“ನಿಡಿಯರ್ಗಂ ನಿಡಿಯರೊಳರ್”(ದೊಡ್ಡವರಿಗೂ ದೊಡ್ಡವರಿರುತ್ತಾರೆ). ಸರ್ವಕಾಲಕ್ಕೂ ಅನ್ವಯವಾಗುವ ಈ ಮಾತು ಆದಿಕವಿ ಪಂಪನ ಲೌಖಿಕ ಕೃತಿ ‘ಪಂಪಭಾರತ’ದಲ್ಲಿ ಉಲ್ಲೇಖವಾಗಿದೆ. ‘ವ್ಯಕ್ತಿಗಿಂತ ವ್ಯಕ್ತಿ ಮಿಗಿಲು’ ,’ಮರಕ್ಕಿಂತ ಮರದೊಡ್ಡದು’, ‘ಬೆಟ್ಟಕ್ಕಿಂತ ಬೆಟ್ಟ ದೊಡ್ಡದು’ , ‘ಗುಡ್ಡಕ್ಕೆ ಗುಡ್ಡವೆ ಅಡ್ಡ’ ಎಂಬ ಮಾತುಗಳನ್ನು ಇಲ್ಲಿ ಸಾಮಯಿಕವಾಗಿ ನೆನಪಿಸಿಕೊಳ್ಳಬಹುದು.
ದೊಡ್ಡವರು, ಹಿರಿಯರು ಎಂದರೆ ವಯಸ್ಸಿನಲ್ಲೋ,ಬುದ್ಧಿಯಲ್ಲೋ, ಆಚಾರದಲ್ಲೋ,ಅಂತಸ್ತಿನಲ್ಲೋ, ಜನಬಳಕೆಯಲ್ಲೋ, ತೋಳ್ಬಲದಲ್ಲೋ ಎಂಬ ಚರ್ಚೆ ಬಂದೇ ಬರುತ್ತದೆ. ಹಣದ ಅಹಂನಿಂದ ಬೀಗುವವರನ್ನು “ಬಹಳ ದೊಡ್ಡಸ್ತಿಕೆಯವರು, ಗತ್ತು ಬಿಡಲ್ಲ, ಮಾತಾಡಲ್ಲ” ,ಎಂದೇ ಪರಿಚಯಿಸಿಕೊಂಡಿರುತ್ತೇವೆ.’ದೊಡ್ಡವರ ಸಣ್ಣ ಗುಣ’ ಎಂಬ ಟೀಕೆಗಳನ್ನೂ ಕೆಲವೊಮ್ಮೆ ಕೇಳೀದ್ದೇವೆ. ಈ ತರ್ಕವನ್ನು ಒಮ್ಮೆ ಬದಿಗಿರಿಸಿ “ನಿಡಿಯರ್ಗಂ ನಿಡಿಯರೊಳರ್ “ಎಂಬ ಮಾತನ್ನು ಒಂದು ಚಿಕ್ಕ ಕತೆಯೊಂದಿಗೆ ಅನುಸಂಧಾನ ಮಾಡೋಣ.
ಬಹಳ ವರ್ಷಗಳ ಹಿಂದೆ ದೇವಗಿರಿ ಎಂಬ ಊರಿನಲ್ಲಿ ಶ್ವೇತವರ್ಮನೆಂಬ ರಾಜ ಬಹಳ ನಿಷ್ಠಯಿಂದ ರಾಜ್ಯಭಾರ ಮಾಡುತ್ತಿದ್ದ. ಆತನ ಜನಪ್ರಿಯತೆಯೂ ಅಷ್ಟೇ ಇತ್ತು . ಇಂಥ ಶ್ವೇತವರ್ಮ ಇದ್ದಕ್ಕಿದ್ದ ಹಾಗೆ ಜಡನಾಗಿ ,ಲವಲವಿಕೆಯಿಲ್ಲದೆ ಚಿಂತಿಸುತ್ತಾ ಕುಳಿತುಬಿಡುತ್ತಾನೆ.
ಇಂಥ ಚಿಂತಾಮಗ್ನ ರಾಜನನ್ನು ಕಂಡ ಮಂತ್ರಿ ರಾಜನನ್ನು ಕುರಿತು “ ಮಹಾಪ್ರಭುಗಳೇ ನಿಮ್ಮ ನೆಮ್ಮದಿ ಕೆಡಿಸಿರುವ ಆ ಘನಚಿಂತೆ ಯಾವುದು?” ಎನ್ನುತ್ತಾನೆ.ಆಗ ಮಹಾರಾಜ “ನಮ್ಮ ರಾಜ್ಯದಲ್ಲಿ ಅಪ್ರಾಮಾಣಿಕರು, ಅಸತ್ಯವಂತರು, ಪಿಸುಣರು, ವಿಶ್ವಾಸ ದ್ರೋಹಿಗಳು ಹೆಚ್ಚಾಗುತ್ತಿದ್ದಾರೆ. ಇವರ ನಡುವೆ ಯಾರಾದರೂ ಒಳ್ಳೆಯ ವ್ಯಕ್ತಿ ಸಿಗಬಹುದೇ?” ಎಂದರೆ ಮಂತ್ರಿ ಆತ್ಮ ಪ್ರಶಂಸೆಯಿಂದ “ನಾನೇ ಇದ್ದೇನಲ್ಲ?” ಎನ್ನುತ್ತಾನೆ.
ಮಂತ್ರಿಯ ಆ ಮಾತುಗಳನ್ನೊಪ್ಪದ ರಾಜ “ನಿನಗಿಂತಲೂ ಒಳ್ಳೆಯವರು ಇಲ್ಲವೇ?” ಎಂದಾಗ ಮಂತ್ರಿ “ಹೌದು ಮಹಾರಾಜರೇ ಸಿಗುತ್ತಾರೆ. ಅಲ್ಲಿ ವೃದ್ಧೆಯೊಬ್ಬರಿದ್ದಾರೆ ಅವರಿಗೆ ಸುಮಾರು ಎಂಬತ್ತರ ವಯಸ್ಸಿರಬಹುದು. ಆಧ್ಯಾತ್ಮ, ಧ್ಯಾನಗಳನ್ನು ತೊರೆದು ಲೋಕದ ಜನರ ಕಾಳಜಿಯಿಂದ ಬಾವಿಯೊಂದನ್ನು ತೋಡಿಸುತ್ತಿದ್ದಾರೆ. ಈಕೆ ಶ್ರೇಷ್ಠ ಅನ್ನಿಸುತ್ತದೆ” ಎನ್ನುತ್ತಾನೆ. ರಾಜ ಶ್ವೇತವರ್ಮನಿಗೆ ಅತ್ಯಂತ ಸಂತಸವಾಗುತ್ತದೆ. ದುಷ್ಟ ಜನರ ನಡುವೆಯೂ ಇಂಥ ಸಾಧ್ವಿ ವೃದ್ಧೆಯ ಮನಸ್ಥಿತಿಯನ್ನು ಕಂಡಾಗ ಮರುಭೂಮಿಯಲ್ಲಿ ನೀರು ಸಿಕ್ಕಷ್ಟೇ ನೆಮ್ಮದಿಯಾಗುತ್ತದೆ.
ಹೌದು! ಯಾರು ಸ್ವಾರ್ಥ ಮರೆತು ಜನಕಲ್ಯಾಣದ ಬಗ್ಗೆ ಯೋಚಿಸುತ್ತಾರೋ , ತಮ್ಮಂತೆ ಪರರು ಎಂದು ವ್ಯಕ್ತಿಗತವಾದ ಗೌರವವನ್ನು ಯಾರು ಕೊಡುತ್ತಾರೋ ಅವರೇ ನಿಜವಾಗಿಯೂ ದೊಡ್ಡವರು. ಹಣದ ಹಿಂದೆ, ಹೆಸರಿನ ಹಿಂದೆ ಹೋಗುವವರಲ್ಲ ದೊಡ್ಡ ಜನಗಳು. ಸಮಾಜದ ಜನರ ಬಗ್ಗೆ ಕಾಳಜಿ ಇರುವವರು ದೊಡ್ಡ ಜನಗಳು. ಸ್ವಹಿತ ಮರೆತು, ಪರರಹಿತ, ಲೋಕದ ಕಾಳಜಿ ಮಾಡುವವರು ಹಿರಿಯರು. ಇಂಥ ಹಿರಿಯರು ಮುನ್ನೆಲೆಗೆ ಬರುವುದೇ ಇಲ್ಲ ತಮ್ಮ ಪಾಡಿಗೆ ತಮ್ಮ ಸಮಾಜೋದ್ಧಾರದ ಕೆಲಸ ಮಾಡುತ್ತಿರುತ್ತಾರೆ. ತಮ್ಮಂಥ ಜನರೇನಾದರೂ ಸಿಕ್ಕರೆ ಅವರಿಗೆ ತಲೆಬಾಗುತ್ತಾರೆ. ಇಂಥ ವ್ಯಕ್ತಿಗಳು ನಮ್ಮನಿಮ್ಮ ನಡುವೆ ಖಂಡಿತಾ ಇದ್ದಾರೆ. ಯಾವುದೇ ಹಮ್ಮುಬಿಮ್ಮು ಇಲ್ಲದೆ ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ.
ಬಹುಶಃ ಇಂಥ ಜನಗಳ ಸಂಖ್ಯೆ ಪಂಪನ ಕಾಲದಲ್ಲಿ ಬಹಳವಿದ್ದರೇನೋ ಹಾಗಾಗಿ “ನಿಡಿಯರ್ಗಂ ನಿಡಿಯರೊಳರ್ “ಎಂಬ ಸಾರ್ವಕಾಲಿಕ ಮಾತನ್ನು ದಾಖಲಿಸಿದ್ದಾನೆ. ಪಂಪನ ಕಾಲಕ್ಕಿಂತ ನಾವು ಸಾಕಷ್ಟು ಮುಂದೆ ಬಂದಿದ್ದೇವೆ. ಆದರೆ ಶ್ರೇಷ್ಟತೆಯ ಪ್ರಾಮುಖ್ಯತೆ ಎಲ್ಲೂ ಮುಕ್ಕಾಗಿಲ್ಲ. ಗುಣದ ಹಿರಿತನವನ್ನು ಕೆಲವರಾದರೂ ಹಾಗೆ ಉಳಿಸಿಕೊಂಡಿದ್ದಾರೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.