ಹುಟ್ಟಿದ ಮಗುವಿಗೆ ಹೆಸರು ಹುಡುಕುವುದು ಎಷ್ಟು ಕುತೂಹಲಕಾರಿ ಘಟ್ಟವೋ ಅಷ್ಟೇ ತ್ರಾಸದ ಕೆಲಸವೂ ಹೌದು .
ಪೋಷಕರು ಮಗು ಇನ್ನೂ ಭ್ರೂಣದಲ್ಲಿರುವಾಗಲೇ ಹೆಸರನ್ನು ಹುಡುಕುತ್ತಿರುತ್ತಾರೆ . ಇಂತಹ ಅಕ್ಷರದಲ್ಲಿ ಮಗುವಿಗೆ ಹೆಸರೊಂದನ್ನು ಸೂಚಿಸಿ ಅಂತ ಫೇಸ್ಬುಕ್ಕು, ವಾಟ್ಸಪ್ ಮತ್ತು ಮೆಸೇಂಜರ್ ಗಳ ಮೂಲಕ ತಮ್ಮ ಸ್ನೇಹಿತರಿಗೆ ಕೋರಿಕೆ ಸಲ್ಲಿಸಿರುತ್ತಾರೆ .
ಈಗಿನವರು ಇಡುವ ಹೆಸರುಗಳನ್ನು ಕೂಗುವುದಕ್ಕೆ ನಾಲಿಗೆಯೇ ಹೊರಳುವುದಿಲ್ಲ ಹಾಗೆ ಇರುತ್ತವೆ . ಏನು ಹೆಸರು ಅಂತ ಕೇಳಿದ್ರೆ ಅಮ್ಮನ ಹೆಸರಿನಿಂದ ಅರ್ಧ ಅಪ್ಪನ ಹೆಸರಿನಿಂದರ್ಧ ತೆಗೆದು ಎರಡನ್ನೂ ಜೋಡಿಸಿ ಮಗುವಿಗೊಂದು ಹೆಸರಿಟ್ಟಿರೋದು ಅಂತಾರೆ . ಇನ್ನೂ ಜಾಸ್ತಿ ಕೇಳಿದ್ರೆ ಸಂಸ್ಕೃತದ್ದು ಅಂತ ಹೇಳಿ ಸಾರಿಸಿ ಬಿಡ್ತಾರೆ.
ಕೆಲವರು ಮಗುವಿಗೆ ಹೆಸರು ಇಡುವ ಪ್ರಸಂಗವೇ ಸ್ವಾರಸ್ಯಕರವಾಗಿರುತ್ತೆ.
ನಾವು ಸಣ್ಣವರಿದ್ದಾಗ ನಮ್ಮ ಪಕ್ಕದ ಮನೆಯ ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಬ್ಬರು ಸುಂದರ ಸ್ವಪ್ನಗಳು ಅನ್ನೋ ಸಿನಿಮಾಗೆ ಹೋಗಿ ಬಂದಿದ್ದರು , ಮರುದಿನವೇ ಅವರಿಗೆ ಹೆಣ್ಣು ಮಗುವಾಗಿತ್ತು ಅವರು ಆ ಮಗುವಿಗೆ ‘ ಸ್ವಪ್ನ ‘ಅಂತ ಹೆಸರಿಟ್ಟಿದ್ದರು .
ಹಿಂದೆ ಹಳ್ಳಿಗಳಲ್ಲಂತೂ ಹೆಸರಿಡುವ ರೀತಿಯೇ ವಿಚಿತ್ರವಾಗಿತ್ತು .
ತುಂಬಾ ಮಂದಿ ಮಕ್ಕಳು ಆಗ್ತಿದ್ದರಿಂದ ಹೆಸರಿನ ಬಗ್ಗೆ ಅವರು ತಲೇನೇ ಕೆಡುಸ್ಕೋತಿರಲಿಲ್ಲ . ದೊಡ್ಡ ಮಗ ಹುಟ್ಟಿದರೆ ದೊಡ್ಡಯ್ಯ . ಎರಡನೆಯವನಿಗೆ ಚಿಕ್ಕಯ್ಯ , ಮೂರನೆಯವನು ದೊಡ್ಡಚಿಕ್ಕ , ನಾಲ್ಕನೆಯವನು ಚಿಕ್ಕದೊಡ್ಡ ಹೀಗೆ . ಇನ್ನು ಕೆಲವರು ಅವರ ತಾತನ ಹೆಸರನ್ನೇ ಇಟ್ಟು ನಾಮಕರಣ ಮಾಡೋವ್ರು .
ಕೆಲವರಂತೂ ಹುಡುಗನಿಗೆ ಸೀತಯ್ಯ ಹುಡುಗಿಗೆ ರಾಮಕ್ಕ ಅಂತ ಇಟ್ಟಿರುತ್ತಿದ್ದರು .
ದಂಪತಿಗಳಿಗೆ ಮಗುವಾಗುವುದು ತಡವಾಗಿಯೋ ಅಥವಾ ತುಂಬಾ ವರುಷ ಮಕ್ಕಳಾಗಿಲ್ಲ ಅಂತಲೋ ಅವರಿಷ್ಟದ ದೇವರಿಗೆ ಹರಕೆ ಹೊತ್ತು ….ಬಳಿಕ ಜನಿಸಿದ ಮಗುವಿಗೆ ಅದೇ ದೇವರ ಹೆಸರಿಟ್ಟು ಹರಕೆ ತೀರಿಸುವುದು ವಾಡಿಕೆಯಾಗಿತ್ತು .
ಇನ್ನು ಹಬ್ಬದ ದಿನಾನೋ ಹಬ್ಬದ ಹಿಂದಿನ ದಿನವೋ ಅಥವಾ ಮಾರನೇ ದಿನವೂ ಹುಟ್ಟಿದರಂತೂ ದೇವರ ಹೆಸರು ಫಿಕ್ಸ್ .
ಏನೇ ಆಗಲಿ ನಾಮಕರಣ ಮಾಡಿ ಬೇಗ ಹೆಸರು ಇಟ್ಬಿಡಬೇಕು ಇಲ್ಲ ಅಂದ್ರೆ ಗುಂಡ , ಪುಟ್ಟಿ , ಚಿಂಟು , ಲಡ್ಡು , ಬಾಬು ಹೀಗೆ ಸುಮ್ಮನೆ ಟೆಂಪರ್ವರಿಯಾಗಿ ಕರೆಯುವ ಹೆಸರುಗಳೇ ಮುಂದೆ ಪರ್ಮನೆಂಟ್ ಆಗಿ ಕರೆಯುವ ಹೆಸರುಗಳಾಗಿಬಿಡುತ್ತವೆ .
ಹಿಂದೆಲ್ಲಾ ಹೆಸರಿಂದಲೇ ವ್ಯಕ್ತಿಯ ನೆಲ ಭಾಷೆಯನ್ನು ಕಂಡುಹಿಡಿಯಬಹುದಾಗಿತ್ತು ತೆಲುಗಿನವರು ತಮ್ಮ ಹೆಸರಿನ ಕೊನೆಯಲ್ಲಿ ‘ ಲು ‘ ಎಂದು ತಮಿಳಿನವರು ‘ ನ್ ‘ ಎಂದು , ಮರಾಠಿಗರು ‘ ಕರ್ ‘ ಎಂದು ಸೇರಿಸಿಕೊಳ್ಳುತ್ತಿದ್ದರು ಮತ್ತು ಈಗಲೂ ಸೇರಿಸಿಕೊಳ್ಳುತ್ತಿದ್ದಾರೆ .
ತಮ್ಮ ಹೆಸರಲ್ಲದೇ …..ಮನೆಯ ಹೆಸರು , ಕಾರ್ಖಾನೆಯ ಹೆಸರು , ಸಂಸ್ಥೆಯ ಹೆಸರು , ಹೊಸ ಉತ್ಪನ್ನದ ಹೆಸರು , ರೆಸ್ಟೋರೆಂಟ್ ನ ಹೆಸರು , ಹೊಸ ಖಾದ್ಯಗಳ ಹೆಸರು , ವಿಜ್ಞಾನಿಗಳ ಆವಿಷ್ಕಾರಗಳ ಹೆಸರು , ವೈದ್ಯರು ಪತ್ತೆಹಚ್ಚಿದ ಹೊಸ ವ್ಯಾಧಿಗಳ ಹೆಸರು ಹೀಗೆ ಜಗತ್ತಿನಲ್ಲಿ ಪ್ರತಿದಿನ ಪ್ರತಿಕ್ಷಣ ಈ ಹೆಸರು ಹುಡುಕುವ ಮತ್ತು ಹೆಸರಿಡುವ ಪ್ರಕ್ರಿಯೆ ನಿರಂತರವಾಗಿ ಜರುಗುತ್ತಲೇ ಇರುತ್ತದೆ .
ಯಾರೇ ಆಗಲಿ ಯಾವ ಕ್ಷೇತ್ರದಲ್ಲಿಯೇ ಆಗಲಿ ಸಾಧನೆಗೈದಾಗ ಆ ವ್ಯಕ್ತಿ ” ಹೆಸರುವಾಸಿ ” ಆಗುತ್ತಾರೆ . ಜಗತ್ತಿನಲ್ಲಿ ಮಹಾನುಭಾವರ ಉಸಿರು ಹೋದರು ಉಳಿಯುವುದು ಅವರ ಹೆಸರೊಂದೇ .
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಪ್ರಸಿದ್ದ ತೀರ್ಥ ಕ್ಷೇತ್ರದಲ್ಲಿ ದೇವರ ಹೆಸರು ಸಾಮಾನ್ಯ, ರಂಗನಾಥ ದೇವರಿದ್ದರೆ ದೊಡ್ಡ ರಂಗ, ಸಣ್ಣ ರಂಗ, ರಂಗ ಹೀಗೆ, … ತುಂಬಾ ಚೆನ್ನಾಗಿದೆ ಸರ್
ಉಸಿರು ಹೋದರೂ ಉಳಿ ಯುವುದು ಹೆಸರೊಂದೆ👌👌