25.1 C
Karnataka
Sunday, November 24, 2024

    ಬಂಡವಾಳವನ್ನು ಸುರಕ್ಷಿತಗೊಳಿಸಿಕೊಳ್ಳುವ ಆರ್ಥಿಕ ಸಾಕ್ಷರತೆ ಇಂದಿನ ಅಗತ್ಯ

    Must read

    ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಸರ್ವಕಾಲೀನ ದಾಖಲೆ ಮಟ್ಟಕ್ಕೆ ಜಿಗಿತ ಕಂಡು ವಿಜೃಂಭಿಸುತ್ತಿದೆ. ಆನೆ ನಡೆದಿದ್ದೇ ದಾರಿ – ಸೆನ್ಸೆಕ್ಸ್‌ ತಲುಪಿದ್ದೇ ಗುರಿ ಎಂಬಂತಾಗಿದೆ. ಈ ವಾತಾವರಣದಲ್ಲಿ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ವಲಯದ ಷೇರುಗಳು ಮಾತ್ರವಲ್ಲದೆ ಕಳಪೆ ವಲಯದ ಷೇರುಗಳಿಗೂ ಜೀವ ಬರುತ್ತಿದ್ದು ಹಲವರಿಗೆ ಅಪೂರ್ವ ಅವಕಾಶ ಮಾಡಿಕೊಡುತ್ತಿದೆ.

    ಈ ಅವಕಾಶ ಷೇರು ಖರೀದಿಸುವುದಕ್ಕಿಂತ ವರ್ಷಗಟ್ಟಲೆ ಕಾಯುತ್ತಿದ್ದವರಿಗೆ ಮಾರಾಟಮಾಡಿ ಹೊರಬರುವ ಅವಕಾಶ. ಕಂಪನಿಗಳು ತಮ್ಮ ಆಂತರಿಕ ಸಾಧನೆಯಿಂದ ಏರಿಕೆ ಕಾಣುತ್ತಿದ್ದರೆ ಅದು ಹೂಡಿಕೆಗೆ ಯೋಗ್ಯ ಆದರೆ ಮೊದಲೇ ರೋಗಗ್ರಸ್ತವಾಗಿರುವ ಕಂಪನಿಗಳು, ದಿವಾಳಿತನದ ಪ್ರಕ್ರಿಯೆಯಲ್ಲಿರುವ ಕಂಪನಿಗಳು ಸಹ ಏರಿಕೆ ಕಾಣುತ್ತಿವೆ. ಈ ವಾತಾವರಣದಲ್ಲಿ ದಿಢೀರ್‌ ಏರಿಕೆ ಕಾಣುತ್ತಿರುವುದು ಅಮಾಯಕ ಹೂಡಿಕೆದಾರರು, ಹೊಸದಾಗಿ ಪೇಟೆ ಪ್ರವೇಶಿಸಿದ ರಿಟೇಲ್‌ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನವಿರಬಹುದು. ಈ ರೀತಿಯ ಬೆಳವಣಿಗೆಗಳಿಂದ ದೂರವಿದ್ದರೆ ಬಂಡವಾಳ ಸುರಕ್ಷಿತವಾಗಿರಬಹುದು.

    ಉದಾಹರಣೆಗೆ ಪಿ ಸಿ ಜುವೆಲ್ಲರ್ಸ್. ‌ ಒಂದು ವರ್ಷದ ಹಿಂದೆ ಅಂದರೆ ಡಿಸೆಂಬರ್‌ 16, 2019 ರಲ್ಲಿ ಈ ಕಂಪೆನಿಯ ಷೇರು ದರ ರೂ.28.55 ರ ಗರಿಷ್ಠ ದರದಲ್ಲಿತ್ತು. ಮಾರ್ಚ್‌ ನಲ್ಲಿ ರೂ.7.80 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು, ಮತ್ತೆ ರೂ.27 ರ ಗಡಿಯಈ ಶುಕ್ರವಾರ ದಾಟಿದೆ. ವಹಿವಾಟಿನ ಗಾತ್ರವೂ ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಮಾರಿ ಲಾಭ ಮಾಡಿಕೊಳ್ಳುವುದೇ ಜಾಣತನ.

    ದಿವಾಳಿತನದ ಪ್ರಕ್ರಿಯೆಗಳನ್ನೆದುರಿಸುತ್ತಿರುವ ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್ ಈ ವರ್ಷದ ಏಪ್ರಿಲ್‌ ನಲ್ಲಿ ರೂ.8 ರ ಸಮೀಪಕ್ಕೆ ಕುಸಿದಿತ್ತು. ಈಗ ವಾರ್ಷಿಕ ಗರಿಷ್ಠ ರೂ.41 ರ ಸಮೀಪಕ್ಕೆ ಜಿಗಿದಿದೆ. ಹಾನಿಯಲ್ಲಿರುವ ಕಂಪನಿಯ ಷೇರು ಒಂದೇ ತಿಂಗಳಲ್ಲಿ, ಸೂಚ್ಯಂಕಗಳು ಏರಿಕೆಯಲ್ಲಿವೆ ಎಂಬ ಕಾರಣಕ್ಕಾಗಿ ರೂ.16 ಸಮೀಪದಿಂದ ರೂ.41 ರವರೆಗೂ ಜಿಗಿತ ಕಂಡಿರುವುದನ್ನು ಏನೆಂದು ಅರ್ಥೈಸುವುದು.

    ಯೆಸ್‌ ಬ್ಯಾಂಕ್‌ ಈ ವರ್ಷದ ಆರಂಭದಲ್ಲಿ ಆರ್ಥಿಕ ಒತ್ತಡದಲ್ಲಿದ್ದಾಗ ಆರ್‌ ಬಿ ಐ ಮಧ್ಯೆ ಪ್ರವೇಶಿಸಿ ಬ್ಯಾಂಕ್‌ ನ ಶೇಕಡ 75ರಷ್ಠು ಷೇರುಗಳನ್ನು 3 ವರ್ಷಗಳ ಅವಧಿಯವರೆಗೂ ಚಲಾವಣೆಯಿಂದ ತಡೆಹಿಡಿದುದಲ್ಲದೆ, ಬ್ಯಾಂಕ್‌ ಸಂಗ್ರಹಿಸಿದ್ದ ರೂ.8,400 ಕೋಟಿ ಮೌಲ್ಯದ ಟೈರ್‌ 1 ಬಾಂಡ್‌ ಗಳನ್ನು ರದ್ದುಗೊಳಿಸಿ ಮೌಲ್ಯವನ್ನು ಶೂನ್ಯ ಮಾಡಿದ್ದು ಅನೇಕ ಹೂಡಿಕೆದಾರರನ್ನು ಆಪತ್ತಿಗೆ ತಳ್ಳಿದೆ. ಈ ಸಮಯದಲ್ಲಿ ಅನೇಕ ಅಗ್ರಮಾನ್ಯ ಬ್ಯಾಂಕ್‌ ಗಳು ಇದರ ಬೆಂಬಲಕ್ಕೆ ನಿಂತು ಬಂಡವಾಳವನ್ನು ಒದಗಿಸಿದವು. ಮತ್ತೊಮ್ಮೆ ಯೆಸ್‌ ಬ್ಯಾಂಕ್‌ ಹಕ್ಕಿನ ರೂಪದಲ್ಲಿ ಪ್ರತಿ ಷೇರಿಗೆ ರೂ.12 ರಂತೆ ಷೇರುಗಳನ್ನು ವಿತರಿಸಿ ಸಂಪನ್ಮೂಲ ಸಂಗ್ರಹಿಸಿತು. ಕಳೆದ ತ್ರೈಮಾಸಿಕದ ಫಲಿತಾಂಶ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಠು ಉತ್ತಮವಾದ ಸಾಧನೆ ತೋರುವುದೆಂದು ಬ್ಯಾಂಕ್‌ ಮುಖ್ಯಸ್ಥರು ತಿಳಿಸಿದ್ದಾರೆ. ಈ ಮಧ್ಯೆ ಉತ್ತಮ ಬಂಡವಾಳೀಕರಣವಾಗಿದೆ ಎಂದು ರೇಟಿಂಗ್‌ ಹೆಚ್ಚಿಸಿದ ಕಾರಣ ಷೇರಿನ ಬೆಲೆ ಏರಿಕೆ ಕಂಡಿದೆ. ಇದು ಎಷ್ಟರಮಟ್ಟಿಗೆ ನೈತಿಕ ಎಂಬುದನ್ನು ಓದುಗರೇ ನಿರ್ಧರಿಸಬಹುದು.

    ಪೇಟೆಯ ವೇಗ

    ಅಲ್ಪಾವಧಿಯಲ್ಲೇ ದೀರ್ಘಾವಧಿಯ ಲಾಭ
    ಈಗಿನ ಬ್ಯಾಂಕ್‌ ಬಡ್ಡಿದರ ಶೇ.6 ರೊಳಗಿರುವ ಅಲ್ಪಬಡ್ಡಿ ಯುಗದಲ್ಲಿ ಹೆಚ್ಚು ಹೆಚ್ಚು ಲಾಭ ಗಳಿಸಿಕೊಳ್ಳುವ ಕಾತುರತೆ ಬೆಳೆಯುತ್ತಿದೆ. ಅದಕ್ಕೆ ಭಾರತೀಯ ಷೇರುಪೇಟೆಗಳು ಉತ್ತಮ ವೇದಿಕೆಯನ್ನು ಒದಗಿಸಿವೆ. ಪ್ರಮುಖ ಕಂಪನಿಗಳನೇಕವು ವೈವಿಧ್ಯಮಯ ಕಾರಣಗಳಿಂದ ಅಲ್ಪ ಸಮಯದಲ್ಲೇ ಅತ್ಯಧಿಕ ಪ್ರಮಾಣದ ಲಾಭದ ಅವಕಾಶವನ್ನು ತಂದುಕೊಟ್ಟಿವೆ. ಕೆಲವು ಉದಾಹರಣೆಗಳು ಇಂತಿವೆ.

    ಬಜಾಜ್‌ ಫೈನಾನ್ಸ್‌ ಲಿಮಿಟೆಡ್:ಈ ಕಂಪನಿಯು ಸೆಪ್ಟೆಂಬರ್‌ ತಿಂಗಳ ಅಂತ್ಯದ ಸಾಧನೆಯು ತೃಪ್ತಿಕರವಾಗಿಲ್ಲ ಎಂಬ ಕಾರಣಕ್ಕಾಗಿ ರೂ.3,100 ರೂಪಾಯಿಗಳವರೆಗೂ ಅಕ್ಟೋಬರ್‌ ಮೂರನೇ ವಾರದಲ್ಲಿ ಕುಸಿದಿದ್ದಂತಹ ಷೇರಿನ ಬೆಲೆ ನವೆಂಬರ್‌ ಅಂತ್ಯದ ವಾರದಲ್ಲಿ ರೂ.4,900 ನ್ನು ದಾಟಿದೆ. ಅಂದರೆ ಕೇವಲ ಒಂದೇ ತಿಂಗಳಲ್ಲಿ ಶೇ.50 ಕ್ಕೂ ಹೆಚ್ಚಿನ ಏರಿಕೆಯನ್ನು ಕಂಡಿದೆ.

    ಟಾಟಾ ಕೆಮಿಕಲ್ಸ್‌ ಲಿಮಿಟೆಡ್‌ :ಸರಕು ರಸಾಯನಿಕಗಳನ್ನುತ್ಪಾದಿಸುವ ಈ ಕಂಪನಿ ಕಳೆದ ಒಂದು ತಿಂಗಳಿನಲ್ಲಿ ರೂ.318 ರ ಸಮೀಪದಿಂದ ರೂ.516 ರವರೆಗೂ ಏರಿಕೆ ಕಂಡು ಶೇ.60 ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿದೆ. ಈ ಕಂಪನಿ ಜೂನ್‌ ತಿಂಗಳಲ್ಲಿ ಪ್ರತಿ ಷೇರಿಗೆ ರೂ.11 ರಂತೆ ಲಾಭಾಂಶ ವಿತರಿಸಿದ ನಂತರವೂ ಷೇರಿನ ಬೆಲೆ ರೂ.300 ರೊಳಗೆ ವಹಿವಾಟಾಗುತ್ತಿತ್ತು.

    ಗ್ರಾಫೈಟ್‌ ಇಂಡಿಯಾ ಲಿಮಿಟೆಡ್‌ :ಮಧ್ಯಮ ಶ್ರೇಣಿಯ ಈ ಕಂಪನಿ ಕಳೆದ ಒಂದು ತಿಂಗಳಲ್ಲಿ ರೂ.179 ರ ಸಮೀಪದಿಂದ ರೂ.285 ರವರೆಗೂ ಏರಿಕೆ ಪ್ರದರ್ಶಿಸಿದೆ. ಈ ಷೇರಿನ ವಹಿವಾಟಿನ ಗಾತ್ರ ನವೆಂಬರ್‌ ಮೂರನೇವಾರದಲ್ಲಿ ಅತ್ಯಧಿಕವಾಗಿದ್ದರಿಂದ, ಷೇರು ವಿನಿಮಯ ಕೇಂದ್ರವು ಕಂಪನಿಯಿಂದ ವಿವರಣೆ ಕೇಳಿದಾಗ ಕಂಪನಿ ಈ ಏರಿಕೆಗೆ ಕಂಪನಿಯ ಆಂತರಿಕವಾದ ಬೆಳವಣಿಗೆಗಳೇನೂ ಇಲ್ಲ ಎಂದು ತಿಳಿಸಿದೆ. ಒಂದೇ ತಿಂಗಳಲ್ಲಿ ಶೇ.50 ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿದೆ.

    ಇವುಗಳೊಂದಿಗೆ ಸಾರ್ವಜನಿಕ ವಲಯದ ಬ್ಯಾಂಕ್‌ ಗಳಾದ ಬ್ಯಾಂಕ್‌ ಆಫ್‌ ಬರೋಡಾ, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಗಳಲ್ಲದೆ ಶಿಪ್ಪಿಂಗ್‌ ಕಾರ್ಪೋರೇಷನ್‌, ಸ್ಟೀಲ್‌ ಅಥಾರಿಟೀಸ್‌ ಆಫ್‌ ಇಂಡಿಯಾ, ಗೇಲ್‌ ಇಂಡಿಯಾ, ಒ ಎನ್‌ ಜಿ ಸಿ, ಆಯಿಲ್‌ ಇಂಡಿಯಾ, ಕೋಲ್‌ ಇಂಡಿಯಾ ಗಳು ಉತ್ತಮ ಚಟುವಟಿಕೆ ಭರಿತವಾದ ಏರಿಕೆಯನ್ನು ಪ್ರದರ್ಶಿಸಿದವು.

    ಕೆಲವು ಕಂಪನಿಗಳು ಒಂದೆರಡು ದಿನಗಳಲ್ಲೇ ಅಧಿಕವಾದ ಏರಿಳಿತಗಳನ್ನು ಪ್ರದರ್ಶಿಸಿದ ಉದಾಹರಣೆಗಳಿವೆ. ಈ ವಾರದ ಗುರುವಾರದಂದು ಯು ಪಿ ಎಲ್‌ ಲಿಮಿಟೆಡ್‌ ಷೇರಿನ ಬೆಲೆ ರೂ.492 ರ ಸಮೀಪದಿಂದ ರೂ.417 ರವರೆಗೂ ಕುಸಿದಿದೆ. ಸುಮಾರು ಶೇ.15 ರಷ್ಟರ ಕುಸಿತ ಒಂದೇ ದಿನ. ಇಂತಹ ಕುಸಿತಕ್ಕೆ ಕಾರಣಗಳನೇಕವಿರಬಹುದು, ಆದರೆ ಹಾನಿ ಮಾತ್ರ ಹೂಡಿಕೆದಾರರಿಗಲ್ಲವೇ?

    ಕಲ್ಪತರು ಪವರ್‌ ಟ್ರಾನ್ಸ್ ಮಿಷನ್‌ ಲಿಮಿಟೆಡ್ ಕಂಪನಿಯ ಷೇರಿನ ಬೆಲೆ ರೂ.360 ರ ಸಮೀಪದಲ್ಲಿತ್ತು. ಕಂಪನಿ ತನ್ನ ಕಾರ್ಪೊರೇಟ್‌ ಆಫೀಸ್‌ ಗಾಗಿ ಪ್ರದೇಶ ಖರೀದಿಗೆ ರೂ.207 ಕೋಟಿ ಮತ್ತು ಕಟ್ಟಡ ನಿರ್ಮಾಣಕ್ಕೆ ರೂ.170 ಕೋಟಿ ತೊಡಗಿಸುವ ನಿರ್ಧಾರ ಮಾಡಿದೆ ಈ ಬೆಳವಣಿಗೆಯಿಂದ ಗುರುವಾರ ಷೇರಿನ ಬೆಲೆ ರೂ.298 ರವರೆಗೂ ಕುಸಿಯಿತು. ಆದರೆ ಶುಕ್ರವಾರದಂದು ಷೇರಿನ ಬೆಲೆ ರೂ.332 ರವರೆಗೂ ಪುಟಿದೆದ್ದಿತು.
    ಒಂದೇ ವಾರದಲ್ಲಿ ರೂ.1,793 ರಿಂದ ರೂ.1,400 ಕ್ಕೆ ಕುಸಿದ ಬೆಳವಣಿಗೆಯನ್ನು ಐ ಆರ್‌ ಸಿ ಟಿ ಸಿ ಷೇರಿನಲ್ಲಿ ಕಂಡುಬಂದಿದೆ. ಷೇರಿನ ಬೆಲೆ ಅಧಿಕ ಏರಿಕೆ ಕಂಡ ಕಾರಣ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿ ಶೇ.20ರಷ್ಟನ್ನು ಆಫರ್‌ ಫಾರ್‌ ಸೇಲ್‌ ಮೂಲಕ ನಡೆಸಿದ ಕಾರಣ ಈ ರೀತಿ ಕುಸಿತ ಪ್ರದರ್ಶಿಸಿತವಾಗಿದೆ. ಈ ರೀತಿಯ ಭರ್ಜರಿ ಏರಿಕೆಯು ಕಂಪನಿಗಳಾದ ಐ ಟಿ ಸಿ, ಆಕ್ಸಿಸ್‌ ಬ್ಯಾಂಕ್‌, ಲಾರ್ಸನ್‌ ಅಂಡ್‌ ಟೋಬ್ರೋ ಗಳಲ್ಲಿ ಪ್ರದರ್ಶಿತವಾದಲ್ಲಿ ಕೇಂದ್ರ ಸರ್ಕಾರವು ತನ್ನಲ್ಲಿರುವ special undertaking of UTI ನ ಷೇರುಗಳನ್ನು ಮಾರಾಟಮಾಡಲು ಪ್ರಯತ್ನಿಸುವ ಸಾಧ್ಯತೆಯೂ ಇದೆ.

    ಹೀಗೆ ವಿಭಿನ್ನ ಕಾರಣಗಳಿಂದ ರಭಸದ ಏರಿಳಿತಗಳನ್ನು ಪ್ರದರ್ಶಿಸುತ್ತಿರುವ ಷೇರುಪೇಟೆಯಲ್ಲಿ ಬಂಡವಾಳವನ್ನು ಸುರಕ್ಷಿತಗೊಳಿಸಿ ಬೆಳೆಸಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳುವ ಆರ್ಥಿಕ ಸಾಕ್ಷರತೆ ಇಂದಿನ ಅಗತ್ಯ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!