18.8 C
Karnataka
Friday, November 22, 2024

    400 ವರ್ಷಗಳಿಗೊಮ್ಮೆ ಗುರು ಮತ್ತು ಶನಿ ಸನಿಹ ಸಮಾಗಮ; 21ರಂದು ಮಿಸ್ ಮಾಡದೆ ನೋಡಿ

    Must read


    ಹರೋನಹಳ್ಳಿ ಸ್ವಾಮಿ

    ‘ಗಗನವನು ನೋಡು ಮೈ ನೀಲಿಗಟ್ಟುವವರೆಗೆ’ಎಂಬ ಕುವೆಂಪು ಅವರ ಈ ಮಾತು ಅವರು ಈ ಖಗೋಳ ಕಾಯಗಳ ಸಂಮ್ಮೋಹನಕ್ಕೆ ಒಳಗಾಗಿಯೇ ಬರೆದಿದ್ದಾರೆನ್ನಬಹುದು. ಪ್ರತಿದಿನವೂ ಒಂದಲ್ಲಾ ಒಂದು ವೈವಿಧ್ಯಮಯ ಚಟುವಟಿಕೆಗಳು ಈ ನಿಸರ್ಗ ನಮಗೆ ನೀಡಿರುವ ಮುಕ್ತ ಪ್ರಯೋಗಾಲಯವಾಗಿರುವ ಆಕಾಶದಲ್ಲಿ ಸಂಭವಿಸುತ್ತಿರುತ್ತವೆ.

    ಈಗಂತೂ ಚಂದದ ಸ್ವಚ್ಛ ಆಕಾಶ. ವೀಕ್ಷಿಸುವವರಿಗೆ ಸಂಭ್ರಮವೋ ಸಂಭ್ರಮ. ಮಿನುಗುವ ಬಿಳಿ, ನೀಲಿ, ಹಳದಿ, ಕೆಂಪು ಇತ್ಯಾದಿ ಬಣ್ಣಗಳ ನಕ್ಷತ್ರಗಳು, ಮಿನುಗದ ಆದರೆ ಹೊಳೆಯುವ ಬರಿಗಣ್ಣಿಗೆ ಕಾಣುತ್ತಿರುವ ಮಂಗಳ, ಗುರು ಮತ್ತು ಶನಿ ಗ್ರಹಗಳು.(ಈಗ ಕಾಣುತ್ತಿರುವ ಗ್ರಹಗಳಿವು) ಆಗಾಗ್ಗೆ ಮಿಂಚುತ್ತಾ ರಾಕೆಟ್‌ನಂತೆ ಭೂಮಿಗಪ್ಪಳಿಸುವ ಉಲ್ಕೆಗಳು ಮತ್ತು ಉಲ್ಕಾಪಾತ, ರಾಶಿ ನಕ್ಷತ್ರ ಪುಂಜಗಳು, ವಿವಿಧ ವಿನ್ಯಾಸಗಳ ನಕ್ಷತ್ರ ಪುಂಜಗಳು, ಒಂದೆಡೆ ಸ್ಥಿರವಾಗಿ ನಿಂತಂತಿರುವ ಧ್ರುವ ನಕ್ಷತ್ರ, ಸ್ವಲ್ಪ ಆಳವಾಗಿ ಗಮನಿಸಿದರೆ ಕಾಣುವ ನಮ್ಮ ಆಕಾಶಗಂಗೆ ಗೆಲಾಕ್ಸಿಯ ಸುರುಳಿಯೊಂದರ ಭಾಗಗಳು, ಆಗಾಗ ಕಾಣುವ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣಗಳು, ಜೊತೆಗೆ ಆಗೊಮ್ಮೆ ಈಗೊಮ್ಮೆ ಸಂಭವಿಸುವ ಗ್ರಹಕೂಟಗಳು, ನೆಂಟರಂತೆ ಬಂದು ಹೋಗುವ ಧೂಮಕೇತುಗಳು ಹೀಗೆ ಪ್ರತಿಕ್ಷಣವೂ ರೋಚಕತೆಗಳಿಂದ ತುಂಬಿ ಆಕಾಶ ವೀಕ್ಷಕರಿಗೆ ಮತ್ತು ಖಗೋಳ ವಿಜ್ಞಾನಿಗಳಿಗೆ ಸಂಭ್ರಮವನ್ನು ನೀಡುತ್ತಲೇ ಇರುತ್ತದೆ ಈ ಖಗೋಳ ಪ್ರಯೋಗಶಾಲೆ. ಇಲ್ಲಿ ಎಲ್ಲವೂ ಉಚಿತ ಹಾಗೂ ಖಚಿತ ಆದರೆ ಅವುಗಳನ್ನು ನೋಡುವ, ಅರ್ಥಮಾಡಿಕೊಳ್ಳುವ ಹವ್ಯಾಸ ನಮ್ಮದಾಗಬೇಕಾಗಿದೆ.


    ಈಗಿನ ವಿಶೇಷ ಗುರು ಮತ್ತು ಶನಿಗ್ರಹಗಳ ಸನಿಹ ಸಮಾಗಮ.
    ನಮಗೆಲ್ಲಾ ತಿಳಿದಿರುವಂತೆ ನಮ್ಮ ಸೌರವ್ಯೂಹದಲ್ಲಿ ಸೂರ್ಯನ ಸುತ್ತ ವಿವಿಧ ಕಕ್ಷೆಗಳಲ್ಲಿ , ವಿವಿಧ ಅವಧಿಗಳಲ್ಲಿ ಗ್ರಹಗಳು ಸುತ್ತುತ್ತಿರುತ್ತವೆ. ಒಮ್ಮೊಮ್ಮೆ ಆಕಾಶದಲ್ಲಿ ಹಲವು ಗ್ರಹಗಳು ಒಟ್ಟಾಗಿ, ಜೊತೆಗಾರಂತೆ ಜೊತೆಯಾಗಿ ಕಾಣುವ ಅಪರೂಪದ ದೃಶ್ಯಗಳು ಘಟಿಸುತ್ತಿರುತ್ತವೆ. ಈಗ ಅಂತಹುದೇ ವಿಶೇಷ ಘಟನೆ ನಡೆಯುತ್ತಿದೆ.ನಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ನೋಡಲು ಸಾಧ್ಯವಾಗುವಂತಹ ಈ ಘಟನೆ ಬರೀಗಣ್ಣಿಗೆ ಗೋಚರಿಸುತ್ತಿದೆ.

    ಅದೇ ದೈತ್ಯಗ್ರಹಗಳಾದ ಗುರು ಮತ್ತು ಶನಿಗ್ರಹಗಳು ಜೊತೆಯಲ್ಲಿಯೇ ಅಕ್ಕಪಕ್ಕದಲ್ಲಿಯೇ ಇರುವಂತೆ ಕಾಣುತ್ತಿರುವ ದೃಶ್ಯ. ಇದನ್ನು ಗುರು ಮತ್ತು ಶನಿಗ್ರಹಗಳ ಸನಿಹ ಸಮಾಗಮ ಎಂದು ಕರೆಯಲಾಗುತ್ತಿದ್ದು ಇದು 21 ನೇ ಶತಮಾನದ ದೊಡ್ಡ ವಿಶೇಷ ಘಟನೆಯೇ ಆಗಿದೆ. ಈ ಎರಡೂ ದೈತ್ಯ ಗ್ರಹಗಳು ಅತೀ ಸಮೀಪಕ್ಕೆ ಬಂದಿದ್ದು ಭೂಮಿಯಿಂದ ನೋಡುವ ವೀಕ್ಷಕರಿಗೆ ಕಾಣುತ್ತಿರುವುದು 400 ವರ್ಷಗಳಿಗೊಮ್ಮೆ ಸಂಭವಿಸುವ ಘಟನೆಯಾಗಿದೆ. ಒಂದೆ ಜಾಗದಲ್ಲಿ ಈ ಎರಡೂ ಗ್ರಹಗಳನ್ನು ನೋಡುವ ಕೌತುಕಮಯ ಸನ್ನಿವೇಶ ಈಗ ಆಗಸದಲ್ಲಿ ಸಂಭವಿಸಿದ್ದು, ಬರಿಗಣ್ಣಿನಿಂದಲೂ, ಬೈನಾಕ್ಯುಲರ್ ಮತ್ತು ಟೆಲಿಸ್ಕೋಪ್‌ಗಳ ಮೂಲಕವೂ ನೋಡಿ ಮೈದುಂಬಿಕೊಳ್ಳಬಹುದು.

    ಜೊತೆಗೆ ಇದೇ ಡಿಸೆಂಬರ್ 21ನೇ ತಾರೀಖು ಈ ಎರಡೂ ಗ್ರಹಗಳು, ಅತ್ಯಂತ ಸನಿಹ ಗೋಚರಿಸಿ, ಅದ್ಭುತ ಸಮಾಗಮದಂತೆ ಕಾಣುತ್ತದೆ.

    ಈ ಗುರು ಮತ್ತು ಶನಿಗ್ರಹಗಳ ಸಮಾಗಮಕ್ಕೆ ಕಾರಣವೇನು?

    ಸೂರ್ಯನ ಸುತ್ತ ನಮ್ಮ ಸೌರವ್ಯೂಹದ 8 ಗ್ರಹಗಳೂ ವಿವಿಧ ಪಥಗಳಲ್ಲಿ, ಬೇರೆ ಬೇರೆ ಅವಧಿಗಳಲ್ಲಿ ತಿರುಗುತ್ತವೆ. ಸೌರವ್ಯೂಹದ ದೈತ್ಯ ಗ್ರಹಗಳಾದ ಗುರುಗ್ರಹವು ಸೂರ್ಯನ ಸುತ್ತಾ ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿಯು 11 ವರ್ಷ 314 ದಿನಗಳಾದರೆ, ಎರಡನೇ ದೈತ್ಯಗ್ರಹ ಶನಿಯು ತನ್ನ ವಾರ್ಷಿಕ ಚಲನೆ ಪೂರೈಸಲು ತೆಗೆದುಕೊಳ್ಳುವ ಅವಧಿ 29 ವರ್ಷ 168 ದಿನಗಳಾಗಿದೆ. ಜೊತೆಗೆ ಸೂರ್ಯನಿಂದ ಗುರುಗ್ರಹಕ್ಕಿರುವ ದೂರ ಸು.74 ಕೋಟಿ, 10ಲಕ್ಷ ಕಿ.ಮೀ ಗಳಾಗಿದ್ದು, ಶನಿಗ್ರಹವು ಸುಮಾಉ 134 ಕೋಟಿ ಕಿ.ಮೀ. ದೂರದಲ್ಲಿದೆ.ಈ ಗುರು ಮತ್ತು ಶನಿಗ್ರಹಗಳ ದೂರಗಳೂ ಮತ್ತು ವಾರ್ಷಿಕ ಚಲನೆಯು ಬೇರೆ ಬೇರೆಯಾಗಿದ್ದು, ಈಗಿನ ಸನಿಹ ಸಮಾಗಮಕ್ಕೆ ಕಾರಣ ಭೂಮಿ, ಗುರು ಮತ್ತು ಶನಿಗ್ರಹಗಳು ಒಂದೆ ನೇರದಲ್ಲಿ ಕಂಡು ಬರುತ್ತಿರುವುದೇ ಆಗಿದೆ.

    ಈಗ ಕಂಡು ಬರುತ್ತಿರುವ ಗ್ರಹಗಳ ಸಮಾಗಮಕ್ಕೆ ಭೂಮಿ, ಗುರು ಮತ್ತು ಶನಿಗ್ರಹಗಳ ಚಲನೆ, ಅವುಗಳ ದೀರ್ಘವೃತ್ತಾಕಾರದ ಪಥ, ಆ ಕಕ್ಷೆಗಳಿಗೆ ಗ್ರಹಗಳ ಓರೆ ಇವೆಲ್ಲ ಅಂಶಗಳೂ ಕಾರಣವಾಗುತ್ತವೆ.ಎರಡು ಗ್ರಹಗಳು ಸನಿಹ ಸಮಾಗಮ ನಡೆಯುವುದು 20 ವರ್ಷಗಳಿಗೊಮ್ಮೆಯಾದರೂ ಕೂಡ, ಪ್ರಸ್ತುತ ಗುರು ಮತ್ತು ಶನಿಗ್ರಹಗಳು ಅತ್ಯಂತ ಸನಿಹಕ್ಕೆ ಬಂದು ಸಮಾಗಮಿಸಲು 400 ವರ್ಷಗಳೇ ಬೇಕಾಗುತ್ತವೆ.1226 ರಲ್ಲಿ ಮತ್ತು 1623 ರಲ್ಲಿ ಈ ಗುರು ಮತ್ತು ಶನಿಗ್ರಹಗಳ ಸಮಾಗಮ ಸಂಭವಿಸಿತ್ತು.

    ಈ ಗ್ರಹಗಳ ಸಮಾಗಮ ನೋಡುವುದು ಎಲ್ಲಿ? ಹೇಗೆ?

    ಡಿಸೆಂಬರ್ ತಿಂಗಳು ಮುಗಿಯುವವರೆಗೂ ಈ ಗುರು ಮತ್ತು ಶನಿಗ್ರಹಗಳ ಸಮಾಗಮವು ಬರೀಗಣ್ಣಿಗೆ ಗೋಚರಿಸುವುದು. ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದಂತೆಯೇ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳ ಮಧ್ಯೆ ಬರುವ ನೈಋತ್ಯ ದಿಕ್ಕಿನೆಡೆಗೆ ತಿರುಗಿ, ಕ್ಷಿತಿಜದಿಂದ ಸುಮಾರು 400 ಡಿಗ್ರಿಗಳಲ್ಲಿ ತಲೆ ಮೇಲೆತ್ತಿ ನೋಡಿದರೆ ಹೊಳೆಯುವ ದೊಡ್ಡ ಗುರುಗ್ರಹ ಅದರ ಮೇಲೆಯೇ ಒಂದಡಿ ದೂರದಲ್ಲಿ ಶನಿಗ್ರಹ ಎರಡೂ ಕಂಡು ಬರುತ್ತವೆ. ಜೊತೆಗೆ ನೆತ್ತಿಯ ಮೇಲೆ ಕೆಂಪು ಬಣ್ಣದಿಂದ ಹೊಳೆಯುವ ಮಂಗಳ ಗ್ರಹವೂ ಕಾಣುವುದನ್ನು ನೋಡಬಹುದು.

    ಸಂಜೆಯಾಗುತ್ತಿದ್ದಂತೆ ನೈಋತ್ಯ ದಿಕ್ಕಿನಲ್ಲಿ, ನಕ್ಷತ್ರಗಳು ಕಾಣುವ ಮುನ್ನವೇ ಈ ಗುರು ಮತ್ತು ಶನಿಗ್ರಹಗಳು ಗೋಚರಿಸುತ್ತವೆ.
    ಇದೇ ಡಿಸೆಂಬರ್ 21 ರಂದು ಈ ಎರಡೂ ಗ್ರಹಗಳ ಅಂತರ ಅತ್ಯಂತ ಸನಿಹದಲ್ಲಿ ಗೋಚರಿಸುತ್ತವೆ, ಟೆಲಿಸ್ಕೋಪ್‌ನಲ್ಲಿ ಒಮ್ಮೆಲೇ ಎರಡೂ ಗ್ರಹಗಳನ್ನು ನೋಡಬಹುದಾಗಿದೆ.

    ಅವೈಜ್ಞಾನಿಕ ಮಾಹಿತಿಗಳ ಬಗ್ಗೆ ಎಚ್ಚರವಿರಲಿ

    ಆಗಸದಲ್ಲಿ ಗ್ರಹಣಗಳಾದಾಗ, ಇಂತಹ ಗ್ರಹಗಳ ಕೂಟಗಳು ಸಂಭವಿಸಿದಾಗ,ಕೆಲ ಮಾಧ್ಯಮಗಳಲ್ಲಿ ಖಗೋಳದ ತಜ್ಞರಲ್ಲದವರು ಚರ್ಚೆಗಿಳಿದು, ಅವೈಜ್ಞಾನಿಕ ಮಾಹಿತಿ ನೀಡುತ್ತ, ಜನರಲ್ಲಿ ಭೀತಿ ಹುಟ್ಟಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಇಂತಹ ಸುಳ್ಳು ಮಾಹಿತಿಗಳಿಂದ ಸಾರ್ವಜನಿಕರು ಎಚ್ಚರಗೊಂಡು, ಖಗೋಳ ಸತ್ಯಗಳನ್ನು ವೈಜ್ಞಾನಿಕವಾಗಿ ಅರಿತು, ನೋಡಿ ಆನಂದಿಸಬೇಕಾಗಿದೆ.
    ಆಕಾಶ ವೀಕ್ಷಣೆಯ ನಮ್ಮ ಹವ್ಯಾಸಗಳಲ್ಲೊಂದಾಗಿ, ಈ ವಿಶ್ವದರ್ಶನ ಮಾಡುತ್ತಾ ವಿಶ್ವಮಾನವರಾಗುವೆಡೆಗೆ ಸಾಗೋಣ.

    ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಹರೋನಹಳ್ಳಿ ಸ್ವಾಮಿ
    ಪ್ರವೃತ್ತಿಯಿಂದ ಹವ್ಯಾಸಿ ಖಗೋಳ ವೀಕ್ಷಕ ಹಾಗೂ ಗಾಯಕ. ಖಗೋಳ ವೀಕ್ಷಣೆ ಬಗ್ಗೆ ಆಗಾಗ್ಗೆ ಕಾರ್ಯಗಾರಗಳನ್ನು ನಡೆಸುತ್ತಾರೆ. ರಾಜ್ಯಾದ್ಯಂತ ಪವಾಡ ಬಯಲು ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ವೈಜ್ಞಾನಿಕ ತಿಳಿವಳಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮದೆ ಗಾಯನ ತಂಡದೊಂದಿಗೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. ಅವರ ಸಂಪರ್ಕ 9880498300 / 7892154695

    spot_img

    More articles

    3 COMMENTS

    1. ವೈಜ್ಞಾನಿಕ ತಿಳಿವಳಿಕೆ ಹೆಚ್ಚಿಸುವ ಈ ಅಂಕಣಕ್ಕೆ ನನ್ನ ಅಭಿನಂದನೆಗಳು… ಭಾರತೀಯ ಸಂಪ್ರದಾಯಕ್ಕನು ಗುಣವಾಗಿ ಏನಾದ್ರು ಪೂಜೆ ಪುನಸ್ಕಾರ ಗುರು ಮತ್ತು ಶನಿಗೆ ಅವಸರವೇ ತಿಳಿಸಿ… ಬುಕ್ ಮಾಡ್ಕೋತೀನಿ…😄👍

    2. ಕಾಲೇಜು ದಿನಗಳ ಆತ್ಮೀಯ ಗೆಳೆಯ. ಸದಾ ಒಂದಿಲ್ಲೊಂದು ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲ ಪ್ರತಿಭಾನ್ವಿತ. ಗ್ರಹಗಳ ವೀಕ್ಷಣೆಗೆ ಹಿಸ ಆಯಾಮ ನೀಡಿದ ಕೌಶಲ್ಯವಂತ. ತಮ್ಮ ಲೇಖನದ ಮೂಲಕ ಗಮನ ಸೆಳೆದಿದ್ದಾರೆ.

    LEAVE A REPLY

    Please enter your comment!
    Please enter your name here

    Latest article

    error: Content is protected !!