21.2 C
Karnataka
Sunday, September 22, 2024

    ಪ್ರಕೃತಿಯಲ್ಲಿ ಭಗವಂತನನ್ನು ಕಂಡ ಮಹಾಕವಿ

    Must read

    ರತ್ನಾ ಶ್ರೀನಿವಾಸ್

    ಸಿರಿಗನ್ನಡದ ಇಂಪಿನ, ಪೆಂಪಿನ, ಕಂಪಿನ ಹೆಸರೇ ಕುವೆಂಪು. ಯುಗದ ಕವಿ , ಜಗದ ಕವಿ ಎಂಬ ಅಭಿದಾನಕ್ಕೆ ಪಾತ್ರರಾಗಿರುವ ಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ .ಅವರ ಕಾವ್ಯ ನಾಮ ಕುವೆಂಪು.ಇಂದು ಅವರ ಜನ್ಮ ದಿನ.

    ಮಲೆನಾಡಿನ ಸೊಬಗಿನ ಶಿವಮೊಗ್ಗ  ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ ಗ್ರಾಮದಲ್ಲಿ 29.12.1904 ರಲ್ಲಿ ಜನಿಸಿದರು. ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ರಾಮಕೃಷ್ಣ ಪರಮಹಂಸರಂತಹ ಮಹಾಪುರುಷರ ಮಾರ್ಗದರ್ಶನದಲ್ಲಿ ಮುನ್ನಡೆದರು. ಪರಮಹಂಸರ ಸಮನ್ವಯ ಸಿದ್ಧಾಂತದ  ತತ್ವಗಳನ್ನು ತಮ್ಮ ಬಾಳಿನಲ್ಲಿ ಅನುಸರಿಸಿದರು. ಇಂಗ್ಲಿಷ್ ,ಕನ್ನಡ ಸಾಹಿತ್ಯದಿಂದ ಸ್ಪೂರ್ತಿ ಪಡೆದುಕೊಂಡು ಕಥೆ, ಕವನ, ಕಾದಂಬರಿ, ಆತ್ಮಕಥೆ, ನಾಟಕ, ವಿಮರ್ಶೆ, ಪ್ರವಾಸಕಥನ, ಹೀಗೆ ಹಲವಾರು ಅತ್ಯುತ್ತಮ ಕೃತಿಗಳನ್ನು ರಚಿಸಿದ್ದಾರೆ. ಪ್ರಕೃತಿಯಲ್ಲಿ ಭಗವಂತನನ್ನು ಕಂಡಿದ್ದಾರೆ.

    “ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣಿರೋ” ಎಂದು ಸೂರ್ಯ ಚಂದ್ರರು ಅಮೃತದ ಹಣ್ಣು ಎಂದಿದ್ದಾರೆ.

    ಕಲ್ಲಲ್ಲಿ, ಮಣ್ಣುಗಳಲ್ಲಿ ಹುಲ್ಲಲ್ಲಿ,ನೀರಿನ ಹನಿ ,ಬೆಂಕಿಯ ಕಿಡಿ ಎಲ್ಲೆಲ್ಲಿಯೂ ಚೈತನ್ಯ ವನ್ನು ಬಿಂಬಿಸಿದ್ದಾರೆ. ಅಗ್ನಿ ಹಂಸ, ಪಕ್ಷಿ ಕಾಶಿ, ಪ್ರೇಮ ಕಾಶ್ಮೀರ, ನವಿಲು, ಕೋಗಿಲೆ, ಪಾಂಚಜನ್ಯ, ಸೋವಿಯತ್ ರಷ್ಯ ಇವರು ರಚಿಸಿದ ಕವನ ಸಂಕಲನ ಗಳು.

    ಇವರ ಕವನಗಳಲ್ಲಿ ನದಿಯ ನಾದ ಕಲರವವಿದೆ. ಕೋಗಿಲೆ ಧ್ವನಿಯ ಇಂಪು, ಕಂಪಿದೆ.

    ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಎಂಬ ಕಾದಂಬರಿಯನ್ನು ರಚಿಸಿದ್ದಾರೆ.ನನ್ನ ದೇವರು ಮತ್ತು ಇತರ ಕತೆಗಳು ಕಥಾ ಸಂಕಲನಗಳನ್ನು, ಬೊಮ್ಮನ ಹಳ್ಳಿ ಕಿಂದರಿ ಜೋಗಿ ಮಕ್ಕಳಿಗಾಗಿ ರಚಿಸಿದ್ದಾರೆ.

    ಯಮನ ಸೋಲು, ಜಲಗಾರ, ರಕ್ತಾಕ್ಷಿ, ಸ್ಮ ಶಾನ  ಕುರುಕ್ಷೇತ್ರ, ಬೆರಳ್ಗೆ ಕೊರಳ್, ಛಂದ್ರಹಾಸ ನಾಟಕಗಳು  ಇವರಿಂದ ರಚಿತ ವಾಗಿವೆ.

    ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಗಳನ್ನು ಬರೆದಿರುವರು. ದ್ರೌಪದಿಯ ಶ್ರೀ ಮುಡಿ ಎಂಬ ವಿಮರ್ಶಾ ಗ್ರಂಥವನ್ನು ರಚಿಸಿದ್ದಾರೆ.

    ಭಾರತಾಂಬೆಯೆ ಜನಿಸಿ ನಿನ್ನೊ ಳು
    ಧನ್ಯನಾದೆನು ದೇವಿಯೆ
    ನಿನ್ನ ಪ್ರೇಮದಿ ಬೆಳೆದ ಜೀವವು ಮಾನ್ಯ ವಾಯಿತು ತಾಯಿಯೇ
    ಎಂದು ಭಾರತೀಯತೆಯನ್ನು ಮೆರೆದ ಕವಿ.”ಕನ್ನಡಕೆ ಹೋರಾಡು  ಕನ್ನಡದ ಕಂದ ಕನ್ನಡವ ಕಾಪಾಡು ನನ್ನ ಕಂದ “ಎಂದು ಹಾಡಿ ಕನ್ನಡಿಗರಿಗೆ ಮಾರ್ಗದರ್ಶಕರಾಗಿದ್ದಾರೆ.”ಕನ್ನಡ ಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷ ವಾಗುವುದು.ಕನ್ನಡವೇ  ಸತ್ಯ ಕನ್ನಡವೇ ನಿತ್ತ್ಯ”ಎಂದು ಘಂಟಾ ಘೋಷವಾಗಿ ಘೋಷಿಸಿದ್ದಾರೆ.

    ಮಹಾಕಾವ್ಯಗಳ ಕಾಲವೆ ಮುಗಿಯಿತು ಎನ್ನುವಾಗ ತಮ್ಮದೇ ಆದ ಮಹಾ ಛಂದಸ್ಸನ್ನು ಉಪಯೋಗಿಸಿ ‘ಶ್ರೀ ರಾಮಾಯಣ ದರ್ಶನಂ’ ಮಹಾ ಕಾವ್ಯವನ್ನು ರಚಿ ಸಿದರು. ಇದು  ಈ (20ನೇ) ಶತಮಾನದ ಶ್ರೇಷ್ಠ ಕೃತಿಯೆಂದು ಪರಿಗಣಿತವಾಗಿ ಅತ್ಯುನ್ನತವಾದ ಜ್ಞಾನಪೀಠ  ಪ್ರಶಸ್ತಿ ಯನ್ನು ಗಳಿಸಿತು.

    ಕುವೆಂಪು  ‘ನೇಗಿಲಯೋಗಿಯ ಮಹತ್ವವನ್ನು’ ಜಗತ್ತಿಗೇ  ಸಾರಿದಂತಹ  ಮಹಾ ಮಾನವತಾವಾದಿ, ಕರ್ಮಯೋಗಿ.ಅವರು ಬರೆದಿರುವ  ನೇಗಿಲಯೋಗಿ” ಕವಿತೆಯನ್ನು  ನಮ್ಮ ಕರ್ನಾಟಕ ಸರಕಾರ ಆಗಸ್ಟ್ 15, 2009 ರಂದು “ರೈತ ಗೀತೆ” ಎಂದು ಮಾನ್ಯ ಮಾಡಿದೆ.

    ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಸಂದಿವೆ.
    ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಪದ್ಮಭೂಷಣ ಪ್ರಶಸ್ತಿ
    ಪಂಪ ಪ್ರಶಸ್ತಿ,ರಾಷ್ಟ್ರ ಕವಿ ಬಿರುದು,ಕರ್ನಾಟಕ ರತ್ನ ಪ್ರಶಸ್ತಿ.

    ಮಲೆ ನಾಡಿನ ಪ್ರಕೃತಿಯ ಮಡಿಲಲ್ಲಿ ಬೆಳೆದು, ಸೌಂದರ್ಯದ ಆರಾಧಕರಾಗಿ, ಮಾನವತೆಯನ್ನು ಬೋಧಿಸಿ ವಿಶ್ವ ಕವಿಯಾಗಿ ಹೆಸರು ಗಳಿಸಿದರು.

    ಮನೆಯನೆಂದು ಕಟ್ಟದಿರು , ಕೊನೆಯನೆಂದು ಮುಟ್ಟ ದಿರು
    ಎಲ್ಲಿಯೂ ನಿಲ್ಲದಿರು, ಓ ನನ್ನ ಚೇತನ ಆಗು ನೀ ಅನಿಕೇತನ
    ಎಂದು ಎಲ್ಲರಿಗೂ ತಿಳಿಸಿದರು. ಜಾತಿ- ಮತ -ಕುಲ ಬಂಧನಗಳಿಂದ ದೂರವಾಗಿ ವಿಶ್ವಮಾನವರಾಗಲು ಪ್ರೇರಣೆ ನೀಡಿ ವಿಶ್ವ ಕವಿಯಾಗಿ ಹೆಸರುಗಳಿಸಿದರು. ಶ್ರೀ ರಾಮಾಯಣ ದರ್ಶನಂ ಮೇರು  ಕೃತಿ ರಚಿಸಿ ಮೇರು ಪರ್ವತವಾಗಿ ಪ್ರತಿಯೊಬ್ಬರಿಗೂ ಸ್ಪೂರ್ತಿಯ ಸೆಲೆಯಾಗಿದ್ದ ರಾಷ್ಟ್ರ ಕವಿ ಕರ್ನಾಟಕ ರತ್ನನಿಗೆ ನಮೋ ನಮ: 

    ರತ್ನಾ ಶ್ರೀನಿವಾಸ್ ಅವರು ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ಯವರು.  ಪ್ರಾಥಮಿಕ ಪದವಿಯನ್ನು ಅರಸೀಕೆರೆಯಲ್ಲಿ ಪಡೆದು ಮುಂಬಯಿನಲ್ಲಿ  ಎಂ.ಎ ಎಂ.ಫಿಲ್  ಪಡೆದು ಪ್ರಸ್ತುತ ಆದಿತ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ & ರಿಸರ್ಚ್, ಯಲಹಂಕ, ಇಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಇವರ ಚಾರುವಸಂತದ ಆಯಾಮ ಅನನ್ಯತೆ ಸಂಪ್ರಬಂಧದ  ಪುಸ್ತಕವಾಗಿ ಅಭಿಜಿತ್ ಪ್ರಕಾಶನ ಮುಂಬೈನಿಂದ ಪ್ರಕಟವಾಗಿದೆ.

    spot_img

    More articles

    19 COMMENTS

    1. ಕುವೆಂಪು ಕುರಿತ ನಿಮ್ಮ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.

    2. ಕುವೆಂಪು ಕವಿಯ ಬಗ್ಗೆ ಅವರ ಕೃತಗಳ ಬಗ್ಗೆ ತುಂಬ ಚೆನ್ನಾಗಿ ಬರೆದಿದ್ದೀರಿ ಮೇಡಮ್

    3. ರಸ ಋಷಿ ಕುವೆಂಪುರವರ ಜೀವನ ಸಾಧನೆ ಕುರಿತು ಬರೆದ ಲೇಖನ ಸೊಗಸಾಗಿ ಮೂಡಿ ಬಂದಿದೆ.

    4. ಲೇಖಕರು ಬಹಳ ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಉಪಯುಕ್ತ ಮಾಹಿತಿಗೆ ಧನ್ಯವಾದಗಳು.

    5. ರಸ ಋಷಿ ಕುವೆಂಪು ಅವರ ಕುರಿತು ಬರೆದ ಲೇಖನ ಸೊಗಸಾಗಿ ಮೂಡಿ ಬಂದಿದೆ.

    6. ಕುವೆಂಪು ಅವರ ಬಗ್ಗೆ ಲೇಖನ ಚೆನ್ನಾಗಿ ಮೂಡಿಬಂದಿದೆ

    7. ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
      ಮತಿಯಿಂದ ದುಡಿಯಿರೈ ಲೋಕಹಿತಕೆ
      ಆ ಮತದ ಈ ಮತದ ಹಳೆಮತದ ಸಹವಾಸ
      ಸಾಕಿನ್ನು ಸೇರಿರೈ ಮನುಜ ಮತಕೆ
      ಓ ಬನ್ನಿ ಸೋದರರೆ ವಿಶ್ವಪಥಕೆ ಎಂದು ಎಲ್ಲರಿಗೂ ವಿಶ್ವ ಮಾನವರಾಗಲು ಕರೆ ಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆಯ ಲೇಖನ ಚಿಕ್ಕದಾದರೂ ಚೊಕ್ಕವಾಗಿದೆ ರತ್ನ ಮೇಡಂ.

    8. ಸಾಮಯಿಕ ಲೇಖನ. ಅಗತ್ಯ ಮಾಹಿತಿಯನ್ನು ಹಂಚಿದ್ದೇವೆ. ವರಕವಿಗೆ ಉತ್ತಮ ನಮನಗಳು

    9. ರಾಷ್ಟ್ರಕವಿ ಕು.ವೆಂ.ಪು. ಅವರ ಬಗ್ಗೆ ಬರದ ಶ್ರೀಮತಿ ರತ್ನ ಶ್ರೀನಿವಾಸ್.ಅವರ ಲೇಖನ ತುಂಬಾ ಚೆನ್ನಾಗಿದೆ. ಅವರ ಬಗ್ಗೆ ವಿವರವಾಗಿ ತಿಳಿಸಿದಕ್ಕೆ ರತ್ನ ಅವರಿಗೆ ಹಾಗು kannadapress ನವರಿಗೂ ಧನ್ಯವಾದ ಗಳು.🙏🙏

    10. ನನ್ನ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಮೆಚ್ಚುಗೆ ಸೂಚಿಸಿರುವ ಮಿತ್ರರು, ಸಹೃದಯರಿಗೆಲ್ಲಾ ಧನ್ಯವಾದಗಳು 🙏🙏🙏🙏🙏

    LEAVE A REPLY

    Please enter your comment!
    Please enter your name here

    Latest article

    error: Content is protected !!