26.3 C
Karnataka
Saturday, November 23, 2024

    32 ವರ್ಷದ ಬದುಕಿನಲ್ಲಿ 300 ವರ್ಷದ ಸಾಧನೆ ಮಾಡಿದ ಗಣಿತ ಶಾಸ್ತ್ರದ ದಿವ್ಯಜ್ಞಾನಿ

    Must read

    ನಮ್ಮ ದೇಶದಲ್ಲಿ ಜನಿಸಿ, ಪ್ರಪಂಚದಾದ್ಯಂತ ಖ್ಯಾತಿಯನ್ನು ಪಡೆದ ವಿಜ್ಞಾನಿಗಳ ಪಂಕ್ತಿಗೆ ಸೇರುವ ಆಧುನಿಕ ಗಣಿತ ಶಾಸ್ತ್ರದ ದಿವ್ಯಜ್ಞಾನಿ, ಗಣಿತಾಚಾರ್ಯ ಶ್ರೀನಿವಾಸ ರಾಮಾನುಜನ್.ಇಂದು ಅವರ ಜನುಮ ದಿನ.

    ಇವರಂತಹ ಶ್ರೇಷ್ಠ ವಿಜ್ಞಾನಿಗಳ ಸಂಖ್ಯೆ ಬಹಳ ವಿರಳ ಎಂದು ಹೇಳಿದರೆ ತಪ್ಪಾಗಲಾರದು.ಕೇವಲ ಮೂವತ್ತೆರಡು ವರ್ಷಗಳ ಜೀವನದಲ್ಲಿ ಗಣಿತಶಾಸ್ತ್ರದಲ್ಲಿಅದ್ಭುತ ಸಾಧನೆಯನ್ನು ಮಾಡಿದ ಮಹಾನ್ ವ್ಯಕ್ತಿ. ಪ್ರತಿಯೊಂದು “ಧನಪೂರ್ಣಾಂಶವು ರಾಮಾನುಜನ್ನರ ವೈಯಕ್ತಿಕ ಮಿತ್ರಗಳಲ್ಲೊಂದು” ಎಂಬುದು ಲೋಕ ಪ್ರಖ್ಯಾತದ ನುಡಿ.ಅವರು ಶುದ್ಧ ಗಣಿತ ಶಾಸ್ತ್ರದಲ್ಲಿ ಯಾವುದೇ ಔಪಚಾರಿಕ ತರಬೇತಿಯನ್ನು ಪಡೆಯದಿದ್ದರೂ, ಗಣಿತಶಾಸ್ತ್ರದ ವಿಶ್ಲೇಷಣೆ (Mathematical Analysis) , ಸಂಖ್ಯೆಯ ಸಿದ್ಧಾಂತ (Number Theory), ಅನಂತ ಸರಣಿ(Infinite series) ಮತ್ತು ಮುಂದುವರಿದ ಭಿನ್ನರಾಶಿಗಳು (Continued Fractions) ಇವುಗಳ ಬಗ್ಗೆ ಗಣನೀಯವಾದ ಕೊಡುಗೆಯನ್ನು ನೀಡಿದರು.

    ರಾಮಾನುಜನ್‌ರವರು ಡಿಸೆಂಬರ್‌ ಇಪ್ಪತ್ತೆರೆಡು, 1887 ರಲ್ಲಿಈಗಿನ ತಮಿಳುನಾಡಿನ ಈರೋಡ್ ಪಟ್ಟಣದಲ್ಲಿ ಜನಿಸಿದರು.ಬಡ ಮತ್ತು ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ, ಬಡತನದ ಬೇಗೆಯನ್ನು ಅನುಭವಿಸಿದರು.ಇವರ ತಂದೆ ಕೆ.ಶ್ರೀನಿವಾಸ ಅಯ್ಯಂಗಾರ್‌ ಮತ್ತು ತಾಯಿ ಕೋಮಲತಮ್ಮಾಳ್.ತಂದೆ ಒಂದು ಬಟ್ಟೆಯ ಅಂಗಡಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡಿ ಕೇವಲ ಇಪ್ಪತ್ತು ರೂಪಾಯಿಗಳ ವೇತನವನ್ನುಪಡೆಯುತ್ತಿದ್ದರು.

    1892 ರಲ್ಲಿ ಕುಂಭಕೋಣಂ ಪಟ್ಟಣದಲ್ಲಿರುವ ಪಯಾಲ್ ಶಾಲೆಗೆ ಪ್ರವೇಶ ಪಡೆದರು.ನಂತರ, ಕಂಗಾಯನ್ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಶಾಲೆಯಲ್ಲಿಇವರ ಜ್ಞಾಪಕ ಶಕ್ತಿಯನ್ನು ಕಂಡು, ಉಪಾಧ್ಯಾಯರುಗಳು ಮತ್ತು ಸಹಪಾಠಿಗಳು ಬೆರಗಾಗುತ್ತಿದ್ದರು. ಹತ್ತನೆಯ ವಯಸ್ಸಿನಲ್ಲಿ ಅಂದರೆ, 1897 ರ ನವೆಂಬರ್‌ ಪರೀಕ್ಷೆಯಲ್ಲಿ, ಆಂಗ್ಲ ಭಾಷೆ, ತಮಿಳು, ಭೂಗೋಳ ಮತ್ತುಅಂಕಗಣಿತದಲ್ಲಿ ಜಿಲ್ಲೆಗೆ ಹೆಚ್ಚು ಅಂಕಗಳನ್ನು ಗಳಿಸಿ, ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಟೌನ್‌ ಫ್ರೌಢಶಾಲೆಗೆ ಪ್ರವೇಶವನ್ನು ಪಡೆದರು. ಚಿಕ್ಕ ವಯಸ್ಸಿನಲ್ಲಿಯೇ ಎರಡರ (2) ಮೂಲವರ್ಗ(Square root) ಮತ್ತು‘e’ನ ಬೆಲೆಗಳನ್ನು ಅತಿ ಹೆಚ್ಚು ದಶಮಾಂಶ ಸ್ಥಳಗಳಿಗೆ ಕೊಡತ್ತಿದ್ದರಂತೆ. ಇವರು ಗಳಿಸಿದ ಅಂಕಗಳನ್ನು ಆಧರಿಸಿ ಶಾಲೆಯಲ್ಲಿಅರ್ಧ ಶುಲ್ಕ ವಿನಾಯಿತಿಯನ್ನು ನೀಡಲಾಯಿತು.

    ಪ್ರೊ. ಪಿ.ಶೇಷು ಅಯ್ಯರ್ ಮತ್ತು ದಿವಾನ್ ಬಹದೂರ್‌ ರಾಮಚಂದ್ರರಾಯರು ಹೇಳಿರುವಂತೆ, ಆಗಿನ ಸೆಕೆಂಡ್ ಫಾರಂ ವಿದ್ಯಾರ್ಥಿಯಾಗಿ, ಗಣಿತಶಾಸ್ತ್ರಕ್ಕೆ ಸಂಬಂಧಿಸಿದಂತೆ ಗರಿಷ್ಠ ಮಟ್ಟದ ಸತ್ಯವನ್ನುಕಂಡು ಕೊಳ್ಳುವ ಅಪರೂಪದ ಮತ್ತು ಮಹತ್ವದ ಆಸಕ್ತಿಯನ್ನು ಹೊಂದಿದ್ದರು. ಹನ್ನೆರಡನೇ ವಯಸ್ಸಿನಲ್ಲಿ ಲೋನಿಯವರ ತ್ರಿಕೋನ ಮಿತಿ (Trigonometry) ಪುಸ್ತಕವನ್ನು ನೆರೆಯವರಿಂದ ಎರವಲು ಪಡೆದು, ಎಲ್ಲಾ ಅಂಶಗಳನ್ನು ಗ್ರಹಿಸಿ, ಪುಸ್ತಕದಲ್ಲಿರುವ ಪ್ರತಿಯೊಂದು ಸಮಸ್ಯೆಯನ್ನು ಬಿಡಿಸಿದರು. ಹದಿಮೂರನೇ ವಯಸ್ಸಿನಲ್ಲಿ ಯಾರ ಸಹಾಯವು ಇಲ್ಲದೆ, ಸೈನ್ ಮತ್ತು ಕೊಸೈನ್‌ ತ್ರಿಕೋನಮಿತ ಅನುಪಾತಗಳಿಗೆ ಆಯಿಲರ್‌ ಪ್ರಮೇಯವನ್ನು ತೋರಿಸಿಕೊಟ್ಟರು. ಹೀಗೆ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಗಣಿತ ಶಾಸ್ತ್ರದಲ್ಲಿ ರಾಮಾನುಜನ್‌ರವರಿಗಿರುವ ಆಸಕ್ತಿ ಮತ್ತುಅಗಾಧವಾದ ಪ್ರತಿಭೆ ವ್ಯಕ್ತವಾಯಿತು.

    ಇದೇ ಸಮಯಕ್ಕೆ ಗಣಿತಶಾಸ್ತ್ರಜ್ಞ ಕಾರ್ ಬರೆದಿರುವ “ಶುದ್ಧ ಮತ್ತು ಅನ್ವಯಿಸಿದ ಗಣಿತ ಶಾಸ್ತ್ರದ ಮೂಲ ರೂಪದ ಫಲಿತಾಂಶಗಳುಳ್ಳ ಸಾರಾ ಸಂಗ್ರಹ”ದ ಪುಸ್ತಕ ರಾಮಾನುಜನ್‌ರವರಿಗೆ ದೊರೆಯಿತು.
    ಆರುಸಾವಿರ ಪ್ರಮೇಯಗಳನ್ನು ಈ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.ಈ ಪ್ರಮೇಯಗಳು ರಾಮಾನುಜನ್‌ರವರನ್ನು ಸ್ಪೂರ್ತಿಗೊಳಿಸಿ, ಅವರ ಜೀವನ ವೃತ್ತಿಗೆ ನಾಂದಿಯಾಗಿ ಪರಿಣಮಿಸಿತು.ಕೆಲವೊಂದು ಪ್ರಮೇಯಗಳನ್ನು ತಮ್ಮ ಆಲೋಚನಾ ಶಕ್ತಿಯನ್ನು ಬಳಸಿ, ತಮ್ಮದೇ ಆದ ಪದ್ಧತಿಯಲ್ಲಿ ಸಾಧಿಸಿ ತೋರಿಸಿದರು. ಮಡಿಸಿದ ಹಾಳೆಗಳ ಮೇಲೆ ನೂರಾರು ಪ್ರಮೇಯಗಳನ್ನು ಬರೆದು ದಾಖಲಿಸಿದರು.ಈ ಸಂಗ್ರಹವು ಇಂದು ರಾಮಾನುಜನ್‌ರವರ “ನೋಟ್‌ಬುಕ್ ”ಎಂಬುದಾಗಿ ಹೆಸರುವಾಸಿಯಾಗಿದೆ.

    1903 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪ್ರಥಮದರ್ಜೆಯನ್ನು ಪಡೆದರು.ನಂತರ, ಕುಂಭಕೋಣಂನಲ್ಲಿರುವ ಸರ್ಕಾರಿಕಾಲೇಜಿನಲ್ಲಿ ಎಫ್. ಎ. ಕ್ಲಾಸಿಗೆ ಪ್ರವೇಶವನ್ನು ಪಡೆದರು. ಎಫ್.ಎ.ಕ್ಲಾಸಿನಲ್ಲಿ ರಾಮಾನುಜನ್‌ರು ಓದಬೇಕಾಗಿದ್ದ ವಿಷಯಗಳು: ಇಂಗ್ಲೀಷ್, ಗಣಿತಶಾಸ್ತ್ರ, ಶರೀರಶಾಸ್ತ್ರ, ಗ್ರೀಕ್ ಮತ್ತುರೋಮನ್‌ ಇತಿಹಾಸ ಮತ್ತು ಸಂಸ್ಕೃತ. ಆದರೆ, ಗಣಿತಶಾಸ್ತ್ರದ ಬಗ್ಗೆ ಇವರಿಗೆ ಆಸಕ್ತಿ ಮತ್ತು ಪ್ರೇಮ ಎಷ್ಟರ ಮಟ್ಟಿಗೆ ಇತ್ತೆಂದರೆ, ಸದಾಕಾಲ ಗಣಿತಶಾಸ್ತ್ರ ಅಧ್ಯಯನದಲ್ಲಿ ಮಗ್ನನಾಗಿರುತ್ತಿದ್ದರು. ಪರಿಣಾಮವಾಗಿ ಬೇರೆಲ್ಲಾ ವಿಷಯಗಳಲ್ಲಿ ಅನುತ್ತೀರ್ಣರಾಗಿ, ವಿದ್ಯಾರ್ಥಿ ವೇತನವನ್ನುಕಳೆದುಕೊಂಡರು.ಎಫ್.ಎ. ಕ್ಲಾಸ್‌ನಲ್ಲಿಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಕಾಲೇಜು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು.

    ಪರೀಕ್ಷೆಯಲ್ಲಿಅನುತ್ತೀರ್ಣ, ನಿರುದ್ಯೋಗ, ಮನೆಯಲ್ಲಿ ಬಡತನ ಇವುಗಳು ಯಾವುವು ಸಹ ರಾಮಾನುಜನ್‌ರವರಿಗೆ ಗಣಿತಶಾಸ್ತ್ರದಲ್ಲಿದ್ದ ಆಸಕ್ತಿಯನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ. ಇಪ್ಪತ್ತೆರಡನೆ ವಯಸ್ಸಿನಲ್ಲಿ ಜಾನಕಿದೇವಿ ಜೊತೆಯಲ್ಲಿ ವಿವಾಹವಾಯಿತು. 1910 ರಲ್ಲಿ ರಾಮಾನುಜನ್‌ರವರು ಇಂಡಿಯನ್‌ ಮ್ಯಾಥಮೆಟಿಕಲ್ ಸೊಸೈಟಿ ಸಂಸ್ಥೆಯ ಸ್ಥಾಪಕರಾದ ಪ್ರೊ.ವಿ.ರಾಮಸ್ವಾಮಿ ಅಯ್ಯರ್ ಅವರನ್ನು ಭೇಟಿ ಮಾಡಿ ಸಹಾಯ ಮಾಡುವಂತೆ ಕೋರಿದರು.ರಾಮಾನುಜನ್ನರ ನೋಟ್ ಪುಸ್ತಕವನ್ನು ಅಧ್ಯಯಿಸಿ, ಅವರ ಮಹಾಪ್ರತಿಭೆಯನ್ನು ಕೂಡಲೇ ಗುರುತಿಸಿದರು. ನಂತರ, ತಮ್ಮಸ್ನೇಹಿತರಾಗಿದ್ದ ಶೇಷು ಅಯ್ಯರ್‌ರವರ ಮೂಲಕ, ನೆಲ್ಲೂರಿನಲ್ಲಿ ಸಹ ಕಲೆಕ್ಟರ್‌ರಾಗಿದ್ದ ರಾಮಚಂದ್ರರಾಯರನ್ನು ಭೇಟಿ ಮಾಡಲು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರಾಮಾನುಜನ್‌ರವರಿಗೆ ಅನುಕೂಲ ಮಾಡಿಕೊಟ್ಟರು. ರಾಮಾನುಜನ್ನರನ್ನು ಭೇಟಿಮಾಡಿದ ರಾಮಚಂದ್ರರಾಯರು ಹೀಗೆ ಹೇಳಿದ್ದಾರೆ.

    ಕುಳ್ಳಗೆ, ಸ್ವಲ್ಪ ಮಟ್ಟಿಗೆ ದಪ್ಪನಾದ ಬಡಯುವಕನೊಬ್ಬಒಂದು ನೋಟ್‌ಪುಸ್ತಕ ಹಿಡಿದು ನನ್ನ ಬಳಿಗೆ ಬಂದ. ತಾನು ಸಾಧಿಸಿದ್ದ ಪ್ರಮೇಯಗಳನ್ನು ನನ್ನಮುಂದಿಟ್ಟ. ವಿಲಕ್ಷಣವಾಗಿದ್ದ ವಿಷಯಗಳು ನನಗೆ ಅರ್ಥವಾಗಲಿಲ್ಲ. ಮತ್ತೊಮ್ಮೆ ಬರುವಂತೆಸೂಚಿಸಿದೆ. ನನಗೆ ವಿಷಯ ಅರ್ಥವಾಗಲಿಲ್ಲವೆಂದು ಆ ಯುವಕ ಅರಿತುಕೊಂಡು, ಬಹಳಷ್ಟು ಧೈರ್ಯದಿಂದ ಮೊದ ಮೊದಲು ಸುಲಭವಾದ ಪ್ರಮೇಯಗಳನ್ನು ತೋರಿಸಿ, ಕ್ರಮೇಣ ಜಟಿಲವಾದಂತ ವಿಷಯಗಳನ್ನು ಅರ್ಥೈಸಿದ. ಇದರಿಂದ, ಈ ಯುವಕ ಪ್ರತಿಭಾವಂತಎಂದು ನನಗೆ ಅರಿವಾಯಿತು. ಹೊಟ್ಟೆ ಪಾಡಿಗಾಗಿ ಕೆಲಸ ನೀಡಿದರೆ, ಸಂಶೋಧನೆಯನ್ನು ಮುಂದುವರಿಸುವ ಉತ್ಸುಕತೆ ಅವನದು.

    ರಾಮಚಂದ್ರರಾಯರ ಪ್ರಯತ್ನದಿಂದ, 1913 ರಲ್ಲಿರಾಮಾನುಜನ್ನರಿಗೆ ಮದ್ರಾಸ್‌ ಬಂದರಿನಲ್ಲಿ ಗುಮಾಸ್ತ ಕೆಲಸ ದೊರೆಯಿತು. ವೇತನ ಮೂವತ್ತು ರೂಪಾಯಿಗಳು.ಕಚೇರಿ ಕೆಲಸದ ನಡುವೆಯು ರಾಮಾನುಜನ್‌ತನ್ನಅಭ್ಯಾಸವನ್ನು ಮುಂದುವರಿಸುತ್ತಿದ್ದರು.ಅವರು ಆಗಲೆ ಹಲವಾರು ಪ್ರಮೇಯಗಳನ್ನು ಕಂಡು ಹಿಡಿದಿದ್ದರು. ಹಣದಕೊರತೆಯಿಂದಾಗಿ, ಸ್ಲೇಟು ಹಲಗೆಯ ಮೇಲೆಯೇ ಬರೆಯುತ್ತಿದ್ದರು. ಯಾವುದಾದರೂ ವಿಶೇಷವಾದಂತಹ ಫಲಿತಾಂಶ ಹೊಳೆದಾಗ, ನೋಟ್ ಪುಸ್ತಕದಲ್ಲಿ ದಾಖಲಿಸುತ್ತಿದ್ದರು.ಅವರುಕಂಡು ಹಿಡಿದಪ್ರಮೇಯಗಳನ್ನು ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಇದರಿಂದ, ಗಣಿತಶಾಸ್ತ್ರದ ಹಲವಾರು ವಿದ್ವಾಂಸರ ಗಮನಸೆಳೆಯಲು ಸಹಾಯವಾಯಿತು.

    ಹಿತೈಷಿಗಳಾಗಿದ್ದ ಶೇಷು ಅಯ್ಯರ್ ಮತ್ತು ಮೊದಲಾದವರು. ಕೇಂಬ್ರಿಡ್ಜ್‌ನಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಜಿ.ಎಚ್.ಹಾರ್ಡಿಯವರೊಡನೆ ಪತ್ರ ವ್ಯವಹಾರನಡೆಸುವಂತೆಸಲಹೆ ನೀಡಿದರು. ಪ್ರೊ.ಜಿ.ಎಚ್. ಹಾರ್ಡಿಯವರನ್ನು“ರಾಮಾನುಜನ್ನರನ್ನು ನಿಜವಾದ ಅನ್ವೇಷಕ”.ಎಂಬುದಾಗಿಯೇ ಬಣ್ಣಿಸುತ್ತಾರೆ .ಮೊದಲನೆಯ ಪತ್ರದಲ್ಲಿಯೇ (1913 ರಲ್ಲಿ) ತಾವು ಕಂಡುಹಿಡಿದಿದ್ದ 120 ಪ್ರಮೇಯಗಳ ಫಲಿತಾಂಶಗಳನ್ನು ರಾಮಾನುಜನ್ ‌ತಿಳಿಸಿದ್ದರು. ಇವುಗಳನ್ನು ಕಂಡ ಹಾರ್ಡಿಯವರು ರೋಮಾಂಚಿತರಾದರೂ ಸಹ, ರಾಮಾನುಜನ್ ‌ರವರ ಬಗ್ಗೆ ನಂಬಿಕೆ ಬರಲಿಲ್ಲ. ರಾತ್ರಿಯಊಟದ ನಂತರ, ಅವರ ಮಿತ್ರರಾದಪ್ರೊ. ಲಿಟಲ್‌ವುಡ್‌ಜೊತೆಯಲ್ಲಿಸುಮಾರುಎರಡುಮೂರು ತಾಸುಗಳ ಕಾಲ ರಾಮಾನುಜನ್ನರುಕಂಡು ಹಿಡಿದ ಪ್ರಮೇಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ನಂತರ ಅವರಿಗೆ ರಾಮಾನುಜನ್ ಸಾಮಾ ನ್ಯ ಮನುಷ್ಯನಲ್ಲ,ಗಣಿತಶಾಸ್ತ್ರದ ಮೇಧಾವಿ (Mathematical Genius ಎಂಬುದು ಅರಿವಾಯಿತು.

    ಪ್ರೊ.ಹಾರ್ಡಿಯವರುರಾಮಾನುಜನ್‌ರನ್ನುಆಯಿಲರ್ ಮತ್ತು ಜಾಕೋಬಿ ಎಂಬ ಗಣಿತಶಾಸ್ತ್ರದ ವಿದ್ವಾಂಸರಿಗೆ ಹೋಲಿಸಬಹುದು ಎಂದುನುಡಿದಿದ್ದಾರೆ. ರಾಮಾನುಜನ್ ರ ಪ್ರತಿಭೆಹೆಚ್ಚು ಅರಳಲು ಅವಕಾಶ ನೀಡುವ ಸಲುವಾಗಿ, ಪೊ. ಹಾರ್ಡಿಯವರು, ರಾಮಾನುಜನ್ ‌ಅವರಿಗೆ ಇಂಗ್ಲೆಂಡಿಗೆ ಬರುವಂತೆ ಆಹ್ವಾನವನ್ನು ನೀಡಿದರು. ಆಚಾರವಂತರಾಗಿದ್ದ ರಾಮಾನುಜನ್ ತಾಯಿ ಮಗನ ವಿದೇಶ ಪ್ರಯಾಣಕ್ಕೆ ಒಪ್ಪಲಿಲ್ಲ. ಮಿತ್ರರ ಮೂಲಕ ಹಾರ್ಡಿಯವರು ಒತ್ತಡತಂದರು. ತಾಯಿಕೊನೆಗೆ ಒಪ್ಪಿಗೆ ನೀಡಿದರು. 1914, ಮಾರ್ಚ್ 17 ರಂದು ಇಂಗ್ಲೆಂಡ್‌ಗೆ ರಾಮಾನುಜನ್ ಪ್ರಯಾಣ ಬೆಳೆಸಿದರು. ಏಪ್ರಿಲ್ 14 ರಂದು ಇಂಗ್ಲೆಂಡ್ ಸೇರಿದರು. ನಂತರ ನಾಲ್ಕು ವರ್ಷಗಳ ಕಾಲ ಕೇಂಬ್ರಿಡ್ಜ್‌ನಲ್ಲಿ ಪ್ರೊ.ಹಾರ್ಡಿಯವರ ಜೊತೆಗೂಡಿ ಸಂಶೋಧನೆ ನಡೆಸಿದರು. ಈ ಅವಧಿಯಲ್ಲಿ 27 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು.

    “ಥಿಯರಿಆಫ್‌ಪಾರ್ಟಿಸನ್ಸ್”ಬಗ್ಗೆ ರಾಮಾನುಜನ್ ಮಾಡಿರುವ ಸಂಶೋಧನೆ ಅಸಾಧಾರಣ ಮತ್ತುಅಪೂರ್ವ ಎಂಬುದಾಗಿ ಹೆಸರು ವಾಸಿಯಾಗಿದೆ. ಗಣಿತಶಾಸ್ತ್ರದ ವಿವಿಧ ಭಾಗಗಳಾದಂತ, ಮುಂದುವರಿದ ಭಿನ್ನರಾಶಿಗಳು (Continued Fractions), ಹೈಪರ್‌ಜೆಮಿಟ್ರಿಕ್‌ಸರಣಿಗಳು, ಸಂಖ್ಯೆಗಳ ಸಿದ್ದಾಂತ, ದೀರ್ಘವೃತ್ತಾಕಾರದ ಸಮಗ್ರತೆ (Eliptic Integrals) ಇವುಗಳ ಬಗ್ಗೆ ಅಪಾರವಾದ ಸಂಶೋಧನೆಯನ್ನು ಮಾಡಿದ ಮಹಾನ್‌ವ್ಯಕ್ತಿರಾಮಾನುಜನ್.

    ಇವರ ಕೀರ್ತಿ ಇಂಗ್ಲೆಂಡಿನಲ್ಲೆಲ್ಲ ಹರಡಿ, ಭಾರತದೇಶವನ್ನುಸಹ ಮುಟ್ಟಿತು. 1916 ರಲ್ಲಿ ಕೇಂಬ್ರಿಡ್ಜ್‌ ವಿಶ್ವ ವಿದ್ಯಾಲಯವು ಬಿ.ಎ. ಡಿಗ್ರಿ ನೀಡಿ ಗೌರವಿಸಿತು.1918ರಲ್ಲಿ ರಾಯಲ್ ಸೊಸೈಟಿಯ ಫೆಲೋಷಿಪ್ ಪಡೆದರು. ಈ ಫೆಲೋಷಿಪ್ ದೊರೆತ ಮೊಟ್ಟ ಮೊದಲ ಭಾರತೀಯ ಎಂಬ ಕೀರ್ತಿಗೆ ಅರ್ಹರಾದರು. ಇದು ಭಾರತೀಯರಿಗೆ ಹೆಮ್ಮೆಯ ವಿಷಯವಾಯಿತು.ಆಗ ರಾಮಾನುಜನ್ನರ ವಯಸ್ಸು ಕೇವಲ 30ವರ್ಷ.ಆದರೆ ಸಾಧನೆ ಅಸಾಧ್ಯ ಮತ್ತುಅಪೂರ್ವ.

    ಇಂಗ್ಲೆಂಡಿನ ತಣ್ಣನೆಯ ವಾತಾವರಣ, ಆಹಾರ ಪದ್ದತಿ, ಆಚಾರಗಳು, ತಂದೆ-ತಾಯಿ ಹಾಗೂ ಪತ್ನಿಯರ ಬಗ್ಗೆ ಚಿಂತೆ, ಸಂಶೋಧನೆಯಲ್ಲಿ ಮಗ್ನತೆ, ಆರೋಗ್ಯದಕಡೆ ನಿರ್ಲಕ್ಷಗಳಿಂದ ಅವರಆರೋಗ್ಯ ಸ್ಥಿತಿ ಕೆಟ್ಟಿತು. ಕ್ಷಯರೋಗ ಕಾಣಿಸಿತು.1919 ರಲ್ಲಿ ಭಾರತದೇಶಕ್ಕೆ ಹಿಂದಿರುಗಿದರು. ಆಗಿನ ಕಾಲಕ್ಕೆ ತಕ್ಕಂತೆ, ಉತ್ತಮರೀತಿಯ ವೈದ್ಯಚಿಕಿತ್ಸೆ ಮತ್ತು ಆರೈಕೆ ಮಾಡಿದರೂ ಸಹ ಪ್ರಯೋಜನವಾಗಲಿಲ್ಲ. ಅನಾರೋಗ್ಯದ ನಡುವೆಯೂ ಸಹ, “ಮಾಕ್‌ಥೀಟ್ ಫಂಕ್ಷನ್ಸ್”ನನ್ನು ಕಂಡು ಹಿಡಿದರು.
    ಗಣಿತದ ಜೊತೆಗೆ, ಹಸ್ತ ಸಾಮುದ್ರಿಕ ವಿದ್ಯೆಯಲ್ಲಿಯೂ ಸ್ವಲ್ಪ ಮಟ್ಟಿಗೆ ಆಸಕ್ತಿಯಿತ್ತು.ಮರಣದ ಬಗ್ಗೆ ಅವರಿಗೆ ಪೂರ್ವಸೂಚನೆ ಇತ್ತುಎಂಬುದಾಗಿ ಹೇಳಲಾಗಿದೆ. ಹಸ್ತ ರೇಖೆಗಳನ್ನು ನೋಡಿ, ನನ್ನಆಯಸ್ಸುಕೇವಲ 35 ವರ್ಷಗಳು. ಆನಂತರ ನಾನು ಬದುಕಿರುವುದಿಲ್ಲ ಎಂಬುದಾಗಿ ಸ್ನೇಹಿತರೊಡನೆ ಹಲವಾರು ಸಂದರ್ಭಗಳಲ್ಲಿ ಹೇಳಿದ್ದರಂತೆ. ದುರದೃಷ್ಟಕರ, ಅವರು ಹೇಳಿದ ಮಾತುಗಳು ನಿಜವಾಗಿ, ಕೇವಲ 32ನೇ ವಯಸ್ಸಿನಲ್ಲಿಏಪ್ರಿಲ್20,1920 ರಲ್ಲಿ ಇಹಲೋಕ ತ್ಯಜಿಸಿದರು.

    ಪುಟ್ನಿಯಲ್ಲಿ ಒಮ್ಮೆ ಹಾರ್ಡಿಯವರು ರಾಮಾನುಜನ್ ಅವರನ್ನು ಕಾಣಲು ಹೋದರು.ಅವರನ್ನುಕಂಡು, ಈಗ ನಾನು ಟ್ಯಾಕ್ಸಿಯಲ್ಲಿಪ್ರಯಾಣಿಸಿ ಬಂದೆ, ಅದರ ಸಂಖ್ಯೆ 1729. ಈ ಸಂಖ್ಯೆ ವಿಶೇಷ ಗುಣ ಲಕ್ಷಣಗಳಿರುವ ಸಂಖ್ಯೆಯಲ್ಲವಷ್ಟೆಎಂದು ನುಡಿದರು. ಥಟ್ಟನೆ, ರಾಮಾನುಜನ್ನರು ಈ ಸಂಖ್ಯೆಗೆಒಂದು ವಿಶೇಷ ಗುಣವಿದೆ. ಎರಡು ಘನಗಳ ಮೊತ್ತವನ್ನುಅದು ಎರಡು ರೀತಿಯಲ್ಲಿ ಸೂಚಿಸುತ್ತದೆ. ಮತ್ತುಅಂಥ ಸಂಖ್ಯೆಗಳಲ್ಲಿ ಅತಿ ಚಿಕ್ಕದು ಎಂದರು.

    13 +123 =93 +103 =1729. ಗಣಿತಶಾಸ್ತ್ರದಲ್ಲಿಅಪೂರ್ವ ಸಾಧನೆಯನ್ನು ಮಾಡಿ, ದೇಶಕ್ಕೆ ಕೀರ್ತಿಯನ್ನು ತಂದ ರಾಮಾನುಜನ್ ಭೂಮಿಗೆ ಬಂದು ಮಾಯವಾದರು.ರಾಮಾನುಜನ್ ಅವರು 32 ವರ್ಷಗಳಲ್ಲಿ ಕಂಡು ಹಿಡಿದ ಪ್ರಮೇಯಗಳನ್ನು ಮತ್ತು ಸಿದ್ದಾಂತಗಳನ್ನು ಪರಿಪೂರ್ಣವಾಗಿ ತಿಳಿಯಲು ಮುನ್ನೂರು ವರ್ಷಗಳು ಬೇಕೆನ್ನುವ ಮಾತು ವಿಶ್ವ ನುಡಿಯಾಗಿದೆ.

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ. ಸಧ್ಯ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಪದವಿ ಕಾಲೇಜಿನಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ .
    spot_img

    More articles

    13 COMMENTS

    1. ಗಣಿತದ ಅಗಾಧ ಪ್ರತಿಭೆಯ ಬಗ್ಗೆ ಸುದೀರ್ಘವಾದ ಲೇಖನ ಅದ್ಬುತವಾಗಿದೆ. ಅವರ ಅಕಾಲಿಕ ಮರಣ ದುಃಖಕರ. ಇದ್ದಿದ್ದರೆ ಇನ್ನಷ್ಟು ಸಾಧನೆ ಮಾಡುತ್ತಿದ್ದರು

    2. ನಮ್ಮ ದೇಶದ ಮಹಾನ್ ವ್ಯಕ್ತಿಗಳ ಸಾಧನೆಗಳ ಬಗ್ಗೆ ನಮಗೆ, ನಿಮ್ಮ ಬರವಣಿಗೆಗಳ ಮೂಲಕ ಸರಳವಾಗಿ ಅರ್ಥಮಾಡಿಸುತ್ತಿದ್ದೀರಿ. ಧನ್ಯವಾದಗಳು. ಹೀಗೇ ಮುಂದುವರೆಯಲಿ.

    3. ನಿಮ್ಮ ಲೇಖನದಿಂದ ಅವರಿಗೆ ಗಣಿತದ ಬಗ್ಗೆ ಇದ್ದ ಅಪಾರ ಜ್ಞಾನದ ಬಗ್ಗೆ ತಿಳಿಯುತ್ತದೆ.ಅಕಾಲಿಕ ಮರಣದಿಂದ ಅವರು ಸಾಧಿಸುವುದು ಅಸಾಧ್ಯವಾಯಿತು ಅನ್ನೋದು ದುಃಖಕರ ವಿಚಾರ. ಲೇಖಕರಿಗೆ ವಂದನೆಗಳು

    4. Truth of life is different and its love to express is beyond words and that is mathematics . Truely a silent genius from Bharath. Well written sir

    5. Ramanujan should have taken care of his Health. Even the people around should have observed his Health. It is very unfortunate that genius people ignore and give less importance to their social life.

    6. ಇಂತಹ ಮಹಾನ್ ವಿಜ್ಞಾನಿಯ ಬಗ್ಗೆ ಮಾಹಿತಿ ನೀಡಿದ ಬಗ್ಗೆ ಧನ್ಯವಾದಗಳು

    7. The most genious and popular methematician India ever produced.His Contribution in the field of Mathematics is highly appreciable.I thank wholeheartedly,Dr.B.S.Srikanta,for his beautiful presentation about this great personality in a simple and easy language to reach one and all.Thank you Sir.

    8. ಗಣಿತ ಶಾಸ್ತ್ರದಲ್ಲಿ ಭಾರತದ ಹಿರಿಮೆಯನ್ನು ವಿಶ್ವ ಮಟ್ಟದಲ್ಲಿ ರಾರಾಜಿಸಿದ ಕೀರ್ತಿ ಶ್ರೀನಿವಾಸ ರಾಮಾನುಜನ್ ರವರದು. ಪ್ರತಿಭೆಗೆ ಬಡತನ ಅಡ್ಡಿಯಾಗದು ಎಂಬುದಕ್ಕೆ ಶ್ರೀಯುತರು ಸಾಕ್ಷಿಯಾಗಿದ್ದರೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿ ಮಿಂಚಿ ಮರೆಯಾದ ಗಣಿತಶಾಸ್ತ್ರದ ಮಹಾನ್ ತಾರೆ. ಶ್ರೀಯುತರ ಬಡತನದ ಜೀವನ, ಆ ನಡುವೆಯೂ ಮಾಡಿದ ಸಾಧನೆ ಮತ್ತು ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ರೀತಿಯನ್ನು ನಮ್ಮಂತ ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಮನದಟ್ಟಾಗುವಂತೆ ವಿವರಿಸಿದ ತಮಗೆ ಧನ್ಯವಾದಗಳು ಸರ್. ನಿಮ್ಮಿಂದ ಈ ತರಹದ ಮತ್ತಷ್ಟು ಲೇಖನಗಳ ನಿರೀಕ್ಷೆಯಲ್ಲಿ,

    9. ಶ್ರೀನಿವಾಸ ರಾಮಾನುಜಂ ಅವರ ಬಗ್ಗೆ ಮಾಹಿತಿ ನೀಡಿರುವ. ಲೇಖಕರಿಗೆ ಧನ್ಯವಾದಗಳು. ಇಂತಹ ಮಹಾನ್ ವ್ಯಕ್ತಿಯ ಸಾಧನೆ ಪ್ರಶ್ಂಸನೀಯ ಹಾಗು ಅನುಕರನೀಯ. ಮಹಾನ್ ವ್ಯಕ್ತಿಗಳನ್ನು ಅರಿಯಲು ಸಹಕರಿಸಿದ ಕನ್ನಡ ಪ್ರೆಸ್.ನವರಿಗೂ 🙏🙏

    LEAVE A REPLY

    Please enter your comment!
    Please enter your name here

    Latest article

    error: Content is protected !!