ಷೇರುಪೇಟೆಯ ಸೂಚ್ಯಂಕಗಳು ಏರುತ್ತಲೇ ಇದ್ದಲ್ಲಿ ಹೂಡಿಕೆದಾರರ ಚಿತ್ತಗಳು ಉಲ್ಲಾಸಮಯವಾಗಿ ವಿಜೃಂಭಿಸುತ್ತವೆ. ಆದರೆ ಅನಿರೀಕ್ಷಿತವಾಗಿ ಇಳಿಕೆಯತ್ತ ಅದು ಭಾರಿ ಇಳಿಕೆಯತ್ತ ತಿರುಗಿದಾಗ ಚಿತ್ತವು ಚಿಂತಾಕ್ರಾಂತವಾಗಿ, ಷೇರು ಪೇಟೆಯೇ ಅಪಾಯ ಎಂಬ ಭಾವನೆ ಮೂಡಿಸುತ್ತದೆ. ಶುಕ್ರವಾರದಂದು 47 ಸಾವಿರದ ಗಡಿ ದಾಟಿ ಸರ್ವಕಾಲೀನ ದಾಖಲೆ ನಿರ್ಮಿಸಿದ ಸೆನ್ಸೆಕ್ಸ್ ಇಂದು ಭಾರಿ ಕುಸಿತಕ್ಕೊಳಗಾಯಿತು .
ದಿನದ ಆರಂಭದಲ್ಲಿ 47,055 ಪಾಯಿಂಟುಗಳನ್ನು ತಲಯಪಿದ ಸೆನ್ಸೆಕ್ಸ್ ಮತ್ತೊಮ್ಮೆ ದಾಖಲೆ ನಿರ್ಮಿಸಿ ನಂತರ ವಿರಮಿಸಿತು. ದಿನದ ಮಧ್ಯಂತರದವರೆಗೂ ಸ್ಥಿರತೆಯಲ್ಲಿದ್ದ ಸೆನ್ಸೆಕ್ಸ್ ನಂತರದಲ್ಲಿ ಸತತವಾದ ಇಳಿಕೆಗೆ ಜಾರಿ 45,553 ರಲ್ಲಿ ಕೊನೆಗೊಂಡಿತು.
ಘಟಾನುಘಟಿ ಕಂಪನಿಗಳಿಗೂ ಟೆನ್ಷನ್
ಸೋಜಿಗವೆಂದರೆ ಘಟಾನುಘಟಿ ಕಂಪನಿಗಳೂ ಸಹ ಭಾರಿ ಒತ್ತಡಕ್ಕೊಳಗಾದವು. ಅವುಗಳಲ್ಲಿ ಪ್ರಮುಖವಾದುದೆಂದರೆ ಲಾರ್ಸನ್ ಅಂಡ್ ಟೋಬ್ರೋ ಕಂಪನಿಯಾಗಿದೆ. ಆರಂಭ ಒಂದೆರಡು ಗಂಟೆಗಳಲ್ಲಿ ಷೇರಿನ ಬೆಲೆ ರೂ.1,338 ರವರೆಗೂ ಜಿಗಿತ ಕಂಡಿತು. ನಂತರ ಇಳಿಕೆಯತ್ತ ತಿರುಗಿತು. ರೂ.1,308 ರ ಸಮೀಪ ಭಾರಿ ಸಂಖ್ಯೆಯ ವಹಿವಾಟು ಪ್ರದರ್ಶಿಸಿತು. ನಂತರ ಅಂತಿಮ ಒಂದು ಗಂಟೆಯ ಸಮಯದಲ್ಲಿ ಇಳಿಕೆಗೂ ಮುನ್ನ ಪ್ರದರ್ಶಿಸಿದ ಸಂಖ್ಯಾಗಾತ್ರಕ್ಕೆ ಸುಮಾರು 7 ಪಟ್ಟು ಹೆಚ್ಚಿನ ವಹಿವಾಟಿನೊಂದಿಗೆ ರೂ.1,180 ರಿಂದ ಪುಟಿದೆದ್ದು ರೂ.1,210 ಕ್ಕೆ ತಲುಪಿ ಚಟುವಟಿಕೆ ಭರಿತವಾಯಿತು. ರೂ.1,235 ರಲ್ಲಿ ಅಂತ್ಯ ಕಂಡಿತು.
ಟಾಟಾ ಸ್ಟೀಲ್ ಕಂಪನಿ ಷೇರಿನ ಬೆಲೆ ರೂ.627 ರಿಂದ ರೂ.585 ರವರೆಗೂ ಕುಸಿದು ರೂ.595 ರಲ್ಲಿ ಕೊನೆಗೊಂಡಿತು.
ಮಹೀಂದ್ರ ಅಂಡ್ ಮಹೀಂದ್ರ ದಿನದ ಆರಂಭದಿಂದಲೇ ರೂ.730 ರಿಂದ ಜಾರುತ್ತಾ ರೂ.660 ಕ್ಕೆ ತಲುಪಿತು. ಪುಟಿದೆದ್ದ ನಂತರ ರೂ.690 ರ ಸಮೀಪ ಭಾರಿ ಸಂಖ್ಯೆಯ ವಹಿವಾಟು ಪ್ರದರ್ಶಿಸಿತು.
ಇತ್ತೀಚೆಗೆ ಭರ್ಜರಿ ಏರಿಕೆ ಪ್ರದರ್ಶಿಸಿದ್ದ ಬಜಾಜ್ ಫೈನಾನ್ಸ್ ಷೇರು ಇಂದು ರೂ.5,230 ರ ಸಮೀಪದಿಂದ ರೂ.4,907 ರವರೆಗೂ ಜಾರಿತು. ಸೋಜಿಗವೆಂದರೆ ಇಳಿಕೆಗೂ ಮುನ್ನ ರೂ.5,150 ರ ಸಮೀಪ ಸುಮಾರು 3.85 ಲಕ್ಷ ಷೇರು ವಹಿವಾಟಾಗಿದ್ದುದು ಮಾರಾಟದ ಒತ್ತಡಕ್ಕೆ ಮೂಲವಾಯಿತು. ದಿನದ ಅಂತ್ಯ ರೂ.5,042 ರ ಸಮೀಪ ಕೊನೆಗೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ರೂ.2,022 ವರೆಗೂ ಏರಿಕೆ ಕಂಡು ಅಲ್ಲಿಂದ ರೂ.1,856 ರವರೆಗೂ ಕುಸಿಯಿತು. ಅಂತ್ಯದಲ್ಲಿ ರೂ.1,939 ರಲ್ಲಿ ನಿಂತಿತು. ವಿಶೇಷವೆಂದರೆ ಮಧ್ಯಾಹ್ನ 2 ಗಂಟೆಯವರೆಗೂ ಅಲ್ಪ ಸಂಖ್ಯೆಯಲ್ಲಿ ವಹಿವಾಟಾಗುತ್ತಿದ್ದು ದಿಢೀರನೆ 1.54 ಲಕ್ಷ ಷೇರುಗಳು ರೂ.1,995 ರಲ್ಲಿ ವಹಿವಾಟಾಗಿವೆ.
ಇವುಗಳಲ್ಲದೆ ಭಾರತಿ ಏರ್ ಟೆಲ್, ಆಕ್ಸಿಸ್ ಬ್ಯಾಂಕ್, ಐ ಸಿ ಐ ಸಿ ಐ ಬ್ಯಾಂಕ್, ಎಸ್ ಬಿ ಐ, ಐ ಟಿ ಸಿ ಗಳೂ ಸಹ ಭಾರಿ ಪ್ರಮಾಣದ ಏರಿಳಿತ ಪ್ರದರ್ಶಿಸಿ ಹೆಚ್ಚಿನ ಕುಸಿತ ತೋರಿವೆ.
ಇವಲ್ಲದೆ ಫಾರ್ಮಾ ವಲಯದ ಪ್ರಮುಖ ಕಂಪನಿಗಳಾದ ಗ್ಲೆನ್ ಮಾರ್ಕ್ ಫಾರ್ಮ, ಆರತಿ ಡ್ರಗ್ಸ್, ಅಲೆಂಬಿಕ್ ಫಾರ್ಮ, ಲುಪಿನ್, ಸಿಪ್ಲಾ, ಅರವಿಂದೋ ಫಾರ್ಮ, ಲೌರಸ್ ಲ್ಯಾಬ್, ಶಿಲ್ಪ ಮೆಡಿ ಮುಂತಾದವು ಒಂದೇ ದಿನ ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸಿದವು.
ಕಂಪನಿಗಳಾದ ಇಂಡಿಯನ್ ಆಯಿಲ್, ಬಿ ಪಿ ಸಿ ಎಲ್, ಹೆಚ್ ಪಿ ಸಿ ಎಲ್, ಗೇಲ್, ಆರ್ ಇ ಸಿ, ಒ ಎನ್ ಜಿ ಸಿ, ಆಯಿಲ್ ಇಂಡಿಯಾ, ಕೆನರಾ ಬ್ಯಾಂಕ್, ಎಸ್ ಬಿ ಐ, ಚೆನ್ನೈ ಪೆಟ್ರೋ, ಎಲ್ ಐ ಸಿ ಹೌಸಿಂಗ್, ಬಿ ಇ ಎಲ್ ಗಳಲ್ಲದೆ ಇತ್ತೀಚೆಗೆ ರಭಸದ ಏರಿಕೆಗೊಳಗಾಗಿದ್ದ ರೇಮಾಂಡ್, ಗ್ರಾಫೈಟ್, ಯು ಪಿ ಎಲ್, ಹೆಚ್ ಸಿ ಎಲ್ ಟೆಕ್, ಇಂಡಿಯಾ ಬುಲ್ ಹೌಸಿಂಗ್, ಗಳೆಲ್ಲವೂ ಹೆಚ್ಚಿನ ಒತ್ತಡದಿಂದ ಕುಸಿದವು.
ಅಚ್ಚರಿಯ ಸಂಗತಿ ಎಂದರೆ ಡಿಸೆಂಬರ್ 7 ರಿಂದ 15 ದಿನಗಳಲ್ಲಿ ಕಂಡಿದ್ದ ವಾರ್ಷಿಕ ಗರಿಷ್ಠದ ಏರಿಕೆಯನ್ನು ಕೇವಲ ಮೂರೇ ಗಂಟೆಗಳಲ್ಲಿ ಅಳಿಸಿ ಹಾಕಿ 15 ದಿನಗಳ ಹಿಂದಿನ ಹಂತಕ್ಕೆ ತಲುಪಿರುವುದು ಏರಿಕೆಯನ್ನು ಮೆಟ್ಟಲುಗಳ ಮೂಲಕ ತಲುಪಿ, ಲಿಫ್ಟ್ ಮೂಲಕ ಇಳಿಕೆ ಪ್ರದರ್ಶಿಸಿದೆ ಎನ್ನಬಹುದು.
ಹೊಸ ರೂಪದ ಕೋವಿಡ್ ಸುದ್ದಿಯಿಂದ ಒತ್ತಡ
ಕೋವಿಡ್ ಲಸಿಕೆ ಬರುತ್ತಿದೆ ಎಲ್ಲವೂ ನಿಯಂತ್ರಣಕ್ಕೆ ಬರುತ್ತದೆ ಎಂಬ ಕಾರಣದಿಂದ ನಿರಂತರವಾಗಿ ಏರಿಕೆ ಕಂಡ ಸೆನ್ಸೆಕ್ಸ್ ಇಂದು ಇಂಗ್ಲೆಂಡ್ ಲ್ಲಿ ಕಾಣಿಸಿಕೊಂಡ ಹೊಸ ಕೋವಿಡ್ ಕಾರಣದಿಂದಲೇ ಹೆಚ್ಚಿನ ಮಾರಾಟದ ಒತ್ತಡ ಉಂಟುಮಾಡಿರುವುದು ಕೇವಲ ವ್ಯವಹಾರಿಕ ಚದುರಂಗದಾಟವೆನ್ನಬಹುದು. ಹಲವಾರು ಕಂಪನಿಗಳ ಷೇರುಗಳು ಭಾರಿ ಕುಸಿತದ ಸಂದರ್ಭದಲ್ಲಿ, ಗರಿಷ್ಠದ ಹಂತದಲ್ಲಿ ಪ್ರದರ್ಶಿತವಾದ ವಹಿವಾಟಿನ ಸಂಖ್ಯಾಗಾತ್ರವು ಪ್ರಾಫಿಟ್ ಬುಕ್- ವ್ಯಾಲ್ಯೂ ಪಿಕ್ ಗಳು ಇಂದು ವಿಜೃಂಭಿಸಿದುದು ಗಮನಾರ್ಹ. ಅಲ್ಲದೆ ಡಿಸೆಂಬರ್ ತಿಂಗಳು ಎಫ್ ಐ ಐ ಗಳಿಗೆ ವರ್ಷಾಂತ್ಯವಾಗಿರುವ ಕಾರಣ ಲಾಭದ ನಗದೀಕರಣ ಮಾಡಿದ್ದಲ್ಲದೆ, ಭಾರಿ ಕುಸಿತದ ಸಂದರ್ಭದಲ್ಲಿ ಮತ್ತೊಮ್ಮೆ ವ್ಯಾಲ್ಯು ಪಿಕ್ ಗೆ ಮುಂದಾಗಿರಬಹುದು.
ಗರಿಷ್ಠದಲ್ಲಿದ್ದಾಗ ದೀರ್ಘಕಾಲೀನ ಹೂಡಿಕೆಗಿಂತ ಲಾಭದ ನಗದೀಕರಣ ಮಾಡಿಕೊಂಡಿದ್ದರೆ ಅದೇ ಷೇರು ಬೆಲೆ ಇಳಿಕೆಗೊಳಗಾದಾಗ ಪುನ: ಖರೀದಿಸಲೂಬಹುದು. ಬಂಡವಾಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಎಂಬುದು ನೆನಪಿರಲಿ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು