ಡಿ.ಸಿ.ಬಾಬು ಕಳೆದ ಇಪ್ಪತ್ತೈದು ವರ್ಷಗಳಿಂದ ನೇಯ್ಗೆಯನ್ನೇ ನಂಬಿ ಬದುಕುತ್ತಿರುವ, ಬೇರಾವ ಕಲೆಯೂ ಗೊತ್ತಿಲ್ಲದ ನೇಕಾರ. ಸರಾಗವಾಗಿ ಬದುಕಿನ ಹಾಯಿದೋಣಿ ನಡೆಸುತ್ತಿದ್ದ ಆತನಿಗೆ ನದಿಯ ಮಧ್ಯದಲ್ಲಿ ದಡ ಸೇರದ ಪರಿಸ್ಥಿತಿ. ಮತ್ತೊಂದು ಕೆಲಸ ಮಾಡಲಾಗದ ಇರುವ ಕೆಲಸದಲ್ಲಿ ಮುಂದುವರಿಯಲಾಗದ ಸಂಕಷ್ಟ.
ಕೋವಿಡ್-19 ಅಸಂಖ್ಯ ವೃತ್ತಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅದರಲ್ಲಿ ನೇಕಾರಿಕೆಯೂ ಒಂದು. ನಿತ್ಯ ನೇಯುವ ಕಾಯಕದಿಂದ ಬದುಕಿನ ಬಂಡಿ ನಡೆಸುತ್ತಿದ್ದ ಅಸಂಖ್ಯ ಕುಟುಂಬಗಳು ಮುಂದೇನು ಎಂದು ತೋಚದೆ ಕಂಗಾಲಾಗಿವೆ. ಕಳೆದ 10 ತಿಂಗಳಿಂದಲೂ ನಿಂತು ಹೋಗಿರುವ ಆದಾಯ ಇನ್ನು ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ.
ಸ್ವಂತ ಮಗ್ಗ ಹೊಂದಿದ್ದರೂ ಕೂಲಿಗೆ ಬಟ್ಟೆ ನೇಯುವ ಈತನಿಗೆ ಸದ್ಯ ಹದಿನೈದು ದಿನಕ್ಕೆ ಹತ್ತು ಸೀರೆಗಳ ನೇಯುವ ಕೆಲಸ ದೊರೆಯುತ್ತಿದೆ. ಇದು ಉಪ್ಪು, ಸೊಪ್ಪಿಗೂ ಸಾಕಾಗದು. ಅಲ್ಲದೆ ಕೋವಿಡ್-19 ಸಮಸ್ಯೆಯ ಹಿನ್ನೆಲೆಯಲ್ಲಿ ಕೆಲಸ ಕಡಿಮೆ ಮಾಡಿರುವುದೇ ಅಲ್ಲದೆ ಕೂಲಿಯನ್ನೂ ಕಡಿಮೆ ಮಾಡಲಾಗಿದೆ. ನೇಯ್ಗೆ ಬಿಟ್ಟು ಬೇರೆ ಕೆಲಸ ಗೊತ್ತಿಲ್ಲದ ಬಾಬು ಮುಂದೇನು ಎಂದು ತಲೆ ಮೇಲೆ ಕೈ ಹೊತ್ತಿಕೊಂಡಿರುವ ಅಸಂಖ್ಯ ನೇಕಾರರಲ್ಲಿ ಒಬ್ಬನಾಗಿದ್ದಾನೆ.
ಹೊಸ ವೃತ್ತಿ ಕಷ್ಟ
ನೇಯ್ಗೆಯೇ ಒಂದು ಕೌಶಲ್ಯ. ಆದರೆ ಅದಕ್ಕೆ ಬೆಲೆ ಇಲ್ಲದಾಗ ಬೇರೆ ಹೊಸ ಕೌಶಲ್ಯ ಕಲಿಯಲು ಸಮಯವೂ ಇಲ್ಲದೆ ಕೆಲವರು ಹತ್ತಿರದ ಫ್ಯಾಕ್ಟರಿಗಳಲ್ಲಿ ಸೆಕ್ಯುರಿಟಿಗಳಾಗಿ ಸೇರಿದ್ದಾರೆ. ಅದರಲ್ಲೂ ಹಲವು ಬಗೆಯ ಸಂಕಷ್ಟಗಳಿವೆ. ಸ್ವಂತವಾಗಿ ಇನ್ನೊಬ್ಬರ ಹಂಗಿಲ್ಲದೆ ಬದುಕುತ್ತಿದ್ದ ನೇಕಾರರು ಮತ್ತೊಬ್ಬರ ಅಡಿಯಲ್ಲಿ ಸೆಕ್ಯುರಿಟಿಯಾದರೂ ಸಂಕಷ್ಟಕ್ಕೆ ಕೊನೆಯಿಲ್ಲ. ದಿನಕ್ಕೆ 12 ಗಂಟೆ ಕೆಲಸ. ರಾತ್ರಿ ಪಾಳಿಯಲ್ಲಿ ನಿದ್ರೆ ಕೆಡಬೇಕು. ಅಲ್ಲದೆ ಪಾಳಿಯಲ್ಲಿ ಬದಲಾವಣೆಯಾಗುವ ದಿನ 24 ಗಂಟೆ ಕೆಲಸ ಮಾಡಬೇಕು. ಈ ಅಮಾನವೀಯ ವೃತ್ತಿ ಚಕ್ರದಲ್ಲಿ ಈಗಾಗಲೇ ಕೆಲವರು ಸಿಕ್ಕಿಕೊಂಡಿದ್ದಾರೆ. ಕೆಲವರು ಅಲ್ಲಿರಲಾಗದೆ ಬಿಟ್ಟು ಬಂದಿದ್ದಾರೆ. ಅಷ್ಟೇ ಸಮಯ ನೇಯ್ಗೆ ಕೆಲಸ ಮಾಡಿದರೆ ಕುಟುಂಬದೊಂದಿಗೆ ಉಂಡು ಉಳಿಸಿ, ಸಂತೋಷವಾಗಿರಬಹುದಿತ್ತು. ಈಗಾಗಲೇ ಮಧ್ಯಮ ವಯಸ್ಸಿನಲ್ಲಿರುವ ನೇಕಾರರು ಹೊಸ ವೃತ್ತಿಗೆ ಹೊಂದಿಕೊಳ್ಳಲಾರರು. ಇತರೆ ಕೌಶಲ್ಯಗಳ ಕೆಲಸಗಳನ್ನು ಕಲಿಯಲು ಸಾಧ್ಯವಿಲ್ಲ.
ಹತ್ತಿರದ ಗಾರ್ಮೆಂಟ್ ಕಾರ್ಖಾನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆದಿಪ್ರಕಾಶರಿಗೆ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಜೀವನ ನಡೆಸಲು ಈ ಕೆಲಸ ನೆರವಾಗಿದ್ದರೂ ಇದೇ ಕೆಲಸದಲ್ಲಿ ಮುಂದುವರಿದರೆ ಮುಂದೆ ನೇಯ್ಗೆಯಾಗಲಿ ಮತ್ತೊಂದು ಕೆಲಸವಾಗಲೀ ಮಾಡಲು ಸಾಧ್ಯವೇ ಇಲ್ಲ ಎಂಬ ಆತಂಕ ಪ್ರಾರಂಭವಾಗಿ ಅದನ್ನು ಬಿಡಬೇಕಾಯಿತು. ಸಂಪಾದನೆ ಕಡಿಮೆ ಇದ್ದರೂ ಮರಳಿ ಮಗ್ಗಕ್ಕೆ ಬಂದಾಗಿದೆ. ಇದು ಕೈಯಲ್ಲಿರುವ ಕೆಲಸ, ನನಗೆ ನಾನೇ ಯಜಮಾನ. ಆದರೆ ಸೆಕ್ಯುರಿಟಿ ಗಾರ್ಡ್ ಕೆಲಸ ಸುಲಭದಂತೆ ಕಂಡರೂ ರಾತ್ರಿ ಪಾಳಿಗಳಲ್ಲಿ ನಿದ್ರೆಗೆಟ್ಟು ಕಾವಲು ಕಾಯಬೇಕಾದ ಅನಿವಾರ್ಯತೆ, ಗಾರ್ಡ್ ಕೆಲಸದ ಏಕತಾನತೆಯಿಂದ ಮುಂದೆ ನೇಯ್ಗೆ ಉದ್ಯಮ ಸುಧಾರಿಸಬಹುದು ಎಂದು ಮರಳಿದ್ದಾನೆ.
ರೇಷ್ಮೆ ನೇಕಾರರಿಗೂ ಸಂಕಷ್ಟ
ಕೆಲ ವೆರೈಟಿಯ ಸೀರೆಗಳಿಗೆ ತಕ್ಕಷ್ಟು ಬೇಡಿಕೆ ಒದಗಿದೆ. ಸಾದಾ ರೇಷ್ಮೆ ಸೀರೆಗಳನ್ನು ನೇಯುತ್ತಿದ್ದವರು ನಿತ್ಯದ ವ್ಯಾಪಾರ ಕುಂಠಿತವಾಗಿರುವುದರಿಂದ ಸ್ಟಾಕ್ ಮಾಡಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರೇಷ್ಮೆ ನೇಯುತ್ತಿದ್ದವರು ಸಂಕಷ್ಟದಲ್ಲಿದ್ದಾರೆ. ಆದರೆ ಒಟ್ಟಾರೆ ಕೋವಿಡ್-19 ಸಾಂಕ್ರಾಮಿಕವು ನೇಯ್ಗೆಯ ಕೂಲಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಹಾಗೆಂದು ನೇಯ್ಗೆ ಬಹಳ ಚೆನ್ನಾಗಿಯೇನೂ ಇರಲಿಲ್ಲ. ಆಗಾಗ್ಗೆ ಅಮಾನಿಯಿಂದ ನಿಧಾನಗತಿಯಾದರೂ ಮತ್ತೆ ಚೇತರಿಸಿಕೊಳ್ಳುತ್ತಿತ್ತು. ತುತ್ತಿನ ಚೀಲ ತುಂಬಿಸುತ್ತಿತ್ತು. ಈಗ ಚೇತರಿಕೆಯ ಲಕ್ಷಣಗಳೇ ಕಾಣುತ್ತಿಲ್ಲ. ಬದುಕಿನ ಕುರಿತು ಭರವಸೆ, ಮಕ್ಕಳ ಶಾಲೆಗಳಿಗೆ ಶುಲ್ಕ ಕಟ್ಟಲಾಗದ ಸಂಕಷ್ಟ, ಭವಿಷ್ಯದ ಕುರಿತು ಆತಂಕ ಸದ್ಯ ನೇಕಾರರ ಬದುಕಿನ ವಾಸ್ತವಗಳು.
ನೇಯ್ಗೆ ಕುಟುಂಬಗಳು ಹಲವು ಪಲ್ಲಟಗಳನ್ನು ಕಾಣುತ್ತಿವೆ. ನೇಯ್ಗೆ ಕುಟುಂಬಗಳೂ ಕೃಷಿ ಕುಟುಂಬಗಳಂತೆ ಮನೆ ಮಂದಿ ಎಲ್ಲರೂ ನೇಯ್ಗೆಯಲ್ಲಿ ತೊಡಗುತ್ತಾರೆ. ಆದರೆ ಬೇಡಿಕೆಯೇ ಇಲ್ಲದೆ ನೇಯ್ದು ಮಾಡುವುದಾದರೂ ಏನು ಎನ್ನುವುದು ಎಲ್ಲರನ್ನೂ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ.
ಸ್ವಂತ ಮಗ್ಗ ನಡೆಸುವ ವಿಶ್ವನಾಥ್ ಸ್ವಲ್ಪಮಟ್ಟಿಗೆ ಪರವಾಗಿಲ್ಲ ಎನ್ನುವಂತಿದ್ದರೂ ಮಾರುಕಟ್ಟೆಯಿಂದ ಹಣ ಬರುತ್ತಿಲ್ಲ ಎನ್ನುತ್ತಾರೆ. ಕೋವಿಡ್ ಸಮಸ್ಯೆಯಿಂದಾಗಿ ಮಾರುಕಟ್ಟೆಯಲ್ಲಿ ಯಾರಲ್ಲೂ ಹೆಚ್ಚು ಹಣ ವಹಿವಾಟು ಆಗುತ್ತಿಲ್ಲ. ಸೀರೆ ತೆಗೆದುಕೊಂಡರೂ ಉತ್ಸಾಹದಿಂದ ಹಣ ಪಾವತಿಸುವುದಿಲ್ಲ. ಸಾಕಷ್ಟು ಬಾಕಿ ಮಾರುಕಟ್ಟೆಯಲ್ಲಿದೆ. ಮುಂದೆ ನಡೆಸೋದಕ್ಕೆ ಕಷ್ಟ ಎನ್ನುತ್ತಾರೆ.
ಒಟ್ಟಾರೆ ನೇಕಾರರು ನೇಯ್ಗೆಯ ಭವಿಷ್ಯದ ಬಗ್ಗೆ ಭರವಸೆಯೇ ಕಳೆದುಕೊಂಡಿದ್ದಾರೆ. ಒಮ್ಮೆ ಅವರು ಬೇರೆ ಉದ್ಯೋಗಗಳಿಗೆ ಬದಲಾದರೆ ಮತ್ತೆ ನೇಯ್ಗೆಗೆ ಮರಳಲಾಗದೇ ಇರುವ ಪರಿಸ್ಥಿತಿಗೆ ಸಿಲುಕಿಕೊಳ್ಳುತ್ತಾರೆ.
ಶೇ.40ರಷ್ಟು ನೇಯ್ಗೆ ಉದ್ಯಮ ಕಾಣೆ
ನೇಕಾರರ ಹೋರಾಟಗಾರ ನಾಗರಾಜ್ ಹೊಂಗಲ್, “ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಶೇ.40ರಷ್ಟು ನೇಯ್ಗೆ ಉದ್ಯಮ ಕಾಣೆಯಾಗಿದೆ. ಕೋವಿಡ್-19 ಇನ್ನಷ್ಟು ಕುಸಿತಕ್ಕೆ ಕಾರಣವಾಗಿದೆ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳೂ ಇದಕ್ಕೆ ಕಾರಣ. ರಿಯಲ್ ಎಸ್ಟೇಟ್, ಗಣಿಗಾರಿಕೆ ಇತ್ಯಾದಿ ಉದ್ಯಮಗಳು ನೇಯ್ಗೆ ಉದ್ಯಮಕ್ಕೆ ಕಂಟಕವಾಗಿವೆ. ನೇಯ್ಗೆ ನಂಬಿದವರು ಅಲ್ಲಿಂದ ವಿಮುಖರಾಗಿ ಸರಳ ದಾರಿಗಳಲ್ಲಿ ಹಣ ಮಾಡುವ ವಿಧಾನ ಅರಸುತ್ತಿದ್ದಾರೆ” ಎಂದು ಹೇಳುತ್ತಾರೆ.
“ಇಳಕಲ್ ನಲ್ಲಿ ಸಾವಿರಗಟ್ಟಲೆ ಇದ್ದ ಕೈಮಗ್ಗಗಳು ಈಗ ಬೆರಳೆಣಿಕೆಯಷ್ಟಾಗಿವೆ. ಅದೇ ರಾಮದುರ್ಗದಂತಹ ಪ್ರದೇಶಗಳಲ್ಲಿ ನೇಕಾರಿಕೆ ವಿಸ್ತಾರಗೊಳ್ಳುತ್ತಿದೆ. ಇಳಕಲ್ ನಲ್ಲಿ ಸಾವಿರದೈನೂರು ಇದ್ದ ವಿದ್ಯುಚ್ಛಾಲಿತ ಮಗ್ಗಗಳು ಈಗ ನಾಲ್ಕುನೂರರಷ್ಟಾಗಿವೆ. ಅದೇ ರೀತಿಯಲ್ಲಿ ದೊಡ್ಡಬಳ್ಳಾಪುರ, ಯಲಹಂಕ, ಬೆಂಗಳೂರುಗಳಲ್ಲಿ ಹತ್ತಾರು ಸಾವಿರ ಮಗ್ಗಗಳಿಂದ ನೇಯ್ಗೆ ಮಾಡುತ್ತಿದ್ದರು. ಈಗ ಅರ್ಧದಷ್ಟು ಮಗ್ಗಗಳು ಕಾಣೆಯಾಗಿವೆ“.
“ಕೋವಿಡ್-19ರಿಂದ ಸಂಕಷ್ಟಕ್ಕೆ ಸಿಲುಕಿದ ನೇಕಾರರಿಂದ ಸರ್ಕಾರ ಸರ್ಕಾರ ಸೀರೆಖರೀದಿ ಮಾಡುವ ಭರವಸೆ ನೀಡಿದ್ದರೂ ಅದು ಈಡೇರಿಲ್ಲ. ನೇಕಾರಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮ ಇದು. ಜನರು ನೇಕಾರಿಕೆಯ ಆಚೆಗೆ ಉದ್ಯೋಗಗಳನ್ನು ಅರಸುತ್ತಿದ್ದಾರೆ. ನೇಯ್ಗೆಗೆ ಯುವಜನರನ್ನು ಆಕರ್ಷಿಸದೇ ಇದ್ದಲ್ಲಿ ನೇಕಾರಿಕೆ ಸಾಯುವುದು ಖಂಡಿತ” ಎನ್ನುತ್ತಾರೆ.