23.1 C
Karnataka
Saturday, November 23, 2024

    ಪ್ರವಚನಗಳಿಂದ ಆತ್ಮವಿಶ್ವಾಸ ತುಂಬಿದ ವಿದ್ವಾಂಸ ಡಾ. ಬನ್ನಂಜೆ ಗೋವಿಂದಾಚಾರ್ಯ

    Must read

    ಡಾ.ಬನ್ನಂಜೆ ಗೋವಿಂದಾಚಾರ್ಯ ಸರಳ ಕನ್ನಡದಲ್ಲಿ ಸುಲಲಿತವಾಗಿ ಪ್ರವಚನ ನೀಡುವ ಶೈಲಿ ನನ್ನನ್ನು ಆಕರ್ಷಿಸಿತ್ತು. ಹಿಂದೊಮ್ಮೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಪ್ರವಚನ ಏಕಾಗ್ರತೆಯಿಂದ ಆಲಸಿದ್ದ ನೆನೆಪು. ಆನಂತರ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರವಚನಗಳ ಆಲಿಕೆ ನಡೆದಿತ್ತು.

    ವಿಷ್ಣು ಸಹಸ್ರನಾಮದ ಪ್ರಯೋಜನದ ಬಗ್ಗೆ ಪ್ರವಚನವೊಂದರಲ್ಲಿ ಹೀಗೆ ಹೇಳಿದ್ದರು. – ‘ವೃದ್ಧ ಪೋಷಕರು ಭೇಟಿಯಾಗಿ ಅಮೆರಿಕಾದಲ್ಲಿ ನೆಲೆಸಿರುವ ಮಗಳ ಬಗ್ಗೆ ಪ್ರಸ್ತಾಪಿಸಿದ್ದರು. ಅವಳು ಕ್ಯಾನ್ಸರ್ ಕಾಯಿಲೆಯಿಂದ ಬಳಲುವುದನ್ನು ತೋಡಿಕೊಂಡಿದ್ದರು. ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮವನ್ನು ಭಕ್ತಿಯಿಂದ ಪಠಿಸಿ ಎಂದು ಮಾರ್ಗದರ್ಶನ ನೀಡಿದ್ದೆ. ಕೆಲ ದಿನಗಳ ಪೋಷಕರು ಭೇಟಿಯಾಗಿ ಮಗಳ ಕ್ಯಾನ್ಸರ್ ವಾಸಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು’… -ಹೀಗೆ ಅವರು ಹೇಳಿದಾಗ ಪ್ರವಚನ ಕೇಳುತ್ತಿದ್ದ ಅನೇಕರಲ್ಲಿ ಆತ್ಮವಿಶ್ವಾಸ ಮೂಡುತ್ತಿದ್ದುದು ಸುಳ್ಳಲ್ಲ. ಆತ್ಮ ವಿಶ್ವಾಸ ಎಂಥ ಅದ್ಭುತಗಳನ್ನು ಮಾಡಬಲ್ಲದು ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆಯಾಗಿತ್ತು.

    ವಿದ್ಯಾವಾಚಸ್ಪತಿ

    ವಿದ್ಯಾವಾಚಸ್ಪತಿ ಎಂದೇ ಗೌರವಪೂರ್ವಕವಾಗಿ ಕರೆಯಲಾಗುತ್ತಿದ್ದ ಅವರು ‘ಇರವು ಸಂಪತ್ತಲ್ಲ, ಇರವಿನ ಅರಿವು ಸಂಪತ್ತು’ ಎಂಬ ಗಮನಾರ್ಹ ಕಲ್ಪನೆಯೊಂದಿಗೆ ಬದುಕನ್ನು ಸಾರ್ಥಕಪಡಿಸಿಕೊಂಡವರು.

    ವೇದ, ಉಪನಿಷತ್ತು, ಮಹಾಭಾರತ, ರಾಮಾಯಣ ಹಾಗೂ ಪುರಾಣಗಳಿಗೆ ನಿಪುಣತೆಯ ಭಾಷ್ಯ ಬರೆದ ಸಂಸ್ಕೃತ ವಿದ್ವಾಂಸ. ನಿರರ್ಗಳ ವಾಗ್ಮಿಗಳಾಗಿ ವೇದಾ ಸೂಕ್ತ, ಉಪನಿಷತ್ತು, ಶತ ರುದ್ರೀಯ, ಬ್ರಹ್ಮ ಸೂತ್ರ, ಗೀತಾ ಬಾಷ್ಯಗಳಿಗೆ ಸಮರ್ಪಕ ವ್ಯಾಖ್ಯಾನಗಳನ್ನು ಪ್ರವಚನಗಳ ಮೂಲಕ ನೀಡಿದ ಹೆಮ್ಮೆ ಅವರಿಗಿದೆ. ಸುಮಾರು 10000 ಗಂಟೆಗಳಿಗಿಂತ ಅಧಿಕ ಪ್ರವಚನದ ಮೂಲಕ ಬಹುತೇಕ ಎಲ್ಲಾ ತತ್ವಶಾಸ್ತ್ರದ ಚಿಂತನೆಗಳನ್ನು ವಿವರಿಸಿದ ಕೀರ್ತಿ ಇದೆ.

    ಪಾಣಿನಿಯ ಕೆಲ ಅಪೂರ್ಣ ವ್ಯಾಕರಣಗಳಿಗೆ ನವೀನ ಸೂತ್ರಗಳನ್ನು ಬರೆದಿದ್ದಾರೆ. ಭಾಗವತ ಚಿಂತನದ ಮಹಾನ್ ಪ್ರತಿಪಾದಕರಾಗಿದ್ದರು. ವೇದವ್ಯಾಸ ಸಂಯೋಜಿತ ಪಠ್ಯ ಸುಲಭವಾಗಿ ಅರ್ಥೈಸಲು ತಾತ್ವಿಕವಾಗಿ ಏಕರೂಪತೆ ನೀಡಿದ್ದ ಪಂಡಿತರು. ಹುಟ್ಟಿನಿಂದಲೇ ಮಧ್ವಾಚಾರ್ಯರ ಅನುಯಾಯಿ.ಆದಾಗ್ಯೂ ಮಾಯಾವಾದ ಹಾಗೂ ತತ್ವಶಾಸ್ತ್ರ ಅಧ್ಯಯನ ನಡೆಸಿದ್ದರು. ಪ್ರಸಿದ್ಧ ದಾರ್ಶನಿಕರಾಗಿ ಸಂಸ್ಕೃತ ಹಾಗೂ ಕನ್ನಡದಲ್ಲಿ 4000 ಪುಟಗಳ ವ್ಯಾಖ್ಯಾನ ರಚಿಸಿದ್ದಾರೆ. ಇತರೆ ಭಾಷೆಗಳಲ್ಲಿಯೂ ಸೇರಿ 150 ಪುಸ್ತಕಗಳನ್ನು ರಚಿಸಿದ್ದಾರೆ.ಶ್ರೀ ಶಂಕರಾಚಾರ್ಯ’, ’ಶ್ರೀ ಮಧ್ವಾಚಾರ್ಯ’, ’ಶ್ರೀ ರಾಮಾನುಜಾಚಾರ್ಯ’ ಚಲನಚಿತ್ರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸಿದ್ದಲ್ಲದೆ, ಸಂಭಾಷಣೆಯನ್ನು ರಚಿಸಿದ್ದಾರೆ.ನಟ ವಿಷ್ಣುವರ್ಧನ್ ಅವರ ಅಧ್ಯಾತ್ಮ ಗುರುಗಳು ಆಗಿದ್ದರು.

    ಉಡುಪಿಯ ಬನ್ನಂಜೆಯಲ್ಲಿ 1936ರಲ್ಲಿ ಜನನ. ಬಾಲ್ಯದಲ್ಲಿ ವೇದಗಳ ಪಠ್ಯ ಹಾಗೂ ಗ್ರಂಥಗಳನ್ನು ಅವರ ತಂದೆ ತಾರಾಕೇಸರಿ ಎಸ್. ನಾರಾಯನಾಚಾರ್ಯ ಪದಮಣ್ಣೂರು, ಪಲಿಮಾರು ಮಠದ ಶ್ರೀವಿದ್ಯಾಮಾನ್ಯ ತೀರ್ಥರ ಆಶ್ರಯದಲ್ಲಿ ಕಲಿತರು. ಕಾಣಿಯೂರು ಮಠದ ಶ್ರೀವಿದ್ಯಾಸಮುದ್ರ ತೀರ್ಥ ಸ್ವಾಮೀಜಿ ಅವರ ಆಚಾರ್ಯ ವ್ಯಕ್ತಿತ್ವ ವಿಕಸಿಸಲು ಕಾರಣಕರ್ತರು. ಪೇಜಾವರ ಮಠದ ಶ್ರೀವಿಶ್ವೇಶ್ವತೀರ್ಥರೊಂದಿಗೆ ಹಲವು ವಿಷಯ ಗಳ ಬಗ್ಗೆ ಚರ್ಚಿಸುತ್ತಿದ್ದರು.

    ಪತ್ರಕರ್ತರೂ ಆಗಿದ್ದರು

    ಹಲವು ಪ್ರಚಲಿತ ವಿಷಯಗಳ ಬಗ್ಗೆ ನಾಡಿನ ವಿವಿಧ ನಿಯತಕಾಲಿಕೆಗಳಿಗೆ 800 ಲೇಖನಗಳನ್ನು ಬರೆದಿದ್ದಾರೆ. ಆರಂಭದಲ್ಲಿ ಉದಯವಾಣಿ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. 1979ರಲ್ಲಿ ಅಮೆರಿಕಾದ ಪ್ರಿನ್ಸ್ ಟನ್ ನಲ್ಲಿ ನಡೆದ ವಿಶ್ವ ಧಾರ್ಮಿಕ ಹಾಗೂ ಶಾಂತಿ ಸಮ್ಮೇಳನದಲ್ಲಿ ಭಾರತದ ವಿಶೇಷ ರಾಯಭಾರಿಯಾಗಿದ್ದರು. ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.

    ಅಮೇರಿಕಾದ ನ್ಯೂಯಾರ್ಕ್ ರೊಚೆಸ್ಟರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಬನ್ನಂಜೆ ಅವರ ಶಿಷ್ಯರಾದ ಪಿ.ಆರ್.ಮುಕುಂದ್ 2005-06ರಲ್ಲಿ ಅವರ ಸಹೋದ್ಯೋಗಿಗಳಾದ ಡಾ.ರೋಜರ್ ಈಸ್ಟನ್  ಹಾಗೂ ಹವಾಯ್ ಬೊಯಿಂಗ್ ಕಾರ್ಪೋರೇಷನ್ ಕೀತ್ ನಾಕ್ಸ್ ಜೊತೆಗೂಡಿ ಮಧ್ವಚಾರ್ಯರ ಮೂಲ ಹಸ್ತಪ್ರತಿ ಸರ್ವಮೂಲ ಗ್ರಂಥವನ್ನು ಇಮೇಜಿಂಗ್ ಮೂಲಕ ಎಚ್ಚರಿಕೆಯಿಂದ ಸಂಸ್ಕರಿಸಿದ್ದರು. ಬನ್ನಂಜೆ ಈ ಯೋಜನೆಗೆ ಸಲಹೆ ನೀಡಿದ್ದರು. ಹಸ್ತಪ್ರತಿ ಅಧ್ಯಯನಕ್ಕೆ ಈ ಚಿತ್ರಗಳು ಸಹಕರಿಸಿದ್ದವು.

    ಸಂಸ್ಕೃತ ವಿದ್ವಾಂಸರಾಗಿ ಖ್ಯಾತನಾಮರಾಗಿದ್ದ ಬನ್ನಂಜೆಗೆ 84 ವರ್ಷಗಳ ಸಾರ್ಥಕ ಜೀವನ ನಡೆಸಿ ಇಂದು (ಡಿಸೆಂಬರ್,13, 2020) ನಿಧನರಾದರು. ಅನೇಕ ಗಣ್ಯರು, ಶಿಷ್ಯರು ಕಂಬನಿ ಮಿಡಿದಿದ್ದಾರೆ.

    ಕೃತಿರಚನೆ

    ಬಾಣಭಟ್ಟನ ಕಾದಂಬರಿ,ಕಾಳೀದಾಸನ ಶಾಕುಂತಲಾ,ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು.

    ಟಿಪ್ಪಣಿಗಳು

    1. ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ ’ಆನ೦ದಮಾಲಾ’,
    2. ತ್ರಿವಿಕ್ರಮ ಪ೦ಡಿತರ ’ವಾಯುಸ್ತುತಿ’,
    3. ’ವಿಷ್ಣುಸ್ತುತಿ’
    4. ಆರು ಉಪನಿಷತ್ತುಗಳಿಗೆ ಟೀಕೆ.
    5. ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯದ ಟೀಕಾ ಕೃತಿಯಾದ ’ಯಮಕ ಭಾರತ’ ಕೃತಿಗೆ ಟಿಪ್ಪಣಿ.
    6. ’ಭಾಗವತ ತಾತ್ಪರ್ಯ’ ಕೃತಿಗೂ ಟಿಪ್ಪಣಿ

    ಕನ್ನಡಕ್ಕೆ ಅನುವಾದ

    ಪುರುಷಸೂಕ್ತ,ಶ್ರೀ ಮದ್ಭಗವದ್ಗೀತೆ,ಶ್ರೀ ಸೂಕ್ತ ,ಶಿವಸೂಕ್ತ,ನರಸಿಂಹ ಸ್ತುತಿ,ತಂತ್ರಸಾರ ಸಂಗ್ರಹ .

    ಮಧ್ವಾಚಾರ್ಯರ ’ಮಾಧ್ವ ರಾಮಾಯಣ’,

    ರಾಜರಾಜೇಶ್ವರಿ ಯತಿಗಳ ಮಂಗಲಾಷ್ಟಕ ಇತ್ಯಾದಿ ಕೃತಿಗಳು

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    2 COMMENTS

    1. ಪೂಜ್ಯ ಬನ್ನಂಜೆ ಗೋವಿದಾಚಾರ್ಯರ ನಿಧನ ವಾರ್ತೆ ತೀವ್ರ ಆಘಾತವನ್ನುಂಟು ಮಾಡಿದೆ ಪೂಜ್ಯರು ಮಧ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು .ಶಾಸ್ತ್ರ ಪ್ರಪಂಚದಲ್ಲಿ ಸಿಂಹದಂತೆ ಇದ್ದರು .ನನ್ನಂತಹ ಅಪಾರ ಸಾಧಕರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಗರುಗಳಾಗಿದ್ದರು .ವಿದೇಶಿಯರು ಸಹ ಅವರ ಶಿಷ್ಯರಾಗಿದ್ದರು .ನಿರ್ಭೀತರಾಗಿ ಸತ್ಯ ಹೇಳುವ ಅಪರೂಪದ ಜ್ಞಾನಿಗಳಾಗಿದ್ದರು .ಅವರು ಇಲ್ಲದಿದ್ದರೂ ಅವರು ಮಾಡಿದಶ್ರೇಷ್ಠ ಕೃತಿಗಳು ಮಾಧ್ವ ಸಮಾಜಕ್ಕೆ ಮಾರ್ಗದರ್ಶ ವಾಗಿದೆ .ಅವರ ಪ್ರವಚನಗಳು ಇನ್ನೂ ಜೀವಂತವಾಗಿವೆ .ಶ್ರೀ ಕೃಷ್ಣಾರ್ಪಣಮಸ್ತು. ಶ್ರೀ ಜಯ ಹರಿ ವಿಠಲ.

    2. ಬನ್ನಂಜೆ ಅವರು ಇರುವಿನ ಅರಿವು ಸಂಪತ್ತು ಎಂಬ ಕಲ್ಪನೆಯಲ್ಲಿ ಬದುಕು ಕಟ್ಟಿ ಕೊಂಡವರು ಎಂದು ವೀರೇಶ್ ಪ್ರಸಾದ್ ಹೇಳಿರುವುದರಲ್ಲಿ ತತ್ಯವಿದೆ. 🙏🙏

    LEAVE A REPLY

    Please enter your comment!
    Please enter your name here

    Latest article

    error: Content is protected !!