ಬೆಳ್ಳಂ ಬೆಳಿಗ್ಗೆ ಮನೆಯ ಕಿರಾಣಿ ಅಂಗಡಿಯ ಬಳಿ ಮಕ್ಕಳೋ,ನೈಟಿಯಲ್ಲಿರುವ ಮಹಿಳೆಯರೋ, ಬ್ಯಾಚುಲರ್ ಹುಡುಗನೊ ಅರ್ಧ ಕೇಜಿ ರವೆ ಒಂದು ಸ್ವಲ್ಪ ಹಸಿಮೆಣಸಿನಕಾಯಿ ಜೊತೆಗೆ ಕೊತ್ತಂಬರಿ ಸೊಪ್ಪು ತಗೊಂಡು ಹೋಗ್ತಿದಾನೆ ಅಂದ್ರೆ ಅವರ ಮನೆಯ ತಿಂಡಿ ಉಪ್ಪಿಟ್ಟು ಅಂತಲೇ .
ಮನೆಯಲ್ಲಿ ಯಾವುದೇ ಪ್ಲ್ಯಾನು ,ಪೂರ್ವ ತಯಾರಿ ಇಲ್ಲದೇ ಸಿದ್ಧವಾಗುವ ತಿಂಡಿ ಅಂದರೆ ಅದು ಉಪ್ಪಿಟ್ಟು ಮಾತ್ರ , ಇದನ್ನ ದಿಢೀರ್ ತಿಂಡಿ ಅಂತಲೂ ಕರೆಯಬಹುದು .
ಉಪ್ಪಿಟ್ಟು ಅಂದ ತಕ್ಷಣ ಮೂರು ವರ್ಗದ ಜನ ಕಣ್ಮುಂದೆ ಬರುತ್ತಾರೆ ತುಂಬಾನೇ ಇಷ್ಟ ಪಟ್ಟು ನನ್ನ ಫೇವರಿಟ್ ಅನ್ನೋವ್ರು . ಅದು ತಿಂಡೀನೇ ಅಲ್ಲ ಕಾಂಕ್ರೀಟ್ ಅಂತ ಅಲ್ಲಗೆಳೆಯೋವ್ರು . ಮೂರನೇ ವರ್ಗವೊಂದಿದೆ ಅವರು ತಿನ್ನುತ್ತಾರೆ ಆದರೆ ನಿಬಂಧನೆಗಳನ್ನು ಅಳವಡಿಸಿಕೊಂಡು. ಅವೇನೆಂದರೆ ಅವರಿಗೆ ಇಂತಾದ್ದೇ ರವೆಯದ್ದಾಗಿರಬೇಕು , ತರಕಾರಿ ಹಾಕಿರಬೇಕು , ಅವರೇಕಾಯಿ ಬಳಸಿರಬೇಕು, ಬಿಸಿ ಇರಬೇಕು ….ಹೀಗೆ .
ಉಪ್ಪಿಟ್ಟು ನಿಜಕ್ಕೂ ತುಂಬಾ ಉಪಕಾರಿ ಉಪಹಾರ. ಅಮ್ಮಂದಿರಿಗೆ ಪರಮಾಪ್ತ ಕಾರಣವೇನೆಂದರೆ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ ಬಹುಬೇಗ ತಯಾರಿಸಬಹುದು .ಒಂದು ಪದಾರ್ಥ ಇಲ್ಲ ಅಂದ್ರೂ ಅಂತಾ ವ್ಯತ್ಯಾಸ ಕಾಣಿಸಲ್ಲ . ಮಧುಮೇಹಿಗಳ ಪಾಲಿಗಂತೂ ರವೆಯ ಸಂಜೀವಿನಿ .
ಸಮಾಜದಲ್ಲಿ ಸ್ಥಿತಿವಂತರಿಂದ ಹಿಡಿದು ಸಾಮಾನ್ಯರವರೆಗೂ ಆಹಾರವಾಗಿ ಬಳಸುವ ಸರಳ ತಿಂಡಿ .ಉಪ್ಪಿಟ್ಟು ಒಂದೇ ಸ್ವಾದ ಅನ್ನಿಸಿದರೂ ಮುಂಜಾನೆ ಒಂದು ತರಹದ ರುಚಿ ಸಂಜೆಯೇ ಮತ್ತೊಂದು ತರಹದ ರುಚಿ ಅನ್ನಿಸುತ್ತದೆ .
ಉಪ್ಪಿಟ್ಟಿಗೇ ಅಂತಲೇ ಒಂದು ಸಮಯ ಮೀಸಲಿದೆ. ಮಾಡಲಿಕ್ಕೂ ಮತ್ತೆ ತಿನ್ನಕ್ಕೂ . ಇದು ಮಧ್ಯಮ ವರ್ಗದ ಮಿತ್ರ ಹಾಗೆಯೇ ಮಧ್ಯಾಹ್ನದ ಶತ್ರು ಕೂಡ .
ತಮಾಷೆಗೆ ಉಪ್ಪಿಟ್ಟನ್ನು ಸಮಯಸ್ಪೂರ್ತಿ ತಿಂಡಿ ಅಂತ ಕರೆಯಬಹುದು ಕಾರಣ ಇದನ್ನು ಬೇಗ ಮಾಡಬಹುದು ಬೇಗ ತಿನ್ನಬಹುದು ಮತ್ತೆ ಜೀರ್ಣ ಸಹ ಬೇಗ ಆಗುತ್ತೆ .
ಉಪ್ಪಿಟ್ಟಿಗೆ ವರುಷಗಳ ಇತಿಹಾಸವಿದೆ . ಇವತ್ತಿಗೂ ಹಲವು ಕಾರ್ಯಕ್ರಮಗಳ ಪ್ರಮುಖ ಉಪಹಾರ ಇದೇ . ಹೆಣ್ಣು ನೋಡುವ ಶಾಸ್ತ್ರದಲ್ಲಂತೂ ಉಪ್ಪಿಟ್ಟಿನದ್ದೇ ಮಧ್ಯಸ್ಥಿಕೆ. ಹೋಟೆಲ್ಗಳ ಪರ್ಮನೆಂಟ್ ಮೆನು ಈ ಖಾರಾಬಾತ್ ಮತ್ತು ಕೇಸರಿಬಾತ್ ನ ಚೌಚೌಬಾತ್ ಜೋಡಿ .
ಉಪ್ಪಿಟ್ಟನ್ನು ತುಂಬಾ ಜನ ತುಂಬಾ ವೆರೈಟಿ ಕಾಂಬಿನೇಷನ್ ನಲ್ಲಿ ತಿನ್ನುತ್ತಾರೆ ತಮ್ಮಿಷ್ಟದ ಚಟ್ನಿ ಜೊತೆ , ಉದ್ದಿನ ವಡೆಯೊಂದಿಗೆ , ಉಪ್ಪಿನಕಾಯಿ ಜೊತೆ , ಕಾಫಿ ಟೀ ಜೊತೆ , ಚೌಚೌವಿನ ಜೊತೆ , ತುಪ್ಪದ ಜೊತೆ ಹೀಗೆ . ವಿಶೇಷ ಏನು ಅಂದ್ರೆ ಪ್ರತೀ ಕಾಂಬಿನೇಷನ್ನೂ ಸಹ ಅದ್ಭುತ ರುಚಿಯನ್ನೇ ನೀಡುತ್ತದೆ .
ಪ್ರತೀ ಮನೆಗಳಲ್ಲೂ ಉಪ್ಪಿಟ್ಟನ್ನ ಪ್ರೀತ್ಸೋವ್ರ ಜೊತೆ ವಿರೋಧಿಸುವರೂ ಇರುತ್ತಾರೆ . ಇಂದಿಗೂ ಹಲವು ಮನೆಗಳಲ್ಲಿ ಉಪ್ಪಿಟ್ಟು ಮಾಡಿದ್ರೆ ಜಗಳವಾಗುತ್ತದೆ . ಆದರೆ ಉಪ್ಪಿಟ್ಟು ಮಾಡಲಿಲ್ಲ ಅಂತ ಜಗಳವಾಗುವುದು ವಿರಳ.ಕಾರಣ ಇದನ್ನು ಇಷ್ಟಪಡುವವರು ಹುಡುಕಿಕೊಂಡು ಹೋಗಿ ಹಣ ಕೊಟ್ಟು ತಿನ್ನುತ್ತಾರೆ .
ಉಪ್ಪಿಟ್ಟು ಎಲ್ಲಾ ಸ್ಥಳಗಳಲ್ಲಿಯೂ ಕೈಗೆಟುಕುವ ದರದಲ್ಲಿ ಸಿಗುವ ಮನಸ್ಸಿಗೆಟುಕುವ ತಿಂಡಿ .
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
Good story
ಮೂರನೇ ವರ್ಗಕ್ಕೆ ಸೇರಿದವಳು ನಾನು. ಕೆಲವು ನಿಬಂಧನೆಗಳ ಮೇರೆಗೆ ಉಪ್ಪಿಟ್ಟು ಒಪ್ಪುವವಳು.ಅಮ್ಮ ಮಾಡಿದ ಉಪ್ಪಿಟ್ಟು ಓಕೆ..ಆದರೂ ಅದೊಂದು ತಿಂಡಿ ಇರದಿದ್ರೆ ಹೆಣ್ಣುಮಕ್ಕಳಿಗೆ ಎಷ್ಟು ತ್ರಾಸಾಗ್ತಿತ್ತು..
ಸದ್ಯಕ್ಕೆ ಯಾರೇ ಉಪ್ಪಿಟ್ಟು ಮಾಡ್ತೀನಿ ಅಂದರೂ ಬ್ಯಾಡ ಅಂತೀನಿ ಈ ಲೇಖನ ಓದಿದ ಮೇಲೆ.
ಕೆಲವು ವಿಚಿತ್ರ ಆದರೂ ಸತ್ಯ. ನನಗೆ ಉಪ್ಪಿಟ್ಟು ಮಾಡಲು ಬರಲ್ಲ. ಕಾರಣ ನಮ್ಮಲ್ಲಿ ದಿನಾ ನೀರ್ ದೋಸೆ ಬೆಳಗಿನ ತಿಂಡಿ. ವಿಶೇಷ ದಿನಗಳಲ್ಲಿ ಮಾತ್ರ ಉಪ್ಪಿಟ್ಟು ಮಾಡೋದು. ಆದರೆ ಈ ಲೇಖನ ಓದಿದ ಮೇಲೆ ಒಮ್ಮೆ ರುಚಿ ರುಚಿಯಾದ ಉಪ್ಪಿಟ್ಟು ತಿನ್ನುವ ಮನಸಾಯಿತು. ಲೇಖನ ಗಮನ ಸೆಳೆಯಿತು
Nanna favorite uppittu. Varieties in uppittu nanage karagata. Bisi bisi uppittu Tuppa da jote…wow..
Thumba hasivaadaga bisi uppittu, Balu ruchi, amruthakke Sama😋😋😋
ಉಪ್ಪಿಟ್ಟು ಆಪತದ್ಭಾಂದವ ಇದ್ದ ಹಾಗೆ. Pre-covid ದಿನಗಳಲ್ಲಿ busy ಭಾನುವಾರ ಆದಮೇಲೆ, ಸೋಮವಾರ ಬೆಳಗ್ಗಿನ ಖಾಯಂ ತಿಂಡಿ. ತಿಳಿಸದೆ ಬಂದ ಅತಿಥಿಗಳಿಗೆ ಉಪ್ಪಿಟ್ಟು ಕಟ್ಟಿಟ್ಟ ಬುತ್ತಿ.
ಉಪ್ಪಿಟ್ಟಿನ ಥರಾವರಿ ರೂಪಗಳನ್ನು ಜ್ಞಾಪಿಸಿದ್ದಕ್ಕೆ ಧನ್ಯವಾದಗಳು…ಸದ್ಯಕ್ಕೆ ಅದರ ಆಪ್ತಮಿತ್ರ ಅವರೆಕಾಯಿ:)
ಉಪ್ಪಿಟ್ಟು…. ಇದರಲ್ಲಿ 2 ಅಥವಾ 3 ವಿಭಿನ್ನ ತಯಾರಿಕಾ ರೀತಿಗಳಿವೆ. 1) ಬಳಸುವ ರವೆ: ಬಂಸಿ ಅಥವಾ ಬಾಂಬೆ ಅಥವಾ ಚಿರೋಟಿ. ಕೆಲವರಿಗೆ ಈ ಮೂರರಲ್ಲಿ ಯಾವುದಾದರೂ ಇಷ್ಟವಾಗಬಹುದು .
ಮಾಸ್ತಿಯವರ ಲೇಖನ ಓದುತ್ತ ನನಗೆ ಡುಂಡಿರಾಜ್ ರ ಹನಿಗವನ ನೆನಪಾಯಿತು:
ಗಂಡ ಕೇಳಿದ ಪ್ರಿಯೆ
ಏನು ಮಾಡಿರುವೆ ತಿಂಡಿಗೆ?
ಇಂದು ವಿಶ್ವ ಫುಡ್ ಡೆ!
ಮಡದಿ ಮೇಜಿನ ಮೇಲೆ ಕುಕ್ಕಿದಳು ತಟ್ಟೆ,
ಅಲ್ಲಿತ್ತು ಉಪ್ಪಿಟ್ಟಿನ ಗುಡ್ಡೆ.
ಲೇಖನ ಹಾಗೂ ಕಲಾಕೃತಿ ಎರಡೂ ಪೂರಕವಾಗಿವೆ
ಉಪ್ಪಿಟ್ಟನ್ನು ಬಹಳ ರುಚಿಯಾಗಿ , ಅಚ್ಚುಕಟ್ಟಾಗಿ , ತುಪ್ಪ ಗೋಡಂಬಿ ಹಾಕಿ ಮಾಡಿ ಸವಿಯಲು ಅದರ ಸಮ ಬೇರೊಂದಿಲ್ಲ…ಹಾಗೆ ಕಾಟಾಚಾರಕ್ಕೆ ಒಂದಿಷ್ಟು ಮೆಣಸಿನಕಾಯಿ ಕೊತ್ತಂಬರಿ ಸೊಪ್ಪಿನ ಜೊತೆ ಮಾಡಿ ಬೇಕಾಬಿಟ್ಟಿ ತಿನ್ನಲುಬಹುದು…ಮುಖ್ಯವಾಗಿ ಮಾಡುವವರ ಮೂಡ್ ಮೇಲೆ ಉಪ್ಪಿಟ್ಟು ತನ್ನ ರುಚಿಯನ್ನು ಅವಲಂಬಿಸಿರುತ್ತದೆ…ಅಷ್ಟೇ
ಉಪ್ಪಿಟ್ಟಿನಲ್ಲಿನ ವಿವಿದ ತರಹ ಉಪ್ಪಿಟ್ಟು ಬಾಯಲ್ಲಿ ನೀರೂರಿಸಿತು. ತರಕಾರಿ, ಕಾಳು ಉಪ್ಪಿಟ್ಟು ಇಷ್ಟಪಡದವರು ವಿರಳ.ಲೆಖಕರಿಗೂ ಕಲಾಕೃತಿಕಾರರಿಗೂ ಧನ್ಯವಾದಗಳು.
ಬಾಯಲ್ಲಿ ನೀರೂರಿಸಿದ ಲೇಖನ
ನನ್ ಫೆವರಿಟ್ ಉಪ್ಪಿಟ್ ಬಗ್ಗೆ ಬರೆದ ಲೇಖಕರಿಗೆ, ಲೇಖನವನ್ನು ಚಿತ್ರದಲ್ಲಿ ಹಿಡಿದಿಟ್ಟ ಕಲಾವಿದರಿಗೆ, & ಪ್ರತ್ರಿಕಾ ಬಳಗಕ್ಕೆ ಮನಃಪೂರ್ವಕವಾದ ನಮನಗಳು
ಉಪ್ಪಿಟ್ಟು…
ಕಾಂಕ್ರೀಟು, ಪೇಸ್ಟ್ ಎಂದು ಛೇಡಿಸುವ ವ ರು ಕೆಲವರಿದ್ದರೂ
ಓಹ್, ಖಾರ ಬಾತ್ ಎನ್ನುತ್ತಾ ಕೇಸರಿ ಬಾತ್ ಜತೆ ಚಪ್ಪರಿಸಿ ತಿನ್ನುವವರು ಅಸಂಖ್ಯ.
ಉಪ್ಪಿಟ್ಟಿಗೆ ಅತಿಯಾಗಿ ಅಂಟಿಕೊಂಡು ವರ್ಷಗಟ್ಟಲೆ ಅದನ್ನೇ ಸೇವಿಸಿ, ತಮ್ಮ ಹೆಸರಿಗೂ ಸೇರಿಸಿಕೊಂಡ ವರು ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು, ವಿಚಾರವಾದಿ
“ಉಪ್ಪಿಟ್ಟು ನರಸಿಂಹಯ್ಯ” ಅವರು.
ನ್ಯಾಷನಲ್ ಹೈಸ್ಕೂಲ್ ಜೀವಾಳ ವಾಗಿದ್ದವರು.
ಬ್ರಿಟನ್ ಗೆ ವ್ಯಾಸಂಗಕ್ಕೆ ಹೋಗಿದ್ದಾಗ ಅವರು ಬಹಳಷ್ಟು ದಿನ 3 ಹೊತ್ತು uppittanne ತಿಂದಿದ್ದ ರಂತೆ…
ಅಷ್ಟರಮಟ್ಟಿಗೆ ಉಪ್ಪಿಟ್ಟು ಹೆಚ್. ಎನ್. ಅವರ ಬದುಕಿನ ಭಾಗವಾಗಿತ್ತು…