ಇನ್ನೂ ಎಷ್ಟೊತ್ತು ಅಂತ ಆಫೀಸ್ ನಲ್ಲೇ ಕೆಲಸ ಮಾಡ್ತಿದ್ದೀಯ, ಸಾಕು ಬಾ ಮಲಗು, ಉಳಿದದ್ದು ಬೆಳಿಗ್ಗೆ ನೋಡಿಕೊ ಅಂತ ಅಪ್ಪ ಒಂದು ದಿನ ಬಳ್ಳಾರಿಯ ನನ್ನ ಮನೆಯ ಕಾಂಪೌಂಡ್ ನಲ್ಲೇ ಇದ್ದ ನನ್ನ ಆಫೀಸ್ ಒಳಗೆ ತಡರಾತ್ರಿ ಬಂದರು. ಅವರಿಗೆ ನಿದ್ರೆ ಬಂದಿರಲಿಲ್ಲ ಅಂತ ಕಾಣುತ್ತೆ. ಮನೆಯ ಪ್ಲಾನ್ ಆಯ್ತು, ಪ್ರಿಂಟ್ ಕೊಟ್ಟು ಬರ್ತೀನಿ ಅನ್ನುವಷ್ಟರಲ್ಲಿ ಮನೆ, ಆಫೀಸ್ ಒಂದೇ ಕಡೆ ಇದ್ದರೆ ಹೀಗೇ ಆಗೋದು ನೋಡು ಅಂತ ಬಂದು ಒಂದು ಕುರ್ಚಿಯಲ್ಲಿ ಕುಳಿತು ಕೊಂಡರು.
ನಾನು ಪ್ರಿಂಟರ್ ರೆಡಿಮಾಡಿ ಮರುದಿನ ಬೆಳಿಗ್ಗೆಯೇ ಸೈಟ್ ನಲ್ಲಿ ಬೇಕಾಗುವ ಕಟ್ಟಡದ ಪ್ಲಾನ್ ನ್ನು ಪ್ರಿಂಟ್ ಕೊಟ್ಟು ಆಯ್ತು,ಹೊರಡುವ ಅಂದೆ. ಆಶ್ಚರ್ಯವಾಗಿ ಪ್ರಿಂಟ್ ಕಡೆ ನೋಡ್ತಾ ಕುಳಿತ ಅಪ್ಪ ಬೆರಗಾಗಿ ಎಂತಹ ಅದ್ಭುತ! ಈ ಕಂಪ್ಯೂಟರ್ ಪರದೆಯ ಮೇಲಿನ ನಕ್ಷೆ, ತಥಾರೀತಿ ಪ್ರಿಂಟರ್ ಮೂಲಕ ಹಾಳೆಯಲ್ಲಿ ಮೂಡಿಬರುತ್ತಿದೆ ಅಂದರು. ಅಪ್ಪಾ, ಇಲ್ಲಿರುವ ಎಲ್ಲ ಸಲಕರಣೆಗಳು ವೈರ್ ಗಳ ಮೂಲಕ ಸಂಪರ್ಕ ಹೊಂದಿವೆ. ಈಗ ವೈರ್ ಗಳು ಇಲ್ಲದೆಯೇ ಈ ಎಲ್ಲ ಕೆಲಸ ನಿರ್ವಹಿಸುವ ಪರಿಕರಗಳು ಬರುತ್ತಿವೆ. ಅದು ಇನ್ನೂ ಆಶ್ಚರ್ಯ ಅಲ್ಲವಾ ಅಂದೆ. ಹೌದು, ಮನುಷ್ಯ ಎಷ್ಟೊಂದು ಮುಂದುವರಿದು ಬಿಟ್ಟ ಅಂತ ನಿಟ್ಟುಸಿರು ಬಿಟ್ಟಿದ್ದರು.
ಮಾರನೆಯ ದಿನ ಉಪಹಾರಕ್ಕೆ ಕುಳಿತಾಗಲೂ ಅಪ್ಪ ಅದರ ಗುಂಗಿನಿಂದ ಹೊರಬಂದಿರಲಿಲ್ಲ. ನನಗೆ ಸೈಟ್ ಗೆ ಹೋಗುವ ತರಾತುರಿ. ರಾತ್ರಿ ತೆಗೆದಿದ್ದ ಪ್ರಿಂಟ್ ಹಿಡಿದು ಮಧ್ಯಾಹ್ನ ಬರ್ತೀನಿ ಇರು, ಮಾತಾಡುವ ಅಂತೇಳಿ ನಾನು ಹೊರಬಿದ್ದೆದ್ದೆ.
ಅಪ್ಪಾ, ನಮ್ಮ ದಾರ್ಶನಿಕರು ದೇಹವನ್ನು ಸ್ಥೂಲ ಶರೀರ ಅಂತಲೂ, ಮನಸ್ಸನ್ನು ಸೂಕ್ಷ್ಮ ಶರೀರ ಅಂತಲೂ ಹೇಳಿದ್ದಾರೆ ಅಂತ ನೀವೇ ಹೇಳುತ್ತಿರಲ್ಲಾ ಅದೇ ರೀತಿಯೇ ಈ ಕಂಪ್ಯೂಟರ್ ನೋಡು. ಇದರಲ್ಲಿ ಕಣ್ಣಿಗೆ ಕಾಣುವ ಎಲ್ಲವನ್ನು hardware ಅಂತಲೂ, ಕಣ್ಣಿಗೆ ಕಾಣದೆ ಇದನ್ನು ನಿಯಿಂತ್ರಿಸುವುದನ್ನು software ಅಂತಲೂ ಅಂತಾರೆ. ಇದರಲ್ಲಿ ನಮ್ಮ ದೇಹದಲ್ಲಿರುವಂತೆ ಹೃದಯ ಭಾಗವನ್ನು cpu ಅಂತ, ಮೆದುಳಿನ ತರಹದ್ದನ್ನು hard disk ಅಂತ ,ಆತ್ಮದ ಕೆಲಸವನ್ನು power ಅಥವಾ ಕರೆಂಟ್ ನಿರ್ವಹಿಸಿದರೆ, ಇದರಲ್ಲಿಯ ವೈರ್ ಗಳು ನಮ್ಮ ದೇಹದ ನರಗಳಾಗಿ ಕೆಲಸ ಮಾಡ್ತಿವೆ ಅಂತ ಹೇಳಿದೆ.
ನಮಗೆ ಭೌತಿಕ ಶರೀರದ ಡಾಕ್ಟರ್ ಗಳೂ ಮಾನಸಿಕ ಸ್ವಾಸ್ಥಕ್ಕೆ ಆಧ್ಯಾತ್ಮಿಕತೆ ಇರುವಂತೆ ಎಲೆಕ್ಟ್ರಾನಿಕ್ಸ್ ಓದಿ ಕೊಂಡ hard ware ಎಂಜಿನಿಯರ್ ಗಳೂ ನಿನ್ನ ಸೊಸೆಯ ರೀತಿ ಕಂಪ್ಯೂಟರ್ ವಿಜ್ಞಾನ ಓದಿಕೊಂಡ software ಎಂಜಿನಿಯರ್ ಗಳೂ ಇದ್ದಾರೆ ಅಂತ ವಿವರಿಸಿದೆ. ಅಪ್ಪನಿಗೆ ಏನೋ ಹೊಳೆದಂತಾಗಿ ಆಶ್ಚರ್ಯದ ಮಟ್ಟ ಕಡಿಮೆ ಆಯ್ತು ಅನ್ನುವ ರೀತಿ ಸಮಾಧಾನದ ದೃಷ್ಟಿ ನನ್ನೆಡೆಗೆ ಹರಿಸಿ, ಪ್ರಕೃತಿಯೇ ಪ್ರಧಾನ ನಿರ್ಮಾತೃ, ಅದನ್ನ ಅನುಸರಿಸಿಯೇ ಎಲ್ಲ ಇದೆ ಅಲ್ಲ ಅಂದರು. ಹೌದು ಅಂದೆ.
ವೇದವನ್ನು ನಮ್ಮವರು ವಿಜ್ಞಾನ ಅಂತ ಯಾಕೆ ಅಂದಿದ್ದರು ಅನ್ನೋದು ನನಗೆ ಇವತ್ತು ಸ್ಪಷ್ಟವಾಯ್ತು ನೋಡು. ನನಗೇ ಈ ವಿಷಯದ ಬಗ್ಗೆ ಬಹಳ ಅನುಮಾನ ಇತ್ತು. ಯಾರೂ ಹೇಳದ ಆತ್ಮ,ಪರಮಾತ್ಮ ವಾದವನ್ನು ವೇದಾಂತ ಅಂತ ಹೆಸರಿಸಿ ಈ ಜ್ಞಾನಕ್ಕೆ ವಿಶೇಷ ತರಬೇತಿ ಅನಿವಾರ್ಯ ಅಂದದ್ದು ಎಷ್ಟು ಸಮಂಜಸ ಅಲ್ಲ ಅಂದ್ರು. ಅವರ ಆ ಸಮಾಧಾನಕ್ಕೆ ಧಕ್ಕೆ ತರಲು ಇಚ್ಛಿಸದೆ ಹೌದು ಅಂದಿದ್ದೆ. ಯಾಕಂದ್ರೆ ಒಮ್ಮೆ ಅಪ್ಪ ವಿಜ್ಞಾನ ಉಚ್ಚ ಮಟ್ಟದ್ದು ಅಲ್ಲ, ಜ್ಞಾನ, ವಿಜ್ಞಾನ, ಸುಜ್ಞಾನ ಅಂತಿರುವ ಸಾಲಿನಲ್ಲಿ ವಿಜ್ಞಾನ ಮಧ್ಯೆದ್ದು, ಅದರ ಮೇಲೆ ಸುಜ್ಞಾನ ಎಂಬುದು ಒಂದಿದೆ, ಅದು ಅಧ್ಯಾತ್ಮಿಕ ಆದರೆ ಮಾತ್ರ ಸಾಧ್ಯ ಅಂದಿದ್ದರು. ಇದು ನೆನಪಿಗೆ ಬಂದರೂ ನಾನಾಗ ಪ್ರಸ್ತಾಪಿಸಲಿಲ್ಲ.
ಸರಿ,ಎಲ್ಲ ರಂಗಗಳಲ್ಲೂ ಈ ಕಂಪ್ಯೂಟರ್ ಮಾನವನ ನೆರವಿಗೆ ಬಂದಿದೆಯಲ್ಲಾ, ಅದು ಹೇಗೆ ಸಾಧ್ಯವಾಯ್ತು? ಅಂದ್ರೆ ಇದೇ ಕಂಪ್ಯೂಟರ್ ನಿನ್ನ ಹತ್ತಿರ,ಡಾಕ್ಟರ ಹತ್ತಿರ,ವಿಜ್ಞಾನಿಗಳ ಹತ್ತಿರ ಇದ್ದು ಬೇರೆ,ಬೇರೆ ಕೆಲಸ ಹೇಗೆ ಮಾಡ್ತಿದೆ? ಅಂದ್ರು. ಆಗ ತಾನೇ ಕಂಪ್ಯೂಟರ್ ಭಾಷೆ ಅಥವಾ ಕೋಡಿಂಗ್ ಕಲೀತಿದ್ದ ನನ್ನ ಮಗ ತಾತಾ, ಕಂಪ್ಯೂಟರ್ ಒಂದು ಸಾಧಾರಣ ಕೆಲಸ ಮಾಡುವ ವಿನಮ್ರ ಸೇವಕ. ಅದಕ್ಕೆ ಅದರದ್ದೇ ಬುದ್ಧಿ ಇಲ್ಲ. ಹೇಳಿದ್ದನ್ನು, ಹೇಳಿದ್ದಷ್ಟೇ ಬಲು ವೇಗವಾಗಿ ಮಾಡುವ ಅದ್ಭುತ ಕುಶಲತೆ ಇದೆ. ಅದಕ್ಕೆ ಅದರದ್ದೇ ಆದ ಭಾಷೆ ಅಂತ ಇದೆ. ಅದು ಏನು ಮಾಡಬೇಕು ಅಂತ ನಾವು ಅದರ ಭಾಷೆಯಲ್ಲಿಯೇ ಹೇಳಬೇಕು. ಹಾಗೆ ಅದರ ಭಾಷೆಯಲ್ಲಿ ಹೇಳಿದ ಎಲ್ಲ ತರಹದ ಕೆಲಸವನ್ನೂ ಅದು ಮಾಡುತ್ತದೆ ಅಂತ ಅಂದಾಗ ಅಪ್ಪ ನನ್ನ ಮಗನನ್ನು ಅಪ್ಪಿಕೊಂಡು ಮುದ್ದಾಡಿದ್ದರು.
ನೀನು ಆ ಭಾಷೆ ಕಲೀತಿದ್ದಿಯಾ? ಹೇಗಿದೆ ತೋರಿಸು ನೋಡ್ತೀನಿ ಅಂದ್ರು. ನನ್ನ ಮಗ ನಕ್ಕು ತಾತಾ ಅದರ ಭಾಷೆಗೆ ಮೂಲ ಅಕ್ಷರಗಳು ಅಂತ ಇರೋದು ಎರಡೇ. ಸೊನ್ನೆ ಮತ್ತು ಒಂದು! ನಮ್ಮ ಹಾಗೆ ಇಂಗ್ಲಿಷಿಗೆ26, ಕನ್ನಡಕ್ಕೆ 52 ಅಂತ ಇಲ್ಲ ಅಂದಾಗ ನನ್ನ ಅಪ್ಪನ ಆಶ್ಚರ್ಯ ವರ್ಣಿಸಲು ಆಗ್ತಿಲ್ಲ. ಅದಕ್ಕೆ ಹೇಳುವುದನ್ನೆಲ್ಲಾ 0,1 ಬಳಸಿಯೇ ಹೇಳಬೇಕು, ಇವೆರಡನ್ನು ಬಿಟ್ಟರೆ ಅದಕ್ಕೆ ಬೇರೆ ಏನೂ ಅರ್ಥ ಆಗಲ್ಲ ಅಂತ ನನ್ನ ಹೆಂಡತಿ ಮಧ್ಯೆ ಬಂದು ಹೇಳಿದಾಗ ಅಪ್ಪ ತೆರೆದ ಬಾಯಿಯನ್ನು ಸ್ವಲ್ಪ ಹೊತ್ತು ಮುಚ್ಚಿಯೇ ಇರಲಿಲ್ಲ.
ಮಂಜೂ, ಈ ಸೊನ್ನೆ ಮತ್ತು ಒಂದು ನಮ್ಮ ಆಧ್ಯಾತ್ಮಿಕತೆಯಲ್ಲಿಯೂ ಬಹಳ ಪ್ರಾಶಸ್ತ್ಯ ಹೊಂದಿದೆ ಕಣೋ. ಒಂದರ ಎಡಕ್ಕೆ ಸೊನ್ನೆ ಇದ್ದರೆ, ಹತ್ತಾಗಿ ಆ ಒಂದಕ್ಕೆ ಬೆಲೆ ಬರುತ್ತೆ. ಹಾಗಾಗಿಯೇ ಹೆಂಡತಿ ಯಾವಾಗಲೂ ಗಂಡನ ಎಡಕ್ಕೆ ಇರುವುದು. ವೈಷ್ಣವರು ಸೊನ್ನೆಯನ್ನು ಲಕ್ಷ್ಮಿ ಅಂತಲೂ ಒಂದನ್ನು ವಿಷ್ಣು ಅಂತಲೂ ಅಂದ್ರೆ, ಶೈವರು ಮೇಲಿನ ಲಿಂಗವನ್ನು ಒಂದು ಎಂದೂ ಕೆಳಗಿನ ಪಾಣಿ ಪೀಠವನ್ನು ಸೊನ್ನೆ ಅಂತಲೂ ಅಂದಿದ್ದಾರೆ ಕಣೋ ಅಂದಾಗ ನಾನು ದಂಗಾಗಿದ್ದೆ.
ಶೂನ್ಯತಾವಾದದ ಮುಖಾಂತರ ಏಕದೇವೋಪಾಸನೆ ಹೇಳಿದ ಸಿದ್ಧಾಂತ ಎಷ್ಟೊಂದು ಅರ್ಥಗರ್ಭಿತ ಆಗಿದೆ ಅಲ್ಲಾ ಅಂದಿದ್ದರು. ಅಂದಿಗೂ,ಇಂದಿಗೂ ಈ ಸೊನ್ನೆ,ಒಂದು ಎನ್ನುವ ಸಾಂಖ್ಯರ ಅವಿಷ್ಕರಣೆ ತನ್ನ ಪ್ರಸ್ತುತೆಯನ್ನು ಕಾಪಾಡಿಕೊಂಡು ಪ್ರಪಂಚವನ್ನು ವಿಜ್ಞಾನ ಅಥವಾ ಸಿದ್ಧಾಂತದ ಮುಖಾಂತರ ಅಚ್ಚರಿಪಡುವ ಮಟ್ಟಕ್ಕೆ ಕೊಂಡೊಯ್ದಿದೆಯಲ್ಲಾ ಅಂತ ಹರ್ಷಿಸಿದ್ದರು!
ಹೌದು ಅಪ್ಪ ಯಾವಾಗಲೂ ಏನೇ ಹೊಸದನ್ನು ತಾನು ಬಲವಾಗಿ ನಂಬಿದ್ದ ತನ್ನ ಅಧ್ಯಾತ್ಮಿಕತೆಯೊಂದಿಗೆ ತಳುಕು ಹಾಕಿಕೊಂಡು ವಿಸ್ಮಯರಾಗುತ್ತಿದ್ದರು. ತಪ್ಪಿಲ್ಲ ಅಂತ ಅನ್ನಿಸಿ,ನಾನೂ ಸಹಮತನಾಗುತ್ತಿದ್ದೆ. ಹೀಗೆ ಶುರುವಾಗಿದ್ದು ಅಂದಿನ ನನ್ನ, ಅಪ್ಪನ ಮಂಥನ ಮತ್ತೆ ಆತ್ಮ,ಪರಮಾತ್ಮನ ಕಡೆಗೆ ತಿರುಗಿತ್ತು.
ಅಪ್ಪಾ, ಅಂತರ್ಯಾಮಿ ಆದ ಪರಮಾತ್ಮ ಎಲ್ಲಾ ಕಡೆ ಇರುವಾಗ, ಅದರ ಭಾಗವಾದ ಆತ್ಮ, ಜೀವಿಯು ಸತ್ತ ನಂತರ ಪ್ರಯಾಣಿಸುವುದಾದರೂ ಎಲ್ಲಿಗೆ, ಮತ್ತೆ ಹೊಸ ಜೀವವನ್ನು ಸೇರುವುದಾದರೂ ಹೇಗೆ? ಮರುಜನ್ಮದ ವಿಷಯವಾಗಿ ಕೃಷ್ಣ ಭಗವದ್ಗೀತೆಯಲ್ಲಿ ಆತ್ಮಕ್ಕೆ ಸಾವಿಲ್ಲ, ಹಳೆ ಬಟ್ಟೆ ತೊರೆದು, ಹೊಸ ಬಟ್ಟೆ ಧರಿಸುವ ರೀತಿ ಜೀರ್ಣಗೊಂಡ ದೇಹ ತೊರೆದು, ಆತ್ಮ ಹೊಸ ದೇಹ ಪ್ರವೇಶ ಪಡೆಯುತ್ತದೆ ಅಂದಿದ್ದಾನಲ್ಲ ಇದರರ್ಥ ಏನು ಅಂದಿದ್ದೆ.
ಅದು ಹಾಗಲ್ಲ, ಆತ್ಮ ಅಂತ ವಿಸ್ತಾರವಾಗಿ ಹೇಳಿರುವುದು ಸಾಮಾನ್ಯರಿಗೂ ಅರ್ಥ ಆಗಲಿ ಅಂತ. ಬುದ್ಧಿ,ಅಹಂಕಾರ,ಚಿತ್ತ,ಪ್ರಾಣ ಹೀಗೆ ಹಲವು ಪ್ರಭೇಧಗಳಿವೆ. ಮೇಲ್ನೋಟಕ್ಕೆ ಇವೆಲ್ಲವೂ ಆತ್ಮದ ರೂಪವನ್ನೇ ದೇಹದಲ್ಲಿ ಹೊಂದಿವೆ. ಹಾಗಾಗಿ ಆತ್ಮದ ಸ್ಥಾನ ಎಲ್ಲಿದೆ ದೇಹದಲ್ಲಿ ಎನ್ನುವುದು ಇನ್ನೂ ಜಿಜ್ಞಾಸೆಯಾಗಿಯೇ ಇದೆ. ನೋಡುವುದು ಕಣ್ಣಾದರೂ,ಕೇಳುವುದು ಕಿವಿಯಾದರೂ ಮತ್ತೊಂದು ಶಕ್ತಿ ಇವುಗಳ ಹಿಂದೆ ಇದ್ದು,ಎಲ್ಲ ಇಂದ್ರಿಯಗಳಿಗೂ ಪ್ರೇರಕ ಶಕ್ತಿ ಆಗಿದೆ. ಅದನ್ನು ವ್ಯಾಪಕವಾಗಿ ಆತ್ಮ ಅಂದಿದ್ದಾರೆ. ಜ್ಞಾನಿಗಳು ಇದನ್ನು ಸೂಕ್ಷ್ಮ ಶರೀರ ಅಂದು ಅಲ್ಲಿ ಎಲ್ಲ ಇಂದ್ರಿಯಗಳ,ಹೃದಯದ ಬಡಿತವೂ ಸೇರಿದಂತೆ ಇರುವ ಬುದ್ಧಿ,ಅಹಂಕಾರ,ಚಿತ್ತ(ಮನಸ್ಸು),ಪ್ರಾಣ(ಉಸಿರು) ಇವೆಲ್ಲವುಗಳ ಮಿಶ್ರಣ. ಸ್ಥೂಲ ದೇಹದಲ್ಲಿ ಅಂಗಾಂಗ,ತಲೆ,ನರವ್ಯೂಹ ಇದ್ದಂತೆ.
ನಿಜವಾಗಿಯೂ ಮನುಷ್ಯ ಅಥವಾ ಪ್ರಾಣಿ ನಿರ್ಜೀವ ಅಂತಾದಾಗ ಈ ಸೂಕ್ಷ್ಮ ಶರೀರ ಇಲ್ಲವಾಗುತ್ತದೆ. ಅಂತರ್ಯಾಮಿ ಪರಮಾತ್ಮನ ಅಂಶವಾದ ಆತ್ಮ ಆ ಸತ್ತ ದೇಹದಲ್ಲಿಯೂ ಇರುವ ಸಾಧ್ಯತೆ ಇದೆ. ಎಲ್ಲಿಯ ತನಕ? ಆ ದೇಹ ಈ ಪಂಚಭೂತಗಳಲ್ಲಿ ಲೀನ ವಾಗುವ ತನಕ. ಈ ನಂಬಿಕೆಯನ್ನು ಅನುಸರಿಸಿಯೇ ಸತ್ತ ನಂತರದ ಕ್ರಿಯೆಗಳು ಚಾಲ್ತಿಗೆ ಬಂದಿವೆ. ಕೆಲವರು ದೇಹವನ್ನು ಸುಡುವುದರ ಮೂಲಕ ಆ ಆತ್ಮದ ಬಿಡುಗಡೆಗೆ ಸಹಕರಿಸುತ್ತಾರೆ. ಮತ್ತೆ ಕೆಲವರು ಅದು ದೇಹದ ಜೊತೆಗೇ ಇರಲಿ ಅಂತ air tight chamber (ಸಮಾಧಿ) ಮಾಡುತ್ತಾರೆ, ದೇಹ ಜೀರ್ಣವಾದರೂ ಅವರ ಆತ್ಮ ಅಲ್ಲಿಯೇ ಇರಲಿ ಅಂತ. ಅದಕ್ಕೇ ನೋಡಿದ್ದಿಯಾ ಕೆಲವು ಆತ್ಮಗಳನ್ನು ಶೀಶೆಯಲ್ಲಿ ಬಂಧಿಸಿ, ತಾಂತ್ರಿಕರು ಉಪಾಸನೆ ಮಾಡುತ್ತಾರೆ. ಅದರ ಬಂಧನ,ಬಿಡುಗಡೆಯೇ ನಾನಾ ತರಹದ ನಂಬಿಕೆಗಳನ್ನು ಹುಟ್ಟು ಹಾಕಿದೆ ಅಂದು ಷರಾ ಹೇಳಿದ್ದರು.
ಆಪ್ಪ ಸತ್ತು ಇನ್ನೆರಡು ದಿನಕ್ಕೆ ಒಂದು ವರ್ಷ ಆಗ್ತಿದೆ. ಅಪ್ಪನ ಆತ್ಮ ಆ ಸಮಾಧಿಯಲ್ಲಿಯೇ ಇರಬಹುದು ಅನ್ನುವ, ಅಪ್ಪ ಹೇಳಿದ್ದ ಅನ್ನುವ ಕಾರಣಕ್ಕೆ ನಾಳೆ ಅಲ್ಲಿಗೆ ಹೋಗಿ ತಿಳಿದ ಪೂಜೆ ಮಾಡಿ, ಅಪ್ಪನೊಂದಿಗಿನ ನನ್ನೆಲ್ಲಾ ಅಧ್ಯಾತ್ಮಿಕತೆಯ ವಿಷಯಗಳನ್ನು ಅಲ್ಲಿ ಕುಳಿತು ಮೇಲುಕುಹಾಕಿ ಬರುತ್ತೇನೆ.ನಿರಂತರ ಮಂಥನಗಳಲ್ಲಿ ಸಿಗದ ಆತ್ಮ,ಪರಮಾತ್ಮನ ವಿಷಯವನ್ನು ಇದು ಹೀಗೆಯೇ ನೋಡು ಅಂತ ಅಪ್ಪ ಮೇಲೆದ್ದು ಬಂದು ಹೇಳುವ ಹಾಗಿದ್ದರೆ,ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ಲವೇ?
Photo by Ashley Batz on Unsplash
ಅಪ್ಪನ ಆತ್ಮದ ಪರಿಕಲ್ಪನೆಯನ್ನು ಆಧುನಿಕ ಕಂಪ್ಯೂಟರ್ ತೆಕ್ಕೆಯಲ್ಲಿ ಅಡಗಿದ ತಂತ್ರಾಂಶದಲ್ಲಿ ಜೀವಂತಿಕೆ ನಿದರ್ಶನ ಅಧ್ಬುತ ಕಲ್ಪನೆ. ಪರಮಾತ್ನ ಚೇತನ ಶಕ್ತಿ ದೇಹದಲ್ಲಿ ವ್ಯಾಪಿಸಿದೆ. ಅದನ್ನು ಗುರುತಿಸುವ ನಿನ್ನ ಪ್ರಯತ್ನ ಆಧ್ಯಾತ್ಮಿಕ ಆಳದ ತಳಹದಿ ಹೊಂದಿದೆ ಮಂಜು.
ಸದಾ ಚಿಂತನಾಶೀಲ ಬರವಣಿಗೆಯಲ್ಲಿ ಗಮನ ಸೆಳೆದ್ದೀಯ
ನಮಸ್ಕಾರ ಮಂಜುನಾಥಅವರೆ,
ತಾವು ಬರೆದಿರುವ ಲೇಖನ ಓದಿ, ತುಂಬಾ ಯೋಚಿಸುವಂತಾಯಿತು. ಹಾಗೆ ಎಲ್ಲವನ್ನೂ ನಿಜಜೀವನಕ್ಕೆ ತಾಳೆ ಹಾಕಿ ನೋಡುವ ನಿಮ್ಮ ತಂದೆಯವರ ಬಗ್ಗೆ ಬಹಳ ಕೌತುಕವಾಯಿತು.
Touching article
ಜೀವತ್ಮ ಮತ್ತು ಪರಮಾತ್ಮರನ್ನು ಗಣಕಯಂತ್ರದೊಂದೊಂದಿಗೆ ಹೋಲಿಸಿ ವಿಶ್ಲೇಷಣೆ ಅರ್ಥಪೂರ್ಣ.👏👏
ನಿಮ್ದೂ ಒಂಥರಾ ತಲೆ ಮತ್ತು ಅದರೊಳಗಿನ ಬುದ್ದಿ…. ಇರಲಿ ಅದರಿಂದ ನಮ್ಮಂಥವರಿಗೂ ಸ್ವಲ್ಪ ಜ್ಞಾನ…..
ನಿನ್ನ ಈ ಅತ್ಯುತ್ತಮ ಬರಹವನ್ನು ವ್ಯಾಖ್ಯಾನಿಸುವ ಪದಗಳು ನನ್ನಲ್ಲಿಲ್ಲ ಗೆಳೆಯ….Ultimate.
Excellent analysis and comparison…..seeing another fantastic face of Manjunath
ಆಪ್ಪ ಸತ್ತು ಇನ್ನೆರಡು ದಿನಕ್ಕೆ ಒಂದು ವರ್ಷ ಆಗ್ತಿದೆ. ಅಪ್ಪನ ಆತ್ಮ ಆ ಸಮಾಧಿಯಲ್ಲಿಯೇ ಇರಬಹುದು ಅನ್ನುವ, ಅಪ್ಪ ಹೇಳಿದ್ದ ಅನ್ನುವ ಕಾರಣಕ್ಕೆ ನಾಳೆ ಅಲ್ಲಿಗೆ ಹೋಗಿ ತಿಳಿದ ಪೂಜೆ ಮಾಡಿ, ಅಪ್ಪನೊಂದಿಗಿನ ನನ್ನೆಲ್ಲಾ ಅಧ್ಯಾತ್ಮಿಕತೆಯ ವಿಷಯಗಳನ್ನು ಅಲ್ಲಿ ಕುಳಿತು ಮೇಲುಕುಹಾಕಿ ಬರುತ್ತೇನೆ.ನಿರಂತರ ಮಂಥನಗಳಲ್ಲಿ ಸಿಗದ ಆತ್ಮ,ಪರಮಾತ್ಮನ ವಿಷಯವನ್ನು ಇದು ಹೀಗೆಯೇ ನೋಡು ಅಂತ ಅಪ್ಪ ಮೇಲೆದ್ದು ಬಂದು ಹೇಳುವ ಹಾಗಿದ್ದರೆ,ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ಲವೇ?
Very moving and toching.🙏🙏
Boss ,tears oozing from my eyes
Written from the heart.
Beautifully written Manju. It’s a great tribute to you father who has instilled this curiosity about adhyatma in you.
Sure he will be proud of you.
ವೆರಿ ಗುಡ್ ಕಂಪ್ಯಾರಿಸನ್
Very good comparison to hunderstand athma, paramathma. It is very useful to young generation
Beutiful writing ,it is a deep subject ,u narrated nicely, my respects to your father anniversary day ,great soul. Write on your mother’s anniversary day also like this ,
ಅರ್ಥ ಗರ್ಭಿತವಾದ ಲೇಖನ. Bm. ನಮಗೆ ಗೊತ್ತಿರದ ವಿಷಯ ತಿಳಿದು ಈಗೂ ಉಂಟ ಅನ್ನುವ ಭಾವನೆ ಮನಸಲ್ಲಿ ಮೂಡಿ ಮರೆಯಾಗುತ್ತೆ. ನಿಮ್ಮ ಪ್ರತಿಯೊಂದು ಲೇಖನದಲ್ಲೂ ಹೊಸತನ ಮೂಡಿ ಬರುತಿದೆ. ನನ್ನದೊಂದು ಸಲಹೆ ನಿಮ್ಮೆಲ್ಲ ಬರವಣಿಗೆ ಒಂದು ಪುಸ್ತಕ ರೂಪ ತಾಳಿದಾದರೆ ಎಲ್ಲರಿಗೂ ಉಪಯೋಗ ವಾಗುತ್ತೆ. ಆ ನಿಟ್ಟಿನಲ್ಲಿ ಯೋಚಿಸಿ. ಧನ್ಯವಾದಗಳು 🙏🙏
Well written.
About your father I still remember his simplicity.
A year sounds like such a long time but without him for you all it has gone in the blink of an eye. We all miss him more than words can say. Rest in peace
ಅ ಕ್ಷರ ಅಂದ್ರೆ ಕ್ಷರ ಅಥವಾ ನಾಶ ಇಲ್ಲದ್ದು ಅಂತೆ. ಅಂತಹ ಅಕ್ಷರಗಳನ್ನು ಕಲಿಸಿದ ಅಪ್ಪನನ್ನು ಅವೇ ಅಕ್ಷರಗಳಲ್ಲಿ ಕಾಣುವ ನನ್ನ ಹಂಬಲಕ್ಕೆ ನಿಮ್ಮ ಅನಿಸಿಕೆಗಳು ಬೆಂಬಲವಾಗಿವೆ. ಧನ್ಯವಾದಗಳು, ಓದಿದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ.