ನಮ್ಮ ಬದುಕಿನ ಮೊದಲ ಪುಟ್ಟ ಬ್ಯಾಂಕ್ , ಲಾಕರ್ . ಹೆಣ್ಣು ಮಕ್ಕಳಿಗಂತೂ ಇದೇ ಪರ್ಸು .ದುಡ್ಡು , ಉಂಗುರ , ಹೇರ್ ಬ್ಯಾಂಡ್ , ಬಿಂದಿ , ಚಿಕ್ಕಿ , ಚಾಕಲೇಟ್ ಹೀಗೆ ಹತ್ತು ಹಲವಾರನ್ನು ಇರಿಸಿಕೊಳ್ಳೋ ಬಹುಪಯೋಗಿ ಪೆಟ್ಟಿಗೆ .ಹೌದು ಇದುವೇ ನಮ್ಮ ಬಾಲ್ಯದ “ಜ್ಯಾಮಿಟ್ರಿ ಬಾಕ್ಸ್ “.
ಶಾಲೆಯಲ್ಲಿ ಭಾಗಶಃ ಎಲ್ಲರ ಹತ್ತಿರವೂ ಇರ್ತಿತ್ತು .
ಮೊದಲ ಸಲ ತೆರೆದು ನೋಡಿದಾಗ ನಿಜಕ್ಕೂ ನಮ್ಮ ಪುಟ್ಟ ಕಂಗಳಲ್ಲಿ ಬೆಳಕು ಮೂಡುತ್ತಿತ್ತು . ಪ್ರತಿ ಸಲ ತೆಗೆದಾಗಲೂ ಮನಸ್ಸಿಗೆ ಅದೇನೊ ಆನಂದವಿರುತ್ತಿತ್ತು.
ಸ್ಕೇಲು , ತ್ರಿಭುಜಾಕಾರದ ಸ್ಕೇಲು , ರಬ್ಬರ್ರು , ಡಿಗ್ರಿ ಎಂದು ಕರೆಯುತ್ತಿದ್ದ ಅರ್ಧಾಕೃತಿಯ ಕೋನಮಾಪಕ , ಕಾಂಪಾಸ್ ಅದನ್ನ ಕೈವಾರ ಅಂತಿದ್ವಿ ಅದರ ಜೊತೆ ಎರಡು ಮುಳ್ಳಿನದ್ದೊಂದು ವಿಭಜಕ ಇರುತ್ತಿತ್ತು ಅದನ್ನ ನಾವು ಒಂದು ದಿನಕ್ಕೂ ಉಪಯೋಗಿಸಲಿಲ್ಲ . ಹೀಗೆ ಅದರೊಳಗೆ ಕುತೂಹಲ ಮೂಡಿಸುವ ಪರಿಕರಗಳಿರುತ್ತಿತ್ತು .
ಹೊಸದಾಗಿ ಕೊಂಡಾಗ ಅದೆಷ್ಟು ಸಂಭ್ರಮಿಸುತ್ತಿದ್ದೆವೋ ಅನುಭವಿಸಿದವರಿಗೇ ಗೊತ್ತು .
ಒಂದು ಪೇಪರ್ರನ್ನು ಬಾಕ್ಸಿನ ಅಳತೆಗೆ ಕಟ್ ಮಾಡಿ ಬಾಕ್ಸಿನ ತಳದಲ್ಲಿ ಅದನ್ನು ಹಾಸಿ ಅದರ ಮೇಲೆ ಎಲ್ಲಾ ಜೋಡಿಸಿಕೊಳ್ಳುತ್ತಿದ್ದೆವು . ಮದುವೆ ಇನ್ವಿಟೇಶನ್ ನಲ್ಲಿ ಮುದ್ರಿತವಾಗಿ ಬರುತ್ತಿದ್ದ ಚಿನ್ನದ ಬಣ್ಣದ ಗಣೇಶ ವೆಂಕಟೇಶ್ವರ ದೇವರುಗಳ ಫೋಟೋಗಳನ್ನು ಜ್ಯಾಮಿಟ್ರಿ ತೆಗೆದಾಗ ಕಾಣುವ ಹಾಗೆ ಮುಚ್ಚಳಕ್ಕೆ ಅಂಟಿಸಿಕೊಳ್ಳುತ್ತಿದ್ದೆವು.
ಹೆಣ್ಮಕ್ಳ ಜ್ಯಾಮಿಟ್ರಿಯಂತೂ ನೆಲ್ಲಿಕಾಯಿ , ಎಳಚಿಕಾಯಿ , ಸೆಂಟ್ ರಬ್ಬರ್ರು , ಕಾಡಿಗೆ , ಬಣ್ಣಬಣ್ಣದ ಬಿಂದಿಗಳು , ನವಿಲುಗರಿ , ತುಳಸಿ ಎಲೆ ಹೀಗೆ ತುಂಬೋಗಿರೋದು .
ಮನೆಯಲ್ಲಿ ಹೊಸದಾಗಿ ಕೊಡಿಸಿದಾಗ ಅದರ ಮೇಲಿನ ಕವರ್ರನ್ನೂ ತೆಗೆಯದೇ ಜೋಪಾನ ಮಾಡುತ್ತಿದ್ದ ನಾವು ಕೊನೆ ಕೊನೆಗೆ ಅದನ್ನು ಹಲ್ಲಲ್ಲಿ ಕಚ್ಚಿ ತೆಗೆಯೋ ಪರಿಸ್ಥಿತಿಗೆ ತಂದುಬಿಡ್ತಿದ್ವಿ .
ಗಣಿತದ ಮೇಷ್ಟ್ರು ಎಲ್ಲಾ ಜ್ಯಾಮಿಟ್ರಿ ಬಾಕ್ಸ್ ಓಪನ್ ಮಾಡಿ ಇಟ್ಕೋಳಿ ಅಂದ್ರೆ ಸಾಕು ಒಬ್ಬೊಬ್ಬರದು ಒಂದೊಂದು ಸೌಂಡ್ ಬರೋದು . ಇಂಕ್ ಪೆನ್ನು ಅದು ಲೀಕ್ ಆಗಿ ಆ ಕೆಳಗೆ ಹಾಸಿದ್ದ ಪೇಪರ್ರೆಲ್ಲಾ ಗಬ್ಬೆದ್ದು ಹೋಗಿರೊದು .ಲೆಕ್ಕದಲ್ಲಿ ತಪ್ಪು ಮಾಡಿದಾಗ ಮೇಷ್ಟ್ರು ನಿನಗೆ ಜ್ಯಾಮಿಟ್ರಿ ಬಾಕ್ಸ್ ಬೇರೆ ಕೇಡು ಅಂತ ಬಯ್ಯೋವ್ರು ಹೊಡೆಯೋವ್ರು .
ಸ್ನೇಹಿತರ ಜೊತೆ ಸ್ಪರ್ಧೆಗೆ ಇಳಿದಾಗ , ಶಾಲೆಗೆ ವೇಳೆಯಾಯಿತು ಅಂತ ಓಡುವ ವೇಗದಲ್ಲಿ ಮುಗ್ಗರಿಸಿ ಬಿದ್ದಾಗ ಜ್ಯಾಮಿಟ್ರಿ ಬಾಕ್ಸ್ ಬಿದ್ದು ಅದರಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿರೋದು , ಸ್ನೇಹಿತರು ಬಂದು ಎಲ್ಲಾ ಆಯ್ಕೊಡೋವ್ರು . ಮಂಡಿ ಮಣ್ಣಾಗಿ ಚರ್ಮ ಕಿತ್ತು ರಕ್ತ ಬರುತ್ತಿದ್ದರೂ ನಮ್ಮ ಗಮನವೆಲ್ಲಾ ಬಿದ್ದ ಬಾಕ್ಸಿನ ಮತ್ತು ಅದರೊಳಗಿನ ವಸ್ತುಗಳ ಮೇಲಿರೋದು .
ಈಗ ತರಾವರಿ ನಮೂನೆಗಳ ಅತ್ಯಾಕರ್ಷಕವಾದ ಬಣ್ಣಬಣ್ಣದ ಬಾಕ್ಸ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಆದರೆ ಮಕ್ಕಳಿಗೆ ಅದರ ಮೇಲೆ ಅಂತಾ ಆಸಕ್ತಿಯಿದ್ದಂತೆ ಕಾಣುವುದಿಲ್ಲ .
“ಜ್ಯಾಮಿತಿ ಪೆಟ್ಟಿಗೆ” ಜೊತೆ ನಮ್ಮದೊಂದು ಆತ್ಮೀಯ ಅನುಬಂಧವಿತ್ತು , ಅದನ್ನ ತೆಗೆದಾಗ ಅದರೊಳಗಿನ ಸೆಂಟುರಬ್ಬರಿನ ಘಮಲು ಈಗಲೂ ಮೂಗಿಗೆ ಬಡಿದ ನೆನಪಿದೆ .
ಇವತ್ತಿಗೆ ಅದು ಏನೂ ಅಲ್ಲದಿದ್ದರೂ ಅಂದು ನಮಗದು ಎಲ್ಲಾ ಆಗಿತ್ತು . ಗಣಿತಕ್ಕೆಂದೇ ತಯಾರಿಸಿದ ಪೆಟ್ಟಿಗೆಯಾಗಿದ್ದರೂ ಸಹ ನಮಗೆ ಎಲ್ಲಾ ವಿಷಯಗಳ ವಿಶೇಷ ಮಾಯಾಪೆಟ್ಟಿಗೆಯಾಗಿತ್ತು .
ಹಳೆ ನೆನಪುಗಳನ್ನು ಮರುಕಳಿಸಿದ ಬರಹ .ಚೆನ್ನಾಗಿದೆ !ಧನ್ಯವಾದಗಳು
ಸವಿನೆನಪನು ನೆನಪಿಸುವ
ಸುಂದರ ಬರಹ
ಜ್ಯಾ ಮೀಟರಿಬಾಕ್ಸ್ ಪುಟ್ಟದಾದಾ ಒಂದು ಬ್ಯಾಂಕ್ ಎಂಬುದು ಎಷ್ಟು ನಿಜ ಅಲ್ವಾ ಅಂದು. ಅದರಲ್ಲಿ ಏನೆಲ್ಲ ಇರುತ್ತಿತ್ತು. ಆಹಳೆ ನೆನಪುಗಳನ್ನು ಮತ್ತೆ ಮೆಲುಕು ಹಾಕುವ ಹಾಗಿದೆ ಲೇಖನ. ಜೊತೆಗೆ ಆ ಮಧುರ ಕ್ಷಣ ಗಳು ಮರಳಿ ಬರಬಾರದೆ ಅನಿಸಿತು. ಚಂದದ ಬರಹ.ಧನ್ಯವಾದಗಳು.