ಇಂದು ಇಂಗ್ಲೆಂಡಿನಾದ್ಯಂತ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಿದ್ದು ಮಾರ್ಗರೆಟ್ ಕೀನನ್ ಎಂಬ ತೊಂಭತ್ತು ವರ್ಷದ ವೃದ್ಧೆ ಮೊಟ್ಟ ಮೊದಲ ವ್ಯಾಕ್ಸಿನ್ ಹಾಕಿಸಿ ಕೊಂಡರು. ಮುಂದಿನ ವಾರ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ಈ ಮಹಿಳೆ ಇದು ತಮಗೆ ಸಿಕ್ಕ ಅಡ್ವಾನ್ಸ್ ಹ್ಯಾಪಿ ಬರ್ತಡೇ ಗಿಫ್ಟ್ ಎಂದರೆಂದು ಬಿಬಿಸಿ ವರದಿ ಮಾಡಿದೆ.
ಇಂದು ಭಾರತೀಯ ಕಾಲಮಾನ ಅಪರಾಹ್ನ 12ಕ್ಕೆ ಅವರಿಗೆ ಲಸಿಕೆಯನ್ನು ಹಾಕಲಾಯಿತು. ಪೈಜರ್ ಮತ್ತು ಬಯೊ ಎನ್ ಟೆಕ್ ಅಭಿವೃದ್ಧಿ ಪಡಿಸಿರುವ ಆ ಲಸಿಕೆಯ 800000 ಡೋಸ್ ಗಳನ್ನು ಮುಂಬರುವ ವಾರಗಳಲ್ಲಿ ಅಲ್ಲಿನ ನಾಗರಿಕರಿಗೆ ನೀಡಲಾಗುವುದು. ಈ ತಿಂಗಳಾಂತ್ಯದ ವೇಳೆಗೆ ನಾಲ್ಕು ಮಿಲಿಯನ್ ನಾಗರಿಕರು ವ್ಯಾಕ್ಸಿನ್ ಪಡೆಯುವ ನಿರೀಕ್ಷೆ ಇದೆ.
ಕೋವೆಂಟ್ರಿಯ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ಕೀನನ್ ಹರ್ಷ ಚಿತ್ತರಾಗಿದ್ದರು. ಮೊದಲ ವ್ಯಾಕ್ಸಿನ್ ಪಡೆಯುತ್ತಿರುವ ಬಗ್ಗೆ ಸಂತೋಷವಾಗುತ್ತಿದೆ. ಹೊಸ ವರುಷದಲ್ಲಿ ಸ್ನೇಹಿತರು, ಬಂಧುಗಳೊಂದಿಗೆ ಮೊದಲಿನಂತೆ ಕಾಲ ಕಳೆಯುವುದನ್ನು ನಿರೀಕ್ಷಿಸುತ್ತಿದ್ದೇನೆ ಎಂದರು.
👍👍