21.2 C
Karnataka
Sunday, September 22, 2024

    ಪೇಟೆ ಗರಿಷ್ಠದಲ್ಲಿದ್ದಾಗ Royalty ಕುಸಿತದಲ್ಲಿದ್ದಾಗ Loyalty

    Must read

    ಷೇರುಪೇಟೆ ಸೆನ್ಸೆಕ್ಸ್‌ ಶುಕ್ರವಾರ 47 ಸಾವಿರದ ಗಡಿದಾಟಿ ಹೊಸ ದಾಖಲೆ ನಿರ್ಮಿಸಿದೆ. ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.185 ಲಕ್ಷ ಕೋಟಿಯನ್ನು ತಲುಪಿದೆ. ಆದರೆ ಸುಮಾರು 138 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಕೇವಲ 5.81 ಕೋಟಿ ನೋಂದಾಯಿತ ಹೂಡಿಕೆದಾರರಿದ್ದಾರೆ. ಇದು ದೇಶದಲ್ಲಿ ಆರ್ಥಿಕ ಸಾಕ್ಷರತೆಗೆ ನೀಡಲಾಗುತ್ತಿರುವ ಪ್ರಾಶಸ್ತ್ಯವನ್ನು ಬಿಂಬಿಸುತ್ತದೆ. ನ್ಯಾಷನಲ್‌ ಸ್ಟಾಕ್‌ ಎಕ್ಸ್ ಚೇಂಜ್‌ ನ 1605 ಲಿಸ್ಟೆಡ್‌ ಕಂಪನಿಗಳ ವಿವರದಂತೆ ಸಣ್ಣ ಹೂಡಿಕೆದಾರರ ಹೂಡಿಕೆಯ ಪ್ರಮಾಣವು ರೂ.10.58 ಲಕ್ಷ ಕೋಟಿಯಷ್ಟಿದೆ. ಸುಮಾರು ರೂ.185 ಲಕ್ಷ ಕೋಟಿ ಮಾರ್ಕೆಟ್‌ ಕ್ಯಾಪ್‌ ಇರುವ ಪೇಟೆಯಲ್ಲಿ ಕೇವಲ ರೂ.10.58 ಲಕ್ಷ ಕೋಟಿ ಸಣ್ಣ ಹೂಡಿಕೆದಾರರ ಪಾಲು ಎಂಬುದು ನಿರಾಶಾದಾಯಕ ಸಂಗತಿ.

    ಇಂಟರ್‌ ನ್ಯಾಷನಲ್‌ ಕಾಂಪಿಟೇಟಿವ್‌ ಇಂಡೆಕ್ಸ್‌ ನಲ್ಲಿರುವ 141 ದೇಶಗಳಲ್ಲಿ ಭಾರತವು ಮಾರ್ಕೆಟ್‌ ಸೈಜ್‌ ನಲ್ಲಿ ಮೂರನೇ ಸ್ಥಾನದಲ್ಲಿರುವ ಅಂಶ ದೇಶದಲ್ಲಿರುವ ಬಳಕೆದಾರರು ಮತ್ತು ಜಾಗತಿಕ ಮಟ್ಟದಲ್ಲಿರುವ ಬೃಹತ್‌ ಕಂಪನಿಗಳನ್ನು, ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಆದರೆ ಈ ಮಟ್ಟದ ಬಳಕೆದಾರರ ಭಂಡಾರವನ್ನು ದೇಶದ ಅರ್ಥಿಕತೆಯನ್ನು ಸದೃಢಗೊಳಿಸಲು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ನಿರ್ಲಕ್ಷ ತೋರಲಾಗುತ್ತಿದೆ ಎಂದೇ ಭಾವಿಸಬಹುದಾಗಿದೆ,

    ಸ್ಟಾಕ್‌ ಮಾರ್ಕೆಟ್‌ ನಲ್ಲಿ ಹೂಡಿಕೆಯು ದೀರ್ಘಕಾಲೀನವಾಗಿರಬೇಕೆಂಬುದರ ಪ್ರತಿಫಲವಾಗಿ ಹೂಡಿಕೆ ಮಾಡಿದ ಕಂಪನಿಗಳು ಕಾರ್ಪೊರೇಟ್‌ ಫಲಗಳ ಮೂಲಕ ಹೂಡಿಕೆದಾರರಿಗೆ ಹರ್ಷಗೊಳಿಸುವುದು ವಾಸ್ತವ ಸಂಗತಿಯಾಗಿದೆ. ಆಕರ್ಷಕ ಕಾರ್ಪೊರೇಟ್‌ ಫಲಗಳಾದ ಡಿವಿಡೆಂಡ್‌, ಬೋನಸ್‌ ಮುಂತಾದವುಗಳು ಲಭ್ಯವಾಗುವುದೆಂಬ ಕಾರಣವು ಹೂಡಿಕೆದಾರರಲ್ಲಿ ಭಾವನಾತ್ಮಕತೆಯ ವಿಧೇಯತೆ (Loyalty) ಬೆಸೆಯುತ್ತದೆ. ಇದು ಪರಸ್ಪರ ಬೆಳವಣಿಗೆಗೆ ಕಾರಣವಾಗುತ್ತದೆ. ಆದರೆ ಈಗಿನ ದಿನಗಳಲ್ಲಿ ಈ ಬಾಂಧವ್ಯದ ಬೆಸುಗೆ ಸಡಿಲಗೊಂಡು, ಕೇವಲ ವ್ಯವಹಾರಿಕಾತೆ ತಾಂಡವವಾಡುತ್ತಿರುವುದು ಸಾಂಘಿಕ ಶೈಲಿ ಜೀವನಕ್ಕೆ ವಿರುದ್ಧವಾಗಿದೆ. ಷೇರುಪೇಟೆಯಲ್ಲಿ ಕೆಲವು ಕಾರ್ಪೊರೇಟ್‌ ವಲಯದ ಹೂಡಿಕೆದಾರರ ನಡುವಳಿಕೆಗಳು Loyalty ಯನ್ನು ಹೊರದೂಡಿ Royalty ಆಕ್ರಮಿಸಿದಂತೆ ತೋರುತ್ತದೆ.

    1. ಕೈಗೆಟಕುವ ರೀತಿಯಲ್ಲಿ ಷೇರುಗಳು ದೊರೆತಾಗ ಅವುಗಳನ್ನ ಕಡೆಗಣಿಸಿ, ಬೆಲೆ ಏರಿಕೆಯಲ್ಲಿದ್ದಾಗ ಅವುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಹೂಡಿಕೆ ತತ್ವಕ್ಕೆ ವಿರುದ್ಧ. ಡಿವಿಡೆಂಡ್‌ ಗಳನ್ನು ಆದಾಯ ತೆರಿಗೆಯ ಜಾಲಕ್ಕೆ ಈ ವರ್ಷ ಸೇರಿಸಿರುವುದರಿಂದ ಅನೇಕ ಕಂಪನಿಗಳು ವಿತರಿಸಬಹುದಾದ ಡಿವಿಡೆಂಡ್‌ ಗಳಿಗೆ ಸೂಕ್ತ ಬೆಂಬಲ ದೊರೆಯುತ್ತಿಲ್ಲ.
    2. ಸ್ಟ್ರೈಡ್ಸ್‌ ಫಾರ್ಮ ಸೈನ್ಸ್‌ ಎಂದಿರುವ ಕಂಪನಿ 2013 ರಲ್ಲಿ ಸ್ಟ್ರೈಡ್ಸ್‌ ಶಾಸೂನ್‌ ಎಂದಿದ್ದು, ಆಗ ಪ್ರತಿ ಷೇರಿಗೆ ರೂ.500 ರಂತೆ ವಿಶೇಷ ಡಿವಿಡೆಂಡ್‌ ನ್ನು ಘೋಷಿಸಿತ್ತು. ಆ ಸಂದರ್ಭದಲ್ಲಿ ಕಂಪನಿಯು ತನ್ನ ಉತ್ಪನ್ನವನ್ನು ಮಾರಾಟಮಾಡಿ ಲಭ್ಯವಾದ ಹಣವನ್ನು ಈ ರೀತಿ ವಿಶೇಷವಾದ ಡಿವಿಡೆಂಡ್‌ ಎಂದು ಘೋಷಿಸಿ ವಿತರಿಸಿತು. ಆ ಸಮಯದಲ್ಲಿ ಷೇರಿನ ಬೆಲೆಯು ರೂ.1.000 ನ್ನು ದಾಟಿತ್ತು. 2014 ರಲ್ಲಿ ಷೇರಿನ ಬೆಲೆ ರೂ.340 ರವರೆಗೂ ಇಳಿಕೆ ಕಂಡಿತು. 2015 ರಲ್ಲಿ ಮತ್ತೆ ಪ್ರತಿ ಷೇರಿಗೆ ರೂ.105 ರಂತೆ ಡಿವಿಡೆಂಡ್‌ ಘೋಷಿಸಿ ವಿತರಿಸಿತು ಆ ಸಂದರ್ಭದಲ್ಲಿ ಷೇರಿನ ಬೆಲೆ ರೂ.1,400 ನ್ನು ದಾಟಿ ಗರಿಷ್ಠಕ್ಕೆ ಜಿಗಿದಿತ್ತು. 2019 ರಲ್ಲಿ ಷೇರಿನ ಬೆಲೆ ರೂ.290 ರ ಸಮೀಪಕ್ಕೆ ಕುಸಿದು ಈ ವರ್ಷ ರೂ.900 ರವರೆಗೂ ಏರಿಕೆ ಕಂಡಿದೆ. ಇದರ ತಾತ್ಪರ್ಯ ಆಕರ್ಷಕ ಡಿವಿಡೆಂಡ್‌ ವಿತರಣೆಯು ಕಂಪನಿಯ ಷೇರಿನ ಬೆಲೆ ಕುಸಿತ ಕಂಡಾಗ ಉತ್ತಮ ವ್ಯಾಲ್ಯೂ ಪಿಕ್‌ ಆಗುತ್ತದೆ.
    3. ಮೆಜೆಸ್ಕೊ ಷೇರು ಪ್ರತಿ ಷೇರಿಗೆ ರೂ.974 ರಂತೆ ಡಿವಿಡೆಂಡ್‌ ನ್ನು ಘೋಷಿಸಿದೆ. ಷೇರಿನ ಬೆಲೆಯೂ ರೂ.970 ರಲ್ಲಿದೆ. ಲಾಭಾಂಶದ ಮೇಲೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎನ್ನುವ ವಿಶ್ಲೇಷಣೆಗಳು ಹೆಚ್ಚಾದ ಕಾರಣ ಪೇಟೆಯಲ್ಲಿ ಈ ಷೇರಿಗೆ ಹೆಚ್ಚಿನ ಬೆಂಬಲ ದೊರಕುತ್ತಿಲ್ಲವಾದರೂ ಈ ಷೇರಿನ ಬೆಲೆ ವಾರ್ಷಿಕ ಗರಿಷ್ಠಕ್ಕೆ ಜಿಗಿದು ಲಾಭದ ನಗದೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಕಂಪನಿಯಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಜೂನ್‌ ಅಂತ್ಯದ ತ್ರೈಮಾಸಿಕದಲ್ಲಿ ಶೇ.13.05 ರಷ್ಟಿದ್ದು, ಸೆಪ್ಟೆಂಬರ್‌ ಅಂತ್ಯದ ತ್ರೈಮಾಸಿಕದಲ್ಲಿ ಅದು ಶೇ.15.20 ಕ್ಕೆ ಏರಿಕೆ ಕಂಡಿದೆ. ಶೇ.4.1 ರಷ್ಠು ಪ್ರವರ್ತಕರ ಭಾಗಿತ್ವವು ಪ್ಲೆಡ್ಜ್‌ ಆಗಿದ್ದರೂ ಸಹ ಈ ಪ್ರಮಾಣದ ಡಿವಿಡೆಂಡ್‌ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದೇ ಭಾವಿಸಬಹುದಲ್ಲವೆ.
    4. ಕೋಟಕ್‌ ಮಹೀಂದ್ರ ಬ್ಯಾಂಕ್‌ ಷೇರಿನ ರೂ.1,950 .ಈ ಕಂಪನಿಯು ಪ್ರತಿ ಷೇರಿಗೆ ರೂ.0.80 ರಂತೆ ಡಿವಿಡೆಂಡ್‌ ನ್ನು ನೀಡುತ್ತಿದೆ. ಕಳೆದ ವರ್ಷ ಆರ್‌ ಬಿ ಐ ನಿರ್ದೇಶನದ ಕಾರಣ ಡಿವಿಡೆಂಡ್‌ ನೀಡಲಿಲ್ಲ. ಇಲ್ಲಿ ಆದಾಯ ತೆರಿಗೆಯ ಪ್ರಶ್ನೆಯೇ ಇಲ್ಲ.
    5. ಎಂ ಆರ್‌ ಎಫ್‌ ಕಂಪನಿ ಹಿಂದಿನ ವರ್ಷ ಪ್ರತಿ ಷೇರಿಗೆ ರೂ.100 ‌ ಡಿವಿಡೆಂಡ್ ವಿತರಿಸಿದೆ. ಈ ವರ್ಷ ಪ್ರತಿ ಷೇರಿಗೆ ರೂ.30 ರ ಡಿವಿಡೆಂಡ್‌ ನ್ನು ಮಧ್ಯಂತರವಾಗಿ ವಿತರಿಸಿದ ಈ ಷೇರಿನ ಬೆಲೆ ರೂ.77,600 ರಲ್ಲಿದ್ದು ಶುಕ್ರವಾರ ರೂ.299 ರ ಏರಿಕೆ ಕಂಡಿದೆ.
    6. ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಬೆಲೆ ರೂ.1,992 ರಲ್ಲಿದೆ. ಈ ಕಂಪನಿ ಇತ್ತೀಚೆಗೆ ಹಕ್ಕಿನ ಷೇರು ವಿತರಿಸಿದೆ. ಅನೇಕ ವಿದೇಶಿ ಕಂಪನಿಗಳಿಗೆ ತನ್ನ ಅಂಗ ಸಂಸ್ಥೆಗಳ ಭಾಗಿತ್ವವನ್ನು ವಿತರಿಸುವ ಮೂಲಕ ಸಂಪನ್ಮೂಲ ಸಂಗ್ರಹಿಸಿದ ಹಣದ ಮೂಲಕ ಕಂಪನಿಯು ಸಾಲ ಮುಕ್ತವಾಗಲು ಪ್ರಯತ್ನಿಸಿದೆ. ಈ ಕಂಪನಿ ಹಿಂದಿನ ವರ್ಷ ಪ್ರತಿ ಷೇರಿಗೆ ರೂ.6.50 ಯಂತೆ ಡಿವಿಡೆಂಡ್‌ ವಿತರಿಸಿದೆ.
    7. ಯೆಸ್‌ ಬ್ಯಾಂಕ್‌ ಹಿಂದಿನ ವರ್ಷದಲ್ಲಿ ಎದುರಿಸಿದ ಆರ್ಥಿಕ ಒತ್ತಡದಿಂದ ಬ್ಯಾಂಕ್‌ ನ್ನು ಪಾರುಮಾಡಲು ಶೇ.75 ರಷ್ಟು ಷೇರುಗಳನ್ನು ಚಲಾವಣೆಯಿಂದ ಸ್ಥಗಿತಗೊಳಿಸಿ, ರೂ.10 ಲಕ್ಷ ಮುಖಬೆಲೆಯ ಬಾಂಡ್‌ ಗಳನ್ನು ಶೂನ್ಯಗೊಳಿಸದೆ, ಅಲ್ಲದೆ ರೂ.12 ರಂತೆ ಹಕ್ಕಿನ ಷೇರು ವಿತರಿಸಿದೆ. ಸಧ್ಯ ಷೇರಿನ ಬೆಲೆ ರೂ.18 ರ ಸಮೀಪವಿದೆ. ಹಿಂದಿನ ತ್ರೈಮಾಸಿಕದ ಫಲಿತಾಂಶದ ನಂತರ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆಯ ಆಶ್ವಾಸನೆ, ನಂಬಿಕೆಯನ್ನು ಆಡಳಿತ ಮಂಡಳಿ ತಿಳಿಸಿದೆ. ಸಧ್ಯಕ್ಕಂತೂ ಆದಾಯ ತೆರಿಗೆಯ ಚಿಂತೆಯಿಲ್ಲ.
    8. ಬಜಾಜ್‌ ಫೈನಾನ್ಸ್‌ ಲಿಮಿಟೆಡ್ ಕಂಪನಿಯು ಸೆಪ್ಟೆಂಬರ್‌ ತಿಂಗಳ ಅಂತ್ಯದ ಸಾಧನೆಯು ತೃಪ್ತಿಕರವಾಗಿಲ್ಲ ಎಂಬ ಕಾರಣಕ್ಕಾಗಿ ರೂ.3,100 ರೂಪಾಯಿಗಳವರೆಗೂ ಅಕ್ಟೋಬರ್‌ ಮೂರನೇ ವಾರದಲ್ಲಿ ಕುಸಿದಿದ್ದಂತಹ ಷೇರಿನ ಬೆಲೆ ಈ ವಾರದಲ್ಲಿ ರೂ.5,300 ನ್ನು ತಲುಪಿದೆ. ಅಂದರೆ ಕೇವಲ ಎರಡೇ ತಿಂಗಳಲ್ಲಿ ಶೇ.60 ಕ್ಕೂ ಹೆಚ್ಚಿನ ಏರಿಕೆಯನ್ನು ಕಂಡಿದೆ. NBFC ಗಳಿಂದ ಡಿವಿಡೆಂಡ್‌ ಘೋಷಣೆ ಈ ವರ್ಷ ಅನುಮಾನಾಸ್ಫದವಾಗಿರುವಾಗ ಈ ರೀತಿಯ ಏರಿಳಿತಗಳು ಹೂಡಿಕೆದಾರರಿಗೆ ಲಾಭದ ನಗದೀಕರಣಕ್ಕೆ ಅಪೂರ್ವ ಅವಕಾಶ ಒದಗಿಸುತ್ತವೆಯಲ್ಲವೇ?

    ಈ ಎಲ್ಲಾ ಅಂಶಗಳು ಆರ್ಥಿಕ ಸಾಕ್ಷರತೆಯ ಅವಶ್ಯಕತೆಯನ್ನು ಎತ್ತಿ ಹಿಡಿಯುತ್ತದೆ. ಒಟ್ಟಾರೆಯಾಗಿ ಷೇರುಪೇಟೆಗಳು ಗರಿಷ್ಠದಲ್ಲಿದ್ದಾಗ ರಾಯಲ್ಟಿಗೇ ಹೆಚ್ಚಿನ ಆದ್ಯತೆ, ಕುಸಿತದಲ್ಲಿದ್ದಾಗ ಲಾಯಲ್ಟಿಗೆ ಪ್ರಾಮುಖ್ಯತೆ ಕೊಡುವುದು ಸರಿಯೆನಿಸುತ್ತದೆ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!