ಪಠ್ಯ ಬೋಧನೆ ಅಂತಿಮ ಹಂತ ತಲುಪಿ ಪರೀಕ್ಷಾ ಸಿದ್ಧತೆಯ ಪ್ರಮುಖ ಘಟ್ಟ ಇದು. ಕೋವಿಡ್ ಅವಾಂತರದಲ್ಲಿ ಶೈಕ್ಷಣಿಕ ಚಟುವಟಿಕೆಗಳ ನಿರಂತರತೆಗೆ ಕಡಿವಾಣ. ರೂಪಾಂತರಿ ವೈರಸ್ ನ ಎರಡನೆ ಅಲೆಯ ರಕ್ಕಸ ಪ್ರವೇಶದ ಭೀತಿಯಲ್ಲಿ ಮತ್ತೆ ಶಾಲಾ-ಕಾಲೇಜು ಆರಂಭಗೊಳ್ಳುವ ಭರವಸೆ ಕುಸಿತ. ನಗರದ ಆರ್ಥಿಕ ಬಲಾಢ್ಯ ಮಕ್ಕಳು ಮೊಬೈಲ್, ಟಿವಿ, ಗ್ಯಾಡ್ಜೆಟ್, ಪಿಜ್ಜಾ, ಬರ್ಗರ್ ಗಳ ಒಡನಾಟದಲ್ಲಿ ಮೈಮರೆತಿದ್ದರೆ. ಅಂದೆ ದುಡಿದು ಅಂದೆ ತಿನ್ನುವ ಪರಿಸ್ಥಿತಿಯಲ್ಲಿನ ಪೋಷಕರ ಮಕ್ಕಳು ಜೀವನೋಪಾಯಕ್ಕಾಗಿ ದುಡಿಮೆಗೆ ಪೂರಕ ಸಹಕಾರ ನೀಡುತ್ತಿದ್ದಾರೆ.
ಏಷ್ಯಾ ಖಂಡದ ಎರಡನೆ ದೊಡ್ಡ ಕೆರೆ ಸೂಳೆಕೆರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯಲ್ಲಿ ಸುಮಾರು 6 ಸಾವಿರ ಎಕರೆಯಲ್ಲಿ ವ್ಯಾಪಿಸಿದೆ. ಸದಾ ತುಂಬಿರುವ ಕೆರೆಯಲ್ಲಿ ವೈವಿಧ್ಯಮಯ ಮೀನುಗಳ ಆವಾಸ ಸ್ಥಾನ. ಹಿನ್ನೀರಿನ ತೆಳು ಅಲೆಗಳ ಅಂಚಿನಲ್ಲಿರುವ ಜಕ್ಕಲಿ ಗ್ರಾಮದ ಗಿರೀಶ್ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಆಂಗ್ಲ ಮಾಧ್ಯಮದಲ್ಲಿ ಶೆ.73 ಅಂಕ ಗಳಿಸಿದ್ದ. ಪ್ರಥಮ ಪಿಯುಗೆ ಸಮೀಪದ ಸಂತೇಬೆನ್ನೂರಿನ ಕೆಪಿಎಸ್ ಶಾಲೆಗೆ ಪ್ರವೇಶ ಪಡೆದಿದ್ದ. ಕಾಲೇಜು ಆರಂಭವಾಗದ ಕಾರಣ ಸೂಳೆಕೆರೆ ಕೆರೆ ಹಿನ್ನೀರಿನಲ್ಲಿ ನಿತ್ಯ ತಂದೆಯೊಂದಿಗೆ ಸಣ್ಣ ಹಾಯಿ ದೋಣಿಯಲ್ಲಿ ಮೀನು ಹಿಡಿಯಲು ತೆರಳಿ ತಂದೆಗೆ ದುಡಿಮೆಯಲ್ಲಿ ಸಹಕಾರ ಕೊಡುತ್ತಿದ್ದಾನೆ.
ಈಗ ಏನು ಮಾಡುತ್ತೀಯ ಎಂದವರಿಗೆ ಬ್ಯಾಟೆಗೆ ಹೋಕಿನಿ.ಏನು ಬ್ಯಾಟೆ ಎಂದರೆ ಮೀನು ಬ್ಯಾಟೆ ಎನ್ನುವೆ ಎಂದು ಹೇಳುತ್ತಾನೆ ಗಿರೀಶ.
ನಿತ್ಯ ಬೆಳಗಿನ ಜಾವ 5 ಗಂಟೆಗೆ ತಂದೆಯೊಂದಿಗೆ ಸೂಳೆಕೆರೆಯಲ್ಲಿ ದೋಣಿ ಹುಟ್ಟು ಹಾಕುತ್ತ ಗಿರೀಶ ಸಾಗುತ್ತಾನೆ. ತಂದೆ ಬಲೆಗೆ ಬಿದ್ದ ಮೀನು ಸಂಗ್ರಹಿಸುವರು. ಬೆ.9 ಗಂಟೆವರೆಗೆ ಬ್ಯಾಟೆ ನಡೆಯುತ್ತದೆ. ಸದ್ಯ ದಿನಕ್ಕೆ 5 ರಿಂದ 10 ಕೆ.ಜಿ. ಮೀನು ಸಿಗುತ್ತಿವೆ. ಸದ್ಯ ಗೌರಿ, ರೋವ್, ಜಲೇಬಿ ತಳಿಯ ಮೀನುಗಳು ಸಿಗುತ್ತಿವೆ. ಪ್ರತಿ ಕೆ.ಜಿ. ಗೌರಿ ಮೀನು ರೂ.250, ರೋವ್ ರೂ.130 ಹಾಗೂ ಜಲೇಬಿ ರೂ.100 ರಂತೆ ಸಗಟು ಮಾರಾಟ ಮಾಡುತ್ತೇವೆ ಎನ್ನುತ್ತಾನೆ ಗಿರೀಶ.
ಈ ಕೆರೆಯಲ್ಲಿ ನಿತ್ಯ 200 ರಿಂದ 300 ಮೀನುಗಾರರು ಮೀನುಗಾರಿಕೆ ನಡೆಸುತ್ತಾರೆ. ಹಿಂದಿನ ದಿನ ಸುಮಾರು 2 ರಿಂದ 3 ಕಿ.ಮೀ. ನೀರಿನಲ್ಲಿ ಸಾಗಿ ಬಲೆ ಬಿಡುತ್ತಾರೆ. ಮಾರನೆ ದಿನ ಬೆಳಗಿನ ಜಾವ ಮೀನು ಸಂಗ್ರಹ ನಡೆಸುತ್ತಾರೆ. ಮಳೆಗಾಲದ ಅವಧಿಯಲ್ಲಿ ದಿನಕ್ಕೆ 50 ಕೆ.ಜಿ.ವರೆಗೂ ಮೀನು ಸಿಗುತ್ತವೆ. ಈಗ ವಂಶಾಭಿವೃದ್ಧಿ ಸಮಯ. ಹಾಗಾಗಿ ಮೀನು ಸಿಗುವುದು ಕಡಿಮೆ.
ಪ್ರತಿ ವರ್ಷ ಮೀನು ಪರವಾನಿಗಾಗಿ ರೂ.3500 ಕಟ್ಟಬೇಕು. ಮೀನುಗಾರಿಕಾ ಇಲಾಖೆ ದೋಣಿ ಹಾಗೂ ಬಲೆಗಳನ್ನು ಕೊಡುತ್ತಿದ್ದರು. ಒಂದೆರೆಡು ವರ್ಷದಿಂದ ಕೊಡುತ್ತಿಲ್ಲ. ನಿತ್ಯ ಚಳಿಯಲ್ಲಿ ಮೀನು ಹಿಡಿಯಲು ಸೂರ್ಯೋದಯಕ್ಕೆ ಮುನ್ನ ತೆರಳಬೇಕು. ಸ್ಥಿರ ಆದಾಯ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಗ ಗಿರೀಶನನ್ನು ಓದಿಸಲು ಶ್ರಮಿಸುತ್ತಿರುವೆ ಎಂದು ಗಿರೀಶನ ತಂದೆ ಹನುಮಂತಪ್ಪ ಅಭಿಪ್ರಾಯ ಪಡುತ್ತಾನೆ.
ಎಷ್ಟೇ ಕಷ್ಟವಾದರು ಸರಿ ಓದು ಮುಂದುವರಿಸಿ ಪದವಿ ಪಡೆದು ಉದ್ಯೋಗ ಪಡೆಯಲು ಇಚ್ಚಿಸಿದ್ದೇನೆ ಎಂದು ಹೇಳುತ್ತಾನೆ ಗಿರೀಶ.
ಗಿರೀಶನ ಶ್ರದ್ದೆ, ಆಸಕ್ತಿ ಮೆಚ್ಚುವಂತಹುದು. ಈತ ಇತರರಿಗೆ ಮಾದರಿ. ನಿಮಗೆ ಶುಭವಾಗಲಿ. ವಿಧ್ಯೆ ಕಲಿಯುವ ಹಂಬಲ ನಿಮ್ಮನ್ನು.ಎತ್ತರಕ್ಕೆ ಕೊದೊಯ್ಯಲಿ. 👌👍