ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳು ಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಎರಡನೆ ಕಂತು ಇಲ್ಲಿದೆ.ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಅಂಕು ಡೊಂಕಿನಕಾಯಿ ಏತರ ಕಾಯೆಂದು-ಇದು ದೇವರಾಜ ಕವಿಯ ‘ರಾಜಾವಳಿ ಕಥಾಸಾರ’ದಲ್ಲಿ ಬರುವ ಸನ್ನಿವೇಶದ ಮಾತು.ಮನುಷ್ಯ ತಾನೇ ಏರಿಬಂದ ಏಣಿಯನ್ನು ಒದೆಯುವಂತಿಲ್ಲ. ಹಿಂದಿನ ಒಂದಿಲ್ಲೊಂದು ಘಟನೆಗಳು ಆತನ ಸಾಧನೆಯ ಸೋಪಾನಗಳೆ ಆಗಿರುತ್ತವೆ. ಅದರಲ್ಲೂ ‘ಸಿರಿಗರ ಬಡಿದ’ರಂತೂ ಹಳೆಯ ನೆನಪುಗಳು ಇರುವುದೇ ಇಲ್ಲ. ಹಾಗೆ ಹಳೆಯದನ್ನು ಮರೆತ ಹೆಣ್ಣಿನ ಸ್ವಾರಸ್ಯಕರ ಸನ್ನಿವೇಶ ಇಲ್ಲಿದೆ.
ಸ್ಫುರದ್ರೂಪಿ ಹೆಣ್ಣೊಬ್ಬಳು ಬಾಲ್ಯದಲ್ಲಿಯೇ ಅಪ್ಪ-ಅಮ್ಮರನ್ನು ಕಳೆದುಕೊಂಡು ಹುಣಸೇಕಾಯಿಯನ್ನು ಆಯ್ದು ಮಾರಿ ಜೀವನ ನಡೆಸುತ್ತಿರುತ್ತಾಳೆ. ಆಕೆಯನ್ನು ಕಂಡ ಆ ಊರಿನ ರಾಜನಿಗೆ ಆಕೆಯ ಮೇಲೆ ಮನಸ್ಸಾಗಿ ಆಕೆಯನ್ನು ಲಗ್ನವಾಗಿ ತನ್ನ ಸಮಸ್ತ ಐಶ್ವರ್ಯಕ್ಕೂ ಆಕೆಯನ್ನು ಒಡತಿಯಾಗಿ ಮಾಡಿಕೊಳ್ಳುತ್ತಾನೆ. ಅರ್ಥಾತ್ ಪಟ್ಟದರಾಣಿಯನ್ನಾಗಿ ಸ್ವೀಕರಿಸುತ್ತಾನೆ.
ಹಾಗೆ ಒಂದು ದಿನ ವಿಹಾರಾರ್ಥ ಸಕಲ ರಾಜ್ಯ ಪರಿವಾರದೊಡನೆ ಛತ್ರಿ ಚಾಮರ ಬೆಳ್ಗೊಡೆಗಳೊಡನೆ ಸಾರೋಟಿನಲ್ಲಿ ರಾಣಿ ಹೋಗುವಾಗ ದಾರಿಯಲ್ಲಿ ಅಂಕು ಡೊಂಕಿನ ಕಾಯೊಂದನ್ನು ನೋಡಿ “ಈ ಕಾಯಿ ಯಾವುದು?” ಎಂದು ಸೈನಿಕರಲ್ಲಿ ಕೇಳುತ್ತಾಳೆ ಅಲ್ಲಿದ್ದ ಸೈನಿಕ ಥಟ್ ಎಂದು “ ತಾವು ಹಿಂದೆ ಹೊತ್ತು ಮಾರುತ್ತಿದ್ದ ಕಾಯಿ” ಎಂದು ಬಿಡುತ್ತಾನೆ. ಸೈನಿಕನ ಉತ್ತರದಿಂದ ನಾಚಿಕೆ ಅನುಭವಿಸಿದ ರಾಣಿ ಮುಜುಗರದಿಂದಲೇ ಆ ಸೈನಿಕನಲ್ಲಿ “ಈ ವಿಚಾರವನ್ನು ಯಾರಲ್ಲಿಯೂ ಹೇಳಬಾರದು” ಎಂದು ವಿನಂತಿಸಿಕೊಳ್ಳುತ್ತಾಳೆ
ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ? ಎಂಬ ಗಾದೆಯನ್ನು ಇಲ್ಲಿ ಸಂವಾದಿಯಾಗಿ ನೋಡಬಹುದು .
ಇಲ್ಲಿ ಬರುವ ರಾಜಕುಮಾರಿ ನೆಪ ಮಾತ್ರ. ಈ ರೀತಿಯ ಗುಣವುಳ್ಳವರು ನಮ್ಮ-ನಿಮ್ಮ ನಡುವೆ ಅನೇಕರಿರುತ್ತಾರೆ. ಕೆಲವು ಗುಣಗಳು ರಕ್ತಕ್ಕಂಟಿರುತ್ತವೆ ಅದನ್ನೆ ಹುಟ್ಟುಸ್ವಭಾವ ಮೂಲತಃ, ಇಲ್ಲವೇ ಜನ್ಮತಃ , ವಂಶಪಾರಂಪರ್ಯ ಎಂದು ಕರೆಯುವುದು. ಮೈಗಂಟಿದ್ದನ್ನು ತೆಗೆಯಬಹುದು, ತಲೆಗಂಟಿದ್ದನ್ನು ತೆಗೆಯಲು ಪ್ರಯತ್ನಪಡಬಹುದು. ಅದರೆ ರಕ್ತಕ್ಕಂಟಿದ್ದನ್ನು ಹೇಗೆ ತೆಗೆಯಲು ಸಾಧ್ಯ? ಅಲ್ವೆ!.
ಇದನ್ನು ಉತ್ತಮಾರ್ಥದಲ್ಲಿಯೂ ಹೀನಾರ್ಥದಲ್ಲಿಯೂ ಬಳಕೆ ಮಾಡಬಹುದು. ಮನುಷ್ಯನಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಾಗ ಅದರಲ್ಲಿ ಮಾರ್ಪಾಡು ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ .ಎಲ್ಲವನ್ನು ವಿಧಿಯ ಕೈಗೆ ಒಪ್ಪಿಸುವುದರ ಬದಲು ತಪ್ಪುಗಳನ್ನು ತಿದ್ದಿಕೊಳ್ಳುವುದು ಒಳಿತೆನಿಸುತ್ತದೆ. ತಾನೇ ತಾನು ಸ್ವಯಂ ವಿಮರ್ಶೆಗೊಳಗಾಗುವುದು ವ್ಯಕ್ತಿತ್ವದ ಔನತ್ಯ ಆತ್ಮವಿಮರ್ಶೆ ಮನುಷ್ಯನಿಗೆ ಮುಖ್ಯ ಹೌದಲ್ವ!
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಅಂಕಣ ಚೆನ್ನಾಗಿದೆ
ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಗಾದೆಗಳು ಎಲ್ಲಾ ಕಾಲಕ್ಕೂ, ಅನ್ವಯವಾಗುತ್ತದೆ. ಲೇಖಕಿ ಚಂದ ಹೇಳಿದಾರೆ. ನನ್ನ ಅಜ್ಜಿ ಎಲ್ಲಾ ವಿಷಯಕ್ಕೂ ಅನ್ವಯವಾಗುವ ಹಾಗೆ ಗಾದೆ ಹೇಳುತಿದ್ದರು. ಈಗಲೂ ಅವು ನೆನಪಿದೆ
ಆತ್ಮ ವಿಮರ್ಶೆ ಮನುಷ್ಯನಿಗೆ ಮುಖ್ಯ. ಅನ್ನುವುದನ್ನು ಲೇಖಕಿ ಉದಾಹರಣ ಸಹಿತ ವಿವರಿಸಿರುವುದು ಚೆನ್ನಾಗಿದೆ.ದೇವರಾಜ ಕವಿಯರಾಜಾವಳಿ ಕಥಾಸಾರ ಓದಲೇ ಬೇಕಾದ ಕೃತಿ ಅದನ್ನು ನೆನಪಿಸಿದ ಲೇಖಕಿ ಸುಮ ವೀಣಾ ಅವರಿಗೆ ಧನ್ಯವಾದಗಳು.
ಅತ್ಮೀಯವಾಗಿ ಸ್ಪಂದಿಸಿದ ಎಲ್ಲರಿಗು ಧನ್ಯವಾದಗಳು