ಬಳಕೂರ. ವಿ.ಎಸ್.ನಾಯಕ
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಜನಪ್ರಿಯ ಚಿತ್ರ ಸಂತೆ ಈ ವರ್ಷ ಆನ್ ಲೈನ್ ಸ್ಪರೂಪ ಪಡೆದಿದೆ. ಕೋವಿಡ್ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ ಎಲ್ ಶಂಕರ್ ತಿಳಿಸಿದ್ದಾರೆ.
ಕಲಾವಿದರು ಮತ್ತು ಸಾರ್ವಜನಿಕರ ಹಿತ ಹಿತದೃಷ್ಟಿಯಿಂದ ಪ್ರಸ್ತುತ ಈ ವರ್ಷದ ಚಿತ್ರಸಂತೆಯನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿದೆ . ಜನವರಿ 3 ರ ಭಾನುವಾರದಂದು 18ನೇ ಚಿತ್ರಸಂತೆಯನ್ನು ಉದ್ಘಾಟಿಸಲಾಗುವುದು. ಇದನ್ನು ಪರಿಷತ್ ನ ಫೇಸ್ ಬುಕ್ ಮತ್ತು chitrasanthe.org ಜಾಲತಾಣಗಳಲ್ಲಿ ವೀಕ್ಷಿಸಬಹುದು ಎಂದು ಅವರು ಹೇಳಿದರು.
ಆನ್ ಲೈನ್ ಸಂತೆಯನ್ನು ಒಂದು ತಿಂಗಳ ಅವಧಿಯವರೆಗೆ ಸಾರ್ವಜನಿಕರು, ಕಲಾಸಕ್ತರು ಮತ್ತು ಕಲಾವಿದರು ವೀಕ್ಷಿಸಬಹುದು. ಕೋರೋನಾ ಯೋಧರ ಉದಾತ್ತ ಸೇವೆಗೆ ಈ ಬಾರಿಯ ಸಂತೆಯನ್ನು ಅರ್ಪಣೆ ಮಾಡಲಾಗಿದೆ.
ಚಿತ್ರಕಲಾ ಪರಿಷತ್ತಿನ ಎಲ್ಲಾ ಗ್ಯಾಲರಿಗಳಲ್ಲಿ ಭಾರತದ ಆಯ್ದ ಆಹ್ವಾನಿತ ಪ್ರಸಿದ್ಧ ಕಲಾವಿದರ ಕಲಾಕೃತಿಗಳನ್ನು ಚಿತ್ರಸಂತೆಯ ಅವಧಿ ಪೂರ್ತಿ ಪ್ರದರ್ಶಿಸಲಾಗುವುದು. ಸುಮಾರು ಸಾವಿರದ ಐನೂರು ಕಲಾವಿದರು ಭಾರತದ ಎಲ್ಲಾ ಪ್ರಾಂತ್ಯ ಗಳಿಂದಲೂ ಮತ್ತು ಹೊರ ದೇಶಗಳಿಂದಲೂ ಈ ವರ್ಷದ ಚಿತ್ರಸಂತೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿರುವುದು ವಿಶೇಷ.
ಇದೇ ಸಂದರ್ಭದಲ್ಲಿ ದೇವರಾಜು ಅರಸು ಪ್ರಶಸ್ತಿ,ವೈ ಸುಬ್ರಹ್ಮಣ್ಯರಾಜು ಪ್ರಶಸ್ತಿ,ಎಂ ಆರ್ಯ ಮೂರ್ತಿ ಪ್ರಶಸ್ತಿ ಮತ್ತು ಎಚ್ ಕೆ ಕೇಜ್ರಿವಾಲ್ ಪ್ರಶಸ್ತಿಯನ್ನು ಹಿರಿಯ ಕಲಾವಿದರಾದ ಪ. ಸ ಕುಮಾರ್,ವಿಜಯ್ ಬಾಗೋಡಿ,ಆರ್ ರಾಜ ಮತ್ತುಕಲಾ ಇತಿಹಾಸಕಾರ ಡಾ.ಚೂಡಾಮಣಿ ನಂದಗೋಪಾಲ್ ಅವರಿಗೆ 50 ಸಾವಿರ ರೂಪಾಯಿ ನಗದು ಪುರಸ್ಕಾರದೊಂದಿಗೆ ನೀಡಲಾಗುವುದು.
ಪರಿಷತ್ತಿನ ಸಂಸ್ಥಾಪಕ ಮುಖ್ಯ ಕಾರ್ಯದರ್ಶಿಗಳಾಗಿದ್ದ ಎಂಎಸ್ ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿಯನ್ನು ಹಿರಿಯ ಕಲಾವಿದರಾದ ನಿಲಿಮಾ ಶೇಖ್ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು. ಕಾಲೇಜುಗಳ ಮತ್ತು ಪರಿಷತ್ತಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಲವಾರು ಉಪಸಮಿತಿಗಳ ಅಡಿಯಲ್ಲಿ ಚಿತ್ರಸಂತೆಯನ್ನು ಯಶಸ್ವಿಯಾಗಿ ನಡೆಯುವಂತೆ ಶ್ರಮಿಸುತ್ತಿದ್ದಾರೆ ಎಂದು ಶಂಕರ್ ಹೇಳಿದರು.
18ರಿಂದ 80 ವರ್ಷ ವಯಸ್ಸಿನ ವೃತ್ತಿಪರ ಮತ್ತು ಶಿಕ್ಷಿತ ಕಲಾವಿದರು 18ನೇ ಚಿತ್ರಸಂತೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಈ ಚಿತ್ರಸಂತೆಯಲ್ಲಿ ಹಲವಾರು ಆನ್ಲೈನ್ ವಿಮರ್ಶೆಗಳು ಕಲಾತ್ಮಕ ಚರ್ಚೆಗಳನ್ನು ಆಯೋಜಿಸಲಾಗುತ್ತದೆ.
ಚಿತ್ರಸಂತೆಯಲ್ಲಿ ಭಾಗವಹಿಸುವ ಸಾವಿರದ ಐದುನೂರು ಕಲಾವಿದರಿಗೂ ಪ್ರತ್ಯೇಕವಾಗಿ ಒಂದು ಆನ್ಲೈನ್ ಪುಟವನ್ನು ಮೀಸಲಿಡಲಾಗಿದೆ. ಆನ್ಲೈನಲ್ಲಿ ಸಂಪರ್ಕದ ವಿವರಗಳನ್ನು ಮತ್ತು ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ. ಸಮಕಾಲೀನ ಕಲಾಕೃತಿಗಳು ಮಾತ್ರವಲ್ಲದೆ ಸಾಂಪ್ರದಾಯಿಕ ಕಲಾ ಶೈಲಿಗಳಾದ ಮೈಸೂರು, ತಂಜಾವೂರು , ರಾಜಸ್ಥಾನಿ ಮತ್ತು ಮಧುಬನಿ ಇನ್ನಿತರ ಕಲಾಕೃತಿಗಳನ್ನು ಕೂಡ ಈ ಆನ್ಲೈನ್ ಚಿತ್ರಸಂತೆಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ತು ಸ್ಥಾಪನೆಯಾಗಿ 60 ವರ್ಷವಾಗಿರುವ ಹಿನ್ನಲೆಯಲ್ಲಿ ಈ ಬಾರಿಯ ಚಿತ್ರಸಂತೆ ವಿಶೇಷ ಮಹತ್ವ ಪಡೆದಿದೆ.