್ಮೆಯಿಂದ ಪ್ರಯತ್ನ ಮಾಡಿ ಯಶಸ್ವಿಯಾಗುತ್ತಾನೆ.
- ವಯಸ್ಸಿಗೂ ಯಶಸ್ಸಿಗೂ ಸಂಬಂಧ ಕಲ್ಪಿಸಬಾರದು. ಬದುಕಿನ ಪ್ರಾರಂಭದಲ್ಲಿಯೇ ಕೆಲವರು ಯಶಸ್ಸು ಗಳಿಸಿದರೆ ಇನ್ನು ಕೆಲವರು ಮಧ್ಯ ವಯಸ್ಸಿನಲ್ಲಿ ಯಶಸ್ಸು ಗಳಿಸಬಹುದು. ಯಶಸ್ಸಿಗೆ ತಾಳ್ಮೆ ಬಹಳ ಮುಖ್ಯ.
ಒಟ್ಟಿನಲ್ಲಿ ಕಾಯುವಿಕೆಗಿಂತ ತಪವು ಇಲ್ಲ ಎನ್ನುವಂತೆ ಮಾಡುವ ಕೆಲ್ಸದಲ್ಲಿ, ಹಮ್ಮಿಕೊಂಡ ಯೋಜನೆಗಳಲ್ಲಿ ತಾಳ್ಮೆಯಿಂದಿರುವವನಿಗೆ ಯಶಸ್ಸು ಸಿಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ತಾಳ್ಮೆಯ ಮಹತ್ವವನ್ನು ಲೇಖಕಿ ತುಂಬಾ ಸೊಗಸಾಗಿ ವಿವರಿಸಿದ್ದಾರೆ.
ಧನ್ಯವಾದ ಮೇಡಂ
ಬರಹ ಚನ್ನಾಗಿದೆ ಅಭಿನಂದನೆಗಳು
ಧನ್ಯವಾದ ಮೇಡಂ
ಸಹನೆಯ ಮಹತ್ವವನ್ನು ಮನಮುಟ್ಟುವ ಹಾಗೆ ಹೇಳಿದ್ದಾರೆ ಶ್ರೀದೇವಿ
Thank you sir
ನಿಜ ಜೀವನದ ದಾರಿಯಲ್ಲಿ ಕಷ್ಟ, ಸುಖ, ನಿಂದನೆ, ಅವಮಾನ ಎಲ್ಲವೂ ಬೇಡವೆಂದರೂ ಸಿಗುತ್ತದೆ. ನಾವು ಅಂದುಕೊಂಡಂತೆ ಆಗದಿದ್ದಾಗ, ತುಂಬಾ ಜನ ಬೇಗ ತಾಳ್ಮೆ ಕಳೆದುಕೊಳ್ಳುತ್ತೇವೆ.ತಾಳ್ಮೆ ಕಳೆದುಕೊಂಡ ವೇಳೆ ಮಾತು, ಯೋಚನೆ ಎಲ್ಲಾ ನಮ್ಮ ಹಿಡಿತದಲ್ಲಿ ಇರಲ್ಲ.ಅನೇಕ ಹೊಸ ಸಮಸ್ಯೆ ತಲೆದೋರುತ್ತದೆ. ಲೇಖಕಿ ತಾಳ್ಮೆಯ ಮಹತ್ವ ಚೆನ್ನಾಗಿ ವಿವರಿಸಿದ್ದಾರೆ. ಸೂಪರ್
Thank you madam
ತಾಳ್ಮೆ ಅಂದ್ರೆ ಸುಮ್ಮನೆ ಕೂರುವುದಲ್ಲ ತಾಳ್ಮೆ ಅಂದ್ರೆ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದಾಗ ಸಿಗುವ ಪ್ರತಿಫಲ. ತಾಳ್ಮೆಯಿಂದ ಕಾಯುವುದು ಮುಖ್ಯ. ಬಹಳ ಸೊಗಸಾಗಿ ವರ್ಣಿಸಿ ಅದನ್ನು ಈಗಿನ ಕೋವಿಡ್ ಗೆ ಹೋಲಿಸಿರಿವುದು ಬಹಳ ಸಮಂಜಸ.
ಶ್ರೀ ದೇವಿ ಅಂಬೆಕಲ್ಲು ಅವರು ತಾಳ್ಮೆ, ಹಾಗು ಕಾಯುವಿಕೆಯ ಮಹತ್ತನ್ನು ಚೆನ್ನಾಗಿ ವಿವರಿಸಿದ್ದಾರೆ. ಇಂದಿನ ಕೊವಿಡ್ ಪರಿಸ್ಥಿತಿಯಲ್ಲಿ ತಾಳ್ಮೆ ಎಷ್ಟು ಅಗತ್ಯ ಎಂಬುದನ್ನು ಸೊದಾರಣ ವಾಗಿ ವಿವರಿಸಿರುವರು. ಧನ್ಯವಾದಗಳು ಮೇಡಂ. ಉತ್ತಮ ಸಂಗತಿಗಳನ್ನು ಓದುಗರಿಗೆ ಒದಗಿಸುತ್ತಿರುವ ಕನ್ನಡ ಪ್ರೆಸ್ ನವರಿಗೂ ಧನ್ಯವಾದಗಳು
ಫಲಿತಾಂಶದ ನಿರೀಕ್ಷೆ ತಾಳ್ಮೆ ಕಳೆದುಕೊಳ್ಳಲು ಮೂಲ ಕಾರಣ
ಇದು ಅಕ್ಷರಶಃ ಸತ್ಯ