ನಮ್ಮ ಹಳೆಗನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ ನುಡಿಗಟ್ಟುಗಳು ಮತ್ತು ಗಾದೆಗಳು ಈಗಿನ ಕಾಲಕ್ಕೂ ಪ್ರಸ್ತುತ ವೆನಿಸುತ್ತವೆ. ಅಂಥ ಗಾದೆ ನುಡಿಗಟ್ಟುಗಳನ್ನು ಈಗಿನ ಸಂದರ್ಭದೊಂದಿಗೆ ವಿವರಿಸುವ ಸುಮಾ ವೀಣಾ ಅವರು ಬರೆದಿರುವ ನುಡಿ ಸಿಂಚನ ಅಂಕಣದ ಈ ವಾರದ ಕಂತು ಇಲ್ಲಿದೆ .ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಮನುಷ್ಯ ಸ್ವಭಾವತಃ ಅನುಕೂಲಕ್ಕೆ ಹೊಂದಿಕೊಂಡು ಹೋಗುತ್ತಾನೆ ಎಂದಾದರೆ ಅನೇಕ ಬಾರಿ ಸಂದರ್ಭಕ್ಕೆ ಅನುಸಾರವಾಗಿ ತನ್ನ ದಿಕ್ಕನ್ನು ಅಂದರೆ ವರಸೆಯನ್ನು ಬದಲಾಯಿಸಿಬಿಡುತ್ತಾನೆ. ತನ್ನ ಕೆಲಸ ಆಗುವವರೆಗೆ ಸಾಧ್ವಿಯಂತೆ ಮುಖವಾಡ ಧರಿಸಿ ಇದ್ದ ಕಷ್ಟಗಳೆಲ್ಲ ಪರಿಹಾರವಾಗುವವರೆಗೆ ನಯವಾಗಿದ್ದು ಕಷ್ಟಗಳ ಸರಮಾಲೆ ಪರಿಹಾರವಾದೊಡನೆ ಏನೂ ಆಗಿಲ್ಲವೆಂದು ಬೀಗುತ್ತಾನೆ. ಆವರಿಸಿದ ಸುಖವನ್ನು ಕೂಡಲೇ ಅನುಭವಿಸಲು ಮುಂದಾಗುತ್ತಾನೋ ಹೊರತು ಹಿಂದಿನದ್ದನ್ನು ನೆನಪಿಸಿಕೊಳ್ಳುವುದರ ಗೋಜಿಗೆ ಹೋಗುವುದಿಲ್ಲ .
ಚಿಕ್ಕದೊಂದು ಸನ್ನಿವೇಶವನ್ನು ದುಃಖೇನ ಸಾಧ್ವಿ ಲಭತೇ ಸುಖಾನಿ ಎಂಬ ವಾಕ್ಯಕ್ಕೆ ಪೂರಕವಾಗಿ. ನೋಡೋಣ. ಮೂರುಹೊತ್ತು ಟೀವಿ ಮೊಬೈಲ್ ಗೇಮ್ ನಲ್ಲಿ ಬ್ಯುಸಿಯಾಗಿದ್ದ, ಸೊಸೆಯಂದಿರ ನಡುವೆಯೇ ಭೇದ ಮಾಡಿ ತಾನು ಹೈಲೈಟ್ ಆಗುತ್ತಿದ್ದ ಹಿರಿಯರಬ್ಬರ ಕತೆ ಇದು. ವಯಸ್ಸಾದರೂ ಬುದ್ಧಿ ಬಂದಿಲ್ಲ ಎನ್ನುವ ಕಾರಣಕ್ಕೆ ಮನೆಯ ಯಾವೊಬ್ಬ ಸದಸ್ಯನು ಹೊಂದಿಕೊಳ್ಳುತ್ತಿರಲಿಲ್ಲ. ಹಾಗೊಂದು ವೇಳೆ ಕಿರಿಯರು ಹೊಂದಿಕೊಂಡರು ನಾನೇಕೆ ಇವರು ಹೇಳಿದಂತೆ ಕೇಳಬೇಕೆಂದು ಉದ್ಧಟತನದಿಂದ ಇದ್ದು ಬಿಡುತ್ತಿದ್ದರು. ಎಷ್ಟು ದಿನ ಹೀಗೆ ನಡೆಯುವುದಕ್ಕೆ ಸಾಧ್ಯ ಕಡೆಗೊಂದು ದಿನ ದೊಡ್ಡ ಗಲಾಟೆಯಾಗಿ ಮನೆಬಿಡಬೇಕಾದ ಸನ್ನಿವೇಶ ಬಂದೇ ಬಿಟ್ಟಿತು. ಮನೆ ಬಿಟ್ಟರೂ ಎಲ್ಲಿ ಹೋಗುವುದು ಎಂದಾಲೋಚಿಸಿದಾಗ ದೂರದ ಸಂಬಂಧಿಯೊಬ್ಬರ ನೆನಪಾಗಿ ಅವರ ಮನೆಗೆ ಅತಿಥಿಯಾಗಿ ಹೋಗುತ್ತಾರೆ.
ಆ ಸಂಬಂಧಿಗಳು ತಪ್ಪು ಒಪ್ಪು ಏನೇ ಇರಲಿ ಹಿರಿಯರು ಚೆನ್ನಾಗಿ ನೋಡಿಕೊಳ್ಳೋಣ! ಒಂದೆರಡು ದಿನದ ಮಟ್ಟಿಗೆ ಅಲ್ಲವೇ! ಎಂದು ಬಹಳ ಗೌರವದಿಂದ ನೋಡಿಕೊಳ್ಳುತ್ತಾರೆ. ಹಿರಿಯರು ಅಷ್ಟೆ ಪಾಪ ಸ್ವಲ್ಪ ಮಾನಸಿಕವಾಗಿ ಕುಗ್ಗಿ ಹೋಗಿದ್ದರಲ್ಲ ಬಿಟ್ಟಿ ಉಪಚಾರ ನನಗೇಕೆ ಎಂದು ಬಾವಿಯಲ್ಲಿ ನೀರು ಸೇದುವುದು, ಗಿಡಗಳಿಗೆ ನೀರ ಹಾಕುವುದು, ಹೂ ತರಕಾರಿ ತರುವುದು ಮಾಡುತ್ತ ಇರುತ್ತಾರೆ.
ಆ ಸಂಬಂಧಿಗಳು ಪರೋಕ್ಷವಾಗಿ ಯಾವಾಗ ಪ್ರಯಾಣ ಎಂದಾಗ ಗಾಬರಿಯ ಎಚ್ಚರಾಗಿ.”ದಯವಿಟ್ಟು ನನ್ನನ್ನುಇಲ್ಲಿಯೇ ಉಳಿಸಿಕೊಂಡು ಬಿಡಿ. ನನ್ನ ಕೈಲಾದ ಕೆಲಸ ಮಾಡಿಕೊಂಡು, ನೀವು ತಿಂದು ಉಳಿದದ್ದನ್ನು ತಿಂದುಕೊಂಡು, ನಿಮಗೆ ಹೊರೆಯಾಗದಂತೆ ಇರುತ್ತೇನೆ” ಎಂದು ದೈನ್ಯತೆಯಿಂದ ಕೇಳಿಕೊಳ್ಳುತ್ತಾರೆ. ಮರುಕದಿಂದ ಸಂಬಂಧಿಗಳು ಸರಿ! ಆಯಿತು! ಎಂದು ಸಮ್ಮತಿ ಸೂಚಿಸಿಬಿಡುತ್ತಾರೆ.
ಹಿರಿಯರು ಒಂದೆರಡು ದಿನ ಅತಿಥಿಯಾಗಿ ಬಂದಾಗ ಮಾಡುತ್ತಿದ್ದ ಕೆಲಸಗಳನ್ನುಮಂದುವರೆಸುತ್ತಾರೆ. ಸುಖ ಹೆಚ್ಚಾದಂತೆ ಮತ್ತೆ ಹಳೆಯ ಚಾಳಿ ಮರುಕಳಿಸುತ್ತದೆ. ಇನ್ನೊಂದು ವಾರ ಹೇಗೋ ತಳ್ಳಿ ನಂತರ ಸ್ವಲ್ಪ ಸ್ವಲ್ಪ ಕಿರಿ ಕಿರಿ ಪ್ರಾರಂಭಿಸುತ್ತಾರೆ. ಯಾವ ಮಟ್ಟಿಗೆ ಎಂದರೆ ಎದುರು ಚೆನ್ನಾಗಿದ್ದು ಆ ಮನೆಯ ಗೃಹಿಣಿಯ ಮೇಲೆಯೇ ದೂರುಗಳನ್ನು ಹೇಳುವುದು, ನೆರೆಹೊರೆಯವರ ಬಳಿ ಮಾತನಾಡಿದರೆ ಕದ್ದು ಆಲಿಸುವುದು, ಪೋಸ್ಟ್ ಗಳೂ ಬಂದರೆ ಮೊದಲೆ ಅತೀ ಕುತೂಹಲದಿಂದ ಓದುವುದು, ಓದಿದ್ದು ಗೊತ್ತಾಗುತ್ತದೆ ಎಂದು ಕಾಗದಗಳನ್ನು ಹರಿದು ಎಸೆದು ಬಿಡುವುದು, ಮನೆ ಮಕ್ಕಳು ಎಲ್ಲಾದರೂ ಹೊರಟರೆ ಕಿಟಕಿಯಿಂದ ಇಣಿಕಿ ನೋಡುವುದು, ಬಿಸಿ ಕಾಫಿಕೊಟ್ಟರೂ ತಣ್ಣಗಿದೆ ಎಂದು ನೆಲಕ್ಕೆ ಚೆಲ್ಲುವುದು ಹೀಗೆ … ಮನೆಯವರೇ ಸಹಿಸುವುದಿಲ್ಲ ಎಂದರೆ ಬೇರೆಯವರು ಸಹಿಸುತ್ತಾರೆಯೇ? ಒಂದೆರಡು ದಿನ ಎಚ್ಚರ ಹೇಳಿಸಿಕೊಂಡು ಕಡೆಗೆ ಅಲ್ಲಿಂದಲೂ ಕಾಶೀ ಯಾತ್ರೆಯ ನೆಪ ಹೇಳಿಕೊಂಡು ಅಲ್ಲಿಂದಲೂ ಇದ್ದ ನೆಲೆಯನ್ನು ಕಳೆದುಕೊಂಡು ಕಾಲು ಕೀಳಬೇಕಾಗುತ್ತದೆ . ಅಂತರಂಗದಲ್ಲಿ ಕೆಟ್ಟಗುಣಗಳನ್ನೇ ಸೀಲ್ಡೌನ್ ಮಾಡಿಕೊಂಡು ಕಾಶಿ ಯಾತ್ರೆ ಮಾಡಿ ಗಂಗಾಜಲ ಸೇವನೆ ಮಾಡಿದರೆ ಕರ್ಮ ಅಳಿಯುವುದೇ?
ದಿಕ್ಕು ಕಾಣದೆ ಇದ್ದಾಗ ಸ್ವಾಮೀ,ಬುದ್ಧೀ ಎಂದು ಸಾಧ್ವಿಗಳ ಹಾಗೆ ನಡೆದುಕೊಳ್ಳುವುದು ಎಲ್ಲ ಅನುಕೂಲ ದೊರೆತಮೇಲೆ ಅವಕಾಶ ಕೊಟ್ಟವರ ಮೇಲೇ ಸವಾರಿ ಮಾಡುವುದು. ಹೀಗಾದರೆ ಹೇಗೆ? ಹೊಂದಾಣಿಕೆ, ಸಾಮರಸ್ಯ ಬೇಕಲ್ಲವೇ? ಎಲ್ವೂ ತನ್ನ ಮೂಗಿನ ನೇರಕ್ಕೇ ನಡೆಯಬೇಕೆಂದರೆ ಆಗುತ್ತದೆಯೇ?adjsutment is environment ಈ ಕಾಲದ ಅಗತ್ಯ ಎಲ್ಲರಿಗೂ ಅವರದೇ ಆದ ಪರಿಮಿತಿಗಳು, ಇಷ್ಟ ಕಷ್ಟಗಳು ಇರುತ್ತವಲ್ಲವೇ? ಅವನ್ನೂ ಗೌರವಿಸಬೇಕಲ್ಲವೇ?
ಬಿದ್ರೆ ಸುಸ್ತು ಎದ್ರೆ ಗತ್ತು ಎನ್ನುವ ಹಾಗೆ ಮನುಷ್ಯ ಇರಬಾರದು. ಯಾವಾಗಲೂ ಸಮ ಚಿತ್ತವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಅವಕಾಶವಾದಿ ಎಂದು ಕರೆಸಿಕೊಳ್ಳಬೇಕಾಗುತ್ತದೆ . ಮನುಷ್ಯ ಎಷ್ಟು ಆರಾಮವಾಗಿ ವೈಭೋಗದಿಂದ ಬದುಕಿದ್ದ ಎಷ್ಟು ಜನರು ಅವನಿಗೆ ಪರವಾಗಿದ್ದರು ಎಂದು ಯಾರೂ ಗಮನಿಸುವುದಿಲ್ಲ . ವ್ಯಕ್ತಿಗತ ಮೌಲ್ಯಗಳನ್ನು ಯಾವ ರೀತಿ ಉಳಿಸಿಕೊಂಡಿದ್ದ ಎಂದಷ್ಟೇ ನೋಡುತ್ತಾರೆ. ಮಾನಸಿಕ ಸಂತುಲನೆಯನ್ನು ಕಳೆದುಕೊಳ್ಳಬಾರದು. ಮನುಷ್ಯನ ವ್ಯಕ್ತಿತ್ವದ ಕೀಲಿಕೈ ಅದು. ದುಃಖ ಬಂದಾಗಲೂ ಸುಖವನ್ನು, ಸುಖ ಇದ್ದಾಗಲೂ ಸದ್ಭಾವವನ್ನು ಸನ್ನಡತೆಯನ್ನು ಹೊಂದಿರಬೇಕು.