ಕೆಲವೊಮ್ಮೆ ನಮ್ಮ ದಿನಚರಿಯಲ್ಲಿ ಯಾರ್ಯಾರದೋ ಯಾವ್ಯಾವುದರ ಜೊತೆಗೋ ಹೊಂದಾಣಿಕೆ ಮಾಡ್ಕೋಬೇಕಾಗುತ್ತೆ.ಮನುಷ್ಯ ಮನುಷ್ಯರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಇದ್ದಿದ್ದೇ.ಆದರೆ ಮನುಷ್ಯನಾಗಿ ಇಲ್ಲಿ ಹುಟ್ಟಿದ ಮೇಲೆ ಸ್ವಜಾತಿ ಮಾತ್ರವಲ್ಲದೇ ಸೊಳ್ಳೆ ನೊಣ ಜಿರಲೆ ಹಲ್ಲಿ ಇಲಿ ಇರುವೆ ಚಿಗಟ ಹೀಗೆ ನಾನಾ ಥರದ ಜೀವಿಗಳೆಲ್ಲವೂ ದಿನ ಇಪ್ಪತ್ನಾಲ್ಕು ಗಂಟೆಯೂ ಒಂದಲ್ಲ ಒಂದು ಬಗೆಯಲ್ಲಿ ‘ಅಲಾ…ನಾವೂ ಬದುಕೋಕೇ ಅಂತಲೇ ಭೂಮಿ ಮೇಲೆ ಹುಟ್ಟಿರುವುದು’ಅಂತ ಎಚ್ಚರಿಸುತ್ತಲೇ ಇರುತ್ತವೆ.ಉದಾಹರಣೆಗೆ ನೋಡಿ.
ನಡುರಾತ್ರಿಯಲ್ಲಿ ಎದ್ದು ನೋಡಿದರೆ ಜಿರಲೆಗಳು ಅದೆಷ್ಟು ಆರಾಮವಾಗಿ ಅಡುಗೆ ಮನೆ ಬಚ್ಚಲು ವಾಷ್ ಬೇಸಿನ್ನು ಹೀಗೆ ಎಲ್ಲೆಡೆ ಓಡಾಡಿಕೊಂಡು, ನಾವು ಮನುಷ್ಯರು ಈ ಮನೆಯಲ್ಲಿ ಇರುವುದೇ ಸುಳ್ಳೆಂಬಂತೆ ಸಂಸಾರ ಸಾಗಿಸುತ್ತವೆ.
ಅದಷ್ಟೇ ಅಲ್ಲ.
ಡೈನಿಂಗ್ ಟೇಬಲ್ಲಿನ ಮೇಲೇ ಕುಳಿತು ಸಹಭೋಜನ ಮಾಡ್ತಾ ಅಡುಗೆ ಮನೆಗೂ ಟಾಯ್ಲೆಟ್ಟಿಗೂ ಅದದೇ ಕಾಲಲ್ಲಿ ಓಡಾಡ್ತಾ ಎಂಜಾಯ್ ಮಾಡ್ತಿರ್ತವೆ.
ದೊಡ್ಡಮ್ಮ ಅಜ್ಜ ಮುತ್ತಜ್ಜಿಯರ ಮೂರು ತಲೆಮಾರಿನ ಸದಸ್ಯರೆಲ್ಲರೂ ತಮ್ಮ ನೀಳ ಮೀಸೆ ,ಅಗಲ ರೆಕ್ಕೆ, ಕಪ್ಪು ಕಂದು ದೇಹದೊಂದಿಗೆ ಠಾಕೂಠೀಕು ಓಡಾಡ್ತಾ ನಮ್ಮನ್ನು ನಮ್ಮ ಈ ಸ್ವಂತ(?) ಮನೆಯಿಂದ ಎತ್ತಂಗಡಿ ಮಾಡಿಸುವುದರ ಕುರಿತು ಗಂಭೀರ ಸಮಾಲೋಚನೆ ಮಾಡ್ತಿರ್ತವೆ. ಮೈ ಉರಿದು ಕೆಂಪು ಹಿಟ್ಟೋ ಕಪ್ಪು ಹಿಟ್ಟೊ ಹೊಡೆದು ಅಟ್ಟಿದೆವು ಎಂದುಕೊಳ್ಳಿ.ಆಳ ಪಾತಾಳ ತಳಾತಳಗೊಳೊಳಗೆ ಅವು ಸರಿದು ಕುಳಿತು ನೀವು ಅತ್ತ ಹೋಗಿ ಕತ್ತಲು ಆವರಿಸುವುದನ್ನೇ ಕಾದು ಮತ್ತೆ ಮೀಸೆ ತಿರುವುತ್ತಾ ‘ಹೆಂಗೆ ನಾವು’ಎನ್ನುತ್ತಾ ಆಚೆ ಬರುತ್ತವೆ.
ಸೊಳ್ಳೆಗಳಿನ್ನೇನೂ ‘ಸಂಗೀತವೇ ನಮ್ಮ ಉಸಿರು’ ಅನ್ನುವಂತೆ ಕಚೇರಿ ನಡೆಸುತ್ತ ಬಂದು ಭಲೆಭಲೇಭಲೆ ದೊರಕಿತು ಎನಗೆ ಇಂದು ಸುಭೋಜನ ಎನ್ನುವಂತೆ ನಾವು ಒಂದೇ ಒಂದು ಸೆಕೆಂಡು ತಟಸ್ಥ ಸ್ಥಿತಿಯಲ್ಲಿ ಕೂರುವುದನ್ನೇ ಕಾಯ್ದು ಸಾಧ್ಯವಾದಷ್ಟು ನೆತ್ತರು ಹೀರಿ ನಾಳೆಗೂ ನಾಡಿದ್ದಿಗೂ ಇನ್ನೊಂದು ತಿಂಗಳಿನವರೆಗೂ ಹಾರುವ ಕಷ್ಟ ಬ್ಯಾಡೆಂಬಂತೆ ಹೀರಿ ಹೀರಿ ಒಬೇಸ್ ಆಗಿ ಹಾರಲಾರದೆ ಹಾರುವಾಗ ಕೈಗೆ ಸಿಕ್ಕಿ ಟಪ್ ಎನಿಸಿದರೆ ಕೈಯೆಲ್ಲ ಕೆಂಪುಕೆಂಪು.ಇಷ್ಯೀ.
ಇರುವೆಗಳಂತೂ ‘ಓ..ಇವತ್ತು ಜಾಮೂನು ಮಾಡಿದ್ರಾ..ನಮಗಿಷ್ಟ’
ಅಂತ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳ ಸಂತಾನ ಸಂಸಾರವಂದಿಗರಾಗಿ ಬಂದು ತಿಂದು ಲಕ್ಷ್ಮಣ ರೇಖೆ ಬರೆಯುವ ತನಕ ಹೊರಡವುದಿಲ್ಲ ಅಂತ ಪಟ್ಟಾಗಿ ಕೂತು ಜಾಮೂನು ಕುರಿತು ಪಟ್ಟಾಂಗ ಹೊಡಿಯುವುದಲ್ಲದೇ ಚಳಿಗಾಲಕ್ಕಿರಲಿ ಅಂತ ತಮಗಿಂತಲೂ ಹತ್ತು ಪಟ್ಟು ದಪ್ಪದ ಜಾಮೂನು ತುಣುಕನ್ನು ಸಲೀಸಾಗಿ ತಮ್ಮ ಎರಡು ಕಾಲಲ್ಲಿ ಹಿಡಿದು ರಾಕೆಟ್ ವೇಗದಲ್ಲಿ ಗೂಡಿಗೆ ಹೋಗ್ತಾ ಎದುರಿಗೆ ಸಿಕ್ಕವರನ್ನು ಇದೇ ದಾರಿಯಲ್ಲಿ ಸ್ರೈಟು ಹೋಗಿ ಲೆಫ್ಟಿಗೆ ತಿರುಗಿದ್ರೆ ಜಾಮೂನು ಪಾತ್ರೆ ಸಿಗುತ್ತೆ ಅಂತ ಲೋಕೆಶನ್ನು ಹೇಳಿ ಮತ್ತೆ ಓಡಲಾರಂಭಿಸುತ್ತವೆ.
ಹೀಗೆ ನಾವು ಕಟ್ಟಿಸಿದ ಈ ಮನೆಯಲ್ಲಿ ಸುತ್ತಲಿನ ಸಮಸ್ತ ಕ್ರಿಮಿಕೀಟಾದಿಗಳಿಗೂ ವಾಸಿಸುವ ಹಕ್ಕು ಇದೆಯೆಂದು ಅರ್ಥವಾದ ಮೇಲೆ ಸಮಬಾಳು ಸಮಪಾಲು ಮಾತನ್ನು ಆಗಾಗ ಗೆಪ್ತಿಗೆ ತಂದುಕೊಂಡು ಒಮ್ಮೊಮ್ಮೆ ಈ ಸಹಜೀವನ ಸಹಿಸಲಾಗದ ತೊಂದರೆ ಕೊಟ್ಟು ವಿಷಪ್ರಯೋಗ ಮಾಡುವಾಗೆಲ್ಲಾ ಸಹಿಸಲಾಗದ ಪಾಪ ಪ್ರಜ್ಞೆಯಲ್ಲಿ ಒದ್ದಾಡುವಂತೆ ಮಾಡುತ್ತವೆ.
ಇನ್ನು ನಮ್ಮ ಮೂಷಕಗಳದ್ದು ಎಲ್ಲಕ್ಕೂ ದೊಡ್ಡ ಸ್ಟೋರಿ. ಔಷಧಿ ಇಟ್ಟು ,ಇಲಿಬೋನು, ಕತ್ತರಿ ,ಇಲಿಗಮ್ಮು ಏನೇ ತಂದಿಟ್ರೂ
‘ನೀನೇನೇ ಮಾಡು
ಹೆದರುವೆನೇನು,
ಬದುಕುವೆನು ನಾನು
ಬಾಳುವೆನು ನಾನು ‘
ಅಂತ ಹಾಯಾಗಿ ಓಡಾಡ್ತಾ ವರ್ಷಕ್ಕೊಂದೆರಡು ಬಾರಿ ಸಹಜವಾಗಿ ಸಂಭವಿಸುವ ಇಲಿಸಾವನ್ನು ಓಹೋ ಔಷ್ದಿ ತಿಂದು ಸತ್ತೋಗಿದೆ ಅಂತ ನಾವು ಭ್ರಮಿಸಿ ತೃಪ್ತಿ ಪಟ್ಟುಕೊಳ್ಳುವಂತೆ ಮಾಡ್ತವೆ.
ದೊಡ್ಡಿಲಿ ಚಿಕ್ಕಿಲಿ ಅಮ್ಮಿಲಿ ಅಪ್ಪಿಲಿಗಳ ನಡುರಾತ್ರಿಯ ಪ್ರಣಯದ ಸದ್ದುಗಳಿಗೆ ಆಗಾಗ ಭಯ ಹುಟ್ಟಿ ಜೊತೆಗೆ ಅಸೂಯೆಯೂ ಆಗಿ ಅಲ್ಲಿ ಏನಾಗ್ತಿದೆಯೋ ,ಕಿಟಿಕಿ ಮುರಿತಿರಬಹುದಾ,ಗೋಡೆ ಕೊರೆತಿರಬಹುದಾ ಅಂತ ಆತಂಕದಲ್ಲಿ ಕಳೆದದ್ದೂ ಇದೆ. ಇಲಿಯನ್ನು ಅಟ್ಟೋಡಿಸಲು ಬೆಕ್ಕು ಸಾಕುವ ಮನಸ್ಸು ಮಾಡಿ ಆ ಪ್ರಯೋಗವೂ ಸೋತ ಮೇಲೆ ಸಹಬಾಳ್ವೆಯೊಂದೇ ಮಾರ್ಗವಾಗಿ ಹಾಗೇ ಬದುಕುತ್ತಿದ್ದೇನೆ ಕೂಡ.
ಮೇಲೆ ಹೇಳಿದ ಕ್ರಿಮಿಕೀಟಾದಿಗಳು ಇಲಿಹೆಗ್ಗಣಗಳು ಪುರಾತನ ಕಾಲದಿಂದಲೂ ಸಹಜೀವನಕ್ಕೆ ನಮ್ಮನ್ನು ಬಗ್ಗಿಸಿಕೊಂಡಿರುವುದರಿಂದ ಕಷ್ಟವಾದರೂ ಹೇಗೊ ಒಗ್ಗಿದ್ದೇವೆ.
ಆದರೆ ಈ ಜಾಗತಿಕ ತಾಪಮಾನದ ಏರಿಕೆಯೋ ಅಕಾಲಿಕ ಮಳೆಯೋ ಮತ್ತೊಂದೋ ಆಗಿ ಕಳೆದ ಒಂದೂವರೆ ದಶಕದಿಂದ ನಮ್ಮ ಆಲೂರು ಸಕಲೇಶಪುರ ಭಾಗದ ಮನೆಗಳಲ್ಲಿ ಕಂಬಳಿಹುಳುಗಳು ಇನ್ನಿಲ್ಲದಂತೆ ಹೆಚ್ಚಾಗುತ್ತಿವೆ.
ಮೊದಲ ಮಳೆ ಬಂದು ಮೂರು ದಿನವಾಗುವುದೇ ತಡ.
ಅದ್ಯಾವಾಗ ಲವ್ ಮಾಡಿ ಮೊಟ್ಟೆ ಇಟ್ಟಿರ್ತವೋ ಗೊತ್ತಿಲ್ಲ.ಕೂದಲಿಗಿಂತಲೂ ತೆಳುವಾದ ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕಾಣುವಂಥ ಮರಿಗಳು ಸೂರಿನಲ್ಲಿ ಹೆಂಚಿನ ಮೇಲೆ ಗೋಡೆಯ ಮೇಲೆ ಕಂಪೌಂಡಿನ ಮೇಲೆ ಗುಂಪುಗುಂಪಾಗಿ ಕಾಣಲಾರಂಭಿಸುತ್ತವೆ.
ಮೂರು ದಿನ ಅಂಬೆಗಾಲು. ಹಾಗಾಗಿ ಹೆಚ್ಚಿಗೆ ದೂರ ಹೋಗುವುದಿಲ್ಲ. ಅದೇ ಸರ್ಕಲ್ಲು ಶೇಪಿನಲ್ಲಿ ಮುಲುಮುಲು ಮಾಡ್ಕೊಂಡು ಇರುತ್ತವೆ.
ವಾರ ಕಳೆಯುವುದೇ ತಡ.ಕಿರುಬೆರಳು ಗಾತ್ರದ ಮೈತುಂಬ ಚೂರಿಯಂಥ ಕೂದಲುಗಳನ್ನು ತುಂಬಿಕೊಂಡ ಹುಳುಗಳು ಬುಳುಬುಳು ಓಡಾಟ ಆರಂಬಿಸುತ್ತವೆ. ‘ಇಲ್ಲ ಇಲ್ಲ.,ಏನ್ ಮಾಡಿದ್ರೂ ವರ್ಷದ ಆರು ತಿಂಗಳು ನಾವೂ ನಿಮ್ಮೊಂದಿಗೆ ಇರೋದೆಯಾ’ ಅಂತ ಪಣ ತೊಟ್ಟು ಮಾಡು ಸೂರು ಗೋಡೆ ಕಂಪೌಂಡು ಎಲ್ಲದರ ಮೇಲೂ ತಮ್ಮ ಸಾಮ್ರಾಜ್ಯ ಸ್ಥಾಪಿಸಿಕೊಂಡು ನಿರಾತಂಕವಾಗಿ ತಮ್ಮ ಮುಂದಿನ ಹಂತಗಳನ್ನು ನಿರ್ವಿಘ್ನವಾಗಿ ಮುಂದುವರಿಸಿಕೊಳ್ಳುತ್ತಿರುವುದು ನೀವೇನಾದರೂ ನೋಡಿದ್ರೆ ನಮ್ ಕಡೆಗೆ ತಲೆ ಹಾಕಿಯೂ ಮಲಗಲ್ಲ ಬಿಡಿ.
ಬೇರೆ ಯಾವುದರ ಜೊತೆಗಾದರೂ ಸಹಜೀವನ ಸಾಧ್ಯವಾಗಬಹುದು.ಆದರೆ ಕಂಬಳಿಹುಳುವಿನ ಜೊತೆಗೆ??
ಏನು ಮಾಡುವುದು? -ನಾವು ಮನೆಬಿಟ್ಟು ಹೋಗಲಾಗದ ಕಾರಣ ವಿಧಿಯಿರದೇ ಕಂಬಳಿಹುಳದ ಜೊತೆಗೂ ಹೊಂದಾಣಿಕೆ ಮಾಡ್ಕೋಬೇಕು ,ಅದರ ಅಮ್ಮನ ಜೊತೆಗೂ ಹೊಂದಾಣಿಕೆ ಮಾಡ್ಕೋಬೇಕು.
‘ಓ ಚಿಟ್ಟೆ ಜೊತೆಗಾ…ನಾವು ಆಗಾಗ ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ’
ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಿದೆ ಅಂತ ಹಳೆನೆನಪುಗಳಿಗೆ ಮುಗುಳ್ನಗುತ್ತಾ ಅರೆಗಣ್ಣಿನಲ್ಲಿ ಜಾರಬೇಡಿ. ಇದು ಕಂಬಳುಹುಳ ಅಗುವ ಚಿಟ್ಟೆಯ ಬಗ್ಗೆ ಹೇಳ್ತಿರುವುದು.
ಜೂನ್ ಮಧ್ಯದಿಂದ ಶುರುವಾಗುವ ಈ ಕಂಬಳಿಹುಳುಗಳು ಆರಂಭದಲ್ಲಿ ಅದೆಲ್ಲಿ ಕೋಶವಾಗಿರ್ತವೋ ಗೊತ್ತಿಲ್ಲ. ಮಳೆ ಬಂದ ನಾಕು ದಿನಕ್ಕೆ ಸಣ್ಣಗಾತ್ರದ ಚಿಟ್ಟೆಗಳು ಗೋಡೆಮಾಡಿನ ತುಂಬೆಲ್ಲಾ ಪಟಗುಡುತ್ತಾ ಪ್ರಣಯ ಮುಗಿಸಿ ಮೊಟ್ಟೆ ಇಟ್ಟು ನಾಕಾರು ದಿನದೊಳಗೆ ಬುಳುಬುಳು ಮರಿ ಓಡಾಡಲಾರಂಬಿಸುತ್ತವೆ.ಮೊದಲ ಅಷ್ಟು ದಿನ ಸೂರನ್ನು ಗೋಡೆಯನ್ನು ನೇಪುಲು ಪೊರಕೆಯಲ್ಲು ಗುಡಿಸಿ ಗುಡಿಸಿ ಮೊರದ ತುಂಬಾ ಎತ್ತಿಹಾಕಿ ಒಳಬರುವ ಅಷ್ಟರಲ್ಲಾಗಲೇ ಮತ್ತೆ ಅದದೇ ಜಾಗದಲ್ಲಿ ಅಷ್ಟೇ ಹುಳುಗಳು ಪಿತುಗುಡುತ್ತಿರುವುದನ್ನ ನೋಡಿದಾಗ ಹಿಂದೆ ಇದ್ದ ರಕ್ತಬೀಜಾಸುರನ ವಂಶವಿರಬಹುದೇ ಅಂತ ಅನುಮಾನವೂ ಆಗುವುದುಂಟು.ಗುಡಿಸಿ ಹೊರಹಾಕಿದಾಗೆಲ್ಲಾ ಅಕ್ಕಪಕ್ಕದವರಿಂದ ಬಿಟ್ಟಿಯಾಗಿ ಒಂದು ಉಪದೇಶ ಸಿಕ್ಕೋದುಂಟು.
‘ಒಲೆಗಿಲೆಗೆ ಹಾಕಬೇಡ ಮತ್ತೆ..ನೂರು ಪಟ್ಟು ಜಾಸ್ತಿ ಆಗ್ತವೆ.ಮನೆದೇವರಿಗೆ ಹರಕೆ ಹೊತ್ರೆ ಮನೆಲೂ ಬೆಳೆಯಲ್ಲೂ ಇರುವ ಹುಳಹುಪ್ಟೆ ಕಂಡೇ ಕಾಣೇ ಅನ್ನಂಗೆ ಮಾಯ ಆಯ್ತವೆ’
ಕಂಬಳಿಹುಳ ಒಲೆಗೆ ಹಾಕಿ ಸುಡುವಂಥ ಜೀವವಿರೋಧಿ ಕೃತ್ಯವನ್ನು ನಾ ಎಂದೂ ಮಾಡದವಳಾದರೂ ಈ ಹುಳ ಗುಡಿಸುವ ಕೆಲಸದಿಂದ ಮುಕ್ತಿಗಾಗಿ ಮನೆದೇವರಿಗೆ ನಮ್ಮನೆಯವರಿಂದ ಕೈ ಮುಗಿಸಿದ್ದೆ.
ಯಾಕೋ ದೇವರು ನಮ್ಮ ಇದೊಂದು ಕೇಳ್ಮೆಗೆ ಮಾತ್ರ ಗಮನಕೊಡದೆ ವರ್ಷದಿಂದ ವರ್ಷಕ್ಕೆ ಹಾಗೇ ಸೃಷ್ಟಿ ಕ್ರಿಯೆ ನಡೆಸ ಹತ್ತಿದಾಗ ನಾನೂ ಸೋತು ಈ ಕರಿಕರೀ ಕಂಬಳಿಹುಳುವನ್ನೇ ಮುದ್ದಿಸಲಾರಂಭಿಸಿದೆ.
ನೋಡುವವರ ಕಣ್ಣಿಗೆ ಕಂಬಳುಹುಳು ವಿಚಿತ್ರವೂ ಭಯಾನಕವೂ ಅನಿಸುವಾಗ ನಾನು ಅವುಗಳನ್ನು ಅಂಗೈಮೇಲೆ ಹತ್ತಿಸಿಕೊಂಡು ವಂಡರ್ ಲಾ ಡ್ರೈ ಗೇಮ್ಸನಂತೆ ಬೆರಳು ಉಯ್ಯಲೆಯಲ್ಲಿ ಜೋಲಿಜೋಕಾಲಿ ಹೊಡಿಸಿ ಹೊರಗೆ ಕಳೆ ಗಿಡದ ಮೇಲೆ ಬಿಡುತ್ತೇನೆ.
‘ಇಸ್ಸೀ’ ಅಂತ ಅಂದ್ರಾ.
ಒಂದ ಸರ್ತಿ ನಮ್ ಕಂಬಳಿ ಹುಳು ಅಂಗೈ ಮೇಲೆ ಹತ್ತಿ ಕಚಗುಳಿ ಇಡಲಾರಂಭಿಸಿತು ಅಂದ್ರೆ ಯಾವ ಪ್ರೇಮಿಯೂ ಅಷ್ಟರ ಮಟ್ಟಿಗೆ ನೇವರಿಸುವುದಕ್ಕೆ ಸಾಧ್ಯವಿಲ್ಲದಂತೆ ಗುಳುಗುಳುಗುಡಿಸುತ್ತವೆ.
ಮೈಮೇಲೆ ಬಿದ್ರೂ ಆರಾಮವಾಗಿ ಓಡಾಡಿಕೊಂಡಿರಿ ಅಂದ್ರೆ ಅವುಗಳಿಂದ ಉಪದ್ರ ಇಲ್ಲ.
ಅದೇ ಬಲವಂತವಾಗಿ ನೀವೇನಾದರೂ ನಿಮ್ಮ ಮೈಯಿಂದ ಕಿತ್ತು ತೆಗೆದು ಬಿಸಾಡ ನೋಡಿದ್ರೋ ನಿಮ್ಮ ಕಥೆ ಮುಗೀತು.ತನ್ನ ಮೇಲಿನ ಕಂಬಳುಮುಳ್ಳುಗಳನ್ನೆಲ್ಲ ಅಲ್ಲೇ ಉದುರಿಸಿ ಶರಪರ ಕೆರೆತ ಹುಟ್ಟಿಸಿ ದದ್ದು ಬರಿಸಿ ನರಕದರ್ಶನ ಕೊಟ್ಟು ಬಿಸಾಟ ಮೇಲೆ ಎಸೆದಲ್ಲಿ ನುಲಿಯುತ್ತಾ ಓಡಾಡಿಕೊಂಡಿರುತ್ತವೆ.
ಪಾಪ.
ಎಷ್ಟೇ ಆಗಲಿ ದೇವರು ಸೃಷ್ಟಿಸಿದ ಜೀವ ಅಲ್ವಾ.ನಾವು ಪ್ರೀತಿಸ್ದೇ ಹೋದರೆ ಇನ್ಯಾರು ಪ್ರೀತಿಸ್ತಾರೆ ಅಲ್ವಾ? ಕಾಲಕ್ರಮದಲ್ಲಿ ಈ ಕರಿಜೀವಿಗಳ ಮೇಲೆ ನಂಗೊಂಥರ ಮುದ್ದು ಹುಟ್ತು.ನನ್ನ ಒಂಟಿ ದಿನಗಳಿಗೆ ಸಾಥ್ ಕೊಡುತ್ತವೆ ಅಂತಲೋ ಅವೂ ಕುಟುಂಬದ ಮಂದಿ ಹಂಗಾಗಿದಾವೆ ಅಂತಲೋ ನಾನು ಅವುಗಳನ್ನು ಕೊಲ್ಲುವ ಸುಡುವ ಕೆಲಸ ಮಾಡ್ತಿರಲಿಲ್ಲ.
ಅವೂ ಹಾಗೆ.
ನಂಗೆ ಅಭ್ಯಾಸ ಆಗಿ ಅವುಗಳ ಮದ್ಯದಲ್ಲೇ ನಿಂತು ಮಾತಾಡ್ತಿದ್ದರೂ ಮೆಚ್ಕೊತಿದ್ವೇ ಹೊರತು ಚುಚ್ಚತ್ತಿರಲಿಲ್ಲ.ಅಟ್ಟದಲ್ಲಿ ದಟ್ಟವಾಗಿ ವಾಸ ಹಾಕಿಕೊಂಡಿದ್ದ ಈ ಕಂಬಳಿ ಹುಳುಗಳು ನಾನು ನೆಟ್ವರ್ಕಿಗಾಗಿ ಅಟ್ಟದಲ್ಲಿಟ್ಟಿರುತ್ತಿದ್ದ ಫೋನಿಗೆ ಕರೆ ಬಂದಾಗಲೆಲ್ಲ ಅವುಗಳ ಯೋಗಕ್ಷೇಮವನ್ನೂ ವಿಚಾರಿಸಿಕೊಂಡು ಬರುವಂತೆ ಅಭ್ಯಾಸ ಆಗಿಹೋದವು.
ಈ ಬಗೆಯ ನನ್ನ ಮತ್ತು ಕಂಬಳಿಹುಳುವಿನ ಪ್ರೀತಿ ಮನೆಯವರೆಲ್ಲರ ಮುನಿಸಿಗೂ ಕಾರಣವಾಗಿ ನನಗೂ ಆ ಕಂಬಳುಹುಳುಗಳಿಗೂ ಪಾಯಿಸನ್ ಹಾಕಿ ಸಾಯಿಸ್ಬಿಡಬೇಕು ಅನ್ನುವವರೆಗೂ ಮುಂದುವರೆಯಿತು.ಆ ನಂತರ ನಾನು ಅಪರಾಧಂಗಳ ಮನ್ನಿಸಿ ದಮ್ಮಯ್ಯ ಅಂತ ಮನೆಯವರ ಬಳಿ ಮಾಫ್ ತಗೊಂಡು ಅಂದಿನಿಂದ ಅಂದಂದಿನ ಕಂಬಳಿಹುಳು ಗಳನ್ನು ಅಂದಂದೇ ಮನೆಯಿಂದ ನಾಮವಶೇಷ ಮಾಡಬೇಕು ಎನ್ನುವ ಪಣ ತೊಟ್ಟು ಎರಡೆರಡು ಬಾರಿ ಗುಡಿಸಿ ಮೊರದ ತುಂಬಾ ಳುಮುಳುಗುಡುವ ಕಂಬಳುಹುಳಗಳನ್ನು ದೂರದ ತೋಟಕ್ಕೆ ಸುರಿದು ತಿಂದುಂಡು ಆರಾಮವಾಗಿರಿ ಎನ್ನುತ್ತಾ ಹರಸಿ ಬರ್ತಿದ್ದೆ.ಆದರೆ ಗ್ರಹಚಾರವೋ ಮೋಹವೋ ಗುಡಿಸಿದಷ್ಟೂ ಹುಡುಕಿಕೊಂಡು ಮತ್ತೆ ಬರ್ತಿದ್ವು ಅವು.
ದಿನಚರಿ ಪುನರಾವರ್ತನೆ.
ಹೀಗೇ ಸಹಜೀವನ ಏರಿಗೇಳೆಯುತ್ತಾ ನೀರಿಗಿಳಿಯುತ್ತ ಸಾಗುತ್ತಿದ್ದಾಗ ಒಂದಾನೊಂದು ದಿನ ಒಂದು ಕಂಬಳಿಹುಳಕ್ಕೆ ಮನದೊಡತಿಯ ಮೇಲೆ ವಿಪರೀತ ಮುದ್ದುಕ್ಕಿ ಅಟ್ಟಕ್ಕೆ ಫೋನಿಗೆ ಉತ್ತರಿಸಲು ಹೋಗಿದ್ದಾಗ ಕಣ್ಣೊಳಗೇ ನೇರವಾಗಿ ಬಿದ್ದು ಮುದ್ದಿಡಲು ಹೋಗಿ ತನ್ನ ಮುದ್ದು ಚೂರಿಯಂತ ಕೂದಲುಗಳನ್ನು ನನ್ನ ಕಣ್ಣಿನೊಳಕ್ಕೆ ಇಳಿಸಿಬಿಡ್ತು.
ಅರೆ, ಇದೇನಾಯ್ತು ಅಂತ ರೆಪ್ಪೆ ಪಟಗುಡಿಸುವಷ್ಟರಲ್ಲಿ ಕಣ್ಣೊಳಗಿಳಿದಿದ್ದ ಕೂದಲು ನಾಟಿಕೊಂಡು ಕೆಲಸ ಆರಂಭಿಸಿ ಅಸಾಧ್ಯ ಉರಿಯೂ ನೋವೂ ಕಿರಿಕಿರಿಯೂ ಕೆರೆತವೂ ಕೆಂಪೂ ಆಗಿ ಇನ್ನು ತಡೆಯಲಾರೆ ಎನಿಸುವಷ್ಟು ಹಿಂಸೆ ಶುರುವಾಯ್ತು.
ಮೊದಲ ಬಾರಿಗೆ ಈ ಕರಿ ಗೆಳೆಯರ ಮೇಲೆ ಕೋಪ ಉಂಟಾಯ್ತು.ಎರಡು ಗಂಟೆ ಕಳೆಯುತ್ತಲೂ ಕಣ್ಣು ಅಸಾಧ್ಯ ನೋವಿನಿಂದಾಗಿ ಒಂದರೆ ಘಳಿಗೆಯೂ ಬಿಡಲಾರದಂತಾಗಿ ಕಣ್ಣ ಕೆಳಗಿನ ಭಾಗವೆಲ್ಲವೂ ಊದಿಕೊಂಡು ಕಣ್ಣುಮುಚ್ಚಿದ್ದರೂ ನೀರು ಧಾರಕಾರ ಸುರಿದು ರಣನೋವಿನ ಪರಿಚಯವಾಗಿ ಕಣ್ಣುಳಿದರೆ ಸಾಕು ಎನಿಸಿತೊಡಗಿತು.
ಗಂಧದವರ ಜೊತೆಗೆ ಗುದ್ದಾಡಿದರೂ ಪರವಾಗಿಲ್ಲ ಸಗಣಿಯವರ ಜೊತೆಗೆ ಸರಸ ಆಡಬಾರದು ಎನ್ನುವ ಗಾದೆ ಎಷ್ಟು ಸೂಕ್ತ ಅಂತ ಜ್ಞಾನೋದಯವೂ ಆಯಿತಾದರೂ ನೋವಿಂದ ಮುಕ್ತಿಗೆ ಡಾಕ್ಟರನ್ನು ನೋಡುವುದು ಎಂದು ತೀರ್ಮಾನಿಸಿದೆ.
ಮನೆಯವರು ನನ್ನ ಕಣ್ಣುಬಿಡದ ಕಾರಣದಿಂದ ಹೆಗಲಿಗೆ ಬಿದ್ದ ಮನೆಗೆಲಸದ ಕಿರಿಕಿರಿಯಲ್ಲಿದ್ದರು. ಹೇಗಾದರೂ ಇವಳು ಕೆಲಸ ಆರಂಭಿಸಿ ಮನೆಯೆಂಬೋ ಫ್ಯಾಕ್ಟರಿ ಯಥಾಸ್ಥಿತಿಯಲ್ಲಿ ನಡೆದರೆ ಸಾಕೆಂಬಂತೆ ಹತ್ತಿರದಲ್ಲೇ ಇದ್ದ ವೈದ್ಯ ದರ್ಶನಕ್ಕೆ ಮನಸ್ಸು ಮಾಡಿದರು.
ನಾನು ಬಿಡಲಾರದ ಕಣ್ಣಿನೊಡಗೂಡಿ ನಡೆಯಲಾರದೆ ನಡೆದು ಆ ವೈದ್ಯರ ಎದುರು ನಿಂತು ಹೀಗೀಗೆ ಅಂದರೆ ಆ ಮಹಾಶಯ ‘ಎಲ್ಲಿ ಉಗುರು ತೋರ್ಸಿ’ ಎನ್ನುವುದೇ?
ಅರೆ ಇವ ಯಾ ಸೀಮೆ ಡಾಕ್ಟರಪ್ಪಾ .ಕಣ್ಣಿಗೆ ಕಂಬಳಿಹುಳು ಬಿದ್ದು ನೋವು ತಡೆಯುವುದಕ್ಕಾಗದೆ ಒದ್ದಾಡುವಾಗ ಉಗುರು ಕೇಳ್ತಿದ್ದರಲ್ಲಾ ಅನಿಸಿದ್ರೂ ಸಾಮಾನ್ಯ ಮನ್ಷಂಗೂ ವೈದ್ಯ ಮಹಾಶಯನಿಗೂ ಯತ್ವಾಸ ಇರೋದಿಲ್ವೇ ಎನಿಸಿ ಕೈ ಕೊಟ್ಟೆ.
ಕೈ ಹಿಡಿದವರು ನನ್ನ ನೀಳ ನೇಲ್ ಪೈಂಟ್ ಮಾಡಿದ ಉಗುರುಗಳನ್ನು ನೋಡ್ತಾ(ಡಾಕ್ಟರು ಹೇಗಿದ್ರೋ.ನೋಡ್ಲಿಕ್ಕೂ ಆಗಲಿಲ್ಲ)
‘ನೋಡಿ..ಉಗುರು ಚಿಕ್ಕದಾಗಿ ಕತ್ತರಿಸ್ಕೋಬೇಕಮ್ಮಾ.ಇಲ್ಲಾಂದ್ರೆ ನೋಡಿ ಹೀಗೇ ಆಗುವುದು’ಅಂದರು.
ಅರೆರೆ..
ಉಗುರು ಕತ್ತರಿಸುವುದಕ್ಕೂ ಕಂಬಳಿಹುಳು ಕಣ್ಣಿಗೆ ಬೀಳುವುದಕ್ಕೂ ಎತ್ತಣಿದ್ದೆಂತಣ ಸಂಬಂಧವಯ್ಯಾ ಎನ್ನುವ ಅನುಮಾನಕ್ಕೆ ತಲೆಯಲ್ಲಿ ಕಂಬಳಿಹುಳು ಓಡಾಡಲಾರಂಭಿಸಿದವು.
‘ಅಲಾ ಡಾಕ್ಟರೇ..ಕಂಬಳಿಹುಳು…’
ಮಾತನ್ನು ಶುರುವಲ್ಲೇ ತಡೆದು ‘ನಂಗೆಲ್ಲಾ ಗೊತ್ತಮ್ಮ.ಡೋಂಟ್ ವರಿ.ಯೂ ವಿಲ್ ಬಿ ಆಲ್ರೈಟ್’ ಅಂತಂದು ಉಗುರು ಕತ್ತರಿಸುವುದನ್ನು ಮತ್ತೊಮ್ಮೆ ನೆನಪಿಸಿ ‘ನೋಡಿ ಈ ಮಾತ್ರೆ ಬರಕೊಡ್ತೀನಿ.ದಿವಸ ಮೂರು ಸರ್ತಿ ಮೂರು ದಿನ ತಗೋಳಿ.ಹಾಗೇ ಇದೊಂದು ಹೆಲ್ತ್ ಡ್ರಿಂಕ್ ಬರೀತೀನಿ.ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಕೂಡ ಹೀಗಾಗುವ ಸಾಧ್ಯತೆ ಇದೆ”ಅಂದರು.
ದೇವರೇ.
ಮೂರ್ಛೆ ತಪ್ಪುವುದೊಂದು ಬಾಕಿ.ಇನ್ನೂ ಮೂರ್ಛೆ ತಪ್ಪಿದರೆ ಇನ್ನಾವ ಮಾತ್ರೆ ಬರೆಯುತ್ತಾರೋಎಂಬ ದಿಗಿಲಿಗೆ ಪ್ರಜ್ಞೆಯನ್ನು ಕಷ್ಟಪಟ್ಟು ಇರಿಸಿಕೊಂಡು ಗೋಡೆ ಹಿಡಿದು ಆಚೆ ಬಂದೆ.
ಅಲ್ಲೇ ಆಚೆ ಇದ್ದ ಯಜಮಾನರು ಮಾತ್ರೆ ಚೀಟಿ ಪಡೆದು ಮೆಡಿಕಲ್ ಸ್ಟೋರಿಂದ ವಾಪಸು ಬಂದವರು ಮುಖ ದುಮ್ಮಿಸಿ ಗುರುಗಟ್ಟತೊಡಗಿದರು.ಅದ್ಯಾವ ಸೀಮೆ ಹೆಲ್ತ್ ಡ್ರಿಂಕೇ ಅದು ಸಾವಿರದಿನ್ನೂರು ರೂಪಾಯಿ ಅಂದ್ರು.ನನ್ನ ಎದೆಯೊಡೆದು ಉಳಿದೊಂದು ಕಣ್ಣೂ ಕಾಣದಾದಂಗೆ ಅನಿಸತೊಡಗಿತು.
ಮನೆ ತಲುಪಿದೊಡನೆ ಯಜಮಾನರು’ಇಕಾ ಮಾತ್ರೆ.ಮಲಕ್ಕಂಡೆ ಕಾಲ ಕಳಿಬೇಡ’ಅಂದರು.
‘ಮದ್ದು ಕೈಗೆ ಬಂದೊಡನೆ ಎದ್ದುಕೂರಬೇಕು’
ಎನ್ನುವ ನ್ಯೂಟನ್ ಮೂರನೇ ನಿಯಮವನ್ನು ನನ್ನ ಮೇಲೆ ಬಲವಂತವಾಗಿ ಹೇರಿದ ಗಂಡನ ಮೇಲೆ ಇನ್ನಿಲ್ಲದ ಕೋಪ ಬಂದಿತಾದರೂ ಮತ್ತದೆ ಬಡವ ದವಡೆ ನೆನಪಾಗಿ ಸುಮ್ಮನಾದೆ.
ಆದರೆ
ಹೃದಯಕ್ಕೆ ವಿಪರೀತ ಘಾಸಿಯಾಗಿ ಕಣ್ಣೀರು ಇಳಿಯಲಾರಂಬಿಸಿತು.
ಈ ಹಾಳು ಕಂಬಳಿಹುಳುವಿಂದಾಗಿ ಎಂತೆಂಥ ಮಾತು ಕೇಳಬೇಕಾಯ್ತಪ್ಪಾ ಎಂದುಕೊಂಡು ನೋವಿನ ಮದ್ದು ಕುಡಿದು ಮಲಗಿಬಿಟ್ಟೆ.
ಮಾತ್ರೆಯ ಪ್ರಭಾವಕ್ಕೆ ಒಂದೆರಡು ಘಂಟೆ ಅಮಲಿನಂಥ ನಿದ್ದೆ ಬಂದರೂ ಎಚ್ಚರದೊಡನೇ ಮೊದಲಿಗಿಂತಲೂ ತೀವ್ರವಾದ ನೋವಾಗಿ ಮುಂದಿನ ಗತಿಯೇನಪ್ಪಾ ಅಂತ ಭಯಕ್ಕೆ ಅಳು ಉಕ್ಕಿ ಬಂತು.
ಬೆಳಿಗ್ಗೆ ಎಳಲಾಗದೇ ಮಲಗೇ ಇದ್ದಾಗ ‘ಕ್ಯಾಮೆ ಯಾರ ನೋಡೋವ್ರೋ’
ಅಂದ ಗಂಡನ ಮಾತು ಕೇಳಿ ಯಃಕಶ್ಚಿತ್ ಈ ಹುಳುಗಳಿಂದಾಗಿ ಸ್ವಾಭಿಮಾನಿಯಾದ ನನಗೆ ಏನೆಲ್ಲಾ ಮಾತು ಕೇಳಬೇಕಾಗಿ ಬಂತು ಅಂತ ಖುದ್ದು ಕ್ರುದ್ದಳಾಗಿ ಹೋದೆ.
ಒಂದು ಕಂಬಳಿಹುಳು ಹಿಡಿದು ಇವನ ಕಣ್ಣಿಗೆ ತುರುಕಿ ಈಗ ಮಾಡು ಕ್ಯಾಮೆ ಎನ್ನಬೇಕು ಅಂತಲೂ ಅನಿಸಿತಾದರೂ ಅಸಹಾಯಕತೆಯಲ್ಲಿ ಹಾಗೇ ಮಲಗಿದೆ.ಕಣ್ಣಿನ ನೋವು ಕ್ಷಣ ಕ್ಷಣ ಕ್ಕೂ ಹೆಚ್ಚಿ ಬೆಳಕಿನ ಒಂದು ಕಣವನ್ನೂ ಎದುರಿಸಲಾಗದೆ ಕಿರುತೋಡಿನಂತೆ ನೀರು ಹರಿಯಲಾರಂಬಿಸಿದಾಗ ಭಯ ಆರಂಭವಾಯಿತು.
ಅದೇ ಸಮಯಕ್ಕೆ ಫೋನು ಬಂದು ಗೋಡೆ ಹಿಡಿದು ಸಾವರಿಸಿಕೊಂಡು ಫೋನ್ ರಿಸೀವ್ ಮಾಡಿದರೆ ಅಮ್ಮ.!
ಆ ದೇವರಿಗೂ ಗೊತ್ತಾಗುತ್ತೆ.
ಯಾವ್ಯಾವ ಸಂದರ್ಭದಲ್ಲಿ ಅಮ್ಮನ ಫೋನು ಬರುವಂತೆ ಮಾಡಬೇಕು ಅಂತ.ಅಮ್ಮನ ಧ್ವನಿ ಕೇಳಿದೊಡನೆ ಇನ್ನಿಲ್ಲದಂತೆ ದುಃಖ ಉಮ್ಮಳಿಸಿ
” ಅಮ್ಮಾ ಹೀಗೀಗೆ ‘ಅಂದೆ.
ಅಮ್ಮ ಮಾಮೂಲಿನಂತೆ ಕಂಬಳಿ ಹುಳಕ್ಕೆ ಹಿಡಿಶಾಪ ಹಾಕಿ ಹೋಗಿ ಹರಕೆ ಮಾಡ್ಕೋ ಎಂದರು.
ಮೊದಲೇ ನೋವು.ಜೊತೆಗೆ ಉಪದೇಶ.ಮೈ ಉರಿದು ಸರಿ ಫೋನಿಡ್ತೀನಿ ಅಂದೆ.
ಹೆಣ್ಮಕ್ಕಳಿಗೆ ಅಮ್ಮ ಒಬ್ಬಳೇ ತಾನೇ, ನೋವು ಸುರಿಯಲು ಇರುವ ಏಕೈಕ ತಗ್ಗು.
ಆಗ ಅಮ್ಮ ‘ಈಗ ಹಾಸನಕ್ಕೆ ಹೋಗ್ತಿದ್ದಿವಿ.ಹೊರಟಿರು.ಆಸ್ಪತ್ರೆ ಗೆ ಹೋಗಿಬರೋಣ’ ಎಂದಾಗ ‘ಎಂತ ಮಣ್ಣು ಹೊರಡದು ಅಮ್ಮ. ನನ್ನ ಮೂತಿ ಹೆಂಗಿದೆ ಅಂತ ನೋಡ್ಕೊಂಡು ಎರಡು ದಿನ ಆಯ್ತು.
ನೀವೊಂದ್ಸರ್ತಿ ಬನ್ನಿ’ಅಂದೆ.
ಅಪ್ಪ ಅಮ್ಮ ನೊಡನೆ ಮೊದಲು ಹಾಸನದ ಕಣ್ಣಿನ ಡಾಕ್ಟರ್ ಹತ್ರ ಹೋಗಿ ತೋರಿಸಿದ ಕೂಡಲೇ ಅವರು ಸೂಕ್ಷ್ಮ ಇಕ್ಕಳದಿಂದ ಕಣ್ಣು ಗುಳ್ಳೆಗೆ ಹೊಕ್ಕಿದ್ದ ಎರಡು ಮುಳ್ಳಿನಂತ ಕೂದಲನ್ನು ಹೊರತೆಗೆದು ಎರಡು ಡ್ರಾಪ್ ಔಷಧಿ ಹಾಕಿ ಎರಡು ನಿಮಿಷ ಕೂತಿದ್ದು ಹೋಗಿ ಎಂದರು.
ಒಂದೇ ಘಳಿಗೆಗೆ ಜಗವೆಲ್ಲ ಬದಲಾದ ಹಾಗೆ!ಉರಿ ನೋವು ಕೆರೆತ ಕ್ಷಣಾರ್ಧದಲ್ಲಿ ಮರೆಯಾಯಿತು.ತೋಡಿನಲ್ಲಿ ಹರಿಯುತ್ತಿದ್ದ ಜಲಜಲ ಸಲಿಲ ನಲ್ಲಿ ನಿಲ್ಲಿಸಿದಂತೆ ನಿಂತು ಹೋಯಿತು.
ಆ ಡಾಕ್ಟರು ನನ್ನಯ ಪಾಲಿಗೆ ಸಾಕ್ಷಾತ್ ದೇವರಂತೆ ಕಂಡರು.
‘ಕಣ್ಣು ಕೊಟ್ಟ ದೇವರು ನೀವು’ ಎಂದು ಅವರ ಕೈಹಿಡಿದು ನಮಸ್ಕರಿಸಿದೆ.
ಅಪ್ಪ ಅಮ್ಮನ ಶಾಪಿಂಗ್ ಮುಗಿಸಿ ಮನೆಗೆ ಬಂದರೆ ಮನೆ ತುಂಬಾ ಹಮ್ಲಾ ವಾಸನೆ.
ಇದೇನು ಹೊಸ ಆವಾಂತರ ಎನ್ನುವಾಗ ಯಜಮಾನರು ‘ಕಂಬಳಿ ಹುಳ ಕ್ಕೆ ಪಾಯಿಸನ್ ಸ್ಪ್ರೆ ಮಾಡಿದ್ದೇನೆ.ಎರಡು ದಿನ ನೀ ತವರಿಗೆ ಹೋಗಿ ಬಾ.ನಾ ಹೇಗೂ ತೋಟದಲ್ಲಿರ್ತೀನಿ.ಸಂಜೆ ಹೊರಗಿರ್ತೀನಿ’
ಅಂದರು.
ಅಯ್ಯೋ ನನ್ನ ಮುದ್ದು ಪಾಪದ ಕಂಬಳಿಹುಳಗಳೇ ಅಂತ ತಕ್ಷಣಕ್ಕೆ ಅನಿಸಿತಾದರೂ ಕಣ್ಣು ಕಂಬಳಿಹುಳುಗಳಿಗಿಂತ ಮುಖ್ಯ ಎನಿಸಿ ಅಚಾನಕ್ಕು ಮಂಜೂರಾದ ರಜೆಯಿಂದಾಗಿ ಈಗಷ್ಟೇ ಸರಿಯಾದ ಕಣ್ಣಲ್ಲಿ ಅವರಿಗೊಂದು ಥ್ಯಾಂಕ್ಸ್ ಹೇಳಿ ತವರಿಗೆ ಹೋದೆ.
ನಾಕಾರು ದಿನ ಕಳೆದು ಕಂಬಳಿಹುಳುವಿನ ಸಹವಾಸ ತಪ್ಪಿ
ಅವುಗಳಿರುವನ್ನು ಮರೆತು ಇನ್ನೇನು ಮನೆಯಲ್ಲೂ ಅವು ಇರಲಾರವು ಎನಿಸಿ ಮನೆಗೆ ಬಂದೆ.
ಬಂದವಳು ಮೊದಲಿಗೆ ಪೋನನ್ನು ನೆಟ್ವರ್ಕಿಗಾಗಿ ಅಟ್ಟಕ್ಕೆ ಇಡಲು ಹೋದವಳು ಮೇಲೆ ಸೂರು ಹಿಡಿವಾಗ ಮೆತ್ತಗೆ ಗುಳುಗುಳುವಾದಂತೆನಿಸಿ ನೋಡಿದರೆ ಕೂದಲೆಳೆಯಂತ ಕಂಬಳಿಹುಳುಗಳ ಗುಂಪು ಸತ್ತು ಮತ್ತೆ ಹುಟ್ಟಿಯಾಗಿತ್ತು.!!
ಅಮೃತ ಕುಡಿದು ಚಿರಂಜೀವಿಗಳಾದ ದೇವತೆಗಳು ನೆನಪಾದರು.
ಇವು ವಿಷವೂಡಿಸಿಕೊಂಡೂ ಹೊಸಜನ್ಮವೆತ್ತಿದ ಯಃಕಶ್ಚಿತ್ ಕಂಬಳಿಹುಳುಗಳು.ಮನುಷ್ಯ ತಾನೇ ಮಿಗಿಲು ಎಂದುಕೊಂಡಾಗೆಲ್ಲ ಬದುಕು ಇದಲ್ಲ ಇದಲ್ಲವೆನ್ನುತ್ತದೆ. ನಾವು ಮಾತ್ರ ಕೇಳಿಸಿಕೊಳ್ಳಬೇಕಾದ ಒಳಗಿವಿಗೆ ಸೀಸ ಸುರಿದು ಬಿಗಿಮಾಡಿಕೊಂಡಿರುತ್ತೇವೆ.
ಜೀವ ಕೊಡಲಾಗದ ನಾವು ತೆಗೆಯುವಾಗ ಮಾತ್ರ ವಿಪರೀತ ವೇಗ ತೋರಿಸುವ ಕುರಿತು ನಾಚಿಕೆಯೆನಿಸಿತಾದರೂ ಪಾಪದ ಜೀವಿಗಳು
ಬಿಡೆನು ನಿನ್ನ ಮಾಡು..ಓಹೋ ಅದುವೆ ನಮ್ಮ ಗೂಡು
ಅಂತಂದಿದ್ದು ಮಾತ್ರ ನನ್ನ ಗೆಲುವು ಅಂದುಕೊಂಡೆ.
ನೆಟ್ವರ್ಕ್ ಸಿಕ್ಕಿದೊಡನೇ ಫೋನೂ ಪ್ರಾಯ ಪಡೆದುಕೊಂಡು ಕಿಣಿಕಿಣಿಗುಟ್ಟಿ,
ಆ ಕಡೆಯಿಂದ ಅಮ್ಮ..
‘ಪೂರ್ತೀ ಸತ್ತೇ ಹೋಗಿರಬೇಕು ಅಲ್ವಾ.ಸದ್ಯ ಕಾಟ ತಪ್ತು’
ಅಂದಳು.
‘ಹೋದೆಯಾ ಅಂದರೆ ಇಲ್ಲೇ ಸಂದಿಲಿದೀವಿ ಅಂದ್ವು ಕಣಮ್ಮಾ’
ಅಂದೆ ಖುಷಿಯಿಂದ.ಅಮ್ಮ ಅರ್ಥವಾಗದೆ ಏನಂದೇ ಅಂದರು.
…
ಇದಾಗಿ ಎಷ್ಟೋ ವರ್ಷಗಳ ನಂತರವೂ ಪ್ರತಿ ಮಳೆಗಾಲದಲ್ಲೂ
ಕಂಬಳಿಹುಳುವಿನಿಂದ ಕಣ್ಣು ಕಾಪಾಡಿಕೊಳ್ಳುವ ಅದೇ ಎಚ್ಚರದಿಂದ
ಅವುಗಳ ಜೀವನ ಚಕ್ರದ ಕುರಿತು ಗೂಗಲಿಸಿ ಜೀವಹಾನಿಯಾಗದಂತೆ ಏನಾದರೂ ಹೊಸ ರೆಮಿಡಿ ಸಿಗಬಹುದೇ ಅಂತ ಹುಡುಕುವುದು ಈಚಿನ
ವರ್ಷಗಳಲ್ಲಿ ಕಾಯಮ್ಮು ಅಭ್ಯಾಸ ಆಗಿ ಹೋಗಿದೆ.
ಅಂದ ಹಾಗೇ..ನಿಮಗೇನಾದರೂ ಇದರ ಬಗ್ಗೆ ಗೊತ್ತಾ?
ಈ ಬರಹದೊಂದಿಗೆ ಪ್ರಕಟವಾಗಿರುವ ಚಿತ್ರ ರಚಿಸಿದವರು ಕಿರಣ್ ಮಾಡಾಳು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ.ಇಲ್ ಸ್ಟ್ರೇಷನ್, ವ್ಯಂಗ್ಯ ಚಿತ್ರ , ಕಂಪ್ಯೂಟರ್ ಗ್ರಾಫಿಕ್ಸ್ ಎಲ್ಲದರಲ್ಲೂ ಅವರಿಗೆ ಪರಿಣತಿ. ಆಧ್ಯಾತ್ಮ ಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156
ಅಬ್ಬಬ್ಬಾ…..ಹ..ಹ.ಹಾ….ನಂದಿನಿಯವರೇ ನಿಮ್ಮ ಈ ಬರಹವನ್ನು ಓದಿ ನಕ್ಕು, ನಕ್ಕೂ ಸಾಕಾಯಿತು.
ಜೊತೆ ಜೊತೆಗೆ ಚಿಕ್ಕಂದಿನ ಕಂಬಳಿ ಹುಳಗಳ ನೆನಪಿನಿಂದಲೇ ಪತರಗುಟ್ಟುವ ನಾನು ಮತ್ತು ನಮ್ಮನೆಯವರೆಲ್ಲ ಸಕಲೇಶಪುರದ ಕಂಬಳಿಹುಳಗಳ ಅತಿವೃಷ್ಟಿ ಯ ಚಿತ್ರಣದಿಂದ ಗದಗುಡುತ್ತಿದ್ದೇವೆ…..!!
ನಿಮ್ಮ ಹಾಸ್ಯ ಮಯ ಬರಹ ನಿಜಕ್ಕೂ ಮಜಬೂತಾಗಿದೆ. ಡುಂಡಿರಾಜ್ ಹೇಳುವಂತೆ ವಿಚಾರವನ್ನು ನೋಡಿರುವ ನಿಮ್ಮ ಹಾಸ್ಯ ಮಯ ದೃಷ್ಟಿ ಕೋನ ಅದ್ಭುತವಾಗಿದೆ.
ಅಕಸ್ಮಾತ್ ಇದೆಲ್ಲ ( ಬಹುಮಟ್ಟಿಗೆ) ನಿಜವೇ ಆಗಿದ್ದಲ್ಲಿ ಇದಕ್ಕಿಂತ ಸ್ವಾರಸ್ಯಕರ ವಾದ ಲಘುಬರಹ ಸಾಧ್ಯವೇ ಇಲ್ಲ ಎನ್ನುವಷ್ಟು ಲೇಖನ ಚೆನ್ನಾಗಿದೆ.
40 ವರ್ಷ ಗಳಿಂದ ಕಂಬಳಿ ಹುಳವನ್ನು ನೋಡಿಲ್ಲ. ಆದರು ನಮ್ಮ ಮನೆಯ ಕೈ ತೋಟದಲ್ಲಿದ್ದ ‘ಕೆಲವು ‘ ಕಂಬಳಿಹುಳಗಳ ನೆನಪೇ ಇನ್ನೂ ಕೆಂಪಾದ ದದ್ದುಗಳಂತೆ ತಾಜಾ ಇದೆ. ಹಾಗಿರುವಾಗ ಅವುಗಳೊಡನಿನ ನಿಮ್ಮ ಪ್ರೇಮ ‘ ಪ್ರಸಂಗಗೋಳನ್ನು ,’ ಓದಿ ಶಹಬ್ಬಾಸ್ ಎನ್ನಿಸಿದೆ.
ನಿಮಗೆ ನಮ್ಮಗಳ ಹೃದಯಪೂರ್ವಕ ಮೆಚ್ಚುಗೆ!
ಕಂಬಳಿ ಹುಳುಗಳ ರೊಇಚಕ ಕಹಾನಿಯ ಹಾಸ್ಯಭರಿತ ಲೇಖನ ಅತ್ಯುತ್ತಮ ವಾಗಿದೆ. ಕಂಬಳಿ ಹುಳುಗಳ ಕಾಟ ನಮ್ಮ ಹೊಲಮನೆ ಹಿತ್ತಲುಗಳಲ್ಲಿ ಇದೆ. ರಾಶಿ ರಾಶಿ ಕಂಬಳಿ ಹುಳುಗಲಕು ನುಗ್ಗಿಮರದ ಬೊಡ್ಡೆಯಲ್ಲಿ ನೋಡಿ ಮೈ ಜುಮ್ಮೆನ್ನುವ ಸಂದರ್ಭಗಳೆಷ್ಟೊ…
ಬಹಳ ಅಂದದ ಪ್ರಬಂಧ ಅಕ್ಕ