26.6 C
Karnataka
Friday, November 22, 2024

    ಸರದಿ ಬಂದೇ ಬರುತ್ತದೆ

    Must read

    ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳು ಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.

    ‘ಸರದಿ’  ಪ್ರತಿಯೊಬ್ಬರಿಗೂ   ಬಂದೇ ಬರುತ್ತದೆ.  ಆ ಸರದಿಯಿಂದ ಹಿಂದೆ ಸರಿಯುವ ಪ್ರಮೇಯವೇ ಇಲ್ಲ. ಪಂಪನ ‘ವಿಕ್ರಮಾರ್ಜುನವಿಜಯ’ದ  ದಶಮಾಶ್ವಾಸದಲ್ಲಿ ಭೀಷ್ಮ ಪಟ್ಟಾಭಿಷೇಕ ಸಂದರ್ಭದಲ್ಲಿ ಕರ್ಣ ಮತ್ತು ಭೀಷ್ಮರ ನಡುವೆ ನಡೆದ ಸಂಘರ್ಷದ ಸಂವಾದ ಅರ್ಥಗರ್ಭಿತವಾಗಿದೆ.

    ಕರ್ಣ ದುರ್ಯೋಧನನ್ನು ಕುರಿತು “ಪಗೆವರನಿಟ್ಟೆಲ್ವಂ ಮುರಿವೊಡೆನಗೆ ಪಟ್ಟಂಗಟ್ಟಾ” ಅಂದರೆ  “ಹಣ್ಣು ಹಣ್ಣು  ಮುದುಕರಾಗಿರುವ  ಭೀಷ್ಮರಿಗೆ ಯುದ್ಧ ಪಟ್ಟವನ್ನು ಕಟ್ಟುವ ಬದಲು ನನಗೆ ಪಟ್ಟ ಕಟ್ಟು. ಹಗೆಯವರಾದ  ಪಾಂಡವರಿಗೆ  ಸೋಲಿನ ರುಚಿ ತೋರಿಸುವುದಾದರೆ ಇದು ಅಗತ್ಯ” ಎನ್ನುತ್ತಾನೆ.

    ಆ ಸಂದರ್ಭದಲ್ಲಿ ವಯೋವೃದ್ಧರೂ, ಜ್ಞಾನವೃದ್ಧರೂ, ವಿವೇಕವೃದ್ಧರೂ ಆದ ಭೀಷ್ಮರು  ಕರ್ಣನ ಮಾತಿಗೆ ಮುನಿಸಿಕೊಳ್ಳದೆ  “ಸೂಳ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್!” ಎಂದು ಮಾರ್ಮಿಕವಾಗಿ ವ್ಯಂಗ್ಯವಾಡುತ್ತಾರೆ.

    ಕಾವ್ಯಮೀಮಾಂಸೆಯ ಅರ್ಥಧ್ವನಿಗೆ ಇದೊಂದು ಒಳ್ಳೆಯ  ಉದಾಹರಣೆ. ಅಂದರೆ   ಯುದ್ಧಭೂಮಿಯಲ್ಲಿ ಹೋರಾಡುವ ‘ಸರದಿ’ ನಿನಗೂ ಬರುತ್ತದೆ ಅದಕ್ಕೆ ವ್ಯವಧಾನ ಬೇಕು , ಮಹಾಯುದ್ಧದಲ್ಲಿ ನಮಗೆ ಸಿಗುವುದು ವಿಜಯವಲ್ಲ ನಮ್ಮದೇನಿದ್ದರೂ ಒಬ್ಬರಾದ ಮೇಲೆ ಒಬ್ಬರು ಪತನ ಹೊಂದುವ ಕೆಲಸ ಎನ್ನುತ್ತಾರೆ .

    ಇಲ್ಲಿ ಯುದ್ಧವೆಂದರೆ ಬದುಕು ಎಂತಲೂ ತೆಗೆದುಕೊಳ್ಳಬಹುದು.  ಹಾಗಾಗಿ ಇಲ್ಲಿ ‘ಸರದಿ’ ಎಂಬ ಪದ ಇಡೀ ಜೀವನಕ್ಕೇ ಅನ್ವಯಿಸುವಂಥದ್ದು.  ಬಾಲ್ಯ , ಕಿಶೋರಾವಸ್ಥೆ, ಯೌವ್ವನ, ಮುಪ್ಪುಗಳು ಬಂದೇ ಬರುತ್ತವೆಇದರ ಜೊತೆಗೆ ಹಗಲು- ಇರುಳು, ಸುಖ-ದುಃಖ. ಸೋಲು-ಗೆಲುವುಗಳು  ಆವರ್ತವಾಗಿ ಅಂದರೆ ಪಾಲಿಯಲ್ಲಿ ಬರುತ್ತವೆ ಅದಕ್ಕೆ ನಾವು ಸಿದ್ಧರಿರಬೇಕು ಎಂಬ ಧ್ವನಿಯೂ ಇಲ್ಲಿದೆ.

    ದೇವಾಲಯದ ಘಂಟಾನಾದ ಮತ್ತೆ ಮತ್ತೆ ಹೇಗೆ ರಿಂಗಣಿಸುತ್ತಿರುತ್ತದೆಯೋ ಅಂತಯೇ ಇಲ್ಲಿ ‘ಸರದಿ’ ಎಂಬ ಪದದ  ಅರ್ಥ  ಮತ್ತೆ ಮತ್ತೆ  ನಮಗೆ ಹೊಳೆಯುತ್ತದೆ. ಭೀಷ್ಮರ ಮಾತಿನನ್ವಯ  ಮೊದಲನೆಯದಾಗಿ ಯುದ್ಧದಲ್ಲಿ ಹೋರಾಡುವ ಸರದಿ, ಎರಡನೆಯದಾಗಿ ಯೌವ್ವನದಿಂದ  ಮುಪ್ಪಿಗೆ ಸರಿಯುವ  ಸರದಿ, ಮೂರನೆಯದಾಗಿ ಸಾವಿನ  ಸರದಿ  ಬಂದೇ ಬರುತ್ತದೆ ಎಂದು ತಿಳಿಯಬೇಕು.

    ”ಜಾತಸ್ಯ ಮರಣಂ ಧ್ರುವಂ” ಎಂಬಂತೆ ಹುಟ್ಟಿದವರು ಸಾಯಲೇಬೇಕೆಂಬ ನಿಯಮವಿದೆ. ಈ ಸತ್ಯವನ್ನು  ತಿಳಿದ ಮೇಲೆ,   ಶಾಶ್ವತವಲ್ಲದ   ಈ ತಾರುಣ್ಯದಲ್ಲಿ  ಅನ್ಯ ವಿಷಯಕ್ಕೆ ಮಾರು ಹೋಗಬಾರದು,ಹೋರಾಟದ  ಸಂಕಲ್ಪವನ್ನು ಕಡೆಗಾಣಿಸಬಾರದು.ಬದುಕಿರುವಾಗ ಒಳ್ಳೆಯ  ಕೆಲಸಗಳನ್ನು ಮಾಡುವುದನ್ನು ಮರೆತು ಮೆರೆಯಬಾರದು ಎನ್ನುವ ತಿಳಿವಳಿಕೆ ಕೂಡ  ಇಲ್ಲಿದೆ. ಬದುಕಿನ  ಎಲ್ಲಾ  ಮಜಲುಗಳನ್ನು  ಅನುಭವಿಸಲು  ಅವಕಾಶವಿದ್ದೇ ಇದೆ ಎಂಬುದನ್ನು   “ಸರದಿ” ಎಂಬ ಒಂದೇ ಪದ ಹೇಳುತ್ತದೆ.

    ಜೀವನ ಪಾಠವೇ ಹಾಗೆ!   ಆಕಾಶವನ್ನು ನೋಡಲು  ಮುಗಿ ಬೀಳಬೇಕಿಲ್ಲ  ಎಲ್ಲಿ ನಿಂತರೂ  ನೀಲಾಕಾಶ ಗೋಚರಿಸುತ್ತದೆ ಹಾಗೆ ಮನುಷ್ಯನಿಗೂ ಅವಕಾಶಗಳ  ಸರದಿ ಇರುತ್ತದೆ ಅದನ್ನು ಸದ್ವಿನಿಯೋಗ  ಮಾಡಿಕೊಳ್ಳಬೇಕಷ್ಟೆ.   ದುಡುಕಿನಿಂದ ಸಂರಚಿತ ಜೀವನ ನಿಯಮಗಳನ್ನು ಮುರಿಯುವುದು ಉದ್ಧಟತನ. ಮುಪ್ಪು ಎಂಬುದು ದೇಹಕ್ಕೆ ವಿನಃ  ಬುದ್ಧಿಗಲ್ಲ, ಬುದ್ಧಿಗಮ್ಯ ಜ್ಞಾನ ವಯಸ್ಸನ್ನು ಮೀರಿದ್ದು ಎಂಬ ತತ್ವವಿದೆ.  

    ಪಂಪನ ಭೀಷ್ಮರು ಹೇಳಿರುವ ‘ಸೂಳ್’ ಅಥವಾ ‘ಸರದಿ’  ಎಂಬ ಮಾತು ಕೇವಲ ಉಪದೇಶಾತ್ಮಕವಾಗಿಲ್ಲ .  ಜೀವಮಾನವನ್ನು ಕುರಿತದ್ದಾಗಿದೆ. ‘ಸರದಿ’ ಎಂಬ ಪದದ ಅರ್ಥ ಅಂತರಾರ್ಥ ಎಲ್ಲಾ ಕಾಲಕ್ಕೂ ಅನ್ವಯವಾಗುವಂಥದ್ದು .  ಮನುಷ್ಯ ಚಿರಂಜೀವಿಯಂತೂ  ಅಲ್ಲ ! ‘ಮೃತ್ಯು’ ಎಂಬ ಛಾಯೆ ನಮ್ಮ ನಡುವೆ ಸುತ್ತುತ್ತಲೇ ಇರುತ್ತದೆ. ಲೌಕಿಕ ಸುಖಭೋಗಗಳಿಗೆ ನಮ್ಮ ಸಮಯವನ್ನು ವ್ಯರ್ಥ ಮಾಡಬಾರದು ಸತ್ತ ಮೇಲೆಯೂ  ಬದುಕುವಂಥ ಜೀವನ ಮಾರ್ಗ ನಮ್ಮದಾಗಿರಬೇಕು.  ತಾನಾಗಿ ಒದಗಿ ಬರುವ  ಕಾರ್ಯಗಳನ್ನು ನಿಷ್ಟೆಯಿಂದ  ಮಾಡಬೇಕಷ್ಟೆ.  ಆಗ ನಮಗೆ ಯಥಾವತ್ ಪ್ರತಿಫಲ  ಎಂಬ ‘ಸರದಿ’ ಅರಸಿ ಬರುತ್ತದೆ.  

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ. 

    spot_img

    More articles

    1 COMMENT

    1. ಸರದಿಯ ಬಗ್ಗೆ ಬರುವ ಒಳ ಅರ್ಥ ಗಳನ್ನು ಲೇಖಕಿ ಗುರುತಿಸಿ ಅರ್ಥ್ಯ ಸಿರುವುದು ಸಮಂಜಸವಾಗಿದೆ.🙏

    LEAVE A REPLY

    Please enter your comment!
    Please enter your name here

    Latest article

    error: Content is protected !!