21.2 C
Karnataka
Sunday, September 22, 2024

    ಮಾನವ ಮತ್ತು ವನ್ಯ ಜೀವಿ ಸಂಘರ್ಷ ನಿವಾರಣೆ ಇಂದಿನ ದೊಡ್ಡ ಸವಾಲು

    Must read

    ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗುತ್ತಿದ್ದು ಇದನ್ನು ನಿವಾರಿಸಲು ಎಲ್ಲರೂ ಜೊತೆ ಗೂಡಿ ಕಾರ್ಯ ನಿರ್ವಹಿಸಬೇಕಾದ ಅಗತ್ಯವನ್ನು ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಮೀಸಲು ಅಭಯಾರಣ್ಯದಲ್ಲಿ (ಬಿಆರ್‌ಟಿ ಟೈಗರ್ ರಿಸರ್ವ್ )ನಡೆದ ಮಾಧ್ಯಮ ಕಾರ್ಯಗಾರ ಪ್ರತಿಪಾದಿಸಿತು.ಕನ್ನಡಪ್ರೆಸ್.ಕಾಮ್ ಕೂಡ ಈ ಕಾರ್ಯಗಾರದಲ್ಲಿ ಭಾಗವಹಿಸಿತ್ತು.

    ಈ ಅರಣ್ಯ ಪ್ರದೇಶದಲ್ಲಿನ ಜೀವ ವೈವಿಧ್ಯ ಮತ್ತು ಇಲ್ಲಿನ ಪರಿಸರ ಸಂರಕ್ಷಣೆಯ ವ್ಯವಸ್ಥೆಯಲ್ಲಿ ಅಸಮತೋಲನವನ್ನು ಉಂಟುಮಾಡುವ ಹಲವು ಸಂಗತಿಗಳ ಬಗ್ಗೆ ಈ ಕಾರ್ಯಗಾರದಲ್ಲಿ ಚಿಂತನ ಮಂಥನ ನಡೆಯಿತು.

    ಮುಖ್ಯ ಭಾಷಣ ಮಾಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ (ವನ್ಯಜೀವಿ) ಅಜಯ್ ಮಿಶ್ರಾ, ಅನಗತ್ಯ ಲ್ಯಾಂಟೆನಾ (ಕಳೆ) ಸಸ್ಯಗಳ ಬೆಳವಣಿಗೆಯನ್ನು ಹಾಳುಮಾಡುತ್ತಿದೆ. ಇದು ಸಸ್ಯಹಾರಿ ಪ್ರಾಣಿಗಳ ಆಹಾರ ಚಕ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

    ಇದರ ಜೊತೆಗೆ ಮಾನವ-ಪ್ರಾಣಿಗಳ ಸಂಘರ್ಷವು ನಾವು ಎದುರಿಸುತ್ತಿರುವ ಮತ್ತೊಂದು ದೊಡ್ಡ ಸವಾಲಾಗಿದೆ . ಬದಲಾಗುತ್ತಿರುವ ಬೆಳೆ ಪದ್ಧತಿಯು ಪ್ರಾಣಿಗಳನ್ನು ಅದರಲ್ಲೂ ವಿಶೇಷವಾಗಿ ಆನೆಗಳನ್ನು ಸೊಪ್ಪು ಮತ್ತು ಇತರ ಬೆಳೆಗಳನ್ನು ತಿನ್ನಲು ಆಹ್ವಾನಿಸುತ್ತದೆ ಎಂದರು. ಪ್ರಾಣಿಗಳಿಂದ ಉಂಟಾಗುವ ಬೆಳೆ ಹಾನಿಗಳಿಗೆ ವಿಮೆ ಪಡೆಯಲು ಸಂತ್ರಸ್ತರಿಗೆ ಸಹಾಯ ಮಾಡಲು ಅರಣ್ಯ ಇಲಾಖೆ ಇ-ಪರಿಹಾರ ಎಂಬ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ ಎಂದರು.

    ವನ್ಯಜೀವಿ ಸಂರಕ್ಷಣೆಯ ಜೊತಗೆ ಸಸ್ಯ ವೈವಿಧ್ಯವನ್ನು ಉಳಿಸಿ ಬೆಳೆಸಲು ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಕಾರ್ಯಗಾರದಲ್ಲಿ ಪರಿಚಯ ಮಾಡಿಕೊಡಲಾಯಿತು. ಬಿಆರ್‌ಟಿ ಹುಲಿ ಮೀಸಲು ಅರಣ್ಯ ಪ್ರದೇಶವು ಶುಷ್ಕ, ತೇವಾಂಶ, ಅರೆ ನಿತ್ಯಹರಿದ್ವರ್ಣ ಮತ್ತು ನಿತ್ಯಹರಿದ್ವರ್ಣ ಕಾಡಿನ ಸಂಯೋಜನೆಯಾಗಿದೆ. ಅಂದಾಜು 86 ಹುಲಿಗಳು , 600 ಆನೆಗಳಿಗೆ ನೆಲೆಯಾಗಿದೆ. ಸಸ್ಯ ಮತ್ತು ಪ್ರಾಣಿ ಮಾತ್ರವಲ್ಲ, ಬಿಆರ್‌ಟಿ ಹುಲಿ ಮೀಸಲು 10,000 ಜನಸಂಖ್ಯೆಯನ್ನು ಹೊಂದಿದ್ದು ಇದರಲ್ಲಿ ಹೆಚ್ಚಾಗಿ ಸೋಲಿಗ ಸಮುದಾಯಕ್ಕೆ ಸೇರಿದ ಬುಡಕಟ್ಟು ಜನಾಂಗದವರು ಸೇರಿದ್ದಾರೆ.

    ಕಾಡು ಪ್ರಾಣಿಗಳ ಕಳ್ಳ ಬೇಟೆ, ಅತಿಯಾಗಿ ಬೆಳೆಯುವ ಕಳೆ, ಮಾನವ ಪ್ರಾಣಿ ಸಂಘರ್ಷ, ಕಾಡ್ಗಿಚ್ಚು ಇವು ಪರಿಸರ ವ್ಯವಸ್ಥೆಯಲ್ಲಿ ಅಸಮತೋಲನಕ್ಕೆ ಕಾರಣವಾಗುವ ಕೆಲವು ಸಂಗತಿಗಳಾಗಿವೆ ಎಂದು ಬಿಆರ್ ಟಿ ಯ ನಿರ್ದೇಶಕ ಸಂತೋಷ್ ಕುಮಾರ್ ಹೇಳಿದರು.

    ಕಳೆ ತೆಗೆಯುವ ಕಾಯಕ

    ಇಲ್ಲಿರುವ ಸೋಲಿಗ ಸಮುದಾಯವನ್ನು ಕಾಡು ರಕ್ಷಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಕ್ರಿಯವಾಗಿ ಬಳಸಿಕೊಳ್ಳುತ್ತಿದೆ. ಕಾಡಿನ ಕಳೆ ತೆಗೆಯಲು ಈ ಸಮುದಾಯವನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ. ಇನ್ನು ಕೆಲವು ಸೋಲಿಗರು ಅಡವಿ ಹೆಸರಿನಲ್ಲಿ ಸಾವಯವ ಜೇನು ಸಂಗ್ರಹಿಸುವ ಕೆಲಸದಲ್ಲೂ ತೊಡಗಿಕೊಂಡಿದ್ದಾರೆ. ಈ ಜೇನುತುಪ್ಪಕ್ಕೆ ಚಾಮರಾಜನಗರ,ಮೈಸೂರು ಅಲ್ಲದೆ ಬೆಂಗಳೂರಿನಲ್ಲೂ ಒಳ್ಳೆಯ ಬೇಡಿಕೆ ಇದೆ. ಇದರಿಂದ ಆ ಸಮುದಾಯಕ್ಕೆ ಒಳ್ಳೆಯ ಆದಾಯವು ಬರುತ್ತಿದೆ.

    ಜೇನು ಕೃಷಿ

    ಸುದೀರ್ಘ ಕಾಲದಿಂದ ಇರುವ ಕಳೆಯನ್ನು ನಿರ್ಮೂಲನೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಇದು ಹುಲಿ ಮೀಸಲು ಪ್ರದೇಶದಾದ್ಯಂತ ಎಗ್ಲಿಲ್ಲದೆ ಬೆಳೆಯುತ್ತಿದೆ. ಇದರಿಂದ ಸಸ್ಯ ಮತ್ತು ಪ್ರಾಣಿಗಳಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತಿದೆ. ಮತ್ತೊಂದೆಡೆ ಹಲವು ದುಷ್ಕರ್ಮಿಗಳು ಕಾಡ್ಗಿಚ್ಚಿಗೆ ಕಾರಣವಾಗುತ್ತಿದ್ದು ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

    ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರು ಅರಣ್ಯ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಮತ್ತು ವನ್ಯಜೀವಿ ಶಿಕ್ಷಣದ ಬಗ್ಗೆ ಜನರಲ್ಲಿ ಸರಿಯಾದ ಜಾಗೃತಿ ಮೂಡಿಸುವ ಅಗತ್ಯತೆಯ ಬಗ್ಗೆ ದೀರ್ಘವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ಮತ್ತು ಹೆಸರಾಂತ ಪರಿಸರವಾದಿ ನಾಗೇಶ್ ಹೆಗ್ಡೆ ಅವರು ಪರಿಸರ ಪತ್ರಿಕೋದ್ಯಮದ ಕುರಿತು ಉಪನ್ಯಾಸ ನೀಡಿದರು.

    ಸೋಲಿಗ ಸಮುದಾಯಕ್ಕೆ ಸೇರಿದ ಬುಡಕಟ್ಟು ಜನರಿರುವ ಗ್ರಾಮಗಳು, ರಾಗಿಕಲ್ಲುಮಡು ಕ್ಯಾಂಪ್, ಸುವರ್ಣವತಿ ಚಾನೆಲ್ ಪ್ರದೇಶ ಮುಂತಾದ ಪ್ರಮುಖ ತಾಣಗಳಿಗೆ ಮಾಧ್ಯಮ ಸಿಬ್ಬಂದಿ ಭೇಟಿ ನೀಡಿದರು.

    ಕಾರ್ಯಾಗಾರದಲ್ಲಿ ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರದ ವರದಿಗಾರರು ಭಾಗವಹಿಸಿ ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗೆ ಸಂವಾದ ನಡೆಸಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಮತ್ತು ಸಾಮಾಜಿಕ ವೈವಿಧ್ಯತೆಯ ಬಗ್ಗೆ ತಿಳಿದುಕೊಂಡರು.

    ಚಿತ್ರ ಸೌಜನ್ಯ :ಶ್ರೀಜಾ ವಿ ಎನ್

    ಸನತ್ ಪ್ರಸಾದ್
    ಸನತ್ ಪ್ರಸಾದ್
    ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರ. ಬೆಂಗಳೂರಿಗನೆಂದು ಕರೆಸಿಕೊಳ್ಳಲು ಹೆಮ್ಮೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಶಿಕ್ಷಣ, ಆರೋಗ್ಯ, ಎಕನಾಮಿ ವಿಷಯಗಳ ವರದಿಗಾರಿಕೆಯಲ್ಲಿ ಆಸಕ್ತಿ.
    spot_img

    More articles

    9 COMMENTS

    1. Interesting.ಮನೋಜ್ ಕುಮಾರ್ ಅವರ ಸುದೀರ್ಘ ಸಂದರ್ಶನ ನಮ್ಮ ಕಾಫಿ ಮ್ಯಾಗಝೀನ್ ಬೆಳೆಗಾರಕ್ಕಾಗಿ ಮಾಡಿದ ನೆನಪು ಸದಾ ಹಸಿರು.ಅವರಿಂದ ಪಡೆದ ಮಾಹಿತಿ ಸ್ಪಷ್ಟವಾಗಿ ದಾಖಲಾಗಿದೆ.

    2. ಸನತ್ ರವರ ವರದಿ ಮಾನವ ಮತ್ತು ವನ್ಯ ಜೀವಿಗಳಿಗೆ ಸಿಮಿತವಾಗದೆ… ಅರಣ್ಯದಿಂದ ಜೀವನೋಪಾಯದ ಬಗ್ಗೆ ಕೂಡ ವರ್ಣಿಸಿದ್ದಾರೆ… 👌. ಮುಖ್ಯವಾಗಿ
      ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರು ಸೋಶಿಯಲ್ ಮೀಡಿಯಾ ಮೂಲಕ ಹೆಚ್ಚು ಹೆಚ್ಚು ಯುವಕರನ್ನು ಆಕರ್ಷಿಸುವ ಮೂಲಕ ಸಾಕಷ್ಟು ಜಾಗೃತಿ ಮೂಡಿಸಬಹುದು… ನನ್ನ ಅನಿಸಿಕೆ.
      ಬಹಳಷ್ಟು IFS ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

    3. ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ ತಪ್ಪಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಇನ್ನೂ ಹೆಚ್ಚಾಗಿ ಮಾಡಬೇಕು. ಈ ದಿಸೆಯಲ್ಲಿ ಮನೋಜ್ ಕುಮಾರ್ ಅವರು ಮಾಡುತ್ತಿರುವ ಕೆಲಸ ಅನುಕರಣೀಯ

    4. I think the Journalist has done a commendable job by taking the effort to personally look at the measures taken by the government to protect forest and wildlife. I think it is the duty of every individual to preserve natural habitat and not be irresponsible towards it.

    5. ಕಾಡು ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ಕಡಿಮೆ ಮಾಡುವ ಒಂದು ಮಾರ್ಗವೆಂದರೆ ಅಸ್ತಿತ್ವದಲ್ಲಿರುವ ಅರಣ್ಯ ಭೂಮಿಯ ಸಂರಕ್ಷಣೆ.
      ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಆಹಾರ ಸರಪಳಿ ಸಂಪೂರ್ಣವಾಗಿ ತೊಂದರೆಗೀಡಾಗಿದೆ. ವನ್ಯಜೀವಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ತಡೆಯಲು ಆಹಾರ ಜಾಲವನ್ನು ಪುನಃಸ್ಥಾಪಿಸುವುದು ಸಾಧ್ಯವೇ ಈಗಿರುವ ಒಂದು ಸವಾಲಿನ ಪ್ರಶ್ನೆ.

    6. The way this article has been drafted is very noteworthy and impressive. It is clearly evident that the journalist has done a top notch analysis in addressing the ecological issues and its repercussions. Spot on!!

    7. ಮಾನವ ಪ್ರಾಣಿಗಳ ಸಂಗರ್ಶದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸ ನದ ಅವರು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇನ್ನು ಹೆಚ್ಚು ಹೆಚ್ಚು ಜನತೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ, ಹಾಗು ಅದು ಕಾರ್ಯರೂಪಕ್ಕೆ ಬರುವುದು ಎರಡೂ ಆಗಬೇಕು. ಉತ್ತಮ ಮಾಹಿತಿಯುಕ್ತ ಲೇಖನ. ಲೆಖಕರಿಗೂ, ಕನ್ನಡ ಪ್ರೆಸ್ ನವರಿಗೂ ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!