ಕಳೆದ 24 ಗಂಟೆಗಳಲ್ಲಿ ಯುನೈಟೆಡ್ ಕಿಂಗ್ಡಮ್ ನಲ್ಲಿ 36,804 ಹೊಸ ಕೋವಿಡ್ ಸೋಂಕುಗಳು ಜನರಲ್ಲಿ ಪತ್ತೆಯಾಗಿವೆ. 691 ಜನರು ಕೋವಿಡ್ ಪಾಸಿಟಿವ್ ಎಂದು ಪತ್ತೆಯಾದ 28 ದಿನಗಳೊಳಗಾಗಿ ಸಾವನ್ನಪ್ಪಿದ್ದಾರೆ.
ಯು.ಕೆ.ಯ ಕೆಲವು ಪ್ರಾಂತ್ಯಗಳಲ್ಲಿ ರೂಪಾಂತರ ಹೊಂದಿದ ಕೋವಿಡ್ ತಳಿಯ ಬಗ್ಗೆ ಅಧಿಕೃತ ಪ್ರಕಟಣೆ ಹೊರಟ ಹಿನ್ನೆಲೆಯಲ್ಲೇ ಪ್ರಪಂಚದ 50 ದೇಶಗಳು ಒಂದೊಂದಾಗಿ ಯು.ಕೆ.ಯನ್ನು ತಮ್ಮ ಸಂಪರ್ಕದಿಂದ ಬೇರ್ಪಡಿಸುವ ಮತ್ತು ಮಿತಗೊಳಿಸುವ ತಮ್ಮ ನಿರ್ಧಾರಗಳನ್ನು ಪ್ರಕಟಿಸಿದವು. ಈ ಹಿನ್ನೆಲೆಯಲ್ಲೇ ಕೆಂಟ್ ಎಂಬ ನಗರದ ಯೂರೋ ಟನಲ್ ಮುಚ್ಚಿಹೋಗಿ ಸುಮಾರು 3000 ಲಾರಿ ಮತ್ತು ಅದರ ಡ್ರೈವರ್ ಗಳು ಬಾರ್ಡರ್ ಕ್ರಾಸ್ ಮಾಡಲು ಅನುಮತಿಯಿಲ್ಲದೆ ಸಿಲುಕಿಕೊಂಡಿದ್ದಾರೆ. ಡೋವರ್ ಎನ್ನುವ ಮತ್ತೊಂದು ಬಂದರು ಕೂಡ ಮುಚ್ಚಿಹೋಗಿದೆ. ಈ ನಗರಗಳ ಮೂಲಕ ಯು.ಕೆ. ಯೂರೋಪು ದೇಶಗಳೊಂದಿಗೆ ಫ್ರಾನ್ಸ್ ಮುಖೇನ ಸಂಪರ್ಕ ಜಾಲ ವ್ಯವಸ್ಥೆಯನ್ನು ಹೊಂದಿದೆ.
ಹಳೆಯ ಕೊರಾನಾಗಿಂತ ಶೇಕಡ 70 ವೇಗವಾಗಿ ಹರಡಬಲ್ಲ ಹೊಸ ತಳಿಯ ಕೊರೋನಾ ಭಯದಲ್ಲಿ ವಿಮಾನ, ಬೋಟ್ ಮತ್ತು ಟ್ರೈನ್ ಎಲ್ಲ ಬಗೆಯ ಪ್ರಯಾಣ ಮತ್ತು ಸರಕು ಸರಬರಾಜುಗಳನ್ನ ಫ್ರಾನ್ಸ್ ದೇಶ ಸ್ಥಗಿತಗೊಳಿಸಿತ್ತು. ಈ ಜಂಜಾಟದ ನಡುವೆ ಗಡಿಯಲ್ಲಿ ಸಿಲುಕ್ಕಿದ್ದ ಸಾವಿರಾರು ಜನರಿಗೆ ತಮ್ಮ ತಮ್ಮ ಮನೆಗಳಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸುವ ಸಲುವಾಗಿ ತಲುಪುವ ಕನಸು ಕಮರಿಹೋಗಿತ್ತು.
ನಿನ್ನೆ ರಾತ್ರಿ ಯು.ಕೆ.ಯ ಸಾರಿಗೆ ಸಚಿವ ಗ್ರಾಂಟ್ ಶ್ಯಾಪ್ಸ್ ಫ್ರೆಂಚರೊಡನೆ ಒಂದು ಒಪ್ಪಂದವನ್ನು ತಲುಪಿದ ಕಾರಣ ಇಂದಿನಿಂದ ಅವರವರ ದೇಶದ ಪ್ರಜೆಗಳು ಆಯಾ ದೇಶಗಳಿಗೆ ಹಿಂತಿರುಗಲು ಅನುಮತಿ ಸಿಕ್ಕಿದೆ. ಯು.ಕೆ.ಯ ಗಡಿಯಲ್ಲಿ ಊಟ, ನಿದ್ದೆ, ಸ್ನಾನ ಮತ್ತು ಬಹಿರ್ದೆಸೆಯಂಥ ಮೂಲ ಭೂತ ಸೌಕರ್ಯವೂ ಇಲ್ಲದೆ ನಲುಗಿದ್ದ ಸಾವಿರಾರು ಜನರು ಇದೀಗ ನಿಧಾನವಾಗಿ ರಸ್ತೆ ಕ್ರಮಿಸಿ ಮನೆ ಸೇರುವ ಕಾತುರದಲ್ಲಿದ್ದಾರೆ. ಇತ್ತ ಯು.ಕೆ.ಗೆ ಬರುವ ಯೂರೋಪಿನ ಸರಬರಾಜು ಸರಪಣಿ ಕಡಿತವಾಗಿರುವ ಕಾರಣ ಇಲ್ಲಿನ ಟೆಸ್ಕೋ, ಮಾರಿಸನ್ ಇತ್ಯಾದಿ ಸೂಪರ್ ಮಾರುಕಟ್ಟೆಗಳು ಜನರಿಗೆ ಇಂತಿಷ್ಟೇ ಎಂದು ಕೆಲವು ಅಗತ್ಯ ವಸ್ತುಗಳ ಖರೀದಿಯನ್ನು ಮಿತಗೊಳಿಸಿದೆ.
ಇದೆಲ್ಲದರ ನಡುವೆ ಇಂದಿನಿಂದ ಡಿಸೆಂಬರ್ 31 ರವರೆಗೆ ಭಾರತವೂ ಯು.ಕೆ.ಯಿಂದ ಬರುವ ಎಲ್ಲ ಪ್ರಯಾಣಗಳನ್ನು ರದ್ದುಗೊಳಿಸಿದೆ. ’ಕೋವಿಡ್ ನೆಗೆಟಿವ್ ’ ಎನ್ನುವ ಪ್ರಮಾಣ ಪತ್ರ ಇದ್ದರೂ ನಿನ್ನೆ ಭಾರತವನ್ನು ತಲುಪಿರುವ ಪ್ರಯಾಣಿಕರಿಗೆ ಮತ್ತೊಂದು ಕೋವಿಡ್ ಪರೀಕ್ಷೆಯನ್ನು ಖಡ್ಡಾಯಗೊಳಿಸಿ, ಕ್ವಾರಂಟೈನ್ ನಲ್ಲಿ ಇರಿಸುವ ನಿರ್ಧಾರಗಳನ್ನು ಕೈಗೊಂಡಿದೆ.
ಹೊಸ ತಳಿ ಹೆಚ್ಚು ಮಾರಕವೇ?
ಕೋವಿಡ್ ವೈರಸ್ಸು ಇತರೆ ಎಲ್ಲ ವೈರಸ್ಸುಗಳಂತೆ ರೂಪಾಂತರಗೊಳ್ಳುವ ಬಗ್ಗೆ ಮೊದಲಿಂದಲೂ ಅರಿವಿತ್ತು. ಹೊಸ ತಳಿಯ ಪತ್ತೆ ಕೆಲವು ತಿಂಗಳ ಹಿಂದೆಯೇ ಆಗಿತ್ತು. ಆದರೆ ಇದೇ ಮೊದಲ ಬಾರಿಗೆ ಯು.ಕೆ.ಯ ಕೆಲವೆಡೆ 70% ವೇಗವಾಗಿ ಹರಡಬಲ್ಲ ಹೊಸ ಸ್ವರೂಪದ ವೈರಸ್ಸು ಕಾಣಿಸಿಕೊಂಡಿದ್ದು ಮತ್ತು ನಿಯಂತ್ರಣವಿಲ್ಲದೆ ಸಾವಿರಾರು ಜನರಲ್ಲಿ ಹರಡಿದ್ದು ಜನಸಾಮಾನ್ಯರಲ್ಲಿ ಹೊಸ ಭಯಗಳಿಗೆ ನಾಂದಿ ಹಾಡಿತು. ಇದೀಗ “ನಮ್ಮಲ್ಲಿಗೂ ಈ ಹೊಸ ತಳಿ ಬಂದರೆ? “- ಎನ್ನುವ ಆತಂಕ ಪ್ರಪಂಚದ ಎಲ್ಲೆಡೆ ಹರಡುತ್ತಿದೆ.
ಈ ಹೊಸ ತಳಿಯು ನಿಯಂತ್ರಣ ಮೀರಿ ಹರಡುತ್ತಿರುವ ಬಗ್ಗೆ ನಿಖರ ಮಾಹಿತಿಯನ್ನು ಪಾರದರ್ಶಕವಾಗಿ ಯು.ಕೆ. ವರದಿಮಾಡಿದ್ದನ್ನು ಎಲ್ಲ ದೇಶಗಳೂ ಮೆಚ್ಚಿವೆ. ಇಲ್ಲಿ ಪತ್ತೆಯಾದ ತಳಿ ದಕ್ಷಿಣ ಆಫ್ರಿಕಾ, ಸ್ವೀಡನ್, ಆಷ್ಟ್ರೇಲಿಯಾ, ಆಶ್ಟ್ರಿಯಾ ಡೆನ್ಮಾರ್ಕ್, ನೆದರ್ಲ್ಯಾಂಡ್ ಜಿಬ್ರಾಲ್ಟರ್ ಮತ್ತು ಇಟಲಿ ದೇಶಗಳಲ್ಲಿಯೂ ಪತ್ತೆಯಾಗಿದೆ. ಆದರೆ ಯು.ಕೆ.ಯಲ್ಲಿದ್ದಂತೆ ವ್ಯಾಪಕವಾಗಿ ಹರಡಿಲ್ಲ ಎನ್ನುವ ಸಮಾಧಾನವಿದೆ.
ಬಿ.1.1.7 ಎಂದು ಗುರುತಿಸಲ್ಪಟ್ಟಿರುವ ಈ ಹೊಸ ತಳಿಯ ಕೊರೋನಾ ವೈರಸ್ಸಿನ ಬದಲಾದ ಸ್ವರೂಪದ ಬಗ್ಗೆ ಇನ್ನೂ ಪೂರ್ಣ ಅಧ್ಯಯನಗಳು ನಡೆದಿಲ್ಲದಿರುವುದು ಮತ್ತು ಯಶಸ್ವಿಯೆಂದು ಬಳಕೆಯಲ್ಲಿರುವ ಫೈಸರ್ ವ್ಯಾಕ್ಸಿನ್ ಲಸಿಕೆಯಂಥವು ಈ ಹೊಸ ತಳಿಯ ವಿರುದ್ಧ ಕೆಲಸಮಾಡಬಲ್ಲದೇ ಎನ್ನುವ ಬಗ್ಗೆ ಪೂರ್ಣ ಮಾಹಿತಿಗಳು ಸಧ್ಯಕ್ಕಿಲ್ಲ.ಆದರೆ,ಈ ಬಗ್ಗೆ ಅಧ್ಯಯನಗಳು ತ್ವರಿತವಾಗಿ ನಡೆಯುತ್ತಿವೆ. ಶೀಘ್ರವೇ ನಮ್ಮೆಲ್ಲರಿಗೂ ತಿಳಿಯಲಿದೆ.
ಆದರೆ ಹೊಸ ತಳಿಯ ಈ ವೈರಸ್ಸಿನ ವಿಷಮತೆ ಹಳೆಯ ಕೋವಿಡ್ ನಷ್ಟು ಮಾತ್ರ ಅಥವಾ ಅದಕ್ಕಿಂತ ಕಡಿಮೆ ಎನ್ನುವ ಭರವಸೆ ಸಿಗುವವರೆಗೆ ಎಲ್ಲ ದೇಶಗಳು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಅತ್ಯಂತ ಸಹಜ ಪ್ರತಿಕ್ರಿಯೆಯಾಗಿದೆ. ಜೊತೆಗೆ ’ ಈಗಾಗಲೇ ಬೆದರಿದವನ ಮೇಲೆ ಹಾವೊಂದನ್ನು ಎಸೆದಂತೆ ’- ಎನ್ನುವಂತೆ ಈ ಹೊಸ ತಳಿಯು ಪ್ರಪಂಚದಾದ್ಯಂತ ಶೇರು ಮಾರುಕಟ್ಟೆಯನ್ನು ನಡುಗಿಸಿ ಬಿಟ್ಟಿದೆ.
ಇದುವರೆಗೆ ಈ ವಿಚಾರದ ಕಾರಣ ನಡೆದಿರುವ ಘಟನೆಗಳು;
ಡಿಸೆಂಬರ್ 14 ರಂದು ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಮಾಧ್ಯಮ ಸಮಾವೇಶ ನಡೆಸಿ ಹೊಸ ತಳಿಯ ಕೊರೊನಾ ವೈರಸ್ಸಿನ ಬಗ್ಗೆ ತಿಳಿಸಿದರು. ಅದರ ಜೊತೆಯಲ್ಲೇ ಹೊಸ ನಿರ್ಭಂದಗಳು ಡಿಸೆಂಬರ್ 20 ರ ಭಾನುವಾರ ಶುರುವಾಗುವ ವಿಚಾರ ಜನರಲ್ಲಿ ಆತಂಕವನ್ನು ಹುಟ್ಟುಹಾಕಿತು. ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲೂ ಹೊಸ ನಿಯಮಾವಳಿಗಳು ಸೇರ್ಪಡೆಯಾದವು.
ಡಿಸೆಂಬರ್ 20 – ಮೊದಲಿಗೆ ಗಡಿಯನ್ನು ಭದ್ರಪಡಿಸಿಕೊಂಡದ್ದು ನೆದರ್ಲ್ಯಾಂಡ್. ನಂತರ ಬೆಲ್ಜಿಯಂ, ಕೆನಡ, ಜರ್ಮನಿ, ಐರ್ಲ್ಯಾಂಡ್, ಇಟಲಿ, ಭಾರತ, ಸಿಂಗಾಪೂರ್…ಹೀಗೆ ಸರಣಿಯಲ್ಲಿ ದೇಶಗಳು ಯು.ಕೆ.ಯನ್ನು ಹೊರಗಿಟ್ಟವು.
ಡಿಸೆಂಬರ್ 21- ಯು.ಕೆ. ಪ್ರಪಂಚದ 50 ದೇಶಗಳಿಂದ ನಿಗಧಿತ ಕಾಲ/ಅನಿರ್ಧಿಷ್ಟ ಕಾಲ ನಿರ್ಭಂದಕ್ಕೊಳಗಾಯಿತು. ಆದರೆ ಪಕ್ಕದ ಯೂರೋಪಿನ ದೇಶಗಳಿಂದ ಹೊರಗುಳಿಯಬೇಕಾದ ಸಂಕಟ ಎಲ್ಲಕ್ಕಿನ್ನ ಹೆಚ್ಚಾಗಿ ಯು.ಕೆ.ಯನ್ನು ತಟ್ಟಿತು. ಅದರಲ್ಲೂ ಫ್ರಾನ್ಸ್ ವಿಧಿಸಿದ 48 ಗಂಟೆಗಳ ಕಾಲದ ಗಡಿ ನಿರ್ಭಂದ ಎಲ್ಲಕ್ಕಿಂತ ಹೆಚ್ಚಿನ ಪರಿಣಾಮವನ್ನು ಬೀರಿತು.
ಡಿಸೆಂಬರ್ 22- ಯು.ಕೆ. ತನ್ನ ನೆರೆಯ ಫ್ರಾನ್ಸ್ ಜೊತೆ ಗಡಿ ನಿರಬಂಧವನ್ನು ಸಡಿಲಗೊಳಿಸುವ ಮಾತುಕತೆಯಲ್ಲಿ ಸಫಲವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಇತರೆ ಯೂರೋಪಿನ ದೇಶಗಳು ಕೂಡ ಅತ್ಯಂತ ದೊಡ್ಡ ಹಬ್ಬಗಳಾದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆದಿಯ ಸಂಭ್ರಮಾಚರಣೆಯ ಈ ಸಂದರ್ಭದಲ್ಲಿ ಯು.ಕೆ. ಯ ಮೇಲಿನ ನಿಷೇಧವನ್ನು ಸಡಿಲಗೊಳಿಸಲು ಕರೆ ನೀಡಿದೆ.
ಬ್ರೆಕ್ಸಿಟ್ ತಗಾದೆಗಳು -ಯುರೋಪಿನ ಒಕ್ಕೂಟದಿಂದ ಬೇರ್ಪಡಬೇಕೆನ್ನುವ ಯು.ಕೆ.ಯ ನಿರ್ಧಾರದ ವಿಚಾರವಾಗಿ ಅಂತಿಮ ಸುತ್ತಿನ ಒಪ್ಪಂದಗಳ ಗಡುವನ್ನು ನಾನಾ ಬಾರಿ ಮುಂದೂಡಿದರೂ, ವರ್ಷದ ಅಂತ್ಯಕ್ಕೆ ವಾಣಿಜ್ಯ ಬಿಕ್ಕಟ್ಟುಗಳು ಹುಟ್ಟುವ ಎಲ್ಲ ನಿರೀಕ್ಷೆ ಹೊಸ ತಳಿಯ ಕೋವಿಡ್ ಇಲ್ಲದೆಯೂ ಇತ್ತು. ಆ ಸಂಬಂಧದ ಮಾತುಕತೆಗಳನ್ನು ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಹೊಸವರ್ಷಕ್ಕೆ ಮುಂದೂಡಿ ಎನ್ನುವ ಕರೆಗಳು ಇದೀಗ ದಟ್ಟವಾಗುತ್ತಿವೆ.
ಒಟ್ಟಾರೆ ಕೊರೋನಾ ಬಗ್ಗೆ ನಾವೆಲ್ಲ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು ಇನ್ನಷ್ಟು ಬಿಗಿಯಾಗಿವೆ. ಪ್ರಪಂಚದ ಎಲ್ಲೆಡೆಯೂ ಅವೇ ಎಚ್ಚರಿಕೆಗಳನ್ನು ಇನ್ನಷ್ಟು ಕಟ್ಟು ನಿಟ್ಟಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಮುಂದುವರೆದಿದೆ. ಈ ಬಗ್ಗೆ ಇನ್ಯಾವುದೇ ಹೊಸ ಎಚ್ಚರಿಕೆ ಅಥವಾ ಭಯದ ಅಗತ್ಯವಿಲ್ಲ.
ಹೊಸ ತಳಿ ಹಳೆಯದರಷ್ಟು ಮಾತ್ರವೇ ಮಾರಕ ಎಂದಾದರೆ ಮತ್ತು ಈಗಿರುವ ವ್ಯಾಕ್ಸಿನ್ ಗಳೇ ಹೊಸ ತಳಿಯ ವಿರುದ್ಧವೂ ಕೆಲಸ ಮಾಡಬಲ್ಲದು ಎನ್ನುವುದು ಖಚಿತವಾದರೆ, ಒಂದೇ ದಿನದಲ್ಲಿ ಈ ಎಲ್ಲ ಹೊಸ ಬಿಕ್ಕಟ್ಟುಗಳು ಕಡಿಮೆಯಾಗುತ್ತವೆ ಎನ್ನುವ ನಿರೀಕ್ಷೆಯಿದೆ.
😔
ವಾಸ್ತವ ಚಿತ್ರವನ್ನು ತೆರೆದಿಟ್ಟಿದ್ದಾರೆ. ಅನಗತ್ಯ ಗೊಂದಲಗಳು ದೂರಾಗಿ ಸ್ಪಷ್ಟ ಚಿತ್ರ ಸಿಕ್ಕಿತು
ಡಾಕ್ಟರ್ ಪ್ರೇಮಲತಾ ಅವರು ಕೋವಿಡ್ ನ ಹೊಸ ತಳಿಯ ಬಿಕ್ಕಟ್ಚಿನ ಬಗ್ಗೆ ನೀಡಿರುವ ವಾಸ್ತವ ಚಿತ್ರಣ ತುಂಬಾ ಚೆನ್ನಾಗಿ ಮೂಡಿಬಂದಿದೆ.
Symptoms ಕೋವಿಡ್ ತರಹವೇ ಇದೆಯಾ.. ಸದ್ಯ ಅಪಾಯಕಾರಿ ಆಗದಿದ್ದರೆ ಸಾಕು. ವ್ಯಾಕ್ಸಿನ್ ಇದೆ ಉಪಯೋಗಕ್ಕೆ ಬಂದರೆ ನಿಟ್ಟುಸಿರು. ರೂಪಾಂತರ ಕೋವಿಡ್ ಬಗ್ಗೆ ಸ್ಪಷ್ಟ ಲೇಖನ ಮೇಡಂ
ಸಮಾಧಾನ ಕೊಡುವಂತಹ ಮಾಹಿತಿ. ಧನ್ಯವಾದಗಳು ಪ್ರೇಮಲತಾ ಡಾ ಪ್ರೇಮಲತಾ
Very useful article timely published.