ಷೇರುಪೇಟೆಯು ಮುಂದಿನ ವರ್ಷ ಅಂದರೆ 2021 ರಲ್ಲಿ ಹೇಗಿರುತ್ತದೆ? ಎಂಬುದು ಇಂದಿನ ದಿನಗಳಲ್ಲಿ ಚರ್ಚೆಯಾಗುತ್ತಿರುವ ಗಹನವಾದ ವಿಚಾರವಾಗಿದೆ. ಈ ವಿಷಯದ ಬಗ್ಗೆ ವೈವಿಧ್ಯಮಯ ವಿಶ್ಲೇಷಣೆಗಳು ಬರುತ್ತಿವೆ. ಎಲ್ಲವನ್ನೂ ಸಾರಾಸಗಟಾಗಿ ಸ್ವೀಕರಿಸಲೇಬೇಕಾದ ಪರಿಸ್ಥಿತಿಯಲ್ಲಿ ಈಗಿನ ವ್ಯವಹಾರಗಳು ಇಲ್ಲ.
ಹಿಂದಿನ ವಾರದ ಸೋಮವಾರ ಅಂದರೆ 21 ನೇ ಡಿಸೆಂಬರ್ ರಂದು ಸೆನ್ಸೆಕ್ಸ್ 1,406 ಪಾಯಿಂಟುಗಳ ಭರ್ಜರಿ ಕುಸಿತ ಕಂಡಾಗ ಎಫ್ ಐ ಐ ಗಳು ಮಾರಾಟದತ್ತ ಒಲವು ತೋರಿಸುತ್ತಿವೆಯೇ? ಎಂಬ ಅನುಮಾನ ಮೂಡಿತಾದರೂ ನಂತರದ ದಿನಗಳಲ್ಲಿ ರಭಸದ ಏರಿಕೆ ಪ್ರದರ್ಶಿತವಾಯಿತು. ಪೇಟೆಯ ಮಾರ್ಕೆಟ್ ಕ್ಯಾಪಿಟಲೈಸೇಷನ್ ಮತ್ತೆ ರೂ.185 ಲಕ್ಷ ಕೋಟಿಗೆ ಹಿಂದಿರುಗಿದೆ. ಸೆನ್ಸೆಕ್ಸ್ 47 ಸಾವಿರದ ಗಡಿಯಲ್ಲಿರುವಾಗ 1,400 ಪಾಯಿಂಟುಗಳ ಇಳಿಕೆ ಹೆಚ್ಚೇನು ಅಲ್ಲ.
ಈ ವರ್ಷದ ಆರಂಭದಿಂದ ಡಿಸೆಂಬರ್ 25 ರವರೆಗೆ ಸೆನ್ಸೆಕ್ಸ್ ಸುಮಾರು 5,700 ಪಾಯಿಂಟುಗಳ ಏರಿಕೆಯನ್ನು ಪ್ರದರ್ಶಿಸಿದೆ. ಆದರೆ ಈ ಅವಧಿಯ ಮಧ್ಯೆ ಪ್ರದರ್ಶಿಸಿದ ಸುನಾಮಿ ರೀತಿಯ ಅಬ್ಬರದ ಏರಿಳಿತಗಳು ಹೆಚ್ಚಿನ ಆತಂಕಕಾರಿ ವಾತಾವರಣ ನಿರ್ಮಿಸಿದವು.
ಸೆನ್ಸೆಕ್ಸ್ 2008 ರ ಜನವರಿಯಲ್ಲಿ ಪ್ರಥಮ ಬಾರಿ 20 ಸಾವಿರದ ಗಡಿದಾಟಿತು. ಆ ಸಮಯದಲ್ಲಿ ಸೆನ್ಸೆಕ್ಸ್ ನ ಮಾರ್ಕೆಟ್ ಕ್ಯಾಪಿಟಲೈಸೇಷನ್ ರೂ.71 ಲಕ್ಷ ಕೋಟಿ ಮಾತ್ರ. ಆ ಹಂತದಲ್ಲೂ ಜನವರಿ 2008, 21 ರಂದು ಸೆನ್ಸೆಕ್ಸ್ 1,408 ಪಾಯಿಂಟುಗಳ, ಅಕ್ಟೋಬರ್ 24, 2008 ರಲ್ಲಿ 1,071 ಪಾಯಿಂಟುಗಳ ಇಳಿಕೆ ಪ್ರದರ್ಶಿಸಿವೆ. ಅದಕ್ಕೆ ಹೋಲಿಸಿದಾಗ ಸೆನ್ಸೆಕ್ಸ್ 47 ಸಾವಿರ ಪಾಯಿಂಟುಗಳ ಹಂತದಲ್ಲಿ 1,400 ಪಾಯಿಂಟುಗಳ ಇಳಿಕೆ ಹೆಚ್ಚೇನಲ್ಲ. ಆದರೆ ಈಗ ಕಂಪನಿಗಳ ಆಂತರಿಕ ಸಾಧನೆಗಿಂತ ಹೊರಗಿನ ಅಲಂಕಾರಿಕ ಕಾರಣಗಳೇ ಹೆಚ್ಚಾಗಿ ಪ್ರಭಾವಿಯಾಗಿರುವುದರಿಂದ ಹೊಟ್ಟೆಯಲ್ಲಿ ಚಿಟ್ಟೆ ಹಾರಿಸುವ ಭಾವನೆ ಹೆಚ್ಚಾಗಿದೆ.
ಈ ಸಂದರ್ಭದಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಸೆನ್ಸೆಕ್ಸ್ 10 ಸಾವಿರ ಪಾಯಿಂಟುಗಳಿಂದ 20 ಸಾವಿರ ಪಾಯಿಂಟುಗಳಿಗೆ ಏರಿಕೆ ಕಾಣಲು ಸುಮಾರು 389 ದಿನಗಳು ಬೇಕಾದವು ಆದರೆ 20 ಸಾವಿರದ ಹಂತದಿಂದ 10 ಸಾವಿರಕ್ಕೆ ಹಿಂದಿರುಗಿ ಕುಸಿಯಲು ಕೇವಲ 187 ದಿನಗಳು ಸಾಕಾದವು.
ಪೇಟೆಯು ಗರಿಷ್ಠಕ್ಕೆ ಜಿಗಿದಾಗ ಇಳಿಕೆಯು ತೀವ್ರತರವಾಗಿ, ತ್ವರಿತವಾಗಿರುವುದು. ಇದೇ ವಾತಾವರಣವನ್ನು ನಾವು ಈ ವರ್ಷದ ಫೆಬ್ರವರಿ / ಮಾರ್ಚ್ ನಲ್ಲಿ ಕಂಡಿದ್ದೇವೆ. ಈ ವರ್ಷದ ಆರಂಭದಲ್ಲಿ 41 ಸಾವಿರದ ಗಡಿಯಲ್ಲಿದ್ದ ಸೆನ್ಸೆಕ್ಸ್ ಕೊರೋನಾ ಸಾಂಕ್ರಾಮಿಕದ ಹಾವಳಿಯ ಕಾರಣ ಮಾರ್ಚ್ ಅಂತ್ಯದ 24 ರಂದು 25,638 ಪಾಯಿಂಟುಗಳಿಗೆ ಕುಸಿಯಿತು. ಅಂದರೆ ಫೆಬ್ರವರಿ 15 ರಿಂದ ಮಾರ್ಚ್ 24 ರ ಅಂತರದಲ್ಲಿ ಸುಮಾರು 15,600 ಪಾಯಿಂಟುಗಳ ಭರ್ಜರಿ ಕುಸಿತಕ್ಕೊಳಗಾದ ಸೆನ್ಸೆಕ್ಸ್, ನಂತರದ ಸುಮಾರು 9 ತಿಂಗಳ ಅಂತರದಲ್ಲಿ 21,400 ಪಾಯಿಂಟುಗಳಷ್ಠು ಪುಟಿದೆದ್ದಿದೆ. ಅಂದರೆ ಸುಮಾರು 37 ಸಾವಿರ ಪಾಯಿಂಟುಗಳ ಏರಿಳಿತ ಪ್ರದರ್ಶಿಸಿರುವುದು ಸರ್ವಕಾಲಿಕ ದಾಖಲೆಯಾಗಿದೆ.
ಲಾಕ್ ಡೌನ್ ಅವಧಿಯಲ್ಲಿ ದಶಕಗಳಷ್ಟು ಹಳೆಯ ಕಂಪನಿಗಳೂ ಸಹ ತಮ್ಮ ಸಿಬ್ಬಂದಿಗೆ ವೇತನ ನೀಡಲಾಗದೆ ಪಟ್ಟ ತೊಳಲಾಟಗಳ ಮಧ್ಯೆ ಇದು ಅಸಹಜ ಪ್ರಕ್ರಿಯೆಯಾಗಿದ್ದು ಹೂಡಿಕೆ ಎಂಬ ಪದಕ್ಕೆ ಅಪವಾದವಾಗುವುದಲ್ಲದೆ ಅಸ್ಥಿರತೆಗೆ ದಾರಿಯಾಗಿದೆ. ಸೆನ್ಸೆಕ್ಸ್ ಕುಸಿತಕ್ಕೆ ಮುಖ್ಯ ಕಾರಣ ಆ ಸಮಯದಲ್ಲಿ ನಿರ್ಮಿಸಲಾದ ಕೋರೋನಾ ಗುಮ್ಮದ ಭಯದ ವಾತಾವರಣ, ಎಫ್ ಐ ಐ ಗಳ ಸತತ ಮಾರಾಟದ ಒತ್ತಡ. ಆದರೆ ಮೇ ತಿಂಗಳ ಅಂತ್ಯದಿಂದ ಚೇತರಿಕೆ ಆರಂಭವಾದ ಏರಿಕೆಯ ಪಥ ನಿರಂತರವಾಗಿ ಸಾಗಿದೆ. ಇದಕ್ಕೂ ಕಾರಣ ಪ್ರಮುಖ ಕಾರಣ ಎಫ್ ಐ ಐ ಗಳ ನಿರಂತರ ಖರೀದಿಯಾಗಿದೆ. ಇದೇ ರೀತಿ ಮಧ್ಯಮ ಶ್ರೇಣಿಯ ಸೂಚ್ಯಂಕ ( Mid cap index) ಈ ಅವಧಿಯಲ್ಲಿ ಸುಮಾರು ದ್ವಿಗುಣವಾಗುವ ಹಂತದಲ್ಲಿದೆ. ಸ್ಮಾಲ್ ಕ್ಯಾಪ್ ಅಂದರೆ ಕೆಳಮಧ್ಯಮ ಸೂಚ್ಯಂಕ ಈಗಾಗಲೇ ದ್ವಿಗುಣವಾಗಿದೆ. ಈ ರೀತಿಯ PERCEPTION BEFORE PERFORMANCE, ವಾತಾವರಣವು ಉಳಿದೆಲ್ಲಾ ವಲಯ ಸೂಚ್ಯಂಕಗಳಲ್ಲಿ ಏರಿಕೆ ಕಾಣುವಂತೆ ಮಾಡುತ್ತದೆ.
ದೇಶದ ಜಿ ಡಿ ಪಿ ಸಕಾರಾತ್ಮಕವಾಗಿದ್ದಾಗ ಇಳಿಕೆಗೊಳಗಾದ ಸೆನ್ಸೆಕ್ಸ್, ಜಿ ಡಿ ಪಿ ನಕಾರಾತ್ಮಕವಾಗಿರುವಾಗ ಮೂಗಿನ ತುದಿಗೆ ತುಪ್ಪ ಸವರುವಂತೆ ಆಸೆ ಹುಟ್ಟಿಸಿ ಏರಿಕೆಗೊಳಪಟ್ಟ ಈ ಪೇಟೆಯ ಚಟುವಟಿಕೆಗೆ ಅರಿತು ಹೂಡಿಕೆ ಮಾಡಿ ಅನುಸರಿಸಬೇಡಿ ಎಂಬುದು ಅಕ್ಷರಷ: ಅನ್ವಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೂಡಿಕೆ ಮಾಡಿದ ಬಂಡವಾಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ, ನಂತರದಲ್ಲಿ ಲಾಭ ಗಳಿಕೆಯತ್ತ ಗಮನಹರಿಸುವುದು ಉತ್ತಮ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು