ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸದ ಕೊರತೆಯನ್ನು ನಾವುಗಳು ಕಾಣುತ್ತಿದ್ದೇವೆ. ಪೂರಕವಾಗಿ ಕೆಲವೊಂದು ಅಂಕಿ ಅಂಶಗಳು ಇಲ್ಲಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಅಂಕಿ ಅಂಶಗಳ ಪ್ರಕಾರ 2018 ರಲ್ಲಿ 10159 ವಿದ್ಯಾರ್ಥಿಗಳು, 2017 ರಲ್ಲಿ 9905, ಮತ್ತು 2016 ರಲ್ಲಿ 9478 ವಿದ್ಯಾರ್ಥಿಗಳು ಆತ್ಮಹತ್ಯೆಯಿಂದ ಸಾವನಪ್ಪಿದ್ದಾರೆ. 2012 ರ ಲ್ಯಾನ್ಸೆಟ್ ವರದಿ’ಯ ಪ್ರಕಾರ ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣವು 15 – 29 ವಯೋಮಾನದವರಲ್ಲಿ ಅತಿ ಹೆಚ್ಚು ದಾಖಲಾಗಿದೆ ( ಪುರುಷರಲ್ಲಿ 40% ಮತ್ತು ಮಹಿಳೆಯರಲ್ಲಿ 60% ). ಎನ್ ಸಿ ಆರ್ ಬಿ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿ ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ / ಳೆ.
ಐಐಟಿಗಳಲ್ಲಿ 2014 ಮತ್ತು 2019 ರ ನಡುವೆ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ( ಎಂಹೆಚ್‍ಆರ್‍ಡಿ ). ಅಮೇರಿಕನ್ ಕಾಲೇಜು ಹೆಲ್ತ್ ಅಸೋಸಿಯೇಷನ್ ಪ್ರಕಾರ, ಕಾಲೇಜು ವಿದ್ಯಾರ್ಥಿಗಳಲ್ಲಿ ಪ್ರಸ್ತುತ ಆತ್ಮಹತ್ಯೆ ಎರಡನೇ ಕಾರಣವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಪರೀಕ್ಷಾ ಫಲಿತಾಂಶಗಳು ಪ್ರಕಟವಾಗುವ ಅಥವಾ ಪ್ರಕಟವಾದ ನಂತರ ಹೆಚ್ಚಾಗಿ ಕಂಡುಬರುತ್ತದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಾರೆ. ಲ್ಯಾನ್‍ಸೆಟ್ ಮೆಡಿಕಲ್ ಜರ್ನಲ್ 2012 ರ ಪ್ರಕಾರ, ದಕ್ಷಿಣ ಭಾರತದಲ್ಲಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆಯನ್ನು ಉತ್ತರ ಭಾರತಕ್ಕೆ ಹೋಲಿಸಿದರೆ, ದಕ್ಷಿಣ ಭಾರತದಲ್ಲಿ ಹತ್ತು ಪಟ್ಟು ಹೆಚ್ಚು. ಆತಂಕಕಾರಿ ವಿಷಯವೆಂದರೆ, ವಿದ್ಯಾವಂತ ಯುವಕ / ಯುವತಿಯರಲ್ಲಿ ಆತ್ಮಹತ್ಯೆಯ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ.
ಈ ಕೆಟ್ಟ ಮತ್ತು ಸೋಲಿನ ಮನೋಭಾವಕ್ಕೆ ಪ್ರಮುಖ ಕಾರಣಗಳೆಂದರೆ :
- ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮತ್ತು ಆತ್ಮ ಸ್ಥೈರ್ಯಗಳ ಕೊರತೆ.
- ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗುವುದೇ ಇಡೀ ಜೀವನದ ಉದ್ದೇಶ ಎಂಬ ತಪ್ಪು ನಂಬಿಕೆ ಮತ್ತು ಇದಕ್ಕೆ ಪೂರಕವಾಗಿ ಪೋಷಕರ ಮತ್ತು ಸಾಮಾಜಿಕ ಒತ್ತಡ.
- ಪರೀಕ್ಷೆಯಲ್ಲಿ ಗಳಿಸುವ ಅಂಕಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಇಂದಿನ ಶಿಕ್ಷಣ ಪದ್ಧತಿ.
- ಔದ್ಯೋಗಿಕ ಕೋರ್ಸುಗಳಿಗೆ ಮುಖ್ಯವಾಗಿ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕೋರ್ಸುಗಳಿಗೆ ಪ್ರವೇಶ ಪಡೆಯಲೇ ಬೇಕೆಂಬ ಅತಿಯಾದ ಹಂಬಲ ಮತ್ತು ಪೋಷಕರ ಒತ್ತಡ.
- ವ್ಯಕ್ತಿತ್ವದ ಅಸ್ವಸ್ಥತೆ.
- ಮಾನಸಿಕ ಖಿನ್ನತೆ.
- ಒಂಟಿತನ, ಸ್ನೇಹಿತರ ಜೊತೆಗೆ ಸಮಯ ಕಳೆಯುವ ಮನೋಭಾವವಿಲ್ಲದಿರುವುದು.
- ಸಂಸ್ಕೃತಿಯ ವಿಭಿನ್ನತೆ.
- ಯುವಕರ ಮತ್ತು ಪೋಷಕರ ನಡುವೆಯಿರುವ ಪೀಳಿಗೆಗಳ ನಡುವಿನ ಅಂತರ ( ಮಾನಸಿಕ ಅಸಮಾಧಾನಗಳು ).
- ಹೆತ್ತವರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಿಲ್ಲವೆಂಬ ನಿರ್ಧಾರ.
- ಓದ್ಯೋಗಿಕ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ವಾತಾವರಣ.
- ಎಲ್ಲರಂತೆ ವಿದೇಶಕ್ಕೆ ಹೋಗ ಬೇಕೆಂಬ ಹಂಬಲ.
ಹೀಗೆ ಹತ್ತು ಹಲವಾರು ಕಾರಣಗಳಿಂದ, ಗುರಿಗಳು ಈಡೇರದಿದ್ದಲ್ಲಿ ಮೊದಲನೆಯ ಹೆಜ್ಜೆಯಲ್ಲಿಯೇ ಸೋಲನ್ನು ಕಂಡಾಗ, ಜೀವನದಲ್ಲಿ ಜಿಗುಪ್ಸೆಯುಂಟಾಗಿ, ಜೀವನವೇ ಕತ್ತಲಾಗಿ ಪರಿಣಮಿಸಿ, ಆತ್ಮಹತ್ಯೆಗೆ ಆಲೋಚಿಸುವುದು ಸಾಮಾನ್ಯವಾದ ಸಂಗತಿ. ನನ್ನ ಪ್ರಕಾರ, ವಿದ್ಯಾರ್ಥಿಗಳಲ್ಲಿ ಆತ್ಮಹತ್ಯಾ ಆಲೋಚನೆಗಳಿಗೆ ಮುಖ್ಯ ಕಾರಣ ಪೋಷಕರ ಒತ್ತಡ, ವ್ಯಕ್ತಿಯ ಸಾಮರ್ಥ್ಯಕ್ಕೆ ಮೀರಿದ ಗುರಿಗಳನ್ನು ಹೊಂದಿ, ಸಾಧಿಸಲು ಪ್ರಯತ್ನಿಸುವುದು ಮತ್ತು ಪೋಷಕರ ಮತ್ತು ಸ್ನೇಹಿತರ ಒತ್ತಡಕ್ಕೆ ಮಣಿದು, ಇಷ್ಟವಿಲ್ಲದ ವಿಷಯಗಳನ್ನು ಅಥವಾ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುವುದು.
ಉದಾಹರಣೆಗೆ ಹೇಳುವುದಾದರೆ, ವಾಣಿಜ್ಯ ಅಥವಾ ಕಲಾ ವಿಭಾಗದ ವಿಷಯಗಳಲ್ಲಿ ವ್ಯಾಸಂಗ ಮಾಡಲು ಆಸಕ್ತಿಯಿದ್ದರೂ, ಪೋಷಕರ ಬಲವಂತದಿಂದಾಗಿ ವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡುವುದು. ಈ ಪರಿಸ್ಥಿಯನ್ನು ನಮ್ಮ ದೇಶದಲ್ಲಿ ಮಾತ್ರವೇ ಕಾಣಬಹುದು. ವಿದ್ಯಾರ್ಥಿಯು ಯಾವ ವಿಷಯಗಳನ್ನು ಓದಬೇಕೆಂದು ಪೋಷಕರು ನಿರ್ಧರಿಸುವ ಪದ್ಧತಿ. ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡುವುದಿಲ್ಲ. ಇದರಿಂದ ವಿದ್ಯಾರ್ಥಿಯ ಸಾಧನೆಯ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಸಾಧನೆ ಕುಂಠಿತಗೊಳ್ಳತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ವಿಷಯಗಳ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡಲಾಗುತ್ತದೆ. ಆದ್ದರಿಂದ ಖಿನ್ನತಗೆ ಒಳಗಾಗುವ ಸಂದರ್ಭಗಳು ಕಡಿಮೆ.
ಆತ್ಮಹತ್ಯಾ ಆಲೋಚನೆಗಳಿಗೆ, ಶಿಕ್ಷಣದ ಬಗ್ಗೆ ನಮಗಿರುವ ತಪ್ಪು ಕಲ್ಪನೆಯು ಸಹ ಒಂದು ಕಾರಣ ಎಂದರೆ ತಪ್ಪಾಗಲಾರದು. ಔದ್ಯೋಗಿಕ ಕೋರ್ಸುಗಳಿಗೆ ಪ್ರವೇಶವನ್ನು ಪಡೆದು, ಹೆಚ್ಚು ವೇತನವನ್ನು ನೀಡುವ ಕೆಲಸವನ್ನು ಗಿಟ್ಟಿಸಿ, ಆಡಂಬರದ ಜೀವನ ನಡೆಸುವುದೇ ಜೀವನದ ಗುರಿ ಎಂಬ ಧೃಡವಾದ ನಂಬಿಕೆ. ಈ ಅಂಶವನ್ನು ಪೋಷಕರು ಚಿಕ್ಕಂದಿನಿಂದಲೇ ಮಕ್ಕಳ ತಲೆಗೆ ತುಂಬಿ, ಅನ್ಯ ದಿಕ್ಕಿನಲ್ಲಿ ವಿಭಿನ್ನವಾಗಿ ಆಲೋಚನೆ ಮಾಡಲು ಅವಕಾಶ ನೀಡದಿರುವುದೇ ಖಿನ್ನತೆಗೆ ಕಾರಣ ಎಂದರೆ ತಪ್ಪಾಗಲಾರದು.
ಜೊತೆಗೆ ಸ್ನೇಹಿತರ ಸಹವಾಸ ಮತ್ತು ಅವರ ಪ್ರೇರಣೆಯಿಂದ, ಕೆಟ್ಟ ಚಟಗಳಿಗೆ ಬಲಿಯಾಗುವುದು. ಸಿನಿಮಾ ಮತ್ತು ಟಿ. ವಿ ಮಾಧ್ಯಮಗಳಲ್ಲಿ ಬಿತ್ತರವಾಗುವ ಸೀರಿಯಲ್‍ಗಳಲ್ಲಿ ತೋರಲ್ಪಡುವ ಪ್ರೀತಿ ಪ್ರೇಮಗಳ ಸನ್ನಿವೇಶಗಳು, ಅದು ಕೇವಲ ಫ್ಯಾಂಟಸಿ ಪ್ರಪಂಚ ಎಂದು ಆಲೋಚನೆ ಮಾಡುವಷ್ಟು ತಿಳುವಳಿಕೆ ಆ ವಯಸ್ಸಿನಲ್ಲಿರುವುದಿಲ್ಲ. ಅನುಕರಣೆ ಮಾಡಲು ಹೋಗಿ, ಸಮಸ್ಯೆಗೆ ಒಳಗಾಗುತ್ತಾರೆ. ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ತಾಯಿ ಟಿ. ವಿ ನೋಡಲು ವಿರೋಧ ವ್ಯಕ್ತಪಡಿಸಿದಳು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರ ಅವಲೋಕನೆಗೆ ಈ ಕೆಳಗಿನ ಅಂಶಗಳನ್ನು ತರಲು ಇಚ್ಚಿಸುತ್ತೇನೆ.
ವಿದ್ಯಾರ್ಥಿಗಳು, ಯುವಕರು ದೇಶದ ಆಸ್ತಿ ಮತ್ತು ಅದರ ಬೆನ್ನೆಲುಬು. ವಿದ್ಯಾರ್ಥಿಗಳಲ್ಲಿ ಅಡಗಿರುವ ಚೈತನ್ಯವನ್ನು / ಪ್ರತಿಭೆಯನ್ನು ಸಕಾರಾತ್ಮಕವಾಗಿ ಜಾಗೃತಗೊಳಿಸುವುದೇ ಶಿಕ್ಷಣದ ಮೂಲ ಉದ್ದೇಶ. ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಹೇಳುವುದಾದರೆ, “Education is the manifestation of the perfection already in man”. ಶಿಸ್ತೀಯಕ್ಕೆ ಸಂಬಂಧಿಸಿದ ವಿಷಯಗಳ ಜೊತೆಗೆ, ವಿದ್ಯಾರ್ಥಿಗಳಲ್ಲಿ ಚಾರಿತ್ರ್ಯ ನಿರ್ಮಾಣ, ರಾಷ್ಟ್ರೀಯತಾ ಮನೋಭಾವ, ಸಾಮಾಜಿಕ ಮೌಲ್ಯಗಳು, ಜೀವನದ ಮೌಲ್ಯಗಳು, ಸರ್ವಧರ್ಮ ಸಮಭಾವ ಇವುಗಳನ್ನು ಮನಸ್ಸಿಗೆ ನಾಟುವಂತೆ ಬಿತ್ತುವುದು ಶಿಕ್ಷಣದ ಪ್ರಮುಖ ಉದ್ದೇಶ. ಜ್ಞಾನದ ಜೊತೆಯಲ್ಲಿ, ಕೌಶಲ್ಯಗಳನ್ನು ಮತ್ತು ಮೌಲ್ಯಗಳನ್ನು ಕಲಿಸ ಬೇಕು. ಆಗ ಅದು ನಿಜವಾದ ಪರಿಪೂರ್ಣ ಶಿಕ್ಷಣವಾಗುತ್ತದೆ. ಉತ್ತಮ ಮತ್ತು ಜವಾಬ್ದಾರಿಯುತ ನಾಗರೀಕನಾಗಿ ಬೆಳೆಯಲು ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ಸರ್ಕಾರ ಮತ್ತು ಶಿಕ್ಷಣ ತಜ್ಞರು ಯೋಜನೆಗಳನ್ನು ರೂಪಿಸಬೇಕಾಗಿದೆ.
ಆಸಕ್ತಿಯಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಿ
ವಿದ್ಯಾರ್ಥಿಗಳಿಗೆ ಒಂದು ಕಿವಿ ಮಾತು. ವಿದ್ಯಾರ್ಥಿಗಳಲ್ಲಿ ಮೊಟ್ಟ ಮೊದಲನೆಯದಾಗಿ, ಬೇರೆಯವರ ಒತ್ತಡಕ್ಕೆ ಮಣಿಯದೆ, ಆಸಕ್ತಿಯಿರುವ ವಿಷಯಗಳನ್ನು ನಿಮ್ಮ ವ್ಯಾಸಂಗಕ್ಕಾಗಿ ಆಯ್ಕೆ ಮಾಡಿಕೊಳ್ಳಿ. ಜೀವನದಲ್ಲಿ ನಿರ್ಧಿಷ್ಠವಾದ ಗುರಿಯಿರಲಿ. ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅಥವಾ ಕಡಿಮೆ ಅಂಕಗಳನ್ನು ಗಳಿಸಿದರೆ, ಜೀವನವೇ ಮುಗಿಯಿತು, ಕೆರಿಯರ್ ಮುಗಿಯಿತು ಎಂಬ ಭಾವನೆ ಬೇಡ. Failure is the stepping stone for success ಎಂಬ ಮಾತನ್ನು ನೀವುಗಳು ಕೇಳಿದ್ದೀರಿ. ದ್ವಿತೀಯ ಪಿಯುಸಿಯಲ್ಲಿ ಮೂರನೇ ದರ್ಜೆಯಲ್ಲಿ ಉತ್ತೀರ್ಣರಾಗಿ ನಂತರ ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡು, ಗುರಿಯನ್ನು ಸಾಧಿಸಲೇ ಬೇಕೆಂಬ ಚಲದಿಂದ ದೃಢ ನಿರ್ದಾರದೊಂದಿಗೆ ಚೆನ್ನಾಗಿ ವ್ಯಾಸಂಗವನ್ನು ಮಾಡಿ, ವಾಣಿಜ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಪ್ರಖ್ಯಾತಿ ಹೊಂದಿರುವ ವ್ಯಕ್ತಿಯ ಉದಾಹರಣೆ ನನಗೆ ತಿಳಿದಿದೆ. ಖ್ಯಾತ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ಸಹ ಪ್ರತಿಭಾವಂತ ವಿದ್ಯಾರ್ಥಿಯಾಗಿರಲಿಲ್ಲ. ಆದರೆ, ಖ್ಯಾತ ವಿಜ್ಞಾನಿಯಾದ. ಭಾರತದ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್‍ರು ಎಫ್. ಎ ಪರೀಕ್ಷೆಯಲ್ಲಿ ನಪಾಸಾದರು. ಆದರೆ ವಿಶ್ವವೇ ಕಂಡರಿಯದ ಗಣಿತಶಾಸ್ತ್ರಜ್ಞ ಎಂಬ ಪ್ರಶಂಸೆಗೆ ಪಾತ್ರರಾದರು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲಾ ಒಂದು ರೀತಿಯ ಸಾಮರ್ಥ್ಯ, ಪ್ರತಿಭೆ ಅಡಕವಾಗಿರುತ್ತದೆ. ಅದನ್ನು ಹೊರ ಜಗತ್ತಿಗೆ ತರಲು ಸಾಧನೆ ಮಾಡಬೇಕು. ಸಕಾರಾತ್ಮಕ ಚಿಂತನೆ, ಸಕರಾತ್ಮಕವಾದ ಮನೋಭಾವವನ್ನು ಬೆಳಸಿಕೊಳ್ಳಬೇಕು. ಒಬ್ಬ ಆಶಾವಾಧಿ ಪ್ರತಿಯೊಂದು ಸಮಸ್ಯೆಯಲ್ಲಿ ಅವಕಾಶವನ್ನು ಕಾಣುತ್ತಾನೆ. ಆದರೆ ನಿರಾಶಾವಾಧಿ ಪ್ರತಿಯೊಂದು ಅವಕಾಶದಲ್ಲಿ ಸಮಸ್ಯೆಯನ್ನು ಕಾಣುತ್ತಾನೆ. ನಿಮಗೆ ಇಷ್ಟವಿರುವ ವಿಷಯವನ್ನು ಆಯ್ಕೆ ಮಾಡಿ, ಅದರಲ್ಲಿ ಪಾಂಡಿತ್ಯವನ್ನು ಪಡೆಯಲು ಪ್ರಯತ್ನ ಮಾಡಿ. ಮಾಡುವ ಕಾರ್ಯದಲ್ಲಿ ಶ್ರದ್ಧೆಯಿರಲಿ. ಗುರಿಯನ್ನು ಸಾಧಿಸಲು ದೃಢ ಮತ್ತು ಅವಿರತ ಯತ್ನಗಳ ಅವಶ್ಯಕತೆ ಇದೆ.
ನಿಮ್ಮ ಹಾದಿಯಲ್ಲಿ ಅನೇಕ ತೊಡಕುಗಳು ಬರಬಹುದು. ಆತ್ಮವಿಶ್ವಾಸ ಮತ್ತು ಆತ್ಮ ಸ್ಥೈರ್ಯದಿಂದ ಮುನ್ನುಗ್ಗ ಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ, “Strength is life, weakness is death, wakeup stop not till the goal is reached”. ವಿವೇಕಾನಂದರ ಈ ವಾಕ್ಯದಲ್ಲಿ ನಂಬಿಕೆಯನ್ನು ಬೆಳಸಿಕೊಳ್ಳ ಬೇಕು. ಪರೀಕ್ಷೆಯಲ್ಲಿ ನಪಾಸಾಗುವುದು ತುಂಬ ಸಣ್ಣ ವಿಷಯ. ಮತ್ತೊಮ್ಮೆ ಪರೀಕ್ಷೆಗೆ ಹಾಜಾರಾಗಿ, ಪಾಸ್ ಮಾಡಬಹುದು. ಆದರೆ, ಜೀವ ಬಹಳ ಮುಖ್ಯ. ನಕಾರಾತ್ಮಕ ಚಿಂತನೆ ಮಾಡಬಾರದು. ಮರಳಿ, ಮರಳಿ ಪ್ರಯತ್ನಿಸಿ ಗುರಿಯನ್ನು ಸಾಧಿಸ ಬಹುದು.
ಜೊತೆಗೆ ಒಳ್ಳೆಯ ಸ್ನೇಹಿತರ ಸಹವಾಸವನ್ನು ಮಾಡಿ, ದುಶ್ಚಟಗಳಿಗೆ ಬಲಿಯಾಗ ಬೇಡಿ. ಸಿನಿಮಾ ಅಥವಾ ಟೀವಿ ಸೀರಿಯಲ್‍ಗಳಲ್ಲಿ ತೋರಲ್ಪಡುವ ಸನ್ನಿವೇಶಗಳನ್ನು ನಿಜ ಜೀವನದಲ್ಲಿ ಅನುಕರಣೆ ಮಾಡಬೇಡಿ. ಅದು ಫ್ಯಾಂಟಸಿ ಪ್ರಪಂಚ. ನಿಜ ಜೀವನವೇ ಬೇರೆ, ರೀಲ್ ಜಗತ್ತೆ ಬೇರೆ. ವಿಷಯಗಳ ಬಗ್ಗೆ ವಿಶ್ಲೇಷಣೆ ಮಾಡುವ ಸಾಮರ್ಥ್ಯ ಮತ್ತು ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರಿ ಉತ್ತಮ ಪ್ರಜೆಯೆಂಬ ಹೆಗ್ಗಳಿಕೆ ಭಾಜನರಾಗಲು ಪ್ರಯತ್ನಿಸಿ. ಗುರಿ ಸಾಧಿಸಲು ಬೇಕಾಗಿರುವುದು ಆತ್ಮ ವಿಶ್ವಾಸ ಮತ್ತು ಆತ್ಮ ಸ್ಥೈರ್ಯ, ಆತ್ಮಹತ್ಯೆ ಪರಿಹಾರ ಅಲ್ಲವೇ ಅಲ್ಲ.
Thought full and much truthful as well .
ಒಳ್ಳೆಯ ವಿಶ್ಲೇಷಣೆ. ಪೋಷಕರು ಮತ್ತು ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶ ಗಳನ್ನು ಬಹಳ ವಿವರವಾಗಿ ತಿಳಿಸಿದ್ದೀರಿ .ಧನ್ಯವಾದಗಳು.
👍
Valuable article. I was not aware that Suicide is more among the educated youngsters in India. Very informative , suggestions seem to be perfect.
ಆತ್ಮ ಸ್ಥೈರ್ಯ, ಆತ್ಮ ವಿಶ್ವಾಸದ ಬಗ್ಗೆ ಒಳ್ಳೆಯ ನಿಲುವು ಬೆಳೆಸಿಕೊಳ್ಳುವ ಮಾಹಿತಿ, ಸಂದೇಶ ನೀಡಿರುವಿರಿ. ಸರ್ ನಿಮಗೆ ಧನ್ಯವಾದಗಳು. ಇಂತಹ ಉತ್ತಮ ವಿಚಾರಗಳನ್ನು ಜನತೆಗೆ.ಪರಿಚಯಿಸುತ್ತಿರುವ ಕನ್ನಡ ಪ್ರೆಸ್ ನವರಿಗೂ ನಮಸ್ಕಾರಗಳು.