ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳು ಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಪರರ ಕಷ್ಟಮಂ ಸುಖಿ ಅರಿಯನ್ – ಕಷ್ಟ ಸುಖಗಳ ಪರಾಮರ್ಶೆ ಮಾಡುವಂತಹ ವಾಕ್ಯವಿದು. ದೇವರಾಜ ಕವಿಯ ‘ರಾಜಾವಳಿ ಕಥಾಸಾರ’ ದಲ್ಲಿ ಬರುತ್ತದೆ. ಕೆಲವರಿಗೆ ತಾನೂ ಚೆನ್ನಾಗಿದ್ದೇನೆ ಎಂದ ಮಾತ್ರಕ್ಕೆ ಎಲ್ಲರೂ ಚೆನ್ನಾಗಿ ಇರುತ್ತಾರೆ ಎಂಬ ಹುಂಬ ನಂಬಿಕೆ ಇರುತ್ತದೆ. ಸುಖವಿದ್ದಾಗ ಎಲ್ಲರು ಸುಖಿಗಳು ಎಂದು ತಿಳಿಯುವವನು ಕಷ್ಟ ಎಂದಾಗ ಆಚೆ ತಿರುಗಿ ಕೂಡ ನೋಡುವುದಿಲ್ಲ. ಇದೊಂದು ವೈರುಧ್ಯ ಹೌದು!.
ಒಮ್ಮೆ ನದಿ ದಡದಲ್ಲಿ ವ್ಯಕ್ತಿಯೊಬ್ಬ ನಾಮ ಹಾಕಿಕೊಳ್ಳುತ್ತಿರುತ್ತಾನೆ. ಆಚೆ ದಡದಲ್ಲಿರುವ ಇನ್ನೊಬ್ಬನ್ನನ್ನು ಬೇಗ ಬರುವಂತೆ ಕೂಗುತ್ತಾನೆ. ಈ ಭಾಗದ ದಡದಲ್ಲಿದ್ದ ವ್ಯಕ್ತಿ ಗಾಬರಿಯಿಂದ ಏನಾಯ್ತು ಅಂಥ ನೀರನ್ನು ಹಾದು ತರಾತುರಿಯಿಂದ ಹೋದರೆ ನಾಮ ಹಾಕಿ ಕೊಳ್ಳುತ್ತಿದ್ದ ವ್ಯಕ್ತಿ “ನನ್ನ ಯಾವ ಭಾಗದ ನಾಮ ಚೆನ್ನಾಗಿದೆ ಹೇಳು” ಎಂದು ಕೇಳುತ್ತಾನೆ. ಗಾಬರಿಗೊಂಡು ಆತುರದಿಂದ ದಡ ದಾಟಿ ಹೋದ ವ್ಯಕ್ತಿಗೆ ನಿರಾಶೆಯಾಗುತ್ತದೆ. ಅಷ್ಟೇನು ಮಹತ್ವವಲ್ಲದ ಕಾರಣಕ್ಕೆ ತನ್ನ ಸಮಯ ಮತ್ತು ಶ್ರಮವನ್ನು ವ್ಯರ್ಥ ಮಾಡಿಕೊಂಡಂತಾಗುತ್ತದೆ.
ಫ್ರಾನ್ಸಿನ ಮಹಾಕ್ರಾಂತಿಯಲ್ಲಿ ಬರುವ ‘ರೊಟ್ಟಿ ಪ್ರಕರಣ’ವನ್ನು ಇಲ್ಲಿ ಉದಾಹರಿಸಬಹುದು . ಹಸಿವಿನಿಂದ ಕಂಗಾಲಾಗಿದ್ದ ಪ್ರಜೆಗಳು ಅತ್ಯಂತ ವಿಲಾಸಿ ಜೀವನದಲ್ಲಿದ್ದ ರಾಣಿ ಆ್ಯಂಟನಿಟೆ ಬಳಿ “ತಿನ್ನಲು ರೊಟ್ಟಿಯಿಲ್ಲ” ಎಂದು ಕೇಳಿದರೆ ಆಕೆ “ರೊಟ್ಟಿಯಿಲ್ಲದಿದ್ದರೆ ಕೇಕ್ ತೆಗೆದುಕೊಂಡು ತಿನ್ನಿ” ಎಂದಿದ್ದಳಂತೆ. ಸಿರಿಗರ ಬಡಿದವರು ಹಾಗೆನೇ ಅಲ್ವೇ!.
ಹೊಟ್ಟೆ ತುಂಬಿದವನಿಗೆ ಹಸಿವಿನ ಸಂಕಟ ತಿಳಿಯದು. ಬೇಂದ್ರೆಯವರ “ಹಸಿದವನೆ ಹಸಿವೆಯ ಶೂಲಿ” ಎಂಬ ಮಾತುಗಳು ಇಲ್ಲಿ ನೆನಪಿಗೆ ಬರುತ್ತವೆ. ತಾವು ಅನುಭವಿಸಿದಾಗ ಮಾತ್ರ ಆ ಕಷ್ಟದ ತೀವ್ರತೆಯನ್ನು ಕೆಲವರು ಅರಿಯುತ್ತಾರೆ, ಆದರೆ ಸ್ಪಂದಿಸಲು ಮರೆಯುತ್ತಾರೆ.
ಇನ್ನೊಂದು ಪ್ರಸಂಗದಲ್ಲಿ “ರೋಮ್ ನಗರವೇ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ನಿರೋ ಪಿಟೀಲು ಬಾರಿಸುತ್ತಿದ್ದ” ಎಂಬ ವಿಚಾರವೂ ಎಲ್ಲರಿಗೂ ತಿಳಿದಿರುವಂಥದ್ದೆ. ‘ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ’ , ‘ಚಿಂತೆಯಿಲ್ಲದವನಿಗೆ ಸಂತೆಯಲ್ಲಿ ನಿದ್ರೆ’ ಎಂಬ ಗಾದೆಗಳನ್ನು ಸಂವಾದಿಯಾಗಿ ತೆಗೆದುಕೊಳ್ಳಬಹುದು ‘ಅಜ್ಜಿಗೆ ಅರಿವೆ ಚಿಂತೆಯಾದರೆ ಮಗಳಿಗೆ ಬೇರೆಯದೆ ಚಿಂತೆ’ ಎನ್ನುತ್ತಾರಲ್ಲ ಹಾಗೆ ! ಜವಾಬ್ದಾರಿ ಮತ್ತು ಉತ್ತರದಾಯಿತ್ವ ಇಲ್ಲದೆ ಇರುವವರು ಹೀಗೆ ವರ್ತಿಸುವುದು.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.
ಹೊಟ್ಟೆ ತುಂಬಿದವರಿಗೆ ಹಸಿದವನ ಸಂಕಟ ತಿಳಿ ಯೊಲ್ಲ.ಯೆಂಬುದನ್ನು ಸುಮ ವೀಣಾ ಅವರು ಚೆನ್ಗಾಗಿವಿವರಿಸಿದ್ದಾರೆ.👌👌